-->
ಪಯಣ : ಸಂಚಿಕೆ - 11 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 11 (ಬನ್ನಿ ಪ್ರವಾಸ ಹೋಗೋಣ)

ಪಯಣ : ಸಂಚಿಕೆ - 11 (ಬನ್ನಿ ಪ್ರವಾಸ ಹೋಗೋಣ) 
ಲೇಖನ : ರಮೇಶ ನಾಯ್ಕ, ಉಪ್ಪುಂದ 
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713



      ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ


ಎಲ್ಲರಿಗೂ ನಮಸ್ಕಾರ... 
      ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಕಳೆದ ಪಯಣದಲ್ಲಿ ಹೇಳಿದಂತೆ ಈ ವಾರವು ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆಯೋಣವೇ...?

    
        ಪ್ರಶಾಂತವಾಗಿ ಹರಿಯುವ ಸೌಪರ್ಣಿಕಾ ನದಿಯ ತೀರದಲ್ಲಿರುವ ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದರೆ ಬಾಳು ಧನ್ಯ ಎಂಬುವುದು ಎಲ್ಲರಲ್ಲಿಯೂ ಮೂಡಿ ಬಂದಿರುವ ನಂಬಿಕೆ.

    ಈ ಪುಣ್ಯಕ್ಷೇತ್ರವು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಎಂಬ ಗ್ರಾಮದಲ್ಲಿದೆ.
     ಕೊಡಚಾದ್ರಿ ಪರ್ವತದ ಸುಂದರ ನೋಟ, ದಟ್ಟವಾದ ಕಾನನದ ನಡುವೆ ನಿಸರ್ಗದ ರಮಣೀಯ ಸುಂದರ ಪರಿಸರದ ಕೊಲ್ಲೂರಿನಲ್ಲಿ ನೆಲೆ ನಿಂತ ಮೂಕಾಂಬಿಕೆಯು ದುಷ್ಟರ ಸಂಹಾರಕ್ಕಾಗಿ ಶಿಷ್ಟರ ರಕ್ಷಣೆಗಾಗಿ ಅವತಾರವೆತ್ತಿದ ಶಕ್ತಿ ದೇವತೆ. ಚತುರ್ಭುಜಳಾಗಿ ಶಂಖ, ಚಕ್ರ, ಅಭಯ ಮತ್ತು ವರದ ಮುದ್ರೆಯಲ್ಲಿ ಪದ್ಮಾಸನಾರೂಢಳಾಗಿರುವ ಪಂಚಲೋಹದ ಸುಂದರ ಪ್ರತಿಮೆಯ ರೂಪದಲ್ಲಿರುವ ತಾಯಿಯನ್ನು ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರು ಎಂದು ಹಿರಿಯರು ಹೇಳುತ್ತಾರೆ.

       ಈ ದೇವಿಯನ್ನು ಪ್ರತಿಷ್ಠಾಪಿಸುವ ಮುನ್ನ ಇಲ್ಲಿ ಜ್ಯೋತಿರ್ಲಿಂಗವಿತ್ತು. ಕೋಲ ಮಹರ್ಷಿಗಳು ತಪವನ್ನಾಚರಿಸುತ್ತಿದ್ದ ಈ ಸ್ಥಳದಲ್ಲಿ ಈ ಲಿಂಗ ಉದ್ಭವಿಸಿತಂತೆ. ಇಂದು ದೇವಾಲಯದ ಮೂರ್ತಿಯ ಎದುರು ಇರುವ ನೆಲ ಅಂತಸ್ತಿನ ಅನತಿ ದೂರದಲ್ಲಿ ಈ ಪುರಾತನ ಜ್ಯೋತಿರ್ಲಿಂಗ ದರ್ಶನವನ್ನು ಮಾಡಬಹುದು. ಈ ಜ್ಯೋತಿರ್ಲಿಂಗವು ಎರಡು ಅಸಮಾನ ಭಾಗವಾಗಿ ಬಂಗಾರದ ರೇಖೆಯಿಂದ ವಿಭಜಿಸಲ್ಪಟ್ಟಿದೆ. ಈ ರೇಖೆಯು ಸೂರ್ಯ ಕಿರಣದಲ್ಲಿ ಗೋಚರಿಸುತ್ತದೆ. ಭಕ್ತರಿಗೆ ಕನ್ನಡಿಯ ಸಹಾಯದಿಂದ ರೇಖೆಯ ದರ್ಶನ ಮಾಡಿಸಲಾಗುತ್ತದೆ.

     ಈ ದೇವಾಲಯದ ಬಗ್ಗೆ ಸ್ಕಂದ ಪುರಾಣದಲ್ಲಿ ಕೂಡ ಉಲ್ಲೇಖವಿದೆ. ಇದು ದೇಗುಲದ ಪ್ರಾಚೀನತೆಯನ್ನು ಸೂಚಿಸುತ್ತದೆ. ಇಲ್ಲಿ ಪ್ರತಿನಿತ್ಯ ಬೆಳಗ್ಗೆ 5 ಗಂಟೆಗೆ ಪೂಜಾ ಕೈಂಕರ್ಯಗಳು ಪ್ರಾರಂಭವಾಗುತ್ತವೆ. ಇದಕ್ಕೆ ಉದಯಕಾಲದ ಪೂಜೆ ಎನ್ನುತ್ತಾರೆ. ಮಧ್ಯಾಹ್ನದ ಪೂಜೆಯ ಬಳಿಕ ರಾತ್ರಿ ಏಳು ಗಂಟೆಗೆ ಪ್ರದೋಷ ಪೂಜೆಯು ಜರುಗುತ್ತದೆ. ಈ ದೇವಿಯ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಅಗಣಿತ. ಕನ್ನಡಿಗರಿಗಿಂತ ಈ ದೇಗುಲಕ್ಕೆ ತಮಿಳುನಾಡು ಹಾಗೂ ಅದರಲ್ಲೂ ಕೇರಳದಿಂದಲೇ ಹೆಚ್ಚು ಭಕ್ತರು ಆಗಮಿಸುತ್ತಾರೆ. ಮಂಗಳವಾರ ದೇಗುಲ ದರ್ಶನ ಹಾಗೂ ಶುಕ್ರವಾರಗಳಂದು ಇಲ್ಲಿ ಸಹಸ್ರಾರು ಜನ ದೇವಿಯ ದರ್ಶನ ಪಡೆಯುತ್ತಾರೆ. ಈ ದೇಗುಲದ ಪೂಜಾ ವಿಧಗಳಲ್ಲಿ ಸಲಾಂ ಪೂಜೆ ಕೂಡ ಒಂದು.

      ಹಿಂದೆ ಈ ಕ್ಷೇತ್ರ ಮಹಾರಣ್ಯಪುರ ಎಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿ ಕೋಲ ಮಹರ್ಷಿಗಳು ಲೋಕಕಲ್ಯಾಣಾರ್ಥ ತಪವನ್ನಾಚರಿಸಿದ್ದರು. ಇವರ ಭಕ್ತಿಗೆ ಒಲಿದ ಶಿವನು ಅದೇ ಸ್ಥಳದಲ್ಲಿ ಪರಾಶಕ್ತಿಯನ್ನು ಪೂಜಿಸುವಂತೆ ಅಣತಿ ಇತ್ತನು. ಕೋಲ ಮಹರ್ಷಿಗಳು ತಪವನ್ನಾಚರಿಸಿದ ಭೂಮಿ ಕಾಲಾನಂತರದಲ್ಲಿ ಕೋಳಪುರಂ ಆಗಿ ಈಗ ಕೊಲ್ಲೂರಾಗಿದೆ. ಈ ಸ್ಥಳದಲ್ಲಿ ಮೂಕಾಂಬಿಕೆಯೂ ನೆಲೆಸಿದ್ದಾಳೆ.

         ಮೂಕಾಂಬಿಕೆಯ ಅವತಾರದ ಬಗ್ಗೆ ಒಂದು ಕಥೆ ಇದೆ. ಅತ್ಯಂತ ದುಷ್ಟನಾಗಿದ್ದ ಕೌಮಾಸುರ ಎಂಬ ದೈತ್ಯನು ಶಿವನಿಂದ ವರ ಪಡೆದು ತ್ರಿಭುವನವನ್ನೇ ತನ್ನದನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದಾಗ, ದೇವಾದಿದೇವತೆಗಳ ಪ್ರಾರ್ಥನೆಗೆ ಒಲಿದ ಆದಿಪರಾಶಕ್ತಿಯು ಹಾಗೂ ಶಿವ ಪ್ರತ್ಯಕ್ಷನಾಗಿ ಕೊಲ್ಲೂರು ಮೂಕಾಂಬಿಕಾ ದೇವಿ, ಕೌಮಾಸುರನಿಗೆ ವರನೀಡುವ ಸಮಯದಲ್ಲಿ ಅವನ ನಾಲಿಗೆಯ ಮೇಲೆ ಕುಳಿತು ಮಾತೇ ಹೊರಡದಂತೆ ಮಾಡಿ ಕೌಮಾಸುರನನ್ನು
ಮೂಕನನ್ನಾಗಿಸಿದಳು.

      ಅಸುರರ ಗುರುಗಳಾದ ಶುಕ್ರಾಚಾರ್ಯರು ತಮ್ಮ ತಪೋಬಲದಿಂದ ಮತ್ತೆ ಕೌಮಾಸುರನಿಗೆ ಮಾತು ಬರುವಂತೆ ಮಾಡಿದರು. ಆದರೆ, ಒಮ್ಮೆ ಮೂಕನಾಗಿದ್ದ ಕೌಮಾಸುರ ಮೂಕಾಸುರ ಎಂದೇ ಖ್ಯಾತನಾದ. ಮತ್ತೆ ಬ್ರಹ್ಮನಿಂದ ವರ ಪಡೆದು, ಬಲಿಷ್ಟನಾಗಿ ದೇವಾನುದೇವತೆಗಳನ್ನು - ಋಷಿಮುನಿಗಳನ್ನೂ, ನರರನ್ನೂ ಕಾಡತೊಡಗಿದ. ಈತನ ಪಾಪದ ಕೊಡ ತುಂಬಿದಾಗ ದೇವಿಯು ಸಿಂಹ ವಾಹಿನಿಯಾಗಿ ಆ ದೈತ್ಯನನ್ನು ಸಂಹರಿಸಿದಳು. ಮೂಕಾಸುರನನ್ನು ಕೊಂದ ದೇವಿ ಮೂಕಾಂಬಿಕೆಯೆಂದೇ ಹೆಸರಾದಳು. ಪ್ರತಿ ವರ್ಷ ಫಾಲ್ಗುಣ ಮಾಸದಲ್ಲಿ ಕೊಲ್ಲೂರಿನಲ್ಲಿ ರಥೋತ್ಸವ ಜರುಗುತ್ತದೆ. ಉತ್ತರ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9 ದಿನದ ಕಾರ್ಯಕ್ರಮಗಳು ಮೂಲಾನಕ್ಷತ್ರದವರೆಗೆ ನಡೆಯುತ್ತವೆ. ಜೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ ವಿಶೇಷ ಪೂಜೆಗಳು ಜರುಗುತ್ತವೆ. ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮ, ರಥೋತ್ಸವ, ಪೂರ್ಣಕುಂಭಾ ಅಭಿಷೇಕ ಮೊದಲಾದವು ಜರುಗುತ್ತವೆ. ನವೆಂಬರ್ - ಡಿಸೆಂಬ‌ರ್ ತಿಂಗಳಿನಲ್ಲಿ ವನಭೋಜನ ಎಂಬ ವಿಶಿಷ್ಟ ಆಚರಣೆಯೂ ನಡೆಯುತ್ತದೆ. ಇದಲ್ಲದೆ ಅಷ್ಟಬಂಧ ಬ್ರಹ್ಮ ಕಲಶೋತ್ಸವವೂ ನಡೆಯುತ್ತದೆ. 

       ಶ್ರೀ ಮೂಕಾಂಬಿಕೆ ಕೊಲ್ಲೂರು ದೇವಿಯ ದರ್ಶನ ಪಡೆಯಲು ತಾಲೂಕು ಕೇಂದ್ರವಾದ ಬೈಂದೂರಿನಲ್ಲಿ ಶ್ರೀ ಮೂಕಾಂಬಿಕಾ ರೈಲ್ವೆ ಸ್ಟೇಷನ್, ಕುಂದಾಪುರದ ಬಾರ್ಕೂರಿನ ರೈಲ್ವೆ ಸ್ಟೇಷನ್ ವ್ಯವಸ್ಥೆ ಇದೆ. ರಸ್ತೆಯ ಮೂಲಕ ದರ್ಶನಕ್ಕೆ ಬರುವುದಾದರೆ ಉಡುಪಿಯಿಂದ 75 ಕಿ. ಮೀ, ಕುಂದಾಪುರದಿಂದ 38 ಕಿ. ಮೀ, ಬೈಂದೂರಿನಿಂದ 28 ಕಿ. ಮೀ, ಸಿಗಂದೂರಿನಿಂದ 49 ಕಿ. ಮೀ, ಸಾಗರದಿಂದ 66 ಕಿ.ಮೀ. ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರದಿಂದ ಬೈಂದೂರಿನವರೆಗೆ ಕೊಲ್ಲೂರಿಗೆ ಹೋಗಲು ಅನೇಕ ಮಾರ್ಗಗಳು ಸಿಗುತ್ತದೆ. ಹೆಮ್ಮಾಡಿಯಿಂದ (22 ಕಿ ಮೀ) ಕೊಲ್ಲೂರಿಗೆ ಹೋಗುವ ದಾರಿಯಲ್ಲಿ ಚಿತ್ತೂರು ಕ್ರಾಸ್ ನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವರ ದರ್ಶನ ಪಡೆಯಬಹುದಾಗಿದೆ.

ನಮಸ್ತೇಸ್ತು ಮಹಾಮಾಯೇ ಶ್ರೀಪೀಠೇ ಸುರಪೂಜಿತೇ 
ಶಂಖಚಕ್ರಗದಾಹಸ್ತೇ ಮಹಾಲಕ್ಷ್ಮಿ ನಮೋಸ್ತುತೇ.

ನಮಸ್ತೇ ಗರುಡಾರೂಢೇ ಕೋಲಾಸುರಭಯಂಕರಿ 
ಸರ್ವಪಾಪಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ.

ಸರ್ವಜ್ಞೇ ಸರ್ವವರದೇ ಸರ್ವದುಷ್ಟಭಯಂಕರಿ 
ಸರ್ವದುಃಖಹರೇ ದೇವಿ ಮಹಾಲಕ್ಷ್ಮಿ ನಮೋಸ್ತುತೇ.

ಸಿದ್ಧಿಬುದ್ಧಿಪ್ರದೇ ದೇವಿ ಭುಕ್ತಿಮುಕ್ತಿಪ್ರದಾಯಿನಿ 
ಮಂತ್ರಮೂರ್ತೇ ಸದಾ ದೇವಿ ಮಹಾಲಕ್ಷ್ಮಿ ನಮೋಸ್ತುತೇ .....
 
ದುಷ್ಟ ದಾನವರ ಹರಣಕ್ಕಾಗಿ, ಶಿಷ್ಟಜನರ ಪರಿಪಾಲನೆಗಾಗಿ, ಮಹಾಮಹಿಮಳು ಆದ ಆದಿಶಕ್ತಿಯು ಸರ್ವರನ್ನು ರಕ್ಷಿಸಲಿ "ದೇವಿಯ ದರ್ಶನ ಪಡೆದು ಪುನೀತರಾಗೋಣ." ಬನ್ನಿ ಪ್ರವಾಸ ಹೋಗೋಣ.....
    ಮತ್ತೆ ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
 (ಚಿತ್ರಗಳು : ಅಂತರ್ಜಾಲ ಕೃಪೆ)
......................... ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು 
ನೇತಾಜಿ ಸುಭಾಶ್ಚಂದ್ರ ಬೋಸ್ 
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************


Ads on article

Advertise in articles 1

advertising articles 2

Advertise under the article