ನಾನು ಓದಿದ ಪುಸ್ತಕ : ಸಂಚಿಕೆ - 01 : ಪುಸ್ತಕ : ನೀನು ಒಂಟಿಯಲ್ಲ - ಲೇಖಕರು : ಡಾ. ವಿರೂಪಾಕ್ಷ ದೇವರಮನೆ
Sunday, February 16, 2025
Edit
ನಾನು ಓದಿದ ಪುಸ್ತಕ : ಸಂಚಿಕೆ - 01
ಪುಸ್ತಕ : ನೀನು ಒಂಟಿಯಲ್ಲ - ಲೇಖಕರು : ಡಾ. ವಿರೂಪಾಕ್ಷ ದೇವರಮನೆ
ಓದು ಮತ್ತು ಬರಹ : ಪ್ರಜ್ವಲಾ ಶೆಣೈ
ಸಹಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob: 9964677549
ಉಡುಪಿಯ ಖ್ಯಾತ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆ ಅವರು ಬರೆದಿರುವ 'ನೀನು ಒಂಟಿಯಲ್ಲ' ಪುಸ್ತಕ ಮದ್ಯ ವ್ಯಸನಿ ಪಾಲಕರ ಮಕ್ಕಳ ಬದುಕಿಗೆ ತೆರೆದಿಟ್ಟ ಬೆಳಕಿಂಡಿ. ಈ ಕೃತಿ ಸಮಸ್ಯೆಯ ಸುಳಿಯೊಳಗೆ ಸಿಲುಕಿ ತೊಳಲಾಡುತ್ತಿರುವ ಸಮಸ್ಯಾತ್ಮಕ ಮಕ್ಕಳಲ್ಲಿ ಭದ್ರತೆಯ ಭಾವ ಮೂಡಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತಂದು ಧೈರ್ಯ ತುಂಬುವ ಸಮಾಜಮುಖಿ ಬರಹಗಳನ್ನು ಒಳಗೊಂಡಿದೆ. ಅಭದ್ರತೆ, ಆತಂಕ, ಅಸುರಕ್ಷಿತ ಭಾವ, ಕೀಳರಿಮೆಯಿಂದ ಕಳೆದುಹೋಗುತ್ತಿರುವ ಮಕ್ಕಳಲ್ಲಿ ಆತ್ಮ ಸ್ಥೈರ್ಯವನ್ನು ಮತ್ತೆ ಕಟ್ಟಿಕೊಡುವ ಬಗೆಯನ್ನು ಇದರಲ್ಲಿ ವಿವರಿಸಿದೆ. ಮದ್ಯವ್ಯಸನಿ ಪಾಲಕರ ಜೊತೆ ಬೆಳೆಯುವ ಮಕ್ಕಳ ಬದುಕಿನ ಕಹಿಗಳನ್ನು ಕಡಿಮೆ ಮಾಡುವುದು ಹೇಗೆ ಎಂದು ಸಮಾಜಕ್ಕೆ ತಿಳಿಸುವ ಹಿರಿದಾದ ಕಾರ್ಯವನ್ನು ಈ ಪುಸ್ತಕ ಮಾಡುತ್ತದೆ.
ಶಿಕ್ಷಕರು ತನ್ನ ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚಕರೂ ಆಗಬಲ್ಲರು ಎನ್ನುವುದನ್ನು ಈ ಪುಸ್ತಕ ಓದಿದ ಎಲ್ಲ ಶಿಕ್ಷಕರಿಗೂ ಅನಿಸುವುದರಲ್ಲಿ ಎರಡು ಮಾತಿಲ್ಲ. ಸಂವೇದನಾಶೀಲ ಶಿಕ್ಷಕರು ತನ್ನ ತರಗತಿಯ ಪ್ರತಿ ಮಗುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಕಾರಣ ಕಂಡುಕೊಳ್ಳಬಲ್ಲರು. ಮಗುವಿನ ಸುಪ್ತ ಮನಸ್ಸಿನಲ್ಲಿ ಅಡಗಿರುವ ಭಯ, ಅವ್ಯಕ್ತ ಭಾವನೆಗಳನ್ನು ಅರಿತು ಮಗುವಿನ ಸಮಸ್ಯೆಗೆ ಪರಿಹಾರದ ಭಾಗವಾಗಬಲ್ಲರು. ಶಿಕ್ಷಕರಾದವರು ಮಾಡುವ ಸಹಾಯ ಒಂದೇ ಬಾರಿಗೆ ಬದಲಾವಣೆ ತರಲಾರದು. ಆದರೆ ಇಡುವ ಸಣ್ಣ ಹೆಜ್ಜೆಯೇ ಮುಂದೆ ದೊಡ್ಡ ಬದಲಾವಣೆಗೆ ನಾಂದಿ ಹಾಡಬಹುದು. ಒಟ್ಟಿನಲ್ಲಿ 'ನೀನು ಒಂಟಿಯಲ್ಲ' ಪುಸ್ತಕ ಶಿಕ್ಷರಿಗೊಂದು ಮಕ್ಕಳ ವರ್ತನೆಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವ ಕೈಪಿಡಿ ಎಂದರೆ ತಪ್ಪಿಲ್ಲ.
ಕಟ್ಟಿಕೊಡುವುದು ಪ್ರತಿ ತಂದೆ ತಾಯಿಯರಿಗೆ ಬದುಕು ನೀಡುವ ಅಮೂಲ್ಯ ಅವಕಾಶ. ಮದ್ಯ ವ್ಯಸನಿಗಳ ಕುರಿತು, ಅವರ ಮಕ್ಕಳ ಕುರಿತು, ಸಮಾಜದ ಮನೋಭಾವ ಬದಲಾಗಿ ಆ ಮಕ್ಕಳಿಗೆ ‘ನೀನು ಒಂಟಿಯಲ್ಲ’, 'ನಾವು ನಿನ್ನ ಜೊತೆಗಿದ್ದೇವೆ' ಎನ್ನುವ ಭರವಸೆ ನೀಡಿದರೆ ಈ ಬರಹ ಸಾರ್ಥಕ” ಎಂದು ಲೇಖಕರಾದ ಡಾ. ವಿರೂಪಾಕ್ಷ ದೇವರಮನೆ ಅವರು ತಮ್ಮ ಮನದ ಮಾತಿನಲ್ಲಿ ಹೇಳಿದ್ದಾರೆ.
ಒಟ್ಟು 18 ಬದುಕು ಬದಲಿಸುವ ಲೇಖನಗಳನ್ನು ಹೊಂದಿರುವ ಈ ಕೃತಿಯಲ್ಲಿ ತಮ್ಮ ವೃತ್ತಿ ಜೀವನದಲ್ಲಿ ಕಂಡ ನೈಜ ಘಟನೆಗಳನ್ನು ಹೆಸರು ಬದಲಿಸಿ ಆಸಕ್ತಿಕರವಾಗಿ ನಿರೂಪಿಸಿದ್ದಾರೆ. ಚಿಕಿತ್ಸೆಗಾಗಿ ತಮ್ಮ ಬಳಿ ಬರುವ ವ್ಯಕ್ತಿಗಳ ಬದುಕಿನ ಅನುಭವಗಳನ್ನು ಹೆಕ್ಕಿ ಇಲ್ಲಿ ಕಥೆಯಾಗಿ ನಿರೂಪಿಸಿದ್ದಾರೆ. ಹಾಗಾಗಿ ಈ ಕೃತಿಯು ಜೀವನಕ್ಕೆ ತುಂಬಾ ಹತ್ತಿರವಾಗಿದೆ ಮತ್ತು ಎಲ್ಲರ ಓದಿಗೆ ಉಪಯುಕ್ತವಾಗಿದೆ.
ವಯಸ್ಸಿಗೆ ಬಂದ ಹೆಣ್ಣು ಮಗಳೊಬ್ಬಳ ಅಸಹಾಯಕ ಪರಿಸ್ಥಿತಿ ಹಾಗೂ ತನ್ನ ತಂದೆಯ ಬಗ್ಗೆ ಇರುವ ಅಪರಿಮಿತ ಪ್ರೀತಿಯ ಬಗ್ಗೆ ಅಪ್ಪ ಅಂದ್ರೆ ಆಕಾಶ ಲೇಖನದಲ್ಲಿ ಸುಂದರವಾದ ಕಥಾ ರೂಪದಲ್ಲಿ ಚಿತ್ರಿಸಿದ್ದಾರೆ. ಬಾಲ್ಯದಲ್ಲಿ ತಾನು ಅನುಭವಿಸಿದ ದೈಹಿಕ ಶೋಷಣೆ, ಮಾನಸಿಕ ಹಿಂಸೆ, ನಿರ್ಲಕ್ಷ್ಯತನದಿಂದ ಉಂಟಾದ ದೀರ್ಘಕಾಲಿಕ ಪರಿಣಾಮ ಹಾಗೂ ಪರಿಹಾರದ ಬಗ್ಗೆ ಆಂಗ್ರಿ ಯಂಗ್ ಮ್ಯಾನ್ ನಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ಅರ್ಧಕ್ಕೆ ಓದು ನಿಲ್ಲಿಸಿದ್ದ ಅಭಯ್ ಎನ್ನುವ ಕಥಾನಕದಲ್ಲಿ
ಕೌಟುಂಬಿಕ ಕಲಹ, ತಂದೆಯ ಕುಡಿತದಿಂದ ಮನೆ ನಡೆಸಲಾಗದೆ ತಾಯಿ ಪಡುವ ಬವಣೆ, ಆರ್ಥಿಕ ಮುಗ್ಗಟ್ಟು , ಶಾಲೆಯಲ್ಲಿ ಶಿಕ್ಷಕರು ಮತ್ತು ಸ್ನೇಹಿತರ ಎದುರು ಆಗುವ ಅವಮಾನದ ಕಾರಣದಿಂದ ಅರ್ಧಕ್ಕೆ ಶಾಲೆ ತೊರೆದ ಅಭಯ್ ಜೀವನ ಆಪ್ತಸಮಾಲೋಚನೆಯ ಬಳಿಕ ಹೇಗೆ ತಿರುವು ಪಡೆಯಿತು ಎನ್ನುವುದನ್ನು ನೈಜವಾಗಿ ವಿವರಿಸಿದ್ದಾರೆ. ಪ್ರತಿಯೊಬ್ಬ ಮದ್ಯ ವ್ಯಸನಿ ಪೋಷಕರ ಮಕ್ಕಳಿಗೆ ಈ ಎಲ್ಲಾ ವಿಚಾರಗಳು ಸ್ಫೂರ್ತಿ ನೀಡುವಂತಿದೆ.
ಬಾಲ್ಯದಲ್ಲಿ ಕುಡಿತದ ಅಮಲಲ್ಲಿ ತನ್ನ ತಂದೆಯಿಂದಲೇ ಆದ ಲೈಂಗಿಕ ಶೋಷಣೆಯಿಂದ ಉಂಟಾದ ದೀರ್ಘ ಕಾಲಿಕ ಯಾತನೆಯು ಮಗುವಿನ ಭವಿಷ್ಯದ ಮೇಲೆ ಉಂಟು ಮಾಡುವ ಪರಿಣಾಮ, ಮದುವೆಯ ಬಗ್ಗೆ ಉಂಟಾದ ಅಸಹ್ಯ ಭಾವ, ತಾಯಿಯ ಕುಡಿತದಿಂದ ಚಿಕ್ಕ ವಯಸ್ಸಿನಲ್ಲಿಯೇ ಜವಾಬ್ದಾರಿಗೆ ಹೆಗಲು ಕೊಟ್ಟ ಹುಡುಗನ ವ್ಯಥೆ, ಇತ್ಯಾದಿ ನೈಜ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. ಈ ಓದು ಪೋಷಕರಿಗೂ, ಶಿಕ್ಷಕರಿಗೂ ಮಗುವಿನ ಭಾವನೆಗಳನ್ನು ಅರ್ಥೈಸಲು ಸಹಕಾರಿಯಾಗಿದೆ. ಮದ್ಯ ವ್ಯಸನಿಗಳ ಸಮಸ್ಯೆಗಳು, ಅವರ ಸಹಾಯಕ್ಕಾಗಿ ಇರುವ ಸ್ವ ಸಹಾಯ ಗುಂಪುಗಳು, ಮದ್ಯ ವ್ಯಸನಿ ಕುಟುಂಬದಲ್ಲಿ ವಿವಿಧ ಪಾತ್ರಗಳು, ಮದ್ಯ ವ್ಯಸನಿ ಪಾಲಕರ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಕರ ಸಹಾಯ, NACOA ಸಹಾಯವಾಣಿಯ ಸಮರ್ಪಕ ಬಳಕೆಯ ಬಗ್ಗೆ 'ನೀನು ಒಂಟಿಯಲ್ಲ' ಪುಸ್ತಕ ಸಮಗ್ರ ಮಾಹಿತಿಯನ್ನು ನೀಡುತ್ತದೆ.
ಶಿಕ್ಷಕರ ಸಹಾಯ ಒಂದೇ ಬಾರಿಗೆ ಬದಲಾವಣೆ ತರಲಾರದು. ಆದರೆ ಬದಲಾವಣೆಯ ಪುಟ್ಟ ಪುಟ್ಟ ಹೆಜ್ಜೆಗಳೇ ಮುಂದೆ ಆತ್ಮವಿಶ್ವಾಸದ ದೊಡ್ಡ ಶಕ್ತಿಯಾಗಿ ಬೆಳೆಯಬಹುದು ಎನ್ನುವುದನ್ನು ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ. ಮದ್ಯ ವ್ಯಸನಿ ಪಾಲಕರ ಮಕ್ಕಳಿಗಾಗಿ ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ನಡೆಸುವ ಮದ್ಯ ವ್ಯಸನಿ ಪಾಲಕರ ಮಕ್ಕಳ ಸಪ್ತಾಹ ಹಾಗೂ ಆಪ್ತ ಸಮಾಲೋಚನೆಯ ಬಗ್ಗೆ ಈ ಕೃತಿಯಲ್ಲಿ ಸಮಗ್ರವಾಗಿ ಮಾಹಿತಿಯನ್ನು ನೀಡಲಾಗಿದೆ.
ಶಾಲೆಯಲ್ಲಿ ಒಂಟಿತನ ಅನುಭವಿಸುತ್ತಿರುವ ಹಾಗೂ ಪಾಲಕರ ಮದ್ಯವ್ಯಸನ ದಿಂದ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳ ಬಾಳಿನಲ್ಲಿ ಶಿಕ್ಷಕರು ಹೇಗೆ ಆಶಾಕಿರಣವಾಗಬಲ್ಲರು ಎನ್ನುವುದನ್ನು ಈ ಕೃತಿ ನಿರೂಪಿಸುತ್ತದೆ. ಪ್ರತಿಯೊಬ್ಬ ಶಿಕ್ಷಕರು ಹಾಗೂ ಪೋಷಕರು ಓದಲೇ ಬೇಕಾದ ಕೃತಿ ಇದಾಗಿದೆ. ಈ ಕೃತಿಯ ಓದು ನಿಸ್ಸಂದೇಹವಾಗಿ ಪ್ರತಿಯೊಬ್ಬ ಶಿಕ್ಷಕರನ್ನು ಸಂವೇದನಾ ಶೀಲರನ್ನಾಗಿಸುತ್ತದೆ. ಈ 2025ನೇ ವರ್ಷದ ಆರಂಭದ ಜನವರಿ ತಿಂಗಳಲ್ಲಿ ಪರಿಚಯವಾದ ಈ ಪುಸ್ತಕ ಪ್ರಾಥಮಿಕ ಶಾಲೆಯ ಶಿಕ್ಷಕಿಯಾದ ನನ್ನ ಯೋಚನಾಲಹರಿಯನ್ನೇ ಬದಲಿಸಿತು ಅನ್ನಬಹುದು. ಈ ಪುಸ್ತಕ ಓದುವ ಮೊದಲು ನಾನು ತರಗತಿಯಲ್ಲಿ ನನ್ನ ವಿದ್ಯಾರ್ಥಿಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ರೀತಿಗೂ ಈಗ ನೋಡುವ ರೀತಿಗೂ ಖಂಡಿತಾ ವ್ಯತ್ಯಾಸವಿದೆ. ಆ ಮಗುವಿನ ಸ್ಥಾನದಲ್ಲಿ ನಿಂತು ಮಗುವಿನ ವರ್ತನೆಯನ್ನು ಅರ್ಥ ಮಾಡಿಕೊಳ್ಳುವ ಹೊಸ ನೋಟವನ್ನು ನಾನು ಈ ಪುಸ್ತಕ ಓದಿನಿಂದ ಪಡೆದಿದ್ದೇನೆ. ಇನ್ನಷ್ಟು ಮಂದಿ ಶಿಕ್ಷಕರು 'ನೀನು ಒಂಟಿಯಲ್ಲ' ಈ ಪುಸ್ತಕದ ಓದಿನ ಪ್ರಯೋಜನವನ್ನು ಪಡೆಯಲಿ ಎನ್ನುವ ಸದಾಶಯದಿಂದ ಈ ಮಕ್ಕಳ ಜಗಲಿ ಬಳಗದಲ್ಲಿ ನಾನು ಈ ಪುಸ್ತಕವನ್ನು ಪರಿಚಯಿಸಲು ಸಂತೋಷಿಸುತ್ತಿದ್ದೇನೆ.
ಇದೇ ಲೇಖಕರ 'ನಿನಗೆ ನೀನೇ ಗೆಳೆಯ' ಎನ್ನುವ ಕಿರುಹೊತ್ತಗೆಯು ವಿದ್ಯಾರ್ಥಿಗಳಿಗೆ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಉತ್ತಮ ಕೈಪಿಡಿಯಾಗಿದೆ. ಪಾಲಕರ, ಹಿರಿಯರ ಸೂಕ್ತ ಮಾರ್ಗದರ್ಶನದ ಕೊರತೆ ಇರುವ ಕುಟುಂಬದ ಪ್ರೌಢ ವಯಸ್ಸಿನ ಮಕ್ಕಳು ತಾವೇ ಓದಿಕೊಂಡು ಬದುಕಿನ ಸರಿದಾರಿಯಲ್ಲಿ ಮುನ್ನಡೆಯಲು ಪ್ರೇರಣೆ ನೀಡುವಂಥಹ ಪುಸ್ತಕ ಇದಾಗಿದೆ. ಶಿಕ್ಷಕರು, ಪೋಷಕರು 'ನಿನಗೆ ನೀನೇ ಗೆಳೆಯ' ಪುಸ್ತಕವನ್ನು ಮಕ್ಕಳ ಓದಿಗೆ ಪರಿಚಯಿಸಬೇಕಾದ ಅಗತ್ಯವಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ತಮ್ಮ ಬದುಕಿನ ಶಿಲ್ಪಿಗಳು ತಾವೇ ಎನ್ನುವುದನ್ನು ಅರ್ಥೈಸಬೇಕಿದೆ.
ನೀನು ಒಂಟಿಯಲ್ಲ ಎನ್ನುವ ಈ ಪುಸ್ತಕವನ್ನು ನನಗೆ ಓದಲು ನೀಡಿ ಇದನ್ನು ಪರಿಚಯಿಸಿದವರು ನನ್ನ ಗೆಳತಿ, ಶಿಕ್ಷಕಿ ವಿದ್ಯಾ ಕಾರ್ಕಳ. ಈ ಪುಸ್ತಕ ಓದಿ ಒಂದು ತಿಂಗಳೇ ಕಳೆದಿದ್ದರೂ ಇನ್ನೂ ಈ ಓದು ಕಾಡುತ್ತಿದೆ. ಈ ಲೇಖಕರ ಇನ್ನಷ್ಟು ಪುಸ್ತಕಗಳು ಇವೆ ಎಂದು ನಾನು ಕೇಳಿದ್ದೇನೆ. ಆದರೆ ಈ ಲೇಖಕರ ಕೃತಿಗಳಲ್ಲಿ ಮೊದಲು ನನಗೆ ಪರಿಚಯ ಆಗಿರುವುದೇ ನೀನು ಒಂಟಿಯಲ್ಲ ಎನ್ನುವ ಪುಸ್ತಕ. ಇನ್ನೂ ಸ್ವಲ್ಪ ಬೇಗ ಈ ಪುಸ್ತಕ ನನ್ನ ಕೈಗೆ ಸಿಕ್ಕಿದ್ದರೆ ನನ್ನ ವೃತ್ತಿಜೀವನದಲ್ಲಿ ಇದು ಇನ್ನಷ್ಟು ಮಾರ್ಗದರ್ಶಿ ಆಗಿರುತ್ತಿತ್ತು ಎಂದು ಅನಿಸಿದೆ. ಇದೀಗ ಅವರ ಇನ್ನಷ್ಟು ಪುಸ್ತಕಗಳನ್ನು ಓದಬೇಕು, ಅವುಗಳನ್ನು ನನ್ನ ಮನೆಯ ಪುಸ್ತಕಗಳ ಸಂಗ್ರಹಕ್ಕೆ ಸೇರಿಸಬೇಕು ಎನ್ನುವ ಆಸೆ ನನ್ನಲ್ಲಿ ಮೊಳಕೆಯೊಡೆದಿದೆ.
ಸಹಶಿಕ್ಷಕಿ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಪದ್ಮನೂರು
ಮಂಗಳೂರು ಉತ್ತರ, ದಕ್ಷಿಣ ಕನ್ನಡ ಜಿಲ್ಲೆ
Mob: 9964677549
*******************************************