ಜೀವನ ಸಂಭ್ರಮ : ಸಂಚಿಕೆ - 180
Sunday, March 9, 2025
Edit
ಜೀವನ ಸಂಭ್ರಮ : ಸಂಚಿಕೆ - 180
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ನಾನು ಪ್ರಜಾವಾಣಿ ಪತ್ರಿಕೆ ಓದುತ್ತಿದ್ದಾಗ... ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಬರೆದ ಘಟನೆ ನನಗೆ ತುಂಬಾ ಹಿಡಿಸಿತು. ಅದನ್ನು ಆಧಾರವಾಗಿಟ್ಟುಕೊಂಡು ಈ ಲೇಖನ ಬರೆಯುತ್ತಿದ್ದೇನೆ.
ಒಂದು ಖಾಲಿ ಬಾಟಲ್ ಬೆಲೆ ಎಷ್ಟು? ಸುಮಾರು ಎರಡು ರೂಪಾಯಿ ಅಥವಾ ಮೂರು ರೂಪಾಯಿ ಇರಬಹುದು. ಅದೇ ಬಾಟಲಿಗೆ ನೀರು ಹಾಕಿದ್ರೆ, ಅದರ ಬೆಲೆ ಎಷ್ಟು?. ಸುಮಾರು 20ರಿಂದ 25 ರೂಪಾಯಿ ಆಗಬಹುದು. ಅದೇ ಬಾಟಲಿಗೆ ಹಾಲು ಹಾಕಿದರೆ ಅದರ ಬೆಲೆ ಎಷ್ಟಾಗುತ್ತದೆ?. ಸುಮಾರು 50ರಿಂದ 60 ರೂಪಾಯಿ ಆಗುವುದು. ಅದೇ ಬಾಟಲಿಗೆ ಅಡುಗೆ ಎಣ್ಣೆ ಹಾಕಿದ್ರೆ ಅದರ ಬೆಲೆ ಸುಮಾರು 200 ರೂಪಾಯಿ ಆಗುತ್ತದೆ, ಅದೇ ಬಾಟಲಿಗೆ ತುಪ್ಪ ಹಾಕಿದರೆ ಅದರ ಬೆಲೆ 600 ರಿಂದ ರೂ.700 ರೂಪಾಯಿ ಆಗಬಹುದು ಎಂದು ಇಟ್ಟುಕೊಳ್ಳೋಣ. ಈಗ ಹೇಳಿ ಬಾಟಲಿಗೆ ಕೊಳಕು ನೀರು ತುಂಬಿದೆ ಎಂದು ಭಾವಿಸಿ. ಆದರೆ ಬೆಲೆ ಎಷ್ಟು ?. ಬೆಲೆ ಇಲ್ಲವೇ ಇಲ್ಲ. ಈಗ ಹೇಳಿ ಬಾಟಲಿಗೆ ಯಾವಾಗ ಬೆಲೆ ಹೆಚ್ಚಾಯ್ತು ? ಬಾಟಲಿಯ ಬೆಲೆ ಕೇವಲ ಎರಡು ರೂಪಾಯಿ ಆದರೆ, ಅದರಲ್ಲಿ ತುಂಬಿರುವ ಪದಾರ್ಥದಿಂದ ಅದರ ಬೆಲೆ ಹೆಚ್ಚಾಗುತ್ತದೆ. ಕೊಳಕು ನೀರು ತುಂಬಿದರೆ, ಅದರ ಖಾಲಿ ಬಾಟಲಿನ ಬೆಲೆಯೂ ಇರುವುದಿಲ್ಲ. ಅದೇ ರೀತಿ ನಮ್ಮ ಜೀವನ.
ನಮ್ಮ ದೇಹ, ಮನಸ್ಸು ಒಂದು ಖಾಲಿ ಬಾಟಲಿ ಇದ್ದಹಾಗೆ. ಆ ಮನಸ್ಸಿನಲ್ಲಿ ಏನನ್ನು ತುಂಬುತ್ತೇವೆ? ಅದರಂತೆ ಆ ದೇಹದ ಬೆಲೆ ಹೆಚ್ಚಾಗುತ್ತದೆ, ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ತುಂಬಿರುವುದನ್ನು ಅವಲಂಬಿಸಿದೆ. ಆದರೆ ಈಗಿನ ಜಗತ್ತಿನಲ್ಲಿ ನಾವು ಕಾಣುತ್ತಿರುವುದನ್ನು ಗಮನಿಸೋಣ. ಒಬ್ಬ ಮನುಷ್ಯನ ಮನಸ್ಸು ಬಡವ ಇದೆ, ಆದರೆ ದೊಡ್ಡ ಮನೆಯಲ್ಲಿ ಇದ್ದಾನೆ. ನಾವು ಆತನಿಗೆ ದೊಡ್ಡ ಮನುಷ್ಯ ಎನ್ನುತ್ತೇವೆ. ನಿಜವಾಗಿ ದೊಡ್ಡದು ಮನೆಯೇ ವಿನಃ, ಮನುಷ್ಯನಲ್ಲ. ಒಬ್ಬನಲ್ಲಿ ಹಣ, ಆಭರಣ, ವಾಹನ ಹೆಚ್ಚಾಗಿದೆ. ಆದರೆ ಆತ ಯಾರೊಂದಿಗೂ ಬೆರೆಯುವುದಿಲ್ಲ. ಯಾರಿಗೂ ಸಹಾಯ ಮಾಡುವುದಿಲ್ಲ. ನಾವು ಆತನನ್ನು ಸಿರಿವಂತ, ದನಿಕ ಎನ್ನುತ್ತೇವೆ. ನೋಡಿ ಸರಿಯಾಗಿ ಗಮನಿಸಿ. ಶ್ರೀಮಂತವಾಗಿರುವುದು ಹಣ. ಶ್ರೀಮಂತವಾಗಿರುವುದು ಆಭರಣ. ವಾಹನ ಶ್ರೀಮಂತವಾಗಿದೆ. ಆತನ ಮನಸ್ಸು ಖಾಲಿ ಇದೆ ಹಾಗಾಗಿ ಆತ ಇದು ಹೇಗಿದೆ ಎಂದರೆ, ಖಾಲಿ ಬಾಟಲು ಶ್ರೀಮಂತ ಮನೆಯಲ್ಲಿ ಇದ್ದುಕೊಂಡು ನಾನು ಶ್ರೀಮಂತ ಅಂದ ಹಾಗೆ. ಖಾಲಿ ಬಾಟಲು ದೊಡ್ಡ ಕಾರಿನೊಳಗೆ ಇದ್ದುಕೊಂಡು ನಾನು ಶ್ರೀಮಂತ ಅಂದಹಾಗೆ. ಖಾಲಿ ಬಾಟಲಿನ ಮೇಲೆ ಎಂತಹ ಆಭರಣ ಹಾಕಿದರು ಬಾಟಲು ಖಾಲಿಯೆ. ಆದರೆ ಆತನ ಮನಸ್ಸಿನಲ್ಲಿ ತುಂಬಿರುವುದು ಅನುಮಾನ, ದ್ವೇಷ. ಸಹಾಯ ಮಾಡಬೇಕೆನ್ನುವ ಗುಣ ಇಲ್ಲ. ಈಗ ಹೇಳಿ ಆತ ಶ್ರೀಮಂತನೇ ?.ಇಲ್ಲ. ಆತ ಬಡವ.
ಷೇಕ್ಸ್ ಪಿಯರ್ ಗೆ ಒಂದು ಕೋಣೆ ಇತ್ತು. ಒಂದು ಟೇಬಲ್ ಬರೆಯಲು, ಕುಳಿತುಕೊಳ್ಳಲು ಒಂದು ಕುರ್ಚಿ, ಮಲಗಲು ಒಂದು ಮಂಚ, ಅಡುಗೆಗೆ ಬೇಕಾದಷ್ಟು ಉಪಕರಣಗಳು, ದವಸ, ಧಾನ್ಯ ಇತ್ತು. ಆತ ಹೊರಗಡೆ ಬಡವ. ಆದರೆ ಆತ ನಿಜವಾದ ಶ್ರೀಮಂತನಾಗಿದ್ದಾನೆ, ಏಕೆಂದರೆ ಆತನ ಮನಸ್ಸು ಒಳ್ಳೆಯ ವಿಚಾರಗಳಿಂದ ತುಂಬಿದ್ದು ಅದು ಸಾಹಿತ್ಯ ರೂಪದಲ್ಲಿ ಹೊರಹೊಮ್ಮಿದೆ. ಆತನ ಸಾಹಿತ್ಯ ಓದಿದ್ದರೆ ತಿಳಿಯುತ್ತದೆ. ಆತ ಎಷ್ಟು ಶ್ರೀಮಂತ ಎಂದು. ನಮ್ಮಲ್ಲಿ ಸರ್ವಜ್ಞ ಎನ್ನುವ ಸಂತ ಇದ್ದನು. ಆತನ ಮೇಲೆ ಬಟ್ಟೆ ಇಲ್ಲ. ಸೊಂಟಕ್ಕೆ ಕಟ್ಟಿದ ಕಚ್ಚೆ, ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಬಿಕ್ಷೆ ಪಾತ್ರೆ. ಆತ ಹೊರಗೆ ಬಡವನಾಗಿದ್ದ. ಆದರೆ ಆತನ ಮನಸ್ಸು ಎಷ್ಟು ಶ್ರೀಮಂತವಾಗಿತ್ತು ಎಂದರೆ ಆ ಮನಸ್ಸಿನ ಶ್ರೀಮಂತಿಕೆ ತ್ರಿಪದಿಗಳ ರೂಪದಲ್ಲಿ ಸಾಹಿತ್ಯ ಹೊರಹೊಮ್ಮಿತು. ಆದರೆ ಆತನ ತ್ರಿಪದಿ ಓದಿದರೆ ಗೊತ್ತಾಗುತ್ತದೆ ಆತ ಎಂಥ ಶ್ರೀಮಂತ ಎಂದು. ನಮ್ಮಲ್ಲಿ ಮಹಾನ್ ಗ್ರಂಥ ವೇದ, ಉಪನಿಷತ್ತು, ವಚನ ಮತ್ತು ಅಭಂಗ ಇವುಗಳು ಮನುಷ್ಯನನ್ನು ಶ್ರೀಮಂತ ಮಾಡುವ ಗ್ರಂಥಗಳು. ಇವುಗಳನ್ನು ಬರೆದವರು ಕಾಡಿನ ಮಧ್ಯೆ ಗುಡಿಸಲಿನಲ್ಲಿ ವಾಸವಾಗಿದ್ದರು. ಸರಳ ಜೀವನ ಸಾಗಿಸುತ್ತಿದ್ದರು ಋಷಿಗಳು. ಬಡತನದಲ್ಲಿ ವಾಸವಿದ್ದ ಶರಣರು. ಇವರು ಹೊರಗೆ ಬಡವರು, ಒಳಗೆ ಶ್ರೀಮಂತರು. ಶರಣರೇ ಹೇಳಿದ್ದು "ಮನೆ ನೋಡ ಬಡವರು, ಮನನೋಡ ಬಲ್ಲಿದರು". ಒಳಗೆ ಶ್ರೀಮಂತಿಕೆ ಇದ್ದುದರಿಂದ ಅವರ ಮುಖದಲ್ಲಿ ಸದಾ ಪ್ರಸನ್ನತೆ, ಪ್ರೀತಿ, ಸಂತೋಷ, ಶಾಂತಿ ಮತ್ತು ಸಮಾಧಾನದಂತಹ ಶ್ರೇಷ್ಠ ಸಂಪತ್ತು ತುಂಬಿರುತ್ತಿತ್ತು. ಏಕೆಂದರೆ ಅವರಿಗೆ ಗೊತ್ತಿತ್ತು ಹೊರಗಿನ ಸಂಪತ್ತು ಕಾಯಂ ಆಗಿ ಇರೋದಿಲ್ಲ. ಇದ್ದರೂ ಅದೇ ರೀತಿ ಇರುವುದಿಲ್ಲ ಬದಲಾಗುತ್ತದೆ. ಬದಲಾಗುತ್ತ ಬದಲಾಗುತ್ತ ನಾಶವಾಗುತ್ತದೆ ಎಂದು. ಕೆಲವರು ಹೇಳುತ್ತಾರೆ ದೇವರು ನಮಗೆ ಮೋಸ ಮಾಡಿದ. ಅವರಿಗೆ ದೊಡ್ಡ ಮನೆ, ಹಣ, ಒಡವೆ ಕೊಟ್ಟಿದ್ದಾನೆ ಎಂದು. ದೇವರು ಯಾರಿಗೂ ಮೋಸ ಮಾಡಿಲ್ಲ. ಎಲ್ಲರಿಗೂ ನೀಡಿರುವುದು ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಒಂದು ಬಾಯಿ, ಮನಸ್ಸು, ಕಾರ್ಯಕ್ಷಮ ಹೊಂದಿರುವ ಎರಡು ಕಾಲು ಎರಡು ಕೈ ಮತ್ತು ದೇಹ. ಇದರಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. ಹೊರಗೆ ಅದ್ಭುತ ಸೌಂದರ್ಯವನ್ನು ನಿಸರ್ಗದಲ್ಲಿ ಅಳವಡಿಸಿದ್ದಾನೆ. ಬಗೆಬಗೆ ಆಕಾರ, ಬಣ್ಣ, ಆಕೃತಿ ನೀಡಿ, ಬಗೆ ಬಗೆಯ ರಸಭರಿತ ಫಲ ನೀಡಿದನು. ಬಗೆ ಬಗೆಯ ವಾಸನೆ ತುಂಬಿದ. ವೈವಿಧ್ಯಮಯ ಶಬ್ದ ನಿಸರ್ಗದಲ್ಲಿ ಅಳವಡಿಸಿದ. ಕೊನೆಗೆ ಹೇಳಿದ ನಿನಗೆ ಅಳವಡಿಸಿದ ಇಂದ್ರಿಯ ಮತ್ತು ಮನಸ್ಸು, ದೇಹ ಬಳಸಿಕೊಂಡು ಮನಸ್ಸಿನಲ್ಲಿ ತುಂಬಿಕೋ ಎಂದು. ಮನಸ್ಸಿನಲ್ಲಿ ತುಂಬಿಕೊಳ್ಳಲು ವಸ್ತು ನಮ್ಮವೇ ಆಗಬೇಕೆಂದಿಲ್ಲ. ನಮ್ಮ ಹೆಸರಲ್ಲೇ ಇರಬೇಕೆಂದಿಲ್ಲ. ನಾವು ಮಾಲೀಕರೇ ಆಗಬೇಕೆಂದಿಲ್ಲ. ಆದರೆ ನಾವು ಹೊರಗಡೆ ಸಂಗ್ರಹಿಸಲು ಪ್ರಯತ್ನಿಸಿದವೆ ವಿನಹ, ಮನಸ್ಸಿನಲ್ಲಿ ತುಂಬಿಕೊಳ್ಳಲು ಅಲ್ಲ. ನಾವು ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸುತ್ತೇವೆ. ಅವರು ವಸ್ತುವಿನ ಸೌಂದರ್ಯವನ್ನು ಮನಸ್ಸಿನಲ್ಲಿ ಸಂಗ್ರಹಿಸುತ್ತಾರೆ. ನಿಸರ್ಗದಲ್ಲಿ ಒಳ್ಳೆಯದು, ಕೆಟ್ಟದ್ದು ಎಲ್ಲ ಇದೆ. ನಮಗೆ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಒಳ್ಳೆಯದು ಆಯ್ದುಕೊಂಡರೆ ಒಳ್ಳೆಯದು ಆಗುತ್ತದೆ. ಕೆಟ್ಟದ್ದನ್ನು ಆಯ್ದುಕೊಂಡರೆ ಕೆಟ್ಟದ್ದು ಆಗುತ್ತದೆ. ಮನಸ್ಸಿನಲ್ಲಿ ತುಂಬಾ ಬೇಕಾದರೆ ನಾವು ಇಂದ್ರಿಯಗಳನ್ನೇ ಬಳಸಬೇಕಲ್ಲವೇ?. ಮನಸ್ಸಿನಲ್ಲಿ ತುಂಬಿದ ಸಂಪತ್ತು ಎಂದೂ ನಾಶವಾಗುವುದಿಲ್ಲ. ಅದು ಹೇಗೆ ತುಂಬಿದೆಯೋ ?. ಹಾಗೆ ಇರುತ್ತದೆ. ಅದೇ ತಾಜಾತನ ಇರುತ್ತದೆ ಅಂತ ತಿಳಿದಿದ್ದರಿಂದ, ಅವರ ಜೀವನ ಶ್ರೀಮಂತವಾಗಿತ್ತು, ಸಮೃದ್ಧವಾಗಿತ್ತು.
ಮಕ್ಕಳೇ ನಾವು ಶ್ರೀಮಂತರಾಗಿ ಬದುಕಬೇಕೆ ವಿನಹ ಬಡವರಾಗಿ ಅಲ್ಲ. ಹೊರಗಡೆ ಶ್ರೀಮಂತಿಕೆ ಇರುತ್ತೋ ಬಿಡುತ್ತೋ. ಆದರೆ ಮನಸ್ಸು ಶ್ರೀಮಂತವಾಗಿರಬೇಕು. ಅದೇ ನಮಗೆ ಶಾಂತಿ, ಸಮಾಧಾನ, ನೆಮ್ಮದಿ, ಸಂತೋಷ ಮತ್ತು ಪ್ರೀತಿ ಕೊಡುತ್ತದೆ. ಶ್ರೇಷ್ಠ ಸಂಪತ್ತು ಯಾವುದೆಂದರೆ, ಮನಸ್ಸಿನಲ್ಲಿ ತುಂಬಿರುವುದು. ಯಾವುದು ಸಂತೋಷ, ಸಮಾಧಾನ, ಶಾಂತಿ, ನೆಮ್ಮದಿ ಕೊಡುತ್ತೋ ಅದನ್ನು ತುಂಬಿಕೊಂಡಾಗ ಮಾತ್ರ ಸಾಧ್ಯ. ಅದನ್ನು ಬಿಟ್ಟು ದ್ವೇಷ, ಕೋಪ, ಸಂಶಯ ಕಾಮ ತುಂಬಿಕೊಂಡರೆ, ಅದರಿಂದ ಎಂದೂ ಸಂತೋಷವಾಗುವುದಿಲ್ಲ. ಇದು ಸುಂದರ ಇರುವುದರಲ್ಲಿ ದೋಷ, ಕೊರತೆ ಹುಡುಕುತ್ತದೆ. ಹಾಗಾಗಿ ನೆಮ್ಮದಿ, ಶಾಂತಿ, ಸಮಾಧಾನ ದೊರಕುವುದಿಲ್ಲ. ಅಂತಹ ಮನಸ್ಸು ಬದುಕು ದರಿದ್ರ ಬದುಕು. ಮಕ್ಕಳೇ ನಾವು ಶ್ರೀಮಂತ ಬದುಕನ್ನು ಬಾಳೋಣ ಅಲ್ಲವೇ?.
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************