ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ : ತಮ್ಮಣ್ಣ ಬೀಗಾರ
Sunday, February 23, 2025
Edit
ಲೇಖನ : ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ : ತಮ್ಮಣ್ಣ ಬೀಗಾರ
ಬರಹ : ಸುಭಾಷ್ ಹೇಮಣ್ಣಾ ಚವ್ಹಾಣ
ಮಕ್ಕಳ ಸಾಹಿತಿ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ
ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ
ಮಂಜುನಾಥ ನಗರ, ಹುಬ್ಬಳ್ಳಿ ಶಹರ
ಧಾರವಾಡ ಜಿಲ್ಲೆ.
ಮೊ: ೭೯೭೫೦ ೨೬೭೨೪
ಸೃಜನಶೀಲ ಅಭಿವ್ಯಕ್ತಿಯ 'ಫ್ರಾಗಿ ಮತ್ತು ಗೆಳೆಯರು' ವ 'ಬಾವಲಿ ಗುಹೆ' ಕಾದಂಬರಿಕಾರರು, ಮಕ್ಕಳ ನೆಚ್ಚಿನ ರಾಜ್ಯ ಮತ್ತು ರಾಷ್ಟ್ರ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು, ಚಿಣ್ಣರ ಕಥೆಗಾರರು, ಮಗುಮನದ ಕವಿಗಳು, ಮಕ್ಕಳ ಚಂದ್ರ ಅಭಿದಾನಿತರು, ಬಾಲವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತರು, ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ಮಲೆನಾಡಿನ ಸೌಮ್ಯ ಸಮೃದ್ಧ ಸಾಹಿತಿ ತಮ್ಮಣ್ಣ ಬೀಗಾರ ಕಾವ್ಯನಾಮದ ತಮ್ಮಣ್ಣ ಕೋಮಾರರು ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಉತ್ತರ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಯಲ್ಲಾಪುರದ ಅಡಿಕೆ ಭವನದಲ್ಲಿ ೨೩ ಫೆಬ್ರವರಿ ೨೦೨೫ರ ಭಾನುವಾರ ರಂದು ಆಯೋಜಿಸಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದಾರೆ.
ಮಕ್ಕಳ ಸಾಹಿತ್ಯದ ವಿಶೇಷತೆಗಳು ಮತ್ತು ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ಪ್ರಮುಖ ಸಾಹಿತಿಗಳು
'ಮಕ್ಕಳ ಸಾಹಿತ್ಯ' ಎಂದರೆ... ಮಕ್ಕಳ ಮನಸ್ಸನ್ನು ಅರಳಿಸಿ, ಕುತೂಹಲವನ್ನು ಕೆರಳಿಸಿ, ಕಲ್ಪನೆಯನ್ನು ರೂಪಿಸಿ, ಭಾವನೆಗಳನ್ನು ಪ್ರಚೋದಿಸಿ, ಆನಂದದಲ್ಲಿ ಮೀಯಿಸಿ ಅವರ ವ್ಯಕ್ತಿತ್ವವನ್ನು ರೂಪಿಸುವ ಸಾಹಿತ್ಯ." ಕನ್ನಡದಲ್ಲಿ ಈ ಉದ್ದೇಶವನ್ನು ಈಡೇರಿಸುವಂಥ ಸಾಹಿತ್ಯ ಇತ್ತಾದರೂ, ಅದಕ್ಕೆ 'ಮಕ್ಕಳ ಸಾಹಿತ್ಯ'ವೆಂಬ ಸ್ಪಷ್ಟರೂಪ ಬಂದದ್ದು ಆಧುನಿಕ ಶಿಕ್ಷಣ ಹಾಗೂ ನವೋದಯ ಸಾಹಿತ್ಯ ಸಂದರ್ಭದಲ್ಲಿ ಎನ್ನಬಹುದು. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಬೇರನ್ನು ಜಾನಪದ ಪರಂಪರೆಯಲ್ಲಿಯೇ ಕಾಣಬಹುದು. ಅಜ್ಜಿ ಹೇಳುವ ಲಾಲಿಪದಗಳು, ಪ್ರಾಸಬದ್ಧವಾದ ಆಟದ ಪದಗಳು, ಒಗಟುಗಳು, ಕಥೆಗಳು, ಅದರಲ್ಲೂ ರಾಜಕುಮಾರಿಯರ ಕಥೆ, ಅದ್ಭುತರಮ್ಯ ಕಥೆ, ಕಾಗಕ್ಕ ಗುಬ್ಬಕ್ಕನ ಕಥೆ, ಪಂಚತಂತ್ರದ ಕಥೆ ಇವೆಲ್ಲ ಮಕ್ಕಳ ಮನಸ್ಸನ್ನು ಉಲ್ಲಾಸಗೊಳಿಸಿವೆ. ಆದರೂ ಆಧುನಿಕ ಕಾಲದಲ್ಲಿ ಮುದ್ರಣ ಕಲೆ ಬಂದ ಮೇಲೆ ಮಕ್ಕಳ ಸಾಹಿತ್ಯ ವಿಪುಲವಾಗಿ ಬೆಳೆಯಿತು. ಕನ್ನಡದ ಪ್ರಸಿದ್ಧ ಕವಿಗಳನೇಕರು ಮಕ್ಕಳ ಮನಸ್ಸನ್ನು ಪ್ರವೇಶಿಸಿ, ಅವರಿಗೆ ಇಷ್ಟವಾಗುವಂಥ ಸಾಹಿತ್ಯ ರಚಿಸಿದರು. ಪತ್ರಿಕಾ ಮಾಧ್ಯಮ ಇದಕ್ಕೆ ಪ್ರಚಾರ ನೀಡಿತು.
ಪಂಜೆ ಮಂಗೇಶರಾಯ, ಹೊಯಿಸಳ, ಜಿ. ಪಿ. ರಾಜರತ್ನಂ ಇವರು ಮೂವರನ್ನೂ ಮಕ್ಕಳ ಸಾಹಿತ್ಯದ ರತ್ನತ್ರಯರು ಎನ್ನಬಹುದು. ಕುವೆಂಪು, ಶಿವರಾಮ ಕಾರಂತ, ದಿನಕರ ದೇಸಾಯಿ, ರಾಘವ, ಎಲ್. ಗುಂಡಪ್ಪ, ಮೇವುಂಡಿ ಮಲ್ಲಾರಿ, ಸಿದ್ದಯ್ಯ ಪುರಾಣಿಕ, ತೋನ್ಸೆ ಮಂಗೇಶ ರಾವ್, ಸಿ. ಫ. ಕಟ್ಟೀಮನಿ ಮೊದಲಾದವರು ಕವಿತೆಗಳನ್ನು ರಚಿಸಿ ಮಕ್ಕಳನ್ನು ಖುಷಿ ಪಡಿಸಿದರು. ಶಂ. ಗು. ಬಿರಾದಾರ, ಕಯ್ಯಾರ ಕಿಞ್ಞಣ್ಣ ರೈ, ಸಿಸು ಸಂಗಮೇಶ, ಬಿ. ಎ. ಸನದಿ, ರಸಿಕ ಪುತ್ತಿಗೆ, ಶಶಿಕುಮಾರ, ಪಳಕಳ ಸೀತಾರಾಮ ಭಟ್ಟ, ಮುಂಡಾಜಿ ರಾಮಚಂದ್ರ ಭಟ್ಟ, ಶ್ರೀನಿವಾಸ ಶೆಟ್ಟಿ, ಈಶ್ವರ ಕಮ್ಮಾರ, ಚನ್ನವೀರ ಕಣವಿ, ಕಂಚ್ಯಾಣಿ ಶರಣಪ್ಪ, ಎಂ. ವಿ. ಸೀತಾರಾಮಯ್ಯ, ನೀ. ರೇ ಹಿರೇಮಠ ಮೊದಲಾದವರು ಈ ಸಾಲಿಗೆ ಸೇರುತ್ತಾರೆ. ತಲೆಯೆತ್ತಿದ ಸಸಿಗೆ ಆಧಾರ ನೀಡಿ ಅದನ್ನು ಪೋಷಿಸುತ್ತಿರುವವರು ಹಲವಾರು ಕವಿಗಳು. ಎಚ್. ಎಸ್. ವೆಂಟೇಶಮೂರ್ತಿ, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ಟಿ. ಎಸ್. ನಾಗರಾಜ ಶೆಟ್ಟಿ, ಎನ್. ಶ್ರೀನಿವಾಸ ಉಡುಪ, ಸಿ. ಎಂ. ಗೋವಿಂದ ರೆಡ್ಡಿ, ಸುಮತೀಂದ್ರ ನಾಡಿಗ, ಆರ್. ಕೆ. ಶಾನಭೋಗ, ಬಿ. ತಿಪ್ಪೇರುದ್ರಪ್ಪ, ತಮ್ಮಣ್ಣ ಬಿಗಾರ, ಬಸು ಬೇವಿನಗಿಡದ, ಸೋಮಲಿಂಗ ಬೇಡರ, ವೈ. ಜಿ. ಭಗವತಿ ಮೊದಲಾದವರನ್ನು ಹೆಸರಿಸಬಹುದು.
ಸಾಹಿತಿ ಶಿಕ್ಷಕ ಸಂಘಟಕ ಕೊಟ್ರೇಶ ಉಪ್ಪಾರರು ಸ್ಥಾಪಿಸಿರುವ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ (ರಿ.) ಇತ್ತೀಚಿಗೆ ಹಲವಾರು ವರ್ಷಗಳಿಂದ ಕರುನಾಡಿನಾದಂತ್ಯ ತನ್ನ ಜಿಲ್ಲಾ ತಾಲ್ಲೂಕು ಘಟಕಗಳನ್ನು ತೆರೆದು ಕನ್ನಡ ಸಾರಸ್ವತ ಲೋಕದಲ್ಲಿ ಆಫ್ ಲೈನ್ ಮತ್ತು ಆನ್ಲೈನ್ ನಲ್ಲಿ ವೈವಿಧ್ಯಮಯ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಮಾಡುತ್ತಾ ತನ್ನದೆಯಾದ ಅನುಪಮ ಸೇವೆ ಸಲ್ಲಿಸುತ್ತಿದೆ. ಈ ದಿಸೆಯಲ್ಲಿ ಪ್ರಥಮ ಪ್ರಯೋಗವೆಂಬಂತೆ ೨೩ ಪೆಬ್ರವರಿ ೨೦೨೫ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಶ್ರಯದಲ್ಲಿ ಯಲ್ಲಾಪುರದ ಅಡಿಕೆ ಭವನದಲ್ಲಿ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಆಯೋಜಿಸಿ ಮಕ್ಕಳ ಅಸ್ಮಿತೆಗೆ ಜೀವಂತ ಸಾಕ್ಷಿಯಾಗಿರುವ ನಿವೃತ ಶಿಕ್ಷಕರು ಮಕ್ಕಳ ಸಾಹಿತಿಗಳಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಬಾಲ ಸಾಹಿತ್ಯ ಪ್ರಶಸ್ತಿ ಪುರಸ್ಕೃತರಾದ ತಮ್ಮಣ್ಣ ಬೀಗಾರರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸರ್ವೋಚಿತವಾಗಿದೆ. ಅವರ ಮಕ್ಕಳ ಸಾಹಿತ್ಯದ ವೈಶಿಷ್ಟ್ಯ ಮಜಲುಗಳನ್ನು ಇಲ್ಲಿ ತಿಳಿದುಕೊಳ್ಳೋಣ....
ಶಿಕ್ಷಕ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ರವರ ಬಾಲ್ಯ, ಪರಿವಾರ ಮತ್ತು ವೃತ್ತಿ ಕುರಿತು ಕಿರು ಪರಿಚಯ :
ತಮ್ಮಣ್ಣ ಕೋಮಾರರ ತಂದೆ ನಾರಾಯಣ ಹಾಗೂ ತಾಯಿ ಸೀತೆ. ಕತೆಗಾರ ತಮ್ಮಣ್ಣ ಬೀಗಾರ ಅವರು 1959 ನವೆಂಬರ 22 ರಂದು ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬೀಗಾರ ಗ್ರಾಮದಲ್ಲಿ ಜನಿಸಿದರು. ಇವರ ಮಡದಿ ಸವಿತಾ. ಅವರು ಕೂಡಾ ಶಿಕ್ಷಕಿಯಾಗಿದ್ದರು. ಈಗ ನಿವೃತ್ತಿ ಆಗಿದ್ದಾರೆ. ಮಗನ ಹೆಸರು ವಿನಯ. ಸೊಸೆ ಸಾಧನಾ. ಇಬ್ಬರೂ ಇಂಜಿನಿಯರ್. ಅವರಿಗೆ ಎರಡುವರ್ಷದ ಮಗನಿದ್ದು; ಅವನ ಹೆಸರು ಅದ್ವಿಕ್. ‘ತಮ್ಮಣ್ಣ ಬೀಗಾರ’ ಎಂಬ ಕಾವ್ಯ ನಾಮದಿಂದ ಬರೆಯತ್ತಿರುವ ಇವರು ಮೂಲತಹ ಯಲ್ಲಾಪುರ ತಾಲೂಕಿನ ಬೀಗಾರದವರು. ಸ್ನಾತಕೋತ್ತರ ಪದವೀಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ 37 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಬಿದ್ರಕಾನ ಶಾಲೆಯಲ್ಲಿ ಮುಖ್ಯೋಪಾಧ್ಯಯರಾಗಿ ನಿವೃತ್ತಿ ಹೊಂದಿ ಸದ್ಯ ಅಲ್ಲೆ ವಾಸಿಸಿರುವ ತಮ್ಮಣ್ಣನವರು ಸಾಹಿತ್ಯ ರಚನೆ, ಚಿತ್ರ ಹಾಗೂ ವ್ಯಂಗ್ಯ ಚಿತ್ರ ರಚನೆ ಮುಂತಾದವುಗಳಲ್ಲಿ ನಿರತರು.
ಮಕ್ಕಳ ಸಾಹಿತಿ ತಮ್ಮಣ್ಣನವರ ಶಿಶು ಸಾಹಿತ್ಯದ ವಿಶೇಷತೆಗಳು...
ಮಕ್ಕಳ ಸಾಹಿತ್ಯಕ್ಕೆ ಮಲೆನಾಡಿನ ಸೊಗಸನ್ನೂ ಅದರ ಹಚ್ಚ ಹಸಿರಿನ ಹೊದಿಕೆಯನ್ನೂ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಯಾವುದೇ ಸಾಂಪ್ರದಾಯಿಕ, ನೀತಿಗಳ ಹಂಗಿಲ್ಲದೆ ಮಕ್ಕಳ ಸಾಹಿತ್ಯ ಕಟ್ಟಿಕೊಟ್ಟವರು ತಮ್ಮಣ್ಣ ಬೀಗಾರ. ಪ್ರಕೃತಿಯ ಪ್ರಶಾಂತ ಪಾಠಗಳು ತುಂಬಾ ಕುತೂಹಲಕರವಾಗಿ ಅವರ ಕೃತಿಗಳಲ್ಲಿ ಅಡಕವಾಗಿವೆ. ಮಕ್ಕಳ ಲೋಕವನ್ನು ಸೊಗಸು ಕಣ್ಣುಗಳಿಂದ ನೋಡುವ, ಸ್ವಚ್ಛಂದದಿಂದ ಕಂಡಿರಿಸುವ ಮುಕ್ತತೆ ಇವರ ಬರಹಗಳಲ್ಲಿ ಹಾಸಿಕೊಂಡಿದೆ. ಮಕ್ಕಳಿಗಾಗಿ ಕವನ, ಕಥೆ, ಕಾದಂಬರಿ, ಲಲಿತ ಬರಹ, ಬಾಲ್ಯದ ನೆನಪಿನ ಲಹರಿ, ಶಿಶು ಪ್ರಾಸ, ಚಿತ್ರ ಪುಸ್ತಕ ಮುಂತಾದ ೩೦ಕ್ಕೂ ಹೆಚ್ಚು ಕೃತಿಗಳನ್ನು ಹೊರ ತಂದಿದ್ದಾರೆ.
ಶುದ್ಧವಾದ ಭಾಷೆ, ಕಾವ್ಯದ ಲಯಗಾರಿಕೆ, ಆರೋಗ್ಯವಂತ ದೃಷ್ಟಿಕೋನ, ಮಕ್ಕಳಿಗೆ ಪ್ರಿಯವಾಗುವ ಪರಿಸರ, ಪ್ರಾಣಿ, ಪಕ್ಷಿ ಪ್ರಪಂಚ, ಈ ಕಾರಣದಿಂದ ಮಕ್ಕಳ ಕಾವ್ಯದಲ್ಲಿ ಗಟ್ಟಿಯಾಗಿ ನಿಲ್ಲಬಲ್ಲ ಹೆಸರು... ಎಂದು ನಾಡಿನ ಹಿರಿಯ ಕವಿ ಡಾ. ಎಚ್. ಎಸ್. ವೆಂಕಟೇಶ ಮೂರ್ತಿ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಕುರಿತು ಬಹಳ ಹಿಂದೆಯೆ ಹೇಳಿರುವುದು ಈಗ ನಿಜವೆನಿಸಿದೆ. ಬೀಗಾರ ಮಕ್ಕಳ ಕವಿ ಮಾತ್ರವಲ್ಲ, ಮಕ್ಕಳ ಕತೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತ್ಯದ ಒಟ್ಟಾರೆ ಗಂಭೀರ ಬರಹಗಾರ ಎಂಬುದು ಸಾಬೀತಾಗಿದ್ದು, ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಬಾಲ ಸಾಹಿತ್ಯ ಪ್ರಶಸ್ತಿ ದಕ್ಕಿದೆ.
ನಿಸರ್ಗದಲ್ಲಿ ವಿಹರಿಸುವ, ಬೆಟ್ಟ - ಕಣಿವೆಗಳನ್ನು ಏರಿ ಇಳಿದ ಮಕ್ಕಳ ಖುಷಿ, ವಿನೋದ, ಹುಡುಗಾಟಿಕೆಗೆ ನೀರೆರೆಯುವ ಜೊತೆಗೆ ಅಲ್ಲಿನ ಗಂಭೀರ ಸಮಸ್ಯೆಗಳ ಕುರಿತು ಬೀಗಾರ ತಮ್ಮ ಬರಹಗಳಲ್ಲಿ ಚಿತ್ರಿಸಿದ್ದಾರೆ. ಜೊತೆಗೆ ಅಲ್ಲಿಯ ವೈರುಧ್ಯಗಳನ್ನು ಹೇಳಲು ಸಹ ಅವರು ಹಿಂಜರಿದಿಲ್ಲ. ಬೀಗಾರರ ಸಾಹಿತ್ಯ ಓದುವಾಗ ಭಾರತೀಯ ಇಂಗ್ಲಿಷ್ ಮಕ್ಕಳ ಸಾಹಿತ್ಯದ ರಸ್ಕಿನ್ ಬಾಂಡ್ ಮತ್ತು ಕನ್ನಡದವರೇ ಆದ ನಾ. ಡಿಸೋಜ, ಡಾ. ಆನಂದ ಪಾಟೀಲ ಅವರ ಬರಹಗಳು ನೆನಪಾಗುತ್ತವೆ. ಎಂದು ಲೇಖಕರಾದ ಮಂಡಲಗಿರಿ ಪ್ರಸನ್ನರು ತಮ್ಮ ಬರಹದಲ್ಲಿ ಹೇಳಿರುವುದನ್ನು ಮರೆಯುವಂತಿಲ್ಲ.
ಶಿಶು ಸಾಹಿತಿ ತಮ್ಮಣ್ಣನವರ ಮಕ್ಕಳ ವೈವಿಧ್ಯಮಯ ಸಾಹಿತ್ಯ ಕೃತಿಗಳ ಕಿರು ನೋಟ....
ಗುಬ್ಬಚ್ಚಿ ಗೂಡು (೨೦೦೨), ಚಿಂವ್ ಚಿಂವ್ (೨೦೦೫), ಜೀಕ್ ಜೀಕ್(೨೦೦೮), ಪುಟಾಣಿ ಪುಡಿಕೆ(೨೦೧೦), ಸೊನ್ನೆ ರಾಶಿ ಸೊನ್ನೆ(೨೦೧೨), ತೆರೆಯಿರಿ ಕಣ್ಣು(೨೦೧೨), ಮಣ್ಣ ಕಣ್ಣಿನ ಹಾಡು (೨೦೧೩), ಖುಷಿಯ ಬೀಜ (೨೦೧೫) ಹಾಗೂ ಹಾಡಿನ ಹಕ್ಕಿ (೨೦೧೮), ಹಸಿರಿನ ಕಟ್ಟು --- (ಮಕ್ಕಳ ಕವನ ಸಂಕಲನಗಳು).
ಮಿಂಚಿನ ಮರಿ (೨೦೦೭) ಶಿಶುಪ್ರಾಸ ಹೊತ್ತಿಗೆ, ಕಪ್ಪೆಯ ಪಯಣ(೨೦೦೭), ಜಿಂಕೆಮರಿ (೨೦೦೯), ಹಸಿರೂರಿನ ಹುಡುಗ(೨೦೧೦), ಮಲ್ನಾಡೆ ಮಾತಾಡು (೨೦೧೧), ಅಮ್ಮನ ಚಿತ್ರ (೨೦೧೪), ಪುಟ್ಟನ ಕೋಳಿ (೨೦೧೭), ಉಲ್ಟಾ ಅಂಗಿ’ (೨೦೧೯), ನಕ್ಷತ್ರ ನೋಡುತ್ತ (೨೦೨೦), ಗಿರಗಿಟ್ಟಿ ( ೨೦೨೦), ಪುಟ್ಟಿಯೂ ಹಾರುತ್ತಿದ್ದಳು ---(ಮಕ್ಕಳ ಕಥಾ ಸಂಕಲನಗಳು).
ಮಾತಾಟ ಮಾತೂಟ(೨೦೧೪), ಮರಬಿದ್ದಾಗ (೨೦೧೫) ----(ಮಕ್ಕಳಿಗಾಗಿ ಲಲಿತ ಬರಹಗಳು).
'ಬಾವಲಿ ಗುಹೆ' (೨೦೧೯) ಹಾಗೂ 'ಪ್ರಾಗಿ ಮತ್ತು ಗೆಳೆಯರು' (೨೦೨೦) ----(ಮಕ್ಕಳ ಕಾದಂಬರಿಗಳನ್ನು ಹೊರ ತಂದಿದ್ದಾರೆ).
ಬಾ ಮರಿ ಚಿತ್ರಬರಿ (ಚಿತ್ರಗಳು) ೨೦೧೩, ಪುಟ್ಟಿಯೂ ಹಾರುತ್ತಿದ್ದಳು (ಚಿತ್ರಕಥೆ), ಆರ್. ವಿ. ಭಂಡಾರಿ (ಮಕ್ಕಳ ಸಾಹಿತ್ಯ ನಿರ್ಮಾಪಕರು ಮಾಲೆ) ೨೦೨೨, ಪುಟ್ಟಜ್ಜನ ನೆನಪಿನ ಡೈರಿ (ಪ್ರಬಂಧ), ಕೋಲ್ಜೇನು (ಬಾಲ್ಯದ ನೆನಪಿನ ಲಹರಿ) ಒಟ್ಟು ೩೦ ಮಕ್ಕಳ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿರುವ ಬೀಗಾರರು ಆ ಪೈಕಿ ೧೦ ಕಾವ್ಯ ಸಂಕಲನ ಮತ್ತು ೧೧ ಕಥಾ ಸಂಕಲನ, ೨ ಮಕ್ಕಳ ಸುಲಲಿತ ಲಲಿತ ಬರಹಗಳ ಸಂಕಲನ, ೨ ಕಾದಂಬರಿ, ೨ ಚಿತ್ರ ಸಂಪುಟ, ೧ ವ್ಯಕ್ತಿ ಚಿತ್ರ, ೧ ಪ್ರಬಂಧ ಪ್ರಕಟಿಸಿದ್ದಾರೆ.
೧. ಗುಬ್ಬಚ್ಚಿ ಗೂಡು (ಮಕ್ಕಳ ಕವನ) ೨೦೦೨
೨. ಚಿಂವ್ ಚಿಂವ್ (ಮಕ್ಕಳ ಕವನ) ೨೦೦೫
೩. ಮಿಂಚಿನಮರಿ (ಶಿಶು ಪ್ರಾಸ) ೨೦೦೭
೪. ಕಪ್ಪೆಯ ಪಯಣ (ಕಥೆಗಳು) ೨೦೦೭
೫.ಜೀಕ್ ಜೀಕ್ (ಮಕ್ಕಳ ಕವನ) ೨೦೦೮
೬. ಜಿಂಕೆ ಮರಿ (ಕಥೆಗಳು) ೨೦೦೯
೭. ಪುಟಾಣಿಪುಡಿಕೆ (ಮಕ್ಕಳ ಕವನ) ೨೦೧೦
೮. ಹಸಿರೂರಿನ ಹುಡುಗ (ಕಥೆಗಳು) ೨೦೧೦
೯. ಮಲ್ನಾಡೆ ಮಾತಾಡು (ಕಥೆಗಳು) ೨೦೧೧
೧೦. ಸೊನ್ನೆರಾಶಿ ಸೊನ್ನೆ(ಮಕ್ಕಳ ಕವನ) ೨೦೧೨
೧೧. ತೆರೆಯಿರಿ ಕಣ್ಣು (ಮಕ್ಕಳ ಕವನ) ೨೦೧೨
೧೨. ಮಣ್ಣ ಕಣ್ಣಿನ ಹಾಡು(ಕವನ) ೨೦೧೩
೧೩. ಬಾ ಮರಿ ಚಿತ್ರಬರಿ (ಚಿತ್ರಗಳು) ೨೦೧೩
೧೪. ಅಮ್ಮನ ಚಿತ್ರ (ಕಥೆಗಳು) ೨೦೧೪
೧೫. ಮಾತಾಟ ಮಾತೂಟ (ಲಲಿತ ಬರಹ ಮಕ್ಕಳಿಗಾಗಿ) ೨೦೧೪
೧೬. ಖುಷಿಯ ಬೀಜ(ಮಕ್ಕಳ ಕವನ) ೨೦೧೫
೧೭. ಮರ ಬಿದ್ದಾಗ (ಲಲಿತ ಬರಹ ಮಕ್ಕಳಿಗಾಗಿ) ೨೦೧೫
೧೮. ಪುಟ್ಟನ ಕೋಳಿ (ಕಥೆಗಳು) ೨೦೧೭
೧೯. ಹಾಡಿನ ಹಕ್ಕಿ (ಮಕ್ಕಳ ಕವನ) ೨೦೧೮
೨೦. ಬಾವಲಿ ಗುಹೆ (ಕಾದಂಬರಿ ಮಕ್ಕಳಿಗಾಗಿ) ೨೦೧೮
೨೧. ‘ಉಲ್ಟಾ ಅಂಗಿ’ (ಕಥೆಗಳು ಮಕ್ಕಳಿಗಾಗಿ) ೨೦೧೯
೨೨. ನಕ್ಷತ್ರ ನೋಡುತ್ತ (ಕಥೆಗಳು ಮಕ್ಕಳಿಗಾಗಿ) ೨೦೨೦
೨೩. ಫ್ರಾಗಿ ಮತ್ತು ಗೆಳೆಯರು (ಕಾದಂಬರಿ ಮಕ್ಕಳಿಗಾಗಿ) ೨೦೨೦
೨೪. ಗಿರಗಿಟ್ಟಿ (ಕಥೆಗಳು ಮಕ್ಕಳಿಗಾಗಿ) ೨೦೨೦
೨೫. ಆರ್ ವಿ ಭಂಡಾರಿ (ಮಕ್ಕಳ ಸಾಹಿತ್ಯಕ್ಕೆ ನಿರ್ಮಾಪಕರು ಮಾಲೆ) ೨೦೨೦
೨೬. ಪುಟ್ಟಜ್ಜನ ನೆನಪಿನ ಡೈರಿ (ಪ್ರಬಂಧ)
೨೭. ಕೋಲ್ಜೇನು (ಬಾಲ್ಯದ ನೆನಪಿನ ಲಹರಿ)
೨೮. ಪುಟ್ಟಿಯೂ ಹಾರುತ್ತಿದ್ದಳು (ಕಥಾ ಸಂಕಲನ)
೨೯. ಪುಟ್ಟಿಯೂ ಹಾರುತ್ತಿದ್ದಳು ( ಚಿತ್ರಕಥೆ)
ತಮ್ಮಣ್ಣ ಬೀಗಾರ. ಪ್ರಕೃತಿ ಸಿದ್ದಾಪುರ. ಉ.ಕ. ೫೮೧ ೩೫೫. ದೂರವಾಣಿ: ೯೪೮೦೪ ೭೪೬೨೯
ನಿಸರ್ಗ ಪ್ರೀತಿ, ಬಾಲ್ಯದ ಹುಡುಗಾಟ, ಮೋಜು, ಮಾನವೀಯತೆ, ಅಂತಃಕರಣ ಮತ್ತು ಜೀವನದ ವಾಸ್ತವಗಳನ್ನು ಎಷ್ಟು ಬೇಕೋ ಅಷ್ಟು ಮಾತ್ರ ಎರಕ ಹೊಯ್ಯುತ್ತ ಮೊದಲಿನಿಂದಲೂ ಮಕ್ಕಳಿಗೆ ತುಂಬಾ ವಿಶಿಷ್ಟವಾದ ಕಥೆಗಳನ್ನು ಕೊಡುತ್ತ ಬಂದವರು ತಮ್ಮಣ್ಣ ಬೀಗಾರ ಅವರು. ಬಾಲ್ಯತನದ ಹುರುಪು-ಹುಮ್ಮಸ್ಸು, ಸುಖ-ಸ್ವಾರಸ್ಯ, ಸಿಟ್ಟು-ಸೆಡವು, ನಿರಾಸೆ-ನಿಟ್ಟುಸಿರುಗಳನ್ನು ಕಲಾತ್ಮಕವಾಗಿ ಕಟ್ಟಿಕೊಡಬಲ್ಲರು. ಮಕ್ಕಳ ಬಾಲ್ಯವನ್ನು ಬಾಲ್ಯತನದ ಕಣ್ಣುಗಳಿಂದ ಕಂಡು, ಬಾಲ್ಯತನದ ಕಿವಿಗಳಿಂದ ಕೇಳಿ ಅದನ್ನು ಮಕ್ಕಳ ಮನಸ್ಸಿಗೆ ಮುದಕೊಡುವಂತೆ ಬರೆಯುವ ಶಕ್ತಿ ಅವರಿಗಿದೆ. ಹಿಂದಿನಿಂದಲೂ ಇವರದು ತುಂಬಾ ಸಮಾಧಾನ ಚಿತ್ತದ ಬರವಣಿಗೆ. ಒಂದು ರೀತಿಯಲ್ಲಿ ಅದು ಯಾವುದೇ ನಿಡುಸುಯ್ಯುವಿಕೆ ಇಲ್ಲದ ನಿಸರ್ಗದ ನಿತ್ಯೋತ್ಸವ. ಎಂಬುದಾಗಿ ಡಾ. ಬಸು ಬೇವಿನಗಿಡದ ರವರು ತಮ್ಮಣ್ಣನವರ ಗಿರಿಗಿಟ್ಟಿ ಕೃತಿ ಕುರಿತು ಹೇಳಿರುವುದು ಇವರ ಸಾಹಿತ್ಯ ಸ್ವಾರಸ್ಯವನ್ನು ಎತ್ತಿಹೇಳಿದೆ.
ಮಕ್ಕಳ ನೆಚ್ಚಿನ ಸಾಹಿತಿ ತಮ್ಮಣ್ಣ ಬೀಗಾರರಿಗೆ ಒಲಿದುಬಂದ ಪ್ರಶಸ್ತಿ ಪುರಸ್ಕಾರಗಳು...
2009 ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, 2012 ರಲ್ಲಿ ಉತ್ತಮ ಶಿಕ್ಷಕ ರಾಷ್ಟ್ರ ಪ್ರಶಸ್ತಿ ಇವರಿಗೆ ಬಂದಿವೆ. “ಬಾವಲಿ ಗುಹೆ” ಮಕ್ಕಳ ಕಾದಂಬರಿಗೆ 2022 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಬಂದಿದೆ. ಇವಲ್ಲದೆ ಇವರ 'ಹಸಿರೂರಿನ ಹುಡುಗ' ಪುಸ್ತಕಕ್ಕೆ ಹೊಂಬಳ ಮಕ್ಕಳ ಸಾಹಿತ್ಯ ಪ್ರಶಸ್ತಿ, 'ಮಲ್ನಾಡೆ ಮಾತಾಡು' ಕೃತಿಗೆ 'ವಸುದೇವ ಭೂಪಾಲಂ' ದತ್ತಿ ಪ್ರಶಸ್ತಿ ಹಾಗೂ 'ಮರಬಿದ್ದಾಗ' ಕೃತಿಗೆ ಬಾಲವಿಕಾಸ ಅಕಾಡೆಮಿ ಕೊಡುವ 'ಮಕ್ಕಳ ಚಂದ್ರ' ಪ್ರಶಸ್ತಿ, 'ಫ್ರಾಗಿ ಮತ್ತು ಗೆಳೆಯರು' ಕೃತಿಗೆ ಪುಸ್ತಕ ಸೊಗಸು ಬಹುಮಾನ ಬಂದಿವೆ. ಕರ್ನಾಟಕ ಸರ್ಕಾರದ ಬಾಲವಿಕಾಸ ಅಕಾಡೆಮಿಯ ಗೌರವ ಪುರಸ್ಕಾರ, ‘ಉಲ್ಟಾಅಂಗಿ’ ಕಥಾ ಸಂಕಲನಕ್ಕೆ 2019ರ ರಾಯಚೂರು ಜಿಲ್ಲಾ ಮಕ್ಕಳ ಸಾಹಿತ್ಯ ಪ್ರಶಸ್ತಿ ಸಂದಿವೆ. ವ್ಯಂಗ್ಯ ಚಿತ್ರ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಬಹುಮಾನ, ರಾಜ್ಯಮಟ್ಟದ ವಿಜ್ಞಾನ ಗೋಷ್ಠಿ ಬಹುಮಾನ, ಪ್ರಜಾವಾಣಿ ಶಿಶುಕಾವ್ಯ ಸ್ಪರ್ಧಾ ಬಹುಮಾನ ಮುಂತಾದವು ದೊರೆತಿವೆ. ಇವರ ಕಲಾಕೃತಿ, ಸಂದರ್ಶನಗಳು ದೂರದರ್ಶನ ಹಾಗೂ ಆಕಾಶವಾಣಿಯಿಂದ ಪ್ರಸಾರ ಆಗಿವೆ.
ಪ್ರಥಮ ಶಿಶು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಆಯ್ಕೆ ಸರ್ವೋಚಿತವಾಗಿದೆ...
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಘಟಕ ಹಾಗೂ ಯಲ್ಲಾಪುರ ತಾಲ್ಲೂಕು ಘಟಕದ ಸಹಕಾರದಲ್ಲಿ ಇದೇ ಫೆ.23 ರಂದು ಯಲ್ಲಾಪುರದ ಅಡಕೆ ಭವನದಲ್ಲಿ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಪ್ರಥಮ ಶಿಶು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಅವರನ್ನು ಆಯ್ಕೆ ಮಾಡಲಾಗಿದ್ದು; ಸಾಹಿತ್ಯ ವಲಯದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ ಎಂದು ಕೇಂದ್ರ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ತಿಳಿಸಿದ್ದಾರೆ. ಆಯ್ಕೆ ಸಂದರ್ಭದಲ್ಲಿ ಗಣೇಶ್ ನಾಡೋರ್, ಭಾಗೀರಥಿ ಹೆಗಡೆ, ತಮ್ಮಣ್ಣ ಬೀಗಾರ, ಬಿ. ಆರ್. ಲಕ್ಷ್ಮಣರಾವ್, ಸತ್ಯಾನಂದ ಪಾತ್ರೋಟ ಸೇರಿದಂತೆ ಹಲವು ಹೆಸರುಗಳು ಕೇಳಿ ಬಂದವು. ಸ್ಥಳೀಯತೆ, ಸಾಹಿತ್ಯದ ಗಂಭೀರತೆ ಹಾಗೂ ಹಿರಿತನದ ಆಧಾರದ ಮೇಲೆ ೭೬ವರ್ಷದ ತಮ್ಮಣ್ಣ ಬೀಗಾರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿರುವುದು ಶೋಭಾಯಮಾನವಾಗಿದೆ.
ಆಯ್ಕೆ ಸಂದರ್ಭದಲ್ಲಿ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ರಾಜ್ಯ ಜಂಟಿ ಕಾರ್ಯದರ್ಶಿ ನಾಗರಾಜ ದೊಡ್ಡಮನಿ, ರಾಜ್ಯ ಕೋಶಾಧ್ಯಕ್ಷ ಎಚ್. ಎಸ್. ಬಸವರಾಜು, ರಾಜ್ಯ ಕಾರ್ಯದರ್ಶಿ ಡಾ. ಪಿ. ದಿವಾಕರ ನಾರಾಯಣ, ರಾಜ್ಯ ಸಂಘಟನಾ ಕಾರ್ಯದರ್ಶಿ ವಾಸು ಸಮುದ್ರವಳ್ಳಿ, ರಾಜ್ಯ ಸಹ ಕಾರ್ಯದರ್ಶಿ ದೇಸು ಆಲೂರು, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಶಿವಲೀಲಾ ಹುಣಸಗಿ, ಗೌರವ ಸಲಹೆಗಾರ ಶಂಕರ್, ಗೌರವಾಧ್ಯಕ್ಷ ಪ್ರಮೋದ್ ಹೆಗಡೆ, ತಾಲ್ಲೂಕು ಅಧ್ಯಕ್ಷೆ ಆಶಾ ಸತೀಶ ಶೆಟ್ಟಿ, ಸಾಹಿತಿಗಳಾದ ಕೃಷ್ಣ ಪದಕಿ, ಭಾರತಿ ಕೆ. ನಲವಡೆ, ದೀಪಾಲಿ ಪಾಲಿ ಸಾಮಂತ, ಸುಮಂಗಲಾ ದೇಸಾಯಿ,ದೇವಿದಾಸ ನಾಯ್ಕ, ಬಾಲಚಂದ್ರ ಹೆಗಡೆ, ಸುವರ್ಣ ಮಯ್ಯರ, ಡಾ. ನವೀನಕುಮಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮಕ್ಕಳ ಲೋಕವನ್ನು ತಮ್ಮ ಕತೆ, ಕವನ, ಕಾದಂಬರಿ, ವ್ಯಕ್ತಿ ಚಿತ್ರಣ ಹೀಗೇ ಬಹುಮುಖಿ ಸಾಹಿತ್ಯ ಧಾರೆಯಿಂದ ಶ್ರೀಮಂತಗೊಳಿಸಿರುವ ಇವರ ಅಧ್ಯಾಪನ ಹಾಗೂ ಸಾಹಿತ್ಯ ಸೇವೆಗೆ ಕರ್ನಾಟಕ ರಾಜ್ಯೋತ್ಸೋವ ಪ್ರಶಸ್ತಿ, ನಾಡೋಜ, ಗೌರವ ಡಾಕ್ಟರೇಟ್, ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆ ಮುಂತಾದ ಗೌರವ ಸಮ್ಮಾನಗಳು ಒಲಿದು ಬರಲೆಂದು ಶುಭಕೋರುವೆನು...
ಮಕ್ಕಳ ಸಾಹಿತಿ ಶಿಕ್ಷಕರು
ಸರಕಾರಿ ಹಿರಿಯ ಪ್ರಾಥಮಿಕ
ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ
ಮಂಜುನಾಥ ನಗರ, ಹುಬ್ಬಳ್ಳಿ ಶಹರ
ಧಾರವಾಡ ಜಿಲ್ಲೆ.
ಮೊ: ೭೯೭೫೦ ೨೬೭೨೪
*****************************************