-->
ಜೀವನ ಸಂಭ್ರಮ : ಸಂಚಿಕೆ - 150

ಜೀವನ ಸಂಭ್ರಮ : ಸಂಚಿಕೆ - 150

ಜೀವನ ಸಂಭ್ರಮ : ಸಂಚಿಕೆ - 150
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
            
           
ಮಕ್ಕಳೇ.... ಈ ದಿನ ಪಾತಂಜಲ ಯೋಗ ಸೂತ್ರದ ಎರಡನೇ ಪಾದ ಎರಡನೇ ಉಪಾಂಗ ಸಂತೋಷದ ಬಗ್ಗೆ ತಿಳಿದುಕೊಳ್ಳೋಣ. ನಿನ್ನಲ್ಲಿ ಏನಿದೆ? ಅದನ್ನೇ ಅನುಭವಿಸುವುದು. ಎಷ್ಟಿದೇ? ಅಷ್ಟನ್ನೆ ಅನುಭವಿಸುವುದು, ಸಂತೋಷ ಪಡುವುದು. ಇರುವುದರಲ್ಲೇ ಆನಂದ ಪಡುವ ಭಾವಕ್ಕೆ ಸಂತೋಷ ಎನ್ನುವರು. ಇದು ಸಾಧನೆಗೆ ಅತಿ ಮಹತ್ವ. ಮನುಷ್ಯ ವಸ್ತುಗಳಿಗಾಗಿ ಅಸಂತೃಷ್ಠನಾದರೆ, ಮಾನಸಿಕ ವಿಕಾಸ ಆಗುವುದು ಕಷ್ಟ. ಮನಸ್ಸು ಪ್ರಸನ್ನವಾಗಿತ್ತು ಅಂದರೆ, ಮತಿ ಸಮರ್ಥವಾಗಿರುತ್ತದೆ. ಮತಿಯಲ್ಲಿ ಶಕ್ತಿ ವ್ಯಕ್ತವಾಗುತ್ತಿದೆ. ಮನಸ್ಸು ಅಸಂತೃಷ್ಟವಾಯಿತು ಅಂದ್ರೆ, ಬುದ್ಧಿಯ ಬಲ ಕಡಿಮೆಯಾಗುತ್ತದೆ. ದೃಷ್ಟಿಕೋನ ಬದಲಾಗುತ್ತದೆ. ಸುತ್ತ ಮುತ್ತ ಇರುವ ವಸ್ತುಗಳನ್ನು ನೋಡಲು ದೃಷ್ಟಿ ಇರುತ್ತದೆ. ಅದನ್ನು ಎರಡು ದೃಷ್ಟಿಯಿಂದ ನೋಡಲಿಕ್ಕೆ ಆಗುತ್ತದೆ. ಒಂದು ದೃಷ್ಠಿಯಿಂದ ನೋಡಿದರೆ ಸಂತೋಷವಾಗುತ್ತದೆ. ಮತ್ತೊಂದು ದೃಷ್ಟಿಯಿಂದ ನೋಡಿದರೆ ದುಃಖವಾಗುತ್ತದೆ. ಸಂತೋಷವಾಗುವಂತೆ ಈ ಜಗತ್ತನ್ನು, ಈ ಜಗತ್ತಿನ ವಸ್ತುಗಳನ್ನು ನೋಡಬೇಕಾಗುತ್ತದೆ. ಅದೊಂದು ಕಲೆ. ಹೇಗೆ ಬೇಕೋ ಹಾಗೆ ನೋಡೋದಕ್ಕೆ ಬರುತ್ತದೆ. ಅದು ಮನುಷ್ಯನಿಗೆ ಇರುವ ವಿಶೇಷ ಸಾಮರ್ಥ್ಯ. ಒಂದು ಗಿಡವನ್ನು ನೋಡಿ ಸಂತೋಷ ಪಡಲಿಕ್ಕೆ ಬರುತ್ತದೆ. ಅದೇ ರೀತಿ ಅಸಂತೋಷ ಪಡಲಿಕ್ಕೂ ಬರುತ್ತದೆ. ಒಂದು ಕಾರ್ಯ ಮಾಡಿ ಸಂತೋಷಪಡಲಿಕ್ಕೂ ಬರುತ್ತದೆ. ಅದೇ ಕಾರ್ಯ ಮಾಡಿ ದುಃಖ ಪಡಲಿಕ್ಕೂ ಬರುತ್ತದೆ. ನೋಡುವ ದೃಷ್ಟಿ ಅದು. ಅದು ಸ್ವಲ್ಪ ಬದಲಾದರೆ ಮನಸ್ಸು ಸುಖಿಯಾಗುತ್ತದೆ. ಉದಾಹರಣೆಗೆ, ಒಂದು ಬುಟ್ಟಿಯಲ್ಲಿ 10 ಹಣ್ಣುಗಳಿವೆ. ಇನ್ನೂ 10 ಹಣ್ಣು ಹಿಡಿಯಷ್ಟು ಜಾಗ ಆ ಬುಟ್ಟಿಯಲ್ಲಿದೆ. ನಾವು ಇದನ್ನು ಎರಡು ದೃಷ್ಟಿಯಿಂದ ನೋಡಲು ಸಾಧ್ಯ. ಬುಟ್ಟಿಯೊಳಗೆ 10 ಹಣ್ಣು ಇದ್ದಾವೆ ಅಂತ ನೋಡಲಿಕ್ಕೆ ಬರ್ತದೆ. ಬುಟ್ಟಿಯೊಳಗೆ 10 ಹಣ್ಣು ಕಡಿಮೆ ಇದೆ ಅಂತ ನೋಡಲು ಬರ್ತದೆ. ಇಬ್ಬರದು ಸರಿನೆ. 10 ಹಣ್ಣು ಇದೆ ಅಂದರೆ ಮನಸ್ಸು ತುಂಬಿದೆ. ಇನ್ನೂ 10 ಹಣ್ಣು ಬೇಕು ಅಂದರೆ ಮನಸ್ಸು ಖಾಲಿಯಾಗಿದೆ ಅಂತ ಅರ್ಥ. ನೋಡೋ ದೃಷ್ಟಿ ಅದು. ಬುಟ್ಟಿ ಬದಲು ಮಾಡಬೇಕಾಗಿಲ್ಲ. ದೃಷ್ಟಿ ಬದಲು ಮಾಡಬೇಕು. ಬುಟ್ಟಿಯೊಳಗೆ ಎಷ್ಟಿದೆಯೋ ಅಷ್ಟಿದೆ. ಇರೋದಕ್ಕೆ ಮಹತ್ವ ಕೊಟ್ಟರೆ ಸಂತೋಷ ಉಂಟಾಗುತ್ತದೆ. ಇಲ್ಲದಕ್ಕೆ ಮಹತ್ವ ಕೊಟ್ಟರೆ ಅಸಂತೋಷ ಆಗುತ್ತದೆ. ಏನಿದೆ ಅದೇ.... ಈಗ ನಮ್ಮ ತಲೆ ಕೂದಲು ಬಿಳಿಯಾಗಿದೆ ಅಂತ ಇಟ್ಟುಕೊಳ್ಳಿ. ಎಷ್ಟು ಬೆಳ್ಳಗಿವೆ ಅಂದ್ರೆ ಸಂತೋಷ. ಏನು ಬೆಳ್ಳಿ ಹೊಳೆದಂತೆ ಹೊಳೆಯುತ್ತವೆ ಅಂದ್ರೆ ಸಂತೋಷ. ಏನಪ್ಪಾ ಬೆಳ್ಳಗಾಗೋದು ಅಂದ್ರೆ, ಅಸಂತೋಷ. ನೋಡೋ ದೃಷ್ಟಿಕೋನ ಸಂತೋಷ, ದುಃಖ ಕೊಡುತ್ತದೆ. ಜೀವನವನ್ನು ನೋಡಿ ನೋಡಿ ಸಂತೋಷ ಪಡುವುದನ್ನು ಕಲಿಯಬೇಕು.

ಒಂದು ಗುಬ್ಬಿ ಇತ್ತು. ಅಲ್ಲೇ ಚೆರ್ರಿ ಗಿಡದ ತೋಟ ಇತ್ತು. ಆ ಚೆರ್ರಿ ಗಿಡದಲ್ಲಿ ಸಣ್ಣ ಸಣ್ಣ ಸುಂದರ ಚೆರ್ರಿಹಣ್ಣುಗಳು ಬಿಟ್ಟಿದ್ದವು. ಆ ತೋಟ ಕಾಯಲು ಒಬ್ಬ ಸೇವಕ ಇದ್ದನು. ಗುಬ್ಬಿಗೆ ಹಸಿವಾಗಿತ್ತು. ಹಣ್ಣುಗಳನ್ನು ನೋಡಿ, ತಿನ್ನಲು ಬಂತು. ಸೇವಕ ಗುಬ್ಬಿಗೆ ಕಲ್ಲು ಹೊಡೆದನು. ಗುಬ್ಬಿ ಹಾರಿ ಹೋಯಿತು. ಪುನಃ ಗುಬ್ಬಿ ಬಂತು. ಹೀಗೆ ಸುಮಾರು 10, 20 ಸಲ ಆಯಿತು. ಅದೇ ದಾರಿಯಲ್ಲಿ ಒಬ್ಬ ಸಂತ ಹೋಗುತ್ತಿದ್ದನು. ಇದನ್ನು ನೋಡಿದ. ಗುಬ್ಬಿ ಕಂಡು ಕನಿಕರ ಅನಿಸಿತ್ತು. ಗುಬ್ಬಿಗೆ ಹೇಳಿದ, ಏನು ನಿನ್ನ ಕಷ್ಟ?. ಅಷ್ಟೊತ್ತಿನಿಂದ ನೋಡ್ತಾ ಇದ್ದೇನೆ. ನೀನು ಬರ್ತೀಯಾ, ಆತ ಕಲ್ಲು ಹೊಡೆಯುತ್ತಾನೆ. ನೀನು ಹಾರುತ್ತೀಯ, ಮತ್ತೆ ಬರುತ್ತೀಯ, ಮತ್ತೆ ಕಲ್ಲು ಹೊಡೆಯುತ್ತಾನೆ, ಹೀಗೆ ಹತ್ತು ಇಪ್ಪತ್ತು ಸಲ ಆಯಿತು. ನಿನ್ನ ಪರಿಸ್ಥಿತಿ ನೋಡಿ ನನಗೆ ದುಃಖವಾಯಿತು ಅಂದ. ಆಗ ಗುಬ್ಬಿ ಹೇಳಿದ್ದು, "ನನಗೆ ಹಣ್ಣು ಕಾಣಿಸುತ್ತದೆ ವಿನಃ, ಕಲ್ಲು ಕಾಣಿಸುತ್ತಿಲ್ಲ .ಅವನಿಗೆ ಕಲ್ಲು ಕಾಣಿಸುತ್ತದೆ ಅದಕ್ಕೆ ಆತ ಹೊಡೆಯುತ್ತಾನೆ. ನನಗೆ ಕಾಣಿಸುವುದು ಚೆರ್ರಿ ಹಣ್ಣು, ಅವಕಾಶ ಸಿಕ್ಕರೆ ಒಂದು ಹಣ್ಣು ತಿಂದೆ ಬಿಡ್ತೀನಿ" ಅಂತು. ದೃಷ್ಟಿಕೋನ ಎಷ್ಟು ಚಂದ ಇದೆ. ಹೊಡೆಯುವುದರ ಕಡೆ ಲಕ್ಷ್ಯ ಕೊಟ್ಟರೆ, ತಿನ್ನಲಿಕ್ಕೆ ಆಗುವುದಿಲ್ಲ. ಅವರು ಹೊಡೆಯುತ್ತಾ ಇರಲಿ, ನಾನು ತಿನ್ನುತ್ತಾ ಇರುತ್ತೇನೆ ಎಂದಿತು. ನಮ್ಮ ಕವಡೆ ಕಲ್ಲಿಗೆ ಪಾಪ ಪಕ್ಷಿಗಳು ಎಲ್ಲಿ ಬದುಕುತ್ತವೆ. ಪಕ್ಷಿಗಳು ಹೇಳುತ್ತವೆ, "ನಮಗೆ ಏನು ಬೇಕು ಅದು ಗೊತ್ತಿದೆ. ಮನುಷ್ಯನಿಗೆ ಏನು ಬೇಡ ಅದು ಅವನಿಗೆ ಗೊತ್ತಿದೆ. ಇದ್ದಿದ್ದರಲ್ಲಿ ಸಂತೋಷ ಪಡೋದು ನಮಗೆ ಗೊತ್ತಿದೆ. ಇಲ್ಲದಿದ್ದಾಗ ದುಃಖ ಪಡೋದು ಅವನಿಗೆ ಗೊತ್ತಿದೆ. ಸಂತೋಷಪಡುವುದು ಒಂದು ಕಲೆ, ನಮ್ಮದು ಏನೆಂದರೆ ನಾವು ಗುರಿ ಹಾಕಿಕೊಂಡು ಇರುತ್ತೇವೆ. ಇಷ್ಟು ಸಾಧಿಸಬೇಕು ಅಂತ ಗುರಿ ಇರುತ್ತದೆ. ಜೀವನದಲ್ಲಿ ಗುರಿ ಮುಟ್ಟದೆ ಸಂತೋಷ ಇಲ್ಲ. ಅಂದರೆ ದುಃಖ. ಜೀವನಪೂರ್ತಿ ಅಸಂತೋಷ. ಅದನ್ನು ಬಿಟ್ಟು ಗುರಿ ಇದ್ರು, ಅದರ ಕಡೆ ಲಕ್ಷ್ಯ ಕೊಡದೆ, ಸಾಧನೆ ಮಹತ್ವ ಅಂತ ಭಾವಿಸಿ, ಸಾಧಿಸಲು ತೊಡಗಿದರೆ, ಸಾಧಿಸಿದ್ದು ಸಂತೋಷ ಕೊಡುತ್ತದೆ. ಎಷ್ಟು ಸಾಧಿಸುತ್ತೇವೋ ಅದು ಸಂತೋಷ ಕೊಡುತ್ತದೆ. ಮನುಷ್ಯ ಸಂತೋಷ ಪಡಲು ಜಗತ್ತೆಲ್ಲ ಇರಬೇಕು ಅಂತ ಅಲ್ಲ. ನಾವು ಇತಿಹಾಸದ ಪುಟ ಪುಟ ನೋಡಿದರೆ ಬಹಳ ವಿಚಿತ್ರ ಜೀವನ ಸಾಧಿಸಿದ್ದು ಕಾಣಿಸುತ್ತದೆ. ಒಬ್ಬ ಮಹಾರಾಜ, ಅಶ್ವಮೇಧ ಯಜ್ಞ ಮಾಡಿದ. ಕುದುರೆಗೆ ಅಶ್ವಮೇಧ ಎಂದು ನಾಮಫಲಕ ಹಾಕಿ ಬಿಟ್ಟ. ಅದು ಹೋದ ಜಾಗದಲ್ಲಿ ಯಾರೂ ಕಟ್ಟಿ ಹಾಕಲಿಲ್ಲ ಎಂದರೆ, ಆ ರಾಜ ಶರಣಾಗಿ, ಸಾಮಂತನಾಗಿ, ಕಪ್ಪ ಕಾಣಿಕೆ ಕೊಡುತ್ತಿದ್ದರು. ಯಾರಾದರೂ ಕಟ್ಟಿ ಹಾಕಿದರೆ ಯುದ್ಧ ಶುರು. ಹೀಗೆ ಕುದುರೆ ಹೋದಲೆಲ್ಲ ಕನಿಷ್ಠ 20 ಮಂದಿ ಸಾಮಂತರಾದರು. ಒಬ್ಬ ಶರಣಾಗಲಿಲ್ಲ. ಕುದುರೆ ಕಟ್ಟಿ ಹಾಕಿದ. ಯುದ್ಧ ನಡೆಯಿತು. ಈತನದು ದೊಡ್ಡ ಸಾಮ್ರಾಜ್ಯ. ಕುದುರೆ ಕಟ್ಟಿ ಹಾಕಿದವನದು ಸಣ್ಣ ಸಾಮ್ರಾಜ್ಯ. ಆದರೆ ಬಲಿಷ್ಠ. ಸೋಲಲಿಲ್ಲ. ಆಗ ರಾಜ ವಾಪಸ್ಸು ಬಂದು ಹಾಸಿಗೆ ಮೇಲೆ ಮಲಗಿದ. ಏನಪ್ಪಾ ನನ್ನ ಜೀವನ ಅಂದ. ಒಬ್ಬ ಸಣ್ಣ ರಾಜನನ್ನು ಸೋಲಿಸಲು ಆಗಲಿಲ್ಲ, ಜೀವನ ವ್ಯರ್ಥ ಎಂದನು. ಬಹಳ ತಾಪ ಮಾಡಿಕೊಂಡಿದ್ದನು. ಇಷ್ಟು ದೊಡ್ಡ ರಾಜ್ಯ ಇದ್ದರೂ ಸಮಾಧಾನ ಆಗಲಿಲ್ಲ. ಆತ ಸಾಮಂತ ಮಾಡಿಕೊಳ್ಳಲು ಪ್ರಯತ್ನಿಸಿದನು, ಮಿತ್ರ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಮಿತ್ರ ಆದರೆ ಎಲ್ಲರೂ ನಮ್ಮವರೇ, ಮಾಂಡಲಿಕ ಆಗಬೇಕಾದರೆ ತಕರಾರು. ನಾವು ಹೋಲಿಸಿಕೊಂಡು ಸಂಕಟಪಡುತ್ತೇವೆ. ದೊಡ್ಡವರನ್ನು ನೋಡಿದಾಗ ನೀವು ದೊಡ್ಡ ಮಾಲೀಕರು, ನಾನು ಸಣ್ಣ ಮಾಲೀಕ, ಅಂದ್ರೆ ಸಮಾಧಾನ. ರಾಜ ಹೀಗೆ ತಾಪ ಮಾಡಿಕೊಂಡು ಹಾಸಿಗೆ ಹಿಡಿದನು. ಸಾಯುವ ಕಾಲದಲ್ಲಿ ಮಕ್ಕಳನ್ನು ಕರೆದು ಹೇಳಿದನು. ನನ್ನ ಇಚ್ಛೆ ಪೂರ್ತಿ ಆಗಲಿಲ್ಲ, ಅವನನ್ನು ಸೋಲಿಸಿ ಎಂದು ಹೇಳಿದನು. ರಾಜ್ಯ ಇದೆ, ಇಪ್ಪತ್ತು ಜನ ಮಾಂಡಲಿಕರು ಇದ್ದಾರೆ. ಸಮಾಧಾನ ಇಲ್ಲ. ಇಷ್ಟು ರಾಜ್ಯ ಇದೆ, ಇಷ್ಟು ಜನ ಸಾಮಂತರ ಇದ್ದಾರೆ ಅಂದಿದ್ದರೆ ಸಮಾಧಾನ ಇರುತ್ತಿತ್ತು. ಸಂತೋಷ ಆಗುತ್ತಿತ್ತು. ಇದು ದೃಷ್ಟಿಕೋನ. ಅದರ ಬದಲು ನಿನ್ನ ಶೂರತನ ಮೆಚ್ಚಿಕೊಂಡಿದ್ದೇನೆ ಅಂದಿದ್ದರೆ ಆತ ಗೆಳೆಯನೇ ಆಗುತ್ತಿದ್ದನು. ಹಿಂದೆ ಅಲೆಕ್ಸಾಂಡರ್ ವಿಶ್ವ ಗೆಲ್ಲಬೇಕೆಂದು, ಎಲ್ಲಾ ಕಡೆ ಗೆದ್ದು ಭಾರತಕ್ಕೆ ಬಂದಿದ್ದನು. ಭಾರತದಲ್ಲಿ ಪೋರಸನನ್ನು ಸೋಲಿಸಿದ. ಸೈನಿಕರು ಪೋರಸ್ ನನ್ನು ಅಲೆಕ್ಸಾಂಡರ್ ಮುಂದೆ ನಿಲ್ಲಿಸಿದರು. ಆಗ ಅಲೆಕ್ಸಾಂಡರ್ ಕೇಳಿದ, ನಿನ್ನನ್ನು ಹೇಗೆ ನಡೆಸಿಕೊಳ್ಳಬೇಕು ಎಂದು. ಅಲೆಕ್ಸಾಂಡರ್ ಒಳ್ಳೆಯವನೆ. ಆತನ ಗುರು ಶ್ರೇಷ್ಠ ತತ್ವಜ್ಞಾನಿ ಅರಿಸ್ಟಾಟಲ್. ಅರಿಸ್ಟಾಟಲ್, ಸಾಕ್ರೆಟಿಸ್ ನ ಶಿಷ್ಯನ ಶಿಷ್ಯ. ಆಗ ಪೋರಸ್ ಹೇಳಿದನು, ನನ್ನನ್ನು ರಾಜನನ್ನಾಗಿ ನೋಡಿಕೊಳ್ಳಬೇಕು. ನಾನು ನಿನ್ನ ಗೆಳೆಯ ಎಂದು ಭಾವಿಸು. ಸೋತವನಲ್ಲ. ಸೈನ್ಯ ದೊಡ್ಡದಿತ್ತು, ಗೆಲ್ತಾರೆ. ಸೈನ್ಯ ಸಣ್ಣದಿತ್ತು, ಸೋಲುತ್ತಾರೆ. ಸೋತಿದ್ದು ಸೈನ್ಯ, ನಾನಲ್ಲ. ಒಂದು ಪ್ರಸಂಗ ಬರುತ್ತದೆ, ಸೋಲು ಗೆಲುವು ಇರುತ್ತದೆ. ಅಲೆಕ್ಸಾಂಡರ್ ಹೇಳಿದ ಇಂಥ ರಾಜ ಇರೋದು ನಮ್ಮ ಹೆಮ್ಮೆ ಎಂದು ಹೇಳಿದ. ನನ್ನ ಮಿತ್ರ ಅಂದ. ಅಲೆಕ್ಸಾಂಡರ್ ಪೋರಸ್ ನ ರಾಜ್ಯ ಬಿಟ್ಟು ಹೊರಟು ಹೋದ. ಹೀಗೂ ಇದೆ. ಅಳಬೇಕೆಂದರೆ ಜೀವನದಲ್ಲಿ ಹೆಜ್ಜೆ ಹೆಜ್ಜೆಗೂ ಕಾರಣ ಸಿಗುತ್ತದೆ. ನಗಬೇಕೆಂದರೆ ಅಷ್ಟೇ ಕಾರಣಗಳು ಸಿಗುತ್ತವೆ. ನಾವು ಆಯ್ಕೆ ಮಾಡಿಕೊಳ್ಳಬೇಕು. ಹೇಗೆ ನಾವು ಆಯ್ಕೆ ಮಾಡಿಕೊಂಡಿದ್ದೇವೆ, ಹಾಗೆ ನಮ್ಮ ಜೀವನ ಆಗುತ್ತದೆ. ಚೆನ್ನಾಗಿರುವುದನ್ನು ಆಯ್ಕೆ ಮಾಡಿಕೊಂಡರೆ, ಚೆನ್ನಾಗಿರುತ್ತದೆ. ಕೆಟ್ಟದ್ದನ್ನು ಆಯ್ಕೆ ಮಾಡಿಕೊಂಡರೆ, ಕೆಟ್ಟದು ಆಗುತ್ತದೆ. ಬದುಕು ಸುಂದರ ಆಗುವುದನ್ನು, ಸಂತೋಷ ಕೊಡುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ದುಃಖ ಕೊಡುವುದನ್ನು ಆಯ್ಕೆ ಮಾಡಿಕೊಂಡರೆ, ಹೇಗೆ ಸಂತೋಷ ಆಗುತ್ತದೆ. ಇರುವುದರ ಕಡೆ ಗಮನ ಹರಿಸಬೇಕು. ಇರುವುದನ್ನ ಅನುಭವಿಸಬೇಕು.

ಸಾಕ್ರೆಟಿಸ್ ನೋಡಲು ಕುರೂಪ. ಜಾಂತಪಿಯನ್ನು ವಿವಾಹವಾಗಲು ತೀರ್ಮಾನ ಮಾಡಿದ. ಜಾಂತಪಿ ಸುಂದರಿ ಆಗಿದ್ದಳು. ಆಗ ಗೆಳತಿಯರು ಹೇಳಿದರು, ನೀನು ಯಾಕೆ ಈ ಕುರೂಪಿಯನ್ನು ವಿವಾಹ ಆಗುತ್ತಿ, ಆತ ಬಡವ, ಏನಿಲ್ಲಾ ಅಂದರು. ಆಗ ಜಾಂತಪಿ ಹೇಳಿದ್ದು, "ಆತ ಕುರೂಪಿ ಇರಬಹುದು, ಮನಸ್ಸು ಸುಂದರ ಇದೆ. ಆತನ ಜೇಬು ಖಾಲಿ ಇರಬಹುದು, ಆತನ ಮನಸ್ಸು ಜ್ಞಾನದಿಂದ ತುಂಬಿದೆ. ಇದಕ್ಕಿಂತ ಇನ್ನೇನು ಬೇಕು" ಎಂದಳು. ಆಕೆ ಜಗಳಗಂಟಿ. ಲಗ್ನ ಆಯಿತು. ಪತಿ ಶ್ರೇಷ್ಠ ಸಂತ. ಜಾಂತಪಿ ದಿನಾಲೂ ತನ್ನ ಗಂಡನನ್ನು ಬಯ್ಯುತ್ತಿದ್ದಳು. ಆತ ಬೈಸಿಕೊಳ್ಳುತ್ತಿದ್ದ. ಗೆಳತಿಯರು ಜಾಂತಪಿಗೆ ಹೇಳಿದರು, ನಾವು ಆಗಲೇ ಹೇಳಿದ್ದೇವೆ ನೀನು ಏಕೆ ಮದುವೆಯಾದೆ..? ಆಗ ಜಾಂತಪಿ ಹೇಳಿದಳು. "ಅವನು ಬೈಸಿಕೊಳ್ಳುತ್ತಾನೆ, ತಿರುಗಿ ಬಯ್ಯುವುದಿಲ್ಲ, ಹೊಡೆಯುವುದಿಲ್ಲ. ನೀವು ನಿಮ್ಮ ಪತಿಗೆ ಬೈದು ನೋಡಿ, ಆಗ ಗೊತ್ತಾಗುತ್ತದೆ" ಎಂದಳು. ಇಂತಹವನು ನಿಮಗೆ ಎಲ್ಲಿ ಸಿಗುತ್ತಾರೆ ಅಂದಳು. ನೋಡುವ ದೃಷ್ಟಿ ಅಷ್ಟು ಅದ್ಭುತ. ಆಕೆ ಕೊಳಕು ಮುಸುರೆ ತಂದು ಆತನ ಮೇಲೆ ಸುರಿಯುತ್ತಾ ಇದ್ದಳು. ಆತ ನಗುತ್ತಾ ಇರುತ್ತಿದ್ದನು. ಸಂತೋಷದಿಂದ ಮಾತನಾಡುತ್ತಾ ಇದ್ದನು. ಗೆಳೆಯರು ಹೇಳಿದರು. ನೀನು ಏಕೆ ಮದುವೆಯಾದೆ?. ದಿನ ಬೈಗಳು ಕೇಳುತ್ತ ಇದಿಯಲ್ಲ ಎಂದರು. ಆಗ ಸಾಕ್ರೆಟಿಸ್ ಹೇಳಿದನು, ಊರೆಲ್ಲಾ ಹೊಗಳುವಾಗ ಒಬ್ಬರಾದರೂ ಬಯ್ಯೋದು ಬೇಡವೇ ಎಂದನು. ಇದೇ ದೃಷ್ಟಿ ಆತ ಸಂತನನ್ನಾಗಿ ಮಾಡಿದ್ದು. ಕೊನೆಗೆ ಸಾಕ್ರೆಟಿಸ್ ನ ಜೊತೆ ಜಾಂತಪಿ ಹೆಸರು ಉಳಿಯಿತು. ಯಾವ ಪ್ರಖ್ಯಾತ ರಾಜನ ಪತ್ನಿ ಹೆಸರಿದೆ ಹೇಳಿ. ಕೋಟ್ಯಾಧಿಪತಿ ಮದುವೆಯಾದರೂ ಜಾಂತಪಿ ಹೆಸರು ಉಳಿಯುತ್ತಿರಲಿಲ್ಲ. ಜಾಂತಪಿ ಹೇಳುತ್ತಾಳೆ, ಆಯ್ಕೆ ಮಾಡುವಾಗ ಯಾವುದು ನಮಗೆ ಸರಿಯಾಗುತ್ತೋ, ಅದನ್ನೇ ಆಯ್ಕೆ ಮಾಡಬೇಕು ಎಂದು. ನಾವು ಇರುವುದರ ಕಡೆ ಗಮನ ಹರಿಸುವುದಿಲ್ಲ. ಇಲ್ಲದರ ಕಡೆ ಗಮನ ಹರಿಸುತ್ತೇವೆ. ಇರುವುದನ್ನ ಎಣಿಸುತ್ತೇವೆ. ಮತ್ತೊಬ್ಬರೊಂದಿಗೆ ಹೋಲಿಸುತ್ತೇವೆ. ಇದೇ ತಾಪ. ವಸ್ತು ಇರುವುದು ಎಣಿಸಲು ಅಲ್ಲ, ಹೋಲಿಸಲು ಅಲ್ಲ, ಅನುಭವಿಸೋಕೆ. ಅನುಭವಿಸಿದರೆ ಸಾಕಲ್ಲ. ಅದೇ ತೃಪ್ತಿ. ಮತ್ತೊಂದು, ಸಮಸ್ಯೆ ನಮಗೆ ಏಕೆ ಆಯಿತು ಅಂತ, ಸಮಸ್ಯೆಯನ್ನೇ ಚಿಂತಿಸುತ್ತೇವೆ. ಆದರೆ ಪರಿಹಾರ ಕುರಿತು ಚಿಂತಿಸಿದರೆ, ಸಂತೋಷ. ಹೀಗೆ ನಾವು ಚೆನ್ನಾಗಿರುವುದನ್ನೇ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲವೇ ಮಕ್ಕಳೇ...?
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article