-->
ನಿಷ್ಪಾಪಿ ಸಸ್ಯಗಳು : ಸಂಚಿಕೆ - 41

ನಿಷ್ಪಾಪಿ ಸಸ್ಯಗಳು : ಸಂಚಿಕೆ - 41

ನಿಷ್ಪಾಪಿ ಸಸ್ಯಗಳು : ಸಂಚಿಕೆ - 41
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ

      
    
ಪ್ರೀತಿಯ ಮಕ್ಕಳೇ... ಹೇಗಿದ್ದೀರಿ? ಕಳೆದ ವಾರ ಪರಿಚಯಿಸಿದ ಹಾಡೇ ಬಳ್ಳಿಯನ್ನು ಎಲ್ಲಾದರೂ ಕಂಡಿರಾ? ನಮ್ಮ ಶಾಲೆಯ ಮೂರನೇ ತರಗತಿಯ ಸಹೀಮ್ ಮನೆ ಸಮೀಪವೇ ಇದ್ದ ಹಾಡೇಬಳ್ಳಿಯ ಕಾಯಿಯ ಗೊಂಚಲನ್ನೇ ನನಗೆ ತಂದಿದ್ದ. ಎಲೆಗಳನ್ನು ಹಿಚುಕಿ ರಸವನ್ನು ತಲೆಗೆ ಹಾಕಿಕೊಂಡು ಖುಷಿಪಟ್ಟನೆಂದು ಅವನಮ್ಮ ಫೋನ್ ಮಾಡಿ ಸಂತಸ ವ್ಯಕ್ತಪಡಿಸಿದರು. 
      ಮಕ್ಕಳೇ ಹೀಗೆ ನೀವು ನಿಷ್ಪಾಪಿ ಸಸ್ಯಗಳನ್ನು ಗುರುತಿಸಬೇಕೆಂದು ಈ ಬರಹದ ಆಶಯವೂ ಆಗಿದೆ. ಈ ಬಾರಿ ಕಳೇ ಸಸ್ಯವೆಂದೇ ಅವಗಣನೆಗೆ ಗುರಿಯಾದ ಪುಟಾಣಿ ಸಸ್ಯದ ಬಗ್ಗೆ ಪರಿಚಯ ಮಾಡಿಕೊಳ್ಳೋಣ. ಈ ಸಸ್ಯ ನಮ್ಮ ಶಾಲೆಯಂಗಳದಲ್ಲೇ ಹಬ್ಬಿದೆ. ನೀವು ಮಾರ್ಗದ ಬದಿಗಳಲ್ಲಿ , ಮಳೆ ನಿಂತ ಬಳಿಕ ತೋಟದ ನಡುವೆ, ಗದ್ದೆಗಳ ಬದುಗಳಲ್ಲಿ ನೋಡಬಹುದು. ತುಂಬಾ ಮೃದುವಾದ ಸಸ್ಯ. ಆದರೆ ಗಾಣಕ್ಕೆ ನೀಡಿದರೂ ಒಂದು ಹನಿ ನೀರು ಕಾಣಲಾರದ ಮಣ್ಣಿನಲ್ಲಿ ಸೊಂಪಾಗಿ ಬೆಳೆದು ನಿಂತಿರುವುದನ್ನು ಕಂಡರೆ ಪ್ರಕೃತಿಯ ಶಕ್ತಿಯ ಬಗ್ಗೆಯೇ ಸೋಜಿಗವಾಗುವುದು.
       ಗ್ರಾಮೀಣ ಜನರಿಗೆ ಚಿರಪರಿಚಿತವಾದ ಈ ಸಸ್ಯವನ್ನು ಜಯಂತಿ ಗಿಡವೆನ್ನುತ್ತಾರೆ. ಗಬ್ಬು ಶಾವಂತಿ, ಅಡಿಕೆ ಸೊಪ್ಪಿನ ಗಿಡ, ನಡುಮುರುಕ, ಗೊಂಡೇ ಸೊಪ್ಪು, ಟೀಕಿ ಸೊಪ್ಪು, ಗೆಜ್ಜೆ ಅಡ್ಡಿಕೆ ಎಂದೆಲ್ಲ ಕನ್ನಡದಲ್ಲಿ ಕರೆಯಲ್ಪಡುವ ಈ ಸಸ್ಯವನ್ನು ಇಂಗ್ಲಿಷ್ ಭಾಷೆಯಲ್ಲಿ Coat buttons ಎನ್ನುವರು.
     ಭಾರತದಾದ್ಯಂತ ಕಾಣಿಸುವ ಜಯಂತಿ ಸಸ್ಯ ಒಂದು ಒಂದೂವರೆ ಅಡಿಯಷ್ಟೇ ಎತ್ತರವಾಗುತ್ತದೆ. ಎದ್ದು ನಿಲ್ಲಲಾಗದೆ ಹರಡುತ್ತಾ ಸುತ್ತಲೂ ಸೀಮಿತವಾಗಿ ನಿಧಾನವಾಗಿ ಹಬ್ಬುವ ಬಹುವಾರ್ಷಿಕ ಸಸ್ಯವಾಗಿದೆ. ಎಲೆಗಳ ತುದಿ ಚೂಪಾಗಿದ್ದು ಗರಗಸದಂಚಿನಂತೆ ಅಂಚು ಹೊಂದಿದ್ದು ಗಾಢ ಹಸಿರಾಗಿರುತ್ತದೆ. ಮಾರ್ಚ್ ತಿಂಗಳ ಈ ಒಣ ರಣ ಬಿಸಿಲಿಗೂ ಎಲೆಗಳಲ್ಲಿ ಸಾಕಷ್ಟು ರಸವಿದೆ. ಇಡೀ ಸಸ್ಯ ಸೂಕ್ಷ್ಮವಾಗಿ ಬಿಳಿರೋಮಗಳನ್ನು ಹೊಂದಿದೆ. ಕಾಂಡವು ಕಡ್ಡಿಗಳಂತೆ ತಲೆ ಎತ್ತಿ ನಿಂತು ಪ್ರತಿ ಕಾಂಡದ ತುದಿಯಲ್ಲಿ ಒಂದೇ ಒಂದು ನಸು ಹಳದಿ ವರ್ಣದ ಹೂ ಅರಳುತ್ತದೆ. 6 ರಿಂದ 8 ದಳಗಳ ನಡುವೆ ಕೇಸರಗಳು ತುಂಬಿರುತ್ತವೆ. ಹೂಗಳು ದ್ವಿಲಿಂಗಿಗಳಾಗಿದ್ದು ಒಣಗಿದ ಬಳಿಕ ಬೀಜಗಳು ಕೂದಲಿನ ಎಳೆಗಳಂತಹ ರಚನೆಗಳ ಜೊತೆಗೆ ಗಾಳಿಯಲ್ಲಿ ಹಾರುತ್ತಾ ಬೀಜ ಪ್ರಸಾರಕ್ಕೆ ಕಾರಣವಾಗುತ್ತವೆ.
      ಜಯಂತಿ ಗಿಡವು Asteraceae ಕುಟುಂಬಕ್ಕೆ ಸೇರಿದ್ದು Tridax proccumbens (ಟ್ರೈಡಾಕ್ಸ್ ಪ್ರೊಕುಂಬೆನ್ಸ್) ಎಂಬ ಸಸ್ಯ ಶಾಸ್ತ್ರೀಯ ಹೆಸರನ್ನು ಹೊಂದಿದೆ. ರೈತರ ಮಿತ್ರನಂತಿರುವ ಈ ಸಸ್ಯವನ್ನು ತೋಟದಲ್ಲಿ ಮುಚ್ಚಿಗೆ ಬಳ್ಳಿಯಾಗಿ ಬೆಳೆಸುತ್ತಾರೆ. ಹಿಂದೆ ಇದರ ಹೂಗಳನ್ನು ಹಾರ ಮಾಡಿ ಹಾಕಿಕೊಂಡು ಸಂಭ್ರಮಿಸುತ್ತಿದ್ದರಂತೆ. ಇದರ ಹೂವಿನಂತೆ ಒಡವೆಗಳನ್ನು ಮಾಡಿಸುತ್ತಿದ್ದರಂತೆ. ಅದಕೇ ಅದು ಗೆಜ್ಜೆ ಟೀಕಿ ಎಂಬ ಪಡೆದಿದೆ. ಮೊಲಗಳಿಗೆ ಅತ್ಯಂತ ಪ್ರೀತಿಯ ಆಹಾರವಾಗಿದೆ.
   ಮಕ್ಕಳೇ, ನೆಲ ಹಾಸಿನಂತಿರುವ ಈ ಪುಟಾಣಿ ಸಸ್ಯ ನಮ್ಮ ಹಳ್ಳಿ ಮದ್ದಿನಲ್ಲಿ ಎಷ್ಟೊಂದು ಪ್ರಯೋಜನಕಾರಿಯಾಗಿದೆ ಎಂದು ನೀವು ತಿಳಿದರೆ ಆಶ್ಚರ್ಯ ಗೊಳ್ಳುವಿರಿ.
         ಈ ಜಯಂತಿ ಗಿಡವು ಒಂದು ಅಪರೂಪದ ಗಿಡಮೂಲಿಕೆಯಾಗಿದೆ. ಇದು ಸಾಂಪ್ರದಾಯಿಕ ಔಷಧಿ ಸಸ್ಯ. ಮಧುಮೇಹಿಗಳಿಗೆ ಗಾಯಗಳಾದರೂ ಇದರ ಎಲೆ ರಸವನ್ನು ಗಾಯಕ್ಕೆ ಹಾಕಿ ರಕ್ತ ಸೋರುವಿಕೆ ನಿಲ್ಲಿಸಬಹುದು ಮಾತ್ರವಲ್ಲದೇ ಗಾಯವನ್ನೂ ಒಣಗಿಸಬಹುದು ಎಂದರೆ ಇದರ ಸಾಮರ್ಥ್ಯ ದ ಅರಿವಾಗದಿರದು. ಗಾಯಗಳು ಗ್ಯಾಂಗ್ರೀನ್ ಆಗುವ ಹಂತವೇ ಉಂಟಾಗದೆನ್ನುತ್ತಾರೆ ಬಳಸಿದವರು. ಕೀವು ತುಂಬಿದ ಗಾಯವಾದರೂ ಮಾಯವಾಗಲು ಸಹಕರಿಸುತ್ತದೆ. ಕೂದಲು ಉದುರುವಿಕೆಗೆ, ಕಪ್ಪಾಗಿ ಹಾಗೂ ಸೊಂಪಾಗಿ ಬೆಳೆಯಲು ಇದರ ಎಲೆಯ ರಸ ಅದೆಷ್ಟು ಉಪಯುಕ್ತವೆಂದರೆ ಮಾರುಕಟ್ಟೆಯಲ್ಲಿ Ghamra Hair oil ಎಂದೇ ಮಾರಾಟವಾಗುತ್ತದೆ!. ಕ್ಷಯ, ಮಧುಮೇಹ, ಕರುಳುಹುಣ್ಣು, ಬಾಯಿಹುಣ್ಣು, ಚರ್ಮರೋಗ, ಉರಿಮೂತ್ರ, ಕಿಡ್ನಿ ಸಮಸ್ಯೆಗೆ , ಜಾಂಡೀಸ್, ಗಂಟಲು ನೋವು , ಅತಿಸಾರ, ಶ್ವಾಸನಾಳದ ಸಮಸ್ಯೆಗೆ ಬಹಳ ಉಪಯುಕ್ತ ಸಸ್ಯವಾಗಿದೆ. ಯಾವುದೇ ಗಾಯವಾದರೂ ತಕ್ಷಣಕ್ಕೆ ರಕ್ತದ ಹರಿವನ್ನು ತಡೆಗಟ್ಟಲು ಈ ಸಸ್ಯದ ಎಲೆಯ ರಸವನ್ನು ಹಾಕಿದರೆ ಸಾಕು. ಜನಸಾಮಾನ್ಯರಿಗೆ ದೊರಕುವ ಮೊದಲ ಔಷಧಿಯೇ ಈ ಸಸ್ಯ. ಗಾಯ ಒಣಗಲೂ ಇದೇ ಸಾಮಾನ್ಯ ಔಷಧಿ. ಕೆಂಡದಲ್ಲಿ ಇದರ ಸೊಪ್ಪನ್ನು ಒಣಗಿಸಿ ಹಾಕಿ ಹೊಗೆ ಎಬ್ಬಿಸಿದರೆ ಸೊಳ್ಳೆಗಳ ಕಾಟ ತಪ್ಪುತ್ತದೆ
      ಉತ್ತಮ ರೋಗ ನಿರೋಧಕ ಶಕ್ತಿ ಹೊಂದಿರುವ ಈ ಜಯಂತಿ ಗಿಡ ಕಳೆ ನಾಶಕದ ದೆಸೆಯಿಂದ ಅಪರೂಪವಾಗುತ್ತಿದೆ. ನಮ್ಮ ಕಾಲಡಿಯ ಕಸವಾದ ಈ ನಿಷ್ಪಾಪಿ ಸಸ್ಯ ಪ್ರಕೃತಿಯು ಮಾನವನಿಗೆ ನೀಡಿರುವ ವಿಶೇಷ ಕೊಡುಗೆ. ಇದನ್ನು ಉಳಿಸಿ ಬಳಸುವುದು ಮಾನವನ ಕರ್ತವ್ಯವಲ್ಲವೇ?
     ಸರಿ ಮಕ್ಕಳೇ.. ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.. ನಮಸ್ಕಾರ.
........................ ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ 
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************



Ads on article

Advertise in articles 1

advertising articles 2

Advertise under the article