ನಿಷ್ಪಾಪಿ ಸಸ್ಯಗಳು : ಸಂಚಿಕೆ - 55
Wednesday, June 19, 2024
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 55
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಹೇಗಿದ್ದೀರಿ...? ಮಳೆಗಾಲ ಕಾಲಿರಿಸಿದರೂ ಇನ್ನೂ ಮಳೆರಾಯನಿಗೆ ಏಕೋ ಮುನಿಸಿದ್ದಂತಿದೆಯಲ್ಲವೇ? ಆದರೂ ನಮ್ಮ ಪರಿಸರ ದಿನಾಚರಣೆ ಸರಿದೇ ಬಿಟ್ಟಿತು.
ಈ ಬಾರಿ ಜೂನ್ 5ರಂದು ನಮ್ಮ ಶಾಲೆಯ ಎದುರು ಭಾಗದಲ್ಲಿ ಹೂಗಿಡಗಳನ್ನು ನೆಡಲು 6ನೇ ತರಗತಿಯ ಮಕ್ಕಳು ಸ್ಥಳವನ್ನಾಯ್ಕೆ ಮಾಡಿದ್ದರು. ಅದು ಪುಟ್ಟ ಗುಡ್ಡವೊಂದರ ಮಣ್ಣು ತೆಗೆದ ಬದಿಯಾಗಿತ್ತು. ಗಿಡಗಳಿಗೆ ಮಾಡಿದ್ದ ಬೇಲಿಗೆ ಗುಡ್ಡದಿಂದ ಇಳಿಬಿದ್ದ ಬಳ್ಳಿಯೊಂದನ್ನು ಅಲಂಕಾರಕ್ಕೆಂಬಂತೆ ರಾಯಿಝ್ ಸುತ್ತಿದ್ದ..
ಮಕ್ಕಳು ಇಳಿಬಿದ್ದ ಆ ಬಳ್ಳಿಯನ್ನೇಕೆ ಕಡಿಯದೆ ಇಟ್ಟುಕೊಂಡರು...? ಅದನ್ನೇಕೆ ತಮ್ಮ ಬೇಲಿಗೆ ತಗುಲಿಸಿ ಬೆಳೆಯುವಂತೆ ಮಾಡಿದರೆಂಬ ಕುತೂಹಲದಿಂದ ಪ್ರಶ್ನಿಸಿದೆ. ಅವರಿಗದರ ಹೆಸರಾಗಲೀ, ಪರಿಚಯವಾಗಲೀ ಇರಲಿಲ್ಲ. ಏನೋ ಹೊಸತು ಅಂತನಿಸಿ ಬದುಕನ್ನು ದಯಪಾಲಿಸಿದ್ದರು. ಮೂಲತಃ ಮಾನವ ಪ್ರಕೃತಿ ಪ್ರೇಮಿ ಎಂಬುದಕ್ಕೆ ಬೇರೆ ಉದಾಹರಣೆ ಬೇಡವೆನಿಸಿತು.
ಪಶ್ಚಿಮ ಘಟ್ಟ, ಸಣ್ಣ ಗುಡ್ಡ, ಬೆಟ್ಟ, ಕುರುಚಲು ಸಸ್ಯಗಳ ನಡುವೆ, ನದಿ, ಸಾಗರಗಳ ಕಿನಾರೆಗಳಲ್ಲಿ, ಕಲ್ಲು ಬಂಡೆಗಳ ನಡುವೆ ಬೆಳೆಯುವ ಈ ಬಳ್ಳಿಯನ್ನು ಕನ್ನಡದಲ್ಲಿ ಶತಾವರಿ, ಸಾವಿರ ಮಕ್ಕಳ ತಾಯಿ, ಅಸಡಿ, ಮಜ್ಜಿಗೆ ಗಡ್ಡೆ ಎಂದು ಕರೆದರೆ ತುಳು ಭಾಷೆಯಲ್ಲಿ ಉದುರಿ ಬೇರು ಎನ್ನುತ್ತಾರೆ. ಶತಮೂಲ, ಮುಕ್ಕುಲ, ಹಲವು ಮಕ್ಕಳ ತಾಯಿ, ಆಷಾಢಿ ಬೇರು ಎಂದೂ ಪ್ರಾದೇಶಿಕ ವಾಗಿ ಕರೆಯುತ್ತಾರೆ.
ನಮಗಿದು ತಾತ್ಸಾರವಾಗಿ ಕಾಣಿಸುವ ಒಂದು ನಿರುಪಯುಕ್ತ ಸಸ್ಯವಾಗಿ ಕಾಣಿಸುತ್ತದೆಯಾದರೂ ಇದರ ಬಗ್ಗೆ ತಿಳಿಯುತ್ತಾ ಹೋದಂತೆ ನಾವು ಈ ವಿಶ್ವದಲ್ಲಿ ಕುಬ್ಜರಾಗಿ ಕಾಣಿಸುತ್ತೇವೆಂದರೆ ತಪ್ಪಾಗದು.
ಶತಾವರಿ ಎಂಬ ಈ ನಿಷ್ಪಾಪಿ ಸಸ್ಯ ಯುರೋಪ್, ಉತ್ತರ ಆಫ್ರಿಕಾ, ಏಷ್ಯಾದ ಬಹುತೇಕ ಭಾಗಗಳಿಗೆ ಸ್ಥಳೀಯ ಸಸ್ಯವೆಂದರೆ ಇದರ ವ್ಯಾಪ್ತಿ ಅರ್ಥವಾದೀತು!. ಈಜಿಪ್ಟಿಯನ್ನರು, ರೋಮನ್ನರು, ಗ್ರೀಕರು ಶತಶತಮಾನಗಳಿಂದ ಇದನ್ನು ಜನಪ್ರಿಯ ಗಿಡಮೂಲಿಕೆಯಾಗಿ ಬಳಸುತ್ತಾ ಬಂದಿದ್ದಾರೆ! ಕ್ರಿ.ಶ.3 ನೇ ಶತಮಾನದಲ್ಲಿ ಬಂದ ಅಪಿಷಿಯಸ್ ನ ಡಿ ರೆಕಾಕ್ವಿನೇರಿಯಾ ಎಂಬ ಪುಸ್ತಕದ 3ನೇ ಭಾಗವು ಪಾಕವಿಧಾನಗಳಿಗೆ ಸಂಬಂಧಿಸಿ ಲಭ್ಯವಿರುವ ಅತ್ಯಂತ ಹಳೆಯ ಪುಸ್ತಕ. ಇದರಲ್ಲಿ ಶತಾವರಿ ಬಳಸಿ ಮಾಡಿದ ಪಾಕವಿಧಾನ ಬರೆಯಲ್ಪಟ್ಟಿದೆ ಎಂದರೆ ಇದರ ಇತಿಹಾಸದ ಬಗ್ಗೆ ಗೌರವ ಮೂಡದೇ..?
ವರ್ತಮಾನ ಕಾಲದಲ್ಲಿ ಪೆರು ದೇಶ ವಿಶ್ವದ ಅಗ್ರಗಣ್ಯ ರಫ್ತುದಾರ ಧೇಶವಾಗಿದೆ ಗೊತ್ತಾ?ಚೀನಾ, ಮೆಕ್ಸಿಕೊ ಗಳು ನಂತರದ ಸ್ಥಾನದಲ್ಲಿ ಸ್ಪರ್ಧೆ ಯೊಡ್ಡುತ್ತಿವೆ ಎಂದರೆ ಶತಾವರಿಗಿರುವ ಲೋಕಮಾನ್ಯತೆಯ ಅರಿವಾಗದಿರುವುದೇ! ಶತಾವರಿಯ ಅಗ್ರಗಣ್ಯ ಆಮದುದಾರ ಅಮೆರಿಕದ ಸಂಯುಕ್ತ ಸಂಸ್ಥಾನ.. ಬಳಿಕ ಐರೋಪ್ಯ ಒಕ್ಕೂಟದ ರಾಷ್ಟ್ರಗಳು!
ಹೌದು ಮಕ್ಕಳೇ, ನಿಮಗೂ ಈಗ ಈ ಸಸ್ಯವನ್ನು ಕಾಣುವ, ಪರಿಚಯಿಸಿಕೊಳ್ಳುವ ಹಂಬಲ ಮೂಡಿರಬೇಕಲ್ಲವೇ? ಇದು ಅಪರೂಪವಾದರೂ ನಮ್ಮ ಸುತ್ತ ಎಲ್ಲಾದರೂ ಕಾಣಸಿಗುವಂತಹುದು. ಗುರುತಿಸಲೂ ತುಂಬಾ ಸುಲಭ. ಹಿಂದೆ ಮದುವೆ, ಹಬ್ಬ, ಹರಿದಿನಗಳಲ್ಲಿ, ಜಾತ್ರೆಗಳಲ್ಲಿ ಅಲಂಕಾರಕ್ಕಾಗಿ ಬಳಸುತ್ತಿದ್ದರಂತೆ. ಶತಾವರಿ ಒಂದು ಬಹುವಾರ್ಷಿಕ ಸಸ್ಯ. 100 ರಿಂದ 150cm ಬೆಳೆಯಬಲ್ಲ ಸಸ್ಯ. ಬಳ್ಳಿಯಂತೆ ಲಾಲಿತ್ಯವಿದ್ದರೂ ಗಟ್ಟಿ ಕಾಂಡ. ಗರಿಯಂತಹ ಎಲೆಗೊಂಚಲು. ಒಂದು ಗೊಂಚಲಲ್ಲಿ 4 ರಿಂದ 15 ಎಲೆಗಳಿದ್ದು ಗುಚ್ಛದಂತಿರುತ್ತದೆ. ಇವು ಚಪ್ಪಟೆ ಕಾಂಡಗಳಂತೆ ಇದ್ದು ರೂಪಾಂತರಿತ ಕಾಂಡಗಳೇ ಎಲೆಗಳಾಗಿವೆ. ಇದಕ್ಕೆ ಬಿಳಿ ಬಣ್ಣದ ನೂರಾರು ಬೇರುಗಳಿರುತ್ತವೆ. ಅದಕ್ಕೇ ತುಳುವಿನಲ್ಲಿದು ಉದುರಿ ಬೇರು ಎಂದು ಕರೆಯಲ್ಪಡುತ್ತದೆ. ಬೇರುಗಳು ಇತರ ಸಸ್ಯಗಳ ಬೇರುಗಳಂತೆ ತೆಳ್ಳಗಿರದೆ ಗಡ್ಡೆಗಳಂತೆ ದಪ್ಪಗಿರುತ್ತವೆ. ಒಂದು ಪುಟ್ಟ ಬಳ್ಳಿಯಲ್ಲಿ ಕಿಲೊಗಟ್ಟಲೆ ಬೇರುಗಳಿರುತ್ತವೆ. ಹೂ ಘಂಟಾಕಾರವಿದ್ದು ನಸು ಹಸಿರು, ಬಿಳಿಯಿಂದ ಹಳದಿ ಬಣ್ಣದ ಛಾಯೆ ಇರುತ್ತದೆ. ಕಿರುಕೊಂಬೆಗಳ ಸಂಧಿಗಳಲ್ಲಿ ಒಂದು ಅಥವಾ ಎರಡು ಮೂರು ಹೂಗಳಿರುತ್ತವೆ. ಗಂಡು ಹೆಣ್ಣು ಹೂಗಳು ಪ್ರತ್ಯೇಕ ಸಸ್ಯಗಳಲ್ಲಿ ಇರುವುದಾದರೂ ಕೆಲವೊಮ್ಮೆ ಉಭಯಲಿಂಗಿ ಹೂಗಳು ಇರುತ್ತವೆ. ಕೆಂಪಾದ ತಿರುಳಿನ ಚಿಕ್ಕ ಬೀಜ ಹೊಂದಿರುವ ಹಣ್ಣುಗಳು ಪಕ್ಷಿಗಳನ್ನು ಆಕರ್ಷಿಸುತ್ತವೆ.
ಶತಾವರಿ ಗಿಡಮೂಲಿಕೆಯಾಗಿ ನಮ್ಮಲ್ಲಿ ಹೆಚ್ಚು ಪ್ರಚಲಿತವಿದ್ದರೂ ವಿಶ್ವಾದ್ಯಂತ ಆಹಾರ ವಸ್ತುವಾಗಿಯೂ ಖ್ಯಾತಿ ಗಳಿಸಿದೆ. ಕ್ಯಾಲಿಫೋರ್ನಿಯಾ, ಮಿಷಿಗಿನ್ ನಗರ, ನ್ಯೂರಂಬರ್ಗ್ ನ ಬವೇರಿಯಾ, ಉತ್ತರ ಯುರೋಪಿನ ಈವ್ ಶಾವ್ ಕಣಿವೆಗಳಲ್ಲಿ ಶತಾವರಿ ಮೇಳಗಳನ್ನು ವಾರಗಟ್ಟಲೆ ನಡೆಸಲಾಗುತ್ತಿರುವುದಲ್ಲದೇ "ಶತಾವರಿ ರಾಣಿ" ಯೆಂದೂ, ಶತಾವರಿಯ "ಚೂಪುಕಾಂಡ" ಗಳಂತೆಯೂ ವೇಷ ಧರಿಸಿ ಸಂಭ್ರಮಿಸುತ್ತಾರೆಂದರೆ ಇದರಲ್ಲೇನಿದೆ ಎಂದು ಅಚ್ಚರಿಯಾಗದಿರುವುದೇ...?
ಲಿಲಿಯೇಸಿ ಕುಟುಂಬಕ್ಕೆ ಸೇರಿದ ಸರ್ವ ಋತು ಸಸ್ಯವಾದ ಶತಾವರಿ ಅಸ್ಪರೇಗಸ್ ಅಫಿಶಿನ್ಯಾಲಿಸ್ (Asparagus Officinalis) ಎಂಬ ಶಾಸ್ತ್ರೀಯ ನಾಮ ಹೊಂದಿದೆ. ಪರ್ಷಿಯನ್ ಭಾಷೆಯಿಂದ ಹುಟ್ಟಿದ ಅಸ್ಪರೇಗಸ್ ಪದದ ಅರ್ಥ ಮೊಳಕೆ ಅಥವಾ ಚಿಗುರು. ಶತಾವರಿಯ ಚಿಗುರೇ ವಿಶ್ವಾದ್ಯಂತ, ಸ್ಟಾರ್ ಹೋಟೇಲ್ ಗಳಲ್ಲೂ ತರಕಾರಿಯಾಗಿ ಬಳಸಲ್ಪಡುತ್ತದೆ. ಸೂಪ್ ಗಳಲ್ಲಿ, ಮಾಂಸದ ಖಾದ್ಯಗಳಲ್ಲಿ, ಉಪ್ಪಿನಕಾಯಿಯಾಗಿಯೂ ಸಾವಿರಾರು ರೀತಿಗಳಲ್ಲಿ ಆಹಾರವಾಗಿ ಬಳಸಲ್ಪಡುತ್ತದೆ. ಶತಾವರಿಯ ಋತುವಿನಲ್ಲಿ ತಾಜಾರೂಪದಲ್ಲೇ ತಿಂದರೆ ಚಳಿಗಾಲದಲ್ಲಿ ತಿನ್ನಲು ಒಣಗಿಸಿಡುವ ಪರಿಪಾಠ ಗ್ರೀಕ್, ರೋಮನ್ನರಲ್ಲಿ ಹಿಂದೆಯೇ ಇತ್ತು. ಶತಾವರಿಯ ಉಪಜಾತಿಗಳೂ ಸಾಕಷ್ಟಿದ್ದು ಅಮೆರಿಕ ದ ಸಂಯುಕ್ತ ಸಂಸ್ಥಾನ, ನ್ಯೂಜಿಲೆಂಡ್ ನಲ್ಲಿ ತಳಿ ಬೆಳೆಸುವ ಕಾರ್ಯಗಳಾಗುತ್ತಿವೆ. ಕಡಿಮೆ ಉತ್ಪಾದನೆ ಇರುವಲ್ಲೆಲ್ಲ ಶತಾವರಿಗೆ ಅಧಿಕ ಬೆಲೆಯಿದೆ.
ಗೋಲನ್ ಎಂಬ 2ನೇ ಶತಮಾನದ ವೈದ್ಯ ಶತಾವರಿಯನ್ನು ಚೊಕ್ಕಟಗೊಳಿಸುವ ಮತ್ತು ವಾಸಿ ಮಾಡುವ ಗುಣ ಹೊಂದಿರುವ ಸಸ್ಯವೆಂದು ಗುರುತಿದ್ದಾರೆಂದರೆ ವೈದ್ಯ ಲೋಕದಲ್ಲೂ ಬಹೂಪಯೋಗಿ ಸಸ್ಯವಾಗಿ ಗುರುತಿಸಲ್ಪಟ್ಟಿದೆ ಎಂದು ತಿಳಿಯಬಹುದು. ವಿಶ್ವಾದ್ಯಂತ ಈ ಸಸ್ಯದ ಬಗ್ಗೆ ಬಹಳಷ್ಟು ಪ್ರಯೋಗಗಳು ನಡೆದಿವೆ. ಇದರ ಬೇರು ಔಷಧಿಯಾಗಿ ಹಲವು ದೇಶಗಳಲ್ಲಿ ಬಳಕೆಯಲ್ಲಿದೆ. ಎಳೆ ಚಿಗುರನ್ನು ತಿನ್ನಲು ಹೆಚ್ಚು ಬಳಸುತ್ತಾರೆ. ಇದರಲ್ಲಿ ಕೊಲೆಸ್ಟರಾಲ್ ಇಲ್ಲ. ಸೋಡಿಯಂ ಕಡಿಮೆ ಪ್ರಮಾಣದಲ್ಲಿದೆ. C ಜೀವಸತ್ವ ಹೇರಳವಾಗಿದ್ದು ನಮ್ಮನ್ನು ಆಯಾಸಗೊಳಿಸುವಂತೆ ಮಾಡುವ ಅಮೋನಿಯಾವನ್ನು ತಟಸ್ಥ ಗೊಳಿಸುತ್ತದೆ. ಶಿಶುಗಳ ನರವ್ಯೂಹದ ನಳಿಕೆಗಳ ನ್ಯೂನತೆಗಳಂತಹ ವಿಷಮ ಪರಿಸ್ಥಿತಿಗಳಿಂದ ಶತಾವರಿ ರಕ್ಷಿಸುತ್ತದೆ. ಮೂತ್ರವರ್ಧಕ ವಾಗಿ, ಜೀರ್ಣ ಸಂಬಂದಿ ಸಮಸ್ಯೆಗಳಿಗೆ ಪರಿಣಾಮಕಾರಿ ಶತಾವರಿ ಬಳಕೆಯಲ್ಲಿರುವುದೇ ಅಲ್ಲದೆ ಬಾಣಂತಿಯರಿಗೆ ಎದೆಹಾಲು ಹೆಚ್ಚುವಂತೆ ಮಾಡುವುದರಿಂದ "ಹಲವು ಮಕ್ಕಳ ತಾಯಿ" ಎನಿಸಿದೆ. ರೋಗ ನಿರೋಧಕ ಶಕ್ತಿ ಹೆಚ್ಚಳ, ಏರುಪೇರಾದ ಹಾರ್ಮೋನ್ಸ್ ಗಳ ಸಮತೋಲನ, ಋತು ಸಂಬಂಧಿ ಸಮಸ್ಯೆಗಳಿಗೆ, ಮನಸಿನ ಒತ್ತಡ ನಿವಾರಣೆಗೆ, ಇರುಳುಗಣ್ಣು, ಕರುಳು ಹುಣ್ಣು, ದನಗಳಿಗೆ ಹಾಲು ಹೆಚ್ಚಾಗಲು ಕೂಡ ಬಳಸಲಾಗುತ್ತದೆ.
ಬೇರು, ಎಲೆ, ಹಣ್ಣು, ಬೀಜ ಎಲ್ಲವೂ ಉಪಯುಕ್ತವೇ ಆಗಿದ್ದರೂ ಔಷಧಿಗಾಗಿ ಬೇರನ್ನೇ ಬಳಸುತ್ತಾರೆ. ಬೇರಿನ ಪುಡಿಯಲ್ಲಿ ಸ್ಯಾಕರೀನ್ ಇದ್ದು ಗಿಡದಲ್ಲಿ ರಾಳಸಕ್ಕರೆ, ಗೋಂದು, ಅಲ್ಬ್ಯುಮಿನ್, ಕ್ಲೋರೈಡ್, ಅಸಿಟೇಟ್, ಫಾಸ್ಪೇಟ್, ಪೊಟಾಸಿಯಂಗಳಿದ್ದು ಎಲೆ, ತೊಗಟೆ, ಹೂಗಳಿಂದ ಸುವಾಸನೆಯುಳ್ಳ ಆವಿಶೀಲ ತೈಲವನ್ನು ಬೀಜಗಳಿಂದ ಸಾರತೈಲವನ್ನು ಪಡೆಯಲಾಗುತ್ತದೆ. ಶತಾವರಿನ್ ಎಂಬ ಔಷಧೀಯ ಗುಣವುಳ್ಳ ಸಸ್ಯಕ್ಷಾರವಿದೆ.
ಔಷಧಿಗಲ್ಲವಾದರೂ ಹಳ್ಳಿಯಲ್ಲಿ ಬೇರಿನ ಕಷಾಯ, ಬೇರಿನ ಗಂಜಿ ಮಾಡಿ ತಿನ್ನುವ ಕ್ರಮವಿದೆ. ನೋಡಿದಲ್ಲಿ ಚಿಗುರು ಮುರಿದು ತಲೆಗೆ ಮುಡಿಯುವ ಸಂಪ್ರದಾಯವಿದೆ. ಅಸ್ಪರೇಗಸ್ ರೆಸಿಮೋಸಿಸ್, ಅಸ್ಪರೇಗಸ್ ಅಡೆಸ್ಕಾಡರ್ಸ್, ಅಸ್ಪರೇಗಸ್ ಪೆಸಿನೇಟಿಸ್ ಎಂಬ ಮೂರು ಪ್ರಭೇದ ಹೊಂದಿರುವ ಶತಾವರಿಯನ್ನು "ಭೂಮಿಯ ಮೇಲಿನ ಸಂಜೀವಿನಿ" ಎಂದು ಪರಿಗಣಿಸಲಾಗಿದೆ. ಗುಬ್ಬಚ್ಚಿ ಹುಲ್ಲು ಎಂದು ಮಮತೆಯಿಂದ ಕರೆಯಲಾಗಿದೆ. ನಮ್ಮ ಹಿರಿಯರ ಪ್ರಕೃತಿ ಪ್ರೇಮಕ್ಕೆ ಇದಕ್ಕಿಂತ ಮಿಗಿಲಾದ ಉದಾಹರಣೆ ಬೇರೆ ಬೇಕೇ?
ಮಕ್ಕಳೇ, ನಿಮಗೂ ಈ ಶತಾವರಿ ಸಿಗಬಹುದು, ಸಿಕ್ಕರೆ ಉಳಿಸಿಕೊಳ್ಳಬೇಕೆಂದು ಕಾಡಲೂ ಬಹುದು. ನನ್ನನ್ನು ನೀನು ಉಳಿಸಿದರೆ ನಿನ್ನನ್ನು ನಾನು ಉಳಿಸುವೆ ಎಂದು ಶತಾವರಿ ಮಾತನ್ನೂ ಕೊಡಬಹುದು. ಶತಾವರಿಯ ಮಾತಿಗೆ ಕಿವಿಗೊಡುತ್ತೀರಲ್ಲವೇ?
ಸರಿ ಮಕ್ಕಳೇ, ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************