ಸ್ಫೂರ್ತಿಯ ಮಾತುಗಳು : ಸಂಚಿಕೆ - 152
Tuesday, February 18, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 152
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಅಷ್ಟೈಶ್ವರ್ಯ ಪ್ರಾಪ್ತಿರಸ್ತು ಎಂದು ಕಿರಿಯರಿಗೆ ಹಿರಿಯರು, ಮಠಾಧೀಶರು ಮತ್ತು ಸ್ವಾಮೀಜಿಗಳು ಆಶೀರ್ವಚಿಸುವರು. ಎಂಟು ಬಗೆಯ ಐಶ್ವರ್ಯಗಳು ಯಾವುವು? ಧನ, ದಾನ್ಯ, ವಸ್ತ್ರ ವಾಹನ, ಪುತ್ರ-ಪುತ್ರಿಯರು, ಬಂಧುಗಳು, ಭೃತ್ಯ ಮತ್ತು ದಾಸಿ ಇವೇ ಅಷ್ಟೈಶ್ವರ್ಯ ಎಂದು ಹಿರಿಯರು ಉಲ್ಲೇಖಿಸಿದ್ದಾರೆ. ಆದರೆ ಅವು ಯಾವ ಪ್ರಮಾಣದಲ್ಲಿರಬೇಕು ಎಂಬುದು ಜ್ಞಾನವ್ಯಾಪ್ತಿಯಲ್ಲಿರ ಬೇಕು. ಈ ಎಂಟರೊಂದಿಗೆ ಇಂದು ಹಿರಿಯರ ಗತಕಾಲದಲ್ಲಿರದ ಹಲವೆಂಟು ಇಷ್ಟೈಶ್ವರ್ಯಗಳೂ ಸೇರಿವೆ. ಮೊಬೈಲು, ಟಿ.ವಿ, ಕಂಪ್ಯೂಟರ್, ಫ್ರಿಡ್ಜ್, ವಾಷಿಂಗ್ ಮೆಷಿನ್, ಏರ್ ಕಂಡಿಶನರ್, ಮಿಕ್ಸಿ, ಗ್ರೈಂಡರ್, ರೋಬೋಟು…… ಇವೆಲ್ಲ ನಂತರದ ಆವಿಷ್ಕಾರಗಳು ಮತ್ತು ಬದುಕಿನ ಅಗತ್ಯಗಳೂ ಹೌದು.
ಧನವೆನ್ನುವಾಗ ಹಣ, ಚಿನ್ನ, ಬೆಳ್ಳಿ, ಒಡವೆ, ತಾಮ್ರದ ಪಾತ್ರೆ, ದನಗಳು, ಬಂಗಲೆ ಅಥವಾ ಮನೆ, ವಿಶಾಲವಾದ ಜಮೀನು ಮುಂತಾದುವನ್ನು ಗಮನಿಸುತ್ತೇವೆ. ದಾನ್ಯವು ಉದರ ಪೋಷಕ ಮತ್ತು ಆರೋಗ್ಯ ರಕ್ಷಕವಾದ ಆಹಾರಕ್ಕೆ ಸಂಬಂಧಿಸಿದುವು. ಭೂಮಿಯ ಮೇಲೆ ಬೆಳೆಯುವ ಎಲ್ಲ ಬಗೆಯ ಧಾನ್ಯಗಳು, ತರಕಾರಿಗಳು, ಹಣ್ಣು ಹಂಪಲುಗಳು ಮುಂತಾದುವುಗಳಿಗೆ ಅನ್ವಯಿಸುತ್ತದೆ. ವಸ್ತ್ರವು ಉಡಲು, ಹೊದೆಯಲು, ಮಲಗಲು…. ಹೀಗೇ ಬೇಕೇ ಬೇಕು. ಈ ಮೂರು ಇದ್ದರೆ ಅವನು ಐಶ್ವರ್ಯವಂತನೇ ಆಗುತ್ತಾನೆ. ಅವನ ಐಶ್ವರ್ಯಕ್ಕೆ ವಾರಸುದಾರರು ಪುತ್ತ ಪುತ್ರಿಯರು ಅಥವಾ ಸಂತಾನ. ವಾಹನ ಸಾಗಾಟಕ್ಕೆ ಬೇಕು. ತಲೆ ಹೊರೆ ದುಬಾರಿ ಮತ್ತು ತ್ರಾಸಕರ. ಈಗ ವಾಹನಗಳು ಸೈಕಲಿನಿಂದ ರಾಕೆಟುತನಕ ಬಹಳಷ್ಟಿವೆ. ಹಿಂದೆ ಇದ್ದುದು ಪ್ರಾಣಿಗಳು ಮತ್ತು ಪ್ರಾಣಿಗಳ ಶಕ್ತಿಚಾಲಿತ ಗಾಡಿಗಳು. ಬಂಧುಗಳು ಇದ್ದಾಗ ಬದುಕಿಗೆ ಬಲವಿರುತ್ತದೆ, ಬದುಕಿನಲ್ಲಿ ನಿರ್ಭಯವಿರುತ್ತದೆ. ದಾಸಿಯರು ಮನರಂಜನೆಯ ದೃಷ್ಟಕ್ಕಾಗಿ ಮತ್ತು ಸೇವೆಯ ದೃಷ್ಟಿಯಲ್ಲಿ ಹೇಳಲಾಗಿದ್ದರೆ ಭೃತ್ಯರು ಸಂಪೂರ್ಣವಾದ ಸೇವೆಗೆ ವಿನಿಯೋಗವಾಗುತ್ತಿದ್ದರು.
ನಾಗರಿಕ ಸಮಾಜದಲ್ಲಿ ಬ್ಯಾಂಕ್ ಬ್ಯಾಲೆನ್ಸ್, ಹೂಡಿಕೆಗಳು, ಲಾಕರ್ ನಲ್ಲಿರುವ ಒಡವೆ, ನಗರದಲ್ಲಿರುವ ದೊಡ್ಡ ದೊಡ್ಡ ಫ್ಲಾಟ್‌ಗಳು, ಸೈಟ್‌ಗಳು, ರಸ್ತೆಯ ಬದಿಯಿರುವ ಕೃಷಿಭೂಮಿಯೂ ಧನ ಸಂಪತ್ತೇ ಆಗಿದೆ. ಹೂಡಿಕೆಗಳಲ್ಲಿ ಷೇರ್, ಸ್ಟಾಕ್, ಉದ್ಯಮಗಳು ಸೇರುತ್ತವೆ. ಹಾಲಿಗಾಗಿ ದನ ಇಲ್ಲ. ಗದ್ದೆಯಲ್ಲಿ ದವಸ ಬೆಳೆಸುವುದೂ ಬೇಡ. ಅರೋಗ್ಯಕರವೋ ಅನಾರೋಗ್ಯಕರವೋ ನಮ್ಮ ಆಹಾರ ಆನ್‌ಲೈನ್ ಜಾಲದಲ್ಲಿರುತ್ತದೆ. ಸೀಮಿತ ಸಂಖ್ಯೆಯ ಮಕ್ಕಳು, ಕಾರ್ಯಕ್ರಮಗಳಲ್ಲಷ್ಟೇ ಕಾಣುವ ಬಂಧುಗಳು, ಹಿರಿಯರ ಕಲ್ಪನೆಗೆ ಸಂಪೂರ್ಣ ಭಿನ್ನವಾದ ಸಂರಚನೆಗಳು. ಮನರಂಜನೆಗೆ ಟಿ.ವಿ, ಥಿಯೇಟರ್, ಮೊಬೈಲು ಇರುವಾಗ ಮನರಂಜಿಸಲು ಮನುಷ್ಯರಿಗೇನು ಕೆಲಸ.? ಸೇವೆ ಮಾಡಲೂ ಉದ್ಯಮ ನಡೆಸಲು ಗುಂಡಿ ಅದುಮುವ ಅಥವಾ ಚಾಲಕ ಜ್ಞಾನದ ಕೆಲವೇ ಕೆಲವರು ಸಾಕು. ನೆಲ ಗುಡಿಸಿ ಒರೆಸಲು ರೋಬೋಟ್ ಸಹಕರಿಸುತ್ತದೆ. ಗುಂಡಿ ಅದುಮಲು ಒಬ್ಬರು ಬೇಕು. ಗುಂಡಿಯೊತ್ತುವ ರೊಬೋಟು ಬಂದರೆ ಆಗ ಜನರೇಕೇ? ಉಳಲು. ನೆಡಲು, ಮರವೇರಲು, ಕೊಯ್ಯಲು, ಕಡಿಯಲು, ಸಿಗಿಯಲು, ಸುಲಿಯಲು, ಕಳೆ ಕೀಳಲು ಆಹಾರ ತಯಾರಿಸಲು, ಓದಲು, ಬರೆಯಲು, ಮುದ್ರಿಸಲು… ಹೀಗೆ ಎಲ್ಲೆಂದರಲ್ಲಿ ಯಾಂತ್ರಿಕ ನೆರವಿರುವಾಗ ಭೃತ್ಯರು ಬೇಕಾದುದು ಒಬ್ಬರೋ ಇಬ್ಬರೋ ಅಷ್ಟೇ.
ಬಾಲಕನಾಗಿದ್ದಾಗ ಅಂಚೆಯಣ್ಣ ಎಂಬ ಪದ್ಯ ಓದಿದ್ದೆ. ಅಂಚೆಯ ಅಣ್ಣ ಇಂದು ಯಾವುದೋ ಪ್ರವಾಹಕ್ಕೆ ಸಿಲುಕಿ ನೇಪಥ್ಯ ಸೇರುತ್ತಿದ್ದಾನೆ. ಪತ್ರವ್ಯವಹಾರ, ಹಣ ರವಾನೆ, ಉಳಿತಾಯ ಹೀಗೆ ನಾನಾ ವಿಧಧ ಅಂಚೆ ಅಂದು ಸಂಪತ್ತು. ಇಂದು ನಾಪತ್ತೆ. ವಿಕಾಸವಾದಾಗ ಕೆಲವದರ ಅವಸಾನವೂ ಅಗತ್ಯವಾಗಬಹುದೇ? ಅವಸಾನ ಆಗಿದೆಯಲ್ಲ! ಬೀಸುವ ಕಲ್ಲು, ಒನಕೆ, ಅರೆಯುವ ಕಲ್ಲು, ಎತ್ತಿನ ಗಾಣ….. ಮುಂತಾದುವು ಕಣ್ಮರೆಯಾದಂತೆ ಸೇವಾ ವ್ಯವಸ್ಥೆಗಳೂ ಮರೆಯಾಗುತ್ತಿರುವುದು ವಿಕಾಸವೋ ವಿನಾಶವೋ ಅರಿಯದಾಗಿದೆ.
ಅಷ್ಠೈಶ್ವರ್ಯದಲ್ಲಿ ಹೊಸ ಹೊಸ ಇಷ್ಟೈಶ್ವರ್ಯಗಳು ಸೇರಿಕೆಯಾಗುತ್ತಲೇ ಇವೆ. ಗುಂಡಿ ತಿರುಗಿಸುವ ಹಳೇಯ ಮಾದರಿಯ ದೂರವಾಣಿ (ಫೋನ್) ಹೋಗಿ ಗುಂಡಿ ಅದುಮಿದೆವು. ಈಗ ಕರದೊಳಗಿನ ಜಂಗಮವಾಣಿ ಸ್ಪರ್ಶಿಸಿದರೆ ಸಾಕು. ಮುಂದೆ ಜಂಗಮವಾಣಿಯೊಂದರಲ್ಲೇ ಅನೇಕ ಬದಲಾವಣೆಯಾಗಲು ಸಾಧ್ಯವಿದೆ. ವಿಕಾಸವು ಪರಂಪರಾಗತವಾಗಿ ದೇಹದ ಅಂಗಾಂಗಗಳಿಗೆ ನೀಡುತ್ತಿದ್ದ ವ್ಯಾಯಾಮವನ್ನು ಹೃಸ್ವಹಗೊಳಿಸಿ ದೇಹವು ಆರೋಗ್ಯ ಕಳೆದು ಅಷ್ಟೈಶ್ವರ್ಯಗಳಲ್ಲಿ ಒಂದಾದ ಸ್ವಾಸ್ಥ್ಯವೂ ಮೃಣ್ಮಮಯವಾಗಬಹುದೇ? ಮನುಷ್ಯನು ಬಯಸಬೇಕಾದ ಅಷ್ಟೈಶ್ವರ್ಯ ಧನ ಕನಕಾದಿಯಾಗಿರಬಾರದು. ಧನಕನಕಗಳೊಂದಿಗೆ ಶ್ರೀಮಂತರಾದವರು ಎಲ್ಲರಿಗೂ ಇಷ್ಟವೆಂದು ಹೇಳಲಾಗದು. ಧನಕನಕಾದಿಗಳೊಂದಿಗೆ ಹೃದಯ ಶ್ರೀಮಂತಿಕೆ, ಸಹನೆ, ಸಹಕರಿಸುವ ಭಾವನೆ, ಸ್ನೇಹ, ಪ್ರೀತಿ, ನೀತಿ ಹೀಗೆ ಸದ್ಗುಣವುಳ್ಳವನೇ ಸಮಾಜಕ್ಕೆ ಅಷ್ಟೈಶ್ವರ್ಯ ಮತ್ತು ಇಷ್ಟವಾದ ಐಶ್ವರ್ಯ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************