-->
ಜೀವನ ಸಂಭ್ರಮ : ಸಂಚಿಕೆ - 174

ಜೀವನ ಸಂಭ್ರಮ : ಸಂಚಿಕೆ - 174

ಜೀವನ ಸಂಭ್ರಮ : ಸಂಚಿಕೆ - 174
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
          
ಮಕ್ಕಳೇ... ಜನವರಿ 26ನೇ ದಿನಾಂಕವನ್ನು ಗಣರಾಜ್ಯೋತ್ಸವ ದಿನವಾಗಿ ಆಚರಿಸುತ್ತೇವೆ. ಎಲ್ಲಾ ಗಣರಾಜ್ಯ ಹೊಂದಿರುವ ದೇಶಗಳು ಪ್ರಜಾಪ್ರಭುತ್ವ ದೇಶಗಳೇ. ಆದರೆ ಎಲ್ಲಾ ಪ್ರಜಾಪ್ರಭುತ್ವ ದೇಶಗಳು ಗಣರಾಜ್ಯವನ್ನು ಹೊಂದಿಲ್ಲ. ಭಾರತ ಗಣರಾಜ್ಯ ಅಂದರೆ ಒಕ್ಕೂಟ ವ್ಯವಸ್ಥೆಯ ಪ್ರಜಾಪ್ರಭುತ್ವ ದೇಶ. ದಿನಾಂಕ 26.1. 1950 ರಂದು ಸಂವಿಧಾನವನ್ನು ಅಂಗೀಕರಿಸಿದ ದಿನ. ಆ ದಿನದ ಸವಿನೆನಪಗಾಗಿ ನಾವು ಗಣರಾಜ್ಯೋತ್ಸವ ಹಾಗಾಗಿ ಈ ದಿನ ನಾವು ಸಂವಿಧಾನದ ಮಹತ್ವದ ಬಗ್ಗೆ ತಿಳಿದುಕೊಳ್ಳೋಣ.

ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲಿ ಸಂವಿಧಾನದ ಎಲ್ಲಾ ಪ್ರಮುಖ ಅಂಶಗಳು ವ್ಯಕ್ತವಾಗಿದೆ. ಇದನ್ನ ಭಾರತದ ಪ್ರಜೆಗಳಾದ ನಾವೇ ಒಪ್ಪಿ ಅಂಗೀಕರಿಸಿಕೊಂಡ ದಿನ. ಈ ದಿನ ಸಂವಿಧಾನ ರಚನೆಗೆ ಸಂಬಂಧಿಸಿದಂತೆ ಶ್ರಮಿಸಿದ ಮಹಾ ನಾಯಕರನ್ನು ಸ್ಮರಿಸುವ ದಿನ. ಭಾರತದ ಸಂವಿಧಾನ ಡಾ. ಬಿ ಆರ್ ಅಂಬೇಡ್ಕರ್ ಅವರ ಕರಡು ರಚನಾ ಸಮಿತಿಯ ಅಧ್ಯಕ್ಷತೆಯಲ್ಲಿ ರಚಿಸಿದ್ದು. ಸಂವಿಧಾನ ಅಂದರೆ ಕೇವಲ ಕಾನೂನು ಪುಸ್ತಕವಲ್ಲ, ಅಂದರೆ ನಿಯಮದ ಪುಸ್ತಕವಲ್ಲ. ಇದು ಭಾರತದ ಎಲ್ಲಾ ಪ್ರಜೆಗಳ ಸಂತೋಷದಿಂದ, ಘನತೆಯಿಂದ ಬದುಕಲು ಬೇಕಾದ ಎಲ್ಲಾ ನೀತಿ ನಿಯಮಗಳನ್ನು ಒಳಗೊಂಡಿದೆ. ಇದು ಕೇವಲ ಮನುಷ್ಯರಿಗೆ ಮಾತ್ರವಲ್ಲ, ಸಸ್ಯ ಹಾಗೂ ಪ್ರಾಣಿ ಸಂಪತ್ತುಗಳನ್ನು ಮತ್ತು ನಿಸರ್ಗ ಸಂಪತ್ತನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ನಮ್ಮ ಭಾರತದ ಸಂವಿಧಾನ ಲಿಖಿತ ಸಂವಿಧಾನ. ಹಲವು ದೇಶಗಳಲ್ಲಿ ಅಲಿಖಿತ ಸಂವಿಧಾನ ಜಾರಿಯಲ್ಲಿದೆ. ಭಾರತದ ಸಂವಿಧಾನದಲ್ಲಿ ಭಾರತದ ಯಾವೊಬ್ಬ ಪ್ರಜೆಗೂ ತಾರತಮ್ಯವಿಲ್ಲದೆ ಸಮಾನತೆಯನ್ನು ಘೋಷಿಸಿದೆ. ಬಹುತೇಕ ರಾಷ್ಟ್ರಗಳಲ್ಲಿ ನಿರ್ಧಿಷ್ಟ ವಯೋಮಾನದ ಎಲ್ಲರಿಗೂ ಸಮಾನ ಮತದಾನ ಮಾಡಲು ಅವಕಾಶ ಇರಲಿಲ್ಲ. ಶ್ರೀಮಂತರು, ಬಿಳಿಯರು, ಮೇಲ್ವರ್ಗದವರು. ಅವರಲ್ಲಿ ಪುರುಷರಿಗೆ ಮಾತ್ರ ಮತದಾನ ಮಾಡಲು ಅವಕಾಶ ಇತ್ತು. ಈಗ ಬಹುತೇಕ ಕಡೆ ಸುಧಾರಣೆ ಕಂಡು ಬಂದಿದೆ. ಆದರೆ ನಮ್ಮ ಭಾರತದ ಸಂವಿಧಾನ ಜಾರಿಗೆ ಬಂದ ನಂತರ ಮೊದಲ ಚುನಾವಣೆಯಲ್ಲಿ ನಿರ್ಧಿಷ್ಟ ವಯೋಮಾನ ಹೊಂದಿದ ಎಲ್ಲರಿಗೂ ಯಾವುದೇ ತಾರತಮ್ಯ ಇಲ್ಲದೆ ಪ್ರತಿಯೊಬ್ಬರು ಮತದಾನ ಮಾಡಲು ಅವಕಾಶ ಕಲ್ಪಿಸಿದೆ. ನಮ್ಮ ಸಂವಿಧಾನ ಜನಪ್ರತಿನಿಧಿಗಳ ಆಯ್ಕೆಯಲ್ಲಿ ಸರ್ವರಿಗೂ ಮತದಾನದ ಸಮಾನತೆಯನ್ನು ನಿಡಿದೆ. ಈ ಸಮಾನತೆಯನ್ನು ತರಲು ಸರ್ಕಾರಗಳು ಬಡವರಿಗೆ, ದೀನದಲಿತರಿಗೆ ಮೀಸಲಾತಿ ಇರಬಹುದು, ಸಬ್ಸಿಡಿಗಳು ಇರಬಹುದು, ಮನೆ ಇಲ್ಲದವರಿಗೆ ಮನೆ ನಿರ್ಮಿಸುವುದು, ವಸತಿಹೀನರಿಗೆ ವಸತಿ ಕಲ್ಪಿಸುವುದು, ಸಾಲ ಸೌಲಭ್ಯ ಇವುಗಳನ್ನೆಲ್ಲ ನೀಡುತ್ತಿರುವುದು, ನಮ್ಮ ಸಂವಿಧಾನದ ಆಶಯ ಸಮಾನತೆ ತರುವುದೇ ಆಗಿದೆ. ಇದು ನಮ್ಮ ಸಂವಿಧಾನದ ವಿಶೇಷತೆ. ನಮ್ಮ ಸಂವಿಧಾನದಲ್ಲಿ ಭಾರತವು ಜಾತ್ಯತೀತ ರಾಷ್ಟ್ರ ಎಂದು ಘೋಷಿಸಿದೆ. ಇದರ ಅರ್ಥ ಭಾರತ, ಭಾರತದಲ್ಲಿರುವ ಯಾವ ಧರ್ಮವು ಶ್ರೇಷ್ಠವಲ್ಲ. ಯಾವ ಧರ್ಮವು ಕನಿಷ್ಠವಲ್ಲ. ಯಾವ ಜಾತಿಯು ಮೇಲಲ್ಲ. ಯಾವ ಜಾತಿಯು ಕೀಳಲ್ಲ. ಹಾಗಾಗಿ ಜಾತಿಯ ಪ್ರಜ್ಞೆಯನ್ನು ಮರೆತು ಸಹ ಬಾಳ್ವೆ ಮಾಡಬೇಕೆನ್ನುವುದೇ ಇದರ ಉದ್ದೇಶ. ಪ್ರಜೆಗಳು ಸಹೋದರತ್ವ ,ಭ್ರಾತೃತ್ವದಿಂದ ಬದುಕಬೇಕೆಂದು ಹೇಳಿದೆ. ಬಡವ, ಬಲ್ಲಿದ, ಜಾತಿ, ಮತ, ಧರ್ಮ ಹಾಗೂ ಬಣ್ಣ ಯಾವುದರಿಂದಲೂ ತಾರತಮ್ಯ ಮಾಡುವಂತಿಲ್ಲ. ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು ಎಂಬುದು ನಮ್ಮ ಸಂವಿಧಾನದಲ್ಲಿ ಇರತಕ್ಕಂತ ಪ್ರಮುಖ ಅಂಶ. ಯಾವುದೇ ಹುದ್ದೆಯಲ್ಲಿರಲಿ ಆ ವ್ಯಕ್ತಿಗೂ, ತೀರ ಬಡತನದ ವ್ಯಕ್ತಿಗೂ ಒಂದೇ ನಿಯಮ.

ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆ. ಪ್ರಜಾಪ್ರಭುತ್ವ. ಇದರಲ್ಲಿ ಪ್ರಜೆಯೇ ಪ್ರಭುಗಳು. ಪ್ರಜೆಗಳು ತಮ್ಮ ನಾಯಕನನ್ನು ಚುನಾಯಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ನಾಯಕನಿಗೆ ನೀಡುತ್ತಾರೆ. ಅವರು ಪ್ರಜೆಗಳ ಹಿತ ಕಾಪಾಡುವುದು ಅವರ ಹೊಣೆ. ಹಾಗಾಗಿ ಪ್ರಜೆಗಳ ಹಿತಗೋಸ್ಕರ ಕಾನೂನುಗಳನ್ನು ರೂಪಿಸುತ್ತಾರೆ. ಈ ಕಾನೂನುಗಳನ್ನ ಅನುಷ್ಠಾನಗೊಳಿಸಲು ಕಾರ್ಯಾಂಗ ವ್ಯವಸ್ಥೆ ಇದೆ. ಕಾರ್ಯಾಂಗದಲ್ಲಾಗಲಿ ಅಥವಾ ರೂಪಿಸಿದ ಕಾನೂನಿನಲ್ಲಿ ಲೋಪದೋಷಗಳು ಕಂಡು ಬಂದಾಗ, ಅದನ್ನು ಸರಿಪಡಿಸಲು ನ್ಯಾಯಾಂಗ ಇದೆ. ನಮ್ಮ ಭಾರತದ ಸರ್ವೋಚ್ಚ ನ್ಯಾಯಾಲಯವನ್ನು ಸಂವಿಧಾನದ ರಕ್ಷಕ ಎಂದು ಪರಿಗಣಿಸಲಾಗಿದೆ. ಸಂವಿಧಾನದ ಮೂಲಭೂತ ಚೌಕಟ್ಟನ್ನು ಬದಲಾವಣೆ ಮಾಡಲು ಯಾರಿಗೂ ಸಾಧ್ಯವಿಲ್ಲ, ಹಾಗಂತ ಸರ್ವೋಚ್ಚ ನ್ಯಾಯಾಲಯದ ತೀರ್ಪಿದೆ. ಹಾಗಾಗಿ ಭಾರತದ ಸಂವಿಧಾನ ಅಷ್ಟು ಬಲಿಷ್ಠವಾಗಿದೆ. ಎಷ್ಟೋ ದೇಶಗಳ ಸಂವಿಧಾನ ಸಾಕಷ್ಟು ಸಲ ಬದಲಾಗಿದೆ. ಆದರೆ ಇಂದು ಭಾರತದ ಸಂವಿಧಾನ ಅಷ್ಟು ಬಲಿಷ್ಠವಾಗಿ ಇದೆ. ಇದು ಸರ್ವ ಜನರ ಸಂತೋಷದ ಬದುಕಿಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದೆ. ಘನತೆಯಿಂದ ಬದುಕುವ ಹಕ್ಕು, ಶಿಕ್ಷಣದ ಹಕ್ಕು, ಧರ್ಮದ ಆಚರಣೆ ಮತ್ತು ವಾಕ್ ಸ್ವಾತಂತ್ರ್ಯ ಮುಂತಾದ ಮೂಲಭೂತ ಹಕ್ಕುಗಳನ್ನು ನೀಡಿದೆ. ನಮ್ಮ ಸಂವಿಧಾನದಲ್ಲಿರುವ ನಿಯಮಗಳು ಪ್ರತಿಯೊಬ್ಬ ಪ್ರಜೆ ಸಂತೋಷದಿಂದ ಬದುಕಲು ಬೇಕಾದ ವ್ಯವಸ್ಥೆ ಮಾಡಿದೆ. ಸಂತೋಷದ ಬದುಕಿಗೆ ಚ್ಯುತಿ ಬಂದಾಗ ಅದನ್ನು ದಂಡಿಸುವ ಅಧಿಕಾರ ನ್ಯಾಯಾಂಗಕ್ಕೆ ನೀಡಿದೆ. ಉದಾಹರಣೆಗೆ ಸಮಾನತೆಯ ಹಕ್ಕು. ಇಲ್ಲಿ ಯಾವುದೇ ಪ್ರಜೆಯನ್ನು ಧರ್ಮ, ಭಾಷೆ, ಲಿಂಗ ವರ್ಣ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ. ಯಾವುದೇ ಸಾರ್ವಜನಿಕ ಸ್ಥಳಕ್ಕೆ ಪ್ರವೇಶ ನಿಷೇಧಿಸುವಂತಿಲ್ಲ. ಆ ರೀತಿ ಮಾಡಿದಲ್ಲಿ, ಮಾಡುವವರನ್ನು ದಂಡನೆಗೆ ಒಳಪಡಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಿದೆ. ಅದೇ ರೀತಿ ಶಿಕ್ಷಣದ ಹಕ್ಕು. ಬಡತನದ ಕಾರಣಕ್ಕೆ ಮಕ್ಕಳು ಶಿಕ್ಷಣದಿಂದ ವಂಚಿತರಾಗದೆ ಇರಲಿ ಎಂದು ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಜಾರಿಗೆ ತಂದಿತು. ಇದರಿಂದ 6 ರಿಂದ 14 ವರ್ಷದವರೆಗೆ ಶಿಕ್ಷಣವೂ. ಸರ್ಕಾರಿ ಸಂಸ್ಥೆಗಳಲ್ಲಿ ಉಚಿತವಾಗಿ ದೊರಕುತ್ತದೆ ಹಾಗೂ ಪ್ರತಿಯೊಂದು ಮಗು ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕಾಗಿರುತ್ತದೆ. ಶಿಕ್ಷಣ ದೊರಕದೆ ಇದ್ದಲ್ಲಿಸಂತೋಷದ ಬದುಕು ಸಾಧಿಸಲು ಸಾಧ್ಯವಿಲ್ಲ. ಸಮಾನತೆ ಇಲ್ಲದಿದ್ದಲ್ಲಿ ಸಂತೋಷದ ಬದುಕು ಸಾಧಿಸಲು ಸಾಧ್ಯವಿಲ್ಲ. ಇಂದು ರಾಜಕೀಯ ಸ್ವಾತಂತ್ರ ಬಹುತೇಕ ಎಲ್ಲರಿಗೂ ದೊರತಿದ್ದು. ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯ ಇನ್ನು ಪೂರ್ಣ ಪ್ರಮಾಣದಲ್ಲಿ ದೊರೆತಿರುವುದಿಲ್ಲ. ಅದೇ ರೀತಿ ಮಾತನಾಡುವ ಸ್ವಾತಂತ್ರ್ಯ ಇಲ್ಲದಿದ್ದಲ್ಲಿ ವ್ಯಕ್ತಿ ಸಂತೋಷದಿಂದ ಇರಲು ಸಾಧ್ಯವಿಲ್ಲ. ಹಾಗೆ ಆತ ತನಗೆ ಇಚ್ಛೆ ಪಟ್ಟ ಧರ್ಮವನ್ನು ಆಚರಿಸಲು, ಪೂಜಿಸಲು ಸ್ವತಂತ್ರತೆಯನ್ನು ನಮ್ಮ ಭಾರತದ ಸಂವಿಧಾನ ನೀಡಿದೆ. ಇದೆಲ್ಲ ಸುಂದರ ಬದುಕಿಗೆ ಬೇಕಾದಂತಹ ನಿಯಮಗಳು. ಎಲ್ಲರ ಬದುಕು ಚೆನ್ನಾಗಿರಲಿ ಅನ್ನುವ ಕಾರಣಕ್ಕಾಗಿ ಹಲವು ಮಿತಿಗಳನ್ನು ಏರಿದೆ. ಈಗ ವಾಕ್ ಸ್ವಾತಂತ್ರ ಇದೆ ಎಂದು ಇನ್ನೊಬ್ಬರಿಗೆ ನೋವುಂಟು ಮಾಡುವಂತೆ ಮಾತನಾಡುವಂತಿಲ್ಲ. ರಾಜ್ಯ ಸರ್ಕಾರಕ್ಕೂ ಹಲವು ಮಿತಿಗಳಿವೆ, ಕೇಂದ್ರ ಸರ್ಕಾರಕ್ಕೂ ಮಿತಿಗಳಿವೆ. ಕಾರ್ಯಾಂಗಕ್ಕೂ ಮಿತಿಗಳಿವೆ ಹಾಗೂ ಸರ್ವೋಚ್ಚ ನ್ಯಾಯಾಲಯ ಸೇರಿದಂತೆ ಎಲ್ಲಾ ನ್ಯಾಯಾಲಗಳಿಗೂ ಮಿತಿ ಇದೆ. ಆ ಮಿತಿ ದಾಟಿ ಯಾರು ವರ್ತಿಸುವಂತಿಲ್ಲ. ಮಿತಿ ಇಲ್ಲದೆ ಇದ್ದಲ್ಲಿ ಇನ್ನೊಬ್ಬರಿಗೆ ದೌರ್ಜನ್ಯ ಉಂಟುಮಾಡುವ ಸಂಭವ ಇರುತ್ತದೆ. ನಮ್ಮ ಸಂವಿಧಾನದ ಆಶಯ ಪ್ರತಿಯೊಬ್ಬ ಪ್ರಜೆ ಸಂತಸದಾಯಕವಾಗಿ ಬದುಕಬೇಕೆಂಬುದು. ಅದಕ್ಕಾಗಿ ನಮ್ಮ ಸಂವಿಧಾನ ಅನೇಕ ಹಂತದ ಪರಿಶೀಲನಾ ವ್ಯವಸ್ಥೆಯನ್ನು ಮಾಡಿದೆ. ಯಾವುದೇ ವ್ಯಕ್ತಿಯ ಮೇಲೆ ಆರೋಪ ಬಂದಲ್ಲಿ , ಕೆಲ ಹಂತದ ನ್ಯಾಯಾಲಯ ತಪ್ಪು ತೀರ್ಮಾನ ಕೈಗೊಂಡಾಗ. ಅದನ್ನು ಬಹು ಹಂತಗಳಲ್ಲಿ, ಕೊನೆಗೆ ಸರ್ವೋಚ್ಚ ನ್ಯಾಯಾಲಯದವರೆಗೆ ಹೋಗಿ ಸಾಬೀತುಪಡಿಸಲು ಅವಕಾಶ ಕಲ್ಪಿಸಿದೆ. ಅಂತ ಸಂವಿಧಾನವನ್ನ ಅನುಷ್ಠಾನಗೊಳಿಸಿದ ದಿನವನ್ನ ಸ್ಮರಿಸಲು ಸಿಕ್ಕಿದ ಅವಕಾಶದಲ್ಲಿ ಇದರ ಮಹತ್ವವನ್ನು ಅರಿತು, ಇದನ್ನು ಪಾಲಿಸುವ ಮೂಲಕ ಸಂತೋಷದ ಬದುಕನ್ನ ಸಾಗಿಸೋಣ.. ಅಲ್ಲವೆ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article