ಜೀವನ ಸಂಭ್ರಮ : ಸಂಚಿಕೆ - 179
Sunday, March 2, 2025
Edit
ಜೀವನ ಸಂಭ್ರಮ : ಸಂಚಿಕೆ - 179
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿಂದ ಬೆಂಗಳೂರಿಗೆ ಹೋಗಿ, ಶಿಕ್ಷಕರ ಸದನದಲ್ಲಿ ವಿಶ್ರಾಂತಿ ಪಡೆದವು. ಬೆಳಿಗ್ಗೆ ಸುಮಾರು 6:30ಕ್ಕೆ ವಾಯು ವಿಹಾರಕ್ಕೆ ಚಾಲಕನೊಂದಿಗೆ ಹೊರಟೆನು. ವಾಹನ ಚಾಲಕ ಸ್ವಲ್ಪ ದೂರ ಬಂದು ಅಲ್ಲೇ ನಿಂತನು. ನಾನು ಹಾಗೆ ಮುಂದೆ ಹೊರಟೆ, ಸುಮಾರು ಒಂದೂವರೆ ಕಿಲೋಮೀಟರ್ ಹೋಗಿ, ಅಲ್ಲಿಂದ ವಾಪಸ್ ನಡೆದು ಬರುತ್ತಿದ್ದೆನು. ಆಗ ಒಂದು ಘಟನೆ ನಡೆದಿತ್ತು.
ಪೂಟ್ ಪಾತ್ ನಲ್ಲಿ ಒಬ್ಬ ಮುದುಕ ನಡೆದು ಬರುತ್ತಿದ್ದನು. ನಡೆದು ಬರುತ್ತಿದ್ದವನೇ ತಕ್ಷಣ ಬಿದ್ದನು. ಬಹುಶ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗಿ, ತಲೆ ತಿರುಗಿ ಬಿದ್ದಿದ್ದನು ಅಂತ ಕಾಣಿಸುತ್ತೆ. ಆಗ ಮೂರು ಜನ ಹೆಣ್ಣು ಮಕ್ಕಳು, ಬಹುಷಃ ವಿದ್ಯಾರ್ಥಿನಿಯರು ಅಥವಾ ಉದ್ಯೋಗಸ್ಥರು ಗೊತ್ತಿಲ್ಲ. ಕುತ್ತಿಗೆಯಲ್ಲಿ ಗುರುತಿನ ಪತ್ರ ಹಾಕಿಕೊಂಡಿದ್ದರು. ಅದನ್ನು ಗಮನಿಸಲು ಆಗಲಿಲ್ಲ. ಅವರು ಮಾಡುತ್ತಿದ್ದ ಕೆಲಸ ಅತ್ಯದ್ಭುತ. ಎಲ್ಲಾ ಮೂರು ಹೆಣ್ಣು ಮಕ್ಕಳು ಸೇರಿ, ಆತನನ್ನು ಎತ್ತಿ ಕುಳ್ಳಿಸಿದರು. ಒಬ್ಬಳು ಹೆಣ್ಣುಮಗಳು ಪಕ್ಕದ ಅಂಗಡಿಯಿಂದ ಬಿಸ್ಲೇರಿ ನೀರು ತಂದಳು. ಮತ್ತೊಬ್ಬ ಹೆಣ್ಣು ಮಗಳು ಬಿಸ್ಕೆಟ್ ಪೊಟ್ಟಣ ತಂದಳು. ಮತ್ತೊಬ್ಬಳು ಆತನನ್ನು ಕುಳ್ಳಿರಿಸಿ ಬೀಳದಂತೆ ಹಿಡಿದುಕೊಂಡಿದ್ದಳು. ಈ ಪ್ರಸಂಗವನ್ನು ಸುಮಾರು ಅಂತರದಿಂದ ನೋಡುತ್ತಾ ಸನಿಹಕ್ಕೆ ಬಂದೆನು. ಒಬ್ಬಳು ನೀರು ಕುಡಿಸುತ್ತಿದ್ದಳು. ಮತ್ತೊಬ್ಬಳು ಬಿಸ್ಕೆಟ್ ತಿನಿಸುತ್ತಿದ್ದಳು. ಆತನಿಗೆ ಆಗುತ್ತಿರಲಿಲ್ಲ. ಮೂರು ಜನ ಹೆಣ್ಣು ಮಕ್ಕಳು ಆತನನ್ನು ಎತ್ತಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದರು. ಅವರಲ್ಲಿ ಅಷ್ಟು ಶಕ್ತಿ ಸಾಕಾಗುತ್ತಿರಲಿಲ್ಲ. ಅಷ್ಟರಲ್ಲಿ ನಾನು ಅವರ ಹತ್ತಿರಕ್ಕೆ ಬಂದೆನು. ಇದನ್ನು ನೋಡಿ ನಾನು ಸಹಾಯ ಮಾಡಬೇಕೆಂದು ಅನಿಸಿತು. ಅವರ ಜೊತೆ ಸೇರಿ ಎತ್ತಿ ನಿಲ್ಲಿಸಲು ಸಹಾಯ ಮಾಡುತ್ತಿದ್ದೆನು. ಆತ ನಿಲ್ಲಲು ತ್ರಾಣ ಇರಲಿಲ್ಲ. ಕೈ, ಮಂಡಿ ಪರಚಿತ್ತು. ನೋವಿನಿಂದ ನರಳಲು ಶುರು ಮಾಡಿದನು. ಎಲ್ಲಾ ಸೇರಿ ಪಕ್ಕದಲ್ಲಿ ಮರದ ಕೆಳಗೆ ಕುಳ್ಳಿರಿಸಿದೆವು. ನಾನು ಹೋಗಿ ಚಾಕಲೇಟ್ ತಂದುಕೊಟ್ಟೆ. ಆ ಹೆಣ್ಣು ಮಕ್ಕಳು ತಿನಿಸುತ್ತಿದ್ದರು. ಆಗ ಆತ ಹೇಳಿದ, ಸ್ವಲ್ಪ ವಿಶ್ರಾಂತಿ ಪಡೆದು ಹೋಗುತ್ತೇನೆ ಎಂದನು. ಈ ಘಟನೆಯನ್ನು ಸುಮಾರು ಜನ ನಿಂತು ನೋಡುತ್ತಿದ್ದರು. ಕೆಲವರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡುತ್ತಿದ್ದರು. ಆದರೆ ಸಹಾಯ ಮಾಡುವ ಮನಸ್ಸು ಇರಲಿಲ್ಲ. ಅವರಲ್ಲಿ ಕೆಲವರು ವಯಸ್ಸಾದವರು ಇದ್ದರು. ಅವರು ಸಹ ದೂರ ನಿಂತು ನೋಡುತ್ತಿದ್ದರೆ ವಿನಃ ಸಹಾಯ ಮಾಡಬೇಕೆನಿಸಲಿಲ್ಲ. ಆ ಮೂರು ಹೆಣ್ಣು ಮಕ್ಕಳ ಕೆಲಸ ನನಗೆ ಸಂತೋಷ ಕೊಟ್ಟಿತ್ತು. ಆಗ ನಾನು ಆ ಮೂರು ಹೆಣ್ಣುಮಕ್ಕಳ ಕುರಿತು ಹೇಳಿದೆ. "ನೀವು ಮೂವರು ಒಳ್ಳೆಯ ಕೆಲಸ ಮಾಡಿದ್ದೀರಿ, ದೇವರು ಖಂಡಿತ ನಿಮಗೆ ಒಳ್ಳೆಯದು ಮಾಡುತ್ತಾನೆ. ನಿಮ್ಮ ಹೃದಯ ತಾಯಿ ಹೃದಯದಂತಿದೆ" ಅಂದೆ. ಅದಕ್ಕೆ ಅವರು ನಕ್ಕು ಥ್ಯಾಂಕ್ಸ್ ಹೇಳಿದರು.
ಅಷ್ಟರಲ್ಲಿ ಬಸ್ಸು ಬಂದಿತು, ಹೊರಟು ಹೋದರು. ಆಗ ನನ್ನ ಮನಸ್ಸಿನಲ್ಲಿ ಕಾಡಿದ ಅಂಶ ಏನೆಂದರೆ, ಜಗತ್ತು ಕೆಟ್ಟಿದೆ ಎನ್ನುತ್ತೇವೆ. ಜಗತ್ತು ಕೆಟ್ಟಿಲ್ಲ. ಎಲ್ಲೋ ನಾಲ್ಕು ಮಂದಿ ಕೆಟ್ಟ ಮಾತ್ರಕ್ಕೆ ಜಗತ್ತು ಕೆಡುವುದಿಲ್ಲ. ಕೆಟ್ಟಿರುವುದು, ಕೆಡಿಸಿರುವುದು ಮನುಷ್ಯನೇ ವಿನಹ ಯಾವುದೇ ಪ್ರಾಣಿ, ಪಕ್ಷಿ ಮತ್ತು ವಸ್ತು ಕೆಟ್ಟಿಲ್ಲ. ಪ್ರೀತಿ ದೇವರು ಅನ್ನುತ್ತೇವೆ. ಯಾರ ಹೃದಯ ಮಧುರವಾಗಿರುತ್ತದೆಯೋ, ಅವರು ಕಷ್ಟ ಕಾಲದಲ್ಲಿ ಸಹಾಯ ಮಾಡುತ್ತಾರೆ. ಹೃದಯ ಮಧುರ ಅಂದರೆ ಪ್ರೇಮದಿಂದ ಕೂಡಿದ ಮನಸು. ಚಿಕ್ಕವನಿದ್ದಾಗ ನನ್ನ ತಂದೆ ಹೇಳುತ್ತಿದ್ದರು. ಕಷ್ಟಕಾಲದಲ್ಲಿ ದೇವರು ಕಾಪಾಡುತ್ತಾನೆ ಅಂತ. ಆ ದೇವರು ಆ ಹೆಣ್ಣು ಮಕ್ಕಳ ಹೃದಯದಲ್ಲಿ ಪ್ರೇಮ ತುಂಬಿದ್ದನು. ಆ ಪ್ರೇಮ ಆತನಿಗೆ ಸಹಾಯ ಮಾಡುವಂತೆ ಮಾಡಿತು. ಅವರಲ್ಲಿ ಸಹಾಯ ಮಾಡಿದೆವು ಎನ್ನುವ ಅಹಂಕಾರ ಇರಲಿಲ್ಲ. ಆದರೆ ಸಹಾಯ ಮಾಡಿದ ಸಮಾಧಾನ ಇತ್ತು. ಪ್ರೇಮ, ಶಾಂತಿ, ಸಮಾಧಾನವೇ ದೇವರು. ದೇವರನ್ನು ಸತ್ಯಂ, ಶಿವಂ, ಸುಂದರಂ ಎನ್ನುತ್ತೇವೆ. ದೇವರು ಸೌಂದರ್ಯ ರೂಪ, ಮಧುರ ರೂಪ, ಪ್ರೇಮ ರೂಪ ಮತ್ತು ಶಾಂತ ರೂಪ ಎನ್ನುತ್ತೇವೆ. ಆ ಹೆಣ್ಣು ಮಕ್ಕಳಲ್ಲಿ ಪ್ರೇಮ ಇತ್ತು. ಆ ಪ್ರೇಮ ಅವರು ಕೈಯಿಂದ ಸಹಾಯ ಮಾಡಿಸಿತು. ಅದು ಅವರಲ್ಲಿ ಸಮಾಧಾನ ಉಂಟು ಮಾಡಿತು. ಆ ಸಮಾಧಾನ ಶಾಂತಿಗೆ ಕಾರಣವಾಗಿತ್ತು. ಆದ್ದರಿಂದ ಮಕ್ಕಳೇ ನಿಮ್ಮ ಮನಸ್ಸಿನಲ್ಲಿ ಪ್ರೇಮ ಸೌಂದರ್ಯ ತುಂಬಿಕೊಳ್ಳಿ. ಆಗ ಅಸಹಾಯಕರಿಗೆ ಸಹಾಯ ಮಾಡುತ್ತೀರಲ್ಲ ಆಗ ದೇವರೇ ನೀವಾಗುತ್ತೀರಿ. ಆ ದೇವರೇ ನಿಮ್ಮ ಮೂಲಕ ಅವರಿಗೆ ಸಹಾಯ ಮಾಡಿದಂತಾಗುತ್ತದೆ. ಆಗ ದೇವರ ಸ್ಥಾನದಲ್ಲಿ ನೀವು ಇರುತ್ತೀರಿ.
ಮಧುರ ಭಾವವೇ ದೇವರು. ಶಾಂತಿ, ಸಮಾಧಾನ, ಸಂತೋಷವೇ ದೇವರು. ಪ್ರೇಮದಿಂದ ಕಷ್ಟದಲ್ಲಿರುವವರಿಗೆ ನೆರವು ನೀಡಿದಾಗ, ಶಾಂತಿ, ಸಮಾಧಾನ, ಮತ್ತು ಸಂತೋಷ ದೊರೆಯುತ್ತದೆ ಅಂದಾಗ ನಾವ್ಯಾಕೆ ಮನಸು ಮಧುರ ಮಾಡಬಾರದು?. ಅಲ್ಲವೇ ಮಕ್ಕಳೆ...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************