ಜಗಲಿ ಕಟ್ಟೆ : ಸಂಚಿಕೆ - 57
Saturday, July 13, 2024
Edit
ಜಗಲಿ ಕಟ್ಟೆ : ಸಂಚಿಕೆ - 57
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
ಮಕ್ಕಳ ಜಗಲಿ
www.makkalajagali.com
ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ
ಶಾಲೆಗಳು ಆರಂಭವಾಗಿ ತಿಂಗಳು ಕಳೆಯಿತು. ಇನ್ನು ಶಾಲೆಗಳಲ್ಲಿ ಕ್ರೀಡಾ ಸ್ಪರ್ಧೆಗಳು, ಪ್ರತಿಭಾ ಕಾರಂಜಿ ಸ್ಪರ್ಧೆ ಹಾಗೂ ಇನ್ನಿತರ ಸ್ಪರ್ಧೆಗಳು ಆರಂಭವಾಗತೊಡಗುತ್ತದೆ. ಅನೇಕ ವಿದ್ಯಾರ್ಥಿಗಳು ಈ ಕಾರಣಕ್ಕೆ ಸಿದ್ಧತೆ ಮಾಡಿಕೊಳ್ಳಲು ಆರಂಭ ಮಾಡಿರಬಹುದು. ಅಥವಾ ಇನ್ನು ಕೆಲವು ವಿದ್ಯಾರ್ಥಿಗಳು ಸ್ಪರ್ಧೆಗಳ ಕೆಲವೇ ದಿನಗಳ ಮುಂಚೆ ತರಬೇತಿ ಪಡೆಯಲು ಆರಂಭ ಮಾಡುತ್ತಾರೆ. ಒಟ್ಟಾಗಿ ಭಾಗವಹಿಸಬೇಕೆನ್ನುವ ದೃಷ್ಟಿಕೋನದಿಂದ ಈ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಯಾವುದೇ ಸ್ಪರ್ಧೆಗಳು ನಡೆದಾಗ ಭಾಗವಹಿಸದಿದ್ದರೆ ತಪ್ಪಾಗುತ್ತದೆ ಎನ್ನುವ ಕಾರಣಕ್ಕೆ ಭಾಗವಹಿಸುವ ಮಕ್ಕಳ ಜೊತೆಗೆ ತನ್ನ ನಿರ್ದಿಷ್ಟ ಆಸಕ್ತಿಯ ವಿಭಾಗಗಳಲ್ಲಿ ಖಂಡಿತಾ ಭಾಗವಹಿಸುತ್ತೇನೆ ಎನ್ನುವ ಖಚಿತ ನಿಲುವಿನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳನ್ನು ಕಾಣುತ್ತೇವೆ.
ಯಾವುದೇ ಕ್ಷೇತ್ರಗಳಲ್ಲಿ ಭಾಗವಹಿಸುವುದು ಮತ್ತು ತೊಡಗಿಕೊಳ್ಳುವ ಕುರಿತಾಗಿ ನಾವು ವ್ಯತ್ಯಾಸವನ್ನು ಕಾಣುತ್ತೇವೆ. ಕೇವಲ ಭಾಗವಹಿಸುವುದು ಪರಿಣಾಮ ಕಾರಿಯಾಗಿರುವುದಿಲ್ಲ. ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡು ಮುಂದುವರಿದಾಗ ಆ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈಯಲು ಸಾಧ್ಯವಾಗುತ್ತದೆ.
ಸಾಮಾನ್ಯವಾಗಿ ಸ್ಪರ್ಧೆ ಅಂತ ಬಂದಾಗ ಆ ಕ್ಷಣದಿಂದ ಆ ಬಗ್ಗೆ ಕುತೂಹಲ ಕೆರಳಿ ನಿರ್ದಿಷ್ಟ ಸಮಯದ ತರಬೇತಿಯೊಂದಿಗೆ ಭಾಗವಹಿಸುವ ವಿದ್ಯಾರ್ಥಿಗಳಿದ್ದಾರೆ. ಸ್ಪರ್ಧೆ ಮುಗಿದ ಮೇಲೆ ಆ ವಿಷಯದ ಗೋಜಿಗೆ ಹೋಗದೆ ಎಂದಿನಂತೆ ನಿತ್ಯದ ಚಟುವಟಿಕೆಯಲ್ಲಿ ಮಗ್ನರಾಗಿ ಬಿಡುತ್ತಾರೆ. ತನ್ನ ಪ್ರತಿಭೆಯನ್ನು ಅರಿಯದ ಕೆಲವು ವಿದ್ಯಾರ್ಥಿಗಳು ಮತ್ತೆ ಮುಂದುವರಿಸುವ ಅವಕಾಶ ಸಿಗಲಾರದೆ ಅಥವಾ ಪ್ರೋತ್ಸಾಹ ನೀಡುವವರ ಕೊರತೆಯಿಂದಾಗಿ ಮುಂದಿನ ಬೆಳವಣಿಗೆಯಲ್ಲಿ ಕುಂಠಿತರಾಗಿಬಿಡುತ್ತಾರೆ. ಇಂತಹ ಅದೆಷ್ಟೋ ಉದಾಹರಣೆಗಳು ನಮ್ಮ ಸುತ್ತಮುತ್ತಲು ಕಾಣಸಿಗುತ್ತವೆ.
ಹಾಸನ ಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿರುವ, ಖ್ಯಾತ ಹಿರಿಯ ಕಲಾವಿದರು ಬಿ ಎಸ್ ದೇಸಾಯಿ ಅವರ ಮಾತು ಇಲ್ಲಿ ಪ್ರಸ್ತುತ ಅನಿಸಿಬಿಡುತ್ತದೆ.... "ಮಕ್ಕಳು ತೊಡಗಿಸಿಕೊಳ್ಳುವವರಾಗಬೇಕು. ಆಗ ಮಾತ್ರ ಅವರಲ್ಲಿ ವಿಶೇಷವಾದ ಶಕ್ತಿ ಪುನಸ್ಚೇತನವಾಗುತ್ತದೆ". ಇವರ ಕಲಾ ಶಾಲೆಯ ವಿದ್ಯಾರ್ಥಿಗಳನ್ನು ಕೇವಲ ಸ್ಪರ್ಧೆಗಾಗಿ ರೂಪುಗೊಳಿಸದೆ ಅವರಲ್ಲಿ ವಿಶೇಷವಾದ ಆಸಕ್ತಿಯನ್ನು ಕೆರಳಿಸಿ ಕಲೆಯ ನಂಟನ್ನು ಬೆಳೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬೇರೆ ಬೇರೆ ಊರುಗಳಲ್ಲಿ, ನಗರಗಳಲ್ಲಿ , ಕಾರ್ಯಕ್ರಮಗಳಲ್ಲಿ ಪ್ರದರ್ಶನ ಕಾರ್ಯಕ್ರಮಗಳನ್ನು ನೀಡಿ ವಿಶ್ವದಾಖಲೆಯಂತ ಹಲವಷ್ಟು ಸಾಧ್ಯತೆಗಳಿಗೆ ಇವರ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಇಂತಹ ಬದ್ಧತೆಯ ವಿದ್ಯಾರ್ಥಿಗಳು ಮಾತ್ರ ನಿರಂತರ ಅಭ್ಯಾಸದ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಂಡು ಆ ಕಲೆಯನ್ನು ರಕ್ತಗತಗೊಳಿಸುತ್ತಾರೆ.
ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಲ್ಲಿ ವಿಶೇಷ ಸಾಧನೆಗೈದು ಪ್ರಶಸ್ತಿಗಳನ್ನು ತನ್ನ ಮಡಿಲಿಗೊಯ್ಯುತ್ತಾರೆ. ಆ ಹಂತದಿಂದ ಮತ್ತಷ್ಟು ಪ್ರಯತ್ನಗಳನ್ನು ಮಾಡಿ ಕಠಿಣ ತರಬೇತಿ, ಪರಿಶ್ರಮದಿಂದ ಮೇಲೇರಬೇಕಾದದ್ದು ಅವಶ್ಯಕ. ಆದರೆ ಸರಿಯಾದ ಮಾರ್ಗದರ್ಶಕರ ಕೊರತೆ, ವಿಶೇಷ ಪ್ರೋತ್ಸಾಹ, ಬೆಂಬಲ ನೀಡುವವರ ಕೊರತೆ ಹಾಗೂ ತನ್ನಲ್ಲಿ ವಿಶೇಷ ಬದ್ಧತೆ ಇಲ್ಲದ ವಿದ್ಯಾರ್ಥಿಗಳು ತನ್ನ ದಿಕ್ಕನ್ನು ಬದಲಿಸಿ ಸಾಗುವುದನ್ನು ನೋಡಿದ್ದೇವೆ.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶೇಷವಾದ ಸಾಮರ್ಥ್ಯ ಇದ್ದೇ ಇದೆ. ಕೆಲವಷ್ಟು ಬೆಳಕಿಗೆ ಬಂದು ಮರೆಯಾಗುವ ಹಾಗೂ ಇನ್ನು ಕೆಲವು ಮುನ್ನೆಲೆಗೆ ಬಾರದೆ ಮುದುಡುವ ಪ್ರಸಂಗಗಳು ನಡೆಯದಿರಲಿ ಎನ್ನುವುದೇ ನಮ್ಮ ಆಶಯ... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************
ಕಳೆದ ಸಂಚಿಕೆಯ ಜಗಲಿಕಟ್ಟೆ - 56 ಅಂಕಣದಲ್ಲಿ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಹಸೀನ ಮಲ್ನಾಡ್, ವಿಜ್ಞಾನ ಶಿಕ್ಷಕರು ಮತ್ತು ಚಿತ್ರಾಶ್ರೀ ಕೆ.ಎಸ್. ಸಹ ಶಿಕ್ಷಕರು... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಕಳೆದ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
ಪ್ರಿಯ ಓದುಗರೇ,
ಮಕ್ಕಳ ಜಗಲಿ ಎಂಬ ಡಿಜಿಟಲ್ ಪತ್ರಿಕೆಯಲ್ಲಿ ನಮಗೆ ಬರೆಯಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು....
ಹೌದು ಪ್ರಿಯರೇ, ವಿದ್ಯಾರ್ಥಿನಿ ಸೃಷ್ಟಿ ಬರೆದಿರುವ 'ವಿದ್ಯಾರ್ಥಿಗಳು ಮತ್ತು ನೈತಿಕ ಮೌಲ್ಯಗಳು' ಎಂಬ ಲೇಖನ ಉತ್ತಮವಾಗಿದೆ. ಅದು ಇಂದಿನ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯವನ್ನು ಬೆಳೆಸುವಲ್ಲಿ ಪ್ರೇರಣೆ ನೀಡುವಂತಾಗಿದೆ. ಈ ಲೇಖನವನ್ನು ಪ್ರಕಟಿಸಿದ ಮಕ್ಕಳ ಜಗಲಿಗೂ ಹಾಗೂ ತಾರಾನಾಥ್ ಕೈರಂಗಳರಿಗೂ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಮಕ್ಕಳ ಜಗಲಿಯಲ್ಲಿ ಅವಳ ಕವನಗಳನ್ನು ಬರೆದು ಅವಳಿಗೆ ಸ್ಪೂರ್ತಿಯನ್ನು ನೀಡಿದ ತಮಗೆ ತುಂಬು ಹೃದಯಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇನೆ.
ಕಳೆದ ವಾರದ ಮಕ್ಕಳ ಜಗಲಿಯಲ್ಲಿ ನಾನು ನೋಡಿದ ಹಾಗೂ ಓದಿದ ವಿದ್ಯಾರ್ಥಿಗಳ ಚಿತ್ರ ಹಾಗೂ ಕವನಗಳ ಬಗ್ಗೆ ಹೇಳಲು ಬಯಸುತ್ತೇನೆ. ಸುಕನ್ಯಾ ಹಾಗೂ ಅನ್ವಿತ್ ರವರು ರಚಿಸಿದ ಚಿತ್ರಗಳು ಕಣ್ಣಿಗೆ ಮುದ ನೀಡುತ್ತವೆ. ಅವರ ಚಿತ್ರಕಲೆಯ ಪ್ರತಿಭೆಯು ಹೆಮ್ಮರವಾಗಿ ಬೆಳೆಯಲಿ ಎಂದು ಆಶಿಸುತ್ತೇನೆ. 'ಬಾಲ್ಯವ ನೆನಪಿಸಿದ ಜಾತ್ರೆ' ಎಂಬ ಲೇಖನ ಶರ್ಮಿಳಾ ಕೆ ಎಸ್ ಎಂಬ ಮಗುವಿನ ಮನಸ್ಸಿನ ಭಾವನೆಗಳನ್ನು ನಮಗೆ ತಿಳಿಸುತ್ತವೆ. ಸಾತ್ವಿಕ್ ಗಣೇಶ ಬರೆದ ಕಥೆಗಳು ಸಹ ಉತ್ತಮವಾಗಿ ಮೂಡಿಬಂದಿವೆ. ಈ ಎಲ್ಲಾ ಲೇಖನಗಳನ್ನು ಹಾಗೂ ಚಿತ್ರಕಲೆಗಳನ್ನು ಪ್ರಕಟಿಸಿ ಅವರಿಗೆ ಪ್ರೇರಣೆ ನೀಡಿದಂತಹ ಮಕ್ಕಳ ಜಗಲಿ ಎಂಬ ಈ ಡಿಜಿಟಲ್ ಪತ್ರಿಕೆಯ ಮೇಲೆ ಸದಾ ದೇವರ ಆಶೀರ್ವಾದಗಳನ್ನು ಬೇಡುತ್ತೇನೆ....
ಸಹಶಿಕ್ಷಕಿ
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ
ಮಂಗಳೂರು ಉತ್ತರ ವಲಯ.
ದಕ್ಷಿಣ ಕನ್ನಡ ಜಿಲ್ಲೆ
Mob: +91 80735 47398
*******************************************
ನಮಸ್ತೇ,
ಅಷ್ಟಾಂಗ ಯೋಗಗಳಲ್ಲಿ ಒಂದಾದ ಮೊದಲನೆಯ ಭಾಗ 'ಯಮ' ದ ಕುರಿತಾದ ವಿವರಣಾತ್ಮಕ ಉತ್ತಮ ಲೇಖನ ಶಿಕ್ಷಣಾಧಿಕಾರಿ ಜ್ಞಾನೇಶ್ ಸರ್ ರವರಿಂದ. ಲೇಖನ ತುಂಬಾ ಇಷ್ಟತಾಯಿತು. ಧನ್ಯನಾದಗಳು ಸರ್.
ಶಿಸ್ತು ಮತ್ತು ಸಮಯ ಪಾಲನೆ ಜೀವನದ ಅವಿಭಾಜ್ಯ ಅಂಗ. ಇವನ್ನು ರೂಢಿಸಿಕೊಂಡರೆ ಜೀವನ ಚೆಂದ. ಸಮಯ ಪಾಲನೆಯ ಅಗತ್ಯತೆಯ ಕುರಿತಾಗಿ ಶಾಲಾ ವಾರ್ಷಿಕ ಆಚರಣೆಯ ಉದಾಹರಣೆಯೊಂದಿಗೆ ಚಂದದ ಲೇಖನ ರಮೇಶ್ ಬಾಯಾರ್ ರವರಿಂದ. ಧನ್ಯವಾದಗಳು ಸರ್.
ರಕ್ತ ಪರಿಚಲನೆಯ ವಿಧಾನಗಳನ್ನು ಬಹಳ ಸುಂದರವಾಗಿ ದಿವಾಕರ ಸರ್ ರವರು ಈ ಸಲದ ಮಕ್ಕಳಿಗಾಗಿ ವಿಜ್ಞಾನ ಸಂಚಿಕೆಯಲ್ಲಿ ವಿವರಿಸಿದ್ದಾರೆ.
ನಮ್ಮ ಮನೆಯ ಹತ್ತಿರ ಸುತ್ತ ಮುತ್ತ ಈ ಗಿಡವಿದ್ದರೂ ಕ್ರೇಪ್ ಶುಂಠಿ ಎಂಬ ಹೆಸರು ಇರುವ ಗಿಡವೆಂದು ಈ ಲೇಖನದಿಂದ ತಿಳಿಯಿತು. ಗಿಡದ ವಿವರಣಾತ್ಮಕ ಪರಿಚಯಕ್ಕಾಗಿ ವಿಜಯಾ ಶೆಟ್ಟಿ ಮೇಡಂರವರಿಗೆ ಧನ್ಯವಾದಗಳು.
ಮಕ್ಕಳಿಗಾಗಿ ನಾಟಕದ ಕುರಿತಾದ ನಾಟಕಗಳ ಸಂಗ್ರಹವಿರುವ ಸುಂದರ ಪುಸ್ತಕದ ಪರಿಚಯ ಈ ವಾರ ವಾಣಿಯಕ್ಕ ನವರಿಂದ.
ಮಕ್ಕಳ ಚಿತ್ರ ಸಂಚಿಕೆಗಳಲ್ಲಿ ತುಂಬಾ ಅದ್ಭುತವಾಗಿ ಚಿತ್ರ ರಚಿಸಿದ ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಹಾಗೆ ಮಕ್ಕಳ ಕವನಗಳಲ್ಲಿ ಸೊಗಸಾದ ಕವನಗಳನ್ನು ರಚಿಸಿದ ಪ್ರತೀಕ್ಷಾ ಮತ್ತು ಸೃಷ್ಟಿಯವರಿಗೆ ಹಾಗೆಯೇ ಉತ್ತಮ ಕಥೆಗಳನ್ನು ಹಾಗೂ ಲೇಖನವನ್ನು ಬರೆದ ಸಾತ್ವಿಕ್ ಗಣೇಶ್ ಹಾಗೂ ಶರ್ಮಿಳಾರಿಗೆ ಅಭಿನಂದನೆಗಳು.
ರಮೇಶ ಉಪ್ಪುಂದರವರ 126ನೇ ಪದದಂಗಳ ಸಂಚಿಕೆ ಸೊಗಸಾಗಿ ಮೂಡಿಬಂದಿದೆ.
ಈ ವಾರದ ಜಗಲಿಯಲ್ಲಿ ಲೇಖನ, ಚಿತ್ರ , ಕವನಗಳನ್ನು ಕಳಿಸಿದ ಜಗಲಿಯ ಎಲ್ಲರಿಗೂ ಕೃತಜ್ಞತೆಗಳು.
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
*******************************************
ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ, ಐರಿನ್ ಫರ್ನಾಂಡಿಸ್, ಸಹಶಿಕ್ಷಕಿ.... ಇವರಿಗೆ ಧನ್ಯವಾದಗಳು.
ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ.
Mob : 9844820979
******************************************