ನಿಷ್ಪಾಪಿ ಸಸ್ಯಗಳು : ಸಂಚಿಕೆ - 69
Wednesday, September 25, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 69
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ನೀವು ಶಾಲೆಗೆ ಹೋಗುವಾಗ ಅಥವಾ ಗದ್ದೆ, ಗುಡ್ಡದ ಬದಿಗಳಲ್ಲಿ ಕಡು ನೀಲಿಯಿಂದ ಕಡು ನೇರಳೆ ವರ್ಣದ ಹೂಗೊಂಚಲೊಂದು ರಾರಾಜಿಸುತ್ತಿರುವುದನ್ನು ಎಂದಾದರೂ ಗಮನಿಸಿದ್ದೀರಾ...? ಮೊಂಡಾದ ಚತುರ್ಭುಜದ ಕಾಂಡದುದ್ದಕ್ಕೂ ಮೂರು ದಿಕ್ಕಿಗೆ ಮೂರು ಒಂದಿಷ್ಟು ದಪ್ಪನೆ ಒರಟಾದ ಅಂಡಾಕಾರದ ರೋಮರಹಿತ ಎಲೆಗಳು. 3 ರಿಂದ 8 ಇಂಚುಗಳಷ್ಟು ಉದ್ದ, 5 ರಿಂದ 6 ಸೆ.ಮೀ. ತೊಟ್ಟು ಗಟ್ಟಿಯಾಗಿರುವ ಎಲೆಗಳ ತುದಿ ಚೂಪಾಗಿರುತ್ತದೆ. ಎಲೆಗಳ ಅಂಚು ಗರಗಸದ ಚೂಪಾದ ಹಲ್ಲುಗಳಂತಹ ಚೂಪಿನ ರಚನೆ ಹೊಂದಿದೆ.
ಪ್ರತಿ ಶಾಖೆಯ ತುದಿಯಲ್ಲಿ ಹೂ ಗೊಂಚಲು. ಮೂರು ಪುಟಾಣಿ ಎಲೆಗಳ ಮೇಲೆ ಮೇಲೇರುತ್ತಾ ಈ ಹೂಗೊಂಚಲು ಬೆಳೆಯತೊಡಗುತ್ತದೆ. ಗೊಂಚಲುದ್ದಕ್ಕೂ ಮೂರು ಮೂರು ಪುಟ್ಟ ಎಲೆಗಳ ಮೇಲೆ ಮೂರು ಕೆಲವೊಮ್ಮೆ ಎರಡು ಪುಟ್ಟ ಹೂಗೊಂಚಲು. ಒಂದೊಂದು ಪುಟ್ಟ ಗೊಂಚಲಲ್ಲಿ ಆರೇಳು ಮೊಗ್ಗುಗಳು. ಇವುಗಳ ಬೆಳವಣಿಗೆ ಒಮ್ಮೆಲೇ ಆಗದು. 15 ರಿಂದ 20 ಸೆಂ.ಮೀ ಉದ್ದನೆಯ ಪುಷ್ಪಮಂಜರಿಯ ನಡುನಡುವೆ ಅಲ್ಲಲ್ಲಿ ಅರಳುವ ಹೂಗಳು ಸೊಗಸನ್ನು ಹೆಚ್ಚಿಸುತ್ತವೆ.
ಹೂಗಳು ನಸು ನೇರಳೆ ವರ್ಣದ ಪುಷ್ಪಪಾತ್ರೆಯೊಳಗೆ ಐದು ಎಸಳುಗಳ ಜೊತೆ ಐದು ಕೇಸರಗಳು ಶಲಾಕಾಗ್ರದ ಜೊತೆಗರಳುತ್ತವೆ. ಅತ್ತ ಇತ್ತ ಎರಡೆರಡು ದಳಗಳು. ಈ ಅಭಿಮುಖ ದಳಗಳ ನಡುವೆ ಕಡು ನೇರಳೆ ಬಣ್ಣದೊಳದ್ದಿಕೊಂಡು ಉಳಿದ ದಳಗಳಿಗಿಂತ ವಿನ್ಯಾಸ ಬದಲಿಸಿ ನಸು ಬಾಗಿ ಮದುವಣಗಿತ್ತಿಯಂತೆ ನಿಂತ ಮತ್ತೊಂದು ದಳ! ಈ ಹೂಗಳ ಚೆಲುವಿಕೆಗೆ ನೀವತ್ತ ಕಣ್ಣರಳಿಸಲೇ ಬೇಕು! ಇದು ಯಾವ ಗಿಡವೆಂದು ಎಲೆಗಳತ್ತ ಖಂಡಿತ ನೋಡುವಿರಿ. ಇದರ ಹಣ್ಣುಗಳು ಅಂಡಾಕಾರವಾಗಿ ಹಸಿರಾಗಿದ್ದು ಮಾಗಿದಾಗ ರಸವತ್ತಾಗಿ ಕಡು ನೇರಳೆ ಬಣ್ಣ ಹೊಂದಿ ಒಂಟಿ ಬೀಜವಿರುತ್ತದೆ.
ಸುವಾಸನೆ ತುಂಬಿದ ಎಲೆಗಳಿರುವ ಈ ಗಿಡ 6-7 ಅಡಿಗಳೆತ್ತರ ಬೆಳೆದು ಎಲ್ಲಾದರೂ ಪೊದರುಗಳ ನಡುವೆ ಹೂ ಬಿಡುವ ಕಾಲಕ್ಕೆ ಎದ್ದು ಕಾಣುತ್ತದೆ. ತುಳು ಭಾಷೆಯಲ್ಲಿ ಇದನ್ನು ಇಸಾವು ಎಂದು ಕರೆದರೆ ಕನ್ನಡದಲ್ಲಿ ಭಾರಂಗಿ, ಗಂಟು ಭಾರಂಗಿ ಎನ್ನುವರು. ಸಂಸ್ಕೃತ ದಲ್ಲಿ ಪದ್ಮ, ಕಸಘ್ನಿ ಎಂದು ಕರೆದರೆ ಹೂ ಅರಳುವಾಗ ಬಿಸಿ ಕಲ್ಲಿದ್ದಲಿನಂತೆ ಕಾಣುವುದೆಂದು ಅಂಗಾರವಲ್ಲಿ ಎನ್ನುವರು. ಗ್ಲೋರಿ ಬೋವರ್ ಎಂಬ ಹೆಸರಿನಿಂದ ಬಹಳ ಪ್ರಸಿದ್ಧವಾಗಿದೆ.
ಹಿಂದೆ ವರ್ಬೆನೆಸಿ ಕುಟುಂಬಕ್ಕೆ ಸೇರಿದ ಭಾರಂಗಿ ಈಗ ಲ್ಯಾಮಿಯಾಸಿ ಕುಟುಂಬಕ್ಕೆ ಸೇರಿದೆ. ಸಸ್ಯ ಶಾಸ್ರ್ತೀಯ ಹೆಸರು ಕ್ಲೆರೊಡೆಂಡ್ರಮ್ ಸೆರಾಟಮ್ (Clerodendrum serratum). ಕ್ಲೆರೊ ಅಂದರೆ ಅವಕಾಶ, ಡೆಂಡ್ರಾನ್ ಅಂದರೆ ಪೊದೆಸಸ್ಯ, ಸೆರಾಟಮ್ ಅಂದರೆ ಎಲೆಗಳ ಗರಗಸದಂತಹ ಹಲ್ಲಿನ ಅಂಚುಗಳನ್ನು ಆಧರಿಸಿದೆ.
ಈ ಸಸ್ಯ ಸೂರ್ಯನ ಶಕ್ತಿ ಹೊಂದಿದೆ ಎಂಬ ನಂಬಿಕೆ ಇದ್ದು ಮಂಗಳಕರ ಸಸ್ಯವೆಂದೂ ಭಾವಿಸಲಾಗುತ್ತದೆ. ಇದೊಂದು ಮಧ್ಯಮ ಗಾತ್ರದ ಪೊದೆ ಸಸ್ಯ. ವಿಶ್ವಾದ್ಯಂತ 150 ರಿಂದ450 ಜಾತಿಗಳಿವೆ. ಪ್ರಪಂಚದ ಉಷ್ಣವಲಯದ ಹಾಗೂ ಬೆಚ್ಚಗಿನ ಪ್ರದೇಶಗಳಲ್ಲಿ ಬೆಳೆಯುವ ಭಾರಂಗಿ ದಕ್ಷಿಣ ಆಫ್ರಿಕಾ, ನದಕ್ಷಿಣ ಏಷ್ಯಾ, ಮಲೇಷ್ಯಾಗಳಿಗೆ ಸ್ಥಳೀಯ. ಅಮೇರಿಕಾ, ಆಸ್ಟ್ರೇಲಿಯಾ, ಭಾರತ, ಶ್ರೀಲಂಕಾ ಗಳಲ್ಲಿ ಕಾಣಸಿಗುತ್ತದೆ. ಮಧ್ಯ ಭಾರತದುದ್ದಕ್ಕೂ , ಹಿಮಾಲಯ, ಭೂಪಾಲ್, ಬಂಗಾಳ, ಬಿಹಾರಗಳಲ್ಲಿ ಯಥೇಚ್ಛವಾಗಿದೆ.
ಮಕ್ಕಳೇ, ಭಾರಂಗಿ ನೀವು ಎಣಿಸಿದಂತೆ ಕೇವಲ ಒಂದು ಸಸ್ಯ ಮಾತ್ರವಲ್ಲ. ಇದು ಪ್ರಬಲ ಅಲರ್ಜಿ ವಿರೋಧೀ ಸಸ್ಯ. ಇದರ ಔಷಧೀಯ ಗುಣಗಳ ಬಗ್ಗೆ ಬಹಳಷ್ಟು ಸಂಶೋಧನೆಗಳು ನಡೆದಿವೆ. ಇದರಿಂದ ತಯಾರಿಸಲಾದ ಚೂರ್ಣವನ್ನು ಪ್ರಾಣರಕ್ಷಕವೆಂದು ಪರಿಗಣಿಸಲಾಗುತ್ತದೆ! ಐದು ಸಾವಿರ ವರ್ಷಗಳ ಹಿಂದೆಯೇ ಇದರ ಔಷಧೀಯ ಗುಣಗಳ ಪರಿಚಯವಾಗಿ ಅಸ್ತಮಾ, ಅಲರ್ಜಿಗೆ ಬಳಕೆಯಾಗುತ್ತಿತ್ತೆನ್ನಲಾಗುತ್ತದೆ. ಭೃಗು ಮಹರ್ಷಿ ಈ ಸಸ್ಯವನ್ನು ಕಂಡುಹಿಡಿದರೆನ್ನುತ್ತಾರೆ. ಎಳೆ ಎಲೆ, ಹೂ ಗಳನ್ನು ತರಕಾರಿಯಂತೆ ಬಳಸುವರು.
ಇದರ ಬೇರು, ಕಾಂಡ, ಎಲೆಗಳಿಂದ ಕಷಾಯ, ಲೇಪ, ಚೂರ್ಣ ಇತ್ಯಾದಿ ತಯಾರಿಸುವ ಬಗ್ಗೆ ಚರಕ ಸಂಹಿತೆ, ಶುಶ್ರುತ ಸಂಹಿತಾ, ಅಷ್ಟಾಂಗ ಹೃದಯ. ಇತ್ಯಾದಿಗಳಲ್ಲಿ ದಾಖಲಾಗಿದೆ.
ಭಾರತೀಯ ಔಷಧ ಪದ್ಧತಿಯಲ್ಲಿ ಸಾಮಾನ್ಯ ಶೀತ, ಕೆಮ್ಮು ಕ್ಷಯ, ಮೂಗುಸೋರುವಿಕೆ, ದೀರ್ಘಕಾಲದ ಉಸಿರಾಟದ ಅಸ್ವಸ್ಥತೆ ಹಾಗೂ ಅವುಗಳಿಗಾಧಾರವಾಗಿರುವ. ರೋಗಲಕ್ಷಣ ಗುಣಪಡಿಸಲು ಬಳಸಲಾಗುತ್ತದೆ. ಕಾಮಾಲೆ, ಯಕೃತ್ತಿಗೆ ಸಂಬಂಧಿಸಿದ ಅಸ್ವಸ್ಥತೆ, ಗೌಟ್, ಕೀಲುನೋವು, ಸಂಧಿವಾತ, ಹುಳದ ಬಾಧೆ, ಗರ್ಭಾಶಯದ ಪೈಬ್ರಾಯ್ಡ್ ಗುಣಪಡಸಲು ಅತ್ಯುಪಯುಕ್ತವೆಂದು ಹಳ್ಳಿಗಳ ಔಷಧಿ ಪಂಡಿತರ ಅಭಿಪ್ರಾಯ. ಕಿಬ್ಬೊಟ್ಟೆಯ ಗಡ್ಡೆ, ರಕ್ತಸ್ರಾವ, ಊತ, ಬಿಕ್ಕಳಿಕೆ, ಪೈಲ್ಸ್, ವಾತ ದೋಷ ನಿವಾರಕ. ಹೆಚ್ಚುವರಿ ಕೀವು ನಿವಾರಕ, ಸುಡುವ ಸಂವೇದನೆ, ಕ್ಷಯ ರೋಗ , ಹರ್ಪಿಸ್ ನಂತಹ ಚರ್ಮ ರೋಗ ನಿವಾರಕ.
ಇದು ವಿಷಕಾರಿ ಸಸ್ಯವಲ್ಲ. ಸಸ್ಯಮೂಲ ಕಹಿಯಾಗಿದೆ. ಗಟ್ಟಿಯಾದ ಬೇರುಗಳು ಮುರಿಯಲು ಕಷ್ಟ, ನಾರಿನಂತಿರುತ್ತದೆ. ವಿವಿಧ ರಾಸಾಯನಿಕಗಳ ಸಂಯುಕ್ತಗಳನ್ನು ಹೊಂದಿದೆ. ಎಲೆಗಳಲ್ಲಿ ಕಾರ್ಬೋಹೈಡ್ರೇಟ್, ಸ್ಟಿರಾಯ್ಡ್ , ಫಿನಾಲಿಕ್ಸ್ ಗಳಿವೆ. ಆರೋಗ್ಯಕರ ಉಸಿರಾಟದ ವ್ಯವಸ್ಥೆಗೆ ಬಹಳ ಪ್ರಸಿದ್ಧವಾದ ಈ ನಿಷ್ಪಾಪಿ ಸಸ್ಯವು ಧ್ವನಿಗೆ ಉತ್ತಮ ಲಯವನ್ನು ನೀಡುತ್ತದೆಂದು ಪ್ರತೀತಿಯಿದೆ. ಮಾರುಕಟ್ಟೆಯಲ್ಲಿ ಪ್ರಾಣ್ ರಕ್ಷಕ್ ಎಂಬ ಹೆಸರಿನ ಉತ್ಪನ್ನ ಇದನ್ನಾಧರಿಸಿದೆ.
ಮಕ್ಕಳೇ, ನೀವೂ ಈ ಸಸ್ಯವೊಂದನ್ನು ನೆಟ್ಟು ಬೆಳೆಸಬಹುದು. ನಮ್ಮ ಪಾರಂಪರಿಕ ಔಷಧಿ ನೀಡುವವರು ಇದನ್ನು ಅಗತ್ಯಕ್ಕೆ ತಮ್ಮ ಕೈಯಳತೆಗೆ ಸಿಗಲೆಂದು ನೆಟ್ಟು ಬೆಳೆಸುತ್ತಿದ್ದರು. ಕಾಡು ನಾಶವಾಗುತ್ತಿರುವ ಈ ಕಾಲಘಟ್ಟದಲ್ಲಿ ಇದನ್ನು ಗುರುತಿಸಿ ರಕ್ಷಿಸುವುದು ನಮ್ಮ ಕರ್ತವ್ಯವಾಗಬೇಕಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************