-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 52

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 52

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 52
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
        

ಪ್ರೀತಿಯ ಮಕ್ಕಳೇ... ಮೊನ್ನೆ ಸಸ್ಯಗಳೂ ಉಸಿರಾಡುತ್ತವೆ ಎಂದಾಗ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೆಲವರು ಅದು ಹೇಗೆ ನಡೆಯುತ್ತದೆ ಎಂದು ಹೇಳಿದ್ದಾರೆ. ಸಸ್ಯಗಳಲ್ಲಿ ಹಗಲು ಹೊತ್ತಿಗೆ ಉಸಿರಾಟ ಮತ್ತು ದ್ಯುತಿಸಂಶ್ಲೇಷಣೆ ಒಟ್ಟಿಗೆ ನಡೆದರೆ ರಾತ್ರಿ ಉಸಿರಾಟ ಮಾತ್ರ ನಡೆಯುತ್ತದೆ. ಅಂದರೆ ರಾತ್ರಿ ಪ್ರಾಣಿಗಳ ಹಾಗೆ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಹೊರ ಹಾಕುತ್ತವೆ. ಇದು ಪತ್ರ ರಂಧ್ರಗಳ ಮೂಲಕ. ಹಗಲು ಹೊತ್ತಿನಲ್ಲಿ ಉಸಿರಾಟಕ್ಕೆ ಆಮ್ಲಜನಕ ಬಳಸಿಕೊಂಡು ಆಹಾರ ತಯಾರಿಸುವಾಗ ಆಮ್ಮಜನಕ ಬಿಡುಗಡೆ ಮಾಡುತ್ತವೆ. ಬಿಡುಗಡೆಯಾಗುವ ಆಮ್ಲಜನಕ ಬಳಸುವುದಕ್ಕಿಂತ ಎಷ್ಟೋ ಪಟ್ಟು ಜಾಸ್ತಿ ಇರುವುದರಿಂದ ಈ ಹೆಚ್ಚುವರಿ ಆಮ್ಲಜನಕವನ್ನು ಹೊರ ಹಾಕುತ್ತವೆ. ಉಸಿರಾಡುವಾಗ ಬಿಡುಗಡೆಯಾಗುವ ಇಂಗಾಲದ ಡೈಆಕ್ಸೈಡ್ ಆಹಾರ ತಯಾರಿಕೆಗೆ ಸಾಕಾಗುವುದಿಲ್ಲ. ಕಡಿಮೆಯಾಗುವ ಇಂಗಾಲದ ಡೈಆಕ್ಸೈಡ್ ಅನ್ನು ವಾತಾವರಣದಿಂದ ಪಡೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಹಗಲು ಹೊತ್ತಿನಲ್ಲಿ ಸಸ್ಯಗಳು ತಮ್ಮ ಪತ್ರ ರಂಧ್ರಗಳ ಮೂಲಕ ಇಂಗಾಲದ ಡೈಆಕ್ಸೈಡ್ ಅನ್ನು ಒಳಗೆ ತೆಗೆದುಕೊಂಡು ಆಮ್ಲಜನಕವನ್ನು ಹೊರಹಾಕುತ್ತವೆ ಮತ್ತು ರಾತ್ರಿ ಹೊತ್ತು ಮಾಮೂಲಿಯಂತೆ ಆಮ್ಲಜನಕವನ್ನು ತೆಗೆದುಕೊಂಡು ಇಂಗಾಲದ ಡೈಆಕ್ಸೈಡ್ ಅನ್ನು ಬಿಟ್ಟುಬಿಡತ್ತವೆ.

ಸಸ್ಯಗಳಲ್ಲಿ ಇನ್ನೊಂದು ವಿಸರ್ಜನೆ ಇದೆ. ಅದು ನೀರಿನ ವಿಸರ್ಜನೆ. ಇದು ನೀರನ್ನು ಆವಿಯ ರೂಪದಲ್ಲಿ ಹೊರಹಾಕುವ ಈ ಕ್ರಮವೇ ಭಾಷ್ಪ ವಿಸರ್ಜನೆ (transpiration). ಈ ಭಾಷ್ಪ ವಿಸರ್ಜನೆಯ ಅಗತ್ಯವೇನು ಎಂದು ನೀವು ಕೇಳಬಹುದು. ಸಸ್ಯಗಳು ನೀರನ್ನು ಹೀರಿಕೊಂಡು ಕಾಂಡದ ತುದಿಗೆ ಕಳುಹಿಸಬೇಕು. ಆ ಕಾಂಡದ ತುದಿಯಲ್ಲಿ ಪಂಪೊಂದನ್ನು ಅಳವಡಿಸಿದರೆ ಆ ಪಂಪು ನೀರನ್ನು ಎತ್ತುತ್ತದೆ. ಆ ನೀರನ್ನು ಸಸ್ಯಗಳು ಬಳಸಿಕೊಳ್ಳುತ್ತದೆ. ಇಲ್ಲಿ ಬಳಕೆ ಸಾಕಾಗುವಷ್ಟು ನೀರು ದೊರೆತ ಕೂಡಲೆ ಪಂಪ್ ಅನ್ನು ನಿಲ್ಲಿಸಿ ಬಿಡುತ್ತಾರೆ ಎಂದಿಟ್ಡುಕೊಳ್ಳೋಣ. ಪುಟ್ ವಾಲ್ವ್ ಸರಿ ಇದ್ದರೆ ಪೈಪ್ ನಲ್ಲಿ ನೀರು ಹಾಗೇ ಉಳಿಯುತ್ತದೆ. ಆದರೆ ಫುಟ್ ವಾಲ್ವ್ ಹಾಳಾಗಿದ್ದರೆ? ನೀವು ಮತ್ತೆ ಸರ್ಕಸ್ ಮಾಡಿ ನೀರು ತುಂಬಿಸಬೇಕು. ಸಸ್ಯಗಳ ಪೈಪ್ ಗಳಲ್ಲಿ ಫುಟ್ ವಾಲ್ವ್ ಇಲ್ಲದೇ ಇರುವುದರಿಂದ ನೀವು ಈ ಪಂಪ್ ಅನ್ನು ನಿಲ್ಲಿಸುವಂತೆಯೇ ಇಲ್ಲ. ಹೆಚ್ಚಾದ ನೀರನ್ನು ಹೊರ ಹಾಕುವುದಾದರೂ ಅಡ್ಡಿಯಿಲ್ಲ ಆದರೆ ಪಂಪ್ ಮಾತ್ರ ನಿಲ್ಲಿಸುವಂತಿಲ್ಲ. ಸಸ್ಯಗಳು ಮಾಡುವುದು ಅದನ್ನೇ. ಅವುಗಳು ಹೆಚ್ಚಾದ ನೀರನ್ನು ಭಾಷ್ಪವಿಸರ್ಜನೆಯ ಮೂಲಕ ಹೊರ ಹಾಕುವುದು ಇದೇ ಕಾರಣಕ್ಕೆ. 

ನೀರನ್ನು ಹೊರ ಹಾಕುವ ದ್ವಾರಗಳೂ ಇದೇ ಪತ್ರ ರಂಧ್ರಗಳೇ. ಈ ಪತ್ರ ರಂಧ್ರಗಳು ಎಲೆಯ ಮೇಲ್ಮೈಯಲ್ಲಿ ಕಂಡು ಬರಬಹುದು ಅಥವಾ ಕೆಳ ಮೇಲ್ಮೈಯಲ್ಲಿ ಮಾತ್ರ ಕಂಡು ಬರಬಹುದು. ಎಲೆಗಳ ಎರಡೂ ಮೇಲ್ಮೈಯಲ್ಲಿ ಪತ್ರ ರಂಧ್ರಗಳನ್ನು ಹೊಂದಿರುವ ಸಸ್ಯಗಳನ್ನು ಮೀಸೋಫೈಟ್ಸ್ (mesophytes) ಎನ್ನುತ್ತೇವೆ. ಇವು ತಾವು ಹೀರಿಕೊಂಡ ನೀರಿನ 85 ರಿಂದ 91% ನೀರನ್ನು ಹೀಗೆ ಹೊರ ಹಾಕುತ್ತವೆ. ಉದಾಹರಣೆಗೆ ಜೋಳ ತಾನು ಹೀರಿಕೊಳ್ಳುವ ನೀರಿನ 91% ಭಾಗವನ್ನು ಹೊರ ಹಾಕುತ್ತವೆ. ಈ ಮೂಲಕ ನೀರನ್ನು ಹೊರ ಹಾಕಿ ಎಲೆಯನ್ನು ತಂಪಾಗಿಸುತ್ತವೆ. ಆದ್ದರಿಂದ ಬಿಸಿಲ ಹೊತ್ತಿನಲ್ಲಿ ನೀವು ಮರದಡಿ ಹೋದರೆ ತಂಪಾಗಿರುವುದು ಅದೇ ಕಾರಣಕ್ಕೆ. ಆದ್ದರಿಂದಲೇ ಜನಪದರು ಹಾಡಿದ್ದು 
"ಬ್ಯಾಸಗಿ ದಿವಸಕ್ಕ ಬೇವಿನ ಮರ ತಂಪ" ಎಂದು. ಹೀಗೆ ಹೆಚ್ಚುವರಿ ನೀರನ್ನು ಹೊರ ಹಾಕಿ ನೀರಿನ ನಿರಂತರತೆ ಕಾಪಾಡಿಕೊಳ್ಳುವುದಲ್ಲದೇ ತನ್ನ ಪರಿಸರವನ್ನೂ ತಂಪಾಗಿರಿಸಿಕೊಳ್ಳುತ್ತವೆ.

ಬೆಂಗಳೂರಿಗರು ನೀರನ್ನು ಮನೆ ಬಳಕೆಗೆ, ವಾಹನ ತೊಳೆಯಲು, ಕೈ ತೋಟ ಮತ್ತು ಲಾನ್ ಬೆಳೆಸಲು ಹೇಗೆ ಬೇಕೋ ಹಾಗೆ ಬಳಸುತ್ತಾರೆ. ಏಕೆಂದರೆ ಕಾವೇರಿ ಸಮೃದ್ದವಾಗಿದ್ದಾಳೆ. ಆದರೆ ನೀರಿನ ಬರ ಇರುವ ಉತ್ತರ ಕರ್ನಾಟಕದವರು ಏನು ಮಾಡಬೇಕು? (ಈಗ ಕಾಲ ಬದಲಾಗಿದೆ ಬಿಡಿ). ಇಂತಹ ಕಷ್ಟ ಇರುವುದು ಮರುಭೂಮಿ ಸಸ್ಯಗಳಲ್ಲಿ. ಹಾಗಾದರೆ ಮರುಭೂಮಿ ಸಸ್ಯಗಳ ಗತಿ ಏನು ಎಂದು ಮುಂದಿನ ವಾರ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article