-->
ಜೀವನ ಸಂಭ್ರಮ : ಸಂಚಿಕೆ - 141

ಜೀವನ ಸಂಭ್ರಮ : ಸಂಚಿಕೆ - 141

ಜೀವನ ಸಂಭ್ರಮ : ಸಂಚಿಕೆ - 141
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

                   
                 
ಮಕ್ಕಳೇ.... ನಾವು ಈಗಾಗಲೇ ಅವಿದ್ಯ, ಅಸ್ಮಿತ ಬಗ್ಗೆ ತಿಳಿದುಕೊಂಡಿದ್ದೇವೆ. ಈ ದಿನ ಅಭಿನೀವೇಶದ ಬಗ್ಗೆ ತಿಳಿದುಕೊಳ್ಳೋಣ. ಅಭಿನೀವೇಶ ಎಂದರೆ ಅತಿಯಾದ ಅಭಿಮಾನದಿಂದ ಯಾವುದೇ ವಸ್ತು, ವಿಷಯ, ಸಿದ್ಧಾಂತ ಗಳಿಗೆ ಬಲವಾಗಿ ಅಂಟಿಕೊಳ್ಳುವುದು, ಅದರಲ್ಲಿ ಮುಳುಗಿ ಹೋಗುವುದು. ಅಭಿ, ನಿ, ವಿಶ, ಅಭಿ ಎಂದರೆ ಅಭಿಮಾನದಿಂದ, ನಿ ಅಂದರೆ ಆಳವಾಗಿ, ವಿಶ ಎಂದರೆ ಒಳ ಸೇರುವುದು. ಇದರಿಂದ ಸಾಮಾಜಿಕ ಮತ್ತು ವೈಯಕ್ತಿಕ ಜೀವನ ಹಾಳಾಗಿ ಹೋಗುತ್ತದೆ. ಸೂತ್ರದಲ್ಲಿ ಸರಸವಾಗಿ ಎಂದು ಹೇಳಿದ್ದಾನೆ, ಅಂದರೆ ತನ್ನಷ್ಟಕ್ಕೆ ತಾನೇ ಬೆಳೆಯುತ್ತದೆ. ಇದು ಬಹಳ ದೊಡ್ಡವರಲ್ಲಿ, ತಿಳಿದವರಲ್ಲಿ ಹೆಚ್ಚು. ಮನಸ್ಸು ಸರಿ ತಪ್ಪು ವಿಚಾರ ಮಾಡದೇ, ಗಟ್ಟಿಯಾಗಿ ಹಿಡಿಯುತ್ತದೆ. ಹಿತವಿರಲಿ ಬಿಡಲಿ ಅದು ಪ್ರಾಣ ಕೊಡಲು ಸಿದ್ಧ. ಅಷ್ಟು ಹಿಡಿಯುತ್ತದೆ. ಅದಕ್ಕಾಗಿ ಹೋರಾಟ ಮಾಡುತ್ತದೆ. ಯಾರು ವಿರೋಧಿಸುತ್ತಾರೋ ಅವರನ್ನೇ ನಷ್ಟ ಮಾಡಲು ಸಿದ್ಧವಾಗುತ್ತದೆ. ಇನ್ನೊಂದು ಅರ್ಥ ಈಗ ನನಗೆ ಸಿಕ್ಕಿರುವ ವಸ್ತು ಎಲ್ಲಿ ನನ್ನ ಕೈ ತಪ್ಪಿ ಹೋದೀತು ಎಂಬ ಭಯ. ಉದಾಹರಣೆಗೆ ನಮ್ಮ ದೇಹದಲ್ಲಿ ಏನಾದರೂ ಒಂದು ದೋಷ ಇದ್ದೇ ಇರುತ್ತದೆ. ಅದು ಕಾಣಬಹುದು ಅಥವಾ ಕಾಣದೇ ಇರಬಹುದು. ಯಾರ ದೇಹವು ಪರಿಪೂರ್ಣವಲ್ಲ. ವಿಶ್ವ ಸುಂದರಿ ಪದವಿ ಪಡೆದವರ ದೇಹವು ಪರಿಪೂರ್ಣವಲ್ಲ. ನಾವು ಪ್ರಶಸ್ತಿ ನೀಡಿದ್ದೇವೆ ಅಷ್ಟೇ. ಅದು ವ್ಯಕ್ತ ಇರಬಹುದು, ಅವ್ಯಕ್ತ ಇರಬಹುದು, ಅದು ಆತನಿಗೆ ಗೊತ್ತಿರುತ್ತದೆ. ಇಷ್ಟೆಲ್ಲಾ ಇದ್ದರೂ ದೇಹದ ಬಗ್ಗೆ ಎಳತ, ಅಭಿಮಾನ ಶುರುವಾಗುತ್ತದೆ. ಎಷ್ಟು ಮೈತ್ರಿ ಅಂದರೆ ದೇಹದ ಮೇಲಾಗುವ ಬದಲಾವಣೆ ನಮ್ಮ ಮೇಲೂ ಆಗಲು ಕಾರಣವಾಗುತ್ತದೆ. ಇದು ಹೇಗಿದೆ ಹಾಗೆ ಇರಬೇಕು. ಇದು ನನ್ನ ಕೈ ಬಿಡಬಾರದು, ಅನ್ನಿಸಲು ಶುರುವಾಗುತ್ತದೆ. ಇದು ಇದ್ದ ಹಾಗೆ ಇರುವುದಿಲ್ಲ. ಒಂದು ದಿನ ಹೋಗೋದೆ. ಇದು ಎಲ್ಲರಿಗೂ ಗೊತ್ತು. ಆದರೂ ಭಯವಾಗುತ್ತದೆ. ಭಯ ಹೆಚ್ಚಾಗುತ್ತಾ ಹೋಯಿತು ಅಂದರೆ ಅಭಿನೀವೇಶ. ಶರೀರ ನಾವು ಹೇಳಿದಂತೆ ಕೇಳುವುದಿಲ್ಲ. ಗಳಿಸಿದ್ದನ್ನೆಲ್ಲಾ ಬಿಡಬೇಕೆಂಬ ಭಯ. ಭಯ ಮನಸ್ಸು ತುಂಬಿದರೆ ಅಭಿನೀವೇಶ. ಕಾಯಂ ನಮ್ಮ ಹತ್ತಿರ ಉಳಿಯಬೇಕು ಎನ್ನುವುದು ಅದು ಸಾಧ್ಯವಿಲ್ಲ, ಅಂತ ಗೊತ್ತಿದ್ದರೂ, ಬಯಸುತ್ತದೆ, ಅನುಬಂಧ ಉಂಟಾಗುತ್ತದೆ. ನಾನು ಅನ್ನುವುದು ಜ್ಞಾನರೂಪ. ಶರೀರ ಜ್ಞಾನ ರೂಪವಲ್ಲ. ಅದು ಜಡ. ಆದರೂ ಅದು ನಾನೇ, ಅದು ನನ್ನ ಕೂಡ ಇರಬೇಕು. ಇದು ಹೋಗಬಾರದು ಅನಿಸುತ್ತದೆ. ಇದು ಹೋಗಬಾರದು ಅನಿಸುತ್ತಿದೆಯಲ್ಲ ಅದೇ ಅಭಿನೀವೇಶ. ಇದು ಬಲ್ಲವರ ಹೇಗಲೇರಿದೆ. ಸಾಮಾನ್ಯರಿಗೆ ಅಷ್ಟು ಇಲ್ಲ. ಹೆಚ್ಚು ಗಳಿಸಿದವನಿಗೆ, ಹೆಚ್ಚು ಸ್ಥಾನಮಾನ ಪಡೆದವನಿಗೆ, ಮಹಲು ನಿರ್ಮಿಸಿದವನಿಗೆ, ಇದು ಹೆಚ್ಚು. ಗುಡಿಸಿಲಿನವರಿಗೆ ಕಡಿಮೆ. ಇದನ್ನು ಪತಂಜಲ ಮಹರ್ಷಿ ಹೇಳಿದ್ದು. ಅಭಿವ್ಯಕ್ತ ಮಾಡೋದಿಲ್ಲ ಹುದುಗಿರುತ್ತದೆ ಆ ಭಯ. ಹೋಗುವಾಗ ದುಃಖ ಆಗುವುದು ಸಹಜ. ಆದರೆ ಅಭಿನೀವೇಶ ಆಗಬಾರದು. 

ಒಂದು ಊರು. ಅಲ್ಲಿ ಒಂದು ಮಂಗ. ಅದು ಒಮ್ಮೆ ಒಂದು ಮನೆ ಸಮೀಪ ಬಂದಿತ್ತು. ಕಿಟಕಿಯಲ್ಲಿ ನೋಡಿತು. ಒಂದು ದೊಡ್ಡ ಕಬ್ಬು. ನೆಟ್ಟಗೆ ನಿಲ್ಲಿಸಿದ್ದರು. ಮಂಗಕ್ಕೆ ಆ ಕಬ್ಬಿನ ಆಸೆ ಆಯಿತು. ಕಿಟಕಿಯಲ್ಲಿ ಕೈ ಹಾಕಿ ಕಬ್ಬನ್ನು ಹಿಡಿಯಿತು. ಹೊರಗೆ ತೆಗೆಯಲು ಎಳೆಯಿತು. ಕಬ್ಬು ಉದ್ದವಾಗಿತ್ತು, ಹೊರಗೆ ಬರುತ್ತಿಲ್ಲ. ಆದರೂ ಮಂಗ ಅದನ್ನು ಬಿಡುತ್ತಿಲ್ಲ. ಬಿಡದೆ ಪಾರಾಗುವಂತಿಲ್ಲ. ಹಿಡಿಬೇಕು, ಹೇಗೆ ಹಿಡಿಬೇಕು ?ಎಷ್ಟು ಹಿಡಿಬೇಕು? ಗೊತ್ತಿದ್ದರೆ ಹಿಡಿದಿದ್ದು ತ್ರಾಸ ಆಗುವುದಿಲ್ಲ. ಎಷ್ಟೋ ಅಷ್ಟು. ಅದಕ್ಕಾಗಿ ಬದುಕಿದ್ದೀನಿ ಅನ್ನಬಾರದು. ಒಂದು ವಿಚಾರ ತಪ್ಪು ಅಂತ ಗೊತ್ತಿದ್ದರೂ, ಅದನ್ನು ಬಿಡುವುದಿಲ್ಲ. ಅದೇ ಅಭಿನೀವೇಶ. ಅರಿಸ್ಟಾಟಲ್ 2500 ವರ್ಷಗಳ ಹಿಂದೆ ಭೂಮಿ ಸ್ಥಿರ, ಸೂರ್ಯ, ಭೂಮಿಯ ಸುತ್ತ ಸುತ್ತುತ್ತಾನೆ ಎಂದು ಹೇಳಿದ್ದ. ಈತನ ಅನುಯಾಯಿಗಳು ಅದನ್ನೇ ಬರೆದುಕೊಂಡು ಸತ್ಯ ಎಂದು ತಿಳಿದಿದ್ದರು. ಗೆಲಿಲಿಯೋ ಬಂದ. ಸಂಶೋಧಿಸಿದ. ಹೇಳಿದ. ಭೂಮಿ ತಿರುಗುತ್ತದೆ ಮತ್ತು ತನ್ನ ಸುತ್ತಲೂ ತಿರುಗುತ್ತದೆ, ಸೂರ್ಯನ ಸುತ್ತಲೂ ತಿರುಗುತ್ತದೆ. ಸೂರ್ಯ, ಭೂಮಿ ಸುತ್ತ ತಿರುಗುವುದಿಲ್ಲ ಎಂದು ಹೇಳಿದನು. ಆಗ ದೇಶದ ಪಾದ್ರಿಗಳು, ಜನರು, ಗೆಲಿಯವನ್ನು ಶಿಕ್ಷಿಸಲು ತೀರ್ಮಾನಿಸಿದರು. ಹೇಳಿದರು ಭೂಮಿ ಸ್ಥಿರ ಎಂದು ಹೇಳು. ಇದಕ್ಕೆ ಸಹಿ ಮಾಡು. ಇಲ್ಲ ಅಂದ್ರೆ ಸೆರೆಮನೆಗೆ ಹಾಕುತ್ತೇವೆ ಎಂದು. ಗೆಲಿಲಿಯೋ ಹೇಳಿದ. ನಾನು ಸಹಿ ಮಾಡಲು ತೊಂದರೆ ಇಲ್ಲ ಎಂದು. ಸಹಿ ಮಾಡದೆ ಇದ್ದರೆ ಆತನ ಪ್ರಾಣಕ್ಕೆ ಅಪಾಯ ಇತ್ತು. ಅವರು ಹೇಳಿದಂತೆ ಭೂಮಿ ಸ್ಥಿರ ಎನ್ನುವುದಕ್ಕೆ ಸಹಿ ಮಾಡುತ್ತಾ, ಹೇಳಿದ. ಸಹಿ ಹಾಕುತ್ತೇನೆ. ಅದು ನಿಲ್ಲಬೇಕಲ್ಲ. ಸತ್ಯ ಹೇಗಿದೆಯೋ ಹಾಗೆ ತಿಳಿದುಕೊಳ್ಳಬೇಕೆ ವಿನಹ ನಾವು ತಿಳಿದಂತೆ ಸತ್ಯ ಅಲ್ಲ. ಕೋರ್ಟ್ ನಿಂದ ಹೊರ ಬರುವಾಗ ಹೇಳಿದ, ಆದರೂ ಭೂಮಿ ತಿರುಗುತ್ತಿದೆಯಲ್ಲ ಎಂದು. ನಾವು ಮತ, ಧರ್ಮ, ಸಿದ್ಧಾಂತಕ್ಕೆ ಹೀಗೆ ಕಟ್ಟುಬಿದ್ದು ಅಭಿನೀವೇಶಕ್ಕೆ ಒಳಗಾಗಿದ್ದೇವೆ. ತಪ್ಪು ಅಭಿಪ್ರಾಯ ಬಿಡಬೇಕಲ್ಲ. ಬಿಡದೆ ಹಿಡಿಯುವುದು ನಾವು ಭಾವನೆಗಳಿಗೆ, ಮೂಢನಂಬಿಕೆಗಳಿಗೆ, ಮನೆಯ ವಾಸ್ತು, ಜಾತಕ, ನಮ್ಮ ದೇವರು, ರಾಜಕೀಯ ಪಕ್ಷ, ಧಾರ್ಮಿಕ ಮುಖಂಡರು ಹೇಳಿಕೆ, ಹೀಗೆ ಅಭಿನೀವೇಶಕ್ಕೆ ಒಳಪಟ್ಟಿರುತ್ತೇವೆ. ಅದು ತಪ್ಪು ಅಂದವನ ಮುಗಿಸಲು ಹೋಗುತ್ತೇವೆ. ಸತ್ಯ ಮಾತ್ರ ಉಳಿಯುತ್ತದೆ. ನಂಬಿಕೆಯ ಭೇದದಿಂದ ಜಗಳವಾಗುತ್ತದೆ. ಎಲ್ಲಾ ಆತಂಕ ಸಂಕಷ್ಟಗಳಿಗೆ ಅಭಿನೀವೇಶವೇ ಕಾರಣ ಎಂದು ಪತಂಜಲ ಮಹರ್ಷಿ ಹೇಳಿದರು. ಅದಕ್ಕಾಗಿ.... ನಮ್ಮ ಮನಸ್ಸನ್ನು ತಿದ್ದಿಕೊಳ್ಳಬೇಕೆ ವಿನಃ ಜಗತ್ತನಲ್ಲ. ಈ ಅಭಿನೀವೇಶವೇ ಕ್ರಾಂತಿ, ಹೋರಾಟಕ್ಕೆ ಕಾರಣ. ಅಲ್ಲವೇ ಮಕ್ಕಳೇ.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article