ಪಯಣ : ಸಂಚಿಕೆ - 04 (ಬನ್ನಿ ಪ್ರವಾಸ ಹೋಗೋಣ)
Thursday, August 15, 2024
Edit
ಪಯಣ : ಸಂಚಿಕೆ - 04 (ಬನ್ನಿ ಪ್ರವಾಸ ಹೋಗೋಣ)
ಲೇಖನ : ರಮೇಶ ನಾಯ್ಕ, ಉಪ್ಪುಂದ
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
ಪ್ರವಾಸ ಹೋಗುವುದೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ...? ಹೊಸ ಊರು ನೋಡಬೇಕು.. ಹೊಸ ಹೊಸ ವಿಚಾರ ತಿಳಿದುಕೊಳ್ಳಬೇಕೆನ್ನುವುದು ಪ್ರತಿಯೊಬ್ಬರ ಬಯಕೆ. ಧಾರ್ಮಿಕ ಕ್ಷೇತ್ರಗಳು, ಐತಿಹಾಸಿಕ ಸ್ಥಳಗಳು, ಪ್ರಕೃತಿಯ ವೈಶಿಷ್ಟ್ಯ ಸಾರುವ ತಾಣಗಳು ಹೀಗೆ ನಾನಾ ಬಗೆಯ ಪ್ರವಾಸಿ ತಾಣಗಳು ಎಲ್ಲರನ್ನೂ ಆಕರ್ಷಿಸುತ್ತದೆ... ಹೀಗೆ ನಮ್ಮ ಊರಿನ, ನಮ್ಮ ರಾಜ್ಯದ, ನಮ್ಮ ದೇಶದ ಸುಂದರ ತಾಣಗಳನ್ನು ಪರಿಚಯಿಸುವ ಪ್ರಯತ್ನ ಇಲ್ಲಿದೆ... ಬನ್ನಿ ಪ್ರವಾಸ ಹೋಗೋಣ... ರಮೇಶ ನಾಯ್ಕ, ಉಪ್ಪುಂದ
ನೇತ್ರಾಣಿ ಗುಡ್ಡ.. ಉತ್ತರ ಕನ್ನಡದ ಪ್ರಸಿದ್ಧ ತಾಣ. ಮುರ್ಡೇಶ್ವರಕ್ಕೆ ಹೋಗಿ ನೋಡಿದರೆ ದೂರದಲ್ಲಿ ನಿಸರ್ಗ ರಮಣೀಯವಾದ ಪುಟ್ಟ ದ್ವೀಪವೊಂದು ನಮಗೆ ಕಾಣಿಸುತ್ತದೆ. ಅದೇ ನೇತ್ರಾಣಿ ದ್ವೀಪ. ಅಲ್ಲಿಗಿರುವ ಸಮುದ್ರಯಾನದ ದೂರ 20
ಕಿ. ಮೀ ಅಷ್ಟೆ !.
ದ್ವೀಪದ ಕಡೆ ಹೊರಡುವ ಸ್ಥಳ ಗಂಗಬೈಲು. ಈ ಊರು ಕೂಡ ಸುಂದರವಾಗಿದ್ದು, ಈ ಸ್ಥಳ ಸಮುದ್ರಕ್ಕೆ ತಾಗಿಕೊಂಡಿದೆ. ನದಿಯ ಪಕ್ಕದಲ್ಲೇ ತೆಂಗು - ಕಂಗು ಕಂಗೊಳಿಸುತ್ತದೆ. ಬೋಟಿನ ಮೂಲಕ ನೇತ್ರಾಣಿ ದ್ವೀಪಕ್ಕೆ ಪ್ರಯಾಣಿಸುವುದು ಒಂದು ರೋಮಾಂಚನ ಅನುಭವ. ಸಮುದ್ರದಲ್ಲಿ ಬೋಟಿನ ಮೂಲಕ ಪ್ರಯಾಣಿಸುವುದೆಂದರೆ ತಾಯಿ ತೊಟ್ಟಿಲಲ್ಲಿ ಮಲಗಿಸಿ
ಜೋಗುಳ ಹಾಡಿದ ಹಾಗೆ ಇರುತ್ತದೆ .
ಈ ಗುಡ್ಡದ ತುದಿಗೆ ಹೋಗುವ ಮೊದಲು ಅಕ್ಕ- ಪಕ್ಕದ ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿಯಬಹುದು.
ಇದೊಂದು ಪುಟ್ಟ ದ್ವೀಪ ಎಂದು ನೀವು ಅಂದುಕೊಂಡಿರಬಹುದು. ಆದರೆ ಇದು ಜೀವ ವೈವಿಧ್ಯಗಳ ಆಗರ. ಹಲವು ಕೌತುಕಗಳನ್ನು ಮಡಿಲಲ್ಲಿಟ್ಟುಕೊಂಡ ಸ್ಥಳವಾಗಿದೆ. ಸ್ಫಟಿಕದಷ್ಟು ಶುಭ್ರವಾಗಿ ಕಾಣುವ ನೀರಿನಲ್ಲಿರುವ ಹವಳದ ಬಂಡೆ, ಮೃದ್ವಂಗಿಗಳ ಸೆಲೆಯಿದೆ. ಇಲ್ಲಿ ನೀರಿನ ಆಳ ಸುಮಾರು 50 ಮೀ.ಗಳಷ್ಟು ಇರುವುದರಿಂದ ಜೀವ ವೈವಿಧ್ಯಗಳ ವಾಸಕ್ಕೆ ಅನುಕೂಲಕರ. ಜೀವಸಂಪತ್ತಿನಲ್ಲಿ ಶೇ. 14.7ರಷ್ಟು ಹವಳ, ಶೇ. 27ರಷ್ಟು ಮೃದ್ವಂಗಿಗಳು, ಶೇ. 63.2ರಷ್ಟು ಎಲ್ಗಿ , ಶೇ. 13ರಷ್ಟು ಬೋರಿಂಗ್ ಪೂಲಿಚೇಟಸ್ ಹಾಗೂ ಶೇ. 0.3ರಷ್ಟು ನೀಲಿ ಕಲ್ಲುಗಳಿವೆ.
ಅಳಿವಿನಂಚಿನಲ್ಲಿವೆ ಎಂದು ಗುರುತಿಸಲಾದ ಹಲವು ಜಾತಿಯ ಹವಳ ಮೃದ್ವಂಗಿಗಳು ನಳನಳಿಸುತ್ತವೆ. ಇಲ್ಲಿ ತಿಮಿಂಗಿಲಗಳೂ ಕಾಣಸಿಗುತ್ತವೆ. ಈ ತಿಮಿಂಗಿಲಗಳು ಅಂಟಾರ್ಟಿಕಾ ತೀರದಿಂದ ವಲಸೆ ಬಂದು ಈ ಉಷ್ಣ ವಲಯ ಪ್ರದೇಶದಲ್ಲಿ ಮರಿಗಳಿಗೆ ಜನ್ಮ ನೀಡುತ್ತವೆ. ಯಾಕೆಂದರೆ ಆಗ ತಾನೇ ಜನಿಸಿದ ಮರಿಗಳಿಗೆ ಚಳಿ ತಡೆದುಕೊಳ್ಳುವ ಹೊರ ಚರ್ಮ ಬೆಳೆದಿರುವುದಿಲ್ಲ. ಹುಟ್ಟುವ ಮರಿಗಳಿಗೆ ಚಳಿಯೇ ಮೊದಲ ವೈರಿ. ಹೀಗಾಗಿ 'ತಿಮಿಂಗಿಲಗಳ ತವರು ಮನೆ' ಎನಿಸಿದ ನೇತ್ರಾಣಿ ದ್ವೀಪಕ್ಕೆ ವಲಸೆ ಬರುತ್ತವೆ. ಇಲ್ಲಿ ಸಾಕಷ್ಟು ಜಾತಿಯ ತಿಮಿಂಗಿಲಗಳಿವೆ.
ಈ ದ್ವೀಪದಲ್ಲಿ ಪಾರಿವಾಳಗಳದ್ದೆ ಕಾರುಬಾರು. ಆದರೆ ಇವು ವಿನಾಶದ ಅಂಚಿನಲ್ಲಿವೆ. ಕಾರಣ - ತಾಲೀಮು ನಡೆಸಲು ಇಲ್ಲಿಗೆ ಶೆಲ್‌ಗಳ ಸುರಿಮಳೆಗೈಯುವ ರಕ್ಷಣಾ ಪಡೆಗಳು. ಅದರಲ್ಲಿ ಕೆಲವು ಸ್ಫೋಟಗೊಂಡರೆ ಇನ್ನು ಕೆಲವು ಹಾಗೇ ಸಾಗರದ ಆಳದಲ್ಲಿ ಮತ್ತು ಗುಡ್ಡದಲ್ಲಿ ಕಾಣಸಿಗುತ್ತದೆ. ಜೀವವೈವಿಧ್ಯ ತಾಣ, ಪ್ರವಾಸಿ ತಾಣ ಹಾಗೂ ಮೀನುಗಾರಿಕೆ ನಡೆಯುವ ಪ್ರದೇಶವಾಗಿರುವುದರಿಂದ ಇತ್ತೀಚೆಗೆ ದಾಳಿಗೆ ತುಸು ಕಡಿವಾಣ ಹಾಕಲಾಗಿದೆ. ಆದರೂ ನೇತ್ರಾಣಿ ದ್ವೀಪಕ್ಕೆ ಹೀಗೆ ಹೋಗುವ ಪದ್ಧತಿಯಿಲ್ಲ. ಬದಲಿಗೆ ವರ್ಷಕ್ಕೊಮ್ಮೆ ನಾಲ್ಕಾರು ಬೋಟ್‌ಗಳು ಒಟ್ಟಾಗಿ ಸೇರಿ ಹೋಗುತ್ತಾರೆ.
ದೊಡ್ಡ - ದೊಡ್ಡ ಬಂಡೆ ಕಲ್ಲುಗಳ ಮೇಲೆ ಕಾಲಿಡುತ್ತಾ ದೊಡ್ಡ ಮರಗಳ ಹತ್ತಿರ ಸಾಗುತ್ತಾ 'ದೇವರು' ನೆಲೆಸಿರುವ ಸ್ಥಳದತ್ತ ಸಾಗಬಹುದು. ಈ ದ್ವೀಪದಲ್ಲಿ ಮೂರು ಧರ್ಮದ ದೇವರು ಒಂದೆಡೆ ನೆಲೆಸಿದ್ದಾರೆ. ಹಿಂದೂಗಳ ಜಟ್ಟಿಗ ಹೈಗುಳಿ, ಮುಸ್ಲಿಮರ ದರ್ಗಾ, ಕ್ರೈಸ್ತರ ಶಿಲುಬೆ ಅಕ್ಕಪಕ್ಕದಲ್ಲಿವೆ. ಇಲ್ಲಿಗೆ ಬರುವ ಪ್ರತಿಯೊಬ್ಬ ಭಕ್ತನು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಭೇದವೆಣಿಸದೆ ಸಮಾನ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಕೋಳಿ - ಕುರಿಗಳನ್ನು ಬಿಡುವುದು, ಬಾಳೆಗೊನೆಯನ್ನು ಒಪ್ಪಿಸುವುದು ಹರಕೆಯ ಪದ್ಧತಿ.
ಉಪ್ಪು ನೀರಿನ ಮಧ್ಯದ ದ್ವೀಪದಲ್ಲಿ ಸಿಹಿ ನೀರಿನ ಕೆರೆಯಿದೆ. ಇಲ್ಲಿಯ ಸವಿನೀರನ್ನುಂಡು ವಿರಮಿಸಬಹುದು, ಬೋಟುಗಳು ಸಂಜೆ ಹೊರಡುವುದರಿಂದ ಹೆಚ್ಚು ಹೊತ್ತು ದ್ವೀಪದಲ್ಲಿ ಇರಲಾಗುವುದಿಲ್ಲ. ಆದರೆ ನೋಡಿದಷ್ಟು ಮತ್ತಷ್ಟು ನೋಡುವ ಅವಿಸ್ಮರಣೀಯವಾದ ಅನುಭವ ನೀಡುತ್ತದೆ.
ಹೋಗುವುದು ಹೀಗೆ...
ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66 ರ ಮೂಲಕ ಕುಂದಾಪುರದಿಂದ 68. ಕಿ. ಮೀ, ಉಡುಪಿಯಿಂದ 104 ಕಿ. ಮೀ, ಮಂಗಳೂರಿನಿಂದ 157ಕಿ. ಮೀ , ಕುಮಟದಿಂದ 42 ಕಿ. ಮೀ, ಶಿರಸಿಯಿಂದ 107 ಕಿ. ಮೀ, ಹೊನ್ನಾವರದಿಂದ 27 ಕಿ. ಮೀ, ಭಟ್ಕಳದಿಂದ ಮುರುಡೇಶ್ವರಕ್ಕೆ 13 ಕಿಲೋಮೀಟರ್, ರಾಷ್ಟ್ರೀಯ ಹೆದ್ದಾರಿಯಿಂದ 2 ಕಿಲೋಮೀಟರ್. ಅಲ್ಲದೆ ಇಲ್ಲಿಗೆ ಸಮೀಪದ ಯಾವುದಾದರೂ ಕರಾವಳಿ ತೀರದಿಂದಲೂ ಪ್ರಯಾಣಿಸಬಹುದಾಗಿದೆ.
"ಕಡಲ ಕಿನಾರೆ ಸಮೀಪದ ಅದ್ಭುತ ದ್ವೀಪ ಇದಾಗಿದ್ದು, ಅನೇಕ ಅಚ್ಚರಿಗಳ, ಅವಿಸ್ಮರಣೀಯವಾದ ಅನುಭವಗಳನ್ನು ಪಡೆಯಲು ಇರುವ ಸಾಮಿಪ್ಯದ ಪ್ರವಾಸಿ ತಾಣ ಇದಾಗಿದೆ - ಎಲ್ಲರೂ ಬನ್ನಿ....
ಮುಂದಿನ 'ಪಯಣ' ಸಂಚಿಕೆಯಲ್ಲಿ ಸಿಗೋಣವೇ, ನಮಸ್ಕಾರ.
ಕನ್ನಡ ಭಾಷಾ ಶಿಕ್ಷಕರು
ನೇತಾಜಿ ಸುಭಾಶ್ಚಂದ್ರ ಬೋಸ್
ಸರಕಾರಿ ಪ್ರೌಢಶಾಲೆ, ಮರವಂತೆ
ಬೈಂದೂರು ತಾಲೂಕು, ಉಡುಪಿ ಜಿಲ್ಲೆ.
ಮೊಬೈಲ್ : +91 94488 87713
********************************************