-->
ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 04

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 04

ಎಸ್ ಎಸ್ ಎಲ್ ಸಿ ಪರೀಕ್ಷಾ ಸಿದ್ಧತೆ : ವಿಶೇಷ ಲೇಖನ ಸಂಚಿಕೆ - 04
ಲೇಖನ : ವಿದ್ಯಾರ್ಥಿಗೊಂದು ಪತ್ರ
ಲೇಖಕಿ : ಶ್ರೀಮತಿ ಗೀತಾ ಶೆಟ್ಟಿ, (ಕೆ. ಇ.ಎಸ್)
ನಿವೃತ್ತ ಅಧಿಕಾರಿ 
(ಶಿಕ್ಷಣ ಇಲಾಖೆ)
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
               
 
ಪ್ರಿಯ ವಿದ್ಯಾರ್ಥಿಗೆ ನನ್ನದೊಂದು ಕಿವಿ ಮಾತು.. ಕಂದಾ ಹೇಗಿದ್ದೀಯಾ? ಚೆನ್ನಾಗಿದ್ದೀಯಾ ಎಂದೇ ಭಾವಿಸುವೆ. ನಿನ್ನೊಡನೆ ಈ ಪತ್ರದ ಮೂಲಕ ಒಂದೆರೆಡು ಮಾತು.. ಕೇಳಲು ತಯಾರಿದ್ದೀಯಾ..??

ಏಪ್ರಿಲ್ 21ರಿಂದ ನಿನ್ನ ಹತ್ತನೇ ತರಗತಿಯ ಪರೀಕ್ಷೆ ಪ್ರಾರಂಭ ಎಂದು ತಿಳಿಯಿತು. ನೀನು ಅದರ ತಯಾರಿಯಲ್ಲಿ ತೊಡಗಿರುವುದು ಗೊತ್ತಾಗ್ತಾ ಇದೆ. ಹೇಗಿದೆ ತಯಾರಿ?? ಕೆಲವೇ ದಿನಗಳಲ್ಲಿ ನೀನು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. 9 ವರುಷಗಳ ಕಾಲ ನೀನು ಪರೀಕ್ಷೆ ಬರೆದು ಯಶಸ್ವಿಯಾಗಿ ಈಗ 10ನೇ ತರಗತಿ ಪರೀಕ್ಷೆ ಬರೆಯುತ್ತಿರುವೆ. ಇದೇನೂ ಹೊಸತಲ್ಲ ಅಲ್ವಾ ಕಂದಾ? ಕೆಲವೇ ದಿನಗಳು ಬಾಕಿ ಇರುವುದರಿಂದ ಈಗಿನ ನಿನ್ನ ಒಳಗೊಳ್ಳುವಿಕೆ ಬಹಳ ಪ್ರಮುಖ ಎಂಬುದು ನಿನಗೆ ನೆನಪಿರಲಿ. ನೆನಪಿದೆ ಅದಕ್ಕಾಗಿಯೇ ನಿನ್ನ ತಯಾರಿ ಉತ್ತಮವಾಗಿ ಸಾಗುತ್ತಿದೆ ಎಂದು ನನಗೆ ನಿನ್ನ ಮೇಲೆ ಭರವಸೆ ಇದೆ.

ಕಂದಾ ಏಕೆ ಬೇಸರದಲ್ಲಿದ್ದೀಯಾ...?? ಪೂರ್ವ ಭಾವಿ ಪರೀಕ್ಷೆಯಲ್ಲಿ ಬರೆದದ್ದು ತೃಪ್ತಿಕರವಾಗಿ ಇಲ್ಲದೇ ಇರಬಹುದು, ಅದಕ್ಕಾಗಿ ಬೇಸರಿಸದೆ, ಇನ್ನೂ ಮುಂದೆ ನಾನೇನು ಮಾಡಬಹುದು ಎಂದು ಯೋಚಿಸು, ಅದರಂತೆ ಮುಂದುವರೆ.. ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದಿರಬಹುದು ಅಥವಾ ಅಗತ್ಯ ಇರುವಷ್ಟು ಸಮಯ ಸಾಲದೇ ಇರಬಹುದು, ಅದಕ್ಕಾಗಿ ಈಗ ಯೋಚಿಸುವ ಅಗತ್ಯ ಇಲ್ಲ. ಪರೀಕ್ಷೆ ಕುರಿತಾಗಿ ಭಯವೇ..? ಇಲ್ಲ.. ಬೇಡ ಕಂದಾ, ಭಯವೇಕೆ?? ಈ ಭಯ ನಿನ್ನಲ್ಲಿರುವ ಆತ್ಮವಿಶ್ವಾಸವನ್ನು 
ಕುಂಠಿತಗೊಳಿಸಬಹುದು ಮತ್ತು
ನಿನ್ನಲ್ಲಿರುವ ಸಾಮರ್ಥ್ಯವನ್ನು ನೀ ಅರಿಯದೇ ಹೋಗಬಹುದು... ನೆನಪಿಡು. ಪರೀಕ್ಷಾ ಭಯದಿಂದ ನೀ ಹೊರಗೆ ಬಾ.. ಇಲ್ಲದಿದ್ದಲ್ಲಿ ನೀನು ಒಂದು ವರುಷದಿಂದ ಕಲಿತ ಎಲ್ಲಾ ವಿಷಯಗಳೂ ಮರೆತು ಹೋಗಬಹುದು, ಗೊಂದಲ ಉಂಟಾಗಬಹುದು..

ಪರೀಕ್ಷೆ ನಿನ್ನ ಗೆಳೆಯನ ಹಾಗೆ ವರುಷಕ್ಕೊಮ್ಮೆ ಬರುವವ. ಪ್ರೀತಿಯಿಂದ ಸ್ವಾಗತಿಸಿ, ನಗು ನಗುತ್ತಾ ಮುಂದುವರೆದಲ್ಲಿ ನೀನು ಯಶಸ್ವಿಯಾಗಿ ಮುಂದಿನ ದಿನಗಳಲ್ಲಿ ಹೊಸತನ್ನು ನಿನ್ನದಾಗಿಸಿಕೊಳ್ಳಬಹುದು. ಅದನ್ನು ಬಿಟ್ಟು ನಿನ್ನ ಗೆಳೆಯನ ಅಂದರೆ ಪರೀಕ್ಷೆ ಬಗ್ಗೆ ಭಯ ಪಟ್ಟಲ್ಲಿ ನಿನ್ನ ಪ್ರಯತ್ನವೆಲ್ಲಾ ನೀರಿನಲ್ಲಿ ಹೋಮ ಮಾಡಿದಂತೆಯೇ ಸರಿ. ಹಾಗಾದರೆ ನೀನು ಹೇಗಿರಬೇಕು?? ಯಾವುದೇ ಭಯ ಮತ್ತು ಆತಂಕವಿಲ್ಲದೆ ಉಳಿದಿರುವ ದಿನಗಳನ್ನು 
ಸದುಪಯೋಗ ಗೊಳಿಸಿಕೊಂಡಲ್ಲಿ ನಿನ್ನ ಯಶಸ್ಸು ಕಟ್ಟಿಟ್ಟ ಬುತ್ತಿ, ಇದರಲ್ಲಿ ಯಾವುದೇ ಸಂಶಯವಿಲ್ಲ. ಕಂದಾ.. ಓದಿದ್ದನ್ನು ಪುನರ್ ಮನನ ಮಾಡಿಕೊಳ್ಳು, ಅರ್ಥವೇ ಆಗದ ಅಂಶ ಇದ್ದಲ್ಲಿ ಈಗ ಅದನ್ನು ಬಿಟ್ಟು ಅರ್ಥವಾಗುವ ಅಂಶಗಳನ್ನು ಮನನ ಮಾಡು, ಆಗ ನಿನಗೆ ಪರೀಕ್ಷೆ ದಿನ ನೆನಪಿಟ್ಟು ಬರೆಯಲು ಸಾಧ್ಯ.

ಪ್ರತಿಯೊಂದು ಮಗುವೂ ಈ ಸೃಷ್ಟಿಯ ವಿಶೇಷವೇ. ಪ್ರತಿಯೊಬ್ಬರಿಗೂ ಅವರದೇ ಆದ ರೀತಿಯಲ್ಲಿ ವಿಶೇಷತೆ ಇರುತ್ತದೆ. ಅದನ್ನು ನಾವು ತಿಳಿದುಕೊಳ್ಳುವುದು ಅಗತ್ಯ. ಕೇವಲ ಅಂಕಗಳು ನಿಮ್ಮ ಸಾಮರ್ಥ್ಯವನ್ನು ಅಳೆಯಲು ಸಾಧ್ಯವಿಲ್ಲ, ಆದರೆ ಈ ಅಂಕಗಳು ಇಲ್ಲದೆ ಮುಂದಿನ ನಿನ್ನ ವಿದ್ಯಾರ್ಥಿ ಪಯಣವೂ ಅಸಾಧ್ಯ. ಆದ್ದರಿಂದ ಪರೀಕ್ಷೆಯನ್ನು ಸಮಾಧಾನ ಚಿತ್ತದಿಂದ ಎದುರಿಸುವ ಸಾಮರ್ಥ್ಯ ನಿನ್ನದಾಗಲಿ. ಆಗ ಯಶಸ್ಸೂ ನಿನ್ನನ್ನು ಅರಸಿ ಬರುವುದು. ಅದಕ್ಕಾಗಿ ನಿನ್ನ ತಯಾರಿ ಹೇಗಿರಬೇಕು, ಎಷ್ಟು ಅಂಕಗಳನ್ನು ನಾನು ಪಡೆದು ಕೊಳ್ಳಬಹುದು, ಇದೆಲ್ಲ ನಿರ್ಧರಿಸುವ ವ್ಯಕ್ತಿ ನೀನೇ.. ಅದನ್ನು ನಿರ್ಧರಿಸು,
ಉತ್ತಮವಾದದ್ದನ್ನು ಪಡೆಯಲು ಪ್ರಯತ್ನಿಸು.. ನೀನು ಈ ಸಮಯದಲ್ಲಿ ಗೊಂದಲಕ್ಕೆ ಒಳಗಾಗದೆ, ಆತಂಕವನ್ನು ಮೆಟ್ಟಿ ನಿಲ್ಲಬೇಕು, ಪರೀಕ್ಷೆ ಬರೆಯಲು ಭಯ ಯಾಕೆ?? ಸಮಯ ಪ್ರಜ್ಞೆ ಮತ್ತು ಆತ್ಮವಿಶ್ವಾಸ ನಿನ್ನ ಜೊತೆಗಾರರಾಗಬೇಕು. ಇದು ನನಗೆ ಸಾಧ್ಯ ಎಂದು ನೀನು ಆಲೋಚಿಸುವ ಪರಿಯೇ ನಿನ್ನನ್ನು ಭಯ ಮುಕ್ತಗೊಳಿಸಿ ಪರೀಕ್ಷೆ ಕಡೆ ಸುಲಭವಾಗಿ ಕರೆದೊಯ್ಯುತ್ತದೆ..

ನೀನು ನೀನಾಗಿರು, ಯಾವ ಒತ್ತಡಕ್ಕೂ ಮಣಿಯದೆ ಮಾನಸಿಕವಾಗಿ ನಿನ್ನನ್ನು ನೀನು ಸಮತೋಲನ ಗೊಳಿಸಿಕೊಂಡಲ್ಲಿ, ನಿನ್ನಿಂದ ಎಲ್ಲವೂ ಸಾಧ್ಯ. ಪ್ರಾಮಾಣಿಕ ಪ್ರಯತ್ನ ಎಂದಿಗೂ ಯಾರಿಗೂ ಮೋಸಗೊಳಿಸುವುದಿಲ್ಲ ಅಲ್ಲವೇ??ನಿನ್ನ ಪ್ರಯತ್ನವೇ ನಿನ್ನ ಯಶಸ್ಸು ಕಂದಾ
ಪ್ರಯತ್ನಿಸು..
ಪ್ರಯತ್ನಿಸು..
ಪ್ರಯತ್ನಿಸು..

ನಿನ್ನ ಪ್ರೀತಿಯ ಅಪ್ಪ, ಅಮ್ಮ, ಸಂಬಂಧಿಕರು, ಗೆಳೆಯರು ಹಿತೈಷಿಗಳು ಎಲ್ಲರದೂ ಒಂದೇ ಹಾರೈಕೆ. ನೀನು ಪರೀಕ್ಷೆಯನ್ನು ಚೆನ್ನಾಗಿ ಮಾಡು.. ಇದು ನಿನ್ನನ್ನು ಒತ್ತಡಕ್ಕೆ ದೂಡಬಹುದು.. 
        ಹೆದರಬೇಡ, ಏಕೆಂದರೆ ಕುಂಬಾರಣ್ಣನ 
ಕೈಯಲ್ಲಿ ಸಿಲುಕಿದ ಮಣ್ಣು, ಹೆದರಿದ್ದರೆ ನಮಗೆ ಸುಂದರವಾದ ಬಿಸಿಲಿನ ಬೇಗೆಯಲ್ಲಿ ತಣ್ಣಗಿನ ನೀರನ್ನು ಕೂಡುವ ಹೂಜಿಯಾಗುತಿತ್ತೆ?? ಉಣ್ಣುವ ಅನ್ನ ಮಾಡುವ ಮಡಿಕೆಯಾಗುತಿತ್ತೆ?? ರುಚಿಯಾದ ಕಪ್ಪ ರೊಟ್ಟಿ ಮಾಡುವ ಕಾವಲಿ ಆಗುತ್ತಿತ್ತೆ? ಇಲ್ಲವಲ್ಲ.. ನೀನೂ ಹಾಗೆ ಹೆದರದೆ ಬೆದರದೆ ಇದ್ದಲ್ಲಿ ಎಲ್ಲರಿಗೂ ಪ್ರಿಯನಾಗುವೆ.

ಇಲ್ಲಿಯವರೆಗೂ 9 ಪರೀಕ್ಷೆ ನೂರಾರು ಕಿರು ಪರೀಕ್ಷೆ ಎದುರಿಸಿ ಬರೆದ ನಿನಗೆ ಈ ಪರೀಕ್ಷೆ ಏಕೆ ಭಯ ಉಂಟು ಮಾಡುತ್ತಿದೆ?? ಎಲ್ಲಾ ನಮ್ಮ ಮನಸ್ಥಿತಿ ಅಷ್ಟೇ,. ನಮ್ಮೊಳಗೆ ಆಲೋಚನೆ ಬರಬೇಕೆ ಹೊರತು ಆಲೋಚನೆ ಒಳಗೆ ನಾವು ಸಿಗಬಾರದು. ನಿನ್ನ ಶಿಕ್ಷಕರು ಒಂದು ವರ್ಷದಿಂದ ನಿನ್ನನ್ನು ಪರೀಕ್ಷೆಗಾಗಿ ತಯಾರಿಗೊಳಿಸಿದ್ದಾರೆ. ಅವರ ಪ್ರಯತ್ನ ನಿನ್ನನ್ನು ಮುಂದಿನ ಹಂತಕ್ಕೆ ತಲುಪಿಸುವುದು, ಅವರ ಪ್ರಯತ್ನದ ಜೊತೆ ನಿನ್ನ ಪ್ರಯತ್ನ ಅತೀ ಅಗತ್ಯ.. ಯಾಕೆ ಹೇಳು..? ಯಾಕೆಂದರೆ ಪರೀಕ್ಷೆಗೆ ನಿನ್ನ ತಯಾರಿ ನಿನ್ನ ಶಿಕ್ಷಕರು ಮಾಡಿರಬಹುದು, ಅವರು ನಿನ್ನ ಪರೀಕ್ಷೆ ಬರೆಯಲು ಸಾಧ್ಯವೇ? ಇಲ್ಲ ಅಲ್ವಾ.. ನಿನ್ನ ಪರೀಕ್ಷೆ ನೀನೆ ಬರೆಯಬೇಕು, ಅಂದರೆ ನಿನ್ನ ಯಶಸ್ಸಿನ ರೂವಾರಿ ನೀನೆ.. ಅದಕ್ಕಾಗಿ ಪರೀಕ್ಷಾ ಆತಂಕವಿಲ್ಲದೆ ಯಾವುದೇ ಭಯವಿಲ್ಲದೇ ಪೂರ್ಣ ಆತ್ಮವಿಶ್ವಾಸದಿಂದ ನಾನೂ ಮಾಡಬಲ್ಲೆ ಎಂದು ದೃಢವಾಗಿ ನಿನ್ನನ್ನು ನೀನು ಕೈಹಿಡಿದಲ್ಲಿ ಯಾವ ಅಡೆತಡೆ ಬರಲು ಸಾಧ್ಯ? ನಿನ್ನ ಆತ್ಮವಿಶ್ವಾಸದ ತಳಹದಿ ನಿನ್ನ ಯಶಸ್ಸಿನ ಗುಟ್ಟು,ಇದನ್ನು ಅರಿತುಕೊ ಕಂದಾ..

ಪರೀಕ್ಷಾ ದಿನಗಳಲ್ಲಿ ಹೆಚ್ಚು ನಿದ್ದೆ ಕೆಡದೆ, ಊಟ ಸರಿಯಾಗಿ ಮಾಡುವುದು ಅತೀ ಅಗತ್ಯ. ಹಾಗಂತ ಹೊಟ್ಟೆ ತುಂಬ ಊಟ ಮಾಡೋದಲ್ಲ, ಕಣ್ಣು ತುಂಬಾ ನಿದ್ದೆ ಮಾಡೋದಲ್ಲಾ.. ಸರಳ ಆಹಾರ, ಅಗತ್ಯ ನಿದ್ದೆ ಹಾಗೂ ಸಮಯ ಪ್ರಜ್ಞೆ, ಇವುಗಳ ಪಾಲನೆ ನಿನ್ನ ತಯಾರಿಗೆ ಪೂರಕ.

ಪರೀಕ್ಷೆ ಅಂದರೆ ಯುದ್ಧವಲ್ಲ, ಬದಲಿಗೆ ನಿನ್ನ ಜೀವನದ ಯಶಸ್ಸಿಗೆ ಬೇಕಾದ ಯಶಸ್ಸಿನ ಮೆಟ್ಟಿಲು. ಒಂದೊಂದೇ ಮೆಟ್ಟಿಲು ಏರಿದಾಗ ಉಜ್ವಲ ಭವಿಷ್ಯಕ್ಕೆ ನೀನು ಹತ್ತಿರ. ಈ ಭವಿಷ್ಯದ ರೂವಾರಿ ನೀನೇ, ನಿನ್ನ ಪ್ರೋತ್ಸಾಹಿಸಿ, ಬೆಂಬಲಿಸಿದ ನಿನ್ನ ಅಪ್ಪ, ಅಮ್ಮ, ಶಿಕ್ಷಕರು ಹಾಗೂ ಇತರರು ನಿನ್ನ ಯಶಸ್ಸನ್ನು ನೋಡಿ ಕುಶಿಪಡುವವರು.

ಕಂದಾ ಪ್ರಯತ್ನವಷ್ಟೇ ನಿನ್ನದು, ಫಲಿತಾಂಶದ ಬಗ್ಗೆ ಚಿಂತೆ ಬೇಡ. ಏಕೆಂದರೆ ನಿನ್ನ ಪ್ರಾಮಾಣಿಕ ಪ್ರಯತ್ನ ನಿನಗೆ ತೃಪ್ತಿಯಾಗಿದ್ದಲ್ಲಿ ನಿನ್ನ ಫಲಿತಾಂಶವೂ ತೃಪ್ತಿಕರವಾಗಿ ಬರುತ್ತದೆ,
ಆಶಾಭಾವನೆಯಿಂದಿರು. ಕಂದಾ.. ಈಗ ನಿನ್ನ ಮನದಲ್ಲಿ ಭಯವಿಲ್ಲ, ಬದಲಿಗೆ ಪರೀಕ್ಷೆ ಬಗ್ಗೆ ಸಂಭ್ರಮ ಇದೆ, ಅದನ್ನು ಸಂಭ್ರಮಿಸಿ ಅನುಭವಿಸು, ನೆಮ್ಮದಿಯಿಂದ ಎದುರಿಸು ಜಾಗೃತನಾಗಿ.. ಆಗ ಎಲ್ಲವೂ ಸಾಧ್ಯ.. ಸುಂದರ..

ಕೊನೆಯದಾಗಿ ಪ್ರತಿ ದಿನ ಒಂದಷ್ಟು ಪ್ರಾಣಾಯಾಮ, ಧ್ಯಾನ ಮಾಡಿ ಮಾನಸಿಕವಾಗಿ ನಿನ್ನನ್ನು ನೀನು ಪರೀಕ್ಷೆ ಬರೆಯಲು ಸಜ್ಜುಗೊಳಿಸಿಕೊ.. ಆಗ ಯಶಸ್ಸು ನಿನ್ನ ಮನೆ ಬಾಗಿಲಿನಲ್ಲಿ ನಿನ್ನ ಅಪ್ಪಿಕೊಳ್ಳಲು ಕಾಯುತ್ತಿರುತ್ತದೆ.. ಯಶಸ್ವಿಯಾಗಿ ಜೀವನದಲ್ಲಿ ಮುಂದೆ ಸಾಗು ಕಂದಾ.. ಶುಭವಾಗಲಿ....
................. ಶ್ರೀಮತಿ ಗೀತಾ ಶೆಟ್ಟಿ (ಕೆ. ಇ.ಎಸ್)
ನಿವೃತ್ತ ಅಧಿಕಾರಿ 
(ಶಿಕ್ಷಣ ಇಲಾಖೆ)
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article