-->
ಮಕ್ಕಳ ಕವನಗಳು : ಸಂಚಿಕೆ - 23: ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 23: ಕವನ ರಚನೆ : ಶರ್ಮಿಳಾ ಕೆ ಎಸ್, 10ನೇ ತರಗತಿ

ಮಕ್ಕಳ ಕವನಗಳು : ಸಂಚಿಕೆ - 23
ಕವನ ರಚನೆ : ಶರ್ಮಿಳಾ ಕೆ ಎಸ್ 
10ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ

             
ಬಲ್ಲವರು ಹೇಳಿದರು ಇದೇ ಸ್ವಾತಂತ್ರ್ಯವೆಂದು
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...!!
ಹೊತ್ತು ಕಳೆಯೋ ವೇಳೆಗೆ ಮನೆಸೇರದ ಹೆಣ್ಣಿಗೆ
ಪ್ರಶ್ನೆಗಳ ಮಳೆಯೇ ಸುರಿವುದು ಸತ್ಯ 
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 

ಗರ್ಭಗುಡಿಯಲಿ ಶೃಂಗರಿಸಿಪ ಮೂರುತಿಗೆ
ಸೇವೆಕೊಡಲು ಬೇಕು ಭಕ್ತಜನಾಂಗ
ಮಾತ್ರವೇಕೆ ಪೂಜಿಸಲು ಬ್ರಾಹ್ಮಣರು 
ಎಂದು ಪ್ರಶ್ನಿಸುವುದಿರಲಿ, ಕೇಳಲು ಬಾರದು
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 

ತಪ್ಪುಗಳ ಮಾಡದವರಾದರೂ ಯಾರು..?
ಮಕ್ಕಳ ತಪ್ಪನ್ನು ತಿದ್ದುವ ಹಿರಿಯರಿಗಿರುವ ಸ್ವಾತಂತ್ರ್ಯ 
ಮಾಡಿದ ತಪ್ಪನು ತೋರಲು ಅಧಿಕಾರವಿರದೇ
ಹೋಗಲು ಕಿರಿಯ ಬಂಧುಗಳಿಗೆ    
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 

ಪೂರ್ವಜರು ಸೃಷ್ಟಿಸಿಹ ಮೂಢಗಳನು
ನಂಬಿ ಬದುಕುತಿರುವ ಯಾಂತ್ರಿಕ ಯುಗವು
ಒಂದು ಬಾರಿಯೂ ಪ್ರಶ್ನಿಸಲಿಲ್ಲವೇಕೆ...?
ಧರ್ಮ, ಜಾತಿ, ಮತ, ಲಿಂಗ ತಾರತಮ್ಯವ
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 

ಕಣ್ಣಿಗೆ ಕಾಣುವರಲ್ಲಿ ದೇವರನ್ನು ಕಾಣದವನು
ಕಾಣದ ದೇವರನ್ನು ಹೇಗೆ ಕಂಡಾನು
ಎಂದವರ ಮಾತಿಗೆ ಸಾಥು ಕೊಡುತಿರುವರು
ಬಡವ ಬಲ್ಲಿದರೆಂಬ ಗಳನ್ನು ಅಡ್ಡಗೋಡೆಗಳಾ ಒಡೆಯುವಲ್ಲಿ   
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 

ಸ್ವಾತಂತ್ರ್ಯವನೇ ಕಾಣದೇ ಸಮರ ಕಾಳಗಗಳನ್ನೇ ಕಂಡೆಮಗೆ
ಸ್ವಾತಂತ್ರ್ಯದ ಅರ್ಥಪೂರವನು ತಿಳಿಸಿದವರು ಬಿಳಿಯರಾದರೂ
ಪ್ರಾಣಿ ಪಕ್ಷಿಗಳನು ಹಿಂಸಿಸಿ, ಕೊಂದ ಪಾಪ ತಿಂದು ಪರಿಹಾರವೆಂದರೂ
ಪಂಜರದಲಿಯೇ  ಅವುಗಳನ್ನಿಟ್ಟು ಹಿಂಸಿಸುತಿರುವೆವು ನಾವು ನೀವುಗಳಿಂದು
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...! 
 
ಸ್ವಾತಂತ್ರ್ಯದ ನಿಜಾರ್ಥವ ತಿಳಿಯದೇ
ಅದರ ಸುಖದ ಪೀಯೂಷವನು ಸವಿಯುತಿರುವ ನಾವುಗಳು 
ಮೂಖಪ್ರಾಣಿಗಳಿಗೆ ನೋವನು ನೀಡಿದರೆ ಮೆಚ್ಚುವುದೇ ಈ ಪ್ರಕೃತಿಯು
ಎಂದರಿಯುವರೋ ಈ ಮಾನವರು ಸ್ವಾತಂತ್ರ್ಯದ ಪೂರ್ಣಾರ್ಥವ 
ಕಾಣುವುದರೊಳಗೆ ಅಂತ್ಯಗೊಂಡಿರುವುದೇನೋ ಭೂಮಿಯ ಋಣ 

ಬಲ್ಲವರು ಹೇಳಿದರು ಇದೇ ಸ್ವಾತಂತ್ರ್ಯವೆಂದು
ಎಲ್ಲಿಹುದೋ ಸ್ವಾತಂತ್ರ್ಯ ನಾ ಕಾಣೆನು...!    
..................................... ಶರ್ಮಿಳಾ ಕೆ ಎಸ್ 
10ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ
********************************************
                    

ಜೀವನವೆಂಬುದು ಅಂಕುಡೊಂಕಿನ ದಾರಿ
ಚಲಿಸುತಲಿರುವ ಮೋಡ ನಾವುಗಳು 
ಕಷ್ಟ ಸುಖವ ಸಮವಾಗಿ ಹೀರಿ 
ಜೀವನ ಸಾಗಿಸುವ ನಾವೆಗಳು 

ಜೀವನದಲಿ ಬರುವ ಮುಖಗಳೆಷ್ಟೋ
ಒಂದೊಂದು ಹೊಸದೊಂದು ಭಾವಸ್ಪುಟಗಳು
ನೆಲೆಯಾದವರಿಗಿಂತ ಮುಳ್ಳಾದವರೆಷ್ಟೋ
ಕಂಡುಂಡ ಕಷ್ಟಸುಖಗಳೇ ಬದುಕಿನ ಪುಟಗಳು 

ಕೆಟ್ಟ ಕಾಲ ಬಂತೆಂದರೆ ಸೋತು ಹೋದವರು
ಅದ ಸರಿಸುವ ದಾರಿ ತಿಳಿದರೂ ತಿಳಿಯದಂತಿಹರು
ಕಳೆದುಹೋದ ಕಾಲದ ಬಗ್ಗೆ ಚಿಂತಿಸಿದರೂ
ಪ್ರಯೋಜನವಾಗದೇ ಹೋದಾಗ ದುಃಖಿಪರು  

ಸುಖ ಬಂತೆಂದರೆ ಬದುಕಿನ ಕಷ್ಟಗಳಾ ಮರೆತು
ವ್ಯವಹರಿಸಬಾರದೆಂದು  ಅರಿತು
ಜೀವನದ ಪರಿಪಾಠವೆಲ್ಲವ ಕಲೆತು
ಅಂತ್ಯವ ಕಾಣುವ ಪರಿಯೇ ಜೀವನ
......................................... ಶರ್ಮಿಳಾ ಕೆ ಎಸ್ 
10 ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ
********************************************


ಚಲಿಸುತಿರಲು ಕಪ್ಪು ಮೋಡಗಳು
ಅಂಧಕಾರವೇ ಆವರಿಸಿದೆ ಎನಲು
ಬೆಂಕಿಯ ಚೆಂಡಿನಂತಹ ಮಿಂಚುಗಳು
ಒಮ್ಮೆಗೆ ಬೆಳ್ಳಿ ಬೆಳಕನು ಸೂಸಲು 

ಗಡಗಡ ನಡುಗಿಸೋ ಸಿಡಿಲಿನ ರಾಗಕೆ
ಪಳ ಪಳ ಹೊಳೆಯುವ ಮಿಂಚಿನ ಚಿತ್ರಣ
ನೋಡುತಲಿರಲು ಬೀಳಲು ಹನಿ ಹನಿ 
ಮುತ್ತಿನ ಚಿಪ್ಪಿಗೆ ಸಂತಸವು 

ಮಳೆಹನಿ ಸೋಕಿ ಎದ್ದ ನೀರಗುಳ್ಳೆಗಳು 
ಸ್ಪರ್ಶಿಸುವ ಮೊದಲೇ ಮಾಯವಾಗಲು
ಅರಳಿದ ಗಮ ಗಮ ಮಲ್ಲಿಗೆ ಹೂಗಳು
ಮಳೆಹನಿಯ ನೋಡಿ ನಲಿಯುತ ಅರಳಲು 

ಬಿಸಿಲಿಂದ ಬೇಸತ್ತ ಮನುಕುಲಕೆ
ತಂಪುಧಾರೆಯೆರೆಯಲು ಸಂತಸವು
ಹನಿಮಳೆಯಲ್ಲಿ ನೆನೆಯ ಬಯಸಲು
ಅಮ್ಮ ಬೈದ  ಬೈಗುಳವು    

ಬೇಸರವಾದರೂ ಸರಿಯೇ
ಕಣ್ತಪ್ಪಿಸಿ ನೆನೆದ ನೆನಪುಗಳು 
ಮಳೆಯಲಿ ನೆನೆದು ಒದ್ದೆಯಾಗಲು
ಗದರಿದ ಅಮ್ಮನೇ ಬಂದು ತಲೆ ಒರೆಸಲು 

ಎಂತಹ ಸಿಹಿ ನೆನಪಿದೆ ಮಳೆಯಲಿ
ಎಂತಹ ಸವಿಭಾವ ತಿಲ್ಲಾನವಿದೆ ಮಳೆಯಲಿ
ಎಂತಹ ಸಿಹಿ ನಾದವಿದೆ ಮಳೆಯಲಿ
ಅಂತಹ ಮಳೆಯೆಂದಿಗೂ ದೂರವಾಗದಿರಲಿ    
......................................... ಶರ್ಮಿಳಾ ಕೆ ಎಸ್ 
10ನೇ ತರಗತಿ        
ವಿವೇಕ ಬಾಲಕಿಯರ ಪ್ರೌಢಶಾಲೆ,
ಕೋಟ, ಉಡುಪಿ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article