ಸ್ಫೂರ್ತಿಯ ಮಾತುಗಳು : ಸಂಚಿಕೆ - 146
Tuesday, January 7, 2025
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 146
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
ಭಾರತದಲ್ಲಿ ಕಲಬೆರಕೆ ಹೇರಳವಾಗಿದೆ. ನಮ್ಮ ರಕ್ತದ ಕಣ ಕಣವೂ ಕಲಬೆರಕೆ ಮತ್ತು ಭ್ರಷ್ಟಾಚಾರಮಯ. ದೇವಸ್ಥಾನದ ಪ್ರಸಾದವೂ ಲಾಭದ ಮೂಲವಾಗಿ ಕಲಬೆರಕೆ ಗೊಳಗಾಗುತ್ತಿರುವುದು ಧಾರ್ಮಿಕ ಶ್ರದ್ಧೆಯೂ ನಮಗಿಲ್ಲ. ಜೊತೆಗೆ ಭಗವಂತನ ಭಯವೂ ನಮಗಿಲ್ಲ ಎಂಬುದನ್ನು ಜಗಜ್ಜಾಹೀರುಗೊಳಿಸಿದೆ. ಇದರಿಂದಾಗಿ ಆಸ್ತಿಕ ಮನಸ್ಸುಗಳು ಕಂಗೆಡುತ್ತಿವೆ. ನಾನಾ ಸಂಘ ಸಂಸ್ಥೆಗಳು ಆಹಾರ ಮೇಳ ಮತ್ತು ಸಾವಯವ ಕೃಷಿಮೇಳಗಳನ್ನು ಸಂಘಟಿಸುವುದರೊಂದಿಗೆ ಸಾವಯವ ಆಹಾರದ ಬಳಕೆಯ ಅಗತ್ಯ ಮತ್ತು ಸಾವಯವ ಕೃಷಿಯ ಅನಿವಾರ್ಯತೆಯ ಕುರಿತಾದ ಜನಜಾಗೃತಿ ಅಭಿಯಾನ ಆರಂಭಿಸಿರುವುದು ಸಂತಸದಾಯಕ ಬೆಳವಣಿಗೆ. ಭ್ರಷ್ಟ ಲಾಭಕೋರರನ್ನು ಮಟ್ಟಹಾಕಿ ಜನಜೀವನವನ್ನು ಆರೋಗ್ಯಕರಗೊಳಿಸಲು ಈ ಮೇಳಗಳು ಯಶಸ್ವಿಯಾದರೆ ಸಂಘಟಕರ ಪುಣ್ಯಕೋಠಿ ಬೆಳೆಯುವುದರಲ್ಲಿ ಅನುಮಾನವಿಲ್ಲ.
ಜನವರಿ 2025ರ ನಾಲ್ಕು ಮತ್ತು ಐದರಂದು ಮಂಗಳೂರಿನ ಸಂಘನಿಕೇತನದಲ್ಲಿ ಗೆಡ್ಡೆಗೆಣಸು, ಸೊಪ್ಪು ತರಕಾರಿಗಳ ಮೇಳವೊಂದು ಜರಗಿತು. ಈ ಮೇಳದಲ್ಲಿ ಧ್ವನಿಸಿದ ಹಾಡೊಂದು ನನಗೆ ಅಪ್ಯಾಯಮಾನವೆನಿಸಿತು. ನಮ್ಮ ಮಕ್ಕಳಿಗೂ ಈ ಹಾಡು ಸ್ಫೂರ್ತಿ ನೀಡಲಿ ಎಂಬ ಆಶಯದೊಂದಿಗೆ ಹಾಡಿನೊಂದಿಗೆ ಪುಟ್ಟ ವಿಮರ್ಶೆಯನ್ನೂ ನೀಡಿದ್ದೇನೆ.
ಹಾಡಿನ ಶಿರೋನಾಮೆ : ನಿಮಗಿದರ ಅರಿವಿರಲಿ
ಸಾರ್ಥಕತೆ ಪಡಯೋಣ ಸಾವಯವ ಕೃಷಿಯಲ್ಲಿ
ಬೆಳೆಸುತ್ತಲುಳಿಸೋಣ ನಾಳೆಗಿನಿತು |
ಕಂದಮೂಲವನಿಂದು ಜತನದಿಂ ಕಾಪಿಡುವ
ವಸುಧೆಯೊಳ ನಿಧಿಯಿದುವೆ ಗೆಡ್ಡೆ ಗೆಣಸು ||
ವಿಕಸನದ ಹಾದಿಯಲಿ ವಿಷವುಂಡು ತೇಗಿದರೆ
ಹಸನು ದೇಹಕೆ ರೋಗ ಮುತ್ತಬಹುದು |
ಬಣ್ಣಗಳು ನಂಜಾಗಿ ಬಾಳನೆ ನುಂಗಲದು
ಸಣ್ಣ ತಪ್ಪಿಗೂ ಜೀವ ಹೋಗಬಹುದು ||
ಕೈತೋಟದಲ್ಲಿನಿತು ತರಕಾರಿ ಬೆಳೆದುಬಿಡಿ
ಎಲೆಯರಿವು ನಿಮಗಿರಲು ಆರೋಗ್ಯವು |
ಎಳೆಯ ಮಕ್ಕಳಿಗಿದರ ಪಾಠವನು ಹೇಳಿಕೊಡಿ
ಪಕ್ಕದಲ್ಲೊಂದಿರಲಿ ಜೇನುಗೂಡು ||
ಅಮೃತಧಾರೆಯ ಹರಿಸಿ ಗೋ ಮಾತೆ ಸಲಹುವಳು
ಅವಳ ರಕ್ಷಣೆಯ ಹೊಣೆ ಹೆಗಲಿಗಿರಲಿ |
ಸೆಗಣಿ ಗಂಜಳ ಬಳಸಿ ಬೆವರಿಳಿಸಿ ದುಡಿದಾಗ
ಮರುಭೂಮಿಯು ಹಸುರಾಗಿ ನಗುತಲಿರಲಿ ||
ಅರಿವಿರಲಿ ಹರಿವೆಯದು ಒಂದೆಲಗ ಚಗತೆಯದು
ಮೆಂತೆ ಸೊಪ್ಪಿನಲಿಹುದು ನಾರಿನಂಶ |
ಕೆಸು ಕೋಸು ಗೆಡ್ಡೆಗಳ ಪರಿಜ್ಞಾನವೆಮಗಿರಲು
ಆರೋಗ್ಯ ಹಂದರವೆ ಜೀವಕೋಶ ||
ಸುವರ್ಣ ಗೆಡ್ಡೆಯಲಿ ಪೋಷಕವು ಭರಪೂರ
ಸ್ಥೂಲಕಾಯವದಿರದೆ ದೇಹ ಹಗುರ |
ಕರುಳಿನಾ ಸುಸ್ಥಿತಿಯ ಕೆಡದಂತೆ ಕಾಯುವುದು
ತ್ವಚೆ ಹೊಳಪದೇರುತಿರೆ ಮುಪ್ಪು ದೂರ ||
ಸಿಹಿ ಗೆಣಸಲಡಗಿಹುದು ಹೇರಳದಿ ಖನಿಜಾಂಶ
ಬಜ್ಜಿ ಪಾಯಸ ಪಲ್ಯ ಆಹಾ ರುಚಿಯು |
ಮಧುಮೇಹ ಬರದಂತೆ ನಮ್ಮೊಡಲ ಕಾಯುವುದು
ರೋಗವನು ತಡೆಯುವುದು ಈ ಗೆಡ್ಡೆಯು ||
ಔಷಧಿಯ ಗುಣವುಳ್ಳ ಸೊಪ್ಪು ಗೆಡ್ಡೆಯ ಖಾದ್ಯ
ಸವಿರುಚಿಯ ಸವಿದೊಮ್ಮೆ ನಗೆಯ ಚೆಲ್ಲಿ
ಹಲವಿಧದ ತಿನಿಸುಗಳು ನಿಮಗಾಗಿ ಕಾದಿಹುದು
ಕೃಷಿಕ ಗ್ರಾಹಕರ ಧ್ಯೇಯ ಜಾತ್ರೆಯಲ್ಲಿ ||
ಈ ಕವನದ ಲೇಖಕಿಯನ್ನು ಓದುಗರಿಗೆ ಪರಿಚಯಿಸಿಯೇ ವಿಮರ್ಶೆ ಆರಂಭಿಸಿದರೆ ಸೊಗಸಲ್ಲವೇ... ಕಾಸರಗೋಡು ತಾಲೂಕಿನ ಮುಳ್ಳೇರಿಯಾ ವ್ಯಾಪ್ತಿಯ ಕಾರ್ಲೆ ಮನೆಯವರಾದ ಶ್ರೀಮತಿ ಸೌಮ್ಯಲತಾ. ಕವನದ ರಚಯಿತೆ. ಬರವಣಿಗೆಗಳಲ್ಲಿ ಅವರು ಬಳಸುವ ನಾಮಧೇಯ *ಸೌಮ್ಯಗುರು ಕಾರ್ಲೆ*. ಇವರ ಪತಿ ಶ್ರೀಯುತ ನಾರಾಯಣ ಭಟ್. *ಗುರು* ಎಂದು ಪರಿಚಿತರು. ಕವಯಿತ್ರಿಯನ್ನು ಪರಿಚಯಿಸುವಾಗ ಭಾವಚಿತ್ರವೂ ಅವರ ಭಾವನೆಗೆ ದರ್ಪಣವಾಗುತ್ತದೆ.
ಚೌಪದಿ ಛಂದೋ ಗುಣದ ಎಂಟು ಚರಣಗಳಿರುವ ಈ ಸುಂದರ ಹಾಡು ಆಲಿಸಲು ರಂಜನೀಯ. ನುಡಿಸಲು ಸುಲಲಿತ ಹಾಗೂ ಅರ್ಥೈಸಲು ಸಲೀಸು. ಸಾವಯವ ಸಂಬಂಧಿ ಕಾರ್ಯಕ್ರಮಗಳಲ್ಲಿ ಸುಶ್ರಾವ್ಯವಾಗಿ ಹಾಡಲು ಹೇಳಿ ಮಾಡಿಸಿದಂತಿರುವ ಸಾವಯವ ಕಂದಮೂಲಗಳು ಮತ್ತು ಸೊಪ್ಪು ತರಕಾರಿಗಳು ಮಾನವನಿಗೆ ಯಾವ ರೀತಿಯಲ್ಲೆಲ್ಲಾ ಪೋಷಕಾಂಶಯುಕ್ತ ಆಹಾರವಾಗಿದೆಯೆಂಬುದನ್ನು ಹಾಡಿನಲ್ಲಿ ಬಹಳ ಮನೋಜ್ಞವಾಗಿ ತಿಳಿಸಿದ್ದಾರೆ. ಸಾವಯವ ಗೊಬ್ಬರಗಳಿಗೆ ಹೇತುವಾಗಿರುವ ಗೋವುಗಳಿಗೂ ಸೊಪ್ಪು ತರಕಾರಿಗಳು ಮೇವಾಗುತ್ತವೆ ಎಂಬುದನ್ನು ಸೋದರಿ ಸೌಮ್ಯ ಗುರು ಕಾರ್ಲೆ ಮಾರ್ಮಿಕವಾಗಿ ನೆನಪಿಸಿದ್ದಾರೆ.
ಸೊಪ್ಪು ಪಲ್ಲೆಗಳು ಮತ್ತು ಗೆಡ್ಡೆಗೆಣಸುಗಳು ಭೂಗರ್ಭದೊಳಗಿನ ನಿಧಿಗಳು. ಅವು ನಮ್ಮ ಆರೋಗ್ಯ ರಕ್ಷಕಗಳು. ಸಾವಯವ ಗೊಬ್ಬರ ಬಳಸಿ ಗೆಡ್ಡೆ ಸೊಪ್ಪು ತರಕಾರಿಗಳ ಕೃಷಿ ಮಾಡಿದರೆ ಇವು ಬದುಕಿಗೆ ತಾರಕವಾಗುವ ವಿವಿಧ ಸಂದರ್ಭಗಳು ಹಾಡಿನಲ್ಲಿ ಅಲ್ಲಲ್ಲಿ ಪ್ರಸ್ತಾಪವಾಗಿವೆ. ವಿಕಸನದ ಹೆಸರಿನಲ್ಲಿ ವರ್ಣಸಂಕರಗಳಿಗೊಳಗಾದ, ವಿವಿಧ ಬಣ್ಣ ಮತ್ತು ಬಲು ಗಾತ್ರಗಳಿಂದ ಮೋಹಕವಾಗಿ ಕಂಗೊಳಿಸುವ ತರಕಾರಿಗಳು ಹಸನಾದ ದೇಹದಲ್ಲಿ ರೋಗಗಳನ್ನು ಹರಡಿ ಪ್ರಾಣಹರಣ ಮಾಡಬಹುದಾದ ಭಯವೂ ಕವನದ ಇಂಗಿತವಾಗಿರುವುದು ಓದುಗರಿಗೆ ಜ್ಞಾನ ಪೋಷಕ ಜತೆಗೆ ಜಾಗೃತಿ ಪ್ರೇರಕ. ಸೊಪ್ಪು ಕೋಸುಗಳ ನಾರಿನ ಗುಣ, ಸ್ಥೂಲದೇಹವನ್ನು ಸ್ಫುರದ್ರೂಪಗೊಳಿಸುವ ಗೆಡ್ಡೆ ಗೆಣಸುಗಳ ತಾಕತ್ತು ಸಾವಯವದಲ್ಲಿ ಮಾತ್ರವೇ ಸಂಪನ್ನವಾಗಿರುತ್ತದೆ ಎನ್ನುವ ಕವಯಿತ್ರಿಯ ವಾದ ಮತ್ತು ಸಾವಯವದ ಬಗೆಗಿನ ಅವರ ತುಮುಲ ನಮ್ಮನ್ನೂ ಸಾವಯವ ಕಾರ್ಷಿಕ ಲೋಕಕ್ಕೆ ಸೆಳೆಯುತ್ತದೆ. ಮಕ್ಕಳಿಗೆ ಸಾವಯವ ಸೊಪ್ಪು ತರಕಾರಿಗಳ ಪರಿಚಯ ಮಾಡುತ್ತಾ ಇತರೆ ತರಕಾರಿಗಳನ್ನೂ ಬೆಳೆಸಬೇಕೆಂಬ ಅವರ ಸಂದೇಶ ಮತ್ತು ಕಾಳಜಿ ಅನನ್ಯವಾದುದು. ಕೈತೋಟ ದೊಳಗೆ ಜೇನು ಸಾಕಣೆ ಮಾಡಿ ಶುದ್ಧಜೇನು ಪಡೆಯಲು ಸಾಧ್ಯ. ಜೇನು ಔಷಧಿಗೆ ಬೇಕು. ಅದು ಆರೋಗ್ಯವರ್ಧಕ ಮತ್ತು ಗಳಿಕೆಯ ಹಾದಿಯೂ ಸುಗಮ ಎಂದು ನೆನಪಿಸಲು ಶ್ರೀಮತಿ ಸೌಮ್ಯ ಗುರು ಕಾರ್ಲೆಯವರು ಮರೆಯಲಿಲ್ಲ. ನಮಗೆ ಎಲ್ಲ ವಿಧದ ಸೊಪ್ಪು, ಕಾಯಿ ಪಲ್ಲೆ ಹಾಗೂ ಗೆಡ್ಡೆ ಗೆಣಸುಗಳ ಜ್ಞಾನವಿದ್ದರೆ ಕಾಯಿಲೆ ಮಾರು ದೂರವಿರುತ್ತದೆ. ಸಕ್ಕರೆ ಕಾಯಿಲೆಯ ತಡೆಗೆ ತರಕಾರಿಗಳ ಬಳಕೆಯೇ ಉಚ್ಛ ಮಾರ್ಗ, ಚರ್ಮ ಕಾಂತಿ ವರ್ಧನೆಗೆ, ಕರುಳಿನ ಕಾಯಿಲೆಗಳ ನಿಯಂತ್ರಣಕ್ಕೆ. ಮುಪ್ಪಿ ದೂರೀಕರಣಕ್ಕೆ ಸುವರ್ಣಗೆಡ್ಡೆ ಬಳಸ ಬೇಕೆಂಬ ಕವಯಿತ್ರಿಯ ಸಲಹೆಯನ್ನು ವೈದ್ಯಕೀಯ ಶಾಸ್ತ್ರವೂ ಸಮ್ಮತಿಸಿದೆಯೆಂಬುದನ್ನು ನಾವು ಮರೆಯ ಬಾರದು. ಸಿಹಿ ಗೆಣಸಿನ ಬಳಕೆಯ ಬಗ್ಗೆ ಹೇಳುತ್ತಾ, “ಆಹಾ, ರುಚಿಯದು” ಎನ್ನುವಾಗ ಹೊಟ್ಟೆ ತುಂಬಿದವರ ಬಾಯಲ್ಲೂ ನೀರೂರಬಹುದು. ಕವನದ ಶೈಲಿಯಲ್ಲಿ ಇರುವ ಇಂತಹ ಜೀವಂತಿಕೆಯ ನಿರೂಪಣೆಗಳು ಓದುಗರ ಮನಸ್ಸನ್ನು ಸೆರೆ ಹಿಡಿಯುತ್ತದೆ. ಸಾವಯವ ಸೊಪ್ಪು ಮತ್ತು ಗೆಡ್ಡೆ ಮೇಳದಲ್ಲಿ ಬೇರೆ ಬೇರೆ ಖಾಧ್ಯ ತಿಂದು ಆನಂದಾನುಭೂತಿ ಪಡೆಯಿರೆನ್ನುವ ಸೌಮ್ಯರವರ ವಿನಂತಿ ಸಾವಯವದೊಳಗೆ ಹುದುಗಿರುವ ಅಹ್ಲಾದಕರವಾದ ಸರ್ವ ಸದ್ಗುಣಗಳನ್ನೂ ಮನನ ಮಾಡುತ್ತದೆ.
ಸಮಾಜ ಹಿತ ಚಂತನೆಯ ಕವನವಿದು. ದೈಹಿಕ ಸೊಬಗು, ಆರೋಗ್ಯಗಳ ರಕ್ಷಣೆ ಮತ್ತು ಅರ್ಜನೆಗಳಿಗೆ ಸಾವಯವ ಕೃಷಿಯೇ ಪರಿಹಾರವೆಂಬ ಭರವಸೆ ನೀಡುವ ಕವನ. 'ನಿಮಗಿದರ ಅರಿವಿರಲಿ' ಈ ಕವನದ ಮೂಲಕ ಪರಿಸರ ಉಳಿವಿನ ಭಾವನೆಯನ್ನು ಓದುಗರ ಮನದಲ್ಲಿ ಬಿತ್ತಿ, ಸೃಷ್ಟಿಸಿ ಬೆಳೆಸಬೇಕೆನ್ನುವ ಸದಾಶಯವನ್ನು ಕವಯಿತ್ರಿ ಹೊಂದಿದ್ದಾರೆನ್ನುವುದು ಮುಕ್ತ ಸತ್ಯ. ಆರೋಗ್ಯ ಮತ್ತು ಸಾವಯವದ ನಡುವಿನ ನಂಟನ್ನು ಬಹಳ ಚೆನ್ನಾಗಿ ಪ್ರತಿಪಾದಿಸಿದ್ದಾರೆ. ಸಾವಯವ ಸಾವನ್ನೂ ದೂರ ದೂರಕ್ಕೆ ಒಯ್ಯುತ್ತದೆ ಎಂಬ ನೋಟವಿದೆ ಸಾವಯವ ಕೃಷಿಯಾಧಾರಿತ ಬದುಕು ಎಲ್ಲರದಾಗಿರಬೇಕೆಂಬ ಕವಯಿತ್ರಿಯ ಮನೋಭಾವ ಅನುಸರಣೀಯ ಮತ್ತು ಆದರಣೀಯ. ಅವರ ಮನೋಭಾವ ನಮ್ಮೆಲ್ಲರಲ್ಲೂ ಬಲಿತರೆ ಕಾರ್ಲೆಯವರ ಶ್ರಮ ಸಾರ್ಥಕ. ಚಿಕ್ಕ ಕವನದ ಮೂಲಕ ವಿಸ್ತೃತ ಜ್ಞಾನವನ್ನು ನೀಡಿರುವ ಕವಯಿತ್ರಿಯ ಪ್ರಯತ್ನಕ್ಕೆ ಜೋರಾದ ಚಪ್ಪಾಳೆಗಳಿರಲಿ.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************