-->
ಬದುಕು ಕಲಿಸಿದ ಕಥೆಗಳು (ಪುಸ್ತಕ ಪರಿಚಯ)

ಬದುಕು ಕಲಿಸಿದ ಕಥೆಗಳು (ಪುಸ್ತಕ ಪರಿಚಯ)

ಬದುಕು ಕಲಿಸಿದ ಕಥೆಗಳು
ಪುಸ್ತಕ ಪರಿಚಯ
ಬರಹ : ಶ್ರೀಮತಿ ಶಾಂಭವಿ ಕೆ, 
ಕನ್ನಡ ಉಪನ್ಯಾಸಕರು
ಬೆಥನಿ ಪದವಿಪೂರ್ವ ಕಾಲೇಜು 
ನೂಜಿಬಾಳ್ತಿಲ.
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


        
"ಬೆಳೆಯ ಸಿರಿ ಮೊಳಕೆಯಲ್ಲಿ" ಎಂಬ ಮಾತಿಗೆ ತಕ್ಕ ಉದಾಹರಣೆ ಕು| ದೀಪ್ತಿ ಬಿ ಇವರು. ಸರಳ ಸಜ್ಜನಿಕೆಯ ವ್ಯಕ್ತಿತ್ವದ ದೀಪ್ತಿಯವರು ಪ್ರೌಢಶಾಲಾ ಹಂತದಲ್ಲೇ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು "ಹೊಂಗನಸು" ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಎರಡನೇ ಕೃತಿ "ಬದುಕು ಕಲಿಸಿದ ಕಥೆಗಳು" ಎಂಬ ಕಥಾ ಸಂಕಲನ ಇತ್ತೀಚಿನ ದಿನಗಳಲ್ಲಿ ಬಿಡುಗಡೆಗೊಂಡಿದೆ. 

ಈ ಕಥಾಸಂಕಲನದ ಮುಖಪುಟವು ಕನ್ನಡ ನಾಡಿನ ಹಸಿರು ಸೌಂದರ್ಯದ ಸೊಬಗಿನೊಂದಿಗೆ ಹಳ್ಳಿಯ ಸುಂದರ ಬದುಕಿನ ನೆಲೆಯನ್ನು ಕಣ್ಣ ಮುಂದೆ ಕಟ್ಟುತ್ತದೆ. ಒಳ ಪುಟದ 23 ಕಥೆಗಳು ನೀತಿಯ ಹಂದರದೊಂದಿಗೆ ಪುಟ್ಟ ಪುಟ್ಟ ಕಥೆಗಳು ಓದುಗರನ್ನು ಓದಿಸುತ್ತಾ ಸಾಗುತ್ತದೆ. ಪಕ್ಷಿಗಳು ಗೂಡು ಕಟ್ಟುವ ಚಾಣಕ್ಯತೆಯಿಂದ, ಮಾನವ ತನ್ನ ಶ್ರಮಭರಿತ ಪ್ರಾಮಾಣಿಕ ಬದುಕಿನ ಬಗ್ಗೆ ಎಚ್ಚರಿಸುತ್ತಾ, "ನಾಳೆಯೂ ನನ್ನದೇ" ಎಂಬ ಕಥೆಯೊಂದಿಗೆ ನೊಂದ ಜೀವಿಯೊಂದಿಗೆ ತಾಯಿಯ ಸಾಂತ್ವನದ ಮಾತು, ಪ್ರೋತ್ಸಾಹ ಮೂಡಿಸುವ... ಬದುಕಲ್ಲಿ ಪ್ರತಿ ಕ್ಷಣದ ಭರವಸೆಯ ಆಶಾಭಾವನೆಯೊಂದಿಗೆ ಕಥಾಸಂಕಲನದ ಕಥೆ ಕೊನೆಗೊಳ್ಳುತ್ತದೆ.

ಮೊಬೈಲ್ ಯುಗದಲ್ಲೇ ಮುಳುಗಿರುವ ಯುವ ಜನತೆಯನ್ನು ಓದಿನೆಡೆಗೆ ಆಕರ್ಷಿಸುವ ಕಿರಿದರಲ್ಲಿ ಹಿರಿದಾದ ಸಾರವನ್ನು ತುಂಬಿರುವ ಕಥೆಗಳು ದಾರಿದೀಪವೇ ಸರಿ. ಕಥೆಗಳು ಕಥೆಗಳಾಗಿ ಇರದೆ ತನ್ನ ಬದುಕಿನಲ್ಲಿ ತಾನು ಕಂಡ ಅನುಭವಗಳಿಂದ ಅಡ್ಡದಾರಿಯೆಡೆಗೆ ಸಾಗುವ ಯುವಜನತೆಯನ್ನು ಕಥೆಗಳ ಮೂಲಕ ಸರಿದಾರಿಗೆ ತರುವ ಪ್ರಯತ್ನ ಎಂಬುದರಲ್ಲಿ ಎರಡು ಮಾತಿಲ್ಲ.

ಆನ್ಲೈನ್ ಮೂಲಕ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಅಭಿರುಚಿಯನ್ನು ಬೆಳೆಸಿ ಪ್ರೇರೇಪಿಸುವ ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ 'ಮಕ್ಕಳ ಜಗಲಿ'. ನಿಜವಾಗಿಯೂ ಮಕ್ಕಳ ಜಗಲಿ ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿಯನ್ನು ಬೆಳೆಸುವುದರೊಂದಿಗೆ ಉತ್ತಮ ಲೇಖನಗಳನ್ನೂ ಪ್ರಕಟಿಸುತ್ತದೆ. ಪ್ರವಾಸ ಕಥನ, ನಿಷ್ಪಾಪಿ ಸಸ್ಯಗಳು, ಪದದಂಗಳ, ಜೀವನ ಸಂಭ್ರಮ, ಪ್ರೀತಿಯ ಪುಸ್ತಕ, ಸ್ಕೂಲ್ ಡೈರಿ, ಮಕ್ಕಳಿಗಾಗಿ ವಿಜ್ಞಾನ, ಪಯಣ, ಹೃದಯದ ಮಾತು, ಸ್ಫೂರ್ತಿಯ ಮಾತುಗಳು ಹೀಗೆ ಹತ್ತು ಹಲವು ವಿಚಾರಗಳ ಸರಮಾಲೆ. ಅಂಗೈ ಅಗಲದಲ್ಲೇ ಇಡೀ ಜಗತ್ತಿನ ಆಗುಹೋಗುಗಳಲ್ಲಿ ಓದುವ ಮನಸು ತೇಲಿ ಹೋಗುವ ಅನುಭವವನ್ನು ಉಣಿಸುವ ವೇದಿಕೆ. "ಮಕ್ಕಳ ಜಗಲಿ", ಮಕ್ಕಳ ಜಗಲಿಯಾಗಿ ಇಡೀ ವಿಶ್ವವನ್ನೇ ಮನಸೆಳೆಯುವ ವೇದಿಕೆಯಾಗಿ ಗುರುತಿಸಿಕೊಳ್ಳುವುದರಲ್ಲಿ ಸಂದೇಹವಿಲ್ಲ.

ಈ ಬಳಗ ವನ್ನು ಹುಟ್ಟು ಹಾಕಿ ಎಷ್ಟೋ ಮನಸ್ಸುಗಳ ಸೃಜನಶೀಲ ಪ್ರತಿಭೆಗಳಿಗೆ ನೀರೆರೆದು ಪ್ರೋತ್ಸಾಹಿಸುತ್ತಿರುವ ಶ್ರೀಯುತ ತಾರಾನಾಥ್ ಕೈರಂಗಳ ಇವರ ಕೆಲಸ ಮೆಚ್ಚತಕ್ಕದ್ದು. ಇವರ ಈ ಉತ್ತಮ ಕಾರ್ಯ ನಿರ್ವಿಘ್ನವಾಗಿ ಸಾಗಿ ಓದುಗರ ಹಾಗೂ ಬರಹಗಾರರ ಬದುಕಿಗೆ ಬೆಳಕಾಗಿ, ಜೊತೆಗೆ ದೇವರ ಶ್ರೀರಕ್ಷೆ ಸದಾ ಇರಲಿ ಎಂಬ ಸದಾಶಯಗಳೊಂದಿಗೆ.... 
.................................. ಶ್ರೀಮತಿ ಶಾಂಭವಿ ಕೆ
ಕನ್ನಡ ಉಪನ್ಯಾಸಕರು
ಬೆಥನಿ ಪದವಿಪೂರ್ವ ಕಾಲೇಜು 
ನೂಜಿಬಾಳ್ತಿಲ.
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
******************************************** 

ಬದುಕು ಕಲಿಸಿದ ಕಥೆಗಳು - ಪ್ರತಿಗಳು ಬೇಕಾದಲ್ಲಿ ವಿಚಾರಿಸಿ



Ads on article

Advertise in articles 1

advertising articles 2

Advertise under the article