-->
ಜೀವನ ಸಂಭ್ರಮ : ಸಂಚಿಕೆ - 157

ಜೀವನ ಸಂಭ್ರಮ : ಸಂಚಿಕೆ - 157

ಜೀವನ ಸಂಭ್ರಮ : ಸಂಚಿಕೆ - 157
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
               
             
ಮಕ್ಕಳೇ..... ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲು, ಐದನೇ ಉಪಾಂಗ ಈಶ್ವರ ಪ್ರಣಿದಾನದ ಬಗ್ಗೆ ತಿಳಿದುಕೊಳ್ಳೋಣ. ಈಶ್ವರ ಎಂದರೆ ನಾವು ಚಿತ್ರದಲ್ಲಿ ನೋಡಿದ್ದೀವಲ್ಲ ಅದಲ್ಲ. ಇದು ಸಂಸ್ಕೃತ ಪದ. ಇದರ ಅರ್ಥ ಜಗತ್ತಿನ ಒಡೆಯ, ಜಗತ್ತಿನ ಆಧಾರ ಯಾವುದೌ ಅದು ಈಶ್ವರ. 

ಈಗ ಉದಾಹರಣೆಗೆ ನಾವು ಬಟ್ಟೆಯನ್ನು ಮಾಡುತ್ತೇವೆ. ಬಟ್ಟೆಗೆ ಆಧಾರ ನೂಲು. ನೂಲಿಗೆ ಆಧಾರ ಹತ್ತಿ. ಹತ್ತಿಗೆ ಆಧಾರ ಗಿಡ. ಗಿಡಕ್ಕೆ ಆಧಾರ ಭೂಮಿ. ಭೂಮಿಗೆ ಆಧಾರ ಸೂರ್ಯ. ಸೂರ್ಯ ನಿಗೆ ಆಧಾರ ಯಾವುದೋ ಒಂದು ಶಕ್ತಿ ಇದೆ, ಅದು ಈಶ್ವರ. ಯಾವುದು ಎಲ್ಲದಕ್ಕೂ ಮೂಲ, ಎಲ್ಲದಕ್ಕೂ ಆಧಾರ ಅದೇ ಈಶ್ವರ. 

ಪಾತಂಜಲ ಹೇಳುತ್ತಾನೆ ನೀನು ಹೇಗೂ ಪ್ರೀತಿಸುತ್ತೀಯಾ. ಆ ಪ್ರೀತಿ ಸ್ವಚ್ಛ ಮಾಡಿಕೋ. ಪ್ರೇಮ ಎನ್ನುವುದು ದೊಡ್ಡ ಸಂಪತ್ತು. ಇದನ್ನು ಹೊಲಸು ಮಾಡಬೇಡ. ನೀರು ನಿನ್ನಲ್ಲಿಯೇ ಇದೆ. ಅದನ್ನು ಹೊಲಸು ಮಾಡಿ ಕುಡಿಯಬೇಡ. ಏನನ್ನು ಪ್ರೀತಿಸಬೇಕು ಅದನ್ನು ಪ್ರೀತಿಸು. ಈಗ ಹೂವಿದೆ ಅದನ್ನು ಪ್ರೀತಿಸು. ಆ ಹೂವು ನೋಡಿದಾಗ ಈ ಹೂವು ನೀಡಿದ ಕೈ ನೆನಪಿಗೆ ಬಂದರೆ, ಈ ಹೂವ ಯಾರಿಗೆ ಕೊಡಬೇಕೆಂದು ಚಿಂತಿಸಿದರೆ, ಪ್ರೀತಿ ಹೊಲಸಾಯಿತು.

ನಾವು ಆತ್ಮೀಯರ ಮನೆಗೆ ಹೋಗಿದ್ದೇವೆ ಎಂದು ಭಾವಿಸಿಕೊಳ್ಳಿ. ಅಪರೂಪಕ್ಕೆ ಬಂದಿದ್ದಾರೆಂದು ಬೆಳ್ಳಿ ಬಟ್ಟಲಿನಲ್ಲಿ ಹಾಲನ್ನು ನೀಡಿದ್ದಾರೆ. ನಾವು ಹಾಲಿನ ಕಡೆ ಲಕ್ಷ್ಯ ಕೊಟ್ಟರೆ ಅದು ಪ್ರೀತಿ ಸ್ವಚ್ಛ. ಅದನ್ನು ಬಿಟ್ಟು ಬೆಳ್ಳಿ ಬಟ್ಟಲಿನ ಕಡೆ ಲಕ್ಷ್ಯ ಹೋದರೆ ಮನಸ್ಸು ಹೊಲಸು. ನಾನು ಇಷ್ಟು ವರ್ಷ ಕೆಲಸ ಮಾಡಿದ್ದೇನೆ, ಈತನಿಗೆ ಬೆಳ್ಳಿ ಬಟ್ಟಲು ಹೇಗೆ ಬಂತು ಅಂತ ಚಿಂತಿಸಿದರೆ ಮನಸ್ಸು ಹೊಲಸಾಯ್ತು. ಹಾಲಿನ ಮೇಲೆ ಲಕ್ಷ್ಯ ಹೋದಮೇಲೆ ಹಾಲಿನ ರುಚಿ ಎಲ್ಲಿ ಸಿಗುತ್ತದೆ. ಹಾಲನ್ನು ಪ್ರೀತಿಸಬೇಕಿತ್ತು. ಅದರ ಬದಲು ಬೆಳ್ಳಿ ಬಟ್ಟಲು ನಮ್ಮಲ್ಲಿ ವಿಷ ಮೂಡಿಸಿಬಿಟ್ಟಿತ್ತು. ತನ್ನ ಬಗ್ಗೆ ಅವರ ಬಗ್ಗೆ ಒಂದು ತರಹ ಭಾವನೆ ಮೂಡಿತು. ಅದು ಸಂತೋಷ ಕೊಡುವ ಬದಲು ಸಂತೋಷ ಕೆಡಿಸಿತು. ಪ್ರೇಮ ಕೆಟ್ಟಿತು. ಈ ಬೆಳ್ಳಿ ಬಟ್ಟಲು ನನ್ನ ಬಳಿ ಇಲ್ಲವಲ್ಲ ಎಂದರೂ ಪ್ರೇಮ ಕೆಟ್ಟಿತು. ಚೆನ್ನಾಗಿದೆ ಎಂದು ಸಂತೋಷ ಪಟ್ಟರೆ ತಪ್ಪಿಲ್ಲ. ನನ್ನ ಬಳಿ ಇಲ್ಲ ಅಂದರೆ ಪ್ರೇಮ ಹೊಲಸಾಯಿತು. 

ಪ್ರೇಮವನ್ನು ಎಲ್ಲಿ ಹಚ್ಚಬೇಕು ಎಂದರೆ ಯಾವುದು ವಿಶ್ವದಲ್ಲಿ ದೊಡ್ಡದು ಅದಕ್ಕೆ ಪ್ರೇಮ ಹಚ್ಚಬೇಕು. ಜಗತ್ತು ಇಷ್ಟು ಸುಂದರವಾಗಿದೆಯಲ್ಲ. ಸುಂದರ ಜಗತ್ತು ನಿರ್ಮಿಸಿದ ಶಕ್ತಿಗೆ, ನಿಸರ್ಗಕ್ಕೆ ಪ್ರೇಮ ಹಚ್ಚಬೇಕು. ಎಲ್ಲವನ್ನು ಪ್ರೀತಿಸುವುದು. ಅದು ಹೊಲಸಾಗದಂತೆ ನಿಸರ್ಗಕ್ಕೆ ಮೀಸಲಾಗಿ ಇರುವುದು. ಇಡೀ ಜಗತ್ತನ್ನು ಪ್ರೀತಿಸಬೇಕು. ಆ ಜಗತ್ತು ಇರುವುದರಿಂದ ನಾನು ನೀವು ಇದ್ದೇವೆ. ಜಗತ್ತೇ ಇಲ್ಲ ಅಂದರೆ ನಾವಿಲ್ಲ. ಯಾವುದು ಇಲ್ಲದೆ ಇದ್ದರೆ ನಾವು ಇರುವುದಿಲ್ಲವೋ ಅದೇ ದೇವರು. ಈ ಜಗತ್ತು ಇಲ್ಲ ಅಂದ್ರೆ ನಾವಿಲ್ಲ. ಹಾಗಾಗಿ ಅದೊಂದು ಸಾಕಾರ ದೇವರು. ಇದನ್ನೆಲ್ಲ ರೂಪಿಸಿದ ಶಕ್ತಿ ಇದೆಯಲ್ಲ ಅದು ಅದೃಶ್ಯ ದೇವರು. ಇದರ ಕಡೆ ಪ್ರೇಮ ಹರಿಸಿದರೇ ಈಶ್ವರ ಪ್ರಣಿದಾನವಾಗುತ್ತದೆ. ಇದರಿಂದ ನಮ್ಮ ಬದುಕು ಚೆನ್ನಾಗಿ ಆಗುತ್ತದೆ. 

ಇಡಿಯಾಗಿ ನೋಡಬೇಕು, ಬಿಡಿಯಾಗಿ ನೋಡುವುದಲ್ಲ. ಸೂರ್ಯಮಂಡಲ, ತಾರಾಮಂಡಲ, ಸೂರ್ಯಮಂಡಲದಲ್ಲಿ ಭೂಮಿ ಬರುತ್ತದೆ. ಇದಕ್ಕೆ ಸಮರ್ಪಣೆ ಮಾಡುತ್ತಾ ಇರುವುದೇ ಈಶ್ವರ ಪ್ರಣಿದಾನ. ನಾವು ಯಾರಾದರೂ ಗೃಹಪ್ರವೇಶಕ್ಕೆ ಹೋದರೆ, ಅದನ್ನು ನೋಡಿ ಚೆನ್ನಾಗಿರುವುದನ್ನು ಪ್ರಸಂಸೆ ಮಾಡಿ ಹೇಳಿ ಬಂದರೆ ಅವರಿಗೂ ಸಂತೋಷ ನಮಗೂ ಸಂತೋಷ. ಇಲ್ಲದಿದ್ದರೆ ಅವರು ಅಂತಾರೆ, ಈತನಿಗೆ ಉಣಿಸಿದ್ದು , ತಿನ್ನಿಸಿದ್ದು ವ್ಯರ್ಥ ಅಂತ ಭಾವಿಸುತ್ತಾರೆ. ನಾನು ನನ್ನ ಸಂತೋಷಕ್ಕಾಗಿ ಮಾಡಿದ್ದು, ತೋರಿಸಿದ್ದು ಎಂದರೆ ಆರಾಮಾಗಿ ಇರುತ್ತೇವೆ. ಏನು ಮಾಡುತ್ತೀವಿ ಅದೆಲ್ಲ ದೇವನಿಗಾಗಿ ಎನ್ನುವ ಭಾವ ಬಂದರೆ ಪ್ರಸಾದೀಕರಣ, ಅದೇ ಈಶ್ವರ ಪ್ರಣಿದಾನ. 

ಈ ಜಗತ್ತಿನಲ್ಲಿ ಇರುವ ವಸ್ತುಗಳು ನಿಸರ್ಗದ ರಚನೆ. ಈಗ ಹೂವಿದೆ ಅದನ್ನು ನೋಡುವಾಗ ಅದರ ನಿರ್ಮಿಸಿದ ನಿಸರ್ಗದ ಬಗ್ಗೆ ಪ್ರೇಮ ಇದ್ದರೆ, ನಾವು ಜಗತ್ತಿನಲ್ಲಿ ಏನೇನು ಅನುಭವಿಸುತ್ತೇವೆ ಅದೆಲ್ಲ ನಿಸರ್ಗದ ಕಾಣಿಕೆ. ನಿಸರ್ಗ ಎಂದರೆ ಭೂಮಂಡಲ, ಜಲಮಂಡಲ, ವಾಯುಮಂಡಲ, ಸೂರ್ಯಮಂಡಲ ಮತ್ತು ತಾರಾಮಂಡಲ, ಅನಂತವಾದ ಆಕಾಶ ಎಲ್ಲ ಸೇರಿದೆ. ಇವೆಲ್ಲ ನಿಸರ್ಗದ ಕಾಣಿಕೆ. ನಿಸರ್ಗದ ಪ್ರಸಾದ ಎಂದು ಬಳಸಬೇಕು. ಇದು ನಾನು ಮಾಡಿದ್ದಲ್ಲ ಸತ್ಯದೇವನೇ ಮಾಡಿದ್ದು ಅಂತ ಅನುಭವಿಸುವುದೇ ಈಶ್ವರ ಪ್ರಣಿದಾನ. ಇದೆಲ್ಲ ಈಶ್ವರನ ಕಾಣಿಕೆ ಎನ್ನುವ ಭಾವ ಮುಖ್ಯ. ಅಂದರೆ ಪ್ರತಿಯೊಂದು ವಸ್ತು ನೋಡುವಾಗ, ಆ ವಸ್ತುವಿನ ಹಿಂದಿರುವ ಸತ್ಯದ ಜ್ಞಾನ ಇರುತ್ತದೆ. ಆ ಪ್ರೇಮ ಭಾವ, ಭಕ್ತಿ ಭಾವವೇ ಈಶ್ವರ ಪ್ರಣಿದಾನ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************



Ads on article

Advertise in articles 1

advertising articles 2

Advertise under the article