-->
ಹೃದಯದ ಮಾತು : ಸಂಚಿಕೆ - 33

ಹೃದಯದ ಮಾತು : ಸಂಚಿಕೆ - 33

ಹೃದಯದ ಮಾತು : ಸಂಚಿಕೆ - 33
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ


ಬೇಸಿಗೆಯ ಸುಡು ಬಿಸಿಲು. ಕುಡಿಯುವ ನೀರಿಗೂ ಹಾಹಾಕಾರ. ಎಲ್ಲೆಲ್ಲೂ ಗಮನ ಸೆಳೆಯುತ್ತಿದೆ 'ಸಾಪ್ಟ್ ಡ್ರಿಂಕ್ಸ್'. ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರೂ ಯಥೇಚ್ಛವಾಗಿ ಇದರ ದಾಸರಾಗಿದ್ದೇವೆ. ದಾಹವನ್ನು ನೀಗಿಸಲು ಬಣ್ಣ ಬಣ್ಣದ 'ಕೂಲ್ ಡ್ರಿಂಕ್ಸ್' ಗೆ ಪರ್ಯಾಯವೇ ಇಲ್ಲದಂತೆ ಭಾಸವಾಗುತ್ತಿದೆ. ಇವುಗಳ ಸೇವನೆ ಚಟವಾಗಿ ಕಾಡುತ್ತಿರುವುದು ಸಹಜವಾಗಿದೆ. 

ಸರ್ವತ್ರವ್ಯಾಪಿಯಾಗಿರುವ ಈ ವೈವಿಧ್ಯಮಯ 'ಸಾಪ್ಟ್ ಡ್ರಿಂಕ್ಸ್' ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮದ ಬಗ್ಗೆ ಅರಿವು ಮೂಡಿಸುವುದು ಅತೀ ಅಗತ್ಯ. ಒಂದು ಮಾಹಿತಿ ಪ್ರಕಾರ 'ಕೋಕಾಕೋಲ' ಪ್ರತಿದಿನ 1.9 ಬಿಲಿಯನ್ ಬಿಕರಿಯಾಗುತ್ತಿದೆ. ಹಾಗಾದರೆ ಎಲ್ಲವು ಸೇರಿದರೆ ಒಟ್ಟು ಪ್ರಮಾಣ ಅದೆಷ್ಟಿರಬಹುದು! 

'ಸಾಪ್ಟ್ ಡ್ರಿಂಕ್ಸ್' ಗಳಲ್ಲಿ ಪಾಸ್ಫಾರಿಕ್ ಆಸಿಡ್ ಮತ್ತು ಸಿಟ್ರಿಕ್ ಆಸಿಡ್ ಇದ್ದೇ ಇರುತ್ತದೆ. ಪಾಸ್ಫಾರಿಕ್ ಆಸಿಡ್ (ಕೋಡ್E338) ಬ್ಯಾಕ್ಟೀರಿಯಗಳ ಬೆಳವಣಿಗೆಯನ್ನು ತಡೆದು ಹೆಚ್ಚು ಸಮಯ ಉಳಿಯುವಂತೆ ಮಾಡಿದರೆ, ಸಿಟ್ರಿಕ್ ಆಸಿಡ್ 'ಹುಳಿ' ಸ್ವಾದವನ್ನು ಕೊಡುತ್ತದೆ. 

ಕಂಪೆನಿ 'ಸಾಪ್ಟ್ ಡ್ರಿಂಕ್ಸ್' ಗಳಲ್ಲಿ 'ಪ್ರೆಸ್ಟಿಸೈಡ್ಸ್' ಅವಶೇಷಗಳಿರುತ್ತವೆ ಎಂಬ ವರದಿಗಳೂ ಇವೆ. ಹಾಗಿದ್ದಲ್ಲಿ ಅದು 'ಕ್ಯಾನ್ಸರ್' ಗೆ ಮೂಲ ಎಂಬುವುದರಲ್ಲಿ ಅನುಮಾನವೇ ಇಲ್ಲ. 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಕ್ಯಾಲೊರಿ ಪ್ರಮಾಣ ಆಶ್ಚರ್ಯ ನೀಡುತ್ತದೆ. 600 ml ನಲ್ಲಿ 330 ಕ್ಯಾಲೊರಿ ಇರುತ್ತದೆ. ಅಂದರೆ ಒಂದು ಮಸಾಲೆ ದೋಸೆಯನ್ನು ಬೌಲ್ ತುಂಬಾ ಸಾಂಬಾರು ಹಾಗೂ ತೆಂಗಿನಕಾಯಿಯ ಚಟ್ನಿಯೊಂದಿಗೆ ಸೇವಿಸಿದಷ್ಟು. ಆದರೆ ಮಸಾಲೆ ದೋಸೆ ಒಂದು ಹೊತ್ತಿನ ಹಸಿವು ನೀಗಿಸಿದರೆ, 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಅಂತಹ ಯಾವುದೇ ಶಕ್ತಿಯನ್ನು ಕಾಣಲು ಅಸಾಧ್ಯ. ಇತರ ಆಹಾರದಲ್ಲಿ ಕ್ಯಾಲೊರಿಯೊಂದಿಗೆ ಪ್ರೋಟೀನ್, ಸೋಡಿಯಂ, ಪೊಟಾಷಿಯಂ, ವಿಟಮಿನ್, ಫೈಬರ್ಸ್, ಪ್ಯಾಟ್ಸ್... ಇವು ಹೇರಳವಿದ್ದರೆ 'ಸಾಪ್ಟ್ ಡ್ರಿಂಕ್ಸ್' ಇವುಗಳಿಂದ ಸಂಪೂರ್ಣ ಮುಕ್ತವಾಗಿದೆ.

 'ಕೂಲ್ ಡ್ರಿಂಕ್ಸ್' ನಲ್ಲಿರುವ ಸಕ್ಕರೆಯ ಪ್ರಮಾಣವಂತೂ ಆಘಾತಕಾರಿ. ಉತ್ತಮ ಆರೋಗ್ಯಕ್ಕೆ ನೈಸರ್ಗಿಕವಾಗಿ ಸಿಗುವ ಸಕ್ಕರೆ ಸಾಕಾಗುತ್ತದೆ. ನಾವು ಸೇವಿಸುವ ಆಹಾರದಲ್ಲಿ ಅದು ಅಡಕವಾಗಿರುತ್ತದೆ. ಹಾಲಿನಲ್ಲಿ ಲಾಕ್ಟೋಸ್, ಹಣ್ಣಿನಲ್ಲಿ ಪ್ರಾಕ್ಟೋಸ್ ಇವುಗಳು ಸಕ್ಕರೆಯ ಅಗತ್ಯತೆಯನ್ನು ಪೂರ್ತಿಗೊಳಿಸುತ್ತದೆ. ನಮ್ಮ ದೇಹಕ್ಕೆ ನೇರವಾಗಿ ಸಕ್ಕರೆಯ ಆವಶ್ಯಕತೆ ಇರದು. ಒಂದು ಸಂಶೋಧನೆ ಪ್ರಕಾರ ಆ ರೀತಿ ನೇರ ಸಕ್ಕರೆ ಬಳಸುವ ಅಗತ್ಯಬಿದ್ದರೆ ಗಂಡಸರಿಗೆ ಪ್ರತಿ ದಿನ 36 ಗ್ರಾಂ ಹಾಗೂ ಹೆಂಗಸರಿಗೆ ಅದು 25 ಗ್ರಾಂಗಳಿಗೆ ಸೀಮಿತವಾಗಬೇಕಿದೆ.

ಕಂಪೆನಿಯ ಒಂದು ಬಾಟ್ಲಿ 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಸುಮಾರು 82.8 ಗ್ರಾಂ ಸಕ್ಕರೆ ಅಡಕವಾಗಿದೆ. ಇದು ನಿಜಕ್ಕೂ ಗಾಬರಿ ಮೂಡಿಸುವ ಪ್ರಮಾಣ. ಇದರ ಸತತ ಬಳಕೆಯಿಂದ ಗಂಟು ನೋವು, ಪಿತ್ತಕೋಶ ಕಾಯಿಲೆ, ಟೈಪ್ 2 ಮಧುಮೇಹ, ಕಿಡ್ನಿ ವೈಪಲ್ಯ, ಮೇಧೋಜೀರಕ ಗ್ರಂಥಿ ವೈಪಲ್ಯ, ಹೃದಯಾಘಾತ, ಸ್ಥೂಲದೇಹ ಸಾಮಾನ್ಯವಾಗಿ ವಕ್ಕರಿಸುವ ರೋಗಗಳಾಗಿವೆ. ಕೋಕೇನ್ ರೀತಿಯಲ್ಲೇ ಸಕ್ಕರೆಯ ಬಳಕೆಯೂ ಇದರಿಂದಾಗಿ ಚಟವಾಗಿ ಪರಿಣಮಿಸುತ್ತದೆ.

ಸಕ್ಕರೆಯ ಅಗಾಧ ಪ್ರಮಾಣದ ಬಗ್ಗೆ ಧ್ವನಿ ಬಂದಾಗ ಪ್ರಮುಖ ಕಂಪೆನಿಗಳು 0 ಕ್ಯಾಲೊರಿ - 0 ಸುಗರ್ ಉತ್ಪನ್ನವನ್ನು ಪರಿಚಯಿಸಿತ್ತು. ಈ ರೀತಿಯ ಉತ್ಪನ್ನಗಳು ಇನ್ನೂ ಭಯಾನಕ. ಆಸ್ ಪರ್ಟೇಮ್, ಸಕ್ಕಾರಿನ್ ಹಾಗೂ ಸಕ್ರಾಲೋಸ್ ಗಳನ್ನು ಇವುಗಳಲ್ಲಿ ಬಳಸಲಾಗುತ್ತದೆ. ಪರಿಣಾಮವಾಗಿ ಸ್ಟ್ರೋಕ್ಸ್, ಹಾರ್ಟ್ ಅಟ್ಯಾಕ್, ಕಿಡ್ನಿ ಹಾಗೂ ಲಿವರ್ ಡ್ಯಾಮೇಜ್, ಮಾನಸಿಕ ಕಾಯಿಲೆ, ಹುಟ್ಟು ವೈಕಲ್ಯ ಇವೇ ಮೊದಲಾದ ಕಾಯಿಲೆಗಳು ಹುಟ್ಟಿಕೊಳ್ಳಬಹುದು.

'ಸಾಪ್ಟ್ ಡ್ರಿಂಕ್ಸ್' ನಲ್ಲಿರುವ 'ಕೆರಾಮೆಲ್ (Caramel) ಮತ್ತೊಂದು ಘಾತಕವಾದದ್ದು. 'ಸಾಪ್ಟ್ ಡ್ರಿಂಕ್ಸ್' ನಲ್ಲಿರುವ ಕಂದು ಇಲ್ಲವೇ ಕಪ್ಪು ಬಣ್ಣ ಅದರ ಸೂಚಕ. 4MI (4-Methylmindazole) ಎಂದು ಕರೆಯಲ್ಪಡುವ ಅದು ಸಕ್ಕರೆಯನ್ನು ಅಮೋನಿಯಾ ಮತ್ತು ಸಲ್ಫೈಟ್ಸ್ ನೊಂದಿಗೆ ಬಿಸಿಮಾಡಿದಾಗ ಉಂಟಾಗುತ್ತದೆ. ಇದೊಂದು ಕ್ಯಾನ್ಸರ್ ಕಾರಕ (carcinogen) ಆಗಿದೆ. ಇದರ ಪ್ರಮಾಣ 29MI ಗಿಂತ ಹೆಚ್ಚಾದಲ್ಲಿ ಅಪಾಯಕಾರಿಯಾಗಿರುತ್ತದೆ. ಕರಿದಾಗ ಕಪ್ಪು ಬಣ್ಣಕ್ಕೆ ಬರುವ ಪ್ರತಿಯೊಂದು ವಸ್ತುವಿನಲ್ಲೂ (ಕರಿದ ಮಾಂಸ, ಮೀನು, ತರಕಾರಿ....) ಅಕ್ರಿಲಮೈಡ್ (Acrilamide) ಎಂಬ ಕ್ಯಾನ್ಸರ್ ಕಾರಕ ಇರುವುದರಿಂದ ಕಪ್ಪಾದ ಅಂಶವನ್ನು ಸೇವಿಸದಿರುವುದು ಸೂಕ್ತ.

'ಸಾಪ್ಟ್ ಡ್ರಿಂಕ್ಸ್' ನ ಬಣ್ಣ ಇನ್ನೂ ಅಪಾಯಕಾರಿ. ಸಿಂಥಟಿಕ್ ಫುಡ್ ಕಲರ್ ನ್ನು (ಕೋಡ್ E110) ಬಳಸಲಾಗುತ್ತದೆ. ಸನ್ ಸೆಟ್ ಯೆಲ್ಲೋ (Sunset Yellow) FCF ಎಂದೂ ಇದನ್ನು ಕರೆಯಲಾಗುತ್ತದೆ. 1973ರಲ್ಲಿ ಉದರರೋಗ ತಜ್ಞ ಬೆಂಜಮಿನ್ ಪಿನ್ ಗೋಲ್ಡ್ 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಬಳಸುವ ಈ ಬಣ್ಣ ಅಪಾಯಕಾರಿ ಎಂದು ತಿಳಿಸಿದ್ದ.

ಪ್ರಿಸರ್ ವೇಟಿವ್ E211 ಇದು 'ಸಾಪ್ಟ್ ಡ್ರಿಂಕ್ಸ್' ನಲ್ಲಿರುವ ಮತ್ತೊಂದ ವಿನಾಶಕ ಅಂಶ. ಪ್ರಿಸರ್ ವೇಟಿವ್ ಸೋಡಿಯಂ ಬೆಂಝೋನೇಟ್ ಎಂದು ಕರೆಯಲ್ಪಡುವ ಇದು ಆಸ್ಕೊರ್ ಬಿಕ್ (Ascorbic acid/ವಿಟಮಿನ್ ಸಿ) ನೊಂದಿಗೆ ವರ್ತಿಸಿ ಬೆಂಜೀನ್ ಬಿಡುಗಡೆ ಮಾಡುತ್ತದೆ. ಇದು ವಾಹನದ ಸೈಲೆನ್ಸರ್ ನಲ್ಲಿ ಹೊರಬರುವ ಹೊಗೆಯಲ್ಲಿರುವ ಅಪಾಯಕಾರಿ ಅಂಶವಾಗಿದೆ. ಈ ರೀತಿಯ ಕ್ರಿಯೆ ನಡೆಯಲು ಶಾಖ ಮತ್ತು ಬೆಳಕು ಸಾಕಾಗುತ್ತದೆ. ಈ ರೀತಿ ಬಿಡುಗಡೆಗೊಂಡ ಬೆಂಝೀನ್ ಕ್ಯಾನ್ಸರ್ ಕಾರಕವಾಗಿದ್ದು ನಿರಂತರ ಬಳಕೆಯಿಂದ ಅಪಾಯ ತಪ್ಪಿದ್ದಲ್ಲ.

ಪಾಸ್ಫಾರಿಕ್ ಆಸಿಡ್ 'ಸಾಪ್ಟ್ ಡ್ರಿಂಕ್ಸ್' ಹೆಚ್ಚು ದಿನ ಉಳಿಯುವಂತೆ ಮಾಡಬಲ್ಲದು. ಆದರೆ ಇದು ಹಲ್ಲಿನ ಕ್ಷಯಕ್ಕೆ ಕಾರಣವಾಗಬಲ್ಲದು. 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಆಸಿಡಿಟಿ ಕಡಿಮೆ ಮಾಡಲು ಸೋಡಿಯಂ ಸಿಟ್ರೇಟ್(E331) ಮತ್ತು ಹುಳಿ ರುಚಿಗಾಗಿ ಸಿಟ್ರಿಕ್ ಆಸಿಡ್ (E330) ಬಳಸಲಾಗುತ್ತದೆ. 'ಸಾಪ್ಟ್ ಡ್ರಿಂಕ್ಸ್' ನಲ್ಲಿ ಪ್ರತ್ಯೇಕ ದ್ರವಗಳ ಪದರವನ್ನು ಮಾಯಗೊಳಿಸಲು ಹಾಗೂ ಕ್ರಿಸ್ಟಲ್ ಫಾರ್ಮೇಶನ್ ತಡೆಯಲು ಸ್ಟೆಬಿಲೈಸರ್ ಗಳನ್ನು ಬಳಸಲಾಗುತ್ತದೆ. E1450 -ಸ್ಟಾರ್ಚ್ ಸೋಡಿಯಂ ಆಕ್ಟೆನೈಲ್ ಸಕ್ಕಿನೇಟ್ (starch sodium octenyl succinate) ಹಾಗೂ E445- ಈಸ್ಟರ್ ಗಮ್ ಬಹುತೇಕ ಮಾರಕ ಕಾಯಿಲೆಗಳಿಗೆ ಮೂಲವಾಗಿವೆ.

ಮೇಲಿನ ಅಂಶಗಳನ್ನು ಗಮನಿಸಿದಾಗ ನಾವು ಅದೆಷ್ಟು ಅಪಾಯಕಾರಿ ವಸ್ತುಗಳನ್ನು ಸೇವಿಸುತ್ತಿದ್ದೇವೆ ಎಂಬ ಬಗ್ಗೆ ಕಳವಳ ಮೂಡುವುದು ಸಹಜ.‌ ಆಕರ್ಷಕವಾಗಿ ಪ್ರೀಝರ್ ಗಳಲ್ಲಿ ಜೋಡಿಸಿಟ್ಟ ಪಾನಕಗಳು ಏರಿದ ತಾಪವನ್ನು ತಗ್ಗಿಸಬಹುದು. ಕ್ಷಣಿಕ ನೆಮ್ಮದಿಯನ್ನು ನೀಡಬಹುದು. ಕ್ರಮೇಣ ಚಟವಾಗಿ ಬದಲಾಗುವ ಇದರ ಬಳಕೆ ಚಟ್ಟವೇರಿಸುವುದರಲ್ಲಿ ಸಂಶಯವಿಲ್ಲ. ಸಾಧ್ಯವಾದಷ್ಟು ಶುದ್ಧನೀರನ್ನು ಬಳಸಿ‌ ಆರೋಗ್ಯವನ್ನು ಕಾಪಾಡುವುದೇ ಜಾಣ ಹೆಜ್ಜೆಯಾಗಿದೆ.
.......................... ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************



ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ 
ಮುಖ್ಯ ಶಿಕ್ಷಕರು, 
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************

Ads on article

Advertise in articles 1

advertising articles 2

Advertise under the article