ಹೀಗೊಂದು ಮಾದರಿ ತ್ಯಾಜ್ಯ ನಿರ್ವಹಣೆ
Monday, December 16, 2024
Edit
ಮಕ್ಕಳ ಜಗಲಿಯಲ್ಲಿ
ವಿಶೇಷ ಲೇಖನ : ಹೀಗೊಂದು ಮಾದರಿ ತ್ಯಾಜ್ಯ ನಿರ್ವಹಣೆ
ಲೇಖನ : ವಿದ್ಯಾ ಕಾರ್ಕಳ
ಪ್ರಭಾರ ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಕಿರಿಯ
ಪ್ರಾಥಮಿಕ ಶಾಲೆ. ಹೊಸಪಟ್ಣ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
"ತಟ್ಟೆ ಇಲ್ಲಿ ಕೊಡಿ", ಸ್ವರ ಕೇಳಿ ಏನೋ ಯೋಚನೆಯ ಗುಂಗಲ್ಲಿ ಇದ್ದವಳು ಗಕ್ಕನೆ ತಲೆ ಮೇಲೆತ್ತಿದೆ. ಓರ್ವ ಮಧ್ಯ ವಯಸ್ಸಿನ ಪುರುಷರು ನನ್ನ ಕೈಯಲ್ಲಿದ್ದ ಊಟ ಮಾಡಿ ಖಾಲಿಯಾದ ಅಡಕೆ ಹಾಳೆಯ ತಟ್ಟೆಯನ್ನು ತೆಗೆದುಕೊಂಡು ದೊಡ್ಡದಾದ ಕಪ್ಪು ಪ್ಲಾಸ್ಟಿಕ್ ಕವರ್ ಒಳಗೆ ಹಾಕಿದರು. ಆ ಪ್ಲಾಸ್ಟಿಕ್ ಕವರನ್ನು ಏಳೋ - ಎಂಟೋ ತರಗತಿಯಂತೆ ಕಾಣ್ತಿದ್ದ ಇಬ್ಬರು ವಿದ್ಯಾರ್ಥಿಗಳು ಹಿಡಿದುಕೊಂಡಿದ್ದರು. ನಾನು ತಟ್ಟೆ ಕೊಟ್ಟು ಅಲ್ಲೇ ಹತ್ತಿರವಿದ್ದ ನಳದಲ್ಲಿ ಎಂಜಲು ಕೈಯನ್ನು ತೊಳೆದುಕೊಂಡು, ಬ್ಯಾಗಲ್ಲಿದ್ದ ಕರ್ಚೀಫ್ ತೆಗೆದು ಕೈ ಒರೆಸುತ್ತ ಅಲ್ಲೇ ನಿಂತಿದ್ದೆನು. ನನ್ನ ಕೈಯಿಂದ ಊಟದ ತಟ್ಟೆ ತೆಗೆದುಕೊಂಡವರು ಊಟ ಮಾಡಿ ಬಂದಂಥಹ ಪ್ರತಿಯೊಬ್ಬರಿಗೂ ತಟ್ಟೆಯಲ್ಲಿ ಉಳಿದ ಊಟ ಹಾಕಬೇಕಾದ ಕಸದ ಬುಟ್ಟಿಯನ್ನು ತೋರಿಸುತ್ತಾ ತಟ್ಟೆಯನ್ನು ಇತ್ತ ಕೊಡಲು ಹೇಳುತ್ತಿದ್ದುದು ನಾನು ನಿಂತಲ್ಲೆ ಕಾಣಿಸುತ್ತಿತ್ತು. ಇದು 2024 ರ ಡಿಸೆಂಬರ್ 6 ರಂದು ಬೆಳ್ತಂಗಡಿ ತಾಲೂಕಿನ ಹೋಲಿ ರಿಡೀಮರ್ ಶಾಲೆಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಊಟೋಪಚಾರದಲ್ಲಿ ಕಂಡುಬಂದ ನೋಟ.
ಊಟ ಮುಗಿಸಿ ತಟ್ಟೆಯಿಟ್ಟು ಕೈತೊಳೆಯಲು ಬರುತ್ತಿದ್ದ ಪ್ರತಿಯೊಬ್ಬರನ್ನೂ ಗಮನಿಸಿ, ಅವರಿಗೆ ತಟ್ಟೆಯಿಂದ ಉಳಿಕೆ ಆಹಾರ ಸೂಕ್ತವಾಗಿ ವಿಂಗಡಿಸಲು ಸೂಚಿಸಿ ಖಾಲಿಯಾದ ಅಡಿಕೆ ಹಾಳೆಯ ತಟ್ಟೆಯನ್ನು ಪ್ರತ್ಯೇಕ ಸಂಗ್ರಹಿಸುತ್ತಿದ್ದ ಈ ರೀತಿ ನನ್ನನ್ನು ಸೆಳೆಯಿತು. ನಾನು ಇನ್ನೂ ಒಂದೈದು ನಿಮಿಷ ಅಲ್ಲೇ ನಿಂತು ಇದನ್ನು ನೋಡುತ್ತಿದ್ದೆ. ಹೀಗೆ ವಿಂಗಡಿಸುತ್ತಿದ್ದ ವ್ಯಕ್ತಿಯನ್ನು ನಾನು ಕುತೂಹಲದಿಂದ ಮಾತಿಗೆಳೆದೆ. ನೀವು ಈ ಶಾಲೆಯ ಶಿಕ್ಷಕರೋ, ಪೋಷಕರೋ ಎಂದು ಕೇಳಿದಾಗ, ತನ್ನ ಅವಳಿ -ಜವಳಿ ಇಬ್ಬರು ಮಕ್ಕಳು ಇಲ್ಲಿಯೇ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಒಂದನೇ ತರಗತಿಯಲ್ಲಿ ಕಲಿಯುತ್ತಿರುವರು ಎಂದರು. ನಾನು ಕೇಳಿರುವುದಕ್ಕೆ ಚುಟುಕಾಗಿ ಉತ್ತರಿಸುತ್ತಿದ್ದ ಇವರ ಗಮನವೆಲ್ಲ ಊಟ ಮಾಡಿ ಬರುತ್ತಿದ್ದವರ ಕೈಯಲ್ಲಿರುವ ತಟ್ಟೆಯತ್ತಲೇ ಇರುವುದನ್ನು ನಾನು ಗಮನಿಸಿದೆ. ನಾನು ನಿಂತು ಇವರ ಜೊತೆ ಒಂದೆರೆಡು ಮಾತನಾಡುತ್ತಿದ್ದರೂ ಇವರು ಊಟ ಮಾಡಿ ಬಂದ ಯಾರೊಬ್ಬರನ್ನೂ ಮಿಸ್ ಮಾಡದೇ ತಟ್ಟೆಯಿಂದ ಉಳಿಕೆ ಆಹಾರ ವಿಂಗಡಿಸಲು, ಮಜ್ಜಿಗೆ ಕುಡಿದ ಕಾಗದದ ಲೋಟ ಪ್ರತ್ಯೇಕವಾಗಿ ಹಾಕಲು ಸೂಚಿಸುತ್ತಿದ್ದರು. ಅಲ್ಲೇ ಬದಿಯಲ್ಲಿ ತೆರೆದೇ ಇಟ್ಟಂಥಹ ನಾಲ್ಕೈದು ಕಸದ ಡ್ರಮ್ ಗಳನ್ನು ನಾನು ಹೀಗೇ ಒಮ್ಮೆ ಇಣುಕಿ ನೋಡಿದೆ. ನಾಲ್ಕೈದು ಡ್ರಮ್ ಗಳಲ್ಲೂ ತಟ್ಟೆಯಲ್ಲಿ ಉಳಿದ ಆಹಾರ ಪದಾರ್ಥವಿತ್ತೇ ವಿನ: ಒಂದೇ ಒಂದು ಮಜ್ಜಿಗೆ ಲೋಟವಾಗಲೀ, ಟಿಶ್ಯೂ ಪೇಪರಾಗಲೀ ಇದ್ದಿರಲಿಲ್ಲ.
ವಿದ್ಯಾರ್ಥಿಗಳು, ಶಿಕ್ಷಕರು, ಹಿರಿಯರು, ಅತಿಥಿಗಳು ಹೀಗೆ ಯಾರೇ ಊಟ ಮುಗಿಸಿ ಕೈಯಲ್ಲಿ ತಟ್ಟೆ ಹಿಡಿದು ಬಂದರೆಂದರೆ ಪ್ರತಿಯೊಬ್ಬರಿಗೂ ಈ ಖಾಲಿತಟ್ಟೆಯ ಸೂಕ್ತ ವಿಲೇವಾರಿ ಬಗ್ಗೆ ಚಕಚಕನೆ ಸೂಚನೆ ಕೊಡುತ್ತಿದ್ದರು. ಹೋಲಿ ರಿಡಿಮರ್ ಆಂಗ್ಲ ಮಾಧ್ಯಮ ಶಾಲೆಯ ಪೋಷಕರಾದ ಅಲ್ವಿನ್ ರವರು ಬಳಸಿದ ಊಟದ ತಟ್ಟೆಗಳನ್ನು ಸೂಕ್ತ ರೀತಿಯಲ್ಲಿ ವಿಂಗಡಿಸಿ ವಿಲೇವಾರಿ ಮಾಡುವಾಗ ಆ ಶಾಲೆಯ ನಾಲ್ಕೈದು ಮಂದಿ ಶಿಕ್ಷಕಿಯರೂ ಬೆಂಬಲವಾಗಿ ಅಲ್ಲಿಯೇ ನಿಂತಿದ್ದರು. ಊಟ ಮುಗಿಸಿ ತಟ್ಟೆ ಹಿಡಿದು ಬಂದವರಿಗೆ ತಟ್ಟೆಯಲ್ಲಿ ಉಳಿದ ಅಲ್ಪಸ್ವಲ್ಪ ಆಹಾರವನ್ನು ಅಲ್ಲಿ ಇಟ್ಟಂತಹ ಹಸಿಕಸದ ಬುಟ್ಟಿಗಳಲ್ಲಿಯೇ ಚೆಲ್ಲಲು ಸೂಚಿಸುತ್ತಿದ್ದರು. ಈ ರೀತಿಯಲ್ಲಿ ಕಾರ್ಯಕ್ರಮದ ಊಟೋಪಚಾರದ ಸೂಕ್ತ ತ್ಯಾಜ್ಯ ನಿರ್ವಹಣೆಯನ್ನು ಸ್ವಉಮೇದಿನಿಂದ ಮಾಡಲು ಮುಂದಾದವರು ತಮ್ಮ ಶಾಲೆಯ ಪೋಷಕರಾದ ಅಲ್ವಿನ್ ರವರು ಎಂದು ಅಲ್ಲಿಯ ಶಿಕ್ಷಕರು ನನ್ನಲ್ಲಿ ಹೇಳಿದರು. ನಾನು ಏನೇ ಮಾತಾಡುತ್ತಿದ್ದರೂ ಅಲ್ವಿನ್ ರವರ ಗಮನ ಪೂರ್ತಿಯಾಗಿ ಊಟ ಮಾಡಿ ಬಂದವರ ಕೈಯಲ್ಲಿನ ತಟ್ಟೆಯ ಮೇಲೆ ಇದ್ದುದು ನೋಡಿ ಅವರ ಈ ಕಾರ್ಯಕ್ಕೆ ನನ್ನ ಮಾತುಗಳಿಂದ ಅಡೆತಡೆಯಾಗುವುದು ಬೇಡವೆಂದು ಅಲ್ಲಿಂದ ಆ ಕೂಡಲೇ ಹೊರಡುವ ನಿರ್ಧಾರ ಮಾಡಿದೆನು. ಆಗಲೇ ಅಲ್ಲಿ ಮೂರು ದೊಡ್ಡ ಕಪ್ಪುಬಣ್ಣದ ತ್ಯಾಜ್ಯ ವಿಲೇವಾರಿಯ ಲಕೋಟೆಗಳಲ್ಲಿ ಊಟಕ್ಕೆ ಬಳಸಿ ಖಾಲಿಯಾದ ಅಡಿಕೆ ತಟ್ಟೆಗಳನ್ನು ತುಂಬಿಸಿ ಕಟ್ಟೆ ಇಟ್ಟಿರುವುದನ್ನು ಗಮನಿಸಿದೆ. ನಾಲ್ಕೈದು ಕಸದ ಬುಟ್ಟಿಗಳಲ್ಲಿ ಪ್ರತ್ಯೇಕವಾಗಿ ಎಲ್ಲರ ಊಟದ ತಟ್ಟೆಯ ಉಳಿಕೆ ಆಹಾರವು ಸಂಗ್ರಹವಾಗಿತ್ತು. ಮಜ್ಜಿಗೆ ಕುಡಿದ ಕಾಗದದ ಲೋಟಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದನ್ನೂ ಗಮನಿಸಿದೆನು. ನಾನು ಅಲ್ಲಿ ಐದೋ - ಹತ್ತೋ ನಿಮಿಷ ನಿಂತಾಗ ಊಟ ಮಾಡಿದವರು ಒಬ್ಬೊಬ್ಬರಾಗಿ ಬರುತ್ತಿದ್ದರೆ, ಹೊರಡುವಾಗ ನಾಲೈದು ಮಂದಿ ಒಟ್ಟೊಟ್ಟಿಗೇ ಊಟ ಮುಗಿಸಿ ಬರಲಾರಂಭಿಸಿದರು. ಎಷ್ಟೇ ಮಂದಿ ಒಟ್ಟಿಗೆ ಬಂದರೂ ಅಲ್ಲಿ ಒಬ್ಬರ ತಟ್ಟೆಯೂ ಸೂಕ್ತ ವಿಲೇವಾರಿಗೆ ತಪ್ಪಿ ಹೋಗದ ರೀತಿಯಲ್ಲಿ ಅವರು ಕಣ್ಣಲ್ಲಿ ಕಣ್ಣಿಟ್ಟು ಜಾಗ್ರತೆ ವಹಿಸಿದ ದೃಶ್ಯ ಈ ಕಾರ್ಯಕ್ರಮ ಕಳೆದು ವಾರವಾದರೂ ನನ್ನ ಮನ:ಪಟಲದಲ್ಲಿ ಹಾಗಯೇ ಅಚ್ಚೊತ್ತಿದೆ.
ಊಟದ ವ್ಯವಸ್ಥೆಯಿದ್ದ ಕಡೆಯಿಂದ ಹೊರಟು ಕಾರ್ಯಕ್ರಮ ಆಗುತ್ತಿರುವ ಜಾಗಕ್ಕೆ ಹೋಗಬೇಕು ಎಂದು ಅಂದುಕೊಂಡು ಸಭಾಂಗಣದ ಕಡೆ ಹೊರಟೆನು. ಅಷ್ಟರಲ್ಲಿ ಯಾಕೋ ಈ ಸೂಕ್ತ ರೀತಿಯ ತ್ಯಾಜ್ಯ ನಿರ್ವಹಣೆಯ ಫೋಟೋಸ್ ಗಳಿರಲಿ ಅನಿಸಿತು. ಎರಡು ಹೆಜ್ಜೆ ಮುಂದೆ ಹೋದವಳು ಮತ್ತೆ ತಿರುಗಿ ಅಲ್ಲಿಗೇ ಹೋಗಿ ಫೋಟೋಸ್ ಬೇಕಿದ್ದವು, ತೆಗೆಯಲಾ ಒಂದೆರೆಡು ಫೋಟೋಸ್ ಅಂದರೆ ಫೋಟೋ ಏನೂ ಬೇಡ ಅಂದರು. ಹಾಗಾಗಿ ಇಲ್ಲಿ ಅವರ ಮುಖ ಕಾಣುವಷ್ಟು ಫೋಟೋಸೂ ನನ್ನಲ್ಲಿ ಇಲ್ಲ.
ಮದುವೆ ಸಮಾರಂಭ ಇತ್ಯಾದಿ ಕಾರ್ಯಕ್ರಮಗಳಲ್ಲಿ ಊಟ ಮಾಡಿದ ತಟ್ಟೆ, ಉಳಿಕೆ ಆಹಾರ, ಟಿಶ್ಯೂ ಪೇಪರ್, ಮಜ್ಜಿಗೆ ಕುಡಿದ ಕಾಗದದ ಲೋಟ ಇವೆಲ್ಲವೂ ಒಂದರಲ್ಲೇ ಹಾಕುವುದೂ ನಂತರ ಆ ಟಿಶ್ಯೂ ಪೇಪರ್ ನೊಂದಿಗೆ ಬೆರಕೆಯಾದ ಉಳಿಕೆ ಆಹಾರತ್ಯಾಜ್ಯ ಪ್ರಾಣಿಗಳಿಗೂ ನೀಡಲಾಗದೆ ವ್ಯರ್ಥವಾಗುವುದೂ ಎಷ್ಟೋ ಕಡೆ ನಡೆಯುತ್ತದೆ. ಆದರೆ ಇಲ್ಲಿ ಉಳಿಕೆ ಆಹಾರ ತ್ಯಾಜ್ಯದ ಜೊತೆ ಒಂದೇ ಒಂದು ಇತರೇ ಕಾಗದ ಕಸ ಸೇರದಂತೆ ಜಾಗ್ರತೆ ವಹಿಸಿದ್ದು, ಖಂಡಿತಕ್ಕೂ ಇದು ಕೋಳಿ, ಬೆಕ್ಕು, ನಾಯಿ, ಹಂದಿ ಇತ್ಯಾದಿ ಪ್ರಾಣಿಗಳ ಆಹಾರವಾಗಿ ಬಳಕೆ ಮಾಡಲು ಯೋಗ್ಯವಾಗಿರುತ್ತದೆ. ಒಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯ ಸಂದರ್ಭದ ಊಟೋಪಚಾರದ ವ್ಯವಸ್ಥೆಯ ತ್ಯಾಜ್ಯ ನಿರ್ವಹಣೆಯು ಅಚ್ಚುಕಟ್ಟಾಗಿದ್ದು ಎಲ್ಲ ಕಾರ್ಯಕ್ರಮಗಳಿಗೂ ಮಾದರಿಯಾಗಿದೆ. ಪ್ರತಿಭಾ ಕಾರಂಜಿ ಎನ್ನುವುದು ಶೈಕ್ಷಣಿಕ ಕಾರ್ಯಕ್ರಮವಾಗಿದ್ದು ಇಲ್ಲಿನ ಪ್ರತಿಯೊಂದು ನಡೆ ಮಾದರಿಯಾದಷ್ಟು ಭಾಗವಹಿಸುವ ವಿದ್ಯಾರ್ಥಿಗಳಿಗೆ ಅನುಕರಣೀಯವಾಗಿರುತ್ತದೆ. ಆ ನಿಟ್ಟಿನಲ್ಲಿಯೂ ಇಲ್ಲಿಯ ತ್ಯಾಜ್ಯ ನಿರ್ವಹಣೆ ಶ್ಲಾಘನೀಯವಾಗಿದೆ. ಬೆಳ್ತಂಗಡಿ ತಾಲೂಕಿನ ಹೋಲಿ ರಿಡೀಮರ್ ಶಾಲೆಯ ಪೋಷಕರಾದ ಅಲ್ವಿನ್ ರವರು ಮುತುವರ್ಜಿ ವಹಿಸಿಕೊಂಡು ಸೂಕ್ತ ರೀತಿಯಲ್ಲಿ ನಿರ್ವಹಿಸಿದ ಈ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ.
ಪ್ರಭಾರ ಮುಖ್ಯ ಶಿಕ್ಷಕರು
ದ.ಕ.ಜಿ.ಪಂ.ಕಿರಿಯ
ಪ್ರಾಥಮಿಕ ಶಾಲೆ. ಹೊಸಪಟ್ಣ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob: +91 94499 07371
********************************************