ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 74
Tuesday, April 1, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 74
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ.... ಕಳೆದ ವಾರ ಕೆಲವೊಂದು ಪ್ರಾಣಿಗಳು ಬಣ್ಣಗಳನ್ನು ಗುರುತಿಸಲಾರವು ಎನ್ನುವುದನ್ನು ತಿಳಿದೆವು. ಮನುಷ್ಯನಲ್ಲಿ ಹೀಗೇನಾದರೂ ಇದೆಯೇ ನೋಡೋಣ. ಆದರೆ ಮಾನವನಲ್ಲಿ ಹೀಗೆ ಆಗುವ ಸಾಧ್ಯತೆಗಳಿಲ್ಲ. ಏಕೆಂದರೆ ಮಾನವನ ಕಣ್ಣಿನಲ್ಲಿರುವ ಮೂರು ರೀತಿಯ ಶಂಕು ಕೋಶಗಳು (cones) ನೀಲಿ, ಹಸಿರು ಮತ್ತು ಕೆಂಪು ಬಣ್ಣಗಳ ಹತ್ತಿರದ ತರಂಗಾಂತರಗಳನ್ನು ಗುರುತಿಸುತ್ತವೆ. ಈ ಮೂರು ಮೂಲ ಬಣ್ಣಗಳನ್ನು ಬಳಸಿ ತ್ರಿವರ್ಣ ಚಿತ್ರವನ್ನು (trichromatic) ಮೂಡಿಸುತ್ತವೆ. ಆದ್ದರಿಂದ ಬಣ್ಣಗುರುಡುತನ ಮಾನವನಲ್ಲಿ ಸಾಧ್ಯವೇ ಇಲ್ಲ.
ಆರಂಭಿಕ ವಿಜ್ಞಾನವನ್ನು ಓದಿದವರಿಗೂ ಜಾನ್ ಡಾಲ್ಟನ್ ಪರಿಚಿತ. ಎಲ್ಲಾ ವಸ್ತುಗಳೂ ಪರಮಾಣುಗಳಿಂದಾಗಿವೆ ಎಂಬ ಪರಮಾಣು ಸಿದ್ದಾಂತವನ್ನು ಮಂಡಿಸಿದಾತ ಡಾಲ್ಟನ್. ಡಾಲ್ಟನ್ ತನ್ನ ಸಂಶೋಧನೆ ಎಷ್ಟೊಂದು ಮಗ್ನನಾಗಿರುತ್ತಿದ್ದನೆಂದರೆ ಅವನ ಎಲ್ಲಾ ಅವಶ್ಯಕತೆಗಳನ್ನು ಬೇರೆಯರು ನೋಡಿಕೊಳ್ಳಬೇಕಿತ್ತು. ಆ ಕೆಲಸವನ್ನು ಅವನ ಚಿಕ್ಕಮ್ಮ ಮಾಡುತ್ತಿದ್ದರು. ಒಂದು ದಿನ ಅವನ ತಾಯಿ ಅವನಿಗಾಗಿ ಒಂದು ಚಡ್ಡಿ ತಂದಿದ್ದರು. "ನೋಡು ಡಾಲ್ಟನ್ ನಿನಗೆ ಹಸಿರು ಚಡ್ಡಿ ತಂದಿದ್ದೇನೆ. ನಿನಗದು ಇಷ್ಟವಾಯಿತೇ" ಎಂದು ಕೇಳಿದರು. ಡಾಲ್ಟನ್ ಗೆ ಅಚ್ಚರಿ ಅದು ಹಸಿರಾಗಿರಲಿಲ್ಲ ಬದಲಾಗಿ ಬೂದು (grey) ಬಣ್ಣದ್ದಾಗಿತ್ತು. ಅದು "ಹಸಿರಲ್ಲ ಚಿಕ್ಕಮ್ಮ ಬೂದು" ಎಂದ. ಆಗ ಅಲ್ಲಿಯೇ ಇದ್ದ ಡಾಲ್ಟನ್ ನ ಅಮ್ಮ "ಹಾಗೇಕೆ ಹೇಳುತ್ತಿ ಡಾಲ್ಟನ್ ಅದು ಹಸಿರು ಅಲ್ಲವೇನೋ" ಎಂದರು. ಆಗ ಡಾಲ್ಟನ್ ಗೆ ಎಲ್ಲೋ ಏನೋ ನಡೆಯುತ್ತಿದೆ ಎನ್ನಿಸಿತು. ಅವನು ವಿಜ್ಞಾನಿ ತಾನೆ. ಚಡ್ಡಿ ಹಿಡಿದು ಬೀದಿಯ ಗುಂಟ ಹೊರಟ. ಎಲ್ಲರ ಬಳಿ ಚಡ್ಡಿಯ ಬಣ್ಣ ಕೇಳುತ್ತಾ ಹೋದ. ಎಲ್ಲರೂ ಹಸಿರು ಎಂದರು. ಆಗ ಅವನಿಗೆ ಅರಿವಾಯಿತು. ಸಮಸ್ಯೆ ಇರುವುದು ಚಿಕ್ಕಮ್ಮನಲ್ಲಲ್ಲ ಬದಲಾಗಿ ತನ್ನಲ್ಲಿ ಎಂದು. ಸುಸ್ತಾಗಿ ಮನೆಗೆ ಬಂದು ಟೇಬಲ್ ಮೇಲೆ ಚಡ್ಡಿ ಎಸೆದು ಕುಸಿದು ಕುಳಿತ. ಅದೇ ಸಮಯಕ್ಕೆ ಒಳಬಂದ ಅವನ ತಮ್ಮ ಕೇಳಿದ "ಏನಣ್ಣಾ ಬೂದು ಬಣ್ಣದ ಚಡ್ಡಿ ತಂದೆಯಾ". ಗಬಕ್ಕನೆ ಎದ್ದು ಕುಳಿತ ಡಾಲ್ಟನ್. ಅದರ ಅಧ್ಯಯನದಲ್ಲಿ ತೊಡಗಿದ. ಅದರ ಮುಖ್ಯಾಂಶಗಳು ಹೀಗಿದ್ದವು.
1. ಕೆಲವರು ಕೆಂಪು ಹಸಿರು ಬಣ್ಣಗಳನ್ನು ಸ್ಪಷ್ಟವಾಗಿ ಗುರುತಿಸಲಾರರು.
2. ಇದಕ್ಕೆ ಕಾರಣ ವಿಟ್ರಿಯಸ್ ಹ್ಯೂಮರ್ ನಲ್ಲಿರುವ ಒಂದು ಕಿತ್ತಳೆ ಬಣ್ಣದ ವಸ್ತು ಕಾರಣ.
3. ಇದು ಅನುವಂಶೀಯವಾದುದು.
4. ಇದು ಗಂಡಸರಲ್ಲಿ ಮಾತ್ರ ಹೆಚ್ಚು ಕಂಡು ಬರುವ ದೋಷ.
ಇದನ್ನು ಬಣ್ಣಗುರುಡುತನ (colour blindness) ಎಂತಲೂ ಡಾಲ್ಟನ್ ಗೆ ಇದ್ದು ಅವನಿಂದಲೇ ವಿವರಿಸಲ್ಪಟ್ಟ ಖಾಯಿಲೆಯಾದುದರಿಂದ ಡಾಲ್ಟನ್ ನ ರೋಗ ಅಥವಾ ಡಾಲ್ಟನಿಸಂ (Daltoinism) ಎಂದು ಕರೆಯಲಾಗುತ್ತದೆ.
ಬಣ್ಣಗುರುಡುತನದಲ್ಲಿ ಮೂರು ವಿಧಗಳಿವೆ red green (Deuteranopia), red green (Protanopia) ಮತ್ತು blue green (Tritanopia). ಈಗಾಗಲೇ ನಿಮಗೆ ತಿಳಿದಿದೆ S- cones ನೀಲಿ, M-cones ಹಸಿರು, ಮತ್ತು L-cones ಕೆಂಪು ಬಣ್ಣವನ್ನೂ ಗುರುತಿಸುತ್ತವೆ. ಇವುಗಳಲ್ಲಿ ಯಾವುದಾದರೂ ಒಂದರ ಕೊರತೆ ಅಥವಾ ಅವುಗಳ ಕಾರ್ಯಕ್ಷಮತೆಯ ದೋಷದ ಕಾರಣದಿಂದ ಉಂಟಾಗುತ್ತದೆ. ಬಣ್ಣಗುರುಡತನ ಇರುವವರಿಗೆ ಸಹಜ ಬದುಕಿಗೆ ತೊಂದರೆ ಏನೂ ಇಲ್ಲ. ಆದರೆ ವಾಹನ ಚಲಾಯಿಸುವಾಗ ಟ್ರಾಫಿಕ್ ಸಿಗ್ನಲ್ ನ ಹಸಿರು ಬಣ್ಣ ಬೂದು ಅಥವಾ ಬಿಳಿಯಾಗಿ ಗೋಚರಿಸುತ್ತವೆ, ಕೆಂಪು ಗಾಢ ಅಥವಾ ತಿಳಿ ಕಿತ್ತಲೆಯಾಗಿಯೂ ನೀಲಿ ಹಳದಿಯಾಗಿಯೂ ಕಾಣಿಸಬಹುದು. ಆದರೆ ನಮ್ಮಲ್ಲಿ ವಾಹನ ಚಾಲನಾ ಪರವಾನಗಿ ನೀಡುವ ವೇಳೆ ಟ್ರಾಫಿಕ್ ನಿಯಮಗಳ ಬಗ್ಗೆ ಕೇಳಲಾಗುತ್ತದೆಯೇ ಹೊರತು ಕಣ್ಣಿನ ಪರೀಕ್ಷೆ ಮಾಡಿಸುವುದಿಲ್ಲ.
ಇದೊಂದು ವಂಶಪಾರಂಪರ್ಯವಾಗಿ ಬರುವ ರೋಗ (hereditary). ಈ ರೋಗಕ್ಕೆ ಕಾರಣವಾಗುವ ಜೀನ್ X ಕ್ರೋಮೋಸೋಮ್ ನ ಮೇಲಿದ್ದು ಇದೊಂದು ಹಿಂಜರಿಕೆಯ (recessive) ಗುಣ. ಆದ್ದರಿಂದ ಇದು ಒಂದೇ X ಕ್ರೋಮೋಸೋಮ್ ಹೊಂದಿರುವ ಜೀವಗಳಲ್ಲಿ ಅಂದರೆ ಪುರುಷರಲ್ಲಿ ಮಾತ್ರ ಕಂಡುಬರುತ್ತದೆ. ಪ್ರಕೃತಿ ಗಂಡನ ಮೇಲೆ ಕಣ್ಣಿಡಲು ಮತ್ತು ಉಡುಪಿನ ಆಯ್ಕೆಯಲ್ಲಿ ನಿಖರವಾಗಿರಲಿ ಎಂದು ಸ್ತ್ರೀಯರಿಗೆ ಬಣ್ಣಗುರುಡುತನವನ್ನು ಕೊಟ್ಟಿಲ್ಲ ಕಾಣುತ್ತದೆ.
ಡಾಲ್ಟನ್ ನ ಕೋರಿಕೆಯ ಮೇರೆಗೆ ಆತನ ಕಣ್ಣನ್ನು ರಕ್ಷಿಸಿಡಲಾಯಿತು. 1844 ರಲ್ಲಿ ಅದರಲ್ಲಿನ ವಿಟ್ರಿಯಸ್ ಹ್ಯೂಮರ್ನಲ್ಲಿರುವ ವರ್ಣಕಗಳ (pigment) ತಪಾಸಣೆ ಮಾಡಲಾಯಿತು. ಅದರಲ್ಲಿ ಯಾವ ಬಣ್ಣದ ವಸ್ತುವೂ ಇರಲಿಲ್ಲ. 1988 ರಲ್ಲಿ ಅದರ DNA ಪರೀಕ್ಷೆ ಮಾಡಿದಾಗ ಅವನು ಅಪರೂಪದ (Deuteranopia) ಬಳಲುತ್ತಿದ್ದುದು ತಿಳಿದು ಬಂತು.
ಇದೇ ರೀತಿಯ ಅನುಭವವನ್ನು ನನ್ನ ಪರಿಚಯದ ಇಂಜಿನಿಯರ್ ಒಬ್ಬರು ನನಗೆ ಹೇಳಿದ್ದರು. ಕೊಂಕಣ ರೈಲ್ವೇ ಕಾಮಗಾರಿ ಆರಂಭವಾದಾಗ ಅವರು ಅದಕ್ಕೆ ಸೇರಿಕೊಂಡರು. ಹೊನ್ನಾವರದ ಸುರಂಗ ಕುಸಿದು ಕಾರ್ಮಿಕರು ಸಮಾಧಿಯಾದಾಗ ತಾನು ಆ ಕೆಲಸದ ಮೇಲುಸ್ತುವಾರಿಯಲ್ಲಿದ್ದೆ ಎಂದು ತಿಳಿಸಿದ್ದರು. ಕಾಮಗಾರಿ ಮುಗಿದು ರೈಲುಗಳ ಪ್ರಾಯೋಗಿಕ ಓಡಾಟ ಆರಂಭವಾದಾಗ ಈಗಾಗಲೇ ಕೆಲಸ ಮಾಡುತ್ತಿರುವ ಸಿಬಂದಿಗಳ ಅವರ ವಿದ್ಯಾರ್ಹತೆ ಮತ್ತು ಸಾಮರ್ಥ್ಯದ ಆಧಾರದ ಮೇಲೆ ಸಿಬಂದಿಗಳಾಗಿ ಸ್ಥಿರೀಕರಿಸುವ ಪ್ರಕ್ರಿಯೆ ಪ್ರಗತಿಯಲ್ಲಿತ್ತು. ಅವರು ಲೋಕೋ ಪೈಲಟ್ ಆಗುವ ಇಚ್ಛೆ ಹೊಂದಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ತಿಳಿಯಿತಂತೆ ಅವರು ಬಣ್ಣಗುರುಡರು ಎಂದು. ಆದ್ದರಿಂದ ಅವರು ಲೋಕೋ ಪೈಲಟ್ ಮತ್ತು ಗಾರ್ಡ್ ಆಗಿ ಕಾರ್ಯ ನಿರ್ವಹಿಸುವಂತಿರಲಿಲ್ಲ. ಆಗ ಅವರನ್ನು ರೈಲ್ವೇ ಟಿಕೆಟ್ ಕಾರ್ಯನಿರ್ವಾಹಕರಾಗಿ (TTE) ಆಯ್ಕೆ ಮಾಡಿದರು.
ಇದು ಅನುವಂಶೀಯವಾಗಿರುವುದರಿಂದ ಇದಕ್ಕೆ ಸದ್ಯಕ್ಕೆ ಚಿಕಿತ್ಸೆ ಇಲ್ಲ. ಆದರೆ ಭಯವೂ ಬೇಡ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************