-->
ನಾನು ಮೆಚ್ಚಿದ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 01

ನಾನು ಮೆಚ್ಚಿದ ಶಿಕ್ಷಕರು - ಮಕ್ಕಳ ಬರಹಗಳು : ಸಂಚಿಕೆ - 01

ಶಿಕ್ಷಕರ ದಿನಾಚರಣೆಯ ವಿಶೇಷ ಸಂಚಿಕೆ - 2024
ನಾನು ಮೆಚ್ಚಿದ ಶಿಕ್ಷಕರು
ಮಕ್ಕಳ ಬರಹಗಳು : ಸಂಚಿಕೆ - 01


                  ನಾನು ಮೆಚ್ಚಿದ ಶಿಕ್ಷಕಿ
ನಾನು ಧೃತಿ ಚೆಂಬಾರ್ಪು, 6ನೇ ತರಗತಿ.... ನನಗೆ ಚಿಕ್ಕ ವಯಸ್ಸಿನಿಂದಲೂ ಸಂಗೀತದಲ್ಲಿ ಅಭಿರುಚಿ ಇದೆ. ನನಗೆ ಇದನ್ನು ಅಭ್ಯಸಿಸಲು ಸಹಕರಿಸಿದವರು ನನ್ನ ಸಂಗೀತ ಗುರು, ಶ್ರೀಮತಿ ವಿದುಷಿ ಲಕ್ಷ್ಮಿ ವರುಣ್ ಅವರು. ಇವರು ತುಂಬಾ ಒಳ್ಳೆಯ ಸಂಗೀತ ಶಿಕ್ಷಕಿ. 
ನಾನು ಮೊದಲನೆಯ ಬಾರಿ ಸಂಗೀತ ತರಬೇತಿ ಸೇರಿದಾಗ ನನ್ನನ್ನು ಹುರಿದುಂಬಿಸಿದ್ದರು. ಅವರು ತಮ್ಮ ಎಲ್ಲ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾರೆ. ಅವರ ಈ ಗುಣ ನನಗೆ ಬಹಳ ಇಷ್ಟ ಆಯಿತು. ಇವರಿಗೆ ಎಷ್ಟೇ ವಿದ್ಯಾರ್ಥಿಗಳಿದ್ದರೂ ಪ್ರತಿ ವಿದ್ಯಾರ್ಥಿಗೆ ಗಮನ ನೀಡಿ ಪಾಠ ಮಾಡುತ್ತಾರೆ. ಇವರು ಹಲವು ಶಿಬಿರಗಳನ್ನೂ ನಡೆಸುತ್ತಾರೆ. ಮಕ್ಕಳು ಮಾಡುವ ತಪ್ಪುಗಳನ್ನು ಅವರು ತಾಳ್ಮೆಯಿಂದ ಸರಿಪಡಿಸುತ್ತಾರೆ. ನನಗೆ ಅವರು ನೀಡಿದ ಅತ್ಯುತ್ತಮ ಸಲಹೆಯೆಂದರೆ, “ಏನಾದರೂ ನಾವು ಕಲಿಯುವುದನ್ನು ನಿಲ್ಲಿಸಬಾರದು. ನಾವು ಕಲಿತಷ್ಟೂ ನಾವು ಮುಂದುವರಿಯುತ್ತೇವೆ”. ಇವರು ನನ್ನ ಮೇಲೆ ದೊಡ್ಡ ಪ್ರಭಾವ ಬೀರಿದ್ದಾರೆ. ಇವರ ಬೆಂಬಲ ಹಾಗೂ ಮಾರ್ಗದರ್ಶನದಿಂದ ನಾನು ತುಂಬಾ ಖುಷಿಯಿಂದ ಸಂಗೀತ ಕಲಿಯುತ್ತಿದ್ದೇನೆ. ನಾನು ಪ್ರತಿ ವಾರ ಸಂಗೀತ ತರಗತಿಗೆ ಕಾದಿರುತ್ತೇನೆ. ಲಕ್ಷ್ಮಿ ಅವರು ನನ್ನ ಅತ್ಯಂತ ಪ್ರಿಯವಾದ ಶಿಕ್ಷಕಿಯಾಗಿದ್ದಾರೆ.
........................................ ಧೃತಿ ಚೆಂಬಾರ್ಪು
6ನೇ ತರಗತಿ
ದೇವ್-ಇನ್ ನ್ಯಾಷನಲ್ ಶಾಲೆ
ಸಹಕಾರ ನಗರ, ಬೆಂಗಳೂರು
********************************************



        ನನ್ನ ನೆಚ್ಚಿನ ಶಿಕ್ಷಕಿ ಪುಷ್ಪಲತಾ ಮೇಡಂ
ನಾನು ಕುಮಾರಿ ತನ್ವಿ , 7ನೇ ತರಗತಿ.... "ಮನೆಯೇ ಮೊದಲ ಪಾಠ ಶಾಲೆ ಜನನಿ ತಾನೇ ಮೊದಲ ಗುರುವು" ಎಂಬ ಮಾತಿನಂತೆಯೇ ನಮ್ಮ ಜೀವನದ ಮೊದಲ ಶಿಕ್ಷಕಿ ತಾಯಿಯಾಗಿರುತ್ತಾರೆ. ನಮ್ಮ ಮನೆಯೇ ಮೊದಲ ಪಾಠ ಶಾಲೆಯಗಿರುತ್ತದೆ. ನಂತರದ ದಿನಗಳಲ್ಲಿ ನಮ್ಮನ್ನ ಶಾಲೆಗೆ ಸೇರ್ಪಡೆಗೊಳಿಸುತ್ತಾರೆ. ಅದೇ ನಮ್ಮ ಜೀವನದ ಎರಡನೇ ದೇಗುಲವಾಗಿರುತ್ತದೆ. ಶಿಕ್ಷಕರೇ ದೇವರು ಎಂದು ಪೂಜಿಸುವ ಸಂಸ್ಕೃತಿ ನಮ್ಮದು. ನಾನು ನನ್ನ ನೆಚ್ಚಿನ ಶಿಕ್ಷಕಿ ಪುಷ್ಪಲತಾ ಬಗ್ಗೆ ಒಂದೆರಡು ಅನಿಸಿಕೆ. 
ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಕೇಪು ಇಲ್ಲಿನ ವಿದ್ಯಾ ಸಂಸ್ಥೆಗೆ ೯೮ ವರ್ಷದ ಇತಿಹಾಸವಿದೆ. ನಾನು ಈ ಶಾಲೆಯ ೭ನೇ ತರಗತಿ ವಿದ್ಯಾರ್ಥಿನಿ. ಕಾಳಜಿ ತೋರಿಸುವ ಶಿಕ್ಷಕರಿಗೆ ಗೌರವವೂ ಜಾಸ್ತಿ. ಮಕ್ಕಳ ಪಾಲಿಗೆ ಯಾವ ಶಿಕ್ಷಕರ ಮೇಲೆ ನಂಬಿಕೆ, ವಿಶ್ವಾಸ ಇದೆಯೋ ಅವರು ಹೇಳಿದ್ದನ್ನ ನಾವು ಕೇಳುತ್ತೇವೆ. ಹಾಗೆ ನಾನು ಕೂಡಾ. ಕನ್ನಡ ಶಿಕ್ಷಕಿಯಾದರೂ ನಮ್ಮನ್ನ ಕ್ರೀಡೆ, ಇನ್ನಿತರ ವಿಷಯಗಳಲ್ಲೂ ತೊಡಗಿಸಿಕೊಳ್ಳಲು ಸ್ಫೂರ್ತಿ ತುಂಬಿದವರು ಪುಷ್ಪಲತಾ ಮೇಡಂ. ಬೋಧನೆ ಮಾತ್ರವಲ್ಲದೇ ಮಕ್ಕಳ ಬಾಳಿಗೆ ಬೇಕಾದ ಮೌಲ್ಯಯುತ ಶಿಕ್ಷಣ, ಸಂಸ್ಕಾರ, ನಮ್ಮ ಸಂಸ್ಕೃತಿ ಬಗ್ಗೆ, ಗುರು ಹಿರಿಯರಿಗೆ ಗೌರವ ಕೊಡುವ ಬಗ್ಗೆ, ನೈತಿಕ ಶಿಕ್ಷಣದ ಬಗ್ಗೆ ಮನದಟ್ಟು ಆಗುವಂತೆ ನೀತಿ ಪಾಠಗಳ ಮೂಲಕ ತಿಳಿ ಹೇಳುತ್ತಾರೆ. ಬಾಲ್ಯದಲ್ಲಿಯೇ ಮಕ್ಕಳ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಪೂರಕವಾಗಿ ವಿದ್ಯೆ ಕಲಿಸುವ, ಆ ಮಕ್ಕಳನ್ನು ಬೆಳೆಸುವ ಮನೋಭಾವನೆ ಹೊಂದಿರುವ ಇಂತಹ ಶಿಕ್ಷಕರಿರುವುದು ನನ್ನ ಪಾಲಿಗೆ ಹೆಮ್ಮೆ. ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ಈ ಶಿಕ್ಷಕರ ಬಗ್ಗೆ ನಾನು ಸಣ್ಣ ಬರಹ ಬರೆದು ಅವರಿಗೆ ಗೌರವ ಸಲ್ಲಿಸುತ್ತಾ ಪುಸ್ತಕದಲ್ಲಿರುವುದನ್ನು ಕಲಿಸುವುದು ಮಾತ್ರ ಶಾಲೆಯ ಶಿಕ್ಷಣವಲ್ಲ ; ಬುದ್ಧಿವಂತಿಕೆಯಿಂದ ಮಕ್ಕಳನ್ನು ಚಟುವಟಿಕೆಗಳಿಗೆ ಹಚ್ಚುವುದೂ ಉತ್ತಮವಾದ ಶಿಕ್ಷಣವೆಂದು ಭಾವಿಸುವ ಎಲ್ಲಾ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.
........................................ ಕುಮಾರಿ ತನ್ವಿ 
7ನೇ ತರಗತಿ 
ದ. ಕ. ಜಿ. ಪಂ. ಸ. ಹಿ. ಪ್ರಾ. ಶಾಲೆ ಕೇಪು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



                   ನಾನು ಮೆಚ್ಚಿದ ಶಿಕ್ಷಕರು
   ನಾನು ಆದ್ಯ ಜೆ, 7ನೇ ತರಗತಿ.... ಎಲ್ಲಾ ಶಿಕ್ಷಕರಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು.... ನನ್ನ ನೆಚ್ಚಿನ ಟೀಚರ್ ರೀಮಾ. ನನಗೆ ಅವರೆಂದರೆ ತುಂಬಾ ಇಷ್ಟ. ಅವರು ತುಂಬಾ ಒಳ್ಳೆಯ ಶಿಷ್ಕಕಿಯಾಗಿದ್ದು ಪಾಠವನ್ನು ಯಾವುದನ್ನಾದರೂ ಅತ್ಯುತ್ತಮ ಉದಾಹರಣೆಗಳೊಂದಿಗೆ ವಿವರಿಸುತ್ತಾರೆ. ಅವರು ಮಕ್ಕಳಿಗೆ ಪೆಟ್ಟು ಕೊಡದೆ ತನ್ನ ಬುದ್ಧಿವಾದ ದ ಮಾತುಗಳಿಂದಲೇ ಶಿಸ್ತು ಬದ್ಧವಾಗಿ ಇರುವಂತೆ ಮಾಡುತ್ತಾರೆ. ನನ್ನನು ಉತ್ತಮ ವಿದ್ಯಾರ್ಥಿನಿ ಯನ್ನಾಗಿ ರೂಪಿಸಲು ನೀವು ಮಾಡಿದ ಎಲ್ಲಾ ಪ್ರಯತ್ನಗಳಿಗೆ ನಾನು ಚಿರಋಣಿ. ನೀವು ನನ್ನಲ್ಲಿ ಇಟ್ಟಿರುವ ಅತಿ ಕಾಳಜಿಯನ್ನು ನಾನು ಯಾವತ್ತೂ ಮರೆಯಲು ಸಾದ್ಯವಿಲ್ಲ. ನನಗೆ ಕಡಿಮೆ ಮಾರ್ಕ್ ಬಂದಾಗ ನನ್ನನ್ನು ತಿದ್ದಿ ತೀಡಿ ಪೂರ್ತಿ ಅಂಕ ಬರುವ ಹಾಗೆ ಮಾಡಿದ ನಿಮಗೆ ನಾನು ತುಂಬಾ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನಗೆ ನಿಮ್ಮ ಮೇಲೆ ತುಂಬಾ ಗೌರವ ವಿದೆ. ಪಠ್ಯವನ್ನೂ ಅದ್ಬುತವಾಗಿ ಭೋದಿಸಿ ಕಲಿಕೆಯಲ್ಲಿ ಆಸಕ್ತಿ ಮೂಡಿಸಿದ ನಿಮಗೆ ಮಕ್ಕಳ ಜಗಲಿಯ ಮುಖಾಂತರ ಶಿಕ್ಷಕ ದಿನಾಚಾರಣೆಯ ಶುಭಾಶಯಗಳನ್ನು ತಿಳಿಸಲು ಇಷ್ಟಪಡುತ್ತೇನೆ.
................................................ ಆದ್ಯ ಜೆ
7ನೇ ತರಗತಿ
ಸೇಕ್ರೆಡ್ ಹಾರ್ಟ್ ಇಂಗ್ಲೀಷ್ 
ಮೀಡಿಯಂ ಶಾಲೆ ಮಡಂತ್ಯಾರು
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


                 ನಾನು ಮೆಚ್ಚಿದ ಶಿಕ್ಷಕರು 
      ನಾನು ವಚನ್. ಸಿ, 4ನೇ ತರಗತಿ.... "ಶಿಕ್ಷಕರು" ಅಥವಾ "ಗುರುಗಳು" ಅಂದಾಗ ಮನಸ್ಸಿಗೆ ಬರುವ ಮೊದಲ ಪದ "ದೇವರು". ನಾನು ನಾಲ್ಕನೇ ತರಗತಿ ವಿದ್ಯಾರ್ಥಿ ವಚನ್ ಸಿ. ನನ್ನ ಇಷ್ಟು ದಿನದ ವಿದ್ಯಾರ್ಥಿ ಜೀವನದಲ್ಲಿ ತುಂಬಾ ಗುರುಗಳನ್ನು ನಾನು ಪಡೆದಿದ್ದೇನೆ. "ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು" ಸತ್ಯದ ಮಾತು. ನನ್ನ ಮೊದಲ ಶಾಲೆ ಪ್ರಬೋದ್ ಮೊಂಟಸರಿ, ಮಂಡ್ಯ. ನಂದಿನಿ ಟೀಚರ್ ಮತ್ತು ಬಳಗವನ್ನು ನೆನಪಿಸಿಕೊಳ್ಳಲು ಇದೊಂದು ಅವಕಾಶ. ಈಗ ಪ್ರಸ್ತುತ ನಾನು ಓದುತ್ತಿರುವ ಶಾಲೆ ಪೋದಾರ್ ಇಂಟರ್ನ್ಯಾಷನಲ್ ಮಂಡ್ಯ. ಇಲ್ಲಿ ನನಗೆ ಗುರುಗಳಾಗಿ ಶಿಲ್ಪಾ ಸ್ಟ್ಯಾನ್ಲಿ, ರೇಖಾ.ಸಿ.ಎಂ, ಭುವನೇಶ್ವರಿ, ಭವ್ಯ.ಕೆ.ಬಿ, ಪಂಕಜ, ಮನೋಜ್ ಕುಮಾರ್, ಮಂಜುನಾಥ್.ಟಿ, ಚೈತ್ರ, ಲೋಹಿತ್ ಟಿ, ರಾಘವೇಂದ್ರ, ಪೆರಲ್ ಜೇಮ್ಸ್, ಸೌಮ್ಯ. ಎಸ್, ಚರಣ್, ಪವಿತ್ರ. ಸಿ.ಎನ್, ಮಾನಸ, ಶೈಲಜಾ, ಜಾಕ್ಲಿನ್, ಸುಜಾತ ಮೋಹನ್, ಚೇತನ, ಕೃತಿ ಮತ್ತು ರೇಷ್ಮಾ ಇವರ ಜೊತೆಗೆ ಇನ್ನೂ ಹಲವಾರು ಶಿಕ್ಷಕರು ನಮ್ಮನ್ನು ಮುನ್ನಡೆಸಲು ಅವರ ಅಮೂಲ್ಯ ಸಮಯವನ್ನು ಮೀಸಲಿಟ್ಟಿದ್ದಾರೆ. ನನಗೆ ದಿನೇ ದಿನೇ ಹೊಸ -ಹೊಸ ವಿಚಾರಗಳನ್ನು ತಿಳಿಸುತ್ತಾ, ಸರಿ- ತಪ್ಪುಗಳನ್ನು ಗುರುತಿಸಿ ತಿದ್ದಿ ಬುದ್ದಿ ಹೇಳುವ ಶಿಕ್ಷಕರಿಗೆ ಈ ಸಂದರ್ಭದಲ್ಲಿ ಹೇಳಬಯಸುವುದು "ಹ್ಯಾಪಿ ಟೀಚರ್ಸ್ ಡೇ"
................................................ ವಚನ್. ಸಿ 
4ನೇ ತರಗತಿ 
ಪೋದಾರ್ ಇಂಟರ್ನ್ಯಾಷನಲ್ 
ಸ್ಕೂಲ್, ಮಂಡ್ಯ.
********************************************


                  ನಾನು ಮೆಚ್ಚಿದ ಶಿಕ್ಷಕರು 
     ನಾನು ನಿಹಾ ಎಸ್. ಆರ್, 2ನೇ ತರಗತಿ... ನನ್ನ ಎಲ್ಲಾ ಪ್ರೀತಿಯ ಶಿಕ್ಷಕ, ಶಿಕ್ಷಕಿಯರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು. ನಾನು ನಿಹಾ ಎಸ್ ಆರ್. ಪಾಣೆಮಂಗಳೂರಿನ ಎಸ್. ಎಲ್. ಎನ್. ಪಿ. ವಿದ್ಯಾಲಯದಲ್ಲಿ ಎರಡನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನ್ನ ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕಿಯರು ನನಗೆ ಅಚ್ಚುಮೆಚ್ಚು. ಶಿಕ್ಷಕರು ನಮಗೆ ಜ್ಞಾನದ ಮೂಲಕ ಬೆಳಕಿನ ದಾರಿಯನ್ನು ತೋರಿಸುವರು. ಮಾರ್ಗದರ್ಶನ ನೀಡುವವರು. 
ನಾನು ಶಾಲೆಗೆ ಸೇರಿದ ಮೊದಲ ದಿನಗಳಲ್ಲಿ ನನಗೆ ಶಾಲೆಯಲ್ಲಿ ಭಯವಾಗುತ್ತಿತ್ತು. ಅಮ್ಮನ ನೆನಪಾಗುತ್ತಿತ್ತು. ಆಗ ನನ್ನ ಎಲ್ಲಾ ಶಿಕ್ಷಕರು ನನಗೆ ಅಮ್ಮನಂತೆ ಪ್ರೀತಿಯನ್ನು ನೀಡಿದ್ದರಿಂದ ನನ್ನಲ್ಲಿರುವ ಭಯ ದೂರವಾಗಿ ಶಾಲೆಯು ನನಗೆ ಮನೆಯಂತೆ ಅನಿಸ ತೊಡಗಿತು. ಎಲ್ಲಾ ಪಾಠಗಳನ್ನು ನಮ್ಮ ಮನಸ್ಸಿಗೆ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುವುದಷ್ಟೇ ಅಲ್ಲದೆ ನನ್ನ ಎಲ್ಲಾ ಚಟುವಟಿಕೆಗಳಿಗೆ ಅಂದರೆ ಹಾಡು, ನೃತ್ಯ, ಚಿತ್ರಕಲೆ, ಆಟ ಎಲ್ಲದಕ್ಕೂ ಭಾಗವಹಿಸಲು ನನ್ನಲ್ಲಿ ಧೈರ್ಯ ತುಂಬಿ ನನ್ನನ್ನು ಪ್ರೋತ್ಸಾಹಿಸಸುತ್ತಾರೆ. ನಾನು ಮಾಡಿದ ತಪ್ಪುಗಳನ್ನು ಕ್ಷಮಿಸಿ, ತಿದ್ದಿ, ಬುದ್ಧಿ ಹೇಳಿ ನನ್ನನ್ನು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಮಾಡುವ ನನ್ನ ಎಲ್ಲಾ ಶಿಕ್ಷಕರಿಗೂ ನನ್ನ ಸಾಷ್ಟಾಂಗ ನಮಸ್ಕಾರಗಳು. ನನ್ನ ಜೀವನಕ್ಕೆ ದಾರಿದೀಪವಾಗಿರುವ ಎಲ್ಲಾ ಗುರುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳು.
....................................... ನಿಹಾ ಎಸ್. ಆರ್ 
2ನೇ ತರಗತಿ 
ಎಸ್.ಎಲ್.ಎನ್.ಪಿ ವಿದ್ಯಾಲಯ
ಪಾಣೆಮಂಗಳೂರು
*******************************************


                  ನಾನು ಮೆಚ್ಚಿದ ಶಿಕ್ಷಕರು
     ನಾನು ಮೃಣಾಲಿ, 6ನೇ ತರಗತಿ... ನನ್ನ ಮೆಚ್ಚಿನ ಶಿಕ್ಷಕರು ಪ್ರಮಿತ ಟೀಚರ್. ಅವರು ನಮ್ಮ ತರಗತಿ ಶಿಕ್ಷಕರು. ನಮಗೆಲ್ಲರಿಗೂ ಅವರು ಬಹಳ ಅಚ್ಚುಮೆಚ್ಚು ಹಾಗೂ ಅವರು ನಮ್ಮ ತರಗತಿಯ ಗಣಿತ ಶಿಕ್ಷಕರು. ಅವರು ನಮಗೆಲ್ಲರಿಗೂ ಒಂದು ಸರಿಯಾದ ಗುರಿಯನ್ನು ತೋರಿಸುತ್ತಾರೆ. ಅವರು ತರಗತಿಯಲ್ಲಿ ಕಟ್ಟುನಿಟ್ಟಿನ ಶಿಸ್ತನ್ನು ಕಾಪಾಡುತ್ತಾರೆ. ಶಿಸ್ತನ್ನು ಪಾಲಿಸದೆ ಇರುವ ವಿದ್ಯಾರ್ಥಿಗಳಿಗೆ ತಿಳಿ ಹೇಳುತ್ತಾರೆ. ಶಾಲೆಯಲ್ಲಿ ಎಲ್ಲರಿಗೂ ಅವರು ಪ್ರೀತಿ ಪಾತ್ರರು. ಪ್ರತಿಯೊಬ್ಬರೂ ಅವರನ್ನು ಬಹಳ ಗೌರವಿಸುತ್ತಾರೆ. ಅವರು ತಮ್ಮ ಕರ್ತವ್ಯವನ್ನು ಬಹಳ ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ. ಪಾಠವನ್ನು ನಮ್ಮ ಮನ ಮುಟ್ಟುವಂತೆ ವಿವರಿಸುತ್ತಾರೆ. ನೀತಿ ಪಾಠಗಳನ್ನು ಕಲಿಸುತ್ತಾರೆ.
ನಾನು ಅವರನ್ನು ತುಂಬಾ ಇಷ್ಟ ಪಡುತ್ತೇನೆ ಹಾಗೂ ಗೌರವಿಸುತ್ತೇನೆ. ಅವರು ನಮಗೆ ವಿಷಯಗಳನ್ನು ಸುಲಭವಾದ ರೀತಿಯಲ್ಲಿ ಅರ್ಥವಾಗುವಂತೆ ಕಲಿಸುತ್ತಾರೆ.
.................................................. ಮೃಣಾಲಿ
6ನೇ ತರಗತಿ
ಸೈಂಟ್ ಜೋಸೆಫ್ ಅನುದಾನಿತ 
ಶಾಲೆ, ನಯನಾಡು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************

                        ಗುರುಗಳು
ಓಂ ಶ್ರೀ ಗುರುಬ್ಯೊ ನಮಃ.... ನಾನು ಸಿಂಧು ಜಿ ಭಟ್ ಕಲ್ಕಾರ್, 7ನೇ ತರಗತಿ.... ಗುರುಗಳ ಬಗ್ಗೆ ಹೇಳುವುದು ಸಣ್ಣ ವಿಷಯವೇನಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಹತ್ತಾರು ಗುರುಗಳಿರಬಹುದು. ಆದರೆ ಗುರು ಜೀವನದ ಮಾರ್ಗ ತೊರಿಸುವಂತವರು. ನಮ್ಮನ್ನು ಉತ್ತಮ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನಾಗಿಸಲು ಹರಸಾಹಸ ಪಡುವ ಶ್ರಮಜೀವಿಯವರು. ಅಂತಹವರ ಬಗ್ಗೆ ಹೇಳಲು ನಾನು ಸಮರ್ಥಳಲ್ಲ. ಆದರೂ ನಾನೆರಡು ವಾಕ್ಯ ಬರೆಯಲೇ ಬೇಕೆಂದುಕೊಂಡಿದ್ದೇನೆ. ನಾನು ಮಲೆನಾಡಿನ ಶೃಂಗೇರಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಒಡಿಯೂರಿನ ಶಾಲೆಗೆ ಯು ಕೆ ಜಿ ಗೆ ದಾಖಲಾದೆ. ಆಗ ನನಗೆ ಬಾಷೆ ಬಾರದು, ಜನಪರಿಚಯವಿಲ್ಲ, ಆ ಸಂಧರ್ಬದಲ್ಲಿ ಸಾಯೀಶ್ವರಿ ಮಾತಾಜಿ ನನ್ನನ್ನು ಮುದ್ದು ಮುದ್ದಾಗಿ ಮಾತಾಡಿಸಿದರು. ನನ್ನ ಅಮ್ಮನಂತೆ ಅಕ್ಷರ ಮಂತ್ರ ಎಲ್ಲವನ್ನು ಹೇಳಿಕೊಡುತ್ತಿದ್ದರು. ನಾವೆಲ್ಲ ಎಷ್ಟು ತೊಂದರೆ ಕೊಟ್ಟರೂ ಬೇಸರಿಸುತಿರಲಿಲ್ಲ. ಅವರನ್ನ ಎಂದಿಗೂ ಮರೆಯಲಾಗುವುದಿಲ್ಲ. ಹಾಗೆಯೆ ಅಂದಿನಿಂದ ಇಂದಿನವರೆಗೂ ನನಗೆ ವಿದ್ಯಾಬ್ಯಾಸಕ್ಕೆ ಸಹಕರಿಸಿದ ಎಲ್ಲಾ ಗುರುಗಳಿಗೂ ಈ ಶಿಕ್ಷಕರ ದಿನಾಚರಣೆ ದಿನ ಶಿರಸಾ ವಂದಿಸುತ್ತೇನೆ.
       ಈ ಸಂದರ್ಭದಲ್ಲಿ ನನ್ನ ಒಂದು ಘಟನೆ ನೆನಪಿಸುತ್ತೇನೆ.. ನಾನು ಆರನೇ ತರಗತಿಯಲ್ಲಿ ಒದುತ್ತಿರುವಾಗ ನಾನು ಖಿನ್ನತೆಗೆ ಒಳಗಾಗಿದ್ದೆನಂತೆ. ನನಗೆ ಒದಲು ಸಾಧ್ಯವಿಲ್ಲ. ಗೆಳತಿಯರಿಲ್ಲ, ಖಷಿಯ ವಿಚಾರಗಳಿಲ್ಲ, ಹೀಗೆಲ್ಲ ಯೊಚಿಸಿ ಮೂಡಿಯಂತೆ ವರ್ತಿಸುತ್ತಿದ್ದೆ. ಇದನ್ನು ತಿಳಿದ ಅಮ್ಮ ನನ್ನ ತರಗತಿಯ ಗುರುಗಳಾದ ಚಿತ್ರಕಲಾ ರವರಲ್ಲಿ ಹೇಳಿಕೊಂಡರಂತೆ, ಆಗ ನನ್ನ ಟೀಚರ್ ಚಿತ್ರಕಲಾರವರು ನನ್ನನ್ನು ಕರೆದು ತುಂಬಾ ಸಮಾಧಾನದ ಮಾತುಗಳನ್ನು ಹೇಳಿದರು. ನನ್ನ ಗೆಳತಿಯಾಗುವೆ ಎಂದರು. ಮನಸ್ಸಿಲ್ಲದೆ ನಾನು ಬಾಕಿ ಮಾಡಿರುವ ನೋಟ್ಸ್ ಗಳನ್ನು ಬೇರೆಯವರಿಂದ ಕೊಡಿಸಿ ಬರೆಸಿದರು. ಯಾವುದೆ ವಿಚಾರವಿದ್ದರೂ ಫೊನ್ ಮಾಡುವಂತೆ ತಿಳಿಸಿದರು. ಈಗ ನಾನೇನೆಂದು ತಿಳಿಯಿತು. ನನಗೂ ಏನಾದರೂ ಸಾದಿಸಬೇಕೆಂಬ ಛಲ ಹುಟ್ಟಿತು. ಈಗ ನನಗೆ ಚಿತ್ರಕಲಾ ಟೀಚರ್ ಸಾಕ್ಷಾತ್ ಸರಸ್ವತಿದೇವಿಯೆ ಕಂಡಂತೆ ಆಯಿತು. ಹೊಸ ಹುರುಪು ನನಗಾಯಿತು. ಹಾಗೆಯೆ ಗಂಗಾ ಮಾತಾಜಿ ಕೂಡ ನನಗೆ ಗೆಳತಿಯಂತಿದ್ದಾರೆ. ಉತ್ತಮ ಮಾರ್ಗದರ್ಶಕರಾಗಿದ್ದಾರೆ. ಈಗಲೂ ನನ್ನ ತಪ್ಪುಗಳೇನಾದರೂ ಕಂಡಲ್ಲಿ ತಿದ್ದಿ ಬುದ್ದಿ ಹೇಳುತ್ತಿರುತ್ತಾರೆ. ಅಷ್ಟೇ ಅಲ್ಲ ನನ್ನ ಎಲ್ಲಾ ಗುರುಗಳೂ ನನಗೆ ನನ್ನ ಎಲ್ಲಾ ವಿಷಯಗಳಲ್ಲಿಯೂ ಉತ್ತಮ ಅಂಕಗಳಿಸಲು ಸಹಕರಿಸುತ್ತಿದ್ದಾರೆ. ಎಲ್ಲರಿಗೂ ನನ್ನ ನಮನಗಳು....
............................. ಸಿಂಧು ಜಿ ಭಟ್ ಕಲ್ಕಾರ್
7ನೇ ತರಗತಿ
ಶ್ರೀ ಗುರುದೇವ ವಿದ್ಯಾಪೀಠ ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
********************************************


               ನಾನು ಮೆಚ್ಚಿದ ಶಿಕ್ಷಕರು
ನಾನು ಶ್ರೀನಿಕಾ ಎಂ. ಎ, 2ನೇ ತರಗತಿ....
      ಶಿಕ್ಷಕರ ದಿನಾಚರಣೆ ಶುಭಾಶಯಗಳು.
ನಮ್ಮ ಶಾಲೆಯಲ್ಲಿ 5 ಅಧ್ಯಾಪಕರು ಇದ್ದಾರೆ.
ನನಗೆ ಕನ್ನಡ ಟೀಚರ್ ತುಂಬಾ ಇಷ್ಟ. ಅವರ ಹೆಸರು ತೀರ್ಥಾವತಿ. ನಾವು ಅವರನ್ನು ತೀರ್ಥಮೆಡಂ ಎಂದು ಕರೆಯುತ್ತೇವೆ. ನನ್ನನ್ನು ತುಂಬಾ ಮುದ್ದು ಮಾಡುತ್ತಾರೆ. ಅವರು ರಜೆ ಮಾಡಿದರೆ ಬೇಸರ ಆಗುತ್ತದೆ. ನಮಗೆ ಪ್ರತಿ ವಿಷಯದ ಬಗ್ಗೆ ಅರ್ಥ ಆಗುವ ರೀತಿ ಹೇಳಿ ಕೊಡುತ್ತಾರೆ. ನಾನು ಏನಾದರೂ ಬರೆಯುವಾಗ ತಪ್ಪಾದರೆ ಅಳುತ್ತಿದ್ದೆ. ಆಗ ಸಮಾಧಾನ ಮಾಡಿ ಅವರ ಮಡಿಲಲ್ಲಿ ಕೂತುಕೊಳ್ಳಿಸಿ ಸರಿಯಾಗಿ ಬರೆಯಲು ಹೇಳಿಕೊಡುತ್ತಿದ್ದರು. ಈವಾಗ ನಾನು ಅಳುವುದನ್ನು ಕಡಿಮೆ ಮಾಡಿದ್ದೇನೆ. ನನ್ನ ಅಚ್ಚುಮೆಚ್ಚಿನ ಟೀಚರ್ ಅವರಿಂದಾಗಿ ಅವರ ಮಾತಿನಿಂದ ತುಂಬಾ ಧೈರ್ಯ ಬರುತ್ತದೆ. ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡುತ್ತಾರೆ.ಎಲ್ಲರಿಗೂ ಇಂತಹ ಟೀಚರ್ ಸಿಗಬೇಕು.... ಧನ್ಯವಾದಗಳು.
........................................ ಶ್ರೀನಿಕಾ ಎಂ. ಎ
2ನೇ ತರಗತಿ 
ಸರಕಾರಿ ಮಾದರಿ ಹಿರಿಯ 
ಪ್ರಾಥಮಿಕ ಶಾಲೆ ಕಡಬ
ಕಡಬ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************



              ನಾನು ಮೆಚ್ಚಿದ ಶಿಕ್ಷಕರು
ನಾನು ಮೋಕ್ಷಿತಾ ಶೆಟ್ಟಿ, 5ನೇ ತರಗತಿ... ನನ್ನ ನೆಚ್ಚಿನ ಶಿಕ್ಷಕರ ಹೆಸರು ರಶ್ಮಿ. ಅವರು ನಮಗೆ ಗಣಿತ ಕಲಿಸುತ್ತಾರೆ. ಅವರು ಆದರ್ಶ ಶಿಕ್ಷಕರು. ಅವರು ಚೆನ್ನಾಗಿ ಕಲಿಸುತ್ತಾರೆ. ಅವರು ಯಾವುದನ್ನಾದರು ಅತ್ಯುತ್ತಮ ಉದಾಹರಣೆಗಳೊಂದಿಗೆ ವಿವರಣೆ
ಕೊಡುತ್ತಾರೆ. ಅವರು ಶಿಸ್ತುಬದ್ದ ಮತ್ತು ಸಮಯ ಪಾಲಕರು. ಅವರ ಬೋಧನಾ ವಿಧಾನವು ಸರಳ ಮತ್ತು ಅರ್ಥಮಾಡಿಕೊಳ್ಳಲು ಸುಲಭವಾಗಿದೆ. ಅವರು ನಮಗೆ ಒಳ್ಳೆಯ ಅಭ್ಯಾಸಗಳನ್ನು ಮತ್ತು ನೈತಿಕ ಮೌಲ್ಯಗಳನ್ನು ಕಲಿಸುತ್ತಾರೆ. ಅವರು ಯಾವಾಗಲು ಎಲ್ಲಾ ವಿದ್ಯಾರ್ಥಿಗಳಿಗೆ ಸಮಾನ ಗಮನ ನೀಡುತ್ತಾರೆ. ನನ್ನ ಶಿಕ್ಷಕರ ಬಗ್ಗೆ ನನಗೆ ತುಂಬಾ ಗೌರವ ಮತ್ತು ಹೆಮ್ಮೆ ಇದೆ.
........................................ ಮೋಕ್ಷಿತಾ ಶೆಟ್ಟಿ
5ನೇ ತರಗತಿ
ವಿಠಲ ಜೇಸಿಸ್ ಇಂಗ್ಲಿಷ್ 
ಮೀಡಿಯಂ ಸ್ಕೂಲ್, ವಿಟ್ಲ
ಬಂಟ್ವಾಳ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ
******************************************** 


                  ನಾನು ಮೆಚ್ಚಿದ ಶಿಕ್ಷಕರು
     ನಾನು ಜನ್ಯ ಬಿ, 7ನೇ ತರಗತಿ... ನನ್ನ ಜೀವನದಲ್ಲಿ ಎಲ್ಲರೂ ನನಗೆ ಮೆಚ್ಚಿನ ಶಿಕ್ಷಕರು. ಎಲ್ಲಾ ಶಿಕ್ಷಕರನ್ನು ದೇವರು ನಮಗೆ ಉಡುಗೊರೆಯಾಗಿ ನೀಡಿದ್ದಾರೆ. ಅವರು ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಲು ತುಂಬಾ ಪ್ರಯತ್ನ ಮಾಡುತ್ತಾರೆ. ಅವರು ನಮಗೆ ವಿಶೇಷ ಮಾರ್ಗದರ್ಶಿಯಾಗಿದ್ದಾರೆ. ಅವರು ಸರಿಯಾದ ಮಾರ್ಗವನ್ನು ಆಯ್ಕೆಮಾಡಲು ಮಾರ್ಗದರ್ಶನ ನೀಡುತ್ತಾರೆ. ಶಿಕ್ಷಕರಿಂದ ನಮಗೆ ಬೇಕಾದಷ್ಟು ಶಿಕ್ಷಣ ಪಡೆಯಬಹುದು. ಅವರು ನಮ್ಮ ಜೀವನದಲ್ಲಿ ಬೇಕಾದ ಒಳ್ಳೆಯ ವಿಚಾರಗಳನ್ನು ಹೇಳಿಕೊಡುತ್ತಾರೆ. ನಾವು ಎಲ್ಲಿಯಾದರೂ ತಪ್ಪು ದಾರಿಯಲ್ಲಿ ಹೋಗುತ್ತಿದರೆ, ಅವರು ನಮಗೆ ಸರಿಯಾದ ದಾರಿಯನ್ನು ತೋರಿಸುತ್ತಾರೆ. ನಮಗೆ ಶಾಲೆಯಲ್ಲಿ ಪಾಠವನ್ನು ಹೇಳಿಕೊಡುವ ಶಿಕ್ಷಕರು ಮಾತ್ರ ಶಿಕ್ಷಕರಲ್ಲ. ಶಾಲೆಯ ಹೊರಗೆ ಭರತನಾಟ್ಯ, ಯಕ್ಷಗಾನ, ಸಂಗೀತ ಹಾಗೂ ಇನ್ನಿತರ ಕಲೆಗಳನ್ನು ಹೇಳಿಕೊಡುವವರು ಸಹ ನಮ್ಮ ಶಿಕ್ಷಕರಾಗಿರುತ್ತಾರೆ. ಎಲ್ಲಾ ಶಿಕ್ಷಕರ ಆಸೆ ಏನೆಂದರೆ ನಾವು ಜೀವನದಲ್ಲಿ ಉತ್ತಮ ವ್ಯಕ್ತಿಯಾಗುವುದು. ಶಿಕ್ಷಕರು ನಮಗೆ ದಾರಿದೀಪದ ಹಾಗೆಯೇ. ಎಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯಗಳು....
.................................................. ಜನ್ಯ ಬಿ
7ನೇ ತರಗತಿ
ಶ್ರೀ ಗುರುದೇವ ಆಂಗ್ಲ ಮಾದ್ಯಮ 
ಶಾಲೆ, ಒಡಿಯೂರು
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article