ಜೀವನ ಸಂಭ್ರಮ : ಸಂಚಿಕೆ - 186
Monday, April 21, 2025
Edit
ಜೀವನ ಸಂಭ್ರಮ : ಸಂಚಿಕೆ - 186
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇಂದು ನಾವು ಮನಸ್ಸಿನಲ್ಲಿ ಏಕಾಗ್ರತೆ ಏಕೆ ಬೇಕು ಅನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಒಂದು ಬಂಡೆ ಉರುಳುತ್ತಿದ್ದರೆ, ಅದಕ್ಕೆ ಏನೂ ಅಂಟುವುದಿಲ್ಲ. ಅದು ಸ್ಥಿರವಾದರೆ ಅದರ ಮೇಲೆ ಮಣ್ಣು ಮೆತ್ತಿಕೊಳ್ಳುತ್ತದೆ. ಹಾಗೆ ಮನಸ್ಸು ಸ್ಥಿರವಾದರೆ, ಏಕಾಗ್ರವಾದರೆ ಜ್ಞಾನ ಬೆಳೆಯುತ್ತದೆ. ಮನಸ್ಸಿನ ಶಕ್ತಿ ವಿಕಾಸವಾಗುತ್ತದೆ. ಯಾವಾಗ ಅಂದರೆ ಮನಸ್ಸು ಒಂದಕ್ಕೆ ಅಂಟಿದರೆ. ನಮಗೆ ಕಷ್ಟಗಳು ಬಂದಾಗ, ನಿರ್ಣಯ ಬದಲು ಮಾಡಿಕೊಳ್ಳುತ್ತಾ ಹೋಗುತ್ತೇವೆ. ಇದರಿಂದ ಸಾಧನೆ ಮಾಡಲು ಆಗುವುದಿಲ್ಲ.
ಒಬ್ಬ ರೈತ ಬೆಳೆ ಬೆಳೆಯುತ್ತಾನೆ ಅಂದಾಗ, ವರ್ಷ ವರ್ಷದಲ್ಲಿ ಹೆಚ್ಚು ಕಡಿಮೆ ಆಗುತ್ತದೆ. ಕಡಿಮೆ ಆದಾಗ ಒಕ್ಕಲುತನ ಬಂದ್ ಮಾಡುವುದು. ಹೆಚ್ಚಾದಾಗ ಅಷ್ಟೇ ಒಕ್ಕಲುತನ ಮಾಡುವುದು. ಹೀಗೆ ಮಾಡುತ್ತಾ ಹೋದರೆ ಒಕ್ಕಲುತನ ಮುಂದುವರಿಯೋದಿಲ್ಲ. ಒಬ್ಬ ವ್ಯಾಪಾರಿ ಇರುತ್ತಾನೆ ಎಂದುಕೊಳ್ಳಿ. ವ್ಯಾಪಾರ ಒಂದೇ ರೀತಿ ಇರುತ್ತದೆಯೇನು?. ಒಮ್ಮೆ ಹೆಚ್ಚು, ಒಮ್ಮೆ ಕಡಿಮೆ ಆಗುತ್ತದೆ. ಅದು ಆಗೋದೇ. ಅದನ್ನು ತಡೆದುಕೊಂಡು, ಒಂದು ಗತಿಯಲ್ಲಿ ಸಾಗಿದರೆ, ಏನನ್ನಾದರೂ ಸಾಧನೆ ಮಾಡಬಹುದು. ಹಿಂದೆ ನೋಡದೆ ಮುಂದೆ ಸಾಗಬೇಕು.
ಮನುಷ್ಯನ ಮನಸ್ಸು ಸದಾ ಹೊಯ್ದಾಟ ಮಾಡುತ್ತದೆ. ಆ ಹೊಯ್ದಾಟ ನಿಲ್ಲಿಸುವುದೇ ಸಾಧನೆ. ಮನಸ್ಸನ್ನು ಸ್ಥಿರಗೊಳಿಸುವುದೇ ಸಾಧನೆ. ಆಗ ಮನಸ್ಸು ಒಳ್ಳೆಯ ಫಲವನ್ನೇ ಕೊಡುತ್ತದೆ. ಹೊಯ್ದಾಡುವ ದೀಪ ವಸ್ತುಗಳನ್ನು ಸರಿಯಾಗಿ ತೋರಿಸುವುದಿಲ್ಲ. ದೀಪ ಅಚಲವಾದರೆ ವಸ್ತು ಸ್ಪಷ್ಟವಾಗಿ ತೋರಿಸುತ್ತದೆ. ಮನಸ್ಸು ಎಷ್ಟೇ ಒಳ್ಳೆಯದಿರಲಿ, ಮನಸ್ಸು ಹೊಯ್ದಾಟ ಮಾಡುತ್ತಾ ಇದ್ದರೆ, ಜ್ಞಾನ ಸರಿಯಾಗಿ ಆಗುವುದಿಲ್ಲ. ಮನಸ್ಸು ನಿಶ್ಚಲಗೊಂಡರೆ, ಏನೆಲ್ಲಾ ಸಾಧನೆ ಮಾಡಬಹುದು. ಜಗತ್ತಿನಲ್ಲಿ ಆಕರ್ಷಣೆಗಳು ಬಹಳ. ಮನಸ್ಸನ್ನು ಆಕರ್ಷಣೆಗಳು ಸೆಳೆಯುತ್ತವೆ. ಹಾಗಾಗಿ ಮನಸ್ಸು ಚಲಿಸುತ್ತಾ ಇರುತ್ತದೆ. ಒಂದಕ್ಕೆ ಅಂಟಿಕೊಳ್ಳುವುದು ಕಷ್ಟ.
ವಿಷ್ಣು ಶರ್ಮ ಎನ್ನುವ ಪಂಡಿತ. ಒಂದು ಸುಂದರ ಕಥೆ ಹೇಳುತ್ತಾನೆ. ಒಂದು ಕಾಡು. ಅಲ್ಲಿ ಒಂದು ನರಿ ವಾಸವಾಗಿತ್ತು. ಅರಣ್ಯಕ್ಕೆ ಒಬ್ಬ ಬಿಲ್ಲುಗಾರ ಬಂದನು. ಆತ ಬೇಟೆಯಾಡುವ ಉದ್ದೇಶದಿಂದ ಬಂದಿದ್ದನು. ಆತ ಒಂದು ಜಿಂಕೆಯನ್ನು ನೋಡಿದ. ಆ ಜಿಂಕೆಯನ್ನು ಬೆನ್ನು ಹತ್ತಿದ್ದನು. ಬಿಲ್ಲಿಗೆ ಬಾಣ ಸೇರಿಸಿ, ಎದೆಗೇರಿಸಿ ಬಾಣ ಬಿಟ್ಟನು. ಆ ಬಾಣ ಜಿಂಕೆಗೆ ತೂರಿತು. ಜಿಂಕೆ ಪ್ರಾಣ ಬಿಟ್ಟಿತು. ಬೇಟೆಗಾರನಿಗೆ ತುಂಬಾ ಸಂತೋಷವಾಯಿತು. ಆ ಜಿಂಕೆ ಸಮೀಪಕ್ಕೆ ಹೋದನು. ಆ ಜಿಂಕೆ ಮುಟ್ಟಬೇಕು ಅನ್ನುವಷ್ಟರಲ್ಲಿ, ಹಾವು ಆತನ ಕಾಲಿಗೆ ಕಚ್ಚಿತು. ಆತ ಜಿಂಕೆ ಸಮೀಪ ಸತ್ತು ಬಿದ್ದನು. ಆ ಜಾಗದಲ್ಲಿ ಎರಡು ಹೆಣಗಳು ಬಿದ್ದಿದ್ದಾವೆ. ಅಲ್ಲಿಗೆ ನರಿ ಬಂದಿತ್ತು. ನೋಡಿತು. ಅದಕ್ಕೆ ಆನಂದವೇ ಆನಂದ. ಬಹಳ ಸಂತೋಷ ಪಟ್ಟು, ಎರಡು ಹೆಣ, ಅದನ್ನು ತಿನ್ನಬೇಕು, ಇದನ್ನು ತಿನ್ನಬೇಕು ಅನ್ನೋ ಗೊಂದಲವಾಯಿತು. ಮನಸ್ಸು ಒಮ್ಮೆ ಈ ಕಡೆ, ಮತ್ತೊಮ್ಮೆ ಆ ಕಡೆ ನೋಡುತ್ತಾ ಇತ್ತು. ಅದೇ ಸಮಯಕ್ಕೆ ಮನಸ್ಸು ಬಿಲ್ಲಿನ ಕಡೆ ಹರಿಯಿತು. ಆ ಬಿಲ್ಲಿಗೆ ಒಂದು ದಾರ ಕಟ್ಟಿದ್ದರು. ಆ ದಾರ ಪ್ರಾಣಿ ನರದಿಂದ ಮಾಡಿದ್ದು. ನರಿಯ ಮನಸ್ಸು ಬಿಲ್ಲಿನ ನರದ ದಾರ ತಿನ್ನುವಂತೆ ಪ್ರಚೋದಿಸಿತು. ಮೊದಲು ಈ ನರ ತಿನ್ನೋದು, ನಂತರ ಮನುಷ್ಯ, ಅನಂತರ ಜಿಂಕೆ ತಿನ್ನುವ, ಹೀಗೆ ಮನಸ್ಸು ಚಂಚಲಿಸಿತ್ತು. ಹಾಗೆ ಚಿಂತಿಸುತ್ತ ಬಿಲ್ಲಿನ ನರ ಕಡಿಯುತ್ತದೆ. ಯಾವಾಗ ನರ ತುಂಡಾಯಿತೋ ಬಿಲ್ ನೇರವಾಗಿ ಸೆಟೆದು, ನೇರ ವಾಗುವಾಗ ನರಿಯ ಎದೆಗೆ ಬಡಿಯಿತು. ಆ ಹೊಡೆತಕ್ಕೆ ನರಿ ಸತ್ತಿತ್ತು.
ಇದು ಮನಸ್ಸು ಚಲಿಸುವ ಕಥೆ. ಅದು ಜಿಂಕೆಯ ಹೆಣವನ್ನು ತಿನ್ನಲಿಲ್ಲ. ಆ ಮನುಷ್ಯನ ಹೆಣವನ್ನು ತಿನ್ನಲಿಲ್ಲ. ಇದು ಬರೀ ನರಿಯ ಕಥೆಯಲ್ಲ, ನಮ್ಮೆಲ್ಲರ ಕಥೆಯು ಹೀಗೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು. ಹೀಗೆ ಮನಸ್ಸು ಚಲಿಸುತ್ತದೆ. ಗಟ್ಟಿಯಾಗಿ ಒಂದಕ್ಕೆ ಅಂಟಿಕೊಂಡರೆ, ಖಂಡಿತ ಸಾಧನೆ ಮಾಡಬಹುದು. ಮನಸ್ಸು ಹೊಯ್ದಾಟ ಮಾಡುತ್ತಾ ಇದ್ದರೆ, ಏನನ್ನು ಸಾಧಿಸಲು ಆಗುವುದಿಲ್ಲ. ನರಿ ಸಾಯುವಾಗ ಹೇಳಿತು, ನನ್ನಿಂದ ಪಾಠ ಕಲಿಯಿರಿ. ಅದು ಇಲ್ಲ, ಇದು ಇಲ್ಲ, ಮನಸ್ಸು ಚಲಿಸುತ್ತಾ ಇದ್ದರೆ. ಏನು ಸಿಗುವುದಿಲ್ಲ. ಹೀಗೆ ಹೊಯ್ದಾಡುವ ಮನಸ್ಸನ್ನು ನಿಲ್ಲಿಸುವುದಕ್ಕೆ ಸಮಾಧಿ, ಸಾಧನೆ ಎನ್ನುವರು. ಸಮಾಧಿ ಎಂದರೆ, ಒಂದು ವಸ್ತುವಿನ ಮೇಲೆ, ಒಂದು ಕ್ರಿಯೆಯ ಮೇಲೆ, ಒಂದು ಆಲೋಚನೆ ಮೇಲೆ, ಮನಸ್ಸನ್ನು ಕೇಂದ್ರೀಕರಿಸುವುದು. ಸುಮ್ಮನೆ ಅದರಲ್ಲಿ ಕೇಂದ್ರೀಕರಣ ಮಾಡುವುದು. ಒಬ್ಬ ಸಂಗೀತಗಾರ, ಒಬ್ಬ ಚಿತ್ರಗಾರ, ಒಬ್ಬ ಶಿಲ್ಪಿ, ಕೆಲಸ ಮಾಡುವಾಗ ನೋಡಿ ಎಷ್ಟು ತನ್ಮಯರಾಗಿರುತ್ತಾರೆ. ನೋಡಿ, ಎಲ್ಲಾ ಮರೆತಿರುತ್ತಾರೆ. ತಮ್ಮ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಆತನ ಮನಸ್ಸು ಆ ಕೆಲಸದಲ್ಲಿ ಒಂದಾಗಿ ಬೆರೆತಿರುತ್ತದೆ. ಹಾಗೆ ಮನಸ್ಸು ಆ ವಸ್ತುವಿನಲ್ಲಿ, ಕ್ರಿಯೆಯಲ್ಲಿ ಒಂದಾಗುವುದಕ್ಕೆ ತನ್ಮಯತೆ ಎನ್ನುವರು. ಆ ತನ್ಮಯತೆಯೇ ಸಮಾಧಿ ಎನ್ನುವರು. ಸಮಾಧಿ ಎಂದರೆ ಅದರೊಡನೆ ಒಂದಾಗುವುದು. ಅದರಲ್ಲಿ ಬೆರೆತು ಹೋಗುವುದು. ಹಾಗಾಯಿತು ಅಂದಾಗ ಸತ್ಯ ಅಭಿವ್ಯಕ್ತವಾಗುತ್ತದೆ. ಶಾಂತಿ ನಮ್ಮ ಅನುಭವಕ್ಕೆ ಬರುತ್ತದೆ. ಮಕ್ಕಳೇ, ಮನಸ್ಸು ಎಲ್ಲಾ ಕಡೆ ಹರಿಸುವುದು ಸಾಧನೆಯಲ್ಲ. ಒಂದೇ ಕಡೆ ಕೇಂದ್ರೀಕರಿಸುವುದು. ಅದರಲ್ಲಿ ಎಲ್ಲಾ ಮರೆತು, ಬೆರೆತು ಹೋಗುವುದೇ ಸಾಧನೆ. ಅಲ್ಲವೆ ಮಕ್ಕಳೇ.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************