ಮಕ್ಕಳಿಗೆ ರಜೆಯ ಓದು : ಸಂಚಿಕೆ - 07
Saturday, July 12, 2025
Edit
ಮಕ್ಕಳಿಗೆ ರಜೆಯ ಓದು
ನಾವೆಲ್ಲಾ ಸಣ್ಣವರಿದ್ದಾಗ ನಮಗೆ ಕಥೆ, ಕಾದಂಬರಿ, ಕಾಮಿಕ್ಸ್ ಪುಸ್ತಕಗಳನ್ನು ಓದುವುದು ಒಂದು ರೀತಿಯ ಹುಚ್ಚು ಹವ್ಯಾಸ. ಆ ಸಮಯದಲ್ಲಿ ಟಿವಿ, ಮೊಬೈಲ್ ಕಾಟ ಇಲ್ಲದೇ ಇದ್ದುದರಿಂದ ನಮ್ಮಂಥಾ ಮಕ್ಕಳಿಗೆ ಪುಸ್ತಕವೇ ಅತ್ಯಂತ ದೊಡ್ಡ ಮನರಂಜನೆ ಮತ್ತು ಜ್ಞಾನವರ್ಧಕ ಟಾನಿಕ್. ಆ ಸಮಯದಲ್ಲಿ ಅನುಪಮಾ ನಿರಂಜನ ಅವರು ಬರೆದ ಮಕ್ಕಳ ಕಥೆಗಳ ಸಂಕಲನ ‘ದಿನಕ್ಕೊಂದು ಕಥೆ’ ಪ್ರಕಟವಾಗಿತ್ತು. ಅದೂ ೧೨ ತಿಂಗಳ ಲೆಕ್ಕದಲ್ಲಿ ೧೨ ಸಂಕಲನಗಳು.
ಸಂಚಿಕೆ - 07
ಓದು ಬರಹ : ಕೆ ಪಿ ಅಶ್ವಿನ್ ರಾವ್
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
ಹೀಗೆ ದಿನಕ್ಕೊಂದು ಕಥೆ ಬರೆಯಲು ಅನುಪಮಾ ಅವರಿಗೆ ಸಲಹೆ ನೀಡಿದ್ದು ಅವರ ಪತಿ ನಿರಂಜನ ಅವರು. ನಿರಂಜನರೂ ಬಹಳ ದೊಡ್ಡ ಸಾಹಿತಿ. ಪತಿಯ ಸಲಹೆಯಂತೆ ೩೬೫ ಕಥೆಗಳನ್ನು ಬರೆದು ತಿಂಗಳ ಆಧಾರದಲ್ಲಿ ೧೨ ಸಂಪುಟಗಳನ್ನಾಗಿಸಿದರು. ಈ ಸಂಪುಟಗಳನ್ನು ಪ್ರಕಾಶಿಸಿದವರು ಡಿ.ವಿ.ಕೆ. ಮೂರ್ತಿಯವರು.
‘ದಿನಕ್ಕೊಂದು ಕಥೆಗಳು’ ಸಂಪುಟಗಳು ರೂಪುಗೊಂಡ ಬಗೆಯನ್ನು ಲೇಖಕಿ ಪುಸ್ತಕದ ಮುನ್ನುಡಿಯಲ್ಲಿ ವಿವರಿಸಿದ್ದಾರೆ. ಅದು ಹೀಗಿದೆ- ’ನನ್ನ ಮಕ್ಕಳು "ಅಮ್ಮ ಕಥೆ ಹೇಳು" ಎಂದು ದಿನವೂ ದುಂಬಾಲು ಬೀಳುತ್ತಿದ್ದರು. ಅವರಿಗಾಗಿ ಭಾರತದ ಪುರಾಣ-ಇತಿಹಾಸಗಳನ್ನು ಆಧರಿಸಿ ಕಥೆಗಳನ್ನು ಹೆಣೆದು ಹೇಳಿದೆ. ಈ ಕಥೆಗಳನ್ನು ಹೇಳುವಾಗ ನನ್ನ ಮಕ್ಕಳು ಊಟ, ನಿದ್ದೆ ಮರೆತು ತನ್ಮಯರಾಗುತ್ತಿದ್ದರು. ಅದನ್ನು ಕಂಡು, 'ಕನ್ನಡ ನಾಡಿನ ಇತರ ಮಕ್ಕಳೂ ಇವುಗಳಿಂದ ಸಂತೋಷ ಪಡುವಂತಾಗಬೇಕು' ಎಂಬ ಹೆಬ್ಬಯಕೆ ನನ್ನಲ್ಲಿ ಮೂಡಿತು. ನಾನು ಹೇಳಿದ ಕಥೆಗಳಲ್ಲಿ ಮಕ್ಕಳು ಆರಿಸಿದುದನ್ನು ಬರೆಯತೊಡಗಿದೆ. "ಹೇಗೂ ನೂರಾರು ಕಥೆ ಬರೀತೀರಿ. ಮುನ್ನೂರ ಅರವತ್ತೈದೇ ಬರೆದಿಡಿ. ದಿನಕ್ಕೊಂದು ಕಥೆಯಾಗ್ತದೆ" ಎಂದರು ಶ್ರೀ ನಿರಂಜನ. ಈ ರೀತಿ 'ದಿನಕೊಂದು ಕಥೆ' ಯ ಉದಯವಾಯಿತು ಎಂದು ಲೇಖಕಿ ವಿವರಿಸಿದ್ದಾರೆ.
ಕಥೆಗಳಿಂದ ಮಕ್ಕಳಿಗಾಗುವ ಉಪಯೋಗ ಬ್ರಹ್ಮಾಂಡದಷ್ಟು. ಕಥೆಗಳಿಂದ ಮಗುವಿನ ಕಲ್ಪನಾಶಕ್ತಿ ಬೆಳೆಯುತ್ತದೆ, ಕುತೂಹಲ ತಣಿಯುತ್ತದೆ, ಬುದ್ಧಿ ಚಿಗುರುತ್ತದೆ, ಸಾಹಸಪ್ರವೃತ್ತಿ ಹೆಚ್ಚುತ್ತದೆ, ಅನುಕಂಪ ಬೆಳೆಯುತ್ತದೆ. ದುಷ್ಟರಿಗೆ ಸೋಲು, ಸತ್ಯವಂತರಿಗೆ ಜಯ ಎಂಬ ನೀತಿ ಮನದಟ್ಟಾಗುತ್ತದೆ. ಹೀಗೆ ಕಥೆಗಳು ಮಗುವಿನ ಬೌದ್ಧಿಕ ಬೆಳವಣಿಗೆಗೆ ನೆರವಾಗುತ್ತವೆ. ಈ ಹೊತ್ತಗೆಯ ಕಥೆಗಳನ್ನು ಓದಿದ ಅಥವಾ ಓದಿಸಿಕೊಂಡು ಕೇಳಿದ ಮಕ್ಕಳಿಗೆ ಭರತಖಂಡದ ಪುರಾಣಗಳ ಬಗ್ಗೆ ತಿಳಿವಳಿಕೆ ಮೂಡುವುದಲ್ಲದೆ ಅವುಗಳ ಬಗ್ಗೆ ಗೌರವಭಾವನೆಯೂ ಹುಟ್ಟುತ್ತದೆ. ಅಷ್ಟೇ ಅಲ್ಲ, ಜಗತ್ತಿನ ಇತರ ದೇಶಗಳ ಕಥೆಗಳಿಂದ ತಮ್ಮ ಜ್ಞಾನ ಭಂಡಾರವನ್ನು ವಿಸ್ತರಿಸಿಕೊಂಡದ್ದರಿಂದ ಆ ಭಾಷೆ ಹಾಗೂ ಜನರ ಬಗೆಗೆ ಆದರ ಮೂಡುತ್ತದೆ. ಪ್ರಪಂಚವೇ ತನ್ನದು ಎಂಬ ವಿಶಾಲ ಮನೋಭಾವ ಹುಟ್ಟುತ್ತದೆ. ಬೆಳೆಯುವ ಮನಸ್ಸಿಗೆ ಯೋಗ್ಯ ಆಹಾರ ಒದಗಿಸುವುದು ತಂದೆ ತಾಯಿಯರ ಆದ್ಯ ಕರ್ತವ್ಯ’ ಎಂದು ಈ ಸಂಕಲನದ ಬಗ್ಗೆ ವಿವರಿಸಿದ್ದಾರೆ.
‘ದಿನಕ್ಕೊಂದು ಕಥೆ’ ಯ ಸಂಪುಟದ ೧೨ ಸಂಚಿಕೆಗಳು ಈಗಲೂ ಪುಸ್ತಕದಂಗಡಿಯಲ್ಲಿ ಬಹು ಬೇಡಿಕೆ ಇರುವ ಕೃತಿಗಳು. ಹಿಂದೂ ಪಂಚಾಂಗದ ತಿಂಗಳಾದ ಚೈತ್ರ, ವೈಶಾಖ, ಜೇಷ್ಟ, ಆಷಾಢ, ಶ್ರಾವಣ, ಭಾದ್ರಪದ, ಅಶ್ವಯುಜ, ಕಾರ್ತಿಕ, ಮಾರ್ಗಶಿರ, ಪುಷ್ಯ, ಮಾಘ, ಫಾಲ್ಗುಣ ಹೀಗೆ ಹೆಸರಿಸಲಾಗಿದೆ. ಒಂದು ಸಂಪುಟ ಓದಿದರೆ ಎಲ್ಲಾ ಸಂಪುಟಗಳನ್ನು ಓದ ಬೇಕೆಂಬ ತುಡಿತ ಖಂಡಿತಾ ಆಗುತ್ತದೆ. ಇದಕ್ಕೆ ಕಾರಣ ಅನುಪಮಾ ನಿರಂಜನ ಅವರ ಬರವಣಿಗೆಯ ಶೈಲಿ. ಮಕ್ಕಳ ಮನಸ್ಸಿಗೆ ನಾಟುವಂತೆ ಸರಳವಾದ ಭಾಷೆಯಲ್ಲಿ ಬರೆದಿದ್ದಾರೆ. ಪ್ರತೀ ಕಥೆಯಲ್ಲಿ ಒಂದು ನೀತಿ ಪಾಠವಿದೆ. ಈ ಪುಸ್ತಕ ಮಕ್ಕಳ ಓದಿಗೆ ಬಹು ಉಪಯುಕ್ತ.
ಮಕ್ಕಳ ಓದಿಗೆ ಉಪಯುಕ್ತವೆನಿಸುವ ಒಂದು ಆಂಗ್ಲ ಪುಸ್ತಕ : ಜೊಹಾನ್ನ ಸ್ಪೈರಿ ಎಂಬಾಕೆ ಬರೆದ ಹೈದಿ (Heidi) ಎಂಬ ಅನಾಥ ಹುಡುಗಿಯ ಕಥಾ ವಸ್ತು ಹೊಂದಿರುವ ಪುಸ್ತಕ. ಮೂಲತಃ ಜರ್ಮನ್ ಭಾಷೆಯಲ್ಲಿ ಬರೆಯಲಾದ ಈ ಕಥೆ ವಿಶ್ವದ ಸುಮಾರು ೫೦ ಭಾಷೆಗಳಿಗೆ ಅನುವಾದಗೊಂಡಿದೆ. ತಂದೆ ತಾಯಿಯ ಪ್ರೀತಿಯನ್ನು ಕಾಣದ ಹೈದಿ ನಿರ್ಭಾವುಕ ಅಜ್ಜನ ಜೊತೆ ವಾಸಿಸುತ್ತಿದ್ದಳು. ಹುಮ್ಮಸ್ಸಿನ, ಸದಾ ಚಟುವಟಿಕೆಯ ಹುಡುಗಿಯಾದ ಹೈದಿ ತನ್ನ ವರ್ತನೆಯಿಂದ ಅಜ್ಜನನ್ನೇ ಬದಲಾಯಿಸಿ ಬಿಡುತ್ತಾಳೆ. ಅಜ್ಜ ಮತ್ತು ಮೊಮ್ಮಗಳ ಪ್ರೀತಿಯ ಬಾಂಧವ್ಯವನ್ನು ಈ ಕಥೆ ಹೇಳುತ್ತದೆ. ಫ್ಲಾಂಕ್ ಫರ್ಟ್ ಪಟ್ಟಣದಲ್ಲಿ ಆಕೆಯ ಬಾಳು, ಕ್ಲಾರಾ ಎಂಬ ನಡೆದಾಡಲಾರದ ಹುಡುಗಿಯ ಜೊತೆ ಒಡನಾಟ ಇವೆಲ್ಲಾ ಓದಲು ಆನಂದ ನೀಡುತ್ತದೆ. ಮಕ್ಕಳು ಖಂಡಿತವಾಗಿಯೂ ಓದಬೇಕಾದ ಪುಸ್ತಕ ಇದು.
(ಇನ್ನಷ್ಟು ಪುಸ್ತಕಗಳ ಪರಿಚಯ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ
ಪದವಿನಂಗಡಿ, ಬೊಂದೇಲ್
ಮಂಗಳೂರು, ದಕ್ಷಿಣಕನ್ನಡ ಜಿಲ್ಲೆ
ಮೊ : +91 94482 53815
******************************************