-->
ಜೀವನ ಸಂಭ್ರಮ : ಸಂಚಿಕೆ - 188

ಜೀವನ ಸಂಭ್ರಮ : ಸಂಚಿಕೆ - 188

ಜೀವನ ಸಂಭ್ರಮ : ಸಂಚಿಕೆ - 188
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
                                  
               

ಮಕ್ಕಳೇ... ನಮ್ಮಲ್ಲಿ ಅನೇಕ ತಪ್ಪು ಕಲ್ಪನೆಗಳಿವೆ. ಬೇರೆಯವರೊಂದಿಗೆ ಹೋಲಿಸಿಕೊಂಡು, ನಾವು ಬಡವರೆಂದುಕೊಂಡಿದ್ದೇವೆ. ನಮ್ಮಲ್ಲಿರುವ ಅಂತಸ್ತುಗಳನ್ನು ಎಣಿಸಿಕೊಂಡು, ಬಡವರೆಂದು ಕಲ್ಪಿಸಿಕೊಂಡು ಕೊರಗುತ್ತೇವೆ. ಈ ಲೇಖನ ಓದಿ ನಂತರ ತೀರ್ಮಾನಿಸಿ. ನಾವು ಬಡವರೆ?.

ಬಲ್ಲವರು, ತಿಳಿದವರು, ತತ್ವಜ್ಞಾನಿಗಳು, ಸನ್ಯಾಸಿಗಳು, ಋಷಿಗಳು ಮತ್ತು ಮುನಿಗಳು ಹೇಳಿದ್ದು ಏನೆಂದರೆ ಜೇಬು, ಮನೆ ತುಂಬಿದ್ದು ಶ್ರೀಮಂತಿಕೆಯಲ್ಲ, ಮನಸ್ಸು ತುಂಬಿದ್ದು ಶ್ರೀಮಂತಿಕೆ. ಮೈಯಲ್ಲಿ ಶಕ್ತಿ ತುಂಬಿದ್ದು ಶ್ರೀಮಂತಿಕೆ. ಈ ಶರೀರ, ಈ ಶರೀರದ ಆಯಸ್ಸು ಸಂಪತ್ತು. ಮನುಷ್ಯನಿಗೆ ನೂರು ವರ್ಷ ಆಯಸ್ಸು ಇದ್ದರೆ, ಆ ನೂರು ವರ್ಷ ಕಾಲ ನಡೆಯುತ್ತಿದ್ದರೆ, ಕೈ ಹಿಡಿಯುತ್ತಿದ್ದರೆ, ಕಣ್ಣು ನೋಡುತ್ತಿದ್ದರೆ, ಕಿವಿ ಕೇಳುತ್ತಿದ್ದರೆ, ಆ ದೇಹ ಶ್ರೀಮಂತ. ನಮ್ಮ ಆಯಸ್ಸು ಎಷ್ಟಿದೆಯೋ ಅಷ್ಟು ಕ್ರಿಯಾಶೀಲವಾಗಿ, ಶಕ್ತಿಯುತವಾಗಿ ಇದ್ದರೆ, ಆ ದೇಹ ಶ್ರೀಮಂತ. ಆದ್ದರಿಂದ ಹೇಳುತ್ತಾರೆ "ಈ ಶರೀರ ಸಂಪತ್ತಿನ ಸಂಪತ್ತು". ಈ ದೇಹ ಕೆಡಿಸಿದರೆ, ಸಂಪತ್ತು ಹೋಯಿತು. ನಾವು ಬಡವರಾದೇವಿ ಎಂದು ಭಾವಿಸಬೇಕು. ಕಣ್ಣು ನೋಟ ಹೋಯ್ತು ಎಂದರೆ, ಅದ್ಭುತ ಸಂಪತ್ತು ಹೋಯಿತು. ಕಣ್ಣುಗಳು ಎರಡು ಇದ್ದು, ಸಣ್ಣದಿರಬಹುದು. ಕಣ್ಣು ತೆರೆದರೆ ಜಗತ್ತಿನ ಅದ್ಭುತ ಸೌಂದರ್ಯ ತೋರಿಸುತ್ತದೆ. ಜೀವನ ಶ್ರೀಮಂತ ಗೊಳಿಸಿದ್ದು ಕಣ್ಣು. ಎಲ್ಲಾ ಸೌಂದರ್ಯ ನೋಡುತ್ತದೆ. ಆ ಸೌಂದರ್ಯವನ್ನು ಮನಸ್ಸಿಗೆ ಕಳಿಸುತ್ತದೆ. ಅದು ಮನಸ್ಸನ್ನು ಶ್ರೀಮಂತ ಗೊಳಿಸುತ್ತದೆ, ಸಂತೋಷ ತುಂಬುತ್ತದೆ. ಹಾಗಾಗಿ ಈ ಕಣ್ಣು ಸಂಪತ್ತು. 

ಒಬ್ಬ ಒಂದು ಕೋಟಿ ರೂ ಕನ್ನಡಕ ಹಾಕಿದ್ದಾನೆ. ಆದರೆ ಆತನಿಗೆ ಕಣ್ಣೆ ಕಾಣುವುದಿಲ್ಲ. ಬಂದವರೆಲ್ಲ, ನೋಡಿದವರೆಲ್ಲ, ಕನ್ನಡಕ ಕೊಂಡಾಡುತ್ತಾರೆ. ಕೋಟಿ ಇದ್ದರೇನು ಉಪಯೋಗ?. ಆದರೆ ನಮ್ಮ ಕಣ್ಣು ಕನ್ನಡಕ ಇಲ್ಲ. ಕೋಟಿ ಇಲ್ಲ .ಚೆನ್ನಾಗಿ ಕಾಣಿಸುತ್ತದೆ. ಇದು ಸಂಪತ್ತು ಅಲ್ಲವೇನು?. ಕನ್ನಡಕ ನೋಡಿ ಮರುಗುವುದಕ್ಕಿಂತ, ನಮ್ಮ ಕಣ್ಣಿನ ಸಾಮರ್ಥ್ಯ ನೋಡಿ ಸಂತೋಷ ಪಡಬೇಕು. ಇದೇ ಅರ್ಥ ಸಂಪಾದನೆ. ನಮ್ಮ ಕಾಲು ಕಪ್ಪು ಇದ್ದರೇನು?. 10 ಕಿಲೋಮೀಟರು ನಡೆಯುತ್ತದೆ ಅಂದಾಗ, ನಮ್ಮ ಕಾಲನ್ನು ಪ್ರೀತಿಸಬೇಕು. ನಮ್ಮ ಕಾಲು ಕೈ ಬಗ್ಗೆ ಅಭಿಮಾನ ಇರಬೇಕು. ನಮ್ಮ ದೇಹ, ಅವಯವಗಳ ಬಗ್ಗೆ ಅಭಿಮಾನ ಇರಬೇಕು. ಬಣ್ಣ ಮುಖ್ಯವಲ್ಲ. ಗಾತ್ರ, ಎತ್ತರ ಮುಖ್ಯವಲ್ಲ. ಅದರ ಕ್ರಿಯಾಶೀಲತೆ ಮುಖ್ಯ. ನಮಗೆ ಹಣ ಸಿಕ್ಕರೆ ಅಭಿಮಾನ ಪಡುತ್ತೇವೆ. ಆದರೆ ಈ ದೇಹ, ಸಂಪತ್ತಿನ ಸಂಪತ್ತಾಗಿರುವುದರಿಂದ ಅಭಿಮಾನ ಪಡಬೇಕು. ಕಿರೀಟ ಸಂಪತ್ತಲ್ಲ. ನಮ್ಮ ತಲೆ ಸಂಪತ್ತು. ತಲೆನೇ ಇಲ್ಲ, ಕಿರೀಟ ಹಾಕಿ ಪ್ರಯೋಜನವೇನು?. ತಲೆ ಇದೆ ಅಂತ ತಾನೆ ಕಿರೀಟ, ರೂಮಾಲು, ಟೋಪಿ ಹಾಕುವುದು. ತಲೆನೇ ಇಲ್ಲ , ಅವುಗಳ ಅಗತ್ಯವೇನು?. ತಲೆ ಬಗ್ಗೆ ಅಭಿಮಾನ ಇರಬೇಕು ವಿನಃ ಮೇಲೆ ಹಾಕಿದ್ದರ ಬಗ್ಗೆ ಅಲ್ಲ. ತಲೆ ಸಂಪತ್ತು ವಿನಹ, ಬೇರೆಯಲ್ಲ. ಸಂಪತ್ತು ತಲೆ, ದೇಹ, ಅವಯವಗಳೆ ವಿನಃ, ಅದರ ಮೇಲೆ ಹಾಕಿದ್ದು ಅಲ್ಲ. ದೇಹದ ಮೇಲೆ ಒಳ್ಳೆ ಡ್ರೆಸ್ ಹಾಕೋಣ. ಡ್ರೆಸ್ ಮಹತ್ವದಲ್ಲ, ದೇಹ ಮಹತ್ವದ್ದು. ಡ್ರೆಸ್ ಯಾವುದರ ಮೇಲೆ ಹಾಕಿದ್ದೇವೆಯೋ ಅದು ಮಹತ್ವದ್ದು. ದೇಹ ಶಕ್ತಿಯುತವಾಗಿ ಕ್ರಿಯಾಶೀಲವಾಗಿರಬೇಕು. ದೇಹ ಶಕ್ತಿಯುತವಾಗಿದ್ದು, ಕ್ರಿಯಾಶೀಲರಾಗಿರುವವರು ಯಾರು ಬಡವರಲ್ಲ. ಯಾರಿಗೆ ನಡೆಯುವುದಕ್ಕೆ ಬರುವುದಿಲ್ಲ?, ಕೈ ಕೆಲಸ ಮಾಡುವುದಕ್ಕೆ ಬರುವುದಿಲ್ಲ?, ಯಾರಿಗೆ ನೋಡುವುದಕ್ಕೆ ಬರುವುದಿಲ್ಲ?, ಯಾರಿಗೆ ಅನುಭವಿಸುವುದಕ್ಕೆ ಬರುವುದಿಲ್ಲ?. ಅವರು ಬಡವರು. ಈ ದೇಹವನ್ನು ಹಾಳು ಮಾಡದೆ, ರಕ್ಷಿಸುವುದೇ ಅರ್ಥ ಸಂಪಾದನೆ. ಏನೋ ಕುಡಿದು?. ಏನೋ ತಿಂದು ಬಲಿಯಾಗಬಾರದು. 

ಈ ದೇಹ ಇರುವುದು ಹೊಡೆದಾಟಕ್ಕಲ್ಲ, ಆನಂದಕ್ಕಾಗಿ ನಿಸರ್ಗ ರೂಪಿಸಿದ್ದು. ಈ ಶರೀರ ಸಂಪತ್ತು ಆಗಿರುವುದರಿಂದ, ಇದನ್ನ ಯಾವ ಯಾವುದಕ್ಕೋ ಬಳಸಬಾರದು. ಯಾವುದಕ್ಕೆ ಬಳಸಿದರೆ ನಮ್ಮ ಸಂಪತ್ತು ಹೆಚ್ಚುತ್ತದೆ, ಅದಕ್ಕೆ ಬಳಸಬೇಕು. ಏಕೆಂದರೆ ನಮ್ಮ ಲಕ್ಷ್ಯ ಜೇಬಿನ ಕಡೆ ಇರಬಾರದು. ನಮ್ಮ ಲಕ್ಷ್ಯ, ಶರೀರದ ಕಡೆ ಇರಬೇಕು. ಶರೀರ ಅಂದರೆ ಮಾತು, ಮತಿ, ತಿಳಿದುಕೊಳ್ಳುವ ಸಾಮರ್ಥ್ಯ, ಇವೆಲ್ಲ ದೊಡ್ಡ ಸಂಪತ್ತು. ಬದುಕುವ ಶಕ್ತಿ ನಮ್ಮ ಮೈಯಲ್ಲಿ ಇದೆಯಲ್ಲ ಇದಕ್ಕೆ ಅಭಿಮಾನ ಪಡಬೇಕು. ಈ ದೃಷ್ಟಿಯಿಂದ ನೋಡಿದರೆ ಯಾರ ಮೇಲಾದರೂ ಮತ್ಸರ ಬರುತ್ತದೆಯೇನು?. ದೊಡ್ಡ ದೊಡ್ಡ ಮನೆ, ಬಟ್ಟೆ ಬರೆ, ಒಡವೆ ನೋಡಿ ಶ್ರೀಮಂತರು ಅನ್ನುತ್ತೇವೆ. ಕೆಲವರು ಸಾವಿರಾರು ರೂಪಾಯಿ ಖರ್ಚು ಮಾಡಿ ಶೂ ತಂದಿರುತ್ತಾರೆ. ಅದನ್ನು ಹಾಕಲು ಸಮಯವೇ ಇರುವುದಿಲ್ಲ. ಹಾಕಿದರೂ ಒಂದು ಕಿಲೋಮೀಟರ್ ನಡೆಯುವ ಸಾಮರ್ಥ್ಯವಿಲ್ಲ. ಶೂ ಸಂಪತ್ತಲ್ಲ. ಕಾಲು ಸಂಪತ್ತು. ಮಕ್ಕಳಿಗೆ ಯಾವುದೇ ಆಭರಣ, ವಸ್ತ್ರ ಹಾಕಿದರು, ತೆಗೆದು ಹಾಕಿ ಆಡಿ ಕುಣಿಯುತ್ತದೆ. ನಮಗೆ ಏನಾದರೂ ಕೊಟ್ಟರೆ ನಡೆಯುವುದೇ ಇಲ್ಲ. ಮಾತು ಇಲ್ಲ. ಏಕೆಂದರೆ ಈಗ ಬಂದಿರುವುದು ಒಂದು ಕೆಜಿ. ಇದನ್ನು ಎರಡು ಕೆಜಿ ಮಾಡಬೇಕು, 3 ಕೆಜಿ ಮಾಡಬೇಕು, ನಾಲ್ಕು ಕೆಜಿ ಮಾಡಬೇಕು. ಕೊನೆಗೆ ನೂರು ಕೆಜಿ ಆಯ್ತು. ಆ ಚಿನ್ನ ಇಲ್ಲೇ ಉಳಿಯಿತು. ಈತ ಮೇಲಕ್ಕೆ ಹೋದ. ಆತನ ಮಗನು ಇದನ್ನೇ ಮಾಡಿ ಮುಂದುವರಿಸಿದ. ದೇಹ ಬಡವಾಯಿತು. ಚಿನ್ನ ಶ್ರೀಮಂತವಾಯಿತು. ದೊಡ್ಡ ದೊಡ್ಡ ಶ್ರೀಮಂತರು ಅನುಭವಿಸುವುದಿಲ್ಲ. ಬಡವರು ಅನುಭವಿಸುವುದು. ಅದಕ್ಕಾಗಿ ಶ್ರೀಮಂತರ ಕಂಡು ಮರುಗುವುದಕ್ಕಿಂತ, ಕನಿಕರಪಡಬೇಕು. ಏನು ಇದ್ದರೆ ಎಲ್ಲ ಇದ್ದ ಹಾಗೆ ಇದೆಯಲ್ಲ ಅಂತ ಶರೀರ ಇರುವಾಗ ಅಭಿಮಾನ ಪಡಬೇಕು. 

ನಿಸರ್ಗ ಹೇಗೆ ರೂಪಿಸಿದಿಯೋ ಹಾಗೆ ಶುಚಿಯಾಗಿ ಇಟ್ಟುಕೊಳ್ಳಬೇಕು. ಮೈ, ಹಲ್ಲು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ನೈಸರ್ಗಿಕ ಆಹಾರ ಸೇವಿಸಬೇಕು, ಆನಂದ ಪಡಬೇಕು. ಇದಕ್ಕೆ ಸಂಪತ್ತು ರಕ್ಷಣೆ ಎನ್ನುವರು. ಚೆನ್ನಾಗಿರುವುದನ್ನು ಎಷ್ಟು ಬೇಕು ಅಷ್ಟು ಸಂತೋಷವಾಗಿ ಊಟ ಮಾಡುವುದು ಶರೀರದ ಸಂಪತ್ತಿನ ರಕ್ಷಣೆ. ಎರಡನೇ ಸಂಪತ್ತು ಇಂದ್ರಿಯ ಸಂಪತ್ತು. ಕಣ್ಣು, ಕಿವಿ, ನಾಲಿಗೆ, ನಾಸಿಕ, ಚರ್ಮ ಚೆನ್ನಾಗಿರಬೇಕು, ಕ್ರಿಯಾಶೀಲವಾಗಿರಬೇಕು. ಚೆನ್ನಾಗಿ ಬಳಸಬೇಕು. ಚೆನ್ನಾಗಿರುವುದನ್ನು ನೋಡುವುದು. ಚೆಂದಾಗಿರುವುದನ್ನು ಕೇಳುವುದು. ಚೆಂದಾಗಿರುವುದನ್ನು ಮೂಸುವುದು. ಚೆಂದಾಗಿರುವುದನ್ನು ರುಚಿಸುವುದು. ಚಂದ ಇರುವುದನ್ನು ಸ್ಪರ್ಶಿಸುವುದು. ಇವೆ ಸಂಪತ್ತು. ಶಬ್ದ ಸಂಪತ್ತು. ಸ್ಪರ್ಶ ಸಂಪತ್ತು. ರೂಪ ಸಂಪತ್ತು. ಗಂಧ ಸಂಪತ್ತು. ರಸ ಸಂಪತ್ತು. ಇವುಗಳನ್ನು ಅನುಭವಿಸುವ ಇಂದ್ರಿಯ ಸಂಪತ್ತು. ಸಿಕ್ಕಿದ್ದನ್ನು ನೋಡಬಾರದು. ಸಿಕ್ಕಿದ್ದನ್ನು ಕೇಳಬಾರದು. ಸಿಕ್ಕಿದ್ದನ್ನು ರುಚಿಸಬಾರದು. ಸುಂದರ- ಸುಂದರವಾಗಿರುವುದನ್ನು ನೋಡಿ, ಕೇಳಿ, ಮಾಡಿ, ಆನಂದ ಪಡಬೇಕು. ಈ ಆನಂದ ಹೆಚ್ಚಾಗಬೇಕು. ಹೀಗೆ ಐದು ಅನುಭವ, ದಿನಪೂರ್ತಿ ಆಗಬೇಕು. ಆಗ ಅನುಭವ ಶ್ರೀಮಂತವಾಗುತ್ತದೆ. ಸುತ್ತಮುತ್ತ ಗಿಡ, ಹಣ್ಣು ನೋಡಿದರೆ ರೂಪ ಸಂಪತ್ತು, ಮನಸ್ಸನ್ನು ತುಂಬಿ ಸಂತೋಷ ಕೊಡುತ್ತದೆ. ಶಬ್ದ, ಸ್ಪರ್ಶ, ರೂಪ, ರಸ, ಗಂಧ ಇವು 5 ಸಂಪತ್ತುಗಳು. ಈ ಐದನ್ನು ದಿನಪೂರ್ತಿ ಮಾಡುವುದಕ್ಕೆ ಪ್ರಪಂಚ ಎನ್ನುತ್ತೇವೆ. ಈ ಸಂಪತ್ತನ್ನು ದಿನಾಲು ಹೆಚ್ಚು ಮಾಡಿಕೊಳ್ಳುತ್ತಿರಬೇಕು. ಸಂಪತ್ತನ್ನು ಗಳಿಸಬೇಕೆಂದರೆ, ನೋಡಿ ಸಂಪತ್ತು ಗಳಿಸುವುದು, ರೂಪ ಸಂಪತ್ತು. ಕೇಳಿ ಸಂಪತ್ತು ಗಳಿಸುವುದು, ಶಬ್ದ ಸಂಪತ್ತು. ರುಚಿಸಿ ಸಂಪತ್ತು ಗಳಿಸುವುದು ರಸ ಸಂಪತ್ತು. ಸುವಾಸನೆ ಆಗ್ರಾಣಿಸಿ ಸಂಪತ್ತು ಗಳಿಸುವುದು, ವಾಸನೆ ಸಂಪತ್ತು. ಚೆಂದಾಗಿರುವುದನ್ನು ಸ್ಪರ್ಶಿಸಿ ಸಂಪತ್ತು ಗಳಿಸುವುದು, ಸ್ಪರ್ಶ ಸಂಪತ್ತು. ಹೀಗೆ ಐದು ಅನುಭವ ಮನ ತುಂಬಿದರೆ. ನಾವು ಶ್ರೀಮಂತರು. ನೋಡಿ ಮನಸ್ಸು ಕೆಡಿಸಿಕೊಂಡರೆ ನಾವು ಬಡವರಾಗುತ್ತೇವೆ. ಬದುಕು ಹಾಳಾಗುತ್ತದೆ. ಬಸವಣ್ಣ ಹೇಳಿದರು, "ಅತ್ತಲಿತ್ತ ಹೋಗದಂತೆ ಯಳವನ ಮಾಡಯ್ಯ ತಂದೆ" ಇದರ ಅರ್ಥ ನೋಡಬೇಡ, ಆ ಕಡೆ, ಈ ಕಡೆ ಹೋಗಬೇಡ ಅಂತ ಅಲ್ಲ. ಆ ಕಡೆ ಈ ಕಡೆ ಹೋಗಬೇಡ. ಹೋಗಬೇಕಾದಲ್ಲಿ ಹೋಗು. ನೋಡಬಾರದನ್ನು ನೋಡಬೇಡ. ಚೆಂದಾಗಿರುವುದನ್ನು ನೋಡು. ಜಗತ್ತು ನಿಸರ್ಗದ ವೈವಿಧ್ಯಮಯ ಸಂಪತ್ತಿನಿಂದ ತುಂಬಿದೆ.

ಮೂರನೇ ಸಂಪತ್ತು ಮತಿ. ತಿಳಿದುಕೊಳ್ಳಬೇಕಲ್ಲ. ಇದು ಗಿಡ. ಇದು ಹೂವು. ಇದು ಕುರ್ಚಿ ಅಂತ ತಿಳಿದುಕೊಳ್ಳುತ್ತೇವೆ. ವಸ್ತುಗಳ ಜ್ಞಾನ ಮಾಡಿಕೊಳ್ಳುತ್ತೇವೆ. ಹೀಗೆ ಜ್ಞಾನ ಮಾಡಿಕೊಳ್ಳುವ ಮತಿ ಶ್ರೀಮಂತ ಸಂಪತ್ತು. ಅದನ್ನು ಬಳಸಿಕೊಳ್ಳುತ್ತಾ ಇರಬೇಕು. ತಿಳಿದುಕೊಳ್ಳುತ್ತಾ ಇರಬೇಕು. ನೋಡಿ, ಕೇಳಿ, ಮಾಡಿ ಜ್ಞಾನ ಮಾಡಿಕೊಳ್ಳಬೇಕು. ನಾವು ಇರೋತನಕ ಜ್ಞಾನ ಮಾಡಿಕೊಳ್ಳುವುದು. ಇದು ಜ್ಞಾನ ಸಂಪತ್ತು. ಹೊರಗಿನ ಸಂಪತ್ತು. ದೇಹ ಚೆನ್ನಾಗಿರಬೇಕಾದರೆ ಹೊರಗಿನ ಸಂಪತ್ತು ಬೇಕು. ದೇಹ, ಅವಯವ ಶ್ರೀಮಂತವಾಗಿರಬೇಕು. ನೋಡಲು, ಕೇಳಲು, ಮುಟ್ಟಲು ಮೂಸಲು, ರುಚಿಸಲು ಸಂಪತ್ತು ಬೇಕು. ಅನ್ನ , ನೀರು, ಗಾಳಿ , ಬೆಳಕು, ಹಣ್ಣು , ಹಂಪಲ ಮತ್ತು ಧಾನ್ಯ ಇವು ದೇಹ ಶ್ರೀಮಂತ ಮಾಡಲು ಬೇಕು. ಇವು ದೇಹ ಪೋಷಣ ಸಂಪತ್ತುಗಳು. ಇವು ದೇಹ ಪೋಷಣೆಗೆ ಬೇಕಾದ ಸಂಪತ್ತುಗಳು. ಇವು ನಮಗೆ ಯಾರಿಗೂ ಕೊರತೆ ಇಲ್ಲ. ಹಾಗಾಗಿ ನಾವು ಬಡವರಲ್ಲ. ನಮ್ಮ ದೇಹದಲ್ಲಿ ಶಕ್ತಿ ಇದ್ದರೆ, ಯಾರು ಕರೆಯಲು ಸಾಧ್ಯವಿಲ್ಲ. ನಮ್ಮ ಅನುಭವ ಸಂಪತ್ತನ್ನು ಯಾರು ಕದಿಯಲು ಆಗುವುದಿಲ್ಲ. ನಮ್ಮ ಜ್ಞಾನ ಸಂಪತ್ತನ್ನು ಯಾರು ದೋಚಲು ಆಗುವುದಿಲ್ಲ. ಇಂಥ ಸಂಪತ್ತನ್ನು ಗಳಿಸಬೇಕು. ಯಾರು ಕದಿಯಲಾರದು, ಮುಟ್ಟಲಾರದ ಅಂತಹ ಸಂಪತ್ತುಗಳನ್ನು ಗಳಿಸಬೇಕು. ಇದೇ ನಿಜವಾದ ಸಂಪತ್ತು. ಇದರ ಬಗ್ಗೆ ಅಭಿಮಾನ ಇರಬೇಕು. ನಾವು ಶ್ರೀಮಂತರಲ್ಲಿ ಶ್ರೀಮಂತರು ಅಂತ ಭಾವಿಸ ಬೇಕು. ಅಲ್ಲವೇ ಮಕ್ಕಳೆ...
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article