-->
ಸ್ಫೂರ್ತಿಯ ಮಾತುಗಳು : ಸಂಚಿಕೆ - 151

ಸ್ಫೂರ್ತಿಯ ಮಾತುಗಳು : ಸಂಚಿಕೆ - 151

ಸ್ಫೂರ್ತಿಯ ಮಾತುಗಳು : ಸಂಚಿಕೆ - 151
ಲೇಖಕರು : ರಮೇಶ ಎಂ. ಬಾಯಾರು 
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 


'ನಿವೇದನೆ' ಯೆಂಬುದು ಕವನ ಸಂಕಲನವೊಂದರ ಹೆಸರು. ಬಂಟ್ವಾಳ ತಾಲೂಕು ಹದಿನೆಂಟನೇ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಬಹಳ ಯಶಸ್ವಿಯಾಗಿ ಸಂಘಟಿಸಿದ ಶಂಭೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಜಯರಾಮ ಡಿ. ಪಡ್ರೆಯವರು ಬರೆದ ಚೊಚ್ಚಲ ಕವನ ಸಂಕಲನವಿದು. ಚುಟುಕು ಮತ್ತು ನೀಳ್ಗವನಗಳ ರಚನೆಯಲ್ಲಿ ಉತ್ಸಾಹ ಹೊಂದಿರುವ ಜಯರಾಮ ಡಿ ಪಡ್ರೆ ಸ್ವಯಂ ಹಾಡುಗಾರರು, ಯಕ್ಷಗಾನ ಭಾಗವತರು ಮತ್ತು ಅರ್ಥಧಾರಿ.

'ನಿವೇದನೆ' ಯು 2025ರ ಜನವರಿ ನಾಲ್ಕು ಮತ್ತು ಐದರಂದು ಮಂಚಿಯಲ್ಲಿ ಜರುಗಿದ ಬಂಟ್ವಾಳ ತಾಲೂಕು ಇಪ್ಪತ್ತಮೂರನೇ ಸಾಹಿತ್ಯ ಸಮ್ಮೇಳನದ ಉದ್ಘಾಟನೆಯ ವೇಳೆ ಬಿಡುಗಡೆಯಾಯಿತು. ಒಟ್ಟು ನಲುವತ್ತು ಕವನಗಳು ಮತ್ತು ಅರುವತ್ತನಾಲ್ಕು ಪುಟಗಳಿರುವ ಮಧ್ಯಮ ಗಾತ್ರದ ಕೃತಿ. ಕಲ್ಲಡ್ಕದ ಅಕ್ಷಯ ಪ್ರಕಾಶನವು ಕೃತಿಯನ್ನು ಪ್ರಕಟಿಸಿದೆ. ತುಂಬೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ವಿ.ಸು.ಭ ಬಂಟ್ವಾಳ ಇವರು ಮುನ್ನಡಿಯನ್ನು ಬರೆದಿದ್ದು ಬಂಟ್ವಾಳ ತಾಲೂಕು ಮಕ್ಕಳ ಕಲಾಲೋಕದ ಅಧ್ಯಕ್ಷರಾದ ಶ್ರೀ ರಮೇಶ ಎಂ ಬಾಯಾರು ತನ್ನ ಅಂತರಂಗದ ಶುಭಾಶಯದೊಂದಿಗೆ ಹಾರೈಸಿರುತ್ತಾರೆ.

ಕವನಸಂಕಲನವನ್ನು ಬಹಳ ಸೂಕ್ಷ್ಮವಾಗಿ ಅವಲೋಕಿಸಿದಾಗ ಇದರೊಳಗೆ ಶಕ್ತಿಯನ್ನು ನಿವೇದನೆ ಮಾಡಿರುವುದು ವ್ಯಕ್ತವಾಗುತ್ತದೆ. ದೈವಿಕ ಶಕ್ತಿ, ಪ್ರಕೃತಿ ಶಕ್ತಿ, ಭಾವಭರಿತ ಮಾನವ ಶಕ್ತಿಗಳಿಗೆ ಕವಿಗಳು ವಿವಿಧ ರೀತಿಯ ನಿವೇದನೆಗಳನ್ನು ಮಾಡಿಕೊಂಡಿರುತ್ತಾರೆ. ದೇಶ ಭಕ್ತಿ, ಗುರುಭಕ್ತಿ, ಪ್ರಕೃತಿ ಪ್ರೇಮ, ಸಾಮಾಜಿಕ ಸಾಮರಸ್ಯ, ಜೀವನ ಸಂದೇಶಗಳು ಹೀಗೆ ಬಹುಮುಖ ವಿಚಾರಗಳ ಅರಿವನ್ನು ಮಾನವನಿಗೆ ಕೊಡು ಎಂದು ದೈವಿಕ ಶಕ್ತಿಗೆ ನಿವೇದಿಸಿದ ಕವಿಗಳು ದೇಶ ಪ್ರೇಮ, ಸಮಾಜ ಪ್ರೇಮ, ಕಾರುಣ್ಯದ ಮನ, ಸಾಮಾಜಿಕ ಸಾಮರಸ್ಯ, ನೈತಿಕತೆಯ ಕಲಶ, ಭಾವನೆಗಳ ಕೋಠಿಯಾಗುವಂತೆ ಮಾನವ ಶಕ್ತಿಗೂ ನಿವೇದನೆ ಮಾಡಿದ್ದಾರೆ. ಪ್ರಕೃತಿಯ ಮಡಿಲಿನಲ್ಲಿ ಹಾಯಾಗಿ ನಿರಾಳತೆಯಿಂದ ಬದುಕು ಮೂಕ ಜೀವಿಗಳ ಮಮತಾ ಹೃದಯ ಎಮಗೂ ಬರಲೆಂಬ ನಿವೇದನೆ ಕವಿಯ ಸಮಾಜ ಪ್ರೀತಿಯ ದ್ಯೋತಕ
 ಜಯರಾಮರ ಕೃತಿ, “ನಿವೇದನೆ” ಚೌಪದಿ, ಪಂಚ ಪದಿ, ಷಟ್ಪದಿ ಮೊದಲಾದ ಛಂದೋನಿಯಮಗಳನ್ನು ಹಲವೆಡೆ ಅನುಸರಿಸಿದರೆ ಕೆಲವು ಕವನಗಳು ಕವಿಯು ತನಗೆ ಅನುಕೂಲಿಸುವ ಚಂದೋನಿಯಮಗಳನ್ನು ಪಾಲನೆ ಮಾಡಿರುವುದೂ ಇದೆ. ಸಾಧ್ಯವಿರುವಲ್ಲೆಲ್ಲಾ ಅಕ್ಷರ ಪ್ರಾಸಗಳನ್ನೂ ಹೊಂದಿಸಿಕೊಂಡಿದ್ದಾರೆ. ಒತ್ತಾಯದ ಪ್ರಾಸ ತುಂಬುವ ಪ್ರಯತ್ನ ಮಾಡಿ ಓದುಗರಿಗೆ ಕಿರಿಕಿರಿ ಮಾಡಿಲ್ಲ. ಕವಿಯ ಪರಿಶುದ್ಧ ಮನಸ್ಸು, ಸಂತೃಪ್ತ ಭಾವ ಕವನಗಳೊಳಗೆ ಹಾಸು ಹೊಕ್ಕಾಗಿವೆ. ಕೆಲವು ಸನ್ನಿವೇಶಗಳಲ್ಲಿ ಯಕ್ಷಗಾನದ ಸವಿ ನೆರಳೂ ಕೆಲವು ಕವನಗಳೊಳಗೆ ಎದ್ದು ಕಾಣುತ್ತವೆ. ವಿವಿಧ ಜಾಲ ತಾಣಗಳ ಮೂಲಕ ಪ್ರಕಟಿಸಿರುವ ಜಯರಾಮರ ಕವನಗಳನ್ನು ಈಗಾಲೇ ಹಲವೆಡೆ ಓದಿರುವ ನಾನು ಅದರಲ್ಲಿರುವ ತನ್ಮಯತೆ, ಭಾವುಕತೆಗಳನ್ನು ಆಸ್ವಾದಿಸಿದ್ದೇನೆ. ಈ ಕವನ ಸಂಕಲನವೂ ಅವರ ಪ್ರೌಢ ಚಿಂತನೆಯ ಪ್ರತಿಬಿಂಬವಾಗಿಯೇ ಮೂಡಿ ಬಂದಿದೆ.

ಓರ್ವ ಸಮರ್ಥ ಶಿಕ್ಷಕನಾಗಿ ಓದುಗರಿಗೆ ಹೇಗೆ ಜ್ಞಾನವನ್ನುಣಿಸಬೇಕೆಂಬ ತನ್ನ ಯೋಚನೆಯನ್ನೂ ಧಾರಾಳವಾಗಿ ಒಳಗೊಳಿಸಿಕೊಂಡು ತನ್ನ ಕವನಗಳನ್ನು ಹೆಣೆದಿರುವ ಜಯರಾಮರ ನಿಪುಣತನ ಕೃತಿಯಲ್ಲಿ ಎದ್ದು ಕಾಣುತ್ತದೆ. ಕೋರಿಕೆ ಕವನದಲ್ಲಿ ಬಾಳರಳುವಂತೆ ಸುಜ್ಞಾನ ಕರುಣಿಸಲು ಭಗವಂತನಲ್ಲಿ ಪ್ರಾರ್ಥನೆಯಿದೆ. ಕೋರಿಕೆ ಅರ್ಥವನ್ನೇ ನೀಡುವ ನಿವೇದನೆ‌ ಎಂಬ ಕವನವು ದೈವಿಕ ಶಕ್ತಿಯನ್ನು ಗೆಳತಿಯೆಂದು ಪರಿಗಣಿಸಿ ಪ್ರಕೃತಿಯ ಎಲ್ಲಾ ಆಗು ಹೋಗುಗಳಲ್ಲಿ ಕೈಯಾಡಿಸುವ ನೀನೇಕೆ ನಮಗೆ ಭವ ಬಂಧನದ ದೀಕ್ಷೆ ನೀಡಲು ಹೆದರುವೆಯೆಂದು ಶಕ್ತಿ ಮಾತೆಯನ್ನೇ ಲೇವಡಿ ಮಾಡಿದ್ದಾರೆ. 

ಸ್ವಾತಂತ್ರ್ಯದ ಹಾದಿಯಲ್ಲಿ ಹೋರಾಡಿದವರನ್ನು, ಪ್ರಾಣ ಕಳೆದುಕೊಂಡವರನ್ನು, ಮನೆಯೊಡೆಯನಳಿದು ನಿರ್ಗತಿಕವಾದ ಕುಟುಂಬಗಳನ್ನು, ನಾನಾ ಕಷ್ಟಗಳಿಗೊಳಗಾದವರೆಲ್ಲರನ್ನೂ ನೆನೆಯಬೇಕಾದ ಪೌರನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಪ್ರಯತ್ನಿಸಿದ್ದಾರೆ. ತ್ಯಾಗಿಗಳು ಮತ್ತು ಬಲಿದಾನಿಗಳನ್ನು ನೆನೆಯುವುದರ ಮೂಲಕ ಓದುಗನಲ್ಲಿ ದೇಶ ಭಕ್ತಿ ಅಂಕುರಣ ಆಗಬೇಕು ಎಂಬ ನಿರೀಕ್ಷೆ ಕವಿಗಿದೆ. 

ಅಂತರ ಕವನದಲ್ಲಿ ಹೊಸ ಕಾಲ ಮತ್ತು ಗತಕಾಲದ ನಡುವಿನ ಅಂತರವನ್ನು ಮನೋಜ್ಞವಾಗಿ ಚಿತ್ರಿಸಿದ ಕವಿ ಹೊಸ ಹೊಸ ಆಸೆಗಳು ನೆಮ್ಮದಿಯನ್ನು ಕಳಚುತ್ತವೆ. ಹೊಸ ಕಾಲದಲ್ಲಿ ಭಾವಗಳೂ ನೂತನವಾದರೆ ಹೊಸ ಹುರುಪು ಮತ್ತು ಉಲ್ಲಾಸ ಬರುತ್ತದೆ. ಗತ ಕಾಲದ ಚಿಂತೆ ಭಸ್ಮವಾಗಲು, ಹೊಸ ಹೊಸ ಆಸೆಯ ಚಿಂತೆಗಳು ದೂರ ಓಡಲು ಭಾವೋಲ್ಲಾಸದಿಂದ ಸಾಧ್ಯವೆಂಂಬುದನ್ನು ಉದಾಹರಣೆ ಸಮೇತ ವಿವರಿಸಿದ್ದಾರೆ.

ಪ್ರಕೃತಿಯ ಮಡಿಲಿನಲ್ಲಿ ಗೆಲುವಾಗಿರುವ, ನಲಿವಾಗಿರುವ, ನವಿರಾಗಿರುವ ಬದುಕನ್ನು ಸಾಗಿಸುವ ಕಾಡಿನ ಮೂಕ ಜೀವಿಗಳನ್ನು ಧನ್ಯರೆಂದು ಬಿಂಬಿಸುವುದರ ಮೂಲಕ ನಮ್ಮ ಮನವೂ ಸರ್ವ ಸ್ವತಂತ್ರ ಮತ್ತು ಮಮತೆಯ, ಮಿತ್ರತ್ವದ ಬದುಕಾಗಿರಬೇಕೆಂಬ ಇಂಗಿತ “ಧನ್ಯರಾದವರು” ಕವನದಲ್ಲಿದೆ. ಸಮಾಜದ ಡೊಂಕುಗಳನ್ನು ಕಿತ್ತುಹಾಕುವುದೇ ಪಡ್ರೆಯವರ ಗಮ್ಯಸ್ಥಾನ ಎಂಬುದಕ್ಕೆ ಪ್ರತಿಯೊಂದು ಕವನವೂ ಸಾಕ್ಷಿ. ಕನ್ನಡ ಕಾಯಕದ ಮುಂದೆ ಜಾತಿ, ಮತ, ದೀನ, ದಲಿತ ಬಲಿತ ಮುಂತಾದುವು ಗೌಣ. ಕನ್ನಡಿಗನ ಜೀವನ ಚೈತನ್ಯಕ್ಕೆ ಸಾಹಿತ್ಯವೇ ಔಷಧ ಎನ್ನುವ ಪರಮ ಸತ್ಯ “ಬಯಕೆಯ ಬಯಲಿನಲಿ” ಬಯಲಾಗಿದೆ. ನಾಗರಿಕ ಸಮಾಜದ ಕಾರ್ಖಾನೆ ಕೈಗಾರಿಕೆಗಳ ಮೇಲಾಟ ನೆಮ್ಮದಿಯ ಬದುಕಿಗೆ ಮಹಾಕಂಟಕವಾಗಲಿದೆ ಎಂಬ ಭಯಾನಕ ಸಂದೇಶವನ್ನು “ಬಾನಂಗಳದಲ್ಲಿ ಉತ್ತರಿಸುವವರಿಲ್ಲ” ಕವನ ಸಾರಿ ಹೇಳಿದೆ. ತಾಯಿ ಭಾರತಿಯ ಹಿರಿಮೆಯನ್ನು ಬಹಳ ಮನೋಜ್ಞವಾಗಿ ವರ್ಣಿಸಿ “ತಾಯಿ ಭಾರತಿಗೆ ಜಯ ಜಯ ವೆಂದು" ದೇಶ ಭಕ್ತಿ ಮೆರೆದಿದ್ದಾರೆ. ಮುದಿ ಹಕ್ಕಿಯ ಕೊರಗು ಕವನದಲ್ಲಿ ರೆಕ್ಕೆಯ ಬಲವಿದ್ದಾಗ ಮಾಡಿದ ಆವಾಂತರಗಳಿಗೆ, ದೇಹದ ಶಕ್ತಿಗುಂದಿದಾಗ ಪರಿತಪಿಸುವ ರೀತಿ ಪ್ರತಿಯೊಬ್ಬರಿಗೂ ನೈತಿಕ ಪಾಠವಾಗಿದೆ.
ಜಾಹೀರಾತು ಕವನದಲ್ಲಿ ಗತಿಸಿದ ಮಹಾನುಭಾವರನೇಕರ ಉದಾಹರಣೆ ನೀಡುತ್ತಾ ಕನ್ನಡ ನಾಡಿಗೆ ಅಂತಹ ವ್ಯಕ್ತಿತ್ವಗಳು ಬೇಕಾಗಿದ್ದಾರೆಂಬ ಅಪೇಕ್ಷೆಯಿದೆ. ಕನ್ನಡ ನಾಡಿನ ಸೊಬಗು ಮತ್ತು ಕನ್ನಡಿಗರ ಛಾತಿಯನ್ನು ವಿವರಿಸುತ್ತಾ ಕರ್ನಾಟಕದ ಗರಿಮೆಯನ್ನು ಎತ್ತಿ ಹಿಡಿದಿರುವ ಪಡ್ರೆ “ಎಲ್ಲಿ ಕಾಣುವೆ ಇಂತಹ ನಾಡನು?” ಎಂದು ಪ್ರಶ್ನಿಸಿರುವರು. ಈ ನೆಲವನ್ನು ರಕ್ಷಿಸ ಬೇಕಾದ ಕನ್ನಡಿಗರ ಹೊಣೆಗಾರಿಕೆಯನ್ನೂ ನೆನಪಿಸಿದ್ದಾರೆ.  
      ನಿವೇದನೆಯು ಆಭಾಲವೃದ್ಧರಾದಿಯಾಗಿ ಎಲ್ಲರೂ ಓದಬೇಕಾದ ಪುಸ್ತಕ. ಮನೆ ಮನೆಗೂ ಈ ಪುಸ್ತಕ ಸೇರಿ ಎಲ್ಲರ ಮನಮುಟ್ಟಲಿ ಎಂಬುದೇ ಹಾರೈಕೆ.
........ರಮೇಶ ಎಂ. ಬಾಯಾರು ಎಂ.ಎ, ಬಿಎಡ್
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com 
******************************************** 


Ads on article

Advertise in articles 1

advertising articles 2

Advertise under the article