-->
ಜೀವನ ಸಂಭ್ರಮ : ಸಂಚಿಕೆ - 133

ಜೀವನ ಸಂಭ್ರಮ : ಸಂಚಿಕೆ - 133

ಜೀವನ ಸಂಭ್ರಮ : ಸಂಚಿಕೆ - 133
ಲೇಖಕರು : ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 

   
      ಮಕ್ಕಳೇ, ಪತಂಜಲಿ ಮಹರ್ಷಿ ಆತ್ಮಜ್ಞಾನ ಆಗುವುದಕ್ಕೆ ಕೈವಲ್ಯ ಎಂದರು. ಅದಕ್ಕೆ ಇನ್ನೊಂದು ಹೆಸರು ಆನ. ಆತ್ಮ ಜ್ಞಾನ ಪಡೆಯುವ ಉಪಾಯಗಳಿಗೆ ಆನೋಪಾಯ ಎಂದು ಕರೆದರು. ಬೌದ್ಧ ಧರ್ಮೀಯರು ಇದಕ್ಕೆ ಬುದ್ಧ ಎನ್ನುವರು. ಅಂದರೆ ತನ್ನನ್ನು ತಾನು ಅರಿಯುವುದು ಎಂದರ್ಥ. ಅದರಲ್ಲಿ ಸಂತೋಷ ಪಡೆಯಬೇಕಾದರೆ, ಮಾಡಬಾರದ ಕೆಲಸ ಮತ್ತು ಮಾಡಬೇಕಾದ ಕೆಲಸಗಳ ಬಗ್ಗೆ ಹೇಳಿದ್ದಾರೆ. ನಾವು ಯೋಗಿಯಾಗಿ ಬಾಳಬೇಕು. ಯೋಗಿ ಅಂದರೆ ನಾವು ತಿಳಿದುಕೊಂಡಿರುವುದೇ ಬೇರೆ. ಯೋಗಿ ಅಂದರೆ ಪವಿತ್ರ ಜೀವನ, ಸುಂದರ ಜೀವನ. ಆನೋಪಾಯಗಳಲ್ಲಿ ಎರಡು ವಿಧ ಬಾಹ್ಯಯೋಗ ಮತ್ತು ಆಂತರಿಕ ಯೋಗ 
◾ಬಾಹ್ಯ ಯೋಗ 
ಮೊದಲಿಗೆ ಮಾಡಬಾರದ ಕೆಲಸಗಳು....
1. ಮಾಡಬಾರದನ್ನು ಮಾಡಬಾರದು. ಯಾವುದು ಅಹಿತ?, ಯಾವುದು ದುಃಖ?, ಯಾವುದು ತಾಪ ಕೊಡುತ್ತದೆ?, ಯಾವುದು ಸಂಬಂಧ ಕೆಡಿಸುತ್ತದೆಯೋ?, ಯಾವುದು ಆರೋಗ್ಯ ಕೆಡಿಸುತ್ತದೆಯೋ?, ಯಾವುದು ಸಂತೋಷಕ್ಕೆ ಮಾರಕವೋ?, ಅದನ್ನು ಮಾಡಬಾರದು. ಕೇಳಬಾರದನ್ನು ಮೂಸಬಾರದನ್ನು, ರುಚಿಸಬಾರದನ್ನು, ಸ್ಪರ್ಶಿಸಬಾರದನ್ನು ಮತ್ತು ನೋಡಬಾರದನ್ನು ನೋಡಬಾರದು, ಹೋಗಬಾರದಲ್ಲಿ ಹೋಗಬಾರದು, ಭಾವಿಸಬಾರದನ್ನು ಭಾವಿಸಬಾರದು. ಕಲ್ಪಿಸಬಾರದನ್ನು ಕಲ್ಪಿಸಬಾರದು. ವಿಚಾರ ಮಾಡಬಾರದನ್ನು ವಿಚಾರ ಮಾಡಬಾರದು. ಕುಡಿಯ ಬಾರದನ್ನು ಕುಡಿಯಬಾರದು. ಮನಸ್ಸು ಸ್ವಚ್ಛ ಇದ್ದರೆ ತಿಳಿಯುತ್ತದೆ. ಭಾವ ಇಲ್ಲದಿದ್ದರೆ, ವಿವೇಕ ಇಲ್ಲದಿದ್ದರೆ, ತಿಳಿಯುವುದಿಲ್ಲ .

2. ನಿಸರ್ಗ ನಮಗೆ ಬದುಕಲು ಏನೇನು ಬೇಕು ಅದು ಎಲ್ಲವನ್ನು ನೀಡಿದೆ. ಅದನ್ನು ನಾಶ ಮಾಡಬೇಡ, ಹಾಳು ಮಾಡಬೇಡ. ನಾವೇ ಕುಡಿಯುವ ನೀರನ್ನು ನಾವೇ ಮಲಿನ ಮಾಡಬಾರದು. ನಾವೇ ಉಸಿರಾಡುವ ಗಾಳಿಯನ್ನು ನಾವೇ ಹಾಳು ಮಾಡಬಾರದು. ನಮಗೆ ನೆರಳು ಗಾಳಿ ಹಣ್ಣು ಹೂ ನೀಡುವ ಗಿಡ ಮರ ಹೂಗಳನ್ನು ಹಾಳು ಮಾಡಬಾರದು. ನಾವೇ ತಿನ್ನುವ ಅನ್ನ ಹಣ್ಣುಗಳನ್ನು ರಾಸಾಯನಿಕ ಹಾಕಿ ಹಾಳು ಮಾಡಬಾರದು.

3. ಇನ್ನೊಬ್ಬರಿಗೆ ತೊಂದರೆ ಕೊಡಬಾರದು. ತಿರಸ್ಕಾರ ಮಾಡಬಾರದು, ಸಂಸಾರ ಹಾಳು ಮಾಡಬಾರದು. ಅವರು ಕೂಡ ಅದನ್ನೇ ಮಾಡಿದರೆ ನಮ್ಮ ಪರಿಸ್ಥಿತಿ ಹದಗೆಡುತ್ತದೆ.

4. ಇನ್ನೊಬ್ಬರ ವಸ್ತುಗಳ ಮೇಲೆ ಆಸೆ ಪಡಬಾರದು. ಬೇರೊಬ್ಬರ ವಸ್ತುಗಳನ್ನು ಬಳಸುವಾಗ ಕೃತಜ್ಞತೆ ಸಲ್ಲಿಸಿ, ಅವರ ಹೆಸರಿನಲ್ಲೇ ಬಳಸುವುದು.

5. ದೇಹ ಮನಸ್ಸು ಹೊಲಸಾಗದಂತೆ ಇರುವುದು. ಅಂದರೆ ಚಂಚಲ ಮನಸ್ಸಿನವರಾಗಿರಬಾರದು, ಯಾವ ಕೆಲಸ ಮಾಡುತ್ತೇವೋ ಅದರಲ್ಲಿ ಮಗ್ನರಾದಾಗ ಮನಸು ಚಂಚಲವಾಗುವುದಿಲ್ಲ.

6. ನಿನ್ನ ಸಾಮರ್ಥ್ಯ ಇರುವಷ್ಟೇ ಮಾಡು, ಅದಕ್ಕಿಂತ ಹೆಚ್ಚು ಮಾಡಬೇಡ. ಇದನ್ನೇ ಬಸವಣ್ಣ ಹೇಳಿದ್ದು, "ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಇದರ ಅಳಿಯಲು ಬೇಡ, ತನ್ನ ಬಣ್ಣಿಸಬೇಡ , ಮುನಿಯಬೇಡ, ಇದೆ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ, ಇದೇ ನಮ್ಮ ಕೂಡಲಸಂಗಮದೇವನ ಅರಿಯುವ ಪರಿ.

◾ಮಾಡಬೇಕಾದ ಕೆಲಸಗಳು.
1. ಏನು ಮಾಡಿದರೆ ಮನಸ್ಸು ಅರಳುತ್ತದೆ, ಸಂತೋಷವಾಗುತ್ತದೆ ಅದನ್ನೇ ಮಾಡು. ಅದನ್ನು ಹೇಗೆ ಮಾಡಿದರೆ ಸಂತೋಷವಾಗುತ್ತದೆ ಹಾಗೆ ಮಾಡು. ಉದಾಹರಣೆಗೆ, ಮನೆಯಲ್ಲಿ ಕಸ ಇದ್ದರೆ ಸಂತೋಷವಾಗುವುದಿಲ್ಲ ಅದರಿಂದ ಮನಸ್ಸು ಅರಳುವುದಿಲ್ಲ. ಹಾಗಾಗಿ ಮನೆಯನ್ನು ಸ್ವಚ್ಛ ಮಾಡಿ, ಖಾಲಿ ಜಾಗ ಇದ್ದರೆ, ಸುಂದರ ಹೂ ಹಣ್ಣುಗಳ ಗಿಡವನ್ನು ನೆಡುವುದು. ಗಿಡ ಒಣಗುತ್ತಿದ್ದರೆ ನೀರು ಹಾಕುವುದು.

2. ಕೆಲಸವನ್ನು ಸುಂದರವಾಗಿ, ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಮಾಡಬೇಕು. ಉದಾಹರಣೆಗೆ ಮನೆಯಲ್ಲಿ ಇರುವ ಸಾಮಗ್ರಿಗಳನ್ನು ಸುಂದರವಾಗಿ ಜೋಡಿಸುವುದು. ಗಾಳಿ ಬೆಳಕು ಬರುವಂತೆ ಮಾಡುವುದು. ಮನೆ ಸುವಾಸನೆ ಬರುವಂತೆ ಹೂಗಳನ್ನು ಇಡುವುದು.

3. ನಿನ್ನ ಬಳಿ ಏನೇನಿದೆಯೋ ಅದನ್ನು ಬಳಸು. ಇಲ್ಲದರ ಕಡೆ ಗಮನಹರಿಸಬೇಡ. ಉದಾಹರಣೆಗೆ ಅಡುಗೆ ಮಾಡಲು ಒಂದು ಪದಾರ್ಥ ಇಲ್ಲ ಎಂದರೆ, ಇರುವುದನ್ನು ಚೆನ್ನಾಗಿ ಬಳಸಿ, ರುಚಿಯಾಗಿ, ಶುಚಿಯಾಗಿ ಅಡುಗೆ ಮಾಡು. ಎರಡೇ ಬಟ್ಟೆ ಇದ್ದರೆ ಅದನ್ನು ಸುಂದರವಾಗಿ ಬಳಸು.

4. ಏನೇ ಆದರೂ ಸಹಿಸಿಕೊಳ್ಳಬೇಕು. ಜೀವನ ಅಂದಾಗ ಕಷ್ಟ ನಷ್ಟ ಇದ್ದೇ ಇರುತ್ತದೆ. ಕೆಲವೊಮ್ಮೆ ಇತರ ಜನರಿಂದ, ಪರಿಸರದಿಂದ ಮತ್ತು ನಮ್ಮದೇ ದೇಹದಿಂದ ತಾಪವಾಗುತ್ತದೆ. ಆಗ ನಮಗೆ ಎರಡು ಆಯ್ಕೆ. ಸಹಿಸಿಕೊಳ್ಳಬೇಕು ಇಲ್ಲ ತಾಪ ಮಾಡಿಕೊಳ್ಳಬೇಕು. ಇದರಲ್ಲಿ ಸಹಿಸಿಕೊಳ್ಳುವುದು ಉತ್ತಮ. ಏಕೆಂದರೆ ಯಾವುದು ಖಾಯಂ ಇರುವುದಿಲ್ಲ. ಇಷ್ಟಾದರೆ ಬಾಹ್ಯ ಯೋಗ ಆಯಿತು ಎಂದು ಪತಂಜಲಿ ಮಹರ್ಷಿ ಹೇಳಿದರು.
......................................... ಎಂ.ಪಿ. ಜ್ಞಾನೇಶ್ 
ಶಿಕ್ಷಣಾಧಿಕಾರಿ 
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ
(ಮಧ್ಯಾಹ್ನ ಉಪಹಾರ ಯೋಜನೆ) 
ಜಿಲ್ಲಾ ಪಂಚಾಯತ್ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆ 
*******************************************


Ads on article

Advertise in articles 1

advertising articles 2

Advertise under the article