-->
ಸವಿಜೇನು : ಸಂಚಿಕೆ - 04

ಸವಿಜೇನು : ಸಂಚಿಕೆ - 04

ಸವಿಜೇನು : ಸಂಚಿಕೆ - 04
ಲೇಖಕರು: ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684

      ಈ ಪ್ರಕೃತಿಯಲ್ಲಿ ಅತ್ಯಂತ ಸಣ್ಣ ಜೀವಿ ತನ್ನದೇ ಆದ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಬಾರಿ ಪ್ರಕೃತಿಯನ್ನು ಸಮತೋಲನ ಮಾಡುವಲ್ಲಿ ಬಹಳ ಪ್ರಧಾನ ಪಾತ್ರವನ್ನೇ ವಹಿಸುವ ಜೇನುಹುಳುಗಳ ಪಾತ್ರ ನಿಸರ್ಗದಲ್ಲಿ ಬಹಳ ದೊಡ್ಡದು. ಆ ಜೇನಿನ ಸುತ್ತ ಕಲಿತ ಪಾಠಗಳ, ಥ್ರಿಲ್ಲಿಂಗ್ ಅನುಭವಗಳ, ನೀವು ಕಂಡಿರದ ಕೇಳಿರದ ಅಗತ್ಯವಾಗಿ ತಿಳಿಯಲೇ ಬೇಕಾದ ಮಾಹಿತಿಯುತ 'ಸವಿಜೇನು' ಎಂಬ ವಿಶೇಷ ಶೀರ್ಷಿಕೆಯಡಿಯಲ್ಲಿ ವಿಸ್ತಾರವಾದ ಬರಹ ಸರಣಿಗಳನ್ನು ನೀವೂ ಓದಿ ಆನಂದಿಸಿ... ನಾಗೇಂದ್ರ ಬಂಜಗೆರೆ, ಶಿಕ್ಷಕರು ಮತ್ತು ಬರಹಗಾರರು      ಕಾಡುಹಂದಿಯ ಕಣ್ಣು ನನ್ನ ಮೇಲೆ..!!

ನನ್ನ ಹೈಸ್ಕೂಲು ದಿನಗಳಲ್ಲಿ ಜೇನು ಹುಡುಕುವುದು ನನ್ನ ಸಾಮಾನ್ಯ ಹವ್ಯಾಸ ಆಗಿತ್ತು. ನಮ್ಮ ಸಂಬಂಧಿಕರಿಗೆಲ್ಲಾ ನಮ್ಮದು ಜೇನುತುಪ್ಪ ಸಪ್ಲೈ ಮಾಡುವ ಮನೆ ಆಗಿತ್ತು. ಯಾರ ಮನೆಯಲ್ಲೂ ಜೇನುತುಪ್ಪ ಇರಲಿಲ್ಲ ಅಂದ್ರೂ ನಮ್ಮ ಮನೆಯಲ್ಲಿ ಮಾತ್ರ ಕನಿಷ್ಟಪಕ್ಷ ಒಂದೋ ಎರಡೋ ಕ್ವಾಟರ್ ಬಾಟಲ್ ನಲ್ಲಿ ಖಂಡಿತಾ ಇದ್ದೇ ಇರುತಿತ್ತು. ಡಿಸೆಂಬರ್ ನಿಂದ ಆರಂಭವಾಗುತಿದ್ದ ಈ ಜೇನು ಬೇಟೆ ಕೊನೆಯಾಗುತ್ತಿದ್ದದು ಮತ್ತೆ ಜೂನ್ ಜುಲೈಗೆ. ಅಲ್ಲಿಯವರೆಗೂ ನಾನು ಪ್ರತಿದಿನ ಕನಿಷ್ಠ ಎರಡು ಮೂರು ಜೇನು ಖಾಯಂ ಆಗಿ ತಿಂದೇ ತಿನ್ನುತ್ತಿದ್ದೆ. ಕೆಲವೊಂದು ದಿನ ಒಂದೇ ದಿನಕ್ಕೇ ಹತ್ತು-ಹದಿನೈದು ಜೇನು ಕಿತ್ತು ತೆಗೆದಿರುವ ದಿನಗಳೂ ಇದ್ದಾವೆ. ಬೇಸಿಗೆಯ ದಿನಗಳಲ್ಲಿ ಏನೇ ಕೃಷಿ ಕೆಲಸಗಳಿದ್ದರೂ ಹನ್ನೋಂದು ಹನ್ನೆರಡು ಗಂಟೆಯವರೆಗೆ ಕೆಲಸ. ಆಮೇಲೆ ಪೂರ್ಣ ವಿರಾಮ. ಮೂರುವರೆ ನಾಲ್ಕು ಗಂಟೆಯವರೆಗಿನ ಸಮಯ ಸಂಪೂರ್ಣ ನನ್ನದೇ. ಆದ್ದರಿಂದ ನಮ್ಮ ಮನೆಯ ಕೇಂದ್ರದಿಂದ ಎರಡು ಕಿಮೀ 360° ನನ್ದೇ ಏರಿಯಾ. ಆ ವ್ಯಾಪ್ತಿಯೊಳಗಿನ ಶೇ90% ಜೇನುಗಳು ನನ್ನದೇ ಪಾಲಾಗುತ್ತಿದ್ದವು. 
ಯಾರದ್ದೋ ತೋಟ, ಹೊಲ ಗದ್ದೆಗಳ ಬೇಲಿಯ ಸುತ್ತಲೂ ತಿರುಗಾಡುತ್ತಿದ್ದರೆ ಕೆಲವರು ಜೇನು ಕೀಳುವ ಹುಡುಗ ಬಂದಿದ್ದಾನೆಂದು, ಅವರುಗಳಿಗೆ ಆಕಸ್ಮಿಕವಾಗಿ ಕಂಡಂತಹ ಜೇನುಗಳನ್ನು ನನಗೆ ತೋರಿಸಿ ಕಿತ್ತುಕೊಡಲು ವಿನಂತಿಸುತ್ತಿದ್ದರು. ಅವರ ಕೋರಿಕೆಯನ್ನು ನಾನು ನಿರಾಕರಿಸಿದರೆ ಜೇನು ಕಿತ್ತುಕೊಟ್ಟರೆ ಎರಡು ಎಳನೀರನ್ನೋ, ಮೂರ್ನಾಲ್ಕು ತೆಂಗಿನಕಾಯಿಯನ್ನೋ ಕೊಡುವ ಆಫರ್ ಮಾಡುತ್ತಿದ್ದರು. ಇನ್ನೂ ಕೆಲವರು ಜೇನನ್ನು ನೀನೇ ಪತ್ತೆ ಹಚ್ಚಿ ಜೇನು ಬಿಡಿಸಿ ತುಪ್ಪದಲ್ಲಿ ಪಾಲು ಕೊಟ್ಟರೆ ಈ ತರಹದ ಆಫರ್ ಸಿಗುತ್ತಿದ್ದವು. ವಾರಕ್ಕೆ ಒಂದೋ ಎರಡೋ ಈ ತೆರನಾದ ಆಫರ್ ಗಳು ನನಗೆ ಖುಷಿಯನ್ನು ತಂದುಕೊಡುತ್ತಿದ್ದವು.

ಒಂದು ದಿನ ಹಾಗೆ ಜೇನು ಹುಡುಕಿಕೊಂಡು ಹಳ್ಳದ ದಂಡೆಗೆ ಹೋಗಿದ್ದೆ. ಅದು ಸುಮಾರು ಹತ್ತಾರು ಎಕರೆ ವಿಶಾಲವಾದ ಪ್ರದೇಶ. ಅಲ್ಲಿ ಸಾಧಾರಣ ಎತ್ತರದ ಬಳ್ಳಾರಿ ಜಾಲಿ, ಸೀಮೆಜಾಲಿ ಗಿಡಗಳು, ಸರ್ಕಾರಿ ಜಾಲಿ, ಅಥವಾ ರಿಜಿಲ್ ಗಿಡಗಳು ಎಂದು ಕರೆಯುವ ಗಿಡಗಳು ಯೆಥೇಚ್ಛವಾಗಿ ಇದ್ದವು. ಒಂಥರಾ ಅವುಗಳದೇ ಸಾಮ್ರಾಜ್ಯ.. ಅದು ಖಾಸಗಿ ವ್ಯಕ್ತಿಗಳ ಹತ್ತಾರು ವರ್ಷಗಳಿಂದ ಬೀಳುಬಿದ್ದ ಜಮೀನು ಆಗಿದ್ದರಿಂದ ಜಾಲಿ ಗಿಡಗಳು ಪಾರಂ ನಲ್ಲಿ ಬೆಳೆಸಿದ ಹಾಗೆ ಸೊಂಪಾಗಿ ಬೆಳೆದಿದ್ದವು. ಆ ಗಿಡಗಳ ಮಧ್ಯೆ ಸ್ವಾತಂತ್ರ್ಯದ ನಂತರದ ದಿನಗಳ ಕಾಲದಲ್ಲಿ ಕಾಲುವೆಯ ನೀರು ಹರಿಯುತಿತ್ತಂತೆ. ಅದನ್ನು ಮಾಗಾಣಿ ಎಂತಲೂ ಕರೆಯುತ್ತಿದ್ದರು. ಆ ಕಾಲುವೆಯ ಅವಶೇಷಗಳನ್ನು ಇಂದಿಗೂ ನಾವು ಸಾವಿರಾರು ಹೆಕ್ಟರ್ ಪ್ರದೇಶದಲ್ಲಿ ನೋಡಬಹುದು. ಕಾಲುವೆಯ ನೀರು ಬರದೇ ಇರುವ ಕಾಲಕ್ಕೆ ಅವರವರ ಜಮೀನುಗಳಲ್ಲಿ ಬಾವಿಯನ್ನು ತೋಡಿಸಿಕೊಂಡು ಕೃಷಿ ಕೆಲಸವನ್ನು ಮಾಡುತ್ತಿದ್ದರು. ತೊಂಬತ್ತರ ದಶಕದ ಆರಂಭದಲ್ಲಿ ಬಹುತೇಕ ಎಲ್ಲಾ ಬಾವಿಗಳೂ ಕೂಡ ಅಂತರ್ಜಲ ಕುಸಿದು ಸೇರಿ ಬರಿದಾದವು. ಆಗಿನ ಕಾಲದಲ್ಲಿ ಬಳಸಿದ್ದ ನೀರಿನ ಕಾಲುವೆಯ ಅವಶೇಷ ಇದ್ದು ಅದರಲ್ಲಿ ಯಥೇಚ್ಛವಾಗಿ ಗಿಡ-ಗಂಟೆಗಳು ಬೆಳೆದಿದ್ದವು. ನನಗೆ ಹಗಲಲ್ಲೂ, ರಾತ್ರಿಯಲ್ಲು ಯಾವುದೇ ಭಯ ಇರಲಿಲ್ಲ. ಎಲ್ಲಿ ಬೇಕಾದರೂ ಧೈರ್ಯವಾಗಿ ನುಗ್ಗುತಿದ್ದೆ. ಹಾಗೆ ದಟ್ಟವಾದ ಗಿಡಗಳ ಮದ್ಯೆ ನುಗ್ಗಿದ ನಾನು ಅಲ್ಲೊಂದು ಮುಳ್ಳುಬೇಲಿಯ ಆಸರೆಯಿಂದ ಶೆಗುಣಸೆ ಗಿಡದ ಪೊದರೊಂದು ದಟ್ಟವಾಗಿ ಎತ್ತರಕ್ಕೆ ಹಬ್ಬಿಕೊಂಡಿತ್ತು. ಈ ಪೊದರುಗಳಲ್ಲಿ ಸಾಮಾನ್ಯವಾಗಿ ಜೇನುಗಳು ಇದ್ದೇ ಇರುತ್ತಿದ್ದವು. ಈ ಪೊದರು ಬರೀ ಜೇನಷ್ಟೇ ಅಲ್ಲದೇ ಮೊಲಗಳು ಕೂರಲು, ಹಂದಿಗಳು ಹಗಲಿನಲ್ಲಿ ಮಲಗಲು, ಬಯಲುಸೀಮೆಯ ಬೆಳವ, ಗಾಗ್ಲರ್ ನಂತಹ ನಾನಾ ಜಾತಿಯ ಪಕ್ಷಿಗಳು ಗೂಡು ಕಟ್ಟಲು ಬಹು ಪ್ರಶಸ್ತವಾದ ಸ್ಥಳ ಆಗಿತ್ತು. ಕೆಲವು ಪೊದೆಗಳಲ್ಲಿ ಹಗಲು ಹೊತ್ತಿನಲ್ಲಿ ಇಲಿಗಳು ಓಡಾಡುತ್ತಾ ಜಾಲಿಕಾಯಿಯಂತಹ ಬೀಜಗಳನ್ನು ಕಡಿಯುತ್ತಾ ಇರುವುದನ್ನೂ ನಾನು ನೋಡಿದ್ದೇನೆ. ಒಂದು ಕಿಲೋಮೀಟರ್ ವಿಸ್ತೀರ್ಣದ ವ್ಯಾಪ್ತಿಯಲ್ಲಿ ಈ ತರಹದ ಪೊದರುಗಳು ಹದಿನೈದು-ಇಪ್ಪತ್ತು ಇರುತ್ತಿದ್ದವು. ಇವುಗಳೇ ನಾನು ಜೇನು ಹುಡುಕಲು ನನ್ನ ಆದ್ಯತೆಯ ಪೊದರುಗಳಾಗಿದ್ದವು. ಇವುಗಳಲ್ಲಿ ತಪ್ಪದೇ ನೋಡುವುದೇ ಜೇನುಹುಡುಕುವ ವಿಧಾನಗಳಲ್ಲಿ ಒಂದಾಗಿತ್ತು. ಅಂದು ಜೇನು ಹುಡುಕಲು ಇಂತಹದ್ದೇ ಒಂದು ಪೊದರು ಬಳಿ ಹೋದಾಗ ಅದರ ಸುತ್ತಲೂ ಸಿಕ್ಕು ಸಿಕ್ಕಾಗಿ ಹಳೆಯ ಮುಳ್ಳುರೆಂಬೆಗಳು, ಹಸಿ ಮುಳ್ಳಿನ ಅರೆಗಳು ಬಹಳ ಒತ್ತೊತ್ತಾಗಿದ್ದವು. ಅದರೊಳಗೆ ನನಗಿಂತಲೂ ಎತ್ತರದಲ್ಲಿ ಒಂದು ಜೇನು ಕಾಣಿಸಿತು. ನಾನು ಸಾಮಾನ್ಯವಾಗಿ ಜೇನು ಕಂಡ ತಕ್ಷಣ ಸಣ್ಣ ಕಡ್ಡಿಯಿಂದ ಜೇನಿನ ತಲೆಯಭಾಗಕ್ಕೆ ನಿಧಾನವಾಗಿ ಕಡ್ಡಿಯಿಂದ ಹುಳು ಸರಿಸಿ ತುಪ್ಪ ಇದೆಯೋ ಇಲ್ಲವೋ ಎಂದು ಖಾತ್ರಿಪಡಿಸಿಕೊಂಡು ಆಮೇಲೆ ಅದನ್ನು ತೆಗೆಯುವ ನಿರ್ಧಾರ ಮಾಡುತ್ತಿದ್ದೆ. ತುಪ್ಪ ಇದ್ದರೆ ಕೋಶಗಳು ಮುಚ್ಚಿರುತ್ತಿದ್ದವು ಇಲ್ಲವಾದರೆ ಖಾಲಿ ಇರುತ್ತಿದ್ದವು. ಆ ಕೋಶಗಳು ಮುಚ್ಚಿದ್ದರೆ ಖಂಡಿತವಾಗಿಯೂ ಬಲಿ. ಖಾಲಿ ಇದ್ದರೆ ನೆಕ್ಸ್ಟ್ ರೌಂಡ್ ಗೆ ಕನ್ಪರ್ಮ ಆಗಿ ಅದು ಬಲಿಯಾಗುತ್ತಿತ್ತು.

ಹದಿನೈದು ದಿನಗಳಂತೆ ಒಂದು ಸೈಕಲ್ ನಂತೆ ತುಪ್ಪ ಇರುತ್ತಿತ್ತು. ಅಮಾವಾಸ್ಯೆಯ ಹಿಂದೆ ಮುಂದೆ ಗೂಡು ಕಟ್ಟಿದರೆ ಹುಣ್ಣಿಮೆಯ ಹೊತ್ತಿಗೆ ತುಪ್ಪ ರೆಡಿಯಾಗಿ ಸಿದ್ಧವಾಗಿರುತ್ತಿತ್ತು. ಹಾಗೇ ಪ್ರತಿ ಹತ್ತನೇ ದಿನದಿಂದ ಇಪ್ಪತ್ತನೇ ದಿನದವರೆಗೂ ಯಾವಾಗ ಬೇಕಾದರೂ ತುಪ್ಪ ಸಿಗುತ್ತದೆ. ಆಮೇಲೆ ಎಂಟತ್ತು ದಿನಗಳಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿ ತುಪ್ಪ ಲಭ್ಯ ವಾಗುತ್ತದೆ. ಅಂದು ಆ ಬೇಲಿಯಲ್ಲಿದ್ದ ಜೇನನ್ನು ಪರೀಕ್ಷಿಸಿದಾಗ ಅದರಲ್ಲಿ ಭಾಗಶಃ ತುಪ್ಪ ಇರುವುದು ಖಾತ್ರಿಯಾಯಿತು. ಆದರೆ ನಾನು ಪರೀಕ್ಷಿಸಿದ ನೇರಕ್ಕೆ ಜೇನು ತೆಗೆಯುವುದು ಇತರೆ ಹಸಿ ಮುಳ್ಳು ಕೊನೆಗಳು ಅಡ್ಡ ಇದ್ದುದರಿಂದ ಸುಲಭವಾಗಿ ತೆಗೆಯುವುದು ಸಾಧ್ಯ ಇರಲಿಲ್ಲ. ಆದರೆ ವಿರುದ್ಧ ದಿಕ್ಕಿನಿಂದ ಬಂದರೆ ಸುಲಭವಾಗಿ ಸಿಗುತ್ತಿತ್ತು. ಕೈಯಲ್ಲಿದ್ದದ್ದು ಈಚಲ ಗರಿ ಕೊಯ್ಯಲು ಬಳಸುತ್ತಿದ್ದ ತೆಳ್ಳಗಿನ ಉದ್ದನೆಯ ಕುಡುಗೋಲು ಮಾತ್ರ. ಅಲ್ಲಿಗೆ ತಲುಪಲು ನಾನು ಮುಳ್ಳಿನ ರೆಂಬೆ ಕೊಂಬೆ ಸರಿಸಿ ದೂರದಿಂದ ಈ ಕಡೆ ಬಂದು ಆ ಕಾಲುವೆಯ ಏರಿ ಮೇಲೆಯೇ ನಿಧಾನಕ್ಕೆ ಮುಳ್ಳುಗಳು ಸರಿಸುತ್ತಾ ಹೆಜ್ಜೆಮೇಲೆ ಹೆಜ್ಜೆ ಇಟ್ಟು ಜೇನಿನ ಕಡೆಬರುತ್ತಿದ್ದೆ. ನನ್ನ ಗಮನ ಇದ್ದದು ಆ ಜೇನಿನ ಮೇಲೆ ಯಾವ ಯಾವ ರೆಂಬೆ ಕಡಿದರೆ ಸರಳವಾಗಿ ಸಿಗುವುದೊ ಎಂಬ ಆಲೋಚನೆಯಲ್ಲಿ ಇದ್ದೆ. 

ಅಚಾನಕ್ ಬಲಭಾಗದಲ್ಲಿ ಏನೋ ಕಪ್ಪಾಗಿ ಕಂಡ ಹಾಗೆ ಕಾಣಲು ತಕ್ಷಣವೇ ನೋಡಲು ಒಂದು ಕಾಡುಹಂದಿಯೊಂದು ಮಲಗಿದೆ. ಉದ್ದನೆಯ ಅದರ ಕೋರೆಹಲ್ಲುಗಳು ಕಾಣಿಸುತ್ತಿವೆ. ಕಣ್ಣು ತೆರೆದು ನನ್ನ ಚಲನವಲನದ ಮೇಲೆ ಅದು ಮಲಗಿದಲ್ಲೇ ನಿಗಾ ವಹಿಸಿದೆ. ನಾನು ಆ ಕಾಡುಹಂದಿ ನೋಡಿದ ತಕ್ಷಣ ಮೈ ರೋಮಾಂಚನ ಆಗಿ ಕೈ ಕಾಲು ನಡುಗತೊಡಗಿದವು. ಅದನ್ನು ಕಂಡಿದ್ದೇ ತಡ ಕ್ಷಣಾರ್ಧದಲ್ಲಿ ಮೈ ಬೆವರಿತು... ಶಬ್ಧ ಮಾಡಿದರೆ ಎದ್ದೇಳುವ ಅಪಾಯ ಇದ್ದೇ ಇತ್ತು. ಅದು ಅಪಾಯ ಸಂದರ್ಭದಲ್ಲಿ ಎದ್ದು ಅದರ ನೇರಕ್ಕೆ ಓಡಿದರೆ ತೊಂದರೆ ಇಲ್ಲ. 
ಆದರೆ ಈ ಹಂದಿಗಳು ಮತ್ತು ಆನೆಗಳು ಅಪಾಯದ ಸಂದರ್ಭದಲ್ಲಿ ಎದುರುಗಡೆ ಇರುವ ಶತ್ರುಗಳನ್ನು ಹೊಡೆದುರುಳಿಸುವ ಕನಿಷ್ಟ ಪ್ರಯತ್ನವನ್ನು ಮಾಡೇ ಮಾಡುತ್ತವೆ. ಹಂದಿ ತಿವಿಯಲು ಬಂದಾಗ ಅದು ಬರುವ ಸರಳರೇಖೆಯಿಂದ ಆಚೆ-ಈಚೆ ಸರಿಯಬೇಕು ಎಂದು ಅಪ್ಪ, ಅಣ್ಣ ಇತರರು ಹೇಳಿದ್ದು ಕೇಳಿದ್ದೇನೆ. ಅದು ನನಗೆ ಅರಿವಿದೆ ಆದರೆ ಆ ಸರ್ಕಾರಿ ಜಾಲಿ ಗಿಡಗಳ ಮುಳ್ಳಿನ ವ್ಯೂಹದಲ್ಲಿ ಅರ್ಧ ಅಡಿಯೂ ಸರಿದಾಡಲು ಸ್ಥಳಾವಕಾಶ ಇರಲಿಲ್ಲ..! ತಕ್ಷಣಕ್ಕೆ ಮಂದೆಹೆಜ್ಜೆ ಇಡುವುದನ್ನು ತತ್‌ಕ್ಷಣವೇ ನಿಲ್ಲಿಸಿ ಉಸಿರು ಬಿಗಿಹಿಡಿದು ಮುಂದೆ ಇಡುತ್ತಿದ್ದ ಹೆಜ್ಜೆಗಳನ್ನು ನಿಧಾನಕ್ಕೆ ಹಿಂದೆ ಹಿಂದೆ ಇಡುತ್ತಾ ಸರಿದೆ. ಶಬ್ಧಮಾಡಿದರೆ ಎದ್ದೇಳುವ ಅಪಾಯ ಹೆಚ್ಚಿತ್ತು. ಎಲ್ಲಿ ಎದ್ದುಬಂದು ನನ್ನನ್ನು ತಿವಿದು ಹಾಕುತ್ತೋ ಎಂದು ತುಂಬಾ ಭಯವಾಗಿತ್ತು. ಈ ಘಟನೆಗೆ ಕೆಲವೇ ದಿನಗಳ ಮುಂಚೆ ಯುಗಾದಿಯ ನಂತರ ನಮ್ಮ ಕಡೆ ಹಂದಿಯ ಶಿಕಾರಿ ಮಾಡುವವರು. ಅದು ಗ್ರಾಮಸ್ಥರು ಹುಕುಂ ಹೊರಡಿಸುತಿದ್ದರು. ಪ್ರತಿ ಮನೆಗೆ ಒಬ್ಬರು ಶಿಕಾರಿಯ ಬೇಟೆಯ ಗುಂಪಿಗೆ ಜೊತೆಯಾಗಿ ಹೋಗಲೇ ಬೇಕಿತ್ತು. ತಮ್ಮ ಮನೆಯಲ್ಲಿದ್ದ ಮಾರಕಾಸ್ತ್ರದೊಂದಿಗೆ ತೆರಳುತಿದ್ದರು. ಇದು ಒಂದು ಮೋಜಿನ , ವಿನೋದದ, ಮನೋರಂಜನೆಯ ಸಂಗತಿಯಾಗಿ ಯುವ ಸಮೂಹ, ಹಳೇ ಶಿಕಾರಿ ಪಂಟರೆಲ್ಲಾ ಬಹು ಸಂತಸದಿ ಯುದ್ಧೋತ್ಸಹ ಉನ್ಮಾದದಿಂದ ಕೇಕೆ ಹಾಕುತ್ತಾ ಶಿಕಾರಿಗೆ ತೆರಳುತಿದ್ದರು. ಮೊದಲದಿನ ಶಿಕಾರಿ ಆಗದೇ ಇದ್ದರೆ ಎರಡನೇ ದಿನ ಇನ್ನಷ್ಟು inspiration ನಿಂದ ದಿಕ್ಕನ್ನು ಬದಲಿಸಿ ಬೇರೆ ಬೇರೆ ಕಡೆಗೆ ತೆರಳುತ್ತಿದ್ದರು. ಹಂದಿಯ ಬೇಟೆಯಾಡಿ ಕೊಂದ ಹಂದಿಗಳನ್ನು ಅಲಂಕೃತಗೊಳಿಸಿ ಟ್ರಾಕ್ಟರ್ /ಎತ್ತಿನಗಾಡಿಯಲ್ಲಿ ತಮಟೆ ನಗಾರಿ ಭಾರಿಸುತ್ತಾ , ಕುಣಿಯುತ್ತಾ, ಹೋಳಿ-ಯುಗಾದಿ ಮಿಶ್ರಣ ಮಾಡಿ ಕುಂಕುಮ ಭಂಡಾರಗಳನ್ನು ಪರಸ್ಪರರು ಹಚ್ಚುವುದು ಎರಚುತ್ತಾ ತಮಟೆಯ ವಿವಿಧ ಬೀಟ್ ಗೆ ವಿಭಿನ್ನವಾಗಿ ಸ್ಟೆಪ್ ಹಾಕುತ್ತಾ ಕೆಲವರು ಸ್ಟಂಟ್ ಮಾಡುತ್ತಾ ಊರುತುಂಬಾ ಮೆರವಣಿಗೆ ಮಾಡುತ್ತಿದ್ದರು. ಹಂದಿ ಶಿಕಾರಿಮಾಡಿದ ವೀರನಿಗೆ ವಿಶೇಷ ಸನ್ಮಾನ ಮೆರವಣಿಗೆಯಲ್ಲಿ ಟ್ರಾಕ್ಟರ್ನಲ್ಲಿ ಹಂದಿಗಳ ಜೊತೆಗೆ ನಿಂತುಕೊಳ್ಳುವ/ಕುಳಿತುಕೊಳ್ಳುವ ಅವಕಾಶ ಇದ್ದುದರಿಂದ ಹೀರೋ ಆಗಲು ಪ್ರತಿಯೊಬ್ಬರೂ ಹವಣಿಸುತಿದ್ದರು. ಈತರ ಶಿಕಾರಿ ಮಾಡಿ ಮೆರವಣಿಗೆ ಮಾಡಿದರೆ ಉತ್ತಮ ಮಳೆ ಬೆಳೆಯಾಗುವುದೆಂಬ (ಮೂಢ) ನಂಬಿಕೆ ಇತ್ತು. ಈಗ ಇದು ನಿಷೇಧಿಸಲಾಗಿದೆ. ಅಂದು ಆ ಬೇಟೆಗೆ ತೆರಳಿದ್ದವರ ಜೊತೆಯಲ್ಲಿ ನಾನೂ ಹೋಗಿದ್ದೆ. ಹಂದಿಯನ್ನು ಎಲ್ಲಿ ಹೇಗೆ ಹೊಡೆಯುವರು ಎಂಬ ಕುತೂಹಲದಿಂದ ನೋಡಲು ಕಾತುರನಾಗಿ ನಾನು ಅವರ ಜೊತೆ ಹೋಗಿದ್ದೆ. ಅವತ್ತೇನಾಯಿತೆಂದರೇ ಪೊದೆಯಿಂದ ಒಂದು ದೊಡ್ಡ ಹಂದಿ ಎದ್ದು ಓಡಿದೆ. ನಾವು ಎಂಟತ್ತು ಜನ ಅದನ್ನು ದಾಟಿ ಆಗಲೇ ಸ್ವಲ್ಪಮುಂದೆ ಹೋಗಿದ್ದೆವು. ಹಂದಿ ಹೊರಬಂದ ತಕ್ಷಣ ಅದನ್ನು ಕಂಡವರು ಕೇಕೆ ಹಾಕಿ ಕೂಗಿದರು. ಹಿಂದಿರುಗಿ ನೋಡಲು ಅದು ನಮ್ಮ ಕಡೆ ಮುನ್ನುಗ್ಗಿ ಬರುತ್ತಿದೆ. ಅದು ಬರುತ್ತಿರುವ ಪರಿ ನೋಡಿದರೆ ಸುಮಾರಾದ ಎಮ್ಮೆಯ ಕರುವೋ ಕೋಣದ ಕರುವಿನಂತೆ ಕಾಣುತ್ತಿತ್ತು. ನಮ್ಮ ಜೊತೆ ಇದ್ದ ರಾಮುಡು ಎಂಬ ದೈತ್ಯ ಅಳು ಒಬ್ಬರು ಭರ್ಜಿ ಹಿಡಿದಿದ್ದರು. ಕೆಲವರು ಕೊಡಲಿ, ಒಬ್ಬರು ಪರುಶುರಾಮನ ಗಂಡುಗೊಡಲಿ ಹೀಗೆ ನಾನಾ ಅಯುಧ ಹಿಡಿದಿದ್ದರು. ಹಿಂದಿನವರು ಕೇಕೆ ಹಾಕಿದ ತಕ್ಷಣ ಅಲ್ಲೊಬ್ಬರು ಇಲ್ಲೊಬ್ಬರು ಆಯುಧ ಇದ್ದವರು ಹಂದಿ ಹೊಡೆಯಲು ಸಿದ್ಧವಾಗಿ ನಿಂತರು. ಭರ್ಜಿ ಹಿಡಿದ ರಾಮುಡು ಅದಕ್ಕೆ ಭರ್ಜಿಯಿಂದ ಚುಚ್ಚಲು ತಲೆಗೆ ವಲ್ಲಿಯಬಿಗಿದು ಸಿದ್ಧವಾಗಿ ನಿಂತರು. ನಿರಾಯುಧವಾದ ನಾವು ಅದು ಓಡಿ ಬರುತ್ತಿದ್ದ ನೇರ ಬಿಟ್ಟು ಪಕ್ಕಕ್ಕೆ ಓಡಿಹೋಗಿದ್ದೆವು. ನಾನು ಅವಕ್ಕಾಗಿ ನಿಂತು ಕಣ್ರೆಪ್ಪೆ ಮಿಟುಕಿಸದೇ ನೋಡುತ್ತಲೇ ಇದ್ದೆ. ಇನ್ನೇನು ರಾಮುಡು ಆ ಹಂದಿಗೆ ಚುಚ್ಚುವರು ಎನ್ನುವಾಗಲೇ ಆ ಹಂದಿ ಕ್ಷಣಾರ್ಧದಲ್ಲಿ ತನ್ನ ಕೋರೆಹಲ್ಲಿನಿಂದ ಅವರ ಮೀನ ಖಂಡಕ್ಕೆ ತಿವಿಯಿತು. ಬರ್ಚಿ ಸಮೇತ ಅವರು ನೆಗೆದು ಕಾಲು ಕಿಸಿದು ಕೆಳಗೆ ಬಿದ್ದರು. ಎಂಭತ್ತು ಎಂಭತ್ತೈದು ಭಾರದ ರಾಮುಡು ತರಗೆಲೆಯಂತೆ ತಿರುಗಿ ತಿರುಗಿ ಬಿದ್ದು ನೆಲದಲ್ಲಿ ಒದ್ದಾಡುತ್ತಿದ್ದ. ಹಂದಿ ಹಿಂತಿರುಗಿ ಬಂದು ಮತ್ತೊಂದು Shot ತಿವಿಯುತ್ತದೆ ಎಂದು ನಿರೀಕ್ಷೆಯಲ್ಲಿ ಹಂದಿಯನ್ನೇ ನೋಡುತ್ತಿದ್ದ ನಾನು ಅದು ಹಿಂತಿರುಗದೇ ಶರವೇಗದಲ್ಲಿ ಮುಂದೆ ಓಡುತ್ತಲೇ ಇತ್ತು. ಕೆಲವರು ರಾಮುಡುನನ್ನು ಎಬ್ಬಿಸಲು ಹೋದರೆ ಇನ್ನೂ ಕೆಲವರು ಓಡುತ್ತಿದ್ದ ಹಂದಿಯ ಹಿಂದೆ ಅದನ್ನು ಹೊಡೆಯಲು ಹಿಂಬಾಲಿಸಿ ಇವರೂ ಓಡುತಿದ್ದರು. ಹಂದಿಯಿಂದ ತಿವಿಸಿಕೊಂಡ ವ್ಯಕ್ತಿಯ ಮೀನ ಖಂಡದ ಅರ್ಧ ಭಾಗ ಒಂದೆರಡು ಇಂಚು ಗಾಯ ಆಗಿ ರಕ್ತ ಬಳ ಬಳನೇ ಸೋರುತಿತ್ತು. ಅದರಲ್ಲಿನ ಜಾನುವಾರು ವೈದ್ಯ ಮಾಡುತ್ತಿದ್ದ ಮಾರೆಪ್ಪ ಎಂಬುವವರು ಎರಡು ಕೈಯಿಂದ ಅದನ್ನು ಒತ್ತಿಹಿಡಿದು ಹೊಂಗೆ ಎಲೆ ಇಟ್ಟು ಟವೆಲ್ ನಿಂದ ಬಿಗಿದರು. ನೋಡು ನೋಡುತ್ತಲೇ ಆ ಗಾಯಕ್ಕೆ ಬಿಗಿದಿದ್ದ ವಲ್ಲಿಯೂ ನೆನೆದು ರಕ್ತ ಸೋರುತ್ತಿತ್ತು. ಅಲ್ಲೇ ಇದ್ದ ಹೊಂಗೆಯ ಮರದಡಿ ಕಾಲು ಎತ್ತರದಲ್ಲಿರಿಸಿ ಒಂದು ಗಂಟೆಗೂ ಅಧಿಕ ಕಾಲ ಅಲ್ಲೇ ಇದ್ದು ಆಮೇಲೆ ನಡೆಯಲು ಶುರುಮಾಡಿದರೆ ಮತ್ತೆ ರಕ್ತಹರಿದು ಚೆಲ್ಲಲಾರಂಭಿಸಿತು. ಮತ್ತೊಮ್ಮೆ ಅವರನ್ನು ಅಲ್ಲೇ ಮಲಗಿಸಿ ಆ ಗಾಯ ಬಿಗಿಯಾಗಿ ಕಟ್ಟಿ ಊರೊಳಗೆ ಹೋಗಿ ಎತ್ತಿನಗಾಡಿ ಕಟ್ಟಿಕೊಂಡು ಬಂದು ಅವರನ್ನು ಗಾಡಿಯಲ್ಲಿ ಹಾಕಿಕೊಂಡು ಹೋಗಿ ವೈದ್ಯ ಮಾಡಿಸಿದ್ದರು. ಅದೆಲ್ಲದೂ ನನಗೆ ನೆನಪಾಗಿ ಜೀವ ಬಾಯಿಗೆ ಬಂದ ಹಾಗೆ ಆಗಿ ಜೇನು ಬೇಡ ಏನು ಬೇಡ ಹಂದಿಯಿಂದ ಬಚಾವಾದೇ ಎಂದು ಏದುಸಿರಲ್ಲೇ ಸೀದಾ ನಮ್ಮ ತೋಟದ ಕಡೆ ಓಡಿಬಂದೆ. ಬರುವ ಹಾದಿಯಲ್ಲೇ ನಮ್ಮ ಪಕ್ಕದ ತೋಟ ಲಂಬಾಣಿ ಮೂರ್ತಿನಾಯ್ಕ ಎಂಬಾತನಿಗೆ ನಾನು ಅಲ್ಲಿ ಹಂದಿ ಇರುವ ಮಾಹಿತಿ ತಿಳಿಸಿದೆ. ಮೂರ್ತಿ ನಾಯ್ಕ ಬಿಡುವಿನ ದಿನಗಳಲ್ಲಿ ಮೊಲದ ಬಲೆ, ಮುಂಗುಸಿ ಬಲೆ ಹಿಡಿದು ಓಡಾಡುತ್ತಿದ್ದ. ಈತನಿಗೆ ಬೇಟೆಯ ಕ್ರೇಜ್ ಇದ್ದುದರಿಂದ ನಿಜ ಇದೇಯೇನೋ ಎಂದು ಎರಡೆರಡು ಬಾರಿ ಖಾತರಿ ಮಾಡಿಕೊಂಡ ಅವರು ಊರೊಳಗೆ ಹೋಗಿ ಹತ್ತಾರು ಜನ ಆಯುಧಗಳೊಂದಿಗೆ ಜನರನ್ನು ಕರೆತಂದರು. ಮೂರ್ತಿನಾಯ್ಕ ನನ್ನಲ್ಲಿಗೆ ಮತ್ತೆ ಬಂದು ಬೇಟಿಯಾಗಿ "ಬಾರ ಆ ಹಂದಿ ಎಲ್ಲಿ ಮಲಗಿದೆ ತೋರಿಸು" ಎಂದ. ಸರಿ ಎಂದು ನಾನು ಪುನಃ ಅವರೊಂದಿಗೆ ಆ ಸ್ಥಳಕ್ಕೆ ಧಾವಿಸಿದೆ. ಎಲ್ಲರಿಗೂ ಕಾತರ. 'ಏಯ್ ಹಂದಿ ದೊಡ್ಡದಾ ಸಣ್ಣದಾ? ಬಹಳ ದಟ್ಟವಾದ ಪೊದೆಯಲ್ಲಿದೆಯಾ ?? ಮುಳ್ಳು ಗಿಡಗಂಟೆ ತುಂಬ ಇದಾವಾ? ಪಾಲಯ್ಯ ಎಂಬಾತನಿಗೆ ಮಾಮ ನೀನು ಭರ್ಜಿ ನೀನೇ ಹಿಡಿದಿರಬೇಕು ಇವತ್ತು ಮಿಸ್ ಮಾಡಂಗಿಲ್ಲ 'ಹಾಕಬೇಕು ಮಾಮ' ಎಂದು ಇತರರಿಗೂ ಹೇಳುತಿದ್ದರು. ನೀವು ಕಾಡು ಹಂದಿಯ ತಿನ್ನತ್ತೀರಾ?? ಎಂದರು ಇಲ್ಲಾ ತಿನ್ನಲ್ಲ ಎಂದೆ ಹೀಗೆ ಹತ್ತಾರು ಪ್ರಶ್ನೆಗಳನ್ನು ಕೇಳುತಲಿದ್ದರು. ಅವರಿಗೆಲ್ಲ ಉತ್ತರಿಸುತಾ ಆ ಸ್ಥಳಕ್ಕೆ ಧಾವಿಸಿ ಒಬ್ಬ ವೃತ್ತೀ ಬೇಟೆಗಾರನಿಗೆ "ಅಗೋ ಆ ಪೊದೆಯಡಿ ಕಾಲುವೆಯಲ್ಲಿ ಮಲಗಿದೆ ನೋಡು.." ಎಂದು ಹೇಳಿದೆ. ಎಲ್ಲರೂ ಪೊಜಿಷನ್ ತಗೊಂಡು ರೆಡಿಯಾಗಿ ನಿಂತರು. ಮುಖ್ಯ ವೃತ್ತಿಯ ಬೇಟೆಗಾರ ಒಂದು ಭರ್ಚಿ ಹಿಡಿದು ನಿಧಾನಕ್ಕೆ ಆ ಹಂದಿ ಮಲಗಿರುವ ಕಡೆ ಹೆಜ್ಜೆ ಹಾಕುತಾ ಹೋದ. ಇವರ ಚಲನ ವಲನ ಗಮನಿಸಿದ ಅದು ಮುಖ ಮಾಡಿದ್ದ ನೇರಕ್ಕೇ ಎದ್ದು ಓಡಿತು. ಹಂದಿ ಹೊಡೆಯಲು ಬಂದ ಕೆಲವರು ಆ ಹಂದಿಯ ಎತ್ತರ, ಗಾತ್ರನೋಡಿ ಹಂದಿ ಹೊಡೆಯುವ ಪ್ರಯತ್ನವೂ ಮಾಡದೇ ಹಿಂದೆ ಸರಿದರು. ನಾನು ಜೇನು ನೋಡಲು ನೋಡಿದಾಗ ನೆಲಕ್ಕೆ ಅಡರಿ ಮಲಗಿದ್ದ ಅದು ಇಷ್ಟೊಂದು ದೊಡ್ಡ ಹಂದಿ ಎಂದು ಭಾವಿಸಿರಲಿಲ್ಲ. ಸಾಧಾರಣದ್ದು ಎಂದು ಭಾವಿಸಿದ್ದೆ. ಅದು ನೋಡಿದರೆ ಸರಿಯಾಗಿ ಒಂದು ಎಮ್ಮೆ ಮೊಣಕದ ತರ ಎತ್ತರ ದಪ್ಪ ಇದೆ. ನೋಡು ನೋಡುತ್ತಲೇ "ಹಾಕು ಹಾಕು" ಎನ್ನುತ್ತಲೇ ಅವರ್ಯಾರಿಗೂ ಸಿಗದೇ ಓಡಿ ಹೋಗಿಬಿಟ್ಟಿತ್ತು. ಹೀಗೆ ಒಂದೈದಾರು ಸರಿ ಪೊದೆಗಳಲ್ಲಿ ಜೇನು ಹುಡುಕುವಾಗ ನನ್ನನ್ನು ದೂರದಿಂದಲೇ ನೊಡಿದ ಹಂದಿಗಳು ಓಡಿ ಹೋಗಿದ್ದವು. ಮೊಲಗಳಂತೂ ಲೆಕ್ಕಕ್ಕೆ ಸಿಗದಷ್ಟು ಈ ಪೊದೆಯಿಂದ ಓಡಿವೆ. ಹಾಗೆ ಎಲ್ಲೆಂದರಲ್ಲೆ ಹೋಗಬೇಡ ಆಕಸ್ಮಿಕ ಧಾಳಿ ಮಾಡಿದರೆ ಕಷ್ಟ ನೋಡು ಎಂದು ಅಪ್ಪ ಅಮ್ಮ ಮತ್ತು ಇತರರು ನನಗೆ ಬಹಳ ಸರಿ ಎಚ್ಚರಿಸಿದ್ದರು. ನಾನು ಅವರೆಲ್ಲರ ಮಾತುಗಳನ್ನು ಉದಾಸೀನ ಮಾಡಿದ್ದೆ. ಆದರೆ ಈ ದೊಡ್ಡ ಬಂಡ ಹಂದಿ ಮಾತ್ರ ಅಂದು ನನ್ನ ಮೇಲೆ ಧಾಳಿ ಮಾಡಿದ್ದರೆ ನನ್ನ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ. ಆದರೆ ಅದೃಷ್ಟವಶಾತ್ ಅದೂ ಅಂದು ನನ್ನ ಮೇಲೆ ಧಾಳಿ ಮಾಡಲಿಲ್ಲ. ನಾನು ಅದರ ಮೇಲೆ ಧಾಳಿ ಮಾಡಿಸಿದರೂ ಅದು ಬಲಿಯಾಗದೇ ಬದುಕಿ ಹೋಯಿತು.
(ಮುಂದುವರೆಯುವುದು)
....................... ನಾಗೇಂದ್ರ ಬಂಜಗೆರೆ, ಶಿಕ್ಷಕರು 
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಿಂಚೇರಿ
ಬಳ್ಳಾರಿ ತಾಲೂಕು ಮತ್ತು ಜಿಲ್ಲೆ
Mob : +91 99029 12684
*******************************************


Ads on article

Advertise in articles 1

advertising articles 2

Advertise under the article