ನಿಷ್ಪಾಪಿ ಸಸ್ಯಗಳು : ಸಂಚಿಕೆ - 110
Thursday, July 10, 2025
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 110
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ತಮಗೆಲ್ಲರಿಗೂ ಗುರುಪೂರ್ಣಿಮೆಯ ಶುಭಾಶಯಗಳು. ವಾಸ್ತವವಾಗಿ ಪ್ರಕೃತಿಯೇ ಮಾನವನಿಗೆ ಮೊದಲ ಗುರುವಲ್ಲವೇ!.
ವರ್ಷ ಋತುವಿನ ಶಾಲಾದಿನಗಳು ಬಿರುಸಿನಿಂದ ಸಾಗುತ್ತಿದ್ದಂತೆ ನಮ್ಮ ನಿಷ್ಪಾಪಿ ಸಸ್ಯಗಳ ಮೆರವಣಿಗೆಯೂ ಸಾಗಿದೆ.. ನಾವು ಈ ವರೆಗೆ ಕೆಲವು ಸಣ್ಣ ಪುಟ್ಟ ಮೂಲಿಕೆ, ಪೊದರು, ಬಳ್ಳಿಗಳ ಬಗ್ಗೆ ಅರಿತುಕೊಂಡಂತೆ ಇಂದು ಹೂವಾಗುವ, ಹೂವಿನಿಂದಲೇ ಆಕರ್ಷಿಸಲ್ಪಡುವ ಮಧ್ಯಮ ಗಾತ್ರ ಬೆಳೆಯಬಲ್ಲ ನಾಗಲಿಂಗ ಪುಷ್ಪ, ಫಿರಂಗಿ ಮರ ಅಥವಾ ಉಂಡೆಮರದ ಬಗ್ಗೆ ತಿಳಿಯೋಣ.
ಇದರ ಮೂಲ ದ.ಅಮೆರಿಕದ ಅಮೆಜಾನ್ ಕಾಡು. ಉಷ್ಣವಲಯವನ್ನು ಇಷ್ಟಪಡುವ ನಾಗಲಿಂಗ ಪುಷ್ಪ ಮರವು ಭಾರತಕ್ಕೆ ವಲಸೆ ಬಂದು ಶಿವ ದೇವಾಲಯಗಳಲ್ಲಿ, ಮನೆಗಳೆದುರು ಅಲಂಕಾರಕ್ಕಾಗಿ, ಉದ್ಯಾನವನ, ಮಾರ್ಗಗಳ ಬದಿ ಹಾಗೂ ವಿಶೇಷವಾದ ಸ್ಥಳಗಳಲ್ಲೆಲ್ಲ ಹೂವಿನ ಆಕರ್ಷಣೆಯಿಂದ ಸ್ಥಾನ ಪಡೆದಿದೆ, ಮಾತ್ರವಲ್ಲದೇ ಹಿಂದೂ, ಜೈನ, ಬೌದ್ಧರಿಗೆ ಪವಿತ್ರ ಮರವಾಗಿದೆ. ಈ ಮರವನ್ನು ಪವಿತ್ರವೆಂದು ಪರಿಗಣಿಸಲು ಕಾರಣವಾಗಿರುವುದು ಇದರ ವಿಶಿಷ್ಠವಾದ ಪುಷ್ಪ. ಈ ಪುಷ್ಪದ ಸೌಂದರ್ಯ ಹಾಗೂ ರಚನೆಯ ಕಾರಣದಿಂದಲೇ ನಾಗಲಿಂಗ ಪುಷ್ಪ , ಶಿವ ಕಮಲ, ನಾಗಚಂಪ, ನಾಗಕೇಸರ, ಕೈಲಾಸಪತಿ ಹೂವು ಎಂದೆಲ್ಲ ಹೆಸರು ಪಡೆದಿದೆ. ಫಿರಂಗಿ ಗುಂಡಿನ ರೀತಿಯಲ್ಲಿ ಕಾಯಿಗಳು ಇರುವುದರಿಂದ ಫಿರಂಗಿ ಮರ, ಉಂಡೆಯಂತೆ ಕಾಯಿಗಳಿರುವುದರಿಂದ ಉಂಡೆಮರ ಎಂದೂ ಅನ್ವರ್ಥಕ ಹೆಸರುಗಳಿವೆ. ತಮಿಳಿನಲ್ಲಿ ಶಿವಲಿಂಗ ಪುಷ್ಪ, ತೆಲುಗಿನಲ್ಲಿ ಮಲ್ಲಿಕಾರ್ಜುನ ಪುಷ್ಪ, ಇಂಗ್ಲೀಷಲ್ಲಿ Cannon ball tree ಎನ್ನುವರು. ಶಾಸ್ತ್ರೀಯವಾಗಿ ಕೌರೂಪಿಟಾ ಗಯಾನೆನ್ಸಿಸ್ (Couroupita guianensis) ಎಂದು ಗುರುತಿಸಲ್ಪಟ್ಟ ಈ ಮರವು ಕೌರೂಪಿಟ ಕುಲದ ಲೆಸಿಥಿಡೇಸಿ (Lecythidaceace) ಕುಟುಂಬದ ಸಸ್ಯವಾಗಿದೆ.
ಧನ್ವಂತರಿ ಸಂಹಿತೆಯಲ್ಲಿ ತಗರ ಎಂದಿರುವರು.
ನೇರವಾಗಿ ಬೆಳೆಯುವ ಈ ಮರದ ರೆಂಬೆಗಳ ತುದಿಗಳಲ್ಲಿ ಉದ್ದನೆಯ ಹಸಿರು ಎಲೆಗಳು ಗುಂಪು ಗುಂಪಾಗಿರುತ್ತವೆ. ಕಾಂಡದಿಂದ ತುದಿಯವರೆಗೂ ಸುಮಾರು 70 _ 80 ಸೆಂ.ಮೀ.ಉದ್ದದ ಬಿಳಲುಗಳು ದಂಟಿನಂತೆ ಬೆಳೆದು ಮರಕ್ಕೆ ತಾಗಿಕೊಂಡೇ ಹೂವು ಕಾಯಿಗಳಾಗುತ್ತವೆ. ಕಾಂಡದಲ್ಲಿ ಅತಿ ಹೆಚ್ಚು ಒತ್ತೊತ್ತಾಗಿ ಹೂವು ಕಾಯಿಗಳಿರುತ್ತವೆ. ಮೇಲಕ್ಕೆ ಕಡಿಮೆ ದಂಟುಗಳು ಮೂಡುತ್ತವೆ. ಚಿಪ್ಪಿನಾಕಾರಾದ ಪುಷ್ಪಕ್ಕೆ ಸ್ವಲ್ಪ ದೊಡ್ಡದೆನಿಸುವ 6ಸೆಂ.ಮೀ ವ್ಯಾಸದ ಆರು ದಳಗಳಿರುತ್ತವೆ. ಈ ಗುಲಾಬಿ ಕೆಂಪು ವರ್ಣದ ದಳಗಳ ನಡುವೆ ಹಚ್ಚಿದ ಹಳದಿ ದಳಗಳ ಮೇಲೆ ಮೇಲಿನಿಂದ ಚಾಚಿಕೊಂಡ ಹೇರಳವಾದ ಕೇಸರಗಳು! ಈ ಕೇಸರಗಳ ಮಧ್ಯೆ ಪುಟಾಣಿ ಶಿವಲಿಂಗದ ಪ್ರತಿರೂಪ. ಅದರ ಮೇಲೆ ಹಾವಿನ ಹೆಡೆಯಂತೆ ಚಾಚಿನಿಂತ ಕೇಸರಗಳು ಶಿವಲಿಂಗಕ್ಕೆ ರಕ್ಷಣೆ ನೀಡುತ್ತಿರುವಂತೆ, ಕಾವಲು ಕಾಯುತ್ತಿರುವಂತೆ, ಒಲವೇ ಹಾಸಿ ಹೊದ್ದಂತೆ ಆವಿರ್ಭವಿಸುವ ಸೌಂದರ್ಯ ನೋಡಿಯೇ ತಿಳಿಯಬೇಕು. ಅದಕ್ಕೇ ಇದನ್ನು ಹೂ ಮುಡಿದ ಮರವೆನ್ನುತ್ತಾರೆ. ಡಿಸೆಂಬರ್ ನಿಂದ ಮಾರ್ಚ್ ವರೆಗು ಈ ಹೂಗಳ ಚೆಲುವು ತುಂಬಿದ್ದು ನವಿರಾದ ಪರಿಮಳದಿಂದ ಮಕರಂದವಿರದಿದ್ದರೂ ಜೇನು, ದುಂಬಿ, ನೊಣ, ಇರುವೆಗಳಿಗೆ ಹಬ್ಬದ ಬಗ್ಗೆ ಸಾರಿಹೇಳುತ್ತವೆ. ಶಿವರಾತ್ರಿಗೂ ಈ ಹೂವು ಒದಗುತ್ತದೆ. ಅಷ್ಟು ಸಾಲದೆಂಬಂತೆ ಅರಳಿ ಒಂದೆರಡು ದಿನಗಳ ಬಳಿಕ ಹೂಗಳು ಉದುರಿ ಮೂಡುವ ಕಂದು ಕಾಯಿಗಳು ಸಾಧಾರಣ ಗಾತ್ರದ ಚೆಂಡಿನಷ್ಟು ಗಾತ್ರಕ್ಕೆ ಬೆಳೆಯುತ್ತವೆ. ಕಾಯಿಯ ಹೊರಮೈ ಗಟ್ಟಿ ಚಿಪ್ಪು. ಬೀಜ ಪ್ರಸಾರಕ್ಕೆ ಈ ಭೀಮಗಾತ್ರ ತೊಡಕಾಗಿದ್ದು ಮರದ ಬುಡದಲ್ಲಿ ಬಿದ್ದು ಕೊಳೆಯುವುದೇ ಹೆಚ್ಚು. ಕಾಡು ಹಂದಿಗಳು ಇದರ ಕಾಯಿಗಳನ್ನು ತಿನ್ನುತ್ತವೆ ಎನ್ನುತ್ತಾರೆ. ಬಹಳ ಅಪರೂಪಕ್ಕೆ ಎಲ್ಲಾದರೂ ಒಂದು ಗಿಡ ಹುಟ್ಟಿದರೆ ಅದೇ ಹೆಚ್ಚು ಎನ್ನುವ ಸ್ಥಿತಿ. ವಿನಾಶ ದ ಅಂಚಿನಲ್ಲಿರುವ ಈ ಮರಗಳನ್ನು ಬೆಳೆಸುವುದು, ರಕ್ಷಿಸುವುದೂ ಅಗತ್ಯವಾಗಿದೆ. ಶೈವರಿಗೆ ಹಿತ್ತಲಿನ ಮರವಾದರೆ ಶ್ರೀಲಂಕಾದ ಬೌದ್ಧ ಮಂದಿರದಲ್ಲಿ ದೈವಸ್ವರೂಪಿ ಮರವೆನಿಸಿದ ಕಾರಣ ಅಲ್ಲಲ್ಲಿ ಕಾಣಸಿಗುವುದು ಸಂತಸದಾಯಕವಾಗಿದೆ. ನಮ್ಮ ಜಿಲ್ಲೆಯಿಂದ ಐದು ಸಸಿಗಳನ್ನು ಅಯೋಧ್ಯೆಗೆ ಕಳಿಸಿ ನೆಡಲಾಗಿದೆಯಂತೆ.
ನಿಸರ್ಗದ ಎಲ್ಲ ಸಸ್ಯಮೂಲಗಳಂತೆ ನಾಗಲಿಂಗ ಪುಷ್ಪದ ಮರವೂ ಮಾನವನಿಗೆ ಉಪಕಾರಿಯಾಗಿದೆ. ಗಟ್ಟಿ ಮರವಾದ ಇದರಿಂದ ಕ್ರಿಕೆಟ್ ಆಟದ ಸಾಮಗ್ರಿಗಳನ್ನು, ಕರಿಹಲಗೆಗಳನ್ನು ತಯಾರಿಸುತ್ತಾರೆ. ಇದರ ಕಾಂಡ, ಬೇರು, ಹೂಗಳು ಆರೋಗ್ಯ ವರ್ಧಕ. ಹೊಟ್ಟೆನೋವು, ಹಲ್ಲುನೋವು, ಚರ್ಮ ರೋಗ, ಭೇದಿಯಾಗಲು, ಲಿವರ್ ಸಮಸ್ಯೆಗೆ, ಅಧಿಕ ರಕ್ತದೊತ್ತಡಕ್ಕೆ ಶಮನಕಾರಿಯಾಗಿ ಮಾತ್ರವಲ್ಲದೆ ಮುಖದ ಕಾಂತಿ, ಕಲೆ ನಿವಾರಣೆಗಾಗಿ ಹೂ ಹಾಗೂ ಬೇರು ಬಳಕೆಯಲ್ಲಿವೆ. ಇದರ ಲೇಹ, ಆರಿಷ್ಟಗಳನ್ನೂ ತಯಾರಿಸುತ್ತಾರೆ. ಅಮೇರಿಕಾ, ಶ್ರೀಲಂಕಾ, ಥೈಲ್ಯಾಂಡ್, ಗಯಾನದಂತಹ ಕೆಲವು ದೇಶಗಳಲ್ಲಿ ಈ ಮರವು ಪ್ರೀತಿಪಾತ್ರವಾಗಿ ಹರಡಿದೆ. ನಮ್ಮಲ್ಲೂ ಸ್ಥಳಾವಕಾಶ ಇದ್ದರೆ 70ರಿಂದ 80 ವರ್ಷಕ್ಕಿಂತಲೂ ಹೆಚ್ಚು ಕಾಲ ಬಾಳುವ ನಾಗಲಿಂಗ ಪುಷ್ಪದ ಸಸಿಯೊಂದನ್ನು ನೆಡಬಹುದು. ಗಿಡ ಎಲ್ಲಿ ಸಿಗುವುದೆಂಬ ಚಿಂತೆ ನಿಮಗಿದ್ದರೆ ಅದಕೊಂದು ಪರಿಹಾರವಿದೆ. ಪರಿಸರ ನಾಶ ತಡೆಯಬೇಕು, ವಿನಾಶದಂಚಿನಲ್ಲಿರುವ ಈ ನಾಗಲಿಂಗ ಪುಷ್ಪದ ಮರ ಉಳಿಯಬೇಕೆನ್ನುವ ದೃಷ್ಟಿಯಿಂದ ಶ್ರೀ ವಿಶ್ವನಾಥ್, ಸಂತೆಬೆನ್ನೂರು ರವರು ಕಳೆದ 18 ವರ್ಷಗಳಿಂದ ಗಿಡ ಮಾಡಿ ಉಚಿತವಾಗಿ ಹಂಚುತ್ತಿದ್ದಾರೆ. ಇವರಿಂದ ಆಸಕ್ತರು ಗಿಡಗಳನ್ನು ಪಡೆಯಬಹುದು. ವರ್ಷದಲ್ಲಿ ಒಂದು ಸಸಿಯನ್ನು ಬೆಳೆಸಲು ನಮ್ಮಿಂದ ಅಸಾಧ್ಯವೆಂದು ಕೈಚೆಲ್ಲಿದರೆ, ಒಂದು ಹಣ್ಣಿನಿಂದ ನೂರು ಸಸಿಗಳನ್ನು ಮಾಡುತ್ತೇನೆನ್ನುವ ವಿಶ್ವನಾಥರ ಸಂಪರ್ಕ ಸಂಖ್ಯೆ 9964907316.
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*********************************************