-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 107

ನಿಷ್ಪಾಪಿ ಸಸ್ಯಗಳು : ಸಂಚಿಕೆ - 107

ನಿಷ್ಪಾಪಿ ಸಸ್ಯಗಳು : ಸಂಚಿಕೆ - 107
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ


ಪ್ರೀತಿಯ ಮಕ್ಕಳೇ ಹೇಗಿದ್ದೀರಿ? ಮಳೆಗಾಲದ ಸುಂದರವಾದ ದಿನಗಳು ನಮ್ಮ ಜೊತೆಗಿವೆ. ನಾವಿಂದು ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿ ವಿಶ್ರಾಂತ ಜೀವನ ನಡೆಸುತ್ತಿರುವ ಡಾಕ್ಟರ್ ವಾರಿಜಾ ನಿರ್ಬೈಲ್ ರವರ ಮನೆಗೆ ಹೋಗೋಣ. ಅವರು ನಿವೃತ್ತರಾದರೂ ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡವರು. ಸಂಗೀತ, ಗಮಕ, ಇಂಗ್ಲೀಷ್ ವ್ಯಾಕರಣ ಇತ್ಯಾದಿಗಳನ್ನು ಕಲಿಸುವ ಜೊತೆಗೆ ಗಿಡಗಳ ಬಗ್ಗೆ ಸಾಕಷ್ಟು ಆಸಕ್ತಿ ವಹಿಸುವವರು. ಬನ್ನಿ ಅವರನ್ನು ಮಾತನಾಡಿಸೋಣ.

ರಘು: ಸರಿ ಗುರುಗಳೆ

ನಯನ: ಗುರುಗಳೆ, ವಾರಿಜಾ ಮೇಡಮ್ ತರಕಾರಿ ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದಾರೆ..

ಸಲೀಂ: ನಾವೂ ಅಲ್ಲಿಗೇ ಹೋಗೋಣವೇ ಗುರುಗಳೆ? ಅಲ್ಲೇ ಹೊಸ ಸಸ್ಯಗಳನ್ನು ಗುರುತಿಸಲು ಸಾಧ್ಯವಾದೀತು.

ಗುರುಗಳು: ಹೌದು ಹೌದು. ಕಳೆದ ವಾರ ಮೂರ್ತಿ ಸರ್ ಮನೆಗೆ ಹೋದಾಗಲೂ ಹೀಗೇ ಆಗಿತ್ತಲ್ವಾ? ಮನೆಗೆ ಹೋಗೋದಕ್ಕಿಂತ ಪ್ರಕೃತಿಯ ಮಡಿಲಿಗೇ ಹೋಗೋಣ.

ಸಲೀಂ: ಗುರುಗಳೇ, ಇಲ್ಲೊಂದು ಗಿಡವಿದೆ ನೋಡಿ.. ನಾನು ಈ ವರೆಗೆ ನೋಡದೆ ಇರುವ ಗಿಡವಿದು.

ರಘು: ನಾನೂ ನೋಡಿಲ್ಲ ಸಲೀಂ. ಹಕ್ಕಿಯ ಪುಕ್ಕದಂತಿವೆ ಎಲೆಗಳು!

ಗುರುಗಳು: ಎಲೆಗಳಿಗೆ ತೊಟ್ಟಿರದೆ ಆ ಭಾಗವೇ ರೆಕ್ಕೆಗಳ ಹಾಗೆ ಬದಲಾವಣೆಯಾಗಿ ರೂಪುಗೊಂಡಿದೆಯಲ್ಲವೇ?

ನಯನ: ನನ್ನಲ್ಲಿ ಪುಟ್ಟ ಸ್ಕೇಲ್ ಇದೆ. ಎಲೆಯನ್ನು ಅಳತೆ ಮಾಡುತ್ತೇನೆ.. ಇಗೋ ನೋಡಿ.. ಇದರ ರೆಕ್ಕೆಯ ಉದ್ದ ನಾಲ್ಕೂವರೆ ಸೆ.ಮೀ.ಇದೆ.

ರಘು: ಇಡೀ ಎಲೆಯ ಉದ್ದವೆಷ್ಟಿದೆ ನೋಡು

ನಯನ: ಸರಿ ಸರಿ. ಕೆಲವು ಎಲೆಗಳು 10 ಸೆ.ಮೀ ಕೆಲವು 12 ಸೆ.ಮೀ ಉದ್ದ ಇವೆ.

ಸಲೀಂ: ಎಲೆಯು ಆರಂಭಗೊಳ್ಳುವ ಮೊದಲು ಇರುವ ರೆಕ್ಕೆಯ ಉದ್ದ ಸೇರಿಸಿದರೆ ಎಲೆಯ ಉದ್ದ ಕಡಿಮೆಯೆಂದರೂ 15 - 16 ಸೆ.ಮೀ ಉದ್ದವಾಯ್ತು!.

ನಯನ: ಅಲ್ಲಿ ನೋಡಿ, ಇಂತಹುದೇ ಇನ್ನೊಂದು ಗಿಡವಿದೆ. ಆದರೆ ಅದರಲ್ಲಿ ಹೂವಿನ ಗೊಂಚಲೂ ಇದೆ. 

ಸಲೀಂ: ಹೂಗಳು ಗಿಡದ ಶಾಖೆಗಳ ತುದಿಗಳಲ್ಲಿ ಉದ್ದಕ್ಕೂ ಹರಡಿಕೊಂಡಿವೆ. ಗೊಂಚಲೆಂದರೆ ಒಂದೇ ಗುಚ್ಛವಾಗಿಯಲ್ಲ!

ಗುರುಗಳು: ಹೌದು ಹೌದು. ಮಕ್ಕಳೇ , ಇಲ್ಲಿ ನೋಡಿ, ವಾರಿಜಾ ಮೇಡಮ್ ಈ ಕಡೆಗೇ ಬಂದಾಯ್ತು. ಈ ಗಿಡದ ಬಗ್ಗೆ ಅವರೇನು ಹೇಳುತ್ತಾರೆ, ಕೇಳೋಣ.

ಮಕ್ಕಳು: ಮೇಡಮ್ ನಮಸ್ತೆ. 

ವಾರಿಜಾ ಮೇಡಮ್ : ನಮಸ್ತೆ ಮಕ್ಕಳೇ..

ರಘು: ಮೇಡಮ್.. ಇಲ್ಲಿ ನೋಡಿ. ಇದೊಂದು ವಿಶೇಷ ಸಸ್ಯ. ಅದರ ಎಲೆಗಳು ನಮ್ಮ ಗಮನಸೆಳೆದವು. ಎಲೆಗಳ ಬುಡದಲ್ಲಿ ರೆಕ್ಕೆಯಂತಹ ರಚನೆಯಿದೆ ನೋಡಿ.

ವಾರಿಜ ಮೇಡಮ್: ಓ...ಅದಾ! ಆ ಗಿಡವನ್ನು ನಾವು ತುಳು ಭಾಷೆಯಲ್ಲಿ ಕುದುಕ ಬಚ್ಚಿರೆ ಎನ್ನುತ್ತೇವೆ. ಕನ್ನಡದಲ್ಲಿ ಮೊಲದ ಗಿಡ, ದೊಡ್ಡೊಟ್ಟೆ ಎನ್ನುವರು. ಸಾಮಾನ್ಯವಾಗಿ ವಿಂಗ್ ಸ್ಟಾಕ್ ಡೆಸ್ಮೊಡಿಯಮ್, ಟ್ರೆಫಲ್ ಗ್ರಾಸ್ ಎಂದು ಹೇಳುತ್ತಾರೆ. ಸಸ್ಯ ಶಾಸ್ತ್ರೀಯವಾಗಿ ತಡೆಹಗಿ ಟ್ರೈಕ್ವೆಟ್ರಮ್ (Tadehagi triquetrum) ಎಂಬ ಹೆಸರಿದೆ. ತಡೆಹಗಿ ಇದರ ಕುಲ. ಫ್ಯಾಬೇಸಿಯೇ ಕುಟುಂಬದಲ್ಲಿ ಹೂ ಬಿಡುವ ಸಸ್ಯವಿದು.

ನಯನ: ಮೇಡಮ್ ಇದರ ಎಲೆಯೂ ಆಯತಾಕಾರದಂತಿದ್ದು ತುದಿ ಚೂಪಾಗಿದೆ. ನರಗಳು ಎದ್ದು ಕಾಣುತ್ತಿವೆ.

ವಾರಿಜಾ ಮೇಡಮ್ : ಹೌದು. ಇದೊಂದು ಸಣ್ಣ ಸಸ್ಯ. ಹೆಚ್ಚೆಂದರೆ ಎರಡೂವರೆ ಮೂರು ಮೀಟರಷ್ಟೇ ಎತ್ತರ ಬೆಳೆಬಲ್ಲದು. ನಮ್ಮ ಭಾರತದ ಹೆಚ್ಚಿನ ಭಾಗದಲ್ಲಿ ಕಾಣಸಿಗುತ್ತದೆ. ಬಂಜರು ಭೂಮಿ, ಇಳಿಜಾರು, ಗಿಡಗಂಟಿ, ಗುಡ್ಡಗಾಡು, ಅರಣ್ಯ, ಪೊದೆ, ಹುಲ್ಲುಗಾವಲು, ಕಲ್ಲಿನ ಜಾಗ ಅಥವಾ ನದೀ ತೀರ, ರಸ್ತೆಬದಿ ಎಲ್ಲೇ ಆದರೂ ನೆಲೆ ಕಂಡುಕೊಳ್ಳುತ್ತದೆ.

ನಯನ: ಅದರ ಹೂಗಳೂ ಬಾರೀ ಚಂದ ಇವೆ ಮೇಡಮ್..

ವಾರಿಜಾ ಮೇಡಮ್: ಹೌದು. ಪ್ರಕೃತಿಯಲ್ಲಿ ಎಲ್ಲದಕ್ಕೂ ಅದರದ್ದೇ ಆದ ಭಿನ್ನತೆ ಹಾಗೂ ಸೌಂದರ್ಯವಿದೆ. ನಸು ಗುಲಾಬಿ, ನಸು ನೇರಳೆ ಬಣ್ಣಗಳ ವೃತ್ತಾಕಾರದ ದಳಗಳು ವಿಶಿಷ್ಟವಾಗಿ ಹೆಣೆದುಕೊಂಡು ಜಾಲರಿಯಂತೆ ಕಾಣಿಸುತ್ತದೆ. ಹೂಗಳರಲಿ ಬಿದ್ದುಹೋದ ಬಳಿಕ ಪುಟಾಣಿ ಕೋಡುಗಳೂ ಅದರೊಳಗೆ ದ್ವಿದಳ ಧಾನ್ಯದಂತಹ ಬೀಜಗಳೂ ಇದ್ದು ಸಂತಾನವನ್ನು ಮುಂದುವರಿಸುತ್ತವೆ.

ಸಲೀಂ : ಗುರುಗಳೇ, ನೀವು ಏನನ್ನು ತಿನ್ನುತ್ತಿರುವಿರಿ? ಬಾಯಿಯೆಲ್ಲಾ ವೀಳ್ಯದೆಲೆ ತಿಂದಂತೆ ಕೆಂಪಗಾಗಿದೆ!

ಗುರುಗಳು : ಹ್ಹ ಹ್ಹ.. ನಾನೊಂದು ಮ್ಯಾಜಿಕ್ ಮಾಡಿದೆ ಮಕ್ಕಳೇ..! ಹೇಗನ್ನುವಿರೋ? ಅಲ್ಲಿ ನೋಡಿ... ಲಂಟಾನ ಗಿಡವಿದೆ. ಅದರ ಎಲೆ ಹಾಗೂ ಈ ಮೊಲದ ಗಿಡವನ್ನು ಜೊತೆಯಾಗಿ ಜಗಿದರೆ ವೀಳ್ಯದೆಲೆಯನ್ನು ಸುಣ್ಣ, ಅಡಿಕೆಯ ಜೊತೆ ತಿಂದಂತೆ ಬಾಯಿ ಕೆಂಪಗಾಗುವುದು! ಮೊಲದ ಎಲೆ ಮತ್ತು ಬರಿಯ ವೀಳ್ಯದೆಲೆ ತಿಂದರೂ ಕೆಂಪಾಗುತ್ತದೆ. ನಮ್ಮ ಬಾಲ್ಯದಲ್ಲಿ ಇದೆಲ್ಲ ಒಂದು ಆಟವಾಗಿತ್ತು.

ವಾರಿಜಾ ಮೇಡಮ್ : ಹೌದು. ನಮಗೆಲ್ಲ ಬಾಲ್ಯದಲ್ಲೆ ಇದರ ಪರಿಚಯವಿತ್ತು. ಇದನ್ನು ಮದ್ದಿಗೂ ಬಳಸುತ್ತಾರೆ. ಚೀನಾದಲ್ಲಿ ಮೊಲದ ಗಿಡ ಸಾಂಪ್ರದಾಯಿಕ ಜನಾಂಗೀಯ ಮೂಲಿಕಯಾಗಿದೆ. ಅಲ್ಲಿ ಈ ಸಸ್ಯದ ಬಗ್ಗೆ ಆಧುನಿಕ ಕಾಲದಲ್ಲೂ ಬಹಳಷ್ಟು ಸಂಶೋಧನೆಗಳಾಗಿವೆ. ಕೀಟನಾಶಕ, ಕ್ರಿಮಿನಾಶಕವಾಗಿ ಭಾರತದಲ್ಲೂ ಬಳಕೆಯಲ್ಲಿದೆ.

ರಘು : ಈ ನಿಸರ್ಗದಲ್ಲಿ ಯಾವ ಗಿಡವೂ ವ್ಯರ್ಥವಲ್ಲ!

ವಾರಿಜಾ ಮೇಡಮ್ : ಅದು ನಿಜ. ಮೂಲವ್ಯಾಧಿ, ಶಿಶು ಸೆಳೆತಗಳಿಗಿದು ಟಾನಿಕ್! ಜ್ವರ, ಸಂಧಿವಾತ, ಜೀರ್ಣಕಾರಿ ಸಮಸ್ಯೆ ಗಳಿಗೆ, ಹೆಪಟೈಟಿಸ್ ಬಿ., ಯಕೃತ್ತಿನ ಕಾಯಿಲೆ , ಬಾವು, ಮೂತ್ರವರ್ಧಕ, ಉರಿಯೂತಗಳಿಗೆ ಉಪಶಮನ ನೀಡುತ್ತದೆ. ಇದು ಪರಾವಲಂಬಿ ವಿರೋಧಿ. ವಿವಿಧ ರೀತಿಯ ಮಣ್ಣು ಹಾಗೂ ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಂಡು ಎಲ್ಲೆಡೆಯೂ ಬೆಳೆಯಬಲ್ಲ ಮೊಲದ ಗಿಡ ಒಂದು ದೀರ್ಘಕಾಲಿಕ ಪೊದೆ ಸಸ್ಯವಾಗಿದೆ. ಇದರಲ್ಲಿರುವ ಆರು ಪ್ರಭೇದಗಳಲ್ಲಿ ಐದು ಪ್ರಭೇದಗಳು ಭಾರತ ಮತ್ತು ಇಂಡೋಚೈನಾಕ್ಕೆ ಸ್ಥಳೀಯವಾಗಿವೆ. ಜಾನುವಾರುಗಳಿಗೆ ಇಷ್ಟದ ತಿನಿಸು. ರೈತರು ಇದನ್ನು ಮಣ್ಣಿನ ಸಂರಕ್ಷಣೆಗಾಗಿ ಹೊದಿಕೆ ಬೆಳಯಾಗಿ ಬೆಳೆಸುವ ಮೂಲಕ ಮಣ್ಣಿನ ಫಲವತ್ತತೆಯನ್ನೂ ಹೆಚ್ಚಿಸಿಕೊಳ್ಳುತ್ತಾರೆ. 

ಗುರುಗಳು: ನೋಡಿದಿರಾ ಮಕ್ಕಳೇ, ಒಂದು ನಿಷ್ಪಾಪಿ ಸಸ್ಯದ ಹಿಂದೆ ಎಂತಹ ಇತಿಹಾಸವಿದೆ! 1977 ರಲ್ಲಿ ಚೀನಾದಲ್ಲಿ ಇದರ ದಾಖಲೀಕರಣವಾಗಿದೆ. ಕಹಿ ರುಚಿಯಾದರೂ ತಂಪು ಗುಣವಿರುವ ಮೊಲದ ಗಿಡ ಏಷ್ಯಾ, ಫೆಸಿಫಿಕ್ ದ್ವೀಪ, ಆಸ್ಟ್ರೇಲಿಯಾ ಗಳಲ್ಲಿ ಹರಡಿದೆ.

ರಘು: ಗುರುಗಳೇ, ನಮಗೆ ಬಹಳ ಖುಷಿಯಾಯಿತು. ಕೆಂಪು ಕೆಂಪಾದ ಚಿಗುರು ಹೊಂದಿರುವ ಈ ಸಸ್ಯವು ತುಂಬಾ ನಿರ್ಲಿಪ್ತವಾಗಿ ಭೂಮಿಯ ಮೇಲೆ ಹರಡಿದೆ. ತನ್ನ ಪುಟಾಣಿ ಶಾಖೆಗಳನ್ನು ಸೂರ್ಯನ ಬಿಸಿಲಿಗೆ ಇಷ್ಟಿಷ್ಟೇ ಎತ್ತಿ ಹಿಡಿದು ಗಾಳಿಗೆ ನಲಿದಾಡುವುದನ್ನು ಕಂಡಾಗ ಗಿಡದ ಜೊತೆ ಸ್ನೇಹ ಮಾಡುವ ಮನಸ್ಸಾಗುತ್ತಿದೆ.

ಗುರುಗಳು : ಸರಿಯಾಗಿಯೇ ಹೇಳಿದೆ ರಘು. ನಮಗೆ ಪ್ರಕೃತಿಯ ಜೊತೆ ಈ ಭಾವ ಬೆಸೆದಾಗಲೇ ನಮ್ಮ ಬದುಕಿಗೂ ಒಂದು ಅರ್ಥ ಬರುವುದು. ವಾರಿಜಾ ಮೇಡಮ್ ಈ ಗಿಡದ ಸಮಗ್ರ ಚಿತ್ರಣ ನೀಡಿ ಮರೆಯದಂತೆ ಮಾಡಿದ್ದಾರೆ. ಅವರಿಗೆ ಧನ್ಯವಾದಗಳನ್ನು ಸಲ್ಲಿಸೋಣ.

ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಬಗ್ಗೆ ತಿಳಿಯೋಣ.... ನಮಸ್ತೆ
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************




Ads on article

Advertise in articles 1

advertising articles 2

Advertise under the article