-->
ಜೀವನ ಸಂಭ್ರಮ : ಸಂಚಿಕೆ - 167

ಜೀವನ ಸಂಭ್ರಮ : ಸಂಚಿಕೆ - 167

ಜೀವನ ಸಂಭ್ರಮ : ಸಂಚಿಕೆ - 167
ಲೇಖಕರು :  ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
     

ಮಕ್ಕಳೇ, ಪತಂಜಲ ಯೋಗ ಸೂತ್ರದ ನಾಲ್ಕನೇ ಅಧ್ಯಾಯ, 15ನೇ ಸೂತ್ರದಲ್ಲಿ ಇದು ಬರುತ್ತದೆ. ಜಗತ್ತಿನ ಜ್ಞಾನ ಬದುಕನ್ನು ಕಟ್ಟಿಕೊಳ್ಳಲು ಅಗತ್ಯ. ಅದೇ ರೀತಿ ಜಗತ್ತನ್ನು ಅನುಭವ ಮಾಡಿಕೊಳ್ಳುವವನ ಜ್ಞಾನವೂ ಅಗತ್ಯ. ಹೊರಗೆ ಜಗತ್ತು, ಒಳಗೆ ನಾವು. ನಮ್ಮಲ್ಲಿ ಜ್ಞಾನ ಇದೆ. ಜಗತ್ತಿನಲ್ಲಿ ನಾವು ಅನುಭವಿಸಬಹುದಾದ ಎಲ್ಲವೂ ಇದೆ. ಜ್ಞಾನ ಇಲ್ಲ, ಅನುಭವ ಇಲ್ಲ. ವಸ್ತು ಇಲ್ಲದೆ ಹೋದರೆ ವಸ್ತುವಿನ ಅನುಭವ ನಮಗಾಗುವುದಿಲ್ಲ. ಜಗತ್ತು ಬೇಕಾಗುತ್ತದೆ. ಜಗತ್ತನ್ನು ಅನುಭವಿಸುವ ನಾವು ಬೇಕಾಗುತ್ತದೆ. ಹೂಗಳು ಇರಬೇಕು, ಹೂಗಳನ್ನು ನೋಡುವ ವ್ಯಕ್ತಿಯು ಬೇಕು. ಆಗ ಹೂವಿನ ವೈಭವ ಮನುಷ್ಯನಿಗೆ ಆಗುತ್ತದೆ. ಜಗತ್ತು ಇರುವುದು ಏತಕೆ?. ಅನುಭವಿಸುವುದಕ್ಕೆ. ಜಗತ್ತಿನ ಸಾರ್ಥಕತೆ ಇರುವುದೇ ಅದನ್ನು, ಅದರ ಸ್ವರೂಪ ತಿಳಿದು, ಅನುಭವಿಸುವುದಕ್ಕಾಗಿ. ಜಗತ್ತು ವಿಸ್ತಾರ. ಅಷ್ಟೇ ವೈಭವದಿಂದ ಕೂಡಿದೆ. ಇದು ಪ್ರತಿಕ್ಷಣ ಕ್ಷಣ ಬದಲಾಗುತ್ತಾ ಹೋಗುತ್ತದೆ. ಹೊಸ ಹೊಸ ರೂಪ ತೊಡುತ್ತಾ ಹೋಗುತ್ತದೆ. ಜಗತ್ತು ಯಾವಾಗಲೂ ಹಳೆಯದಲ್ಲ. ನದಿ ಹರಿಯುವಾಗ ಕ್ಷಣ ಕ್ಷಣ ಹೊಸ ನೀರು ಬರುತ್ತದೆ. ಹಳೆ ನೀರು ಮುಂದಕ್ಕೆ ಹೋಗುತ್ತದೆ. ಹಾಗೆ ಜಗತ್ತಿನಲ್ಲಿ ಹೊಸದು ಹೊಸದು ಕಾಣಬರುತ್ತದೆ. ಹಳೆಯದು ನಿಧಾನವಾಗಿ ಹೋಗುತ್ತಾ ಇರುತ್ತದೆ. ಆದ್ದರಿಂದ ಜಗತ್ತು ತಾಜಾ ತಾಜಾ ಹೊಸತು. ನೋಡುವವರ ದೃಷ್ಟಿ ಹಳೆಯವೇ ವಿನಃ, ಜಗತ್ತು ಅಲ್ಲ. 

ಸೂರ್ಯ ಪ್ರತಿದಿನ ಹೊಸತು. ಸೂರ್ಯೋದಯ ಸೂರ್ಯಾಸ್ತ ದಿನ ಹೊಸತು. ಹಳೆಯ ಜಗತ್ತು ಮತ್ತೆ ಬರುವುದಿಲ್ಲ. ಹೊಸದು ಬರದೇ ಇರುವುದಿಲ್ಲ. ಇದು ಜಗತ್ತಿನ ವೈಶಿಷ್ಟ್ಯ. ಇಂತಹ ಜಗತ್ತನ್ನ ನೋಡಬೇಕು, ಅದನ್ನು ಅನುಭವಿಸಬೇಕು. ಹೇಗೆ ಅನುಭವಿಸಬೇಕು ಅಂದರೆ ಜೀವನ ಪೂರ್ಣಗೊಳ್ಳುವಂತೆ ಅನುಭವಿಸಬೇಕು. ಒಂದು ಪಕ್ಷಿ, ಪತಂಗ ಜಗತ್ತನ್ನು ಅನುಭವಿಸುತ್ತದೆ. ಒಂದು ಪಕ್ಷಿ ಹಾಡಿ ಹಾಡಿ ಜಗತ್ತನ್ನು ಅನುಭವಿಸುತ್ತದೆ. ಒಂದು ಪತಂಗ ಹೂಗಳನ್ನು ಸ್ಪರ್ಶ ಮಾಡಿ ಹೂವಿನಂತೆ ಆಗುತ್ತದೆ. ಎಷ್ಟು ಮೃದು?. ಎಷ್ಟು ಸುಂದರ ಬಣ್ಣಗಳು?. ಹೂವಿನ ಮಧ್ಯೆ ಹಾರಾಡಿಕೊಂಡು ಇದ್ದರೆ ಸ್ವರ್ಗ ಹೇಳಿದಂತೆ ಅದು ಬದುಕುತ್ತದೆ. ಅನುಭವಿಸುತ್ತದೆ. ಬದುಕನ್ನು ಹೂ ಮಾಡಿಬಿಟ್ಟಿದೆ. ಹಕ್ಕಿ ಪಕ್ಷಿಗಳು ಜೀವನವನ್ನು ಹಾಡು ಮಾಡಿದ್ದಾವೆ. ಮನುಷ್ಯ ಏನು ಮಾಡಿದ?. ಬದುಕನ್ನು ರಣರಂಗ ಮಾಡಿದ. ನಾವು ಬುದ್ಧಿವಂತರು, ಜಾಣರು ವಿಕಾಸದ ತುತ್ತ ತುದಿಯಲ್ಲಿ ನಾವು ಇದ್ದೇವೆ. ಪ್ರಾಣಿಗಳು ನಮ್ಮಷ್ಟು ವಿಕಸಿತ ಆಗಿಲ್ಲ. ನಮ್ಮಷ್ಟು ಬುದ್ಧಿ ಇಲ್ಲ. ಮನುಷ್ಯ ಮಾಡುವಂತೆ ವಿಚಾರ ಅವುಗಳಿಗಿಲ್ಲ. ನಾವು ಜಗತ್ತನ್ನೇ ಸುತ್ತಬಲ್ಲವಿ. ಆಕಾಶಕ್ಕೆ ಏರಬಲ್ಲವಿ. ಆದರೆ ಬದುಕು ಗೊತ್ತಿಲ್ಲ. ಪ್ರಾಣಿ ಪಕ್ಷಿಗಳಿಗೆ ಬದುಕುವುದು ಗೊತ್ತಿದೆ. ಅವು ಬದುಕನ್ನು ಹಾಡು ಮಾಡಿದ್ದಾವೆ. ನಾವು ಬದುಕನ್ನು ರಕ್ತಸಿಕ್ತ ಮಾಡಿದ್ದೇವೆ.

ಪಾತಂಜಲ ಮಹರ್ಷಿ ಹೇಳಿದನು, ವಸ್ತುಗಳು ಹಾಗೆ ಇರುತ್ತವೆ. ನೋಡೋ ಮನಸ್ಸುಗಳು ಬೇರೆ ಬೇರೆ ಇರುತ್ತದೆ. ಅದಕ್ಕೆ ಹೇಳಿದ್ದು "ವಸ್ತುಸಾಮ್ಯ ಚಿತ್ತ ಬೇಧ" ಎಂದು. ವಸ್ತು ಸಾಮ್ಯ ಅಂದರೆ ಜಗತ್ತು ಒಂದೇ ಇದೆ. ನನಗೊಂದು ನಿನಗೊಂದು ಅವನಿಗೊಂದು ಜಗತ್ತು ಇಲ್ಲ. ವಸ್ತು ಒಂದೇ ನೋಡುವ ಕಣ್ಣು ಬೇರೆ ಬೇರೆ. ನೋಡೋ ಮನಸ್ಸುಗಳು ಭಿನ್ನಭಿನ್ನ ಇರುವುದರಿಂದ ವಸ್ತು ಬೇರೆ ಬೇರೆಯಾಗಿ ಕಾಣಿಸುತ್ತದೆ. ಇರೋ ವಸ್ತು ಮಾತ್ರ ಒಂದೇ. ವಸ್ತು ಒಂದೇ ಇದ್ದರೂ ಜಗತ್ತಿನಲ್ಲಿ ಬದುಕುವವರ ಅನುಭವ ಬೇರೆ ಬೇರೆ. ಒಬ್ಬರಿಗೆ ಒಂದು ರೀತಿ ಕಾಣಿಸುತ್ತದೆ ಮತ್ತೊಬ್ಬರಿಗೆ ಮತ್ತೊಂದು ರೀತಿ ಕಾಣಿಸುತ್ತದೆ. ಏಕೆಂದರೆ ಅವರ ಮನಸ್ಸು ಭಿನ್ನವಿದೆಯ ವಿನಃ ಜಗತ್ತಲ್ಲ. ಜಗತ್ತು ಕೆಟ್ಟಿಲ್ಲ ಚಂದಾಗಿನು ಇಲ್ಲ. ಅದು ಇದ್ದ ಹಾಗೆ ಇದೆ. ಕೆಟ್ಟಿರುವುದು ಸುಂದರವಾಗಿರುವುದು ನಮ್ಮ ಮನಸ್ಸು. ಚಿತ್ತಬೇದ ಅಂದರೆ ನೋಡುವವರ ದೃಷ್ಟಿ ಬೇರೆ ಬೇರೆ. ಎಲ್ಲಾ ರೀತಿಯಿಂದ ನೋಡಲಿಕ್ಕೆ ಬರುತ್ತದೆ. ಒಂದು ಹೂವನ್ನು ಎಲ್ಲಾ ದೃಷ್ಟಿಯಿಂದ ನೋಡಬಹುದು. ಹಣದ ದೃಷ್ಟಿಯಿಂದ ನೋಡಲಿಕ್ಕೆ ಬರುತ್ತದೆ. ಹೂ ನೋಡಿ ಬೆಲೆ ಕಟ್ಟಬಹುದು. ಅವನ ದೃಷ್ಟಿಯಲ್ಲಿ ಈ ಹೂವು ಒಂದು ರೂಪಾಯಿ ಅಥವಾ ಐದು ರೂಪಾಯಿ. ಇನ್ನೊಬ್ಬ ವಿಜ್ಞಾನಿ ಹೂ ನೋಡಿದ, ವಿಮರ್ಶೆ ಮಾಡಿದ, ಅದರ ಒಳ ರಚನೆಯನ್ನೇ ಶೋಧಿಸಿದ, ಅವನಿಗೆ ಎಂತಹ ಜ್ಞಾನ ಸಂತೋಷವಾಗಿತ್ತು. ವಿಜ್ಞಾನಿಗೆ ಬೇರೆ ರೀತಿ ಕಂಡಿದ್ದು, ಒಬ್ಬ ಹುಡುಗಿ ಅದೇ ಹೂವು ಹಿಡಿದು ತಲೆಗೆ ಏರಿಸಿದಳು. ಅದೇ ಹೂವು ದೇವರಿಗೆ ಏರಿಸಿದಳು. ಎಲ್ಲರಿಗೂ ಹಂಚಿದಳು. ಆಕೆಗೆ ಆ ಹೂ ಎಂದರೆ ಅದ್ಭುತ ವಸ್ತು. ಯಾರು ಯಾರಿಗೆ ಏನೇನು ಕಾಣಿಸುತ್ತದೋ?.  ಹೂ ಮಾತ್ರ ಒಂದೇ. ನಮ್ಮ ಮನಸ್ಸು ಬದಲಿರುವುದರಿಂದ ಹೀಗೆ ಕಾಣುತ್ತದೆ. 

ಹಾಗೆ ಜಗತ್ತು ಕೆಟ್ಟಿತು ಅಂತೀವಿ, ಒಳ್ಳೆಯದು ಅಂತೀವಿ ಇದೆಲ್ಲ ನಮ್ಮ ನಮ್ಮ ಭ್ರಮೆ. ನಾವು ನೋಡುವ ದೃಷ್ಟಿಕೋನ. ಮಹಾಭಾರತದಲ್ಲಿ ದುರ್ಯೋಧನರಿಗೆ, ಧರ್ಮರಾಜನಿಗೆ ಜಗತ್ತು ಹೇಗಿದೆ ಅಂತ ಕೇಳಿದರು. ಅದೇ ಆರ್ಯವರ್ತ, ಉತ್ತರ ಭಾರತ, ಗಂಗಾ ನದಿ ತಟ, ಅದೇ ಹಿಮಾಲಯ, ಅದೇ ಭೂಪ್ರದೇಶ, ಇಬ್ಬರೂ ನೋಡಿದರು. ಬೇರೆ ಬೇರೆ ಕಂಡರು. ಇಬ್ಬರಿಗೂ ಬೇರೆ ಬೇರೆ ಕಂಡಿತು. ನಾವು ನಮ್ಮ ದೃಷ್ಟಿಯಲ್ಲಿ ನೋಡಿ ಜಗತ್ತು ಹೀಗಿದೆ ಎಂದು ಭಾವಿಸುತ್ತೇವೆ. ಜಗತ್ತು ಹಾಗಿಲ್ಲ, ನಮ್ಮ ಮನಸ್ಸು ಹಾಗಾಗಿದೆ ಅಷ್ಟೇ. ಜಗತ್ತು ಇದ್ದಹಾಗೆ ಇರೋದು, ಯಾರು ಬಂದರು. ಈ ಮಣ್ಣು ಮಣ್ಣೇ. ಈ ನೀರು ನೀರೆ. ನಾವು ಬಹಳ ಬುದ್ಧಿವಂತರೆಂದು ನೀರನ್ನು ಬದಲು ಮಾಡಲು ಬರುತ್ತದೆಯೇ?. ಇದನ್ನು ಪವಿತ್ರ ಅಂತ ಕುಡಿಯಬಹುದು. ಅತ್ಯಂತ ಮಹತ್ವದ ವಸ್ತು ಎಂದು ಕುಡಿಯಬಹುದು. ಅದೇನು ನೀರು ಅಂತ ಕುಡಿಯಬಹುದು. ಅದೇನು ನೀರು ಅಂದರೆ ಅದಕ್ಕೆ ಬೆಲೆ ಇಲ್ಲ. ಬಿಸಿಲು ನೀರಡಿಕೆಯಾಗಿದೆ. ಒಂದು ಕಪ್ ನೀರು ಅಮೃತ. ನೀರೇ ಇಲ್ಲದೆ ಇದ್ದಾಗ ನೀರೇ ದೇವರು. ಎಲ್ಲಾ ಸಂಪತ್ತು ಇದೆ. ನೀರೇ ಇಲ್ಲ, ಬದುಕು ಹೋಗ್ತದೆ. ಜೀವನ ನಿಂತಿದ್ದು ಅನ್ನ ನೀರಿನ ಮೇಲೆ ಹೊರತು ಬೇರೆ ಸಂಪತ್ತಿನಿಂದ ಅಲ್ಲ. ಇಂತಹ ನೀರಿನ ಬೆಲೆ ಎಷ್ಟು ಹೇಳುವುದು. ಬೆಲೆ ಕಟ್ಟಲು ಆಗುವುದಿಲ್ಲ. ಆ ದೃಷ್ಟಿಯಿಂದ ನೋಡಿದರೆ ನೀರು ಅಷ್ಟು ಮಹತ್ವದ್ದು ಅಮೃತ. ಮತ್ತೊಂದು ದೃಷ್ಟಿಯಿಂದ ನೋಡಿದರೆ ಅದೇನು. ನೀರು ಮಾತ್ರ ಒಂದೇ. ನೋಡುವ ನಾವು ಬೇರೆ ಬೇರೆ. ಮನುಷ್ಯ ಜಗತ್ತಿಗೆ ಬೆಲೆ ಕಟ್ಟುತ್ತಾನೆ. ಆ ಬೆಲೆ ಜಗತ್ತಿನದಲ್ಲ, ಆತನ ಮನಸ್ಸಿನ ಬೆಲೆ. ಕೆಟ್ಟದ್ದು ಅಂದರೆ ಅದು ಅವನ ಮನಸ್ಸು ಅಷ್ಟೇ. 

ಒಂದು ಕಥೆ, ಬಹಳ ಹಿಂದೆ ಒಂದು ಊರು. ವಾಹನಗಳು ಇರಲಿಲ್ಲ. ಒಬ್ಬ ಪ್ರವಾಸಿ ಬಂದ. ಆ ಊರಿನಿಂದ ಸ್ವಲ್ಪ ದೂರದಲ್ಲಿ ಒಂದು ಬಾವಿ ಇತ್ತು. ಆ ತೋಟದ ಮಾಲೀಕ ಅಲ್ಲೇ ಕುಳಿತಿದ್ದನು. ಆ ಪ್ರವಾಸಿ ಮಾಲೀಕನ ಬಳಿ ಬಂದು ಕುಳಿತು ಮಾತನಾಡಿದ. ಆ ಮಾಲಿಕ ನಾಲ್ಕು ರೊಟ್ಟಿ ಮೊದಲು ನೀಡಿ ನಂತರ ಯಾವೂರು ಅಂದ. ಇದು ಭಾರತೀಯ ಸಂಸ್ಕೃತಿ. ಮೊದಲು ನೀರು, ಊಟ ಆಮೇಲೆ ನೀವು ಯಾರು. ಮೊದಲೇ ನೀವು ಯಾರು ಅಂದರೆ ಸಂಸ್ಕೃತಿ ಹೋಯಿತು. ಹಾಗೆ ಮಾಲೀಕ ಕೇಳಿದ ನೀವು ಯಾರು?. ಆಗ ಪ್ರವಾಸಿ ಹೇಳಿದ ನಾನು ಶಿಕ್ಷಕ. ನನಗೆ ಈ ಊರಿಗೆ ವರ್ಗವಾಗಿದೆ. ಅದಕ್ಕೆ ಊರು ನೋಡಿ ಹೋಗೋದಕ್ಕೆ ಬಂದಿದ್ದೇನೆ. ನೀವು ಸಿಕ್ಕಿದ್ದು ಬಹಳ ಸಂತೋಷ. ಹೇಳಿ ನಿಮ್ಮ ಊರು ಹೇಗಿದೆ ಎಂದ ಪ್ರವಾಸಿ. ಏಕಂದರೆ ಆ ಊರಲ್ಲಿ ನಾಲ್ಕಾರು ವರ್ಷ ಇದ್ದು ಮಕ್ಕಳಿಗೆ ಕಲಿಸಬೇಕಾಗಿದೆ. ಅದಕ್ಕೆ ಕೇಳಿದ. ಅದಕ್ಕೆ ಆ ಮಾಲಿಕ ಹೇಳಿದ. ನಮ್ಮೂರು ಶುದ್ಧ ಕನ್ನಡಿಯಂತೆ ಇದೆ. ಆಗ ಶಿಕ್ಷಕ ಕೇಳಿದ. ಹಾಗಂದರೆ ಏನು?. ಅಂದನು. ಮಾಲಿಕ ಹೇಳಿದ, ಅದೇನು ನೀನು ಹೇಗೆ ನೋಡುತ್ತಿಯೊ ಹಾಗೆ ಇದೆ. ನೀನು ಚೆನ್ನಾಗಿ ನಗುತ್ತಾ ಇದ್ದರೆ ನಮ್ಮೂರು ನಗುತ್ತಾ ಇರುತ್ತದ್ದೆ. ನೀನೇನಾದರೂ ಮಾಡಿದರೆ ನಮ್ಮೂರು ಹಾಗೆ ಇದೆ. ನೀ ಹೆಂಗೋ ನಮ್ಮೂರು ಹಂಗೆ. ಎಂತಹ ಸುಂದರ ಮಾತು. ಈಗೇನಾದ್ರೂ ಕೇಳಿದರೆ, ಊರಿನ ದೋಷಗಳನ್ನು ಹೇಳಿ, ಊರಿಗೆ ಬರದಂತೆ ಮಾಡುತ್ತಿದ್ದರು. ಆಗ ಮಾಲೀಕ ಹೇಳಿದ ನೀವು ಹೇಗಿದ್ದೀರಿ ಹಾಗೆ ನಮ್ಮೂರು ಅಂದನು. ಆಗ ಶಿಕ್ಷಕ ಹೇಳಿದ ನನಗೆ ಅಂತಹ ಊರೆ ಬೇಕಾಗಿದೆ ಎಂದನು. ವಸ್ತು ಒಂದೇ ಆದರೂ ಮನಸ್ಸು ಭಿನ್ನ ಭಿನ್ನವಾಗಿರುವುದರಿಂದ ಪ್ರತಿಯೊಬ್ಬರಿಗೂ ಭಿನ್ನ-ಭಿನ್ನವಾಗಿ ಕಾಣಿಸುತ್ತದೆ. 

ಕೌಶಿಕ ಮಹಾರಾಜ ಅಕ್ಕಮಹಾದೇವಿಯನ್ನು ವಿವಾಹ ಆಗಲು ಬಯಸಿದ. ಅಕ್ಕಮಹಾದೇವಿಗೆ ಕಣ್ಣಿಗೆ ಕಂಡದ್ದೆಲ್ಲಾ ದೇವರು. ಕೌಶಿಕನಿಗೆ ಕಂಡಿದ್ದೇ ಬೇರೆ. ಪಾತಂಜಲ ಮಹರ್ಷಿ ಹೇಳುತ್ತಾನೆ, "ಜಗತ್ತು ಹೇಗಿದೆಯೋ ಹಾಗೆ ಇದೆ. ನೀನು ಹೇಗೆ ನೋಡಬೇಕು ಅನ್ನುವುದು ಮಹತ್ವದ್ದು. ನಾವು ಸೂರ್ಯ, ಚಂದ್ರ, ಆಕಾಶ ಬದಲು ಮಾಡಲು ಆಗುವುದಿಲ್ಲ. ನೀನು ನಿನ್ನ ಸುತ್ತಮುತ್ತ ಇರುವ ನಾಲ್ಕು ಗಿಡ ನಾಶ ಮಾಡಬಹುದು ವಿನಹ ಬೇರೇನೂ ಮಾಡುವುದಕ್ಕೆ ಆಗುವುದಿಲ್ಲ. ನೀನು ಈ ಜಗತ್ತನ್ನು ಸತ್ಯಂ ಶಿವಂ ಸುಂದರಂ ಅಂತ ನೋಡು. ಸಂತೋಷ ಪಡು" ಎಂದರು. ಅದು ಯೋಗ ಎಂದರು. ನಿನ್ನ ಜಗತ್ತು ನಿನ್ನ ಕೈಯೊಳಗೆ. ಹೊರಗಿನ ಜಗತ್ತು ನಿನ್ನ ಕೈಯೊಳಗೆ ಇಲ್ಲ. ನಿನಗೆ ಏನು ಕಾಣಿಸುತ್ತದೆ?. ಹೇಗೆ ಕಾಣಿಸುತ್ತದೆ?. ಅದು ನಿನ್ನ ಕೈಯೊಳಗೆ ಇದೆ. ನೀನು ಅದನ್ನು ಕೆಟ್ಟದ್ದು ಮಾಡಬಲ್ಲೆ , ಒಳ್ಳೆಯದು ಮಾಡಬಲ್ಲೆ. ನೀನು ಮನಸ್ಸು ಮಾಡಿದರೆ ನೀನು ಅದನ್ನು ಸ್ವರ್ಗ ಮಾಡಬಲ್ಲೆ. ಇಲ್ಲ ನರಕ ಮಾಡಬಲ್ಲೆ. ಮನುಷ್ಯನೇ ನಿನ್ನ ಮನಸ್ಸು ರೂಪಿಸಿಕೋ ಎಂದನು. ಎಂತಹ ಅರ್ಥಪೂರ್ಣ ಸಂಶೋಧನಾತ್ಮಕ ಮಾತನ್ನು ಹೇಳಿದನು. 

ಭೂಮಿ ಹೇಗಿದೆಯೋ ಹಾಗೆ ಇದೆ. ನಾವೇ ಬರುವುದು. ನಾವೇ ಹೊಡೆದಾಡುವುದು. ಇದು ನನ್ನದು, ಇದು ನಿನ್ನದು ಅನ್ನುವುದು. ನಾವೇ ವಿನಹ ಭೂಮಿಯಲ್ಲ. ಭೂಮಿ ಯಾರ ಜೊತೆ ಹೋಗಿಲ್ಲ. ಹೋಗೋದು ಇಲ್ಲ. ನಾವು ನಮ್ಮ ಮನಸ್ಸನ್ನು ತಿದ್ದಿಕೊಳ್ಳಬೇಕು ವಿನಹ ಹೊರಗಡೆಯದ್ದನಲ್ಲ. ಕೆಲವರು ಹೇಳುತ್ತಾರೆ ನಮ್ಮ ಮನೆ ವಾಸ್ತು ಸರಿ ಇಲ್ಲ. ಜಗಳ ಕಾದಾಟ ಅಂತ. ಮನೆ ಅಂದರೆ ನಾಲ್ಕು ಗೋಡೆ. ಮನೆದು ತಪ್ಪಲ್ಲ ನಮ್ಮ ಮನಸ್ಸಿನಲ್ಲಿ ತಪ್ಪು. ಸರಿ ಮಾಡಬೇಕಿರುವುದು ನಮ್ಮ ಮನಸ್ಸನ್ನು. ನಮಗೆಲ್ಲರಿಗೂ ಒಂದೇ ಜಗತ್ತು ನನಗೊಂದು ನಿನಗೊಂದು ಇಲ್ಲ. ಈ ಜಗತ್ತೆಲ್ಲ ನಮ್ಮದೇ ಯಾರೊಬ್ಬರದೂ ಅಲ್ಲ. ನಮ್ಮ ದೃಷ್ಟಿಕೋನದ ಪ್ರಕಾರ ಜಗತ್ತಿಲ್ಲ. ಜಗತ್ತು ತನ್ನಷ್ಟಕ್ಕೆ ತಾನೇ ಇರುತ್ತದೆ. ನಾವು ಅದನ್ನು ಇದ್ದಂತೆಯೇ ನೋಡಿದರೆ ತತ್ವಜ್ಞಾನಿಯಾಗುತ್ತೇವೆ. ದಾರ್ಶನಿಕರಾಗುತ್ತೇವೆ. ಒಳ್ಳೆಯ ರೀತಿ ಒಳ್ಳೆಯದು ಅಂತ ನೋಡಿದರೆ ಸಂತರಾಗುತ್ತೇವೆ, ಶರಣರಾಗುತ್ತೇವೆ ಕವಿಗಳಾಗುತ್ತೇವೆ. ಜಗತ್ತು ಸುಂದರ ಅದೇ ಅಂತ ನೋಡುವುದು ಅಥವಾ ಇದ್ದಕ್ಕಿದ್ದಂತೆ ನೋಡಿದರೆ ಸತ್ಯ ದರ್ಶನ. ಒಳ್ಳೆಯದು ಅಂತ ನೋಡಿದರೆ ಸಾತ್ವಿಕ ದರ್ಶನವಾಗುತ್ತದೆ. ಆನಂದವಾಗುತ್ತದೆ. ಪಾತಂಜಲ ಮಹರ್ಷಿ ಹೇಳುವುದು "ಜಗತ್ತನ್ನು ಬೈಯ ಬೇಡ. ಮನಸ್ಸಿನ ಕಡೆ ಲಕ್ಷ್ಯ ಕೊಡು. ಜಗತ್ತು ವೈವಿಧ್ಯ. ಎಲ್ಲವೂ ಇರಬೇಕಾಗುತ್ತದೆ. ಸಾಗರದ ನೀರು ಉಪ್ಪು ಇದೆ, ಅದನ್ನು ಕುಡಿಯಲು ಆಗುವುದಿಲ್ಲ, ಆದ್ದರಿಂದ ಇದು ಬೇಡ ಅಂದರೆ, ಮಳೆನೇ ಇಲ್ಲ. ಮಳೆ ಬರುವುದು ಸಾಗರದಿಂದ. ಮಳೆಯೇ ಇಲ್ಲದಿದ್ದರೆ ಗಿಡಮರ ಇಲ್ಲ, ಕೊನೆಗೆ ನಾವೇ ಇಲ್ಲ. ಎಲ್ಲವನ್ನು ಆ ರೀತಿ ನೋಡುವುದು. ಸಣ್ಣ ಗುಡ್ಡವನ್ನು ಬೆಟ್ಟದಂತೆ ನೋಡಬಹುದು. ಹಿಮಾಲಯವನ್ನು ಕ್ಷುಲ್ಲಕ ಅಂತ  ನೋಡಬಹುದು. ನಾವು ನಮ್ಮ ದೃಷ್ಟಿ ತಿದ್ದಿಕೊಳ್ಳಬೇಕು. ಆಗ ಸಂಸ್ಕಾರಗಳಿಂದ ನಮ್ಮ ಮನಸ್ಸು ಕೆಡುವುದಿಲ್ಲ. ದೇವರು, ನಿಸರ್ಗ ಎಲ್ಲರಿಗೂ ಒಂದೇ ಭೂಮಿ, ಒಂದೇ ಸೂರ್ಯ, ಒಂದೇ ಚಂದ್ರ, ಒಂದೇ ನೀರು ಕೊಟ್ಟಿದ್ದಾನೆ. ಚಂದ್ರನತ್ತ ನೋಡು ತಂಪನ್ನು ಅನುಭವಿಸು. ಅದ್ಭುತವನ್ನು ಅನ್ನು. ನಿನ್ನ ಬದುಕು ಅದ್ಭುತವಾಗುತ್ತದೆ. ನಿನ್ನ ಬದುಕನ್ನು ಕಟ್ಟಿಕೊಳ್ಳುವುದು, ಅದನ್ನು ಸುಂದರಗೊಳಿಸುವುದು, ಅದನ್ನು ಶ್ರೀಮಂತ ಗೊಳಿಸುವುದು, ಶೃಂಗರಿಸುವುದು, ನಮ್ಮ ಕೈ ಒಳಗಿದೆ." ಎಂದ ಪಾತಂಜಲ ಮಹರ್ಷಿ.

 ಬದುಕಿರುವವರೆಗೆ ನಗುತ್ತಾ ಇರಬೇಕು ಎಂದು ಹೇಳಿದನು. ಜಗತ್ತಿನ ಸೌಂದರ್ಯ ಆಸ್ವಾದಿಸುತ್ತ ಇರಬೇಕು. ಜಗತ್ತು ಅತ್ಯದ್ಭುತ ಅನ್ನು. ದೇವಲೋಕ ಮರ್ತ್ಯ ಲೋಕ ಬೇರಿಲ್ಲ ಕಾಣಿರೋ ಎಂದರು ಶರಣರು. ಇಂತಹ ಅದ್ಭುತ ಭೂಮಂಡಲದಲ್ಲಿ ದೇವಲೋಕ ಕಾಣದೆ ಇದ್ದರೆ ಇನ್ನೆಲ್ಲಿ ಕಾಣುವುದು. ಭೂಮಿ ಬಿಟ್ಟು ಬೇರೆ ಯಾವುದೇ ಗ್ರಹಕ್ಕೆ ಹೋದರು, ಒಂದು ಕಪ್ಪು ನೀರು ಸಿಗುವುದಿಲ್ಲ. ಒಂದು ಹೂವು, ಒಂದು ಹಣ್ಣು ಇಲ್ಲ. ಇದನ್ನು ಸುಂದರ ಮಾಡೋದಿಕ್ಕೆ ಆಗದಿದ್ದರೆ ಇನ್ನೆಲ್ಲಿ ಹೋಗಿ ಸುಂದರ ಮಾಡುವುದು. ಈ ಭೂಮಿಯೇ ಸ್ವರ್ಗ. ನಮಗೆ ಬದುಕುವುದಕ್ಕೆ ಬೇಕಾದದ್ದು ಎಲ್ಲಾ ಇದೆ. ಈ ಭೂಮಿ ನರಕ ಆಗಿದ್ರೆ ಅದಕ್ಕೆ ನಾವೇ ಕಾರಣ. ನಮ್ಮ ಮನಸ್ಸೇ ಕಾರಣ. ನಮ್ಮ ಮನಸ್ಸನ್ನು ಸುಂದರಗೊಳಿಸಿದರೆ ಜಗತ್ತು ಸುಂದರವಾಗಿ ಕಾಣುತ್ತದೆ. ಜಗತ್ತು ಇದ್ದಕ್ಕಿದ್ದ ಹಾಗೆ ಇರುವುದು. ಇದನ್ನು ನಾವು ರಚಿಸಿದ್ದಲ್ಲ. ಇದು ನಮ್ಮ ನಿಯಂತ್ರಣದಲ್ಲಿ ಇಲ್ಲ. ಇದು ನಮ್ಮ ಮನಸ್ಸಿನ ರಚನೆಯಲ್ಲ. ನಾವು ಭಾವಿಸಿದಂತೆಯೂ ಇಲ್ಲ. ಇದ್ದ ಹಾಗಾದರೂ ನೋಡು. ಸುಂದರವಾಗಿ ಆದರೂ ನೋಡು. ಆಗ ಜೀವನ ಸಾರ್ಥಕವಾಗುತ್ತದೆ ಎಂದನು ಪಾತಂಜಲ ಮಹರ್ಷಿ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article