ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 70
Wednesday, March 5, 2025
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 70
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಕಣ್ಣಿನಲ್ಲಿ ನೋಡುವ ಕ್ರಿಯೆ ಹೇಗೆ ಎಂದು ತಿಳಿದೆವು. ಇದು ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿಯಾಗಿ, ರಾಸಾಯನಿಕ ಶಕ್ತಿ ವಿದ್ಯುತ್ ಶಕ್ತಿಯಾಗಿ ಬದಲಾವಣೆಯಾಗುವ ಒಂದು ಸಂಕೀರ್ಣ ಕ್ರಿಯೆ. ಮತ್ತೆ ಆಲ್ಬಮ್‌ನಲ್ಲಿ ಫೋಟೋಗಳನ್ನು ಹುಡುಕಿ ತಾಳೆ ನೋಡಬೇಕು ಮತ್ತೆ ಗುರುತು ಹಿಡಿಯಬೇಕು. ಹೇಗೆ ಎನ್ನುತ್ತೀರಾ? ನಿಮ್ಮ ಮನೆಯ ಅಂಗಳದಲ್ಲಿ ಒಂದು ಪಾರಿವಾಳ ತನ್ನ ಕತ್ತು ಕೊಂಕಿಸುತ್ತಾ ಓಡಾಡುತ್ತಿದೆ ಎಂದಿಟ್ಟುಕೊಳ್ಳೋಣ. ನಿಮ್ಮ ಕಣ್ಣು ಇದನ್ನು ನೋಡಿ ಇದರ ಚಿತ್ರ ಮೂಡಿಸಿ ಮೆದುಳಿಗೆ ಸಂದೇಶ ಕಳುಹಿಸುತ್ತದೆ. ಈಗ ನಿಮ್ಮ ಮೆದುಳಿನ ದೃಷ್ಟಿ ತೊಗಟೆ (visual cortex) ಇದನ್ನು ಏನು ಎಂದು ತಿಳಿಯುವ ಪ್ರಯತ್ನ ಮಾಡುತ್ತದೆ. ತನ್ನ ಸಂಪುಟಗಳಲ್ಲಿ (album) ನಲ್ಲಿ ದಾಖಲಾಗಿರುವ ಎಲ್ಲಾ ವಸ್ತುಗಳೊಂದಿಗೆ ಹೋಲಿಸುತ್ತದೆ. ಅಂದರೆ ನಿಮ್ಮ ಕಂಪ್ಯೂಟರ್ ನಲ್ಲಿ search operation ನಡೆಸುತ್ತೀರಲ್ಲ ಹಾಗೆ. ಓಹ್ ಇದು ಕಲ್ಲು ಅಲ್ಲ ಚಲಿಸುತ್ತದೆ. ಅಂದರೆ ಇದು ಸಜೀವಿ ಎಂದು ಸಜೀವಿಗಳ ಆಲ್ಬಂ ತೆರೆಯುತ್ತದೆ. ಅಲ್ಲಿ ಇದಕ್ಕೆ ಹರಿದಾಡುವುದಿಲ್ಲ ಅಂದರೆ ಹಾವು ಹುಳಗಳ ಅಲ್ಬಮ್ ಪಕ್ಕಕ್ಕಿಟ್ಟು ಉಳಿದ ಆಲ್ಬಮ್ ಕೈಗೆತ್ತಿಕೊಳ್ಳುತ್ತದೆ. ಸರಿ ಇದಕ್ಕೆ ನಾಲ್ಕು ಕಾಲುಗಳಿಲ್ಲ ರೆಕ್ಕೆ ಇದೆ ಎಂದ ತಕ್ಷಣ ಪ್ರಾಣಿಗಳ ಆಲ್ಬಮ್ ಆಚೆಗಿಡುತ್ತದೆ. ಈಗ ಪಕ್ಷಿಗಳ ಆಲ್ಬಮ್. ಇದು ನವಿಲು ಅಲ್ಲ ಏಕೆಂದರೆ... ಕೋಳಿ ಅಲ್ಲ ಏಕೆಂದರೆ ...... ಗಿಡುಗ ಅಲ್ಲ ಏಕೆಂದರೆ ....... ಹೀಗೆ ಹುಡುಕಾಟ ಮುಂದುವರಿಯುತ್ತದೆ. ಆಗ ಈ ಚಿತ್ರ ಪಾರಿವಾಳದ ಚಿತ್ರಕ್ಕೆ ಸರಿಹೊಂದುತ್ತಿದೆ ಅದ್ದರಿಂದಿದು ಪಾರಿವಾಳ ಎಂದು ಪಾರಿವಾಳದ ಚಿತ್ರ ಮೂಡಿಸುತ್ತದೆ.
ಶ್ರೀಮತಿ ವಿಜಯ ಟೀಚರ್ ಪ್ರತಿ ವಾರ ಸಸ್ಯಗಳ ಪರಿಚಯವಾದ ನಿಷ್ಪಾಪಿ ಸಸ್ಯಗಳ ಮಾಲಿಕೆ ನೀವೆಲ್ಲರೂ ಓದುತ್ತಿದ್ದೀರಿ. ಅವರು ಒಮ್ಮೆ ಈ ಗಿಡಗಳನ್ನು ನಿಖರವಾಗಿ ಗುರುತಿಸುವುದು ಬಹಳ ಕಷ್ಟ ಎನ್ನುತ್ತಿದ್ದರು. ಅದಕ್ಕೆ ನಾನು ಗೂಗಲ್ ಲೆನ್ಸ್ ಬಳಸಿ ಎಂದು ಸಲಹೆ ನೀಡಿದ್ದೆ. ಅದಕ್ಕವರು ಹಾಗೆ ಆಗುವುದಿಲ್ಲ ಸರ್. ಗೂಗಲ್ ಒಂದೇ ರೀತಿಯ ರಚನೆಯ ಹತ್ತಾರು ಗಿಡಗಳನ್ನು ತೋರಿಸುತ್ತದೆ. ಅನೇಕ ಬಾರಿ ಅವುಗಳು ಹತ್ತಿರದ ಪ್ರಬೇಧಕ್ಕೂ ಸೇರಿರುವುದಿಲ್ಲ ಎನ್ನುತ್ತಾರೆ. ಕಂಪ್ಯೂಟರ್ ಮತ್ತು ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ಗೂಗಲ್ ಗೆ ಕೂಡಾ ಕಷ್ಟವಾಗಿರುವಾಗ ನಮ್ಮ ಮೆದುಳು ಇಷ್ಟೊಂದು ನಿಖರವಾಗಿ ಮಾಡುತ್ತದಲ್ಲ ಎಂದು ಅಚ್ಚರಿಪಡಬೇಕಲ್ಲವೇ? ಇನ್ನು ನಿಮ್ಮ ಶಾಲೆಯ ಮೋಹನ ಬಂದು ಎದುರು ನಿಂತಾಗ ನಿಮ್ಮ ಮೆದುಳು ಅದೆಷ್ಟು ಚಿತ್ರಗಳನ್ನು ತಾಳೆ ನೋಡಬೇಕು ಯೋಚಿಸಿ. ಅದೇ ಕಂಪ್ಯೂಟರ್ ಆಗಿದ್ದರೆ ಎಷ್ಟು ಹೊತ್ತಾಗಬಹುದು? ಅದೇ ನಿಮ್ಮ ಮೆದುಳು ಎಷ್ಟೊಂದು ವೇಗವಾಗಿ ಮತ್ತು ತಕ್ಷಣ ಮಾಡಿಬಿಡುತ್ತದೆಂದರೆ ನಿಮಗೆ ಕಣ್ಣೇ ನೋಡುತ್ತದೆ ಎಂಬ ಭ್ರಮೆ ಉಂಟಾಗಿದೆ ಅಷ್ಟೇ.
ಪುರಾಣದಲ್ಲಿ ಇಂದ್ರನನ್ನು ಸಹಸ್ರಾಕ್ಷ ಎಂದು ಸ್ತುತಿಸಲಾಗಿದೆ. ಅಂದರೆ ಆತನ ದೇಹವೆಲ್ಲಾ ಕಣ್ಣುಗಳೇ. ಆ ಕಣ್ಣುಗಳು ಹೇಗೆ ಬಂದವು ಎಂಬುದಕ್ಕೆ ಒಂದು ಬೇರೆಯದೇ ಕಥೆ ಇದೆ. ಪ್ರಾಣಿ ಲೋಕದಲ್ಲಿ ಕೂಡಾ ಸಹಸ್ರಾಕ್ಷರಿದ್ದಾರೆ. ನಿಮ್ಮ ಮನೆಯ ನೊಣವಿದೆಯಲ್ಲ (house fly) ಅದು ಪ್ರಾಣಿ ಲೋಕದ ಇಂದ್ರ. ನೊಣವೊಂದೇ ಅಲ್ಲ ಎಲ್ಲ ಕೀಟಗಳೂ ಇಂದ್ರರೇ. ಇದರ ಕಣ್ಣು ಎಂದರೆ ಕಣ್ಣು ಅಲ್ಲ. ಕಣ್ಣುಗಳ ಸಮೂಹ (compound eye). ಇದರಲ್ಲಿರುವ ಪ್ರತಿಯೊಂದು ಕಣ್ಣು ತನಗೆ ಕಂಡ ಭಾಗದ ಖಂಡ ಚಿತ್ರ ಮೂಡಿಸುತ್ತದೆ. ಅಂದರೆ ಒಂದೇ ಚಿತ್ರವನ್ನು ಹರಿದು ಬಿಸಾಡಿದ ಹಾಗೆ ಒಡೆದ ಕನ್ನಡಿಯಲ್ಲಿ ಪ್ರತಿಬಿಂಬ ಮೂಡಿದ ಹಾಗೆ. ಈಗ ನೊಣದ ಮೆದುಳು ಹರಿದು ಬಿದ್ದ ಎಲ್ಲ ಚೂರಗಳನ್ನೂ ಹೆಕ್ಕಿ ಅಂಟಿಸಿ ಹೊಲಿದು ಅಖಂಡ ಚಿತ್ರವನ್ನು ಸಿದ್ದಪಡಿಸಿತ್ತದೆ. ಇದೇ ಭಿನ್ನ ದೃಷ್ಟಿ (mosaic image).
ನಮಗೆಲ್ಲಾ ಎರಡು ಕಣ್ಣುಗಳು. ನಮ್ಮದು ಪೂರ್ಣ ದೃಷ್ಟಿ (whole image). ಕಾಗೆಗೂ ಎರಡು ಕಣ್ಣು ಆದರೆ ಕರೆಯುವುದು ಒಕ್ಕಣ್ಣ. ಯಾಕೆ ಹೀಗೆ? ಮುಂದಿನ ವಾರ.
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************