ಕಲಾ ಪರ್ಬ- 2025
Monday, January 13, 2025
Edit
ಲೇಖನ : ಕಲಾ ಪರ್ಬ- 2025
ಬರಹ : ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
ಒಲಿದಾಗ ಕಲಾ ರೂಪ.
ಗೆಜ್ಜೆಯೊಂದಿಗೆ ಹೆಜ್ಜೆ
ನಲಿದಾಗ ನೃತ್ಯ ರೂಪ.
ಉಳಿಯೊಂದಿಗೆ ಚಾಣ
ಬಡಿದಾಗ ಶಿಲ್ಪ ರೂಪ.
ಇವೆಲ್ಲವೂ ಒಂದೇ ಕಡೆ ಸಂಗಮವಾದಾಗ
ಇದುವೇ ಕಲಾ ಸಂಭ್ರಮ, ಕಲಾ ಜಂಗಮ.
ಕಲಾ ಪರ್ಬ- 2025
ಹೌದು ಮಂಗಳೂರಿನ ಕದ್ರಿ ಪಾರ್ಕ್ ಆವರಣದಲ್ಲಿ ಕಲಾ ಲೋಕವೇ ಅವತರಿಸಿತ್ತು. ಚಿತ್ರ, ಶಿಲ್ಪ, ನೃತ್ಯ, ಮೇಳ... ಕಲಾಲೋಕದ ವೈವಿಧ್ಯ ಪ್ರಕಾರಗಳು ಅಲ್ಲಿ ನೆಲೆಯಾಗಿತ್ತು... ಜನಸಾಗರದ ನಡುವೆ ಅವುಗಳು ವಿಭಿನ್ನವಾಗಿ ಮೆರೆದಿತ್ತು...
ಜನವರಿ 11 ಮತ್ತು 12, 2025, ಶನಿವಾರ ಮತ್ತು ಭಾನುವಾರ ಕಲಾ ರಸಿಕರಿಗೆ ಔತಣವಾಗಿ ಕದ್ರಿ ಪಾರ್ಕ್ ಎಲ್ಲರನ್ನೂ ಸ್ವಾಗತಿಸಿತ್ತು... ಕದ್ರಿ ಪಾರ್ಕ್‌ನ ರಸ್ತೆಯ ಇಕ್ಕೆಲಗಳಲ್ಲಿ 100 ಕ್ಕೂ ಮಿಕ್ಕಿ ಮಳಿಗೆಗಳಲ್ಲಿ ರಾಜ್ಯದ ಹೊರ ರಾಜ್ಯಗಳ ಪ್ರಸಿದ್ಧ ಕಲಾವಿದರ, ಹವ್ಯಾಸಿ ಹಾಗೂ ವಿದ್ಯಾರ್ಥಿ ಕಲಾವಿದರ ಸಾವಿರಾರು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿತ್ತು. ಕೇವಲ ಚಿತ್ರಕಲಾಕೃತಿಗಳು ಮಾತ್ರವಲ್ಲದೆ, ಶಿಲ್ಪಕಲೆ, ಕಲಾತ್ಮಕ ಕರಕುಶಲ ವಸ್ತುಗಳ ಪ್ರದರ್ಶನ, ನೃತ್ಯ, ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ, ಜನಜಾಗೃತಿಗಾಗಿ ಸ್ತಬ್ಧ ಚಿತ್ರಗಳೂ ಏರ್ಪಾಡಾಗಿತ್ತು.
ಕೆಲವು ವರುಷಗಳ ಹಿಂದೆ 'ಕುಡ್ಲ ಕಲಾ ಮೇಳ' ಹೆಸರಿನಲ್ಲಿ ಸಂಯೋಜನೆಗೊಂಡು ನೂರಾರು ಕಲಾವಿದರಿಗೆ ಆಸರೆಯಾಗುತ್ತಿದ್ದ ಕಾರ್ಯಕ್ರಮವೊಂದು 'ಶರಧಿ ಕಲಾ ಪ್ರತಿಷ್ಠಾನ' ದ ನೇತೃತ್ವದಲ್ಲಿ 'ಕಲಾ ಪರ್ಬ' ವಾಗಿ ಹೊಸ ರೂಪ ಹೊಸ ವಿನ್ಯಾಸದಲ್ಲಿ ಮೂಡಿಬಂದಿರುವುದು ಮಂಗಳೂರಿನ ಹಾಗೂ ರಾಜ್ಯ ಅಂತರಾಜ್ಯದ ಅನೇಕ ಕಲಾವಿದರಿಗೆ ಸಂತಸ ತುಂಬಿದೆ. ಚೈತನ್ಯ, ಆತ್ಮವಿಶ್ವಾಸವನ್ನು ತುಂಬಬಲ್ಲ ಇಂಥ ಕಾರ್ಯಕ್ರಮಗಳು ಕಲಾವಿದರ ಪರಿಶ್ರಮಕ್ಕೆ ಬೆಲೆ ನೀಡುವತ್ತ ವಿಶೇಷ ಕಾಳಜಿ ಹೊಂದಿದೆ.
ಶರಧಿ ಕಲಾ ಪ್ರತಿಷ್ಠಾನದ ಪುನಿಕ್ ಶೆಟ್ಟಿ ಈ ಕಾರ್ಯಕ್ರಮದ ಕನಸು ಹೊಂದಿದವರು. ವಿವಿಧ ಸಂಸ್ಥೆಯ ಸಹಯೋಗದೊಂದಿಗೆ ಆರ್ಥಿಕ ಬಲವನ್ನು ಕಟ್ಟಿಕೊಂಡು, ಚಾವಡಿಯ ಕಲಾವಿದ ಬಳಗದ ಕೋಟಿ ಪ್ರಸಾದ್ ಆಳ್ವ, ದಿನೇಶ್ ಹೊಳ್ಳ ಇನ್ನೂ ಅನೇಕ ಸಹೃದಯಿ ಕಲಾವಿದ ಮಿತ್ರರ ಸಲಹೆ ಮಾರ್ಗದರ್ಶನದೊಂದಿಗೆ 'ಕಲಾಪರ್ಬ' ದ ವಿನ್ಯಾಸ ವನ್ನು ಸೊಗಸಾಗಿ ಮೂಡಿಸಿದ್ದಾರೆ.
ಕರ್ನಾಟಕ ಹಾಗೂ ನೆರೆರಾಜ್ಯದ ವಿವಿಧ ಭಾಗದ ಅಂದಾಜು 160 ಕಲಾವಿದರು 110 ಮಳಿಗೆಗಳಲ್ಲಿ ಪ್ರದರ್ಶನ ಮತ್ತು ಮಾರಾಟದ ಈ ಒಂದು ಕಲಾ ಪರ್ಬದಲ್ಲಿ ಭಾಗವಹಿಸಿದ್ದರು. ಕನಿಷ್ಟ 500 ರೂಗಳಿಂದ ಗರಿಷ್ಟ 5 ಲಕ್ಷ ದವರೆಗಿನ ಕಲಾಕೃತಿಗಳು ಅಲ್ಲಿ ಮಾರಾಟಕ್ಕಿದ್ದವು.
ಹಲವಾರು ಕಲಾವಿದರು ಏಕವ್ಯಕ್ತಿಯಾಗಿ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿದ್ದರೆ ಇನ್ನು ಹೆಚ್ಚಿನ ಕಲಾವಿದರು ಸಮೂಹವಾಗಿ ಚಿತ್ರಕಲಾ ಪ್ರದರ್ಶನ ಮತ್ತು ಮಾರಾಟದಲ್ಲಿ ಭಾಗವಹಿಸಿದ್ದಾರೆ.
ಚಿತ್ರಕಲೆಯನ್ನೇ ವೃತ್ತಿಯಾಗಿ ಕಲಾ ಲೋಕದಲ್ಲಿ ಹೆಸರುವಾಸಿಯಾಗಿರುವ ವೃತ್ತಿಪರ ಕಲಾವಿದರು ಕಲಾ ಸಮುದಾಯಕ್ಕೆ ಪ್ರೇರಣೆಯಾಗಿ ಭಾಗವಹಿಸಿರುವುದರ ಜೊತೆ ಭವಿಷ್ಯದ ಕಲಾಜಗತ್ತಿನ ಯುವ ಹಾಗೂ ಹವ್ಯಾಸಿ ಕಲಾವಿದರ ಕಲಾಯಾತ್ರೆಗೆ ಅಂದದ ಮುನ್ನುಡಿಯಾಗಿರುವುದು ಕಲಾಪರ್ಬದ ಸುಂದರ ವ್ಯಾಖ್ಯಾನಕ್ಕೆ ಸಾಕ್ಷಿಯಾಗಿತ್ತು.
ಪ್ರತಿಯೊಬ್ಬ ಕಲಾವಿದನ ವಿಭಿನ್ನ ಶೈಲಿ, ವಿಭಿನ್ನ ಮಾಧ್ಯಮ, ವಿಭಿನ್ನ ವಿಷಯ ವಸ್ತುಗಳಿಂದ ಪ್ರತಿಯೊಬ್ಬ ಕಲಾಪೋಷಕರ ಹೃದಯಕ್ಕೆ ಹತ್ತಿರವಾಗಿ ಕಲಾಕೃತಿಗಳು ಗುರುತಿಸಿಕೊಳ್ಳುತ್ತಿದ್ದವು. ಮೋನೋಕ್ರೋಮ್ ಚಿತ್ರ ಶೈಲಿಯಿಂದ ಆರಂಭವಾಗಿ ಜಲವರ್ಣ, ತೈಲ ವರ್ಣ, ಆಕ್ರಲಿಕ್ , ಮಿಶ್ರಮಾಧ್ಯಮದಲ್ಲಿ ನೈಜ ಚಿತ್ರಗಳು, ಸಾಂಪ್ರದಾಯಿಕ ಚಿತ್ರ ಶೈಲಿಗಳು, ಅಮೂರ್ತ ಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು.
ಇದರ ಜೊತೆ ಜೊತೆಗೆ ಎಲ್ಲಾ ಪ್ರಕಾರಗಳ ಕಲಾ ಶೈಲಿಯು ಅಲ್ಲಿ ನೋಡುಗನ ಕಣ್ಣಿಗೆ ಹಬ್ಬವೇ ಆಗಿತ್ತು... ಪ್ರಕೃತಿ ಚಿತ್ರಣಗಳು, ಕೊಲಾಜ್, ಗ್ರಾಫಿಕ್ ಮುದ್ರಣ ಚಿತ್ರಗಳು, ಮಂಡಲ ಆರ್ಟ್, ಕಾರ್ಟೂನ್ಸ್, ಹೀಗೆ ಸಹಜವಾಗಿ ಮೂಡುವ ಚಿತ್ರಗಳು ಕಲಾಪರ್ಬದ ಸಾಕ್ಷಿಗಳಾಗಿತ್ತು.
ಕೇರಳ ಶೈಲಿಯ ಮ್ಯೂರಲ್ ಚಿತ್ರಗಳು , ಕಾವಿ ಕಲೆ, ಮೈಸೂರು ಮತ್ತು ತಂಜಾವೂರು ಶೈಲಿ, ಮೊಘಲ್ ಶೈಲಿಯ ಚಿತ್ರಗಳು ಹೀಗೆ ಸಾಂಪ್ರದಾಯಿಕ ಚಿತ್ರಕಲೆಗಳು ಕೂಡ ಕಲಾಪರ್ಬದ ವಿಶೇಷವಾಗಿತ್ತು.
ಹಿರಿಯ ಚಿತ್ರ ಕಲಾವಿದರು ತಮ್ಮ ಅಮೂಲ್ಯ ಕಲಾಸಂಪತ್ತಿನ ಕೊಡುಗೆಗಳಾಗಿ ಕಲಾಪರ್ಬಕ್ಕೆ ವಿಶೇಷ ಮೆರುಗು ನೀಡಿದ್ದರು. ತಮ್ಮ ಅನುಭವದ ದೀರ್ಘಕಾಲದ ಕಲಾ ಜಗತ್ತಿನ ನಂಟಿನ ಕಲಾಕೃತಿಗಳು ಪ್ರಬುದ್ಧತೆಯನ್ನು ಸಾರಿ ಹೇಳುತ್ತಿತ್ತು.
ಯುವ ಪ್ರತಿಭಾನ್ವಿತ ಕಲಾವಿದರು, ತಮ್ಮ ಕಲಾ ಪ್ರದರ್ಶನದ ಜೊತೆಗೆ ಕಲಾ ಜಗತ್ತಿನ ಯಾತ್ರೆಗೆ ಅಣಿಯಾಗಿದ್ದರು. ಹಿರಿಯ ಕಲಾವಿದರ ಸಲಹೆ ಮಾರ್ಗದರ್ಶನಗಳು ತಮ್ಮ ದಾರಿಗೆ ದೀವಿಗೆಗಳಾಗಿ ಬೆಳಕಾಗಿ ಭವಿಷ್ಯದ ಸಂಪನ್ಮೂಲ ಕಲಾವಿದರಾಗಿ ಬೆಳಗುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಹೊಸ ಆವಿಷ್ಕಾರದ ಹೊಸ ಬದಲಾವಣೆಗಳ ದಾರಿಗಳಲ್ಲಿ ಯುವ ಕಲಾವಿದರ ಕಲಾಕೃತಿಗಳು ನೋಡುಗರಿಗೆ ಸೊಬಗನ್ನೀಯುತ್ತಿದ್ದವು.
ಹವ್ಯಾಸಿ ಚಿತ್ರ ಕಲಾವಿದರು ತಮ್ಮ ಅನುಭವದ ದೃಷ್ಟಿಕೋನದಲ್ಲಿ ಹಲವಾರು ನೈಜ ಚಿತ್ರಣಗಳ ಜೊತೆಗೆ ಸಾಂಪ್ರದಾಯಿಕ ಚಿತ್ರ ಶೈಲಿಗಳ ಮೊರೆ ಹೋಗಿರುವುದು ಕಂಡುಬರುತ್ತಿತ್ತು. ಗುಣಮಟ್ಟಕ್ಕೆ ಸರಿಸಾಟಿಯಾಗಿ ಕಲಾಕೃತಿಗಳನ್ನು ಕೊಂಡೊಯ್ಯಲು ಪ್ರಯತ್ನಗಳು ನಿರಂತರವಾಗಿ ಸಾಗಿರುವುದಕ್ಕೆ ಇಲ್ಲಿನ ಪ್ರತಿಯೊಂದು ಕಲಾಕೃತಿಗಳು ಸಾಕ್ಷಿಗಳಾಗಿವೆ.
ಮಹಿಳಾ ಕಲಾವಿದರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಈ ಪರ್ಬದ ವಿಶೇಷವಾಗಿತ್ತು. ಸ್ತೀ ಸಂವೇದಿ ಚಿತ್ರಗಳು, ಮಹಿಳಾ ಪ್ರಧಾನ ಚಿತ್ರಗಳು, ಅಲಂಕಾರಿಕ ಸ್ವರೂಪದ ಚಿತ್ರಗಳು ಭಾವನಾತ್ಮಕವಾಗಿ ಮೂಡಿರುವುದು ಕಲಾಪರ್ಬದ ಮಳಿಗೆಗಳಿಗೆ ಹೊಸ ಮೆರುಗು ನೀಡಿದೆ.
ವಿಶೇಷ ಕಲಾ ಪ್ರತಿಭೆಯ ಪ್ರೌಢಶಾಲಾ ವಿದ್ಯಾರ್ಥಿ ಕೂಡ ಕಲಾ ಪರ್ಬದಲ್ಲಿ ಮಳಿಗೆ ಹೊಂದಿ ತನ್ನ ಕಲಾಕೃತಿಗಳ ಪ್ರದರ್ಶನಕ್ಕೆ ಅಣಿಯಾಗಿರುವುದು ಹಿರಿಯರ ಸಾಲಿನಲ್ಲಿ ಸಾಗಲು ತೊಡಗಿರುವುದು ಅಭಿನಂದನೀಯ.
ಶಿಲ್ಪಕಲೆ: ಶಿಲ್ಪಕಲೆ ಈ ಕಲಾ ಪರ್ಬದ ವಿಶೇಷತೆಗಳಲ್ಲೊಂದಾಗಿತ್ತು. ವಿಶ್ವಕರ್ಮ ಕಲಾ ಪರಿಷತ್ ಮಂಗಳೂರು, ಮತ್ತು ಕೆನರಾ ಬ್ಯಾಂಕ್ ಪ್ರಾಯೋಜಿತ ಕಾರ್ಕಳದ ಸಿ. ಇ. ಕಾಮತ್ ಇನ್ಸಿಟ್ಯೂಟ್ ಆಫ್ ಆರ್ಟಿಸನ್ ರವರಿಂದ ತಯಾರಿಸಲಾದ ವಿವಿಧ ರೀತಿಯ ಶಿಲ್ಪಕಲಾಕೃತಿಗಳು ಆಕರ್ಷಕವಾಗಿದ್ದವು. ಮರ, ಕಲ್ಲು, ಲೋಹದ ಶಿಲ್ಪಗಳು ವಿವಿಧ ಗಾತ್ರದಲ್ಲಿ ತಯಾರಿಸಲಾಗಿತ್ತು. ಬೇರೆ ಬೇರೆ ವಿನ್ಯಾಸದ ವಿವಿಧ ಬೆಲೆಗಳಲ್ಲಿ ಗ್ರಾಹಕರನ್ನು ಮನಸೆಳೆಯುತ್ತಿದ್ದವು. ದೇವರ ಶಿಲ್ಪಗಳು, ಅಲಂಕಾರಿಕ ಶಿಲ್ಪ ಕೆತ್ತನೆಗಳು, ಅಮೂರ್ತ ರೂಪದ ಶಿಲ್ಪಗಳು ಮಾರಾಟಕ್ಕೆ ಸಿದ್ಧವಾಗಿದ್ದವು. ವಿದ್ಯಾರ್ಥಿ ಕಲಾವಿದರು ಸ್ವತಹ ಸ್ಥಳದಲ್ಲೇ ಕೆತ್ತನೆಯ ಪ್ರಾತ್ಯಕ್ಷಿಕೆಗಳನ್ನು ನಡೆಸಿ ನೋಡುಗರ ಕಣ್ಣುಗಳಿಗೆ ಹಬ್ಬವಾದರು.
ಭಾವ ಚಿತ್ರ, ವ್ಯಂಗ್ಯ ಚಿತ್ರ ರಚನೆ : ಹಲವು ಕಲಾವಿದರು ತಮ್ಮ ಮಳಿಗೆಗಳಲ್ಲಿ ಭಾವಚಿತ್ರ ಹಾಗೂ ಕಾರ್ಟೂನ್ ಚಿತ್ರರಚನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ನೋಡುಗರು ತಮ್ಮ ಭಾವಚಿತ್ರ ಕಾರ್ಟೂನ್ ರಚನೆಗೆ ಆಸಕ್ತಿ ತೋರಿ ಕಲಾವಿದರಿಂದ ತಮ್ಮ ತಮ್ಮ ಭಾವಚಿತ್ರಗಳನ್ನು ಬಿಡಿಸಿಕೊಳ್ಳುತ್ತಿದ್ದುದು ಕಂಡುಬರುತ್ತಿತ್ತು. ಅಂದಾಜು 100 ರೂಗಳಿಂದ 500 ರೂಗಳ ವರೆಗಿನ ಬೇಡಿಕೆಗೆ ತಮ್ಮ ಅಂದದ ಭಾವಚಿತ್ರಗಳನ್ನು ತಮ್ಮ ತಮ್ಮ ಮನೆಗೆ ಒಯ್ಯುತ್ತಿದ್ದು ಕಲಾಪರ್ಬದ ವಿಶೇಷವಾಗಿತ್ತು.
ಪರಿಸರ ಜಾಗೃತಿ ಚಿತ್ರಗಳು : ಕಲಾವಿದರು ರಚಿಸಿದ ಪರಿಸರದ ಜಾಗೃತಿ ಚಿತ್ರಗಳು ಸ್ತಬ್ಧ ಚಿತ್ರಗಳು ನೋಡುಗರ ಕಣ್ಮನ ಸೆಳೆಯುವುದರ ಜೊತೆಗೆ ಹೃದಯದಲ್ಲಿ ವೇದನೆಯನ್ನು ಹಚ್ಚಿಕೊಳ್ಳುತ್ತಿದ್ದವು. ಗಿಳಿಯೊಂದು ತಿಂದ ಪ್ಲಾಸ್ಟಿಕ್ ರಾಶಿಗಳನ್ನು ತಮ್ಮ ಹೊಟ್ಟೆಯಲ್ಲಿ ಜೀರ್ಣಿಸಿಕೊಳ್ಳಲಾರದೆ ವೇದನೆಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಪಕ್ಷಿ ಸಂಕುಲಗಳ ನಾಶಕ್ಕೆ ಮನುಷ್ಯನ ಅತಿರೇಕದ ಕಾರಣವನ್ನು ಬಹಳ ಸೊಗಸಾಗಿ ಪ್ರತಿಬಿಂಬಿಸುತ್ತಿತ್ತು.
ಅದೇ ರೀತಿ ಕೊಲಾಜ್ ಕಲಾಕೃತಿಯಲ್ಲಿ ಬಿಡಿಸಿದ ಜಿಂಕೆಯೊಂದು ಪ್ಲಾಸ್ಟಿಕ್ ರಾಕ್ಷಸರಿಂದ ತಮ್ಮ ಜೀವಕ್ಕೆ ಕುತ್ತು ತಂದುಕೊಳ್ಳುವ ಭಾವನಾತ್ಮಕ ಕಲಾಕೃತಿಯೊಂದು ನೋಡುಗರ ಮಧ್ಯೆ ಪ್ರಾಣಿ ಸಂಕುಲಗಳ ಆತಂಕವನ್ನು ಎದ್ದು ಕಾಣಿಸುತ್ತಿತ್ತು.
ಸ್ಪೀಡ್ ಪೇಂಟಿಂಗ್ : ಜನಜಂಗುಳಿಯ ಮಧ್ಯೆ ಗುತ್ತಿನ ಮನೆಯ ಸೊಬಗನ್ನು ಹೆಚ್ಚಿಸುವ ರೀತಿಯಲ್ಲಿ ವೇದಿಕೆಯೊಂದು ಸಿದ್ಧವಾಗಿತ್ತು. ಕಲಾವಿದರು ತಮ್ಮ ತಮ್ಮ ಪ್ರತಿಭೆಯ ಅನಾವರಣಕ್ಕೆ ಇದು ಸಿದ್ಧವಾಗಿತ್ತು. ಪ್ರತಿಭಾನ್ವಿತ ಕಲಾವಿದೆ ಸ್ಪೀಡ್ ಪೇಂಟಿಂಗ್ ಮಾಡುತ್ತಾ ಜನರಾಶಿಯ ನಡುವಲ್ಲಿ ವಿಶೇಷ ಮೆರುಗನ್ನು ನೀಡುತ್ತಿದ್ದರು.
ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ : ಕಲಾಪರ್ಬದ ಕಾರ್ಯಕ್ರಮದಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. 2ನೇ ತರಗತಿಯಿಂದ 10ನೇ ತರಗತಿವರೆಗಿನ ವಿವಿಧ ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಸಂಯೋಜನೆ ಮಾಡಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ನೆರೆದು ಕಲಾ ಪರ್ಬದ ಯಶಸ್ಸಿಗೆ ಕಾರಣರಾಗಿದ್ದರು.
ನೃತ್ಯ ಕಲಾ ಪ್ರದರ್ಶನಗಳು : ವಿವಿಧ ಭಾಗದ ಹಲವು ಕಲಾತಂಡಗಳು ಇಲ್ಲಿ ಭಾಗವಹಿಸಿದ್ದವು.. ನಂದಗೋಕುಲ ಕಲಾ ತಂಡ., ಭರತಾಂಜಲಿ ನೃತ್ಯ ತಂಡ, ನೃತ್ಯಾಂಗನ ತಂಡ ಮತ್ತು ಗಾನ ನೃತ್ಯ ಅಕಾಡೆಮಿಯವರಿಂದ ಶಾಸ್ತ್ರೀಯ ನೃತ್ಯ ಸಂಯೋಜನೆ ಆಗಿರುವುದು ಕಣ್ಣಿಗೆ ಹಬ್ಬವಾಗಿತ್ತು. ಜೊತೆಗೆ ಎಲ್ಲಾಪುರದ ಬುಡಕಟ್ಟು ಜನಾಂಗದ ನೃತ್ಯ ಕೂಡ ಎಲ್ಲರ ಮನ ಸೆಳೆಯಿತು.
ಇದೇ ರೀತಿ ಕಲಾ ವಿಚಾರಗೋಷ್ಠಿಗಳು, ಸಂವಾದ, ಕಲಾ ಕಮ್ಮಟಗಳು ಭೌಧಿಕ ವಿಚಾರಗಳನ್ನು ಹೆಚ್ಚಿಸುವಲ್ಲಿ ಸಹಕಾರಿ ಆಯ್ತು.
ಶರಧಿ ಪ್ರತಿಷ್ಠಾನ (ರಿ) ಮಂಗಳೂರು ಎರಡು ದಿನಗಳ ಕಾಲ ಆಯೋಜಿಸಿದ...
ಚಿತ್ರ ನೃತ್ಯ ಮೇಳ
ಅಭಿವ್ಯಕ್ತಗೊಂಡ ಬಣ್ಣಗಳು
ಸರಿತೂಗಿಸಿಕೊಂಡ ಹೆಜ್ಜೆಗಳು
ಒಂದು ವಿಭಿನ್ನ ಲೋಕದ
ವಾಸ್ತವ ಅಮೂರ್ತ ಪಥಗಳನ್ನು
ಅಲೆ, ಅಲೆಯಾಗಿ ಹರಿಸಿತು ಎಂದರೆ ತಪ್ಪಾಗಲಾಗರದು...
ಇನ್ನು ಮುಂದಿನ ವರ್ಷದ ಕಲಾಪರ್ಬಕ್ಕಾಗಿ ಕಾಯುತ್ತಿರೋಣ....
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
*****************************************