ನಾನು ಓದಿದ ಪುಸ್ತಕ : ಸಂಚಿಕೆ - 04
Sunday, March 16, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 04
ಪುಸ್ತಕ- ಬಾವಲಿ ಗುಹೆ
....................................... ಸುವರ್ಣಾ ಭಟ್ಟ


ಪುಸ್ತಕ : ಬಾವಲಿ ಗುಹೆ
ಓದು ಮತ್ತು ಬರಹ : ಸುವರ್ಣಾ ಭಟ್ಟ
ಶಿರಸಿ, ಹುಸರಿ
ಶಿರಸಿ ತಾಲ್ಲೂಕು (ಉತ್ತರ ಕನ್ನಡ)
Mob : 9606234968
ಮಕ್ಕಳಿಗಾಗಿ ಕಾದಂಬರಿ
ಲೇಖಕರು- ತಮ್ಮಣ್ಣ ಬೀಗಾರ
ಬೆಲೆ75₹
ಮುದ್ರಣದ ವರ್ಷ- ಪ್ರಥಮ ಮುದ್ರಣ 2018
ಪುನರ್ ಮುದ್ರಣಗಳು 2021,2022,2024
ಮಕ್ಕಳು ಮತ್ತು ಪರಿಸರದ ಕಾದಂಬರಿ. ನಮ್ಮ ಸುತ್ತಲಿನ ವಾತಾವರಣ ಪರಿಸರ. ಮಕ್ಕಳು ಪರಿಸರವ ಇಷ್ಟಪಡುವರು. ಅಲ್ಲಿನ ಆಗುಹೋಗು ಗಮನಿಸುವರು. ಇಲ್ಲಿ ಗಣಿಗಾರಿಕೆ ಕುರಿತು ತಿಳಿಸಿದ್ದಾರೆ. ಇದರಿಂದ ಆ ಊರ ಜನರ ಪರಿಸ್ಥಿತಿ ಕುರಿತು ತಿಳಿಸಿದ್ದಾರೆ. ಈ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರ ೨೦೨೨ ದೊರಕಿದೆ.
ಢಮ್ ಎನ್ನೋ ಸದ್ದು ಮಲೆನಾಡಿನ ಹಳ್ಳಿಯಲ್ಲಿ....!! ಶಾಲೆಯಿಂದ ಮನೆಗೆ ಬಂದ ಶಂಕರ ತಿಂಡಿ ತಿಂದು ಹೊರ ಬಿದ್ದ. ಹಳ್ಳಿಯಾಗಿದ್ದರಿಂದ ಸುತ್ತಲಿದ್ದ ತೋಟ ಸುತ್ತುವುದು, ಹಳ್ಳದಲ್ಲಿದ್ದ ನೀರಿನಲ್ಲಿ ಆಡುವುದು, ಹಾವು, ಕಪ್ಪೆ, ನೀರುಕೋಳಿ, ಮುಂಗುಸಿ ಮುಂತಾದವುಗಳ ಭೇಟಿಯಾಗುವುದು ಖುಷಿಯಾಗಿತ್ತು ಇವನಿಗೆ. ಆಗಲೇ ಸೀಟಿಯ ಸದ್ದು ಕೇಳಿಸಿತು. ಅಡಿಕೆ ಮರದ ಸಾಲುಗಳ ನಡುವೆ ಓಡಿದ. ಹಳ್ಳದ ದಡ ತಲುಪಿದ. ಅಲ್ಲಿ ಇವನ ಗೆಳೆಯ ಜಾನು ಓಡಿ ಬಂದಿದ್ದ.
ಒಂದು ಹಳ್ಳಿ ಆ ಹಳ್ಳಿಯಲ್ಲಿ ಮಕ್ಕಳ ಆಟ, ಓಟ ಓದುತ್ತಿದ್ದಂತೆ ನಾವು ಮಕ್ಕಳಾಗಿ ನಮ್ಮ ಕಲ್ಪನೆಯ ತೋಟ ಸುತ್ತಿ ಬರುತ್ತೇವೆ. ನನಗಂತು ಬಾಲ್ಯದಲ್ಲಿ ನಾವಾಡಿದ ಆಟಗಳು ನೆನಪಾದವು. ಒಬ್ಬರಿಗೊಬ್ಬರು ಸಿಗಲು ಗೆಳೆಯರು ಕೊಡುವ ಸಿಗ್ನಲ್ ಸೀಟಿಯಾಗಿತ್ತು. ನಾವಂತೂ ಕೂ ಎಂದು ಕೂಗು ಹಾಕಿ ಹತ್ತಿರದ ಮನೆಯ ಗೆಳತಿಯರ ಆಡಲು ಕರೆಯುತ್ತಿದ್ದೆವು. ಇಬ್ಬರು ನೀರಿನಲ್ಲಿ ಈಜಾಡುವ ಮೀನನ್ನು ನೋಡುತ್ತಿದ್ದಾಗಲೆ 'ಢಮಾರ್' ಎಂಬ ಸದ್ದು ಕೇಳಿಸಿತು. ದೀಪಾವಳಿಯಲ್ಲಿ ಸಿಡಿಸುವ ಸಿಡಿಮದ್ದಿಗಿಂತ ನಾಲ್ಕೈದು ಪಟ್ಟು ಹೆಚ್ಚಾಗಿಯೇ ಕೇಳಿಸಿತ್ತು. ಹುಡುಗರು ಹೆದರಿದರು.
ಎಷ್ಟು ದೊಡ್ಡ ಜೆಸಿಬಿ...!! ಊರಿನ ಗುಡ್ಡದಲ್ಲಿ ಕಲ್ಲು ಒಡೆದು ಸಾಗಿಸುವ ಕೆಲಸ ಪ್ರಾರಂಭವಾಗಿ ಐದಾರು ತಿಂಗಳು ಆಗಿರಬೇಕು. ಆಗಿನಿಂದ ಭಾನುವಾರ ಬಿಟ್ಟರೆ ಪ್ರತಿದಿನ ಕಲ್ಲಿಗೆ ಸುರಂಗ ಹಾಕಿ ಒಡೆಯುವ ಸದ್ದು ಕೇಳಿಸುತ್ತಿತ್ತು. ದೊಡ್ಡ ಜೆಸಿಬಿ ಯಂತ್ರ ಮೊದಲು ಬಂದು ನಿಂತಾಗ ಮಕ್ಕಳಿಗೆ ಖುಷಿ ಆಗಿತ್ತು. ಕುತೂಹಲವಿತ್ತು.
ಆಲದ ಮರ ಬಿತ್ತು....!! ಯಂತ್ರಗಳ ನೋಡಿದ ಖುಷಿ ಬಹಳ ದಿನ ಉಳಿಯಲಿಲ್ಲ. ಆ ಊರಿನ ತಿಮ್ಮಮ್ಮನು ಮಕ್ಕಳಿಗೆ ಹಣ್ಣು ಕೊಡುತ್ತಿದ್ದಳು. ಅವರು ಪ್ರೀತಿಯಿಂದ ಅಜ್ಜಿ ಎಂದೇ ಕರೆಯುತ್ತಿದ್ದರು. ಅಂದು ಮಕ್ಕಳಿಗೆ ಹಣ್ಣು ಕೊಟ್ಟು ಅವರು ತಿನ್ನಬೇಕು ಎನ್ನುವಾಗಲೇ ದೊಡ್ಡ ಸದ್ದು ಕೇಳಿತು. ಅಜ್ಜಿಯ ಆಕಳು ಗೌರಿ ಅಂಬಾ ಎಂದು ಓಡಿ ಅಂಗಳಕ್ಕೆ ಬಂದು ಬಿತ್ತು. ಬೆನ್ನ ಚರ್ಮ ಕೆತ್ತಿದಂತಾಗಿ ಒಂದು ಕಡೆ ಆಳವಾದ ಗಾಯವಾಗಿತ್ತು. ಕಲ್ಲು ಒಡೆದು ಸಿಡಿದಿದ್ದು ಗುಡ್ಡದಿಂದ ಹಾರಿ ಹಸುವಿನ ಮೇಲೆ ಬಿದ್ದಿತ್ತು. ಇದರ ಜೊತೆಗೆ ದೊಡ್ಡ ಆಲದ ಮರವ ಕೆಡವಿದ್ದು ಮಕ್ಕಳಿಗೆ ಬೇಸರವಾಗಿತ್ತು. ದನ ಕಾಯುವ ಮಂಜನ ಕಾಲಿಗೆ ಕಲ್ಲು ಸಿಡಿದು ಕಾಲು ಮುರಿದಿದ್ದು , ವಾಟೆಕೆರೆಗೆ ಬರುತ್ತಿದ್ದ ಬೆಳ್ಳಕ್ಕಿ , ಕಾಡುಬಾತು, ನೀರುಕಾಗೆ ಮುಂತಾದ ಹಕ್ಕಿಗಳು ಬರುತ್ತಿಲ್ಲವೆಂದು ಮಕ್ಕಳಿಗೆ ಬೇಸರವಾಗಿತ್ತು. ಇದನ್ನು ಓದುವಾಗ ರಸ್ತೆ ಅಗಲಿಕರಣದಲ್ಲಿ ಎಷ್ಟೋ ಮರಗಳು ಧರೆಗುರುಳಿತು. ಮಳೆಗಾಲದಲ್ಲಿ ಧರೆ ಕುಸಿಯುತು. ಇವೆಲ್ಲ ಕಣ್ಮುಂದೆ ಬಂದವು.
ಬಾವಲಿ ಗುಹೆ....
ಗುಡ್ಡದ ತುದಿಯ ಸಮೀಪ ಕಪ್ಪಗೆ ಎತ್ತರದ ಕಾಣುತ್ತಿರುವುದ ನೋಡಿದಿಯಾ? ಎಂದ ಜಾನು. ಇಲ್ಲ ಅಲ್ಲಿ ಕಾಳಿಂಗ ಸರ್ಪ ಓಡಾಡುತ್ತಂತೆ ಎಂದ ಶಂಕರ. ದೊಡ್ಡ ಕಲ್ಲುಬಂಡೆಯಂತೆ, ಅದರ ಅಡಿಯಲ್ಲಿ ಒಂದು ಗುಹೆ ಇದೆಯಂತೆ ಅದನ್ನು "ಬಾವಲಿ ಗುಹೆ" ಅನ್ನುತ್ತಾರಂತೆ. ನನ್ನಮ್ಮ ಕಟ್ಟಿಗೆಗೆ ಹೋದಾಗ ನೋಡಿ ನಮಗೆ ಹೇಳಿದ್ದಾಳೆ. ನಾವು ಹೋಗೋಣ ಎಂದ ಜಾನು. ಶಂಕರನಿಗೂ ಗುಹೆಯ ಬಗ್ಗೆ ಕುತೂಹಲವಾಯಿತು. ಜಾನು ತೋರಿಸಿದ ದಿಕ್ಕಿನತ್ತ ಗುಡ್ಡ ಏರಿದ. ಅಂತು ಸಾಹಸ ಮಾಡಿ ಗುಹೆಯ ಸಮೀಪ ಬಂದರು ಮಕ್ಕಳು. ಎರಡು ಬಾವಲಿಗಳು ಗುಹೆಯ ಬಾಗಿಲಿನಿಂದ ಹಾರುತ್ತ ಹೊರಬಂದು ಮತ್ತಿ ಮರದ ಕೊಂಬೆಗೆ ನೇತಾಡಿದವು. "ಓಹೋ ಇಲ್ಲಿ ಬಾವಲಿಗಳಿವೆ. ಆದ್ದರಿಂದಲೇ ಇದಕ್ಕೆ ಬಾವಲಿ ಗುಹೆ ಎಂಬ ಹೆಸರು ಬಂತು" ಎಂದ ಜಾನು. ಗುಹೆಯ ಒಳಗೆ ಕತ್ತಲು ಇರುವುದರಿಂದ ಅವರೇನು ಕಾಣಿಸದೆ ಟಾರ್ಚ್ ತರಲು ಮನೆಗೆ ನಡೆದರು. ಟಾರ್ಜ್ ತಂದು ನೋಡಿದಾಗ ಅವರಿಗೂ ಆ ಊರಿನವರಿಗೂ ಅಚ್ಚರಿ ಕಾದಿತ್ತು ಗುಹೆ ಒಳಗೆ.
ಮಕ್ಕಳು ಇಷ್ಟಪಡುವ ಪುಸ್ತಕ ಕುತೂಹಲಕಾರಿ ಆಗಿದೆ.
ಶಿರಸಿ, ಹುಸರಿ
ಶಿರಸಿ ತಾಲ್ಲೂಕು (ಉತ್ತರ ಕನ್ನಡ)
Mob : 9606234968
********************************************