-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 92

ನಿಷ್ಪಾಪಿ ಸಸ್ಯಗಳು : ಸಂಚಿಕೆ - 92

ನಿಷ್ಪಾಪಿ ಸಸ್ಯಗಳು : ಸಂಚಿಕೆ - 92
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
      

     ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೀರಲ್ಲವೇ.. ಖಂಡಿತವಾಗಿಯೂ ಉತ್ತಮ ಅಂಕಗಳನ್ನು ತೆಗೆಯುವುದು ಮುಖ್ಯವಾಗಿದೆ. ಆ ಬಗ್ಗೆ ತಮ್ಮ ಪ್ರಯತ್ನ ಸಾಗಲಿ... ಎಲ್ಲರಿಗೂ ಶುಭವಾಗಲಿ.
    ವಿಶ್ರಾಂತಿಯೆಂದರೆ ಕೆಲಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಎಂಬ ಮಾತಿದೆ. ನೀವು ಓದಿ ಓದಿ ದಣಿದಿರುವಿರಾದರೆ ವಿಶ್ರಾಂತಿ ಗಾಗಿ ನಾವು ನಿಷ್ಪಾಪಿ ಸಸ್ಯವೊಂದರ ಪರಿಚಯವನ್ನು ಮಾಡಿಕೊಳ್ಳೋಣ. ಈ ಸಸ್ಯ ವರ್ತಮಾನ ಕಾಲದಲ್ಲಿ ಬಹಳ ಪ್ರಚಲಿತದಲ್ಲಿದೆ. ಮಾಧ್ಯಮಗಳಲ್ಲೂ ಇದರ ಬಗ್ಗೆ ವಿಶೇಷ ಪರಿಚಯ, ವರದಿಗಳು ಹಾದು ಹೋಗುತ್ತವೆ. ಬೀಜ, ಕಾಂಡ, ಬೇರುಗಳ ಸಹಾಯದಿಂದ ಹೊಸ ಗಿಡಗಳನ್ನು ಪಡೆಯಬಹುದಾದರೂ ನರ್ಸರಿಗಳಲ್ಲಿ ಇದರ ಸಸ್ಯಗಳನ್ನು ಕಾಣಬಹುದು. ಇದೇ ನೋನಿ. ಇದು ನಮಗೆ ಹೊಸತಾದುದರಿಂದ ಸ್ಥಳೀಯ ಅಂದರೆ ತುಳು ಹೆಸರುಗಳು ಕಾಣಿಸುವುದಿಲ್ಲ. ನೋನಿ ಎಂದರೆ ಸಾಕು.. ಎಲ್ಲರಿಗೂ ಚಿರಪರಿಚಿತ!. ಗ್ರೇಟ್ ಮೊರಿಂಡಾ, ಇಂಡಿಯನ್ ಮಲ್ಬೆರಿ, ಬೀಚ್ ಮಲ್ಬೆರಿ, ವಾಂತಿಹಣ್ಣು, ಅವ್ಲ್ ಮರ, ತಗಸೆ ಮಡ್ಡಿ ಹೀಗೆ ನೂರಾರು ಹೆಸರುಗಳಿವೆ.
       Morinda citrifolia ಎಂಬ ವೈಜ್ಞಾನಿಕ ಹೆಸರುಳ್ಳ ಈ ನೋನಿ ಸಸ್ಯವು ರುಬಿಯೇಸಿ ಎಂಬ ಹೂ ಬಿಡುವ ಕುಟುಂಬದ ಸದಸ್ಯ.ಮೊರಿಂಡಾ ಕುಲ ನಾಮವಾಗಿದೆ. ಇಂಡೋನೇಷಿಯಾದಿಂದ ಆಸ್ಟ್ರೇಲಿಯದವರೆಗೆ ವಿಸ್ತಾರ ಭೂಪ್ರದೇಶದಲ್ಲಿ ಹರಡಿರುವ ಈ ನೋನಿ ಸಾಗರ ಕಿನಾರೆ, ನೆರಳಿನ ಕಾಡು, ತೆರೆದ ಕಲ್ಲಿನ ಮರಳಿನ ತೀರಗಳಲ್ಲಿ, ಜ್ವಾಲಾಮುಖಿ ಪ್ರದೇಶ, ಸುಣ್ಣದ ಕಲ್ಲು, ಹವಳದ್ವೀಪಗಳನ್ನು ಆವಾಸಸ್ಥಾನಗಳನ್ನಾಗಿ ಮಾಡಿಕೊಂಡಿದೆ. ನಾವಿಕರು ಫೆಸಿಫಿಕ್ ಪ್ರದೇಶದುದ್ದಕ್ಕೂ ವ್ಯಾಪಕವಾಗಿ ಹರಡಲು ಕಾರಣರಾದರು ಎನ್ನುತ್ತಾರೆ. 30 ಅಡಿಗಳ ವರೆಗೂ ಬೆಳೆಯಬಲ್ಲ ನೋನಿಯಲ್ಲಿ 80 ಕ್ಕೂ ಹೆಚ್ಚು ಜಾತಿಗಳಿವೆ. ಕೆಲವು ಮರಗಳಾದರೆ ಕೆಲವು ಪೊದೆ, ಕೆಲವು ಬಳ್ಳಿಗಳಾಗಿಯೂ!.
        ನೋನಿಯ ಎಲೆಗಳು ಬಿರುಬಿಸಿಲಿಗೂ ಹಚ್ಚ ಹಸಿರಾಗಿ ಹೊಳಪು ತುಂಬಿರುತ್ತವೆ. 20 ರಿಂದ 45 cm ನಷ್ಟು ಉದ್ದ 7ರಿಂದ 25 cm ಅಗಲವಿರುವ ಎಲೆಗಳ ತೊಟ್ಟು ದಪ್ಪಗಿದ್ದು ತುದಿ ಚೂಪಾಗಿರುತ್ತವೆ. ನೇಕಾರ ಇರುವೆಗಳಿಗೆ ಈ ನೋನಿ ಗಿಡಗಳೆಂದರೆ ಬಹಳ ಇಷ್ಟ. ಈ ಇರುವೆಗಳು ಎಲೆಗಳನ್ನು ಬಳಸಿ ಸುಂದರವಾದ ಗೂಡುಗಳನ್ನು ನಿರ್ಮಿಸಿಕೊಳ್ಳುವುದರಿಂದ ನೋನಿಯು ಪರಾವಲಂಬಿ ಕೀಟಗಳಿಂದ ರಕ್ಷಣೆ ಪಡೆಯುತ್ತದೆ. ನೀ ನನಗಿದ್ದರೆ ನಾ ನಿನಗೆ.. ಎಂಬ ಪ್ರಕೃತಿ ತತ್ವಕ್ಕೆ ಇದೊಂದು ಉತ್ತಮ ಉದಾಹರಣೆ. ಇದರ ಹಣ್ಣಿನ ರುಚಿ ಹಾಗೂ ಪರಿಮಳ ಮಾನವನಿಗಿಷ್ಟವಲ್ಲವಾದರೂ ಬಾವಲಿಗಳಿಗೆ ತುಂಬಾ ಇಷ್ಟ.. ಏಳು ಮಿ.ಮೀ. ಉದ್ದದ ಐದು ನೀಳ ದಳಗಳಿರುವ ಪುಟಾಣಿ ಹೂಗಳ ಬುಡ ಕೊಳವೆಯಂತಿದೆ. ಅದರ ಹಸಿರು ಮಿಶ್ರಿತ ಕೆನೆ ಬಣ್ಣ ಚಿಟ್ಟೆಗಳನ್ನೂ ಆಕರ್ಷಿಸುತ್ತವೆ. ನೋನಿಯಲ್ಲಿ ವರ್ಷವಿಡೀ ಏಕಕಾಲದಲ್ಲಿ ವಿವಿಧ ಹಂತಗಳ ಕಾಯಿ ಹಣ್ಣುಗಳನ್ನು ಕಾಣಬಹುದು. ಆರಂಭದಲ್ಲಿ ಹಸಿರಾದ ಕಾಯಿ ಪಕ್ವವಾದಾಗ ಮೃದುವಾಗಿ ಹಳದಿ ಹಸಿರು ಮಿಶ್ರಬಣ್ಣ ತಾಳುತ್ತದೆ. ಬೀಜದ ಮೂಲಕ, ಕಾಂಡ ಹಾಗೂ ಬೇರಿನ ಮೂಲಕವೂ ನೋನಿ ಪ್ರಸಾರ ಪಡೆಯುತ್ತದೆ. ಇದರ ಹಣ್ಣನ್ನು ಹಸಿವಿನ ಹಣ್ಣು, ಬರಗಾಲದ ತುರ್ತು ಹಣ್ಣೆನ್ನುವರು. ಇದಕ್ಕೆ ಬಲವಾದ ವಾಸನೆ ಕಹಿ ರುಚಿಯಿದ್ದರೂ ಉಪ್ಪಿನೊಂದಿಗೆ ಬೇಯಿಸಿ, ಬೀಜಗಳನ್ನು ಹುರಿದು ವಿವಿಧ ರೀತಿಯಲ್ಲಿ ಆಹಾರವಾಗಿ ವಿಶ್ವದೆಲ್ಲಡೆ ಬಳಸುವರು.
       ಇದರ ತೊಗಟೆಯಿಂದ ಕಂದು, ನೇರಳೆ ಹಾಗೂ ಬೇರಿನಿಂದ ಹಳದಿ ಬಣ್ಣ ತಯಾರಿಸಿ ಬಟ್ಟೆಗಳಿಗೆ ಬಣ್ಣ ಹಾಕುತ್ತಿದ್ದರೆಂದು ಐತಿಹಾಸಿಕವಾಗಿ ದಾಖಲಾಗಿದೆ. ಕಲಾಕೃತಿಗಳನ್ನು ರಚಿಸಲೂ ಈ ಬಣ್ಣಗಳನ್ನು ಬಳಸುತ್ತಿದ್ದರು. ಕಾಂಬೋಡಿಯದಲ್ಲಿ ನೋನಿಯ ಎಲೆಗಳು ರಾಷ್ಟ್ರೀಯ ಖಾದ್ಯವಾದ ಮೀನು ಅಮೋಕ್ ನ ಅತ್ಯಗತ್ಯ ಭಾಗವಾಗಿದೆ. ಮೊರಿಂಡಾ ಕುಲದ ಮೊದಲ ಪಳೆಯುಳಿಕೆಯ ದಾಖಲೆ ದಕ್ಷಿಣ ಚೀನಾದ ಹೈನಾನ್ ದ್ವೀಪದ ಚಾಂಗ್ ಚಾಂಗ್ ಬೇಸಿನ್ನಲ್ಲಿ ಈಯೋಸೀಸ್ ಕಾಲದ ಕಲ್ಲಿದ್ದಲಿನಲ್ಲಿ ಕಂಡುಬಂದಿದೆ ಎನ್ನಲಾಗಿದೆ.
     ಎಲ್ಲ ತರಹದ ಭೌಗೋಳಿಕ ವೈವಿಧ್ಯತೆಗಳಿಗೆ ಒಗ್ಗಿ ಬೆಳೆಯುವ ನಿಷ್ಪಾಪಿ ಸಸ್ಯ ನೋನಿಯು ಆಗ್ನೇಯ ಏಷ್ಯಾದಲ್ಲಿ ಸಾಂಪ್ರದಾಯಿಕ ಔಷಧಿಯಾಗಿತ್ತು... ಹಣ್ಣಿನ ತಿರುಳಿನ ರಸ ಪಾನೀಯವಾಗಿದೆ. ಎಲೆ, ಹಣ್ಣು, ತೊಗಟೆ, ಎಲೆಗಳೆಲ್ಲವೂ ಔಷಧಕ್ಕಾಗಿ ಇಂದು ವಿಶ್ವದಾದ್ಯಂತ ಬಳಕೆಯಲ್ಲಿದೆ. ಮಧುಮೇಹ, ಮಲಬದ್ಧತೆ, ಸುಟ್ಟಗಾಯ, ಮಲೇರಿಯ, ಊತ, ಅಸ್ತಮಾ, ಸಂಧಿವಾತ, ಹಲವು ರೀತಿಯ ಕ್ಯಾನ್ಸರ್ ಗಳಿಗೆ, ಕೀಲುನೋವು, ಚರ್ಮರೋಗ, ಚರ್ಮ ಸುಕ್ಕುಗಟ್ಟದಂತೆ ರಕ್ಷಿಸಲು, ರಕ್ತದೊತ್ತಡ ನಿಯಂತ್ರಣ ಇತ್ಯಾದಿಗಳಿಗೆ ನೋನಿ ಔಷಧಿಯೆಂದು, ಸೌಂದರ್ಯವರ್ಧಕವೆಂದೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಸ್ಟೋನ್ ಫಿಶ್, ಸ್ಪಿಂಗ್ ರೇ ಮೀನುಗಳಿಂದ ಗಾಯಗಳಾದರೆ ನೋನಿ ಮುಲಾಮು ಗುಣಪಡಿಸಬಲ್ಲದು. ಕೆಲವು ಮೂಲಗಳ ಪ್ರಕಾರ ನೋನಿಯ ಬಗ್ಗೆ ಸರಿಯಾದ ವೈಜ್ಞಾನಿಕ ಸಂಶೋಧನೆಗಳು ಇನ್ನೂ ನಡೆಯಬೇಕಿದೆ. ಇದೇ ವೇಳೆ ಯಕೃತ್ತಿನ ಕಾಯಿಲೆಗಳಿದ್ದಲ್ಲಿ , ಮೂತ್ರಪಿಂಡದ ಸಮಸ್ಯೆಗಳಿದ್ದಲ್ಲಿ ನೋನಿ ಬಳಕೆಯ ಬಗ್ಗೆ ಜಾಗೃತರಾಗಿರಬೇಕಾಗುತ್ತದೆ ಎಂಬ ಸೂಚನೆಗಳೂ ಇವೆ. ಸಸ್ಯ ಮೂಲವೇ ಆಗಿದ್ದರೂ ಕೆಲವು ವಿಚಾರಗಳಲ್ಲಿ ಅಡ್ಡ ಪರಿಣಮಗಳನ್ನು ಕಡೆಗಣುವಂತಿಲ್ಲ. ನೈಸರ್ಗಿಕ ಉತ್ಪನ್ನಗಳ ಬಳಕೆಯನ್ನು ನೇರವಾಗಿ ಮೆಡಿಕಲ್ ಗಳಿಂದ ತೆಗೆದುಕೊಂಡು ಸೇವಿಸುವ ಬದಲು ತಜ್ಞ ವೈದ್ಯರ ಶಿಫಾರಸುಗಳನ್ನು ಅನುಸರಿಸುವುದು ಹೆಚ್ಚು ಸೂಕ್ತವಲ್ಲವೇ?
       ಸರಿ ಮಕ್ಕಳೇ, ನೀವೂ ಹಿತ್ತಲಲ್ಲಿ ಒಂದು ನೋನಿ ಗಿಡ ನೆಟ್ಟು ಅದರ ಬೆಳವಣಿಗೆಯನ್ನು ಗಮನಿಸಿ. ನೆಟ್ಟು ಒಂದು ಒಂದೂವರೆ ವರ್ಷದೊಳಗೆ ಫಲನೀಡಬಲ್ಲದು. ಈ ಬಗ್ಗೆ ಪ್ರಯತ್ನಿಸುವಿರಾ? 
    ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
..................... ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************

Ads on article

Advertise in articles 1

advertising articles 2

Advertise under the article