ಬೇಸಿಗೆ ಶಿಬಿರದ ಅನುಭವ : ಚಿಲಿಪಿಲಿ ಮಂಚಿಯಲ್ಲಿ.. ಬರಹ : ವೈಷ್ಣವಿ ಕಾಮತ್, 8ನೇ ತರಗತಿ
Wednesday, April 23, 2025
Edit
ಬರಹ : ವೈಷ್ಣವಿ ಕಾಮತ್
8ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
'ಬೆಳೆಯುವ ಸಿರಿ ಮೊಳಕೆಯಲ್ಲಿ', 'ಅರಳುವ ಮೊಗ್ಗುಗಳಿಗೆ ಭರವಸೆ ನಾವಾಗೋಣ' ಎಂಬ ನಿಟ್ಟಿನಲ್ಲಿ, ಲಯನ್ಸ್ ಕ್ಲಬ್ ಮಂಚಿಯಲ್ಲಿ ನಡೆದ ಮೂರು ದಿನಗಳ "ಚಿಲಿಪಿಲಿ ಮಂಚಿಯಲ್ಲಿ...'' ಎಂಬ ವ್ಯಕ್ತಿತ್ವ ವಿಕಸನ ಶಿಬಿರವು ಬಹಳ ಅತ್ಯುತ್ತಮ ರೀತಿಯಲ್ಲಿ ಮೂಡಿಬಂದಿದೆ. ಮಂಚಿ ಎಂಬ ಸಣ್ಣ ಊರಿನಲ್ಲಿ ನಡೆದ ಈ ಶಿಬಿರವು ಎಲ್ಲರ ಮನೆಮಾತಾಗಿದೆ. ಸುಮಾರು 49 ವಿದ್ಯಾರ್ಥಿಗಳಿಂದ ಈ ಶಿಬಿರವು ಯಶಸ್ವಿಗೊಂಡಿದೆ. ಶಿಬಿರಾರ್ಥಿಗಳು ಈ ಶಿಬಿರದಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆದುಕೊಂಡಿದ್ದಾರೆ. ಕಿರಿಯರಿಂದ ಹಿಡಿದು ಹಿರಿಯ ಮಕ್ಕಳವರೆಗೂ ಎಲ್ಲರೂ ಈ ಶಿಬಿರದಲ್ಲಿ ಭಾಗವಹಿಸಿ ಶಿಬಿರಕ್ಕೆ ಕಳೆಯನ್ನು ತಂದುಕೊಟ್ಟಿದ್ದಾರೆ. ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆಡಹಲು ಇದೊಂದು ವೇದಿಕೆಯಾಯಿತು. 
ಈ ಶಿಬಿರದ ಯಶಸ್ಸಿಗೆ ಕಾರಣೀಭೂತರಾದ ಶ್ರೀಮತಿ ಶಾರದಾ ಟೀಚರ್, ಶ್ರೀಯುತ ಬಾಲಕೃಷ್ಣ ಸರ್ ಮತ್ತು ಚಿಲಿಪಿಲಿ ಬಳಗ ಮಂಚಿ ಇವರ ಸಾರಥ್ಯವನ್ನು ಸ್ಮರಿಸಿಕೊಳ್ಳಲೇಬೇಕು. ಹಾಗೂ ಮಕ್ಕಳು ರಜೆಯಲ್ಲಿಯೂ ಕೂಡ ಕ್ರಿಯಾಶೀಲರಾಗಿರಬೇಕೆಂದು ಮನಗಂಡು, ಆಯೋಜಿಸಿದ ಈ ಶಿಬಿರದ ಮೊದಲನೆಯ ದಿನ (ದಿ 15-4-2025 ಮಂಗಳವಾರ) ಸರಿಸುಮಾರು 9.45ಕ್ಕೆ ಶ್ರೀಯುತ ಲ. ಡಾ||ಗೋಪಾಲ್ ಆಚಾರ್ ಇವರ ನೇತೃತ್ವದಲ್ಲಿ ಉದ್ಘಾಟನೆಗೊಂಡಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯ ಅತಿಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ನಂತರ ಬಾಲಕೃಷ್ಣ ಸರ್ ರವರು ಮಕ್ಕಳ 6 ಗುಂಪುಗಳನ್ನು ರಚಿಸಿ, ಅದಕ್ಕೆ ಬ್ರಹ್ಮಕಮಲ, ಪಾರಿಜಾತ, ಗುಲಾಬಿ, ಸೂರ್ಯಕಾಂತಿ, ತಾವರೆ ಮತ್ತು ಮಲ್ಲಿಗೆ ಎಂಬ ಹೆಸರುಗಳನ್ನು ನೀಡಿದರು. 1 ನೇ ಗುಂಪು (ಬ್ರಹ್ಮಕಮಲ) ನಾಯಕ ಅಶ್ವಿನ್, 2 ನೇ ಗುಂಪು (ಪಾರಿಜಾತ) ನಾಯಕ ಭವಿಶ್, 3 ನೇ ಗುಂಪು (ಗುಲಾಬಿ) ನಾಯಕಿ ಅನನ್ಯ, 4 ನೇ ಗುಂಪು (ಸೂರ್ಯಕಾಂತಿ) ನಾಯಕಿ ವೈಷ್ಣವಿ ಕಾಮತ್, 5 ನೇ ಗುಂಪು (ತಾವರೆ) ನಾಯಕಿ ಸಾನ್ವಿ ಮತ್ತು 6 ನೇ ಗುಂಪು (ಮಲ್ಲಿಗೆ) ನಾಯಕಿ ಸತ್ಯಶ್ರೀ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿ, ಪ್ರತೀ ಗುಂಪಿಗೆ ಜವಾಬ್ದಾರಿಗಳನ್ನು ಹಂಚಲಾಯಿತು. ನಂತರ ಬಾಲಕೃಷ್ಣ ಸರ್ ರವರು ಶಿಬಿರಾರ್ಥಿಗಳಿಗೆ ಹೂ ಗಿಡದ ಕ್ರಾಫ್ಟ್ ನ್ನು ಹೇಳಿಕೊಟ್ಟರು. ನಂತರ ಲಘು ಉಪಹಾರದೊಂದಿಗೆ, ಕ್ರಾಫ್ಟ್ ನ್ನು ಮುಂದುವರೆಸಲಾಯಿತು. ಮಧ್ಯಾಹ್ನದ ಭೋಜನ ವಿರಾಮದ ಬಳಿಕ ನಾ.ದಾ. ಮಣಿನಾಲ್ಕೂರ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಶಿಬಿರಕ್ಕೆ ಆಗಮಿಸಿದ್ದರು. ಅವರು ವಿವಿಧ ರೀತಿಯ ಆಟ, ಹಾಡುಗಳನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಟ್ಟರು. ಮಣಿನಾಲ್ಕೂರ್ ಸರ್ ರವರ ಭಾಗವತಿಕೆ ಹಾಗೂ ಸಂಜೆಯ ಉಪಹಾರದೊಂದಿಗೆ ಒಂದನೇ ದಿನದ ಶಿಬಿರವು ಕೊನೆಗೊಂಡಿತು. 
ಎರಡನೇ ದಿನ (ದಿ 16-4-2025 ಬುಧವಾರ) ಸರಿಸುಮಾರು 9.45 ಕ್ಕೆ ಧ್ಯಾನದೊಂದಿಗೆ ಶಿಬಿರವು ಆರಂಭಗೊಂಡಿತು. ಧ್ಯಾನದ ಬಳಿಕ ಅಶ್ವಿನ್ ಇವರು ಸರ್ವರನ್ನೂ ಶಿಬಿರಕ್ಕೆ ಸ್ವಾಗತಿಸಿ, ಬಳಿಕ ಒಂದನೇ ದಿನದ ಶಿಬಿರದ ವರದಿಯನ್ನು ಭವಿಷ್ ಇವರು ವಾಚಿಸಿದರು. ನಂತರ ಬಾಲಕೃಷ್ಣ ಸರ್ ವಿದ್ಯಾರ್ಥಿಗಳಿಗೆ ವಾರ್ತಾ ಪತ್ರಿಕೆಯಿಂದ 4 ರೀತಿಯ ಟೋಪಿಯನ್ನು ರಚಿಸುವ ಬಗ್ಗೆ ಹೇಳಿಕೊಟ್ಟರು. ನಂತರ ಸಂಪನ್ಮೂಲ ವ್ಯಕ್ತಿಯಾದ ಮಂಜುನಾಥ್ ನಾಯ್ಕ್ ಕಿನ್ನಿಗೋಳಿ ಇವರು ಶಿಬಿರಕ್ಕೆ ಆಗಮಿಸಿ, ಮುಖವಾಡ ತಯಾರಿಕೆಯ ಬಗ್ಗೆ ಮಾಹಿತಿ ನೀಡಿದರು. ಇತ್ತ ವಿದ್ಯಾರ್ಥಿಗಳು ಮುಖವಾಡ ತಯಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಂತೆಯೇ ಅತ್ತ ಮಂಜುನಾಥ್ ಸರ್ ಒಬ್ಬೊಬ್ಬ ವಿದ್ಯಾರ್ಥಿಗೆ ತಮ್ಮ ಇಚ್ಛೆಯ ಮುಖವರ್ಣಿಕೆಯನ್ನು ವಿಶಿಷ್ಟ ರೀತಿಯಲ್ಲಿ ಮಾಡುತ್ತಿದ್ದರು. ನಂತರ ವಿರಾಮವನ್ನು ನೀಡಲಾಯಿತು. ವಿರಾಮದ ಬಳಿಕ ಮುಖವಾಡ ತಯಾರಿ ಹಾಗೂ ಮುಖವರ್ಣಿಕೆ ಮುಂದುವರಿಯಿತು. ಈ ನಡುವೆ ಬಾಲಕೃಷ್ಣ ಸರ್ ವಿದ್ಯಾರ್ಥಿಗಳಿಗೆ 3 ವಿಧದ ಚಪ್ಪಾಳೆ ಮತ್ತು ಆಟವನ್ನು ಆಡಿಸಿದ್ದರು. ಭೋಜನ ವಿರಾಮದ ಬಳಿಕ ಶಿಬಿರ ವೀಕ್ಷಿಸಲು ಲಯನ್ಸ್ ಕ್ಲಬ್ ನ ಮುಂದಿನ ಅಧ್ಯಕ್ಷರಾದ ರಾಮಣ್ಣ ಶೆಟ್ಟಿ ಇವರು ಆಗಮಿಸಿದ್ದರು. ನಂತರ ಮುಖವಾಡ ತಯಾರಿ ಮತ್ತು ಮುಖವರ್ಣಿಕೆ ಮುಂದುವರೆಯಿತು. ಕೊನೆಗೆ ಪ್ರಾಮಾಣಿಕತೆಯ ಬಗ್ಗೆ ಸಣ್ಣ ಕಥೆಯನ್ನು ಬಾಲಕೃಷ್ಣ ಸರ್ ವಿದ್ಯಾರ್ಥಿಗಳಿಗೆ ಹೇಳುವುದರೊಂದಿಗೆ ಎರಡನೇ ದಿನದ ಶಿಬಿರವು ಮುಕ್ತಾಯಗೊಂಡು, ಲಘು ಉಪಹಾರ ಸವಿಯುತ್ತಾ ವಿದ್ಯಾರ್ಥಿಗಳು ಮನೆಗೆ ತೆರಳಿದರು.
ಮೂರನೇ ದಿನ ಮತ್ತು ಕೊನೆಯ ದಿನ (ದಿ 17-4-2025 ಗುರುವಾರ) 9:45 ಕ್ಕೆ ಶಿಬಿರವು ಧ್ಯಾನದೊಂದಿಗೆ ಆರಂಭಗೊಂಡು, ಸಂಪನ್ಮೂಲ ವ್ಯಕ್ತಿಯಾಗಿ ಭಾಸ್ಕರ್ ನೆಲ್ಯಾಡಿ ಇವರು ಆಗಮಿಸಿದ್ದರು. ಭಾಸ್ಕರ್ ಸರ್ ವಿದ್ಯಾರ್ಥಿಗಳಿಗೆ ನ್ಯೂಸ್ ಪೇಪರ್ ನಿಂದ ಗೊಂಬೆ ತಯಾರಿಸುವ ವಿಧಾನವನ್ನು ಹೇಳಿಕೊಟ್ಟರು. ಉಪಹಾರ ವಿರಾಮದ ಬಳಿಕ ಗೊಂಬೆ ತಯಾರಿಕೆಯು ಮುಂದುವರೆಯಿತು. ಊಟದ ವಿರಾಮದ ಬಳಿಕ ಗೋಪಾಲ್ ಆಚಾರ್ ಸರ್ ವಿದ್ಯಾರ್ಥಿಗಳಿಗೆ ಸುತ್ತಮುತ್ತಲಿನ ಗಿಡ, ಮರ, ಬಳ್ಳಿಗಳನ್ನು ಪರಿಚಯಿಸಿದರು. ನಂತರ ಸಂಪನ್ಮೂಲ ವ್ಯಕ್ತಿಯಾಗಿ ಮೌನೇಶ್ ವಿಶ್ವಕರ್ಮ ಸರ್ ಆಗಮಿಸಿ, ಮಕ್ಕಳಿಗೆ ಹಾಡು, ಕಥೆ, ಅಭಿನಯ ಗೀತೆ ಮತ್ತು ವಿವಿಧ ಆಟಗಳನ್ನು ಆಡಿಸಿ, ನಕ್ಕು ನಗಿಸಿದರು. ಮೂರು ದಿನಗಳ "ವ್ಯಕ್ತಿತ್ವ ವಿಕಸನ" ಶಿಬಿರವು ಶ್ರೀಯುತ ರಾಮ್ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ, ಎಲ್ಲಾ ಅತಿಥಿ ಅಭ್ಯಾಗತರ ಸಮ್ಮುಖದಲ್ಲಿ, ಮಕ್ಕಳ ಪ್ರಾರ್ಥನೆ, ಹಾಡು ಮತ್ತು ಅನಿಸಿಕೆಗಳೊಂದಿಗೆ ಮುಕ್ತಾಯಗೊಂಡಿತು.
ಒಟ್ಟಿನಲ್ಲಿ ಈ ಮೂರು ದಿನಗಳ "ವ್ಯಕ್ತಿತ್ವ ವಿಕಸನ" ಶಿಬಿರವು ಬಹಳ ಉತ್ತಮ ರೀತಿಯಲ್ಲಿ ಸಂಪನ್ನಗೊಂಡಿತು. ಇಂತಹ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿವೆ. ಇನ್ನು ಮುಂದಿನ ದಿನಗಳಲ್ಲೂ ಈ ರೀತಿಯ ಶಿಬಿರಗಳು ಆಯೋಜನೆಗೊಳ್ಳುವಂತಾಗಲಿ. ಈ ಶಿಬಿರಗಳಿಂದ ಮಕ್ಕಳಲ್ಲಿ ಕ್ರಿಯಾಶೀಲ ಮನೋಭಾವ, ಸಂಘಟನೆ, ಸಹಕಾರ, ಹೊಂದಾಣಿಕೆ, ಆತ್ಮವಿಶ್ವಾಸ, ಧೈರ್ಯ ಮತ್ತು ಮಾತಿನ ಕೌಶಲ್ಯ ಬೆಳೆಯಲು ಪ್ರೇರಣೆಯಾಗಲಿ.
ಈ ಶಿಬಿರಕ್ಕೆ ಸಹಕರಿಸಿ, ಪ್ರೋತ್ಸಾಹಿಸಿದ ಲ. ಡಾ|| ಗೋಪಾಲ್ ಆಚಾರ್ ಸರ್, ರಮಾ ಮೇಡಂ, ತಾರಾನಾಥ್ ಕೈರಂಗಳ ಸರ್ ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಪೋಷಕ ವೃಂದಕ್ಕೂ ಮತ್ತು ಅಭಿಮಾನಿಗಳೆಲ್ಲರಿಗೂ ವಂದನೆಗಳು.... ಧನ್ಯವಾದಗಳೊಂದಿಗೆ..
8ನೇ ತರಗತಿ
ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************