ಹೃದಯದ ಮಾತು : ಸಂಚಿಕೆ - 30
Thursday, February 15, 2024
Edit
ಹೃದಯದ ಮಾತು : ಸಂಚಿಕೆ - 30
ಲೇಖಕರು : ಯಾಕೂಬ್ ಎಸ್ ಕೊಯ್ಯೂರು
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ರೂಪಾ ನಿದ್ರೆಯಿಲ್ಲದೆ ಅನೇಕ ದಿನಗಳು ಕಳೆದವು. ಶಾಲೆಗೂ ರಜೆ ಹಾಕಿ ಮನೆಯಲ್ಲೇ ಇರುವ ಆಕೆ ಬದುಕಿನ ಎಲ್ಲಾ ನಿರೀಕ್ಷೆಗಳನ್ನು ಕಳೆದುಕೊಂಡಿದ್ದಾಳೆ. ತಮ್ಮನನ್ನು ಕಳೆದುಕೊಂಡು ಹತ್ತು ದಿನಗಳೇ ಕಳೆದು ಹೋದವು. ಅಪ್ಪ ಅಮ್ಮ ಮಾತಾಡುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಜೀವನ ಪೂರ್ತಿ ಬಡತನದ ಬವಣೆಯಲ್ಲಿದ್ದರೂ, ತನ್ನ ಕಷ್ಟ ಮರೆತು ಇಬ್ಬರೂ ಮಕ್ಕಳನ್ನು ಚೆನ್ನಾಗಿ ಓದಿಸಿದ್ದರು. ರೂಪಾ ಬಿ ಎಡ್ ಮುಗಿಸಿ ಸರಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಆಕೆಯ ತಮ್ಮ ಪದವಿ ತರಗತಿಯಲ್ಲಿ ಓದುತ್ತಿದ್ದ. ತಂದೆ ತಾಯಿಯೊಂದಿಗೆ ಹಳೆಯ ಮನೆಯಲ್ಲೇ ವಾಸಿಸುತ್ತಿರುವ ರೂಪಾ ದಿನಾ ಇಪ್ಪತ್ತು ಕಿಲೋಮೀಟರ್ ದೂರವಿರುವ ಶಾಲೆಗೆ ಹೋಗಿ ಬರುತ್ತಿದ್ದಳು. ಕೆಲಸ ದೊರೆತು ಎರಡು ಮೂರು ವರ್ಷಗಳಾಗಿತ್ತಷ್ಟೆ. ಇನ್ನೂ ಮದುವೆಯಾಗುವ ಯೋಚನೆ ಮಾಡಿರಲಿಲ್ಲ. ಅದಕ್ಕೆ ತಂದೆ ಮಾಡಿದ ಸಾಲ ತೀರಿಸುವ ಹೊಣೆ ಹಾಗೂ ತಮ್ಮನಿಗೆ ಓದಿಸುವ ಜವಾಬ್ದಾರಿ ಇದ್ದದ್ದೇ ಕಾರಣ. ರೂಪಾ ಹಾಗೂ ರಜತ್ ಅಕ್ಕ ತಮ್ಮ ಎಲ್ಲರಿಗೂ ಅಚ್ಚುಮೆಚ್ಚು. ರಜತ್ ಅಂದರೆ ರೂಪಾಳಿಗೆ ಪಂಚಪ್ರಾಣ. ತಿಂಗಳ ವೇತನ ದೊರೆತಾಗ ಆತನಿಗೊಂದು ಹೊಸ ಬಟ್ಟೆ ತರಲು ಆಕೆ ಮರೆಯುತ್ತಿರಲಿಲ್ಲ. ಆತ ಓದಿ ಒಂದು ಒಳ್ಳೆ ಕೆಲಸ ಪಡೆಯಬೇಕೆಂಬುವುದು ಆಕೆಯ ಬಯಕೆಯಾಗಿತ್ತು. ತಮ್ಮನಿಗೆ ಕೆಲಸ ದೊರೆತ ಮೇಲೇನೇ ತಾನು ಮದುವೆಯಾಗುವುದಾಗಿ ಹಟ ಹಿಡಿದಿದ್ದಳು. ರಜತ್ ಬಹಳ ಭಿನ್ನವಾದ ವ್ಯಕ್ತಿತ್ವ ಹೊಂದಿದ್ದ. ಆತ ಓದುವ ಕಡೆ ಬಹಳ ಗಮನಕೊಡುತ್ತಿದ್ದ. ತಾನು ಓದಿ ಐ.ಎ.ಎಸ್. ಮಾಡಬೇಕೆಂದು ಕನಸು ಹೊತ್ತಿದ್ದ. ಆತ ಸ್ವಲ್ಪವೂ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಸ್ನೇಹಿತರೆಲ್ಲರೂ ಮೊಬೈಲ್ ಬಳಸುತ್ತಿದ್ದರೂ ಆತ ಮೊಬೈಲೇ ಉಪಯೋಗಿಸುತ್ತಿರಲಿಲ್ಲ. ಯಾವುದೇ ದುಷ್ಚಟಗಳು ಆತನಿಗಿರಲಿಲ್ಲ. ತರಗತಿಯಲ್ಲಿ ಎಲ್ಲರೂ ಫೇಸ್ ಬುಕ್, ಇನ್ಸ್ಟಾಗ್ರಾಂ, ವಾಟ್ಸ್ ಆಪ್ ಗಳಲ್ಲಿ ತಲ್ಲೀನರಾಗಿದ್ದರೆ, ರಜತ್ ಗೆ ಅವುಗಳ ಬಗ್ಗೆ ಆಸಕ್ತಿನೇ ಇರಲಿಲ್ಲ. ಅಕ್ಕ ಒಂದು ಒಳ್ಳೆಯ ಮೊಬೈಲ್ ಉಡುಗೊರೆ ಕೊಟ್ಟಿದ್ದರೂ ಅದನ್ನು ಉಪಯೋಗಿಸಲು ಅಕ್ಕನಿಗೇ ಕೊಟ್ಟಿದ್ದ. ರಜತ್ ನಂತಹ ಮಕ್ಕಳು ಸಿಗುವುದು ಬಹಳನೇ ಅಪರೂಪ.
ಅಂದು ರೂಪಾಳಿಗೆ ಬಂದೆರಗಿದ್ದು ಸಿಡಿಲಿನಂತಹ ಸುದ್ದಿ. ಯಾವುದೋ ಪುಸ್ತಕ ಖರೀದಿಸಲು ದೂರದ ನಗರಕ್ಕೆ ತೆರಳಿದ್ದ ರಜತ್ ಮರುದಿನ ರೈಲ್ವೇ ಹಳಿಯ ಪಕ್ಕ ಹೆಣವಾಗಿ ಪತ್ತೆಯಾಗಿದ್ದ. ಆತ ಯಾರಿಂದಲೋ ಕೊಲೆಯಾಗಿದ್ದು ಖಾತ್ರಿಯಾಗಿತ್ತು. ರೂಪಾಳ ಹೃದಯ ಚೂರಾಗಿತ್ತು. ಆತನನ್ನು ಕೊಲೆ ಮಾಡಲು ಯಾವುದೇ ಕಾರಣವಿರಲು ಸಾಧ್ಯವೇ ಇಲ್ಲ. ಆದರೂ ಕೊಲೆಯಾಗಿದ್ದ. ತಮ್ಮನಿಲ್ಲದೆ ಆಕೆಗೆ ಬದುಕೇ ಇಲ್ಲವಾಗಿದೆ. ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು ಆತನ ಪ್ರತಿಯೊಂದು ಕೆಲಸವೂ ರೂಪಾಳೇ ಮಾಡುತ್ತಿದ್ದಳು. ಆತ ಇಷ್ಟ ಪಡುವ ಅಡುಗೆ ಮಾಡಿ ಕೊಡುತ್ತಿದ್ದ ರೂಪಾ ಆತನ ನೆನಪಿನಲ್ಲೇ ಅರೆ ಜೀವವಾಗಿದ್ದಳು. ಯಾವುದೇ ಸಾಂತ್ವಾನಗಳು ಆಕೆಯ ಮನಸ್ಸನ್ನು ಶಾಂತಗೊಳಿಸಲು ಸಾಧ್ಯವಿರಲಿಲ್ಲ. ಅಂದು ರವಿವಾರ ರಜಾದಿನ. ರಜತ್ ಗೆ ಹಳದಿ ಬಣ್ಣದ ಟೀ ಶರ್ಟ್ ಅಂದರೆ ತುಂಬಾ ಇಷ್ಟ. ಹಿಂದಿನ ದಿನ ರೂಪಾ ಹಳದಿ ಬಣ್ಣದ ಟೀ ಶರ್ಟ್ ತಮ್ಮನಿಗಾಗಿ ತಂದಿದ್ದಳು. ಬೆಳಿಗ್ಗೆ ಸುಮಾರು ಮೂವತ್ತು ಕಿಲೋಮೀಟರ್ ದೂರದ ನಗರಕ್ಕೆ ತೆರಳಿ ಒಂದು ಪುಸ್ತಕ ತರುವುದಾಗಿ ರೂಪಾಳಿಗೆ ತಿಳಿಸಿದ್ದ. ರೂಪಾ ಆತನಿಗೆ ಹಣವನ್ನೂ ತಾನೇ ಕೊಟ್ಟಿದ್ದಳು. ಅಂದು ಅದೇ ಹಳದಿ ಶರ್ಟ್ ತೊಟ್ಟಿದ್ದ ಆತ ಸುಂದರವಾಗಿ ಕಾಣುತ್ತಿದ್ದ. "ರಜ್ಜು ಇಂದು ಚೆಂದ ಕಾಣುತ್ತಿ ಕಣೋ, ಖಂಡಿತಾ ಹುಡುಗಿಯರ ಕಣ್ಣು ಬೀಳುತ್ತೆ" ಎಂದು ಅಕ್ಕ ಚುಡಾಯಿಸಿದಾಗ ಬಹಳನೇ ನಾಚಿಕೊಂಡಿದ್ದ. ರೂಪಾ ತಮ್ಮನನ್ನು ತನ್ನ ಸ್ಕೂಟಿಯಲ್ಲಿ ಬಸ್ ನಿಲ್ದಾಣಕ್ಕೆ ತೆರಳಿ ಬಸ್ಸು ಹತ್ತಿಸಿ ಬಂದಿದ್ದಳು. ಅಂದು ರಜಾದಿನವಾಗಿದ್ದ ಕಾರಣ ಮನೆಯಲ್ಲೇ ಇದ್ದ ಆಕೆ ತಮ್ಮನಿಗಾಗಿ ಪಾಯಸ ಮಾಡಿದ್ದಳು. ಸಂಜೆಯಾಗುತ್ತಿದ್ದಂತೆ ಆತನ ದಾರಿ ಕಾಯುತ್ತಿದ್ದಳು. ಆದರೆ ರಾತ್ರಿಯಾದರೂ ತಮ್ಮನ ಸುಳಿವಿಲ್ಲ. ಪರಿಚಯಸ್ಥರನ್ನೆಲ್ಲಾ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಮಧ್ಯರಾತ್ರಿ ಪೋಲೀಸ್ ಠಾಣೆಗೆ ದೂರು ಕೊಟ್ಟು ಬಂದಾಯಿತು. ರಾತ್ರಿಯಿಡೀ ಹುಡುಕಾಟವೇ. ಮರುದಿನ ಬೆಳಿಗ್ಗೆ ಸುಮಾರು ಒಂಭತ್ತು ಗಂಟೆ ಹೊತ್ತಿಗೆ ಪೋಲೀಸ್ ಜೀಪ್ ಬಂದು ರೂಪಾ ಮತ್ತು ಮನೆಯವರನ್ನು ಕರೆದು ಕೊಂಡು ರೈಲ್ವೇ ಟ್ರಾಕ್ ಬಳಿ ಪತ್ತೆಯಾದ ಶವವನ್ನು ತೋರಿಸುತ್ತಾರೆ. "ಶವ ನೋಡಿದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಅದೇ ಹಳದಿ ಟೀ ಶರ್ಟ್ ತೊಟ್ಟಿದ್ದ ರಜತ್ ರಕ್ತದ ನಡುವಿನಲ್ಲಿ ಹೆಣವಾಗಿ ಬಿದ್ದಿದ್ದ. ಅಂತೂ ಆತನ ವಿಧಿವಿಧಾನಗಳು ಕಳೆದು ಇಂದಿಗೆ ಹತ್ತನೇ ದಿನ. ರೂಪಾಳಿಗೆ ಪೋಲೀಸ್ ಸ್ಟೇಷನ್ ನಿಂದ ಕರೆ ಬಂತು. ಮನಸ್ಸಿಲ್ಲದಿದ್ದರೂ ಆಕೆ ಸ್ಟೇಷನ್ ಕಡೆ ತೆರಳಿದ್ದಳು. ಅಲ್ಲಿ ಅದಾಗಲೇ ಒಬ್ಬ ಯುವಕ ನಿಂತಿದ್ದ. ಹೆಚ್ಚು ಕಮ್ಮಿ ರಜತ್ ನ ವಯಸ್ಸೇ ಇರಬಹುದು. ಇನ್ಸ್ ಪೆಕ್ಟರ್ ಹೇಳಿದ ವಿಷಯ ಕೇಳಿ ರೂಪಾ ಮತ್ತೆ ಕುಸಿದು ಬಿದ್ದಿದ್ದಳು. ಅಷ್ಟಕ್ಕೂ ಇನ್ಸ್ಪೆಕ್ಟರ್ ಹೇಳಿದ ವಿಷಯ ಕರುಳು ಹಿಂಡುವಂತಿತ್ತು. ಪೋಲೀಸ್ ಸ್ಟೇಷನ್ ನಲ್ಲಿ ಆಗಲೇ ಇದ್ದ ಯುವಕನ ಹೆಸರು ಮಹೇಶ್. ಆತನೂ ಕಾಲೇಜು ಓದುತ್ತಿದ್ದ. ಆತ ಹೆಚ್ಚಾಗಿ ಫೇಸ್ ಬುಕ್ ಬಳಸುತ್ತಿದ್ದ. ಫೇಸ್ ಬುಕ್ ನಲ್ಲಿ ಹುಡುಗಿಯರ ಫ್ರೊಫೈಲನ್ನೇ ಹುಡುಕಾಡುತ್ತಿದ್ದ. ಅದು ವಯೋಸಹಜವೂ ಆಗಿತ್ತು. ಆಗ ಪರಿಚಯವಾದವಳೇ ಸ್ಮಿತಾ. ಅವರೊಳಗೆ ದಿನಾ ಚಾಟಿಂಗ್ ನಡೆಯುತ್ತಿತ್ತು. ನಂತರ ಮೊಬೈಲ್ ಮಾತುಕತೆ. ಹೀಗೇ ಅವರ ಗೆಳೆತನ ಪ್ರೀತಿ ನಿರಂತರ ನಡೆಯುತ್ತಿತ್ತು. ಮಹೇಶ್ ಆಕೆಯನ್ನು ಭೇಟಿಯಾಗಬೇಕೆಂದು ಬಯಸಿದ್ದ. ಅದೊಂದು ದಿನ ಕರೆ ಮಾಡಿ ಭೇಟಿಯಾಗುವ ಇಚ್ಚೆ ವ್ಯಕ್ತಪಡಿಸಿದ್ದಳು. ನಗರಕ್ಕೆ ನಾಳೆ ಬರುವುದಾಗಿಯೂ ಹೇಳಿದ್ದಳು. ಮಹೇಶನ ಸಂತೋಷಕ್ಕೆ ಪಾರವೇ ಇರಲಿಲ್ಲ. ಆದರೆ ಆತನ ಹಿಂದೆ ಹೆಣೆದಿದ್ದ ಬಲೆ ಆತನಿಗೆ ತಿಳಿದಿರಲಿಲ್ಲ. ಹುಡುಗಿಯ ಮನೆಯವರಿಗೆ ಇವರ ಪ್ರೀತಿ, ಪ್ರೇಮದ ಬಗ್ಗೆ ತಿಳಿದು ಹೋಗಿತ್ತು. ಅವರು ಆತನನ್ನು ಬಲಿ ತೆಗೆಯಲು ಖೆಡ್ಡಾ ತೋಡಿದ್ದರು. ಆ ದಿನ ಸ್ಮಿತಾಳಿಗೆ ಮನೆಯವರಿಂದ ಮಂಗಳಾರತಿ ಆಗಿತ್ತು. ಮಹೇಶ್ ನನ್ನು ಭೇಟಿಯಾಗಲು ಬರುವುದಾಗಿ ಮನೆಯವರೇ ಹೇಳಿಸಿದ್ದರು. ಆತನ ಪರಿಚಯ ಮನೆಯವರಿಗೆ ಇರಲಿಲ್ಲ. ಆತನನ್ನು ಹಳದಿ ಟೀ ಶರ್ಟ್ ಧರಿಸಿ ಬರುವಂತೆ ಮನೆಯವರ ಸೂಚನೆಯಂತೆ ಆಕೆ ಒತ್ತಾಯಿಸಿದ್ದಳು. ಅಂದು ರವಿವಾರ ಮಹೇಶ್ ಹಳದಿ ಟೀ ಶರ್ಟ್ ಧರಿಸಿ ಆಕೆಯ ಭೇಟಿಗಾಗಿ ಹೊರಟಿದ್ದ. ಆಕೆ ಭೇಟಿಯಾಗುವುದಾಗಿ ತಿಳಿಸಿದ್ದ ಲೊಕೇಶನ್ ಬಳಿ ಬರುತ್ತಿದ್ದ. ಅದೊಂದು ಪುಸ್ತಕದ ಅಂಗಡಿಯ ಸಮೀಪವಾಗಿತ್ತು. ಆತ ಬರುವಾಗ ಒಂದರ್ಧ ಗಂಟೆ ತಡವಾಗಿತ್ತು. ಆತ ಇನ್ನೇನು ಸ್ಮಿತಾ ತಿಳಿಸಿದ್ದ ಸ್ಥಳಕ್ಕೆ ತಲುಪುತ್ತಿದ್ದಂತೆ ಒಮ್ನಿ ಕಾರೊಂದು ಬಂದು ಅಲ್ಲಿ ನಿಂತಿತು. ಅದರಿಂದ ಇಳಿದ ಇಬ್ಬರು ವ್ಯಕ್ತಿಗಳು ಕ್ಷಣ ಮಾತ್ರದಲ್ಲಿ ಹಳದಿ ಟೀ ಶರ್ಟ್ ಧರಿಸಿದ್ದ ಯುವಕನೊಬ್ಬನನ್ನು ಎತ್ತಿ ಕಾರಲ್ಲಿ ಹಾಕಿ ಕೊಂಡೊಯ್ದದನ್ನು ಗಮನಿಸಿದ. ಅಕ್ಕ ಪಕ್ಕ ಇದ್ದವರ್ಯಾರೂ ಗಮನಿಸುವ ಮುಂಚೆನೇ ಸಿನಿಮೀಯ ಮಾದರಿಯಲ್ಲಿ ಘಟನೆ ನಡೆದಿತ್ತು. ಮಹೇಶನಿಗೆ ಇದರ ಬಗ್ಗೆ ಏನೂ ಅರ್ಥವಾಗಿರಲಿಲ್ಲ. ಆತ ತನ್ನ ಹುಡುಗಿಯ ಭೇಟಿಯ ಕಾತುರದಲ್ಲಿದ್ದ. ಸುಮಾರು ಹೊತ್ತು ಕಾದರೂ ಆಕೆಯ ಪತ್ತೆಯೇ ಇರಲಿಲ್ಲ. ಕರೆ ಮಾಡೋಣವೆಂದರೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಬಹಳಷ್ಟು ಹೊತ್ತು ಕಾದಿದ್ದ ಆತ ಸ್ಮಿತಾ ಕಾಣದಾದಾಗ ನಿರಾಸೆಯಿಂದ ಮನೆ ಕಡೆ ಹೊರಟಿದ್ದ. ಆ ನಂತರ ಆಕೆ ಯಾವುದೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಆಕೆಯ ಫೇಸ್ ಬುಕ್ ಡಿಲೀಟ್ ಆಗಿತ್ತು.
ಇಂದು ಆತನಿಗೊಂದು ಕರೆ ಬಂದಿತ್ತು. ಅದ್ಯಾವುದೋ ಗೊತ್ತಿಲ್ಲದ ನಂಬರ್. ಕರೆ ಸ್ವೀಕರಿಸಿದ ಮಹೇಶ್ ಗೆ ಆಶ್ಚರ್ಯ. ಸ್ಮಿತಾ ಯಾವುದೋ ನಂಬರ್ ನಿಂದ ಕರೆ ಮಾಡಿದ್ದಳು. ಆಕೆ ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಸಮಾಧಾನಗೊಂಡಾಗ ಆಕೆ ಹೇಳಿದ ವಿಷಯ ಕೇಳಿ ಮಹೇಶ ಬೆಚ್ಚಿ ಬಿದ್ದಿದ್ದ. ಅಂದು ಮನೆಯಲ್ಲಿ ನಡೆದ ಘಟನೆಯನ್ನು ಆಕೆ ವಿವರಿಸುತಿದ್ದಳು. ಮಹೇಶ್ ನನ್ನು ಹಳದಿ ಟೀ ಶರ್ಟ್ ಹಾಕಿ ಬರುವಂತೆ ಮನೆಯವರ ಅಣತಿಯಂತೆ ಆಕೆ ಹೇಳಿದ್ದಳು. ಅವನನ್ನು ಸುಲಭದಲ್ಲಿ ಗುರುತಿಸುವ ಉದ್ದೇಶ ಅವರದ್ದಾಗಿತ್ತು. ಮಹೇಶನನ್ನು ಮುಗಿಸುವುದೇ ಅವರ ಯೋಜನೆ. ಮನೆಯವರ ತೀವ್ರ ಕಣ್ಗಾವಲು ಇದ್ದ ಕಾರಣ ಆಕೆಗೆ ಸತ್ಯವಿಷಯ ತಿಳಿಸಲು ಸಾಧ್ಯವಾಗಿರಲಿಲ್ಲ. ಆಕೆಯ ಚಿಕ್ಕಪ್ಪ ಹಾಗೂ ಮತ್ತಿಬ್ಬರು ಬಾಡಿಗೆ ವ್ಯಕ್ತಿಗಳು ಸೇರಿ ಮಹೇಶನನ್ನು ಎತ್ತಿದ್ದಾರೆ ಎಂಬುವುದು ಆಕೆಗೆ ಹೇಗೋ ತಿಳಿದಿತ್ತು. ಮಹೇಶನನ್ನು ಎಚ್ಚರಿಕೆ ಕೊಟ್ಟು ಬಿಡಬಹುದೆಂದು ಭಾವಿಸಿದ್ದ ಆಕೆಗೆ ಅವರ ನಿಜ ಸ್ಕೆಚ್ ಅರ್ಥವಾಗಿರಲಿಲ್ಲ. ಮಹೇಶನಿಗೆ ಬಲೆ ಬೀಸಿದ್ದ ಅವರು ಬೇಟೆ ಬದಲಾಗಿತ್ತು. ಅಂದು ಅದೇ ಸ್ಥಳಕ್ಕೆ ಹಳದಿ ಟೀ ಶರ್ಟ್ ಧರಿಸಿ ಪುಸ್ತಕ ಖರೀದಿಸಲು ಬಂದಿದ್ದ ರಜತ್ ನನ್ನು ಮಹೇಶ್ ಎಂದು ಭಾವಿಸಿ ಎತ್ತಿಕೊಂಡು ಹೋಗಿದ್ದರು. ಆತನಿಗೆ ಮಾತಾಡಲೂ ಅವಕಾಶ ನೀಡದೆ ಎರ್ರಾಬಿರ್ರಿ ಥಳಿಸಿ, ಕಡೆಗೆ ಚಾಕುವಿನಲ್ಲಿ ಇರಿದಿದ್ದರು. ಆತನ ಪ್ರಾಣ ಪಕ್ಷಿ ಹಾರಿಹೋದದ್ದನ್ನು ಗಮನಿಸಿದ ಅವರು ಹೆಣವನ್ನು ರೈಲ್ವೇ ಟ್ರಾಕ್ ಬಳಿ ಎಸೆದು ಹೋಗಿದ್ದರು.
ಸ್ಮಿತಾಳಿಗೆ ಅವರ ಮಾತುಕತೆಯ ಮೂಲಕ ಮಹೇಶನನ್ನು ಕೊಲೆಮಾಡಿರುವುದು ಖಾತ್ರಿಯಾಗಿತ್ತು. ಅನೇಕ ಬಾರಿ ಪೋಲೀಸರಿಗೆ ವಿಷಯ ತಿಳಿಸಲು ಬಯಸಿದ್ದಳು. ಆದರೂ ಭಯದಿಂದ ಮೌನವಾಗಿದ್ದಳು. ಅದೊಂದು ದಿನ ಅನಾಮಿಕ ಹೆಸರಲ್ಲಿ ಮಹೇಶನ ಫೇಸ್ ಬುಕ್ ನೋಡಿದಾಗ ಆಕ್ಟಿವ್ ಇದ್ದದ್ದನ್ನು ಗಮನಿಸಿದ ಆಕೆ ಮಹೇಶ ಕೊಲೆಯಾಗಿಲ್ಲ ಎಂಬುವುದು ತಿಳಿಯಿತು. ಹಾಗಾದರೆ ಮಹೇಶ ಎಂದು ಭಾವಿಸಿ ಇನ್ನೊಬ್ಬರ ಕೊಲೆಯಾಗಿರುವುದು ಆಕೆಗೆ ಖಚಿತವಾಗಿತ್ತು. ಆಕೆ ಇದನ್ನು ಹೇಗಾದರೂ ಮಹೇಶನಿಗೆ ತಿಳಿಸಲೇ ಬೇಕೆಂದು ಬಯಸಿದ್ದಳು. ಯಾರದ್ದೋ ಫೋನಲ್ಲಿ ಮಹೇಶನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು. ಮಹೇಶನಿಗೆ ಆಕೆಯ ಮನೆಯವರ ಬಲೆಗೆ ಬೀಳದೆ ಪಾರಾದದ್ದು ನೆನೆದು ಮೈ ಜುಮ್ಮೆನಿಸಿತು.ಅಂದು ಪುಸ್ತಕದ ಅಂಗಡಿ ಬಳಿ ಯುವಕನೊಬ್ಬನನ್ನು ಎತ್ತಿಕೊಂಡು ಹೋದದ್ದು ಕಣ್ಣಮುಂದೆ ಹಾದು ಹೋಯಿತು. ಆತನೂ ನನ್ನಂತೆ ಹಳದಿ ಟೀ ಶರ್ಟ್ ತೊಟ್ಟಿದ್ದ. ಆತನ ಕಣ್ಣುಗಳು ಒದ್ದೆಯಾದವು. ಏನೇ ಆಗಲಿ ನಡೆದ ಘಟನೆಯನ್ನು ಪೋಲೀಸರಿಗೆ ತಿಳಿಸುವುದಾಗಿ ತೀರ್ಮಾನಿಸಿದ. ಇಂದು ಎಲ್ಲವನ್ನೂ ಇನ್ಸ್ ಪೆಕ್ಟರ್ ಮುಂದೆ ತಿಳಿಸಿದ್ದ. ಇನ್ಸ್ ಪೆಕ್ಟರಿಗೆ ರಜತ್ ಕೊಲೆಯ ರಹಸ್ಯ ಅರ್ಥವಾಗಿತ್ತು. ಹಾಗಾಗಿಯೇ ರೂಪಾಳನ್ನು ಕರೆಸಿ ವಿಷಯ ತಿಳಿಸಿದ್ದರು.
ಪ್ರೀತಿ ಪ್ರೇಮದ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದಿದ್ದ ಅಮಾಯಕನೊಬ್ಬ ತನ್ನದಲ್ಲದ ತಪ್ಪಿಗೆ ಬಲಿಯಾಗಿದ್ದ. ಆತನ ಇಷ್ಟದ ಹಳದಿ ಟೀ ಶರ್ಟ್ ಆತನ ಬದುಕಿನ ಅಂತ್ಯ ಬರೆದಿತ್ತು. ಕುಸಿದು ಬಿದ್ದ ರೂಪಾ ಇಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಶಾಲೆಗೆ ತೆರಳದೆ ತಿಂಗಳು ದಾಟಿದೆ. ಆಕೆ ಚೇತರಿಸಿ ಶಾಲೆಗೆ ಹೋಗಲೇಬೇಕಿದೆ. ಮನೆಯಲ್ಲಿ ಆಕೆಯನ್ನೇ ಆಶ್ರಯಿಸಿದ ಎರಡು ಜೀವಗಳಿಗಾಗಿ ಆಕೆ ಮತ್ತೆ ಎದ್ದು ನಿಲ್ಲಬೇಕಿದೆ.
ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕರು
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************
ನನ್ನ ಲೇಖನಗಳ ಸಂಗ್ರಹ (ಒಟ್ಟು62) ಪುಸ್ತಕದ ರೂಪದಲ್ಲಿ ಲಭ್ಯವಿದೆ. ಆಸಕ್ತಿಯುಳ್ಳ ಓದುಗರು ಸಂಪರ್ಕಿಸಬಹುದು....... ಯಾಕೂಬ್ ಎಸ್ ಕೊಯ್ಯೂರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ
ಮುಖ್ಯ ಶಿಕ್ಷಕರು,
ಸರಕಾರಿ ಪ್ರೌಢಶಾಲೆ ಕಾಯರ್ತಡ್ಕ
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 90089 83286
******************************************