ಜೀವನ ಸಂಭ್ರಮ : ಸಂಚಿಕೆ -165
Sunday, November 24, 2024
Edit
ಜೀವನ ಸಂಭ್ರಮ : ಸಂಚಿಕೆ - 165
ಲೇಖಕರು : ಎಂ.ಪಿ. ಜ್ಞಾನೇಶ್
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ, ಈ ಹಿಂದೆ ಶೌಚದ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಶೌಚದ ಫಲಗಳ ಬಗ್ಗೆ ತಿಳಿದುಕೊಳ್ಳೋಣ. ಒಳಗೆ, ಹೊರಗೆ, ಇಂದ್ರಿಯಗಳಲ್ಲಿ ಸ್ವಚ್ಛತೆ ಇಡುವುದು ಶೌಚ್ಯ. ಚೆನ್ನಾಗಿರುವುದನ್ನು ನೋಡುವುದು, ಚೆನ್ನಾಗಿರುವುದನ್ನು ಕೇಳುವುದು, ಚೆನ್ನಾಗಿರುವುದನ್ನು ಮುಟ್ಟುವುದು, ಚೆನ್ನಾಗಿರುವುದನ್ನು ಮೂಸುವುದು , ಚೆನ್ನಾಗಿರುವುದನ್ನು ರುಚಿಸುವುದು ಮತ್ತು ಚೆನ್ನಾಗಿರುವುದನ್ನು ಸ್ಪರ್ಶಿಸುವುದು. ಚೆನ್ನಾಗಿರುವುದರ ಕಡೆ ಹೋಗುವುದು. ಇದರಿಂದ ಇಂದ್ರಿಯಗಳು ಸ್ವಚ್ಛವಾಗುತ್ತದೆ. ಮನೆ, ಮಠ, ಊಟ, ವಸ್ತ್ರ, ಬಟ್ಟೆ, ಬರೆ ಇವುಗಳನ್ನು ಸ್ವಚ್ಛವಾಗಿ ಇಡುವುದು. ಇದನ್ನು ಅನುಷ್ಠಾನ ಮಾಡುವುದರಿಂದ, ತನ್ನ ಬಗ್ಗೆ ವ್ಯಾಮೋಹ ಇರುವುದಿಲ್ಲ. ಇನ್ನೊಬ್ಬರ ಬಗ್ಗೆ ಆಕರ್ಷಣೆ ಇರುವುದಿಲ್ಲ. ಸ್ವಚ್ಛತೆ ಪಾಲಿಸುವವನು ಹೊಲಸಾಗಲು ಬಯಸುವುದಿಲ್ಲ. ಅದರಿಂದ ಸ್ವಚ್ಚತೆ ಪ್ರೀತಿಸಬೇಕು. ಒಮ್ಮೆ ಹೊಲಸಾದರೆ ಮತ್ತಷ್ಟು ಹೊಲಸು ಮಾಡಿಕೊಳ್ಳಲು ಶುರುವಾಗುತ್ತದೆ. ನೋಟ ಸ್ವಚ್ಛ, ಕಾರ್ಯ ಸ್ವಚ್ಛ, ಮಾತು ಸ್ವಚ್ಛ ಇದ್ದರೆ ಜೀವನ ಸ್ವಚ್ಛವಾಗುತ್ತದೆ. ಹೊಲಸು ಮಾಡಿಕೊಳ್ಳಲು ಮನಸ್ಸು ಬರುವುದಿಲ್ಲ. ಇದರಿಂದ ಬುದ್ಧಿ ಸಿದ್ಧಿಯಾಗುತ್ತದೆ. ಸತ್ಯ ಸಿದ್ಧಿಯಾಗುತ್ತಿದೆ. ಮನಸ್ಸು ಪ್ರಸನ್ನವಾಗುತ್ತಿದೆ. ಇಂದ್ರಿಯ ಜಯವಾಗುತ್ತದೆ. ಏಕಾಗ್ರತೆ ಬರುತ್ತದೆ. ಆತ್ಮದರ್ಶನ ಮಾಡಿಕೊಳ್ಳಲು ಯೋಗ್ಯತೆ ಬರುತ್ತದೆ ಎಂದು ಪತಂಜಲಿ ಹೇಳಿದನು.
ಶೌಚದ ಉಪಾಂಗಗಳಾದ ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರ ಪ್ರಣಿದಾನದ ಫಲಗಳ ಬಗ್ಗೆ ತಿಳಿದುಕೊಳ್ಳೋಣ.
ಸಂತೋಷ : ಸಂತೋಷ ಅಂದರೆ ತೃಪ್ತಿ. ಏನು ಅದೆ, ಎಷ್ಟು ಅದೆ, ಅದರಲ್ಲಿ ಆನಂದ ಪಡುವುದು. ದಾರಿಯಲ್ಲಿ ನಡೆಯುವಾಗ ಏರು, ಇಳಿವು, ಎಡಕ್ಕೆ , ಬಲಕ್ಕೆ ಹೋಗುವುದು. ಹಳ್ಳ, ದಿಣ್ಣೆ, ಕಲ್ಲು, ಮುಳ್ಳು ಎಲ್ಲಾ ಇರುತ್ತದೆ. ದಾರಿಯಲ್ಲಿ ನಡೆಯುವಾಗ ಏನಿದ್ದರೆ ಏನು?. ಹಾಡಿಕೊಂಡು ನಡೆಯುತ್ತಿದ್ದರೆ ಸುಖವಾಗುತ್ತದೆ. ಜೀವನದಲ್ಲಿ ಕಷ್ಟ ನಷ್ಟ ಎಲ್ಲ ಬರುತ್ತದೆ. ಅದನ್ನು ನಗುತ್ತಾ ಸ್ವೀಕರಿಸಿದರೆ ಜೀವನ ಸುಂದರವಾಗುತ್ತದೆ. ಹೋಲಿಸಿದರೆ ಸುಖ ಬರುವುದಿಲ್ಲ. ಆತನು ಒಂದು ರೇಷ್ಮೆ ಶಾಲು ಹಾಕಿದ್ದಾನೆ. ನಾನು ಒಂದು ಟೋಪಿ ಹಾಕಿದ್ದೇನೆ. ಬೇರೆಯವರು ಹಾಕಿಕೊಂಡಿಲ್ಲ. ಇಲ್ಲದಿರುವುದರ ಕಡೆ ಮನಸ್ಸು ಹೋದರೆ ಸುಖ ಸಂತೋಷ ಹೇಗಾಗುತ್ತದೆ?. ಹೊಲ ಇಲ್ಲದವರು, ಹೊಲ ಇರುವಲ್ಲಿ ಹೋಗುವುದು, ಎಷ್ಟು ಚೆನ್ನಾಗಿದೆ ಅನ್ನೋದು?. ಇಬ್ಬರಿಗೂ ತಾಪವಿಲ್ಲ. ಅದು ಬಿಟ್ಟು ಅದು ನನ್ನದು ಎಂದರೆ ಹೇಗಾಗುತ್ತದೆ. ಆತನಲ್ಲಿ ಹೊಲ ಇದೆ, ನನ್ನಲ್ಲಿ ಕಣ್ಣು ಇದೆ, ಕಣ್ಣಿನಿಂದ ನೋಡಿ ಆನಂದ ಪಡುವುದು. ಇಂಥವರಿಗೆ ಶ್ರೇಷ್ಠ ಸುಖದ ಲಾಭವಾಗುತ್ತದೆ. ಸಾಧನೆ ಮಾಡಬೇಕೆಂದಿಲ್ಲ. ನಮ್ಮ ಮನಸ್ಸನ್ನು ರೂಪಿಸಬೇಕು. .ತೃಪ್ತಿ ಎಂದರೆ ತುಂಬಿದಂತೆ ಇರುವುದು. ಕೊರತೆ ಕಡೆ ನೋಡಿದರೆ ಅತೃಪ್ತಿ. ಇರೋದರ ಕಡೆ ನೋಡುವುದು. ಎಷ್ಟು ಇದೆ ಮುಖ್ಯವಲ್ಲ. ಇರೋದರ ಕಡೆ ನೋಡಿದರೆ ತೃಪ್ತಿ. ವಸ್ತುಗಳ ಗಳಿಕೆಯಿಂದ ಸಿಗುವುದು ಸುಖ. ಒಂದು ಮನೆ ನಿರ್ಮಿಸಿದರೆ ಸುಖ. ಕನಸು ನನಸಾದರೆ ಆಗುವುದು ಸುಖ. ಅದು ಹೊರಗಿನ ಸೌಖ್ಯ. ಒಂದು ಚಿತ್ರ ಬರೆಯುತ್ತೇವೆ. ಅದಕ್ಕೆ ಬಣ್ಣ ಹಾಕುತ್ತೇವೆ. ಅದು ಹೊರಗಿನಿಂದ ಹಾಕಿದ ಬಣ್ಣ. ಒಂದು ಗಿಡ ಹೂವು ಅರಳಿಸುತ್ತದೆ. ಅದು ಬಣ್ಣದಿಂದ ಕೂಡಿದೆ. ಅದು ಒಳಗಿನಿಂದ ಬಂದಿದ್ದು. ಹಾಗೆ ಸಂತೋಷದ ಫಲ ಅತ್ಯುತ್ತಮ ಸುಖವಾಗಿರುತ್ತದೆ. ಅದು ಒಳಗಿನಿಂದ ಬಂದಿದ್ದು. ಇದು ತೃಪ್ತಿಯಿಂದ ಬರುವ ಸಂತೋಷ. ತುಂಬಿದ ಭಾವವೇ ತೃಪ್ತಿ. ಏಕೆಂದರೆ ಅದು ತುಂಬಿದ ಭಾವದಿಂದ ಅನುಪಮ ಸುಖ ದೊರಕುತ್ತದೆ.
ತಪಸ್ಸು: ತಪಸ್ಸು ಅಂದರೆ ದೈಹಿಕ ,ಐಂದ್ರಿಕ ದೌರ್ಬಲ್ಯಗಳನ್ನು ತೆಗೆದು ಹಾಕುವ ಸಾಧನೆ. ತಪಸ್ಸಿನ ಫಲ ದೈಹಿಕ ಅಶುದ್ಧಿ ಎಂದರೆ ದೈಹಿಕ ದೌರ್ಬಲ್ಯ, ಐಂದ್ರೀಯಕ ಅಶುದ್ಧಿ ಎಂದರೆ ಐಂದ್ರಿಯಕ ದೌರ್ಬಲ್ಯ. ಇವುಗಳನ್ನು ತೆಗೆದುಹಾಕುತ್ತದೆ. ಇದರಿಂದ ದೇಹದ ಮತ್ತು ಇಂದ್ರೀಯದ ಅಶುದ್ಧತೆ ಹೋಗಿ, ದೈಹಿಕ ಮತ್ತು ಇಂದ್ರಿಯದ ಪಟುತ್ವ ಸಿದ್ದಿ ದೊರಕುತ್ತದೆ. ತಪಸ್ಸು ಅಂದರೆ ಬಳಸುವುದು. ಕಷ್ಟ ನಷ್ಟಗಳನ್ನು ಎದುರಿಸುತ್ತಾ ಬಳಸುತ್ತ ಇರುವುದು. ತಪಸ್ಸು ಬಳಸದೆ ಇದ್ದರೆ ಎಂಥ ವಸ್ತುವಾದರೂ ಸರಿ ಆಶಕ್ತವಾಗುತ್ತದೆ. ಬಳಸುತ್ತಾ ಹೋದರೆ ಸಾಮಾನ್ಯ ವಸ್ತು ಸಹ ಸಶಕ್ತವಾಗುತ್ತದೆ. ನದಿ ಪ್ರಾರಂಭದಲ್ಲಿ ಸಣ್ಣದಾಗಿರುತ್ತದೆ ಹರಿಯುತ್ತಾ ಹರಿಯುತ್ತಾ ದೊಡ್ಡದಾಗುತ್ತದೆ. ಇಲ್ಲದೆ ಹೋದರೆ ಅಲ್ಲೇ ಇಂಗಿ ಇಲ್ಲದಂತಾಗುತ್ತದೆ.
ಸ್ವಾಧ್ಯಾಯ : ಸ್ವಾಧ್ಯಾಯ ಎಂದರೆ ಸ್ಮರಣೆ ಮಾಡುತ್ತಾ ಇರುವುದು. ಸ್ವಾಧ್ಯಾಯ, ಯಾವುದನ್ನು ನಾವು ಪದೇ ಪದೇ ಸ್ಮರಣೆ ಮಾಡುತ್ತೀವಿ ಅದು ಮೈಗೂಡುತ್ತದೆ. ಸ್ವಾಧ್ಯಾಯಕ್ಕೆ ಏಕಲವ್ಯ ಉದಾಹರಣೆ. ಏಕಲವ್ಯನಿಗೆ ತಂದೆ ಇರಲಿಲ್ಲ. ಕಾಡುಪ್ರಾಣಿ ತಂದೆಯನ್ನ ಕೊಂದಿತ್ತು. ತಾಯಿ ಆತನನ್ನು ಪೋಷಣೆ ಮಾಡುತ್ತಿದ್ದಳು. ಆತನಿಗೆ ಯಾವ ಶಿಕ್ಷಣ ಇರಲಿಲ್ಲ. ಅರಣ್ಯದಲ್ಲಿ ವಾಸವಾಗಿದ್ದರು. ಆತನ ಬಿಲ್ಲು ವಿದ್ಯೆ ಕಲಿತು ಆತನ ತಂದೆ ಕೊಂದಿದ್ದ ಮೃಗಗಳನ್ನು ಕೊಲ್ಲಬೇಕು ಎಂದು ತಾಯಿಯ ಬಳಿ ಹೇಳಿದನು. ಅದಕ್ಕೆ ತಾಯಿ ಹೇಳಿದಳು ನಿಮ್ಮ ತಂದೆ ಒಂದು ವಿದ್ಯೆ ಕಲಿಯುತ್ತಿದ್ದರು. ಅದೇನಂದರೆ ಪ್ರಾಣಿಗಳು ಧಾಳಿ ಮಾಡಬಾರದು, ಅದರಿಂದ ಪ್ರಾಣಿಗಳ ಜೀವಕ್ಕೆ ಹಾನಿಯಾಗಬಾರದು, ಹಾಗೆ ಬಿಲ್ಲುಗಳನ್ನು ಪ್ರಯೋಗಿಸಬೇಕು. ಈ ವಿದ್ಯೆ ಕಲಿತು ನಿನಗೆ ಕಲಿಸಬೇಕೆಂದು ಅಪೇಕ್ಷಿಸಿದ್ದರು, ಅದನ್ನು ನೀನು ಕಲಿಯಬೇಕು ಎಂದಳು. ಅದು ಆತನ ಮನಸ್ಸನ್ನು ಹೊಕ್ಕಿತು. ಅದನ್ನೇ ಮತ್ತೆ ಮತ್ತೆ ಚಿಂತಿಸ ತೊಡಗಿದನು. ಒಂದು ದಿನ ತಾಯಿಯ ಬಳಿ ಬಂದು ಹೇಳಿದ, ಆ ವಿದ್ಯೆ ಕಲಿಯಬೇಕಾದರೆ ನಾನೇನು ಮಾಡಬೇಕು?. ಎಂದು. ಅದಕ್ಕೆ ತಾಯಿ ಹೇಳಿದಳು, ದ್ರೋಣಾಚಾರ್ಯರು ಬಿಲ್ಲುವಿದ್ಯೆಯಲ್ಲಿ ದೊಡ್ಡವರು. ಅವರ ಬಳಿ ಹೋಗು. ಅಂತಹ ಗುರುಗಳಿಂದ ಮಾತ್ರ ಇಂತಹ ವಿದ್ಯೆ ಕಲಿಯಲು ಸಾಧ್ಯ. ಏಕಲವ್ಯ ದ್ರೋಣಾಚಾರ್ಯರ ಬಳಿ ಹೋದನು. ದ್ರೋಣಾಚಾರ್ಯರ ಬಳಿ ಬಿಲ್ಲು ವಿದ್ಯೆ ಕಲಿಸುವಂತೆ ಬೇಡಿಕೊಂಡನು. ಆಗ ದ್ರೋಣಾಚಾರ್ಯರು ಹೇಳಿದರು. ನಾನು ಅರಸರ ಗುರು. ನಿನಗೆ ಕಲಿಸಲು ಸಾಧ್ಯವಿಲ್ಲ. ನೀನು ಸ್ವತಂತ್ರವಾಗಿ ಸಾಧನೆ ಮಾಡು ಎಂದರು. ಆದರೆ ದ್ರೋಣಾಚಾರ್ಯರಿಗೆ ಈ ಬಿಲ್ಲುವಿದ್ಯೆ ಗೊತ್ತಿರಲಿಲ್ಲ. ಅವರಿಗೆ ಗೊತ್ತಿದ್ದದ್ದು ಕೊಲ್ಲುವ ಬಿಲ್ಲು ವಿದ್ಯ ಮಾತ್ರ. ಆ ಬಳಿಕ ಏಕಲವ್ಯನು ದ್ರೋಣಾಚಾರ್ಯರ ಮೂರ್ತಿ ಮಾಡಿ, ಅದರ ಎದುರು ಬಿಲ್ಲುವಿದ್ಯೆ ಆರಂಭ ಮಾಡಿದನು. ಆತನಿಗೆ ಮನಸ್ಸೇ ಗುರು. ಆತ ಅಂತಹ ಬಿಲ್ಲು ವಿದ್ಯೆಯನ್ನು ಸಾಧಿಸಿದನು. ಅಲ್ಲೇ ಬಳಿ ದ್ರೋಣಾಚಾರ್ಯರು ಕೌರವರು ಮತ್ತು ಪಾಂಡವರಿಗೆ ಬಿಲ್ಲು ವಿದ್ಯೆ ಕಲಿಸುತ್ತಿದ್ದರು. ಅಲ್ಲಿಂದ ನಾಯಿಗಳು ಏಕಲವ್ಯನ ಕಡೆಗೆ ಬಂದವು. ಆಗ ಏಕಲವ್ಯ ಬಾಣಪ್ರಯೋಗ ಮಾಡಿದನು. ಬಾಣಗಳು ನಾಯಿಯ ಬಾಯೊಳಗೆ ಸೇರಿದವು. ಆದರೆ ನಾಯಿಗಳಿಗೆ ಯಾವುದೇ ಗಾಯ ಆಗಿರಲಿಲ್ಲ. ಅವುಗಳ ಕ್ರೂರತ್ವ ನಿಂತಿತ್ತು. ಯಾವುದು ಅಸಾಧ್ಯ ಅನ್ನುತ್ತೇವೆ ಅದು ಸ್ವದ್ಯಾಯದಿಂದ ಸಾಧ್ಯವಾಗುತ್ತದೆ.
ಕವಿ ಕಾಳಿದಾಸನಿಗೆ ಕವಿಯಾಗಬೇಕೆಂಬ ಇಚ್ಛೆ. ಸೌಂದರ್ಯ ಸ್ವಾಧ್ಯಾಯ ಮಾಡಿದನು. ಒಬ್ಬ ದಡ್ಡನಾಗಿದ್ದ ಕಾಳಿದಾಸ. ಆತ ಕುಳಿತರೆ ಸೌಂದರ್ಯ, ನಿಂತರೆ ಸೌಂದರ್ಯ, ಕೇಳಿದರೆ ಸೌಂದರ್ಯ, ಕನಸಿನಾಗ, ಮನಸ್ಸಿನಾಗ ಒಂದೇ ಒಂದು ಸೌಂದರ್ಯ. ಕ್ಷಣಕ್ಷಣ ಸೌಂದರ್ಯ ಸ್ವಧ್ಯಾಯದಿಂದ ಮನಸ್ಸು ತುಂಬಿಕೊಂಡಿತ್ತು. ಆತನ ಕಣ್ಣಿನಲ್ಲಿ ಸೌಂದರ್ಯ ತುಂಬಿತ್ತು. ಮನಸ್ಸಿನಲ್ಲಿ ಸೌಂದರ್ಯ ತುಂಬಿತ್ತು. ಆತನ ಮಾತಿನಲ್ಲಿ ಸೌಂದರ್ಯ ತುಂಬಿತ್ತು. ಆತನ ಹೃದಯದಿಂದ ಸೌಂದರ್ಯದ ಮಾತುಗಳು ಹೊರಹೊಮ್ಮಿತು. ಅದು ಕಾವ್ಯಗಳಲ್ಲಿ ಮೂಡಿ ಬಂತು. ಕುಮಾರಸಂಭವ, ಮೇಘದೂತ, ಅಭಿಜ್ಞಾನಶಾಕುಂತಲ. ರಘುವಂಶ ದಂತಹ ಮಹಾನ್ ಕೃತಿ ರಚನೆ ಯಾದವು.
ಈಶ್ವರ ಪ್ರಣಿದಾನ : ಈಶ್ವರ ಪ್ರಣಿದಾನದ ಫಲ ಸಮಾಧಿಸಿದ್ಧಿಯಾಗುತ್ತದೆ. ಸಮಾಜ ಸಿದ್ದಿ ಎಂದರೆ ಮನಸ್ಸು ಶಾಂತವಾಗುತ್ತದೆ. ಹೊಯ್ದಾಡುವ ಮನಸ್ಸು ನಿಲ್ಲುತ್ತದೆ. ಯಾವುದು ನನ್ನದಲ್ಲ. ಎಲ್ಲವೂ ದೇವರದು ಎನ್ನುವ ಭಾವ ಶುರುವಾಗುತ್ತದೆ. ಸಮಾಧಿಸಿದ್ದಿಯಾಗುತ್ತಿದೆ. ನಮ್ಮಲ್ಲಿ ಅಸಂತೋಷದ ಕ್ಷಣಗಳು ಜಾಸ್ತಿ. ಏಕೆಂದರೆ ಜೀವನ ಒಂದೇ ರೀತಿ ಇರುವುದಿಲ್ಲ. ಏರು, ಇಳಿವು, ಕಷ್ಟ, ನಷ್ಟ ಇರುತ್ತದೆ. ಅಡ್ಡಿ ಆತಂಕಗಳು ಇರುತ್ತವೆ. ಇದಕ್ಕೆ ಪತಂಜಲ ಅಂತರಾಯ ಎಂದು ಕರೆದನು. ಇವು ನಮ್ಮನ್ನು ಅಲ್ಲಲ್ಲಿ ನಿಲ್ಲಿಸುತ್ತವೆ. ದೃಷ್ಟಿಕೋನ ಬೇರೆ ಬೇರೆ ಇರುವುದರಿಂದ, ಒಂದೊಂದು ವಸ್ತು ಒಬ್ಬೊಬ್ಬರಿಗೆ ಬೇರೆ ಬೇರೆಯಾಗಿ ಕಾಣುತ್ತದೆ. ಅದರಿಂದ ತಾಪವಾಗುತ್ತದೆ. ಇಂತಹುದರಲ್ಲಿ ಈಶ್ವರ ಪ್ರಣಿದಾನವಾದರೆ ಶಾಂತಿ ಲಭಿಸುತ್ತದೆ. ಪತಂಜಲ ಹೇಳುತ್ತಾನೆ. ಮನಸ್ಸಿಗೆ ಸಮಾಧಾನ ಆಗೋದಿದ್ರೆ ಈಶ್ವರ ಪ್ರಣಿದಾನ ಮಾಡು. ಹಾಗೆ ಭಾವಿಸು ಸಮಾಧಾನ ಮತ್ತು ಶಾಂತಿಯಾಗುತ್ತದೆ. ಮನಸ್ಸು ಹಗುರವಾಗುತ್ತದೆ ಎಂದನು...
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ)
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ
*******************************************