ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 43
Tuesday, August 27, 2024
Edit
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 43
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
ಪ್ರೀತಿಯ ಮಕ್ಕಳೇ... ಮೊನ್ನೆ ಶಾಲೆಯಲ್ಲಿ ಜೇನು ಹಿಡುಕರು ಬಂದಿದ್ದರು. ನಮ್ಮ ಶಾಲೆಯ ಮೇಲ್ಗಡೆ ಹೆಜ್ಜೇನಿನ ಹುಟ್ಟು ಕಟ್ಟಿದೆ ಅದನ್ನು ತೆಗೆಯುತ್ತೇವೆಂದರು. ಮಕ್ಕಳಿಗೆ ಅಪಾಯವಾಗಬಹುದೆಂದು ಪ್ರಾಂಶುಪಾಲರು ಒಪ್ಪಿರಬೇಕು. ಮೇಲೆ ಹತ್ತಿದರು. 10 ನಿಮಿಷಗಳಲ್ಲಿ ಜೇನು ತುಪ್ಪದೊಂದಿಗೆ ಮರಳಿದರು. ಅದರಲ್ಲಿ ಒಣಗಿದ ಜೇನು ಹುಟ್ಟುಗಳಿದ್ದವು. ಸಾಕಷ್ಟು ಜೇನು ನೊಣಗಳಿದ್ದವು. ಆ ಜೇನು ನೊಣಗಳು ಅಲ್ಲೆಲ್ಲ ಹರಿದಾಡುತ್ತಾ ಹಾರಾಡುತ್ತಾ ಇದ್ದವು. ಮಕ್ಕಳು ಮತ್ತು ನಮ್ಮ ಸಿಬ್ಬಂದಿ ಹತ್ತಿರ ಹೋಗಲು ಹೆದರುತ್ತಿದ್ದರು. ನಾನು ಅವುಗಳ ಬಳಿ ಹೋದಾಗ ಮಕ್ಕಳು ಗಾಬರಿಯಿಂದ ನನ್ನನ್ನು ಅಲ್ಲಿಗೆ ಹೋಗದಂತೆ ಕರೆಯುತ್ತಿದ್ದರು. ಎಲ್ಲರಿಗೂ ನನ್ನ ಬಗ್ಗೆ ಕಾಳಜಿ. ಖುಷಿಯಾಯಿತು. ಆದರೆ ನನಗೆ ನನ್ನ ಕರ್ತವ್ಯದ ಅರಿವು ನನಗೆ ಯಾವಾಗಲೂ ಇರುತ್ತದೆ. ಆದ್ದರಿಂದ ನನ್ನನ್ನು ಸಾಮಾನ್ಯವಾಗಿ ಭಾವುಕತೆ ಕಾಡುವುದಿಲ್ಲ. ಎಲ್ಲರಿಗೆ ಸರಿಯಾದ ಮಾಹಿತಿ ಹೇಳುವುದು ನನ್ನ ಕೆಲಸ. ತರಗತಿಗೆ ಹೋಗಿ ಮಕ್ಕಳಿಗೆ ಮಾಹಿತಿ ತಿಳಿಸಿ ನಿರಾಳನಾದೆ. ಇದನ್ನು ಕೇಳುತ್ತಿದ್ದ ನನ್ನ ಸಹೋದ್ಯೋಗಿಯೊಬ್ಬರು ಇದರ ಲೇಖನ ಬರೆಯುವಂತೆ ದುಂಬಾಲು ಬಿದ್ದದ್ದರಿಂದ ಮಾಮೂಲಿ ಲೇಖನಮಾಲೆಯಿಂದ ಸ್ವಲ್ಪ ವಿಷಯಾಂತರ ಮಾಡುತ್ತಿದ್ದೇನೆ ಕ್ಷಮೆ ಇರಲಿ.
ಕೀಟಗಳಿಂದ ಕಡಿತಕ್ಕೊಳಗಾಗದವರು ತುಂಬಾ ಅಪರೂಪ. ಕೆಂಪು ಇರುವೆ ಅಥವಾ ಚಿಗಳಿ ಇರುವೆ ಹಣ್ಣಿನ ಗಿಡಗಳಲ್ಲಿ ಸಾಮಾನ್ಯ. ಇದರಿಂದ ಕಡಿತಕ್ಕೊಳಗಾಗಾದ ಮಕ್ಕಳು ಇಲ್ಲವೇ ಇಲ್ಲ ಎನ್ನಬಹುದು. ಚಿಗಳಿ ಇರುವೆ ಕಚ್ಚಿ ನಮ್ಮ ದೇಹದೊಳಕ್ಕೆ ಫಾರ್ಮಿಕ್ ಆಮ್ಲವನ್ನು ಚುಚ್ಚುತ್ತದೆ. ಈ ಆಮ್ಲ ನಮಗೆ ಉರಿ ಮತ್ತು ಕೆರೆತವನ್ನುಂಟು ಮಾಡುತ್ತದೆ. ಈ ಉರಿ ಕಡಿಮೆಯಾಗಬೇಕಾದರೆ ಒಂದು ದುರ್ಬಲ ಪ್ರತ್ಯಾಮ್ಲ ಅಥವಾ ಪ್ರತ್ಯಾಮ್ಲೀಯ ಲವಣದಿಂದ ಕಚ್ಚಿದ ಭಾಗವನ್ನು ಉಜ್ಜುವುದು ಇದಕ್ಕೆ ಪ್ರಥಮ ಚಿಕಿತ್ಸೆ. ಅಮ್ಮನ ಅಡುಗೆ ಮನೆಯೆಂಬ ಪ್ರಯೋಗಾಲಯದಲ್ಲಿ ಸಿಗುವ ಅತಿ ಸುಲಭದ ಪ್ರತ್ಯಾಮ್ಲೀಯ ಆಕ್ಸೈಡ್ ಎಂದರೆ ಅಡುಗೆ ಸೋಡಾ. ಅಡುಗೆ ಸೋಡಾದ ಹುಡಿ ಹಾಕಿ ಉಜ್ಜಿದರೆ ಉರಿ ಕಡಿಮೆಯಾಗುತ್ತದೆ. ಏಕೆಂದರೆ ಆಮ್ಲ ತಟಸ್ತೀಕರಣ ಹೊಂದುತ್ತದೆ. ಅದಕ್ಕೆ ಅರಶಿನ ಹಾಕಿ ಎನ್ನಬಹುದು. ಅರಶಿನ ಒಂದು ನಂಜು ನಾಶಕ. ಯಾವಾಗ ಎಂದರೆ ಅರಶಿನ ಕೊಂಬನ್ನು ಕುಟ್ಟಿ ಪುಡಿ ಮಾಡಿ ಬಳಸಿದಾಗ. ಅಂಗಡಿಯಿಂದ ತಂದ ಪುಡಿಯ ಬಗ್ಗೆ ನಾನು ಏನೂ ಹೇಳುವುದಿಲ್ಲ. ಚಿಗಳಿ ಮಾತ್ರವಲ್ಲ ಹೆಚ್ಚಿನ ಕೀಟಗಳ ಕಡಿತದಲ್ಲಿರುವುದು ಆಮ್ಲಗಳೇ. ಕಣಜ, ಜೇನುನೊಣ, ತುರಿಕೆ ಸೊಪ್ಪು (nettle leaves) ಗಳಲ್ಲಿ ಇರುವುದು ಮೆಲನೋಯಿಕ್ ಆಮ್ಲ. ಇದಕ್ಕೂ ಪ್ರಥಮ ಚಿಕಿತ್ಸೆ ಅಡುಗೆ ಸೋಡಾವೇ.
ಇಂಗ್ಲೀಷಿನಲ್ಲಿ "ಸಾರಾ ಅನ್ನ ಕರ್ಜನ್" ಬರೆದ ಒಂದು ಕವಿತೆ ಇದೆ. "The wasp and the bee." ಅದರಲ್ಲಿ ಕಣಜ ಕೇಳುತ್ತದೆ "ನಾನು ನೀನು ಇಬ್ಬರೂ ಚುಚ್ಚುತ್ತೇವೆ (ಕಚ್ಚುವುದಲ್ಲ). ನಾನು ಸುಂದರಳಾಗಿದ್ದೇನೆ. ಆದರೆ ಜನ ಯಾಕೆ ನಿನ್ನನ್ನು ಪ್ರೀತಿಸುತ್ತಾರೆ" ಅಂತ. ಆಗ ಜೇನು ನೊಣ ಹೇಳುತ್ತದೆ "ಅಕ್ಕಾ ನಾನು ನಿನ್ನ ಅರ್ಧದಷ್ಟು ತುಂಟಿಯಾಗಿದ್ದರೂ ಜನ ನನ್ನನ್ನು ನಿನ್ನಷ್ಟೂ ಪ್ರೀತಿಸುತ್ತಿರಲಿಲ್ಲ" ಅಂತ. ಹೌದು ಕಣಜ ಯಾವಾಗಬೇಕೆಂದರೆ ಆವಾಗ ಕುಟುಕುತ್ತದೆ ಆದರೆ ಜೇನು ನೊಣ ಹಾಗಲ್ಲ. ಜೇನು ನೊಣ ಯಾಕೆ ಜಾಸ್ತಿ ಚುಚ್ಚುವುದಿಲ್ಲ?
ಇದನ್ನು ಚರ್ಚಿಸುವ ಮೊದಲು ಅವುಗಳು ಚುಚ್ಚುವ ಸೂಜಿಯ ಬಗ್ಗೆ ತಿಳಿಯಬೇಕು. ಕಣಜಗಳಲ್ಲಿ ಚುಚ್ಚುವ ಆಯುಧ ಒಂದು ಟೊಳ್ಳಾದ ಸೂಜಿ (pneumatic needle) ಇದು ನೇರವಾಗಿ ಅದರ ವಿಷದ ಗ್ರಂಥಿಗೆ ಜೋಡಿಸಲ್ಪಟ್ಟಿರುತ್ತದೆ. ಚುಚ್ಚಿ ತನ್ನ ಹಿಂಭಾಗವನ್ನು ಒತ್ತಿದರೆ ವಿಷ ವಿರೋಧಿಯ ಅಷ್ಟು ಭಾಗವನ್ನು ನಿಶ್ಚೇ಼ಷ್ಟಿತಗೊಳಿಸುತ್ತದೆ. ಆದರೆ ಸಾಯಿಸುವ ಸಾಮರ್ಥ್ಯ ಇಲ್ಲ. ಈ ಕಣಜಗಳು ಜೇಡದ ದೇಹಕ್ಕೆ ತಮ್ಮ ವಿಷವನ್ನು (ಆಮ್ಲ) ಚುಚ್ಚಿ ಅವುಗಳನ್ನು ನಿಶ್ಚೇಷ್ಟಗೊಳಿಸಿ ಅವುಗಳನ್ನು ತಂದು ಅವುಗಳ ಸುತ್ತ ಗೂಡುಕಟ್ಟಿ ಮೊಟ್ಟೆಯನ್ನಿಡುತ್ತವೆ. ಹೊರ ಬರುವ ಮರಿಗಳು (ಲಾರ್ವಾಗಳು) ಈ ಜೇಡಗಳನ್ನು ತಿಂದು ಬೆಳೆಯುತ್ತವೆ. ಇದು ಇಂಜೆಕ್ಷನ್ ಸೂಜಿಯ ಹಾಗೆ ಸುಲಭವಾಗಿ ಹೊರಗೆಳೆದುಕೊಂಡು ಬಿಡಬಹುದು.
ಆದರೆ ಜೇನುನೊಣಗಳಲ್ಲಿ ಹಾಗಲ್ಲ. ಅವುಗಳ ಚುಚ್ಚುಗ ಸೂಜಿಯಲ್ಲ ಬದಲಾಗಿ ಟೊಳ್ಳಾದ ಸ್ಕ್ರೂ (pneumatic screw). ಇದು ಜೇನುನೊಣಗಳ ಕರುಳಿಗೆ ಅಂಟಿಕೊಂಡಿರುತ್ತದೆ. ಒಂದು ಪಕ್ಷ ಜೇನು ನೊಣ ಚುಚ್ಚಬೇಕಾದರೆ ಅದು ಸ್ಕ್ರೂವನ್ನು ದೇಹಕ್ಕೆ ಚುಚ್ಚಬೇಕು ಅಂದರೆ ಹೆಚ್ಚು ಶಕ್ತಿ ಬೇಕು. ಸ್ಕ್ರೂವನ್ನು ಹೊಡೆದು ಒಳಗೆ ಇಳಿಸಬಹುದು ಆದರೆ ಹೊರ ತೆಗೆಯಲು ಸ್ಕ್ರೂ ಡ್ರೈವರ್ ಬೇಕು. ಅದನ್ನು ಕಳಚಲು ಜೇನು ನೊಣ ಒದ್ದಾಡುತ್ತದೆ. ಆಗ ಅದರ ಕರುಳು ಹರಿದು ಹೋಗಿ ಸತ್ತು ಹೋಗುತ್ತದೆ. ಆದ್ದರಿಂದ ಜೇನು ಎಲ್ಲೆಂದರಲ್ಲಿ ಚುಚ್ಚುವುದಿಲ್ಲ. ಆಹಾರ ಸಂಗ್ರಹಿಸುವಾಗ, ಆಹಾರವನ್ನು ಅರಸುವಾಗ ಅವುಗಳು ಬಿಲ್ ಕುಲ್ ಚುಚ್ಚುವುದಿಲ್ಲ. ಅದೇ ನನ್ನ ಧೈರ್ಯಕ್ಕೆ ಕಾರಣ. ಜೇನು ನೊಣ ಗೂಡಿಗೆ ಹಾನಿಯಾದಾಗ ಮತ್ತು ಗೂಡಿನ ರಕ್ಷಣೆಯ ಸಂದರ್ಭದಲ್ಲಿ ಮಾತ್ರ ಧಾಳಿ ಮಾಡುತ್ತವೆ. ಕಾರಣ ಇಷ್ಟೇ ಚುಚ್ಚಿದರೆ ಸಾವು ಖಂಡಿತ ಎಂಬುದು ಜೇನು ನೊಣಕ್ಕೆ ಗೊತ್ತಿದೆ. ಒಂದು ಜೇನುನೊಣ ಸತ್ತರೆ ಗೂಡಿಗೆ ಒಬ್ಬ ಕೆಲಸ ಗಾರನ ನಷ್ಟ ಉಂಟಾಗುತ್ತದೆ. ಇದಕ್ಕೆ ಜೇನು ಸಿದ್ಧವಿಲ್ಲ. ಕಣಜದ ಚುಚ್ಚುಗ ಸ್ವಯಂ ರಕ್ಷಣೆಗೆ ಆದರೆ ಜೇನು ಚುಚ್ಚುವುದು ತನ್ನ ಗೂಡಿನ ಒಳಿತಿಗಾಗಿ.
ನೀವು ನಿಸರ್ಗ ಒಬ್ಬ ನುರಿತ ತಂತ್ರಜ್ಞ ಮತ್ತು ವಿನ್ಯಾಸಗಾರ ಎಂದು ಹೇಳಿದ್ದೀರಿ. ಆದರೆ ಅಂತಹ ಉಪಯುಕ್ತ ಕೀಟ ಕಚ್ಚಿದ ಕೂಡಲೇ ಅದು ಸಾಯುವ ಹಾಗೆ ಏಕೆ ವಿನ್ಯಾಸಗೊಳಿಸಿದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬಹುದು. ನಿಜ ಇದರ ರಹಸ್ಯವನ್ನು ತಿಳಿದರೆ ನೀವು ನಿಸರ್ಗದ ಹಿರಿಮೆಯನ್ನು ಮತ್ತೆ ಒಪ್ಪಿಕೊಳ್ಳುತ್ತೀರಿ. ಜೇನು ತನ್ನ ಸ್ಕ್ರೂವನ್ನು ನಿಮ್ಮ ದೇಹದೊಳಕ್ಕೆ ಇಳಿಸಿ ಮೆಲನೋಯಿಕ್ ಆಮ್ಲವನ್ನು ಚುಚ್ಚುತ್ತದೆ. ನಿಮಗೆ ಕಿರಿ ಕಿರಿಯಾಗುತ್ತದೆ. ಅದು ತನ್ನ ಚುಚ್ಚುಗವನ್ನು ಹೊರಗೆಳೆಯಲು ಒದ್ದಾಡುತ್ತದೆ. ಆಗುವುದಿಲ್ಲ. ಸೂಜಿ ನಿಮ್ಮ ದೇಹದಲ್ಲಿ ಉಳಿಯುತ್ತದೆ. ಆದರೆ ಒದ್ದಾಟದಲ್ಲಿ ಜೇನಿನ ಕರುಳು ಹರಿದು ಹೋಗಿ ಅದು ಸತ್ತು ಕೆಳಗೆ ಬೀಳುತ್ತದೆ. ಅದರ ಕರುಳು ಹರಿದಾಗ ವಾಸನೆಯ ದ್ರವ ಹೊರ ಬರುತ್ತದೆ. ಈ ವಾಸನೆ ಉಳಿದ ಜೇನು ನೊಣಗಳಿಗೆ ಅಪಾಯದ ಸೂಚನೆ ನೀಡುತ್ತದೆ. ಆಗ ಉಳಿದ ನೊಣಗಳು ಹಿಂಡು ಹಿಂಡಾಗಿ ವೈರಿಯ ಮೇಲೆ ಧಾಳಿ ಮಾಡುತ್ತವೆ. ಈ ಸಾವಿನಲ್ಲಿನ ಸಾರ್ಥಕತೆಯನ್ನು ನಾವು ಜೇನು ಹುಳುವಿನ ತ್ಯಾಗ ಎನ್ನುವುದು.
ಈಗ ಅರ್ಥವಾಯಿತೇ ಪ್ರಕೃತಿಯ ಇನ್ನೊಂದು ವಿಸ್ಮಯ?
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
********************************************