-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 23

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 23

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 23
ಲೇಖಕರು : ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203


ಪ್ರೀತಿಯ ಮಕ್ಕಳೇ.... 
      ನಾವು ಒಂದು ವಸ್ತುವಿನ ಉತ್ಪಾದನೆಗೆ ಹೊರಡುತ್ತೇವೆ ಎಂದು ಇಟ್ಟುಕೊಳ್ಳೋಣ. ಮೊದಲು ಅದರ ಬಿಡಿ ಭಾಗಗಳನ್ನು ಸಂಗ್ರಹಿಸಿಕೊಳ್ಳುತ್ತೇವೆ. ಅದರ ನಟ್, ಬೋಲ್ಟ್, ಇಂಜಿನ್, ಫ್ಯಾನ್ ಹೀಗೆ. ಅವುಗಳನ್ನು ಜೋಡಿಸಿದಾಗ ನಿಮ್ಮ ಕನಸಿನ ವಿಮಾನ ಸಿದ್ಧಗೊಳ್ಳತ್ತದೆ. ಜೀವಿಗಳಲ್ಲಿ ಪುನರುತ್ಪಾದನೆಯನ್ನು ತೆಗೆದುಕೊಂಡರೆ ಹೀಗಾಗುವುದಿಲ್ಲ. ಕೋಶ ತನಗೆ ಬೇಕಾದ ಎಲ್ಲಾ ತಯಾರಿಗಳನ್ನು ಮುಂಚಿತವಾಗಿ ಮಾಡಿಕೊಳ್ಳುತ್ತದೆ. ಮೂಲ ಮನೆಯಲ್ಲಿ ಇರಬೇಕಾದಷ್ಟು ಹೊಸ ಸಂಸಾರಕ್ಕೆ ಬೇಕಾದಷ್ಟು ಮೊದಲೇ ಸಿದ್ಧವಾಗಿ ಬಿಡುತ್ತದೆ. ಆಮೇಲೆ ಮನೆಯ ಯಜಮಾನ ಅಂದರೆ ಕೋಶ ಕೇಂದ್ರ ಎರಡಾಗುತ್ತದೆ. ಇಬ್ಬರೂ ದೂರ ದೂರವಾಗುತ್ತಾರೆ. ಇಬ್ಬರ ನಡುವೆ ಒಂದು ಗೋಡೆ ಏಳುತ್ತದೆ. ಬೆಕ್ಕಿನ ಬಿಡಾರ ಬೇರೆ ಎಂಬ ಹಾಗೆ. ಹೊಸ ಮನೆ ಅಲ್ಲ ಹೊಸ ಒಕ್ಕಲಾಗಿ ಬಿಡುತ್ತದೆ. ಕೈಗಾರಿಕಾ ಪರಿಭಾಷೆಯ ಹಾಗೆ ಇದು ಉತ್ಪಾದನೆ (production) ಅಲ್ಲ ಬದಲಾಗಿ ಪುನರುತ್ಪಾದನೆ (reproduction). ಇದನ್ನು ನಾವು ಕೋಶ ವಿಭಜನೆ ಎನ್ನುತ್ತೇವೆ. ಉತ್ಪಾದನೆ ಅಲ್ಲ. ಹೀಗೆ ಸಂಕೀರ್ಣವಾದ ನಡವಳಿಕೆ ಜೀವಿಗಳಲ್ಲಿದೆ. 

ಮೊನ್ನೆ "ವಿಕಾಸ ಎಂದರೆ ಸರಳತೆಯಿಂದ ಸಂಕೀರ್ಣತೆಯೆಡೆಗೆ ಸಾಗುವುದಲ್ಲವೇ..? ಒಂದೊಂದಾಗಿ ಜೀವಿ ಮೂಲ ಘಟಕಗಳು ಉತ್ಪತ್ತಿಯಾದ ಮೇಲೆ ಅವುಗಳಿಂದ ಸರಳವಾದ ವೈರಸ್ ಕಣಗಳು ನಂತರ ಬ್ಯಾಕ್ಟೀರಿಯಾಗಳು ನಂತರ ಉಳಿದ ಜೀವಿಗಳ ಹುಟ್ಟು ಅಲ್ಲವೇ ಸರ್?" ಎಂದು ಒಬ್ಬ ವಿದ್ಯಾರ್ಥಿ ಕೇಳಿದ್ದಾರೆ. ಅದು ಅಷ್ಟು ಸುಲಭವಲ್ಲ. ಅದೇ ಜೀವ ಸೃಷ್ಟಿಯ ರಹಸ್ಯ. ವೈರಸ್‌ಗಳು ಸರಳ ರಚನೆಗಳು ನಿಜ. ಅವು ಜೀವ ನಿರ್ಜೀವಿಗಳ ನಡುವಣ ವಿಕ್ಷಿಪ್ತ ವಸ್ತುಗಳೂ ನಿಜ. ಆದರೆ ಈ ವೈರಸ್‌ಗಳು ಜೀವಿ ನಿರ್ಜೀವಿಗಳ ನಡುವಿನ ಕಳೆದ ಕೊಂಡಿ (missing link) ಅಲ್ಲ. ಮತ್ತು ವೈರಸ್ ವಿಷಯದಲ್ಲಿ ವಿಕಾಸಗೊಂಡಿವೆ ಎಂಬ ಪದವನ್ನು ಬಳಸಲು ಬರುವುದೂ ಇಲ್ಲ. ಅವು ತಮ್ಮ ಅನುವಂಶೀಯ ವಸ್ತುಗಳ (genetic material) ಹಠಾತ್ ಬದಲಾವಣೆ ಮಾಡಿಕೊಂಡು ಹೊಸ ಗುಣ ಲಕ್ಷಣಗಳ ಒಂದು ವೈರಸ್ ಕಾಣಿಸಿಕೊಳ್ಳುತ್ತದೆ. ಅದು ಪ್ರತ್ಯೇಕ ವೈರಸ್ ಹೊರತು ಮರಿ ವೈರಸ್ ಅಲ್ಲ. ಆ ಹಠಾತ್ ಬದಲಾವಣೆಯೇ ಉತ್ಪರಿವರ್ತನೆ (mutation). ಹಾಗೆ ಕಾಣಿಸಿದ ಹೊಸ ವೈರಸ್ ಒಂದು ಉತ್ಪರಿವರ್ತ (mutant). ಈ ವೈರಸ್‌ಗಳು ಜೀವಿಗಳಲ್ಲವೇ? ಎಂದರೆ ಅಲ್ಲ. ಅವುಗಳಿಗೆ ಜೀವದ ಯಾವ ಲಕ್ಷಣಗಳೂ ಇಲ್ಲ. ಅವುಗಳು ಸಂಖ್ಯೆಯಲ್ಲಿ ಬಹುಗುಣವಾಗುತ್ತವೆ ಮತ್ತು ತಮ್ಮ ಗುಣಗಳಲ್ಲಿ ಬದಲಾವಣೆಯಾಗುತ್ತವೆ (mutation). ಅವುಗಳು ಸಂಖ್ಯೆಯಲ್ಲಿ ದ್ವಿ (ಬಹು) ಗುಣಗೊಳ್ಳುವುದು ಜೀವಿಗಳ ವಂಶಾಭಿವೃದ್ದಿಗೆ ಹೋಲಿಸಲಾಗದು. ಏಕೆಂದರೆ ಅದು ಜೀವಿಗಳಲ್ಲಿರುವ ಹಾಗೆ ಕೋಶ ವಿಭಜನೆ ಅಲ್ಲ ಬದಲಾಗಿ ಕೈಗಾರಿಕಾ ಉತ್ಪಾದನೆ ಹಾಗೆ. ಮೊದಲು ಬಿಡಿ ಭಾಗಗಳನ್ನು ಉತ್ಪಾದಿಸಲಾಗುತ್ತದೆ. ನಂತರ ಅವುಗಳನ್ನು ಜೋಡಿಸಲಾಗುತ್ತದೆ. ಕಾರ್ಖಾನೆಯಲ್ಲಿ ಏಕ ಕಾಲದಲ್ಲಿ ಸಾವಿರ ಸಾವಿರ ಉತ್ಪಾದನೆ ನಡೆಯುತ್ತದಲ್ಲ ಹಾಗೆ. ಇದು ಒಂದು ಎರಡಾಗುದವುಲ್ಲ. ಬದಲಾಗಿ ಒಂದು ಹಲವಾಗುವುದು.

ಈ ವೈರಸ್‌ಗಳ ಸಂಶೋಧನೆ ಬಹಳ ಆಕಸ್ಮಿಕವಾದುದು. ರಷಿಯಾದ ಇವಾನೋವಾಸ್ಕಿ ಮತ್ತು ಜರ್ಮನಿಯ ಅಡಾಲ್ಫಾ ಮೇಯರ್ ಸ್ವತಂತ್ರವಾಗಿ ಬ್ಯಾಕ್ಟೀರಿಯಾಗಳ ಗಾತ್ರವನ್ನು ತಿಳಿಯಲು ಪ್ರಯೋಗಗಳನ್ನು ನಡೆಸುತ್ತಿದ್ದರು. ಬ್ಯಾಕ್ಟೀರಿಯಾಗಳನ್ನು ಹೊಂದಿದ್ದ ದ್ರವವನ್ನು ಚೆಂಬುರ್ ಲ್ಯಾಂಡ್ ಫಿಲ್ಟರ್ ಕ್ಯಾಂಡಲ್ ನ ಮೂಲಕ ಸೋಸಿದಾಗ ಅವುಗಳು ಸೋಂಕಿನ ಲಕ್ಷಣವನ್ನು ಕಳೆದುಕೊಳ್ಳುತ್ತಿದ್ದವು. ಆದರೆ ಮೂಲದ್ರವಕ್ಕೆ ಸೋಂಕು ಉಂಟು ಮಾಡುವ ಲಕ್ಷಣಗಳು ಹಾಗೆಯೇ ಇದ್ದವು. ಅವರು ಬ್ಯಾಕ್ಟೀರಿಯಾಗಳು ಈ ಫಿಲ್ಟರ್ ನ ಮೂಲಕ ಹಾದು ಹೋಗಲಾರವು ಏಕೆಂದರೆ ಅವುಗಳ ಗಾತ್ರ 300 nm ನ್ಯಾನೋ ಮೀಟರ್ ಗಳಿಗಿಂತ ದೊಡ್ಡವು ಎಂದು ತಿಳಿಸಿದರು. ಆದರೆ ಅವರು ಎಲೆ ಮಚ್ಛೆ ರೋಗಕ್ಕೆ ಒಳಗಾದ ತಂಬಾಕಿನ ಎಲೆಯನ್ನು ಅರೆದು ಅದರ ರಸಾಯನವನ್ನು ಇದೇ ಫಿಲ್ಟರ್ ಮೂಕ ಸೋಸಿ ಅದನ್ನು ಆರೋಗ್ಯವಂತ ತಂಬಾಕಿನ ಎಲೆಯ ಮೇಲೆ ಚಿಮುಕಿಸಿದರು. ಆ ದ್ರವ ಸೋಂಕನ್ನು ಉಂಟುಮಾಡಿತು. ಅಂದರೆ ಬ್ಯಾಕ್ಟೀರಿಯಾಗಳಿಗಿಂತಲೂ ಸೂಕ್ಷ್ಮವಾದ ರೋಗಕಾರಕ ಕಣಗಳಿವೆ ಎಂದರು. ಈ ಪ್ರಯೋಗಗಳು ನಡೆದದ್ದು 1882 ರಿಂದ 1893 ರ ನಡುವೆ. 1898 ರಲ್ಲಿ ಬಿಜರಿಂಕ್ ವೈರಸ್ ಕಣಗಳು (virus particles) ಎಂಬ ಹೊಸ ಶಬ್ಧವನ್ನೇ ಟಂಕಿಸಿದ. ಈ ವೈರಸ್ ಅನ್ನು ಅತ ತಂಬಾಕಿನ ಎಲೆ ಮಚ್ಛೆ ರೋಗದ ವೈರಸ್ (Tobacco Mosaic Virus TMV) ಎಂದು ಕರೆದ. ಈ ವೈರಸ್‌ಗಳ ಸೋಂಕುಂಟುಮಾಡುವ ಗುಣದಿಂದಾಗಿ (pathogenic nature) ಅವುಗಳ ಅಧ್ಯಯನ ವ್ಯಾಪಕವಾಗಿ ನಡೆದು ಅದಕ್ಕಾಗಿ ವೈರಾಣು ಶಾಸ್ತ್ರ (virology) ಎಂಬ ಹೊಸ ಅಧ್ಯಯನ ಶಾಖೆಯೇ ಹುಟ್ಟಿಕೊಂಡಿತು.

ನೋಡಿದಿರಲ್ಲ ಮಕ್ಕಳೇ ವಿಜ್ಞಾನಿಗಳ ಸಂಶೋಧನೆ ಹೇಗೆ ವ್ಯವಸ್ಥಿತವಾಗಿ ಮತ್ತು ತರ್ಕಬದ್ಧವಾಗಿ ಕೆಲಸ ಮಾಡುತ್ತದೆ ಎಂಬುದು. ನೀವೂ ಹೀಗೆ ಒಂದು ವಿಷಯದ ಮೇಲೆ ತರ್ಕಬದ್ಧವಾಗಿ ಯೋಚಿಸುತ್ತಾ ಹೋದರೆ ನೀವೂ ವಿಜ್ಞಾನಿಗಳಾಗಿ ನಿಮ್ಮ ಸಂಶೋದನೆಗಳನ್ನು ನನ್ನ ಮೊಮ್ಮಕ್ಕಳು ಕಲಿಯುವಂತಾಗುತ್ತದೆ.

ಮುಂದಿನ ಸಂಚಿಕೆಯಲ್ಲಿ ವೈರಸ್‌ಗಳ ವಂಶಾಭಿವೃದ್ಧಿ ಅಲ್ಲಲ್ಲ ಉತ್ಪಾದನೆ ಹೇಗೆ ನಡೆಯುತ್ತದೆ ನೋಡೋಣ.
.................................... ದಿವಾಕರ ಶೆಟ್ಟಿ ಎಚ್
ನಿವೃತ್ತ ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article