ಸ್ವರೂಪ ಶಿಕ್ಷಣದ ಆರಂಭೋತ್ಸವದ ಕಲಿಕಾ ಹಬ್ಬಗಳು
Thursday, August 1, 2024
Edit
ಲೇಖನ : ಸ್ವರೂಪ ಶಿಕ್ಷಣದ ಆರಂಭೋತ್ಸವದ ಕಲಿಕಾ ಹಬ್ಬಗಳು
ಬರಹ : ಕವಿತಾ ಶ್ರೀನಿವಾಸ ದೈಪಲ
'ಚೈತನ್ಯ ' ನೆಲ್ಯಡ್ಕ, ಅಂತರ,
ನರಿಕೊಂಬು ಅಂಚೆ ಮತ್ತು ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94806 25773
ಪುಸ್ತಕ... ಪುಸ್ತಕ... ಪುಸ್ತಕ... ಎಲ್ಲಿ ನೋಡಿದರೂ ರಾಶಿ ರಾಶಿ ಪುಸ್ತಕ....!! ನಾನು ಕುಳಿತ ಜಾಗದಿಂದ ಕಣ್ಣು ಹಾಯಿಸಿದಾಗ ಸುತ್ತಲೂ ಸಾವಿರಾರು ಪುಸ್ತಕಗಳು. ಲಕ್ಷಾಂತರ ಅಕ್ಷರಗಳು. ಹೊಸ ಪದಗಳು ಕಣ್ಣಿಗೆ ಬೀಳುವಾಗ ಓದದೆ ಇರಲಾದಿತೇ...? ಮುಟ್ಟಿದೆ ಒಂದು ಪುಸ್ತಕ, ಮುನ್ನುಡಿ, ಬೆನ್ನುಡಿ ಓದಿದಾಗ, ಇನ್ನೊಂದು ಪುಸ್ತಕ, ಮತ್ತೊಂದು ಪುಸ್ತಕ.... ಹೀಗೆ ನಾಲ್ಕೈದು ಪುಸ್ತಕಗಳನ್ನು ಓದಿ ಮುಗಿಸಿದೆ. ಅಬ್ಬಾ..! ತಿಂಗಳಿಗೆ ಒಂದು ಪುಸ್ತಕ ಕಷ್ಟದಲ್ಲಿ ಓದಿ ಮುಗಿಸುತ್ತಿದ್ದ ನನಗೆ ಒಂದು ವಾರದಲ್ಲಿ 14 ಪುಸ್ತಕಗಳನ್ನು ಓದುವ ಸಾಧ್ಯತೆ ನನ್ನೊಳಗಿದೆ ಎಂಬ ಅರಿವಾಯಿತು. ಇದೆಲ್ಲಾ ಸಾಧ್ಯವಾದದ್ದು ಸ್ವರೂಪ ಮನೆಯಲ್ಲಿ...!!
ಸ್ವರೂಪ ಮನೆಯೇ ಜ್ಞಾನದೇಗುಲ. ಅಲ್ಲಿರುವವರೆಲ್ಲಾ ಜ್ಞಾನದಾಹಿಗಳು. ಗೋಪಾಡ್ಕರ್ ಸರ್ ಯಾವಾಗಲೂ ಹೇಳುತ್ತಿದ್ದ ಓದುವ ಹಬ್ಬ, ಗೀಚುವ ಹಬ್ಬ, ಬರೆಯುವ ಹಬ್ಬ 'ಮಾತನಾಡುವ ಹಬ್ಬ ಮತ್ತು ಹುಡುಕಾಟದ ಹಬ್ಬಗಳು - ಹೇಗಿರಬಹುದು..? ಎಂಬ ಕುತೂಹಲದಿಂದ ಕಾಯುತ್ತಿದ್ದ ನಮಗೆ ತಿಳಿದುಕೊಳ್ಳುವ ಸಮಯ ಬಂದೇ ಬಿಟ್ಟಿತ್ತು....!
ಸ್ವರೂಪದಲ್ಲಿ ಈ ಶೈಕ್ಷಣಿಕ ವರ್ಷದ ಮೊದಲ ಒಂದು ವಾರ ಓದುವ ಹಬ್ಬ. ಕಪಾಟಿನಲ್ಲಿ ಭದ್ರವಾಗಿ ಸುಂದರವಾಗಿ ಕುಳಿತಿದ್ದ ಪುಸ್ತಕಗಳನ್ನೆಲ್ಲಾ ನೆಲದ ಮೇಲೆ ರಾಶಿರಾಶಿಯಾಗಿ ಎಳೆದು ಹಾಕಿಕೊಂಡು ಪುಸ್ತಕದ ದೊಡ್ಡ ಬೆಟ್ಟ ನಿರ್ಮಿಸಿ ಅದನ್ನು ಬಾಚಿ ತಬ್ಬಿಕೊಂಡು ನಮಗೆ ಬೇಕಾದ್ದನ್ನು, ಬೇಕಾದಷ್ಟು ಆರಿಸಿ, ಜೋಡಿಸಿ ಅವುಗಳಿಂದ ಆಕೃತಿ ರಚಿಸಿ ಪುಸ್ತಕದ ಕೋಟೆ, ಮನೆ ಕಟ್ಟಡದ ಆಕಾರ, ಗ್ರಂಥಾಲಯ, ಸೇತುವೆ ಹೀಗೆ ನಮಗೆ ತೋಚಿದ ರೀತಿಯಲ್ಲಿ ಸೃಜನಾತ್ಮಕವಾಗಿ ಜೋಡಿಸಿ ಅದರ ಜೊತೆ ಆಡಿ ಕಳೆದ ಅನುಭವ ಅದ್ಭುತ....!! ಮೊದಲ ದಿನ ಕೇವಲ ಪುಸ್ತಕ ಮುಟ್ಟಿದ್ದಷ್ಟೇ. ನಮ್ಮ ಮುಂದೆ ಸಾವಿರಾರು ಪುಸ್ತಕಗಳಿದ್ದರೂ ಅವುಗಳ ಶೀರ್ಷಿಕೆಗಳ ಕಡೆಗೆ ಕುತೂಹಲದಿಂದ ಕಣ್ಣು ಹಾಯಿಸಿದ್ದು ಮಾತ್ರ. ಯಾರು ಹೆಚ್ಚು ಪುಸ್ತಕದ ಶೀರ್ಷಿಕೆ, ಕರ್ತೃವಿನ ಹೆಸರನ್ನು ದಾಖಲಿಸಿಕೊಂಡಿದ್ದೀರಿ ಎಂದು ಕೇಳಿದಾಗ 45ಕ್ಕೂ ಹೆಚ್ಚು ಪುಸ್ತಕಗಳ ಹೆಸರನ್ನು ಕೆಲವರಿಗೆ ದಾಖಲಿಸಲು ಸಾಧ್ಯವಾಯಿತು. ಸಾವಿರಾರು ಬೇರೆ ಬೇರೆ ರೀತಿಯ ಪುಸ್ತಕಗಳನ್ನು ಬರೆದಿರುವವರು ಯಾರು..? ಎಂಬ ಆಸಕ್ತಿಯ ಅನಾವರಣದ ಕ್ಷಣ ಇದಾಗಿತ್ತು. 'ಇದು ಅದಲ್ಲ' ಎಂದು ಹೇಳಿ ಅದರ ಒಳಗಿನ ಫಲಿತಾಂಶದ ಹುಡುಕಾಟದ ಸಂಭ್ರಮದ ಕಲಿಕೆ ನಮಗರಿವಿಲ್ಲದಂತೆ ಆರಂಭವಾಗಿತ್ತು. ಒಂದು ಪುಸ್ತಕ ಸಾಕೆನಿಸಿದರೆ ಇನ್ನೊಬ್ಬ ಸಾಹಿತಿಯ ಪುಸ್ತಕಕ್ಕೆ ಹೊರಳಬಹುದಿತ್ತು. ಇಷ್ಟವಾದರೆ ಅವರ ಇನ್ನಷ್ಟು ಪುಸ್ತಕಗಳ ಹುಡುಕಾಟ ನಡೆಯುತ್ತಿತ್ತು. ಇಷ್ಟೆಲ್ಲಾ ಸಂಭ್ರಮದ ಚಟುವಟಿಕೆಯಲ್ಲಿ ಕೆಲವೊಂದು ಪುಸ್ತಕಗಳ ರಕ್ಷಾ ಕವಚ ಹರಿದು ಚೆಂದ ಕಳೆದುಕೊಂಡವು. ಆದರೂ ಇಲ್ಲಿ ಚಂದವನ್ನು ಹಾಳು ಮಾಡುವ ಮನೋಭಾವಕ್ಕೂ ಸ್ವಾತಂತ್ರ್ಯವಿದ್ದುದರಿಂದ (ಅದು ದೊಡ್ಡ ವಿಚಾರ ಅನಿಸಲೇ ಇಲ್ಲ) ಎಲ್ಲಿ ಬೇಕು ಅಲ್ಲಿ ಕುಳಿತು, ನಿಂತು, ಹೊರಳಾಡಿ, ಮಲಗಿ ಕಾಲು ಮೇಲೆತ್ತಿ ಓದುವ ಹುಚ್ಚು ಮುಂದುವರೆದಿತ್ತು. ಒಂದು ವಾರ ಓದುವುದರಲ್ಲಿ ತಲ್ಲೀನರಾದ ನಾವು ಅದರಿಂದ ಹೊರ ಬರುವುದು ಕಷ್ಟಕರವಾದರೂ ಅನಿವಾರ್ಯವಾಗಿತ್ತು. ಸ್ವರೂಪದ ಮುಂದಿನ ಸಾಲು ಸಾಲು ಹಬ್ಬಗಳು ನಮಗಾಗಿ ಕಾಯುತ್ತಿದೆಯಲ್ಲಾ...
ಗೀಚುವ ಹಬ್ಬ : ಓದಿ ಮನಸ್ಸು ತುಂಬಿಕೊಂಡದ್ದನ್ನು ಗೀಚಿ ಭಾವನೆಗಳಲ್ಲಿ ವ್ಯಕ್ತಪಡಿಸುವುದು ಒಟ್ಟಾರೆ ಗೀಚಿದ ಗೆರೆಯಲ್ಲಿ ವ್ಯಕ್ತಿಯನ್ನೋ, ಪಕ್ಷಿಯನ್ನೋ, ತಾಯಿಯನ್ನೋ, ಮಗು, ಪುಸ್ತಕ, ಸೂರ್ಯ, ಮರ ಹೀಗೆ ಯಾವುದಾದರೂ ಒಂದು ಆಕಾರ ಕೊಡುತ್ತಾ ಹೋದಂತೆ ಅದಕ್ಕೊಂದು ಅರ್ಥ ಕೊಡುವ ಹುಡುಕಾಟವು ಸಾಗಿತ್ತು. ಗೀಚಿದ ಗೆರೆಗಳಿಗೆ ಒಂದೆರಡು ಸಾಲುಗಳನ್ನು ಬರೆದು ಯಾವ ಗೆರೆಯಲ್ಲಿ ಯಾವ ಭಾವನೆ ವ್ಯಕ್ತವಾಗುತ್ತದೆ, ಯಾವ ಬಣ್ಣ ಯಾವುದಕ್ಕೆ ಹೊಂದಿಕೆಯಾಗುತ್ತದೆ ಎಂಬ ಚರ್ಚೆ ನಡೆಯುತ್ತಿತ್ತು. ಮಾತು, ಬರೆಹ, ಭಾವನೆಗಳನ್ನು ಹೀಗೆ ವ್ಯಕ್ತಪಡಿಸಲಾಗುವ ಸಾಧ್ಯತೆಯಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಮಾತುಗಾರರೋ, ಬರಹಗಾರರು ಕಲಾವಿದರೋ ಆಗಿ ಹೊರಹೊಮ್ಮುವುದರಲ್ಲಿ ಸಂಶಯವಿಲ್ಲ.
ಮಾತನಾಡುವ ಹಬ್ಬ : ಹೆಸರೇ ಹೇಳುವಂತೆ ಮಾತನಾಡುವುದು, ತಕ್ಷಣ ಪ್ರತಿಕ್ರಿಯಿಸುವುದು, ಗೋಡೆ ಜೊತೆ ಗಂಟೆ ಗಟ್ಟಲೇ ಮಾತನಾಡಿ ಮನಸ್ಸು ಹಗುರ ಮಾಡಿಕೊಳ್ಳುವುದು ಎಲ್ಲದ್ದಕ್ಕಿಂತದ ಭಿನ್ನ ಸವಾಲಾಗಿತ್ತು. ಒಂದೊಂದು ಗಂಟೆ ನಿರರ್ಗಳವಾಗಿ ಮಾತನಾಡಿದ್ದು, ನಮ್ಮ ಬಾಯಿಯಲ್ಲೂ ಮಾತಿದೆ ಎಂಬ ಅರಿವಾಗಿಸಿದ್ದು, ಒಂದು ವಿಷಯ ಕೊಟ್ಟಾಗ ತಕ್ಷಣಕ್ಕೆ ಆ ವಿಷಯದ ಬಗ್ಗೆ ಹತ್ತು ಪದಗಳು ಹೇಳಲು ನಾ ಮುಂದು ತಾ ಮುಂದು ಎಂದು ಮುಗಿಬಿದ್ದದ್ದು ಇನ್ನೂ ಅಚ್ಚರಿಯ ಸಂಗತಿಗಳು.
ಹುಡುಕಾಟದ ಹಬ್ಬ : ಕಥೆ ಬರೆದು ಅದು ಚಿತ್ರಕಥೆಯಾಗಲು ಚಿತ್ರದ ಜೊತೆ ಸಂಭಾಷಣೆ ಬರೆಯಲು ಹುಡುಕಾಟದ ಹಬ್ಬ ನಾಂದಿಯಾಯಿತು. ಗುರುರಾಜ ಮಾರ್ಪಳ್ಳಿ ಸರ್ ಮತ್ತು ಬಾಸುಮ ಕೊಡಗು ಅವರು ಒಂದು ದಿನ ಪೂರ್ತಿ ಸ್ವರೂಪದಲ್ಲಿ ಇದ್ದು ಸಿನಿಮಾ ಮಾಡುವ, ನೋಡುವ ಸಾಧ್ಯತೆಯ ಈ ಬಗೆಗಿನ ಶಿಕ್ಷಣವನ್ನು ನಮಗೆ ನೀಡಿದರು. ಈ ಪ್ರಕ್ರಿಯೆಯೊಳಗೆ ಎಷ್ಟೊಂದು ಶ್ರಮವಿದೆ ಎಂಬ ಅರಿವಾದದ್ದು ಆಗಲೇ. ಸ್ವರೂಪದಲ್ಲಿದ್ದುದರಿಂದ ನಮಗೆ ಈ ಅಪೂರ್ವ ಅವಕಾಶ. ನಮ್ಮ ಎಲ್ಲಾ ಶಾಲೆಗಳಲ್ಲಿಯೂ ಇಂತಹದ್ದೊಂದು ಹಬ್ಬದ ಆಚರಣೆ ಸಾಧ್ಯವಾದರೆ ಅದು ಸೃಷ್ಟಿಸಬಹುದಾದ ಸಾಧ್ಯತೆಗಳಿಗೆ ಮಿತಿಯುಂಟೆ..? ಎಷ್ಟೊಂದು ಬರಹಗಾರರು, ಮಾತುಗಾರರು, ಕಲಾವಿದರು ಹುಟ್ಟಿಕೊಂಡಾರು...?
......................... ಕವಿತಾ ಶ್ರೀನಿವಾಸ ದೈಪಲ
'ಚೈತನ್ಯ ' ನೆಲ್ಯಡ್ಕ, ಅಂತರ,
ನರಿಕೊಂಬು ಅಂಚೆ ಮತ್ತು ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
Mob : +91 94806 25773
********************************************