ಮಕ್ಕಳ ಕಥೆಗಳು - ಸಂಚಿಕೆ : 02
Saturday, February 17, 2024
Edit
ಮಕ್ಕಳ ಕಥೆಗಳು
ಸಂಚಿಕೆ : 02
ಕಥೆ ರಚನೆ ಮಾಡಿರುವ ವಿದ್ಯಾರ್ಥಿಗಳು :
◾ ಪರೇಶ್ ಪಿ ಯನ್, 8ನೇ ತರಗತಿ
◾ ಅಗಸ್ತ್ಯ ಮೋಹನ, 2ನೇ ತರಗತಿ
◾ ಅಭಿನವ ವಿ, 4ನೇ ತರಗತಿ
◾ ಶ್ರೇಯಾ, 8ನೇ ತರಗತಿ
◾ ಪ್ರಾರ್ಥನ ಗೌಡ ಹೆಚ್ ಡಿ, 8ನೇ ತರಗತಿ
◾ ದಿವ್ಯ ಜ್ಯೋತಿ ಶೆಟ್ಟಿ, 7ನೇ ತರಗತಿ
ಒಂದು ಕಾಡು. ಆ ಕಾಡಿನಲ್ಲಿ ರೂಬಿ ಎನ್ನುವ ಮೊಲವಿತ್ತು. ಒಂದು ದಿನ ಅದಕ್ಕೆ ಕೇಕ್ ತಿನ್ನಬೇಕು ಎಂಬ ಆಸೆ ಆಯಿತು. ಕೇಕ್ ನ ಚಿತ್ರ ನೆನಪಾದದ್ದೇ ಅದರ ಬಾಯಲ್ಲಿ ನೀರೂರಿತು. ಏನೇ ಆಗಲಿ, ಇಂದು ಕೇಕ್ ತಿಂದೇ ಸಿದ್ದ ಎಂದು ಆಲೋಚಿಸಿತು. ತಡ ಮಾಡದೇ ತನ್ನ ಕೈಯಲ್ಲಿ ಇದ್ದ ಸ್ವಲ್ಪ ಹಣವನ್ನು ತೆಗೆದುಕೊಂಡು ಆ ಕಾಡಿನಲ್ಲಿದ್ದ ಬೇಕರಿಯತ್ತ ಹೋಯಿತು.
ಬೇಕರಿಯಲ್ಲಿ ನಾನಾ ನಮೂನೆಯ ಕೇಕ್ ಗಳನ್ನು ಕಂಡು ಅದಕ್ಕೆ ಖುಷಿಯಾಯಿತು. ಆದರೆ ಅದರ ಬಳಿಯಿದ್ದ ಹಣಕ್ಕೆ ಒಂದು ಸಣ್ಣ ಕಪ್ ಕೇಕ್ ಮಾತ್ರ ದೊರಕಿತು. ಅಷ್ಟಾದರೂ ಸಿಕ್ಕಿತಲ್ಲ ಎಂದು ಅದನ್ನು ತೆಗೆದುಕೊಂಡಿತು. ಆಸೆಯಿಂದ ನೋಡುತ್ತ ರೂಬಿ ಮೊಲವು ಮೆಲ್ಲನೆ ಮನೆಯ ಕಡೆಗೆ ನಡೆಯತೊಡಗಿತು.
ಅದೇ ಸಮಯಕ್ಕೆ ಸರಿಯಾಗಿ ಆ ದಾರಿಯಲ್ಲಿ ಜಂಬೋ ಎನ್ನುವ ಕರಡಿ ಬಂದಿತು. ರೂಬಿ ಮೊಲದ ಕೈಯಲ್ಲಿ ಇದ್ದ ಕೇಕ್ ಅನ್ನು ನೋಡಿತು. ರೂಬಿಯನ್ನು ಗದರಿಸಿ ಆ ಕಪ್ ಕೇಕ್ ಅನ್ನು ಜಂಬೂ ಕರಡಿ ಕಸಿದುಕೊಂಡಿತು. ತಾನು ಆಸೆಪಟ್ಟು ಖರೀದಿಸಿದ ಕೇಕ್ ಅನ್ನು ಕಬಳಿಸಿದ ಜಂಬೂವನ್ನು ನೋಡಿ ರೂಬಿ ಮೊಲ ಅಳಲಾರಂಭಿಸಿತು.
ದೂರದಿಂದ ವಿಂಕಿ ಎನ್ನುವ ದಯಾಳು ಕಾಗೆ ಅದನ್ನೆಲ್ಲ ನೋಡುತ್ತಿತ್ತು. ಅದಕ್ಕೆ ಅಳುತ್ತಿದ್ದ ರೂಬಿ ಮೊಲವನ್ನು ನೋಡಿ ಕರುಣೆಯುಕ್ಕಿತು. ರೂಬಿ ಮೊಲಕ್ಕೆ ಸಹಾಯ ಮಾಡಬೇಕೆಂದು ನಿರ್ಧರಿಸಿತು. ಅದು ಮೆಲ್ಲನೆ ಜಂಬೋ ಕರಡಿಯ ಹಿಂದಿನಿಂದ ಬಂದು ಅದರ ಕಿವಿಗೆ ಜೋರಾಗಿ ಕುಕ್ಕಿತು. ಆಗ ನೋವಿನಿಂದ ಜಂಬೋ ಕರಡಿ ಬೊಬ್ಬೆ ಹೊಡೆಯಿತು.
ಆಗ ಜಂಬೂವಿನ ಕೈಯಲ್ಲಿದ್ದ ಕಪ್ ಕೇಕ್ ಜಾರಿ ಬೀಳುವಂತಾಯಿತು. ಇನ್ನೇನು ಅದು ಕೆಳಗೆ ಬೀಳಬೇಕು ಅನ್ನುವಷ್ಟರಲ್ಲಿ ವಿಂಕಿ ಕಾಗೆ ಹಾರಿ ಹೋಗಿ ಅದನ್ನು ತನ್ನ ಕೊಕ್ಕಿನಲ್ಲಿ ಕಚ್ಚಿ ತಂದು ರೂಬಿ ಮೊಲಕ್ಕೆ ಕೊಟ್ಟಿತು. ಇದರಿಂದ ರೂಬಿ ಮೊಲಕ್ಕೆ ಬಹಳ ಸಂತೋಷವಾಯಿತು. ರೂಬಿ ವಿಂಕಿ ಕಾಗೆಗೆ ಧನ್ಯವಾದ ಹೇಳಿತು. ಜೊತೆಗೆ ಒಂದು ಸಣ್ಣ ತುಂಡು ಕೇಕ್ ಅನ್ನು ವಿಂಕಿಗೆ ನೀಡಿತು. ಅಂದಿನಿಂದ ಅವೆರಡೂ ಆತ್ಮೀಯ ಗೆಳೆಯರಾದವು.
8ನೇ ತರಗತಿ
ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ
ಹನುಮಗಿರಿ, ಈಶ್ವರಮಂಗಲ
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಒಂದು ಕಾಡಿತ್ತು. ಆ ಕಾಡಿನಲ್ಲಿ ಬನ್ನಿ ಎನ್ನುವ ಹೆಸರಿನ ಮೊಲವಿತ್ತು. ಅದು ಪ್ರತಿದಿನ ಸಂಜೆ ತನ್ನ ಗೆಳೆಯರೊಡನೆ ಆಟವಾಡಲು ಹೋಗುತ್ತಿತ್ತು. ಒಂದು ದಿನ ಆಟವಾಡಿ ಮನೆಗೆ ಬರುವಾಗ ದಾರಿಯಲ್ಲಿ ರಾಕಿ ಎನ್ನುವ ನರಿಯೊಂದು ಎದುರಾಯಿತು. ಮೊಲವನ್ನು ಕಂಡ ರಾಕಿ ಓಡಿಬಂದು ಹಿಡಿದುಕೊಂಡಿತು.
ಹೆದರಿದ ಬನ್ನಿ ಮೊಲ ಕಾಪಾಡಿ ಕಾಪಾಡಿ ಎಂದು ಬೊಬ್ಬೆ ಹಾಕಿತು. ಅಲ್ಲೇ ಹತ್ತಿರದಲ್ಲಿ ಒಂದು ಮಾವಿನ ಮರವಿತ್ತು. ಆ ಮರದಲ್ಲಿದ್ದ ಮೋನು ಕೋತಿಗೆ ಬನ್ನಿ ಮೊಲದ ಕೂಗು ಕೇಳಿಸಿತು. ಏನೆಂದು ಕೆಳಗೆ ನೋಡಿದಾಗ ರಾಕಿ ನರಿಯ ಕೈಯಲ್ಲಿ ಇರುವ ಬನ್ನಿ ಕಂಡಿತು. ಬನ್ನಿಯನ್ನು ನೋಡಿ ಮೋನು ಮಂಗನಿಗೆ ಬೇಸರವಾಯಿತು.
ತಕ್ಷಣವೇ ಅದಕ್ಕೊಂದು ಉಪಾಯ ಹೊಳೆಯಿತು. ಮರದಲ್ಲಿದ್ದ ಮಾವಿನ ಹಣ್ಣನ್ನು ತೆಗೆದು ನರಿಯ ತಲೆಯ ಮೇಲೆ ಬಿಸಾಡಿತು. ಅಯ್ಯೋ ಎಂದು ನೋವಿನಿಂದ ನರಿಯು ತನ್ನ ತಲೆಯನ್ನು ಉಜ್ಜಲಾರಂಭಿಸಿತು. ಅದೇ ಸಮಯ ನೋಡಿ ಬನ್ನಿ ಮೊಲ ನರಿಯ ಕೈಯಿಂದ ತಪ್ಪಿಸಿ ಓಡಿತು. ತನ್ನ ಜೀವ ಉಳಿಸಿದ ಮೋನು ಕೋತಿಗೆ ಧನ್ಯವಾದ ಹೇಳಿತು.
2ನೇ ತರಗತಿ
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ ನರಿಮೊಗರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಒಂದಾನೊಂದು ಕಾಡಿನಲ್ಲಿ ಒಂದು ಮೊಲವಿತ್ತು. ಅದರ ಹೆಸರು ಚಿಂಟು. ಒಂದು ದಿನ ಅದು ಚೆಂಡಾಟವಾಡುತ್ತಾ ಕಾಡಿನಲ್ಲಿದ್ದ ಸಣ್ಣ ಕೊಳದ ಬಳಿ ಬಂದಿತು. ಇದ್ದಕ್ಕಿದ್ದಂತೆ ಅದರ ಚೆಂಡು ಕೊಳದ ಒಳಗೆ ಬಿದ್ದಿತು. ತನ್ನ ಬಣ್ಣದ ಚೆಂಡು ನೀರಿನ ಒಳಗೆ ಬಿದ್ದದ್ದು ಕಂಡು ಚಿಂಟುವಿಗೆ ಬೇಸರವಾಯಿತು. "ಅಯ್ಯೋ ನನ್ನ ಚೆಂಡು ಕೊಳಕ್ಕೆ ಬಿದ್ದಿತು. ಹಾಳಾಯಿತು" ಎಂದು ಅದು ಅತ್ತಿತು.
ಕೊಳದ ಬಳಿ ಸಾಗುತ್ತಿದ್ದ ಜಂಬೂ ಆನೆಗೆ ಚಿಂಟು ಅಳುತ್ತಿರುವುದು ಕೇಳಿಸಿತು. ಕೊಳದ ಬಳಿಗೆ ಬಂದ ಜಂಬೂ "ಏನಾಯಿತು? ಯಾಕೆ ಅಳುತ್ತಿದ್ದಿ" ಎಂದು ಕೇಳಿತು. ಅದಕ್ಕೆ ಚಿಂಟು ಮೊಲ "ನಾನು ಆಟ ಆಡಿಕೊಂಡು ಬರುತ್ತಿದ್ದೆ. ಆಗ ನನ್ನ ಚೆಂಡು೧
ಕೊಳಕ್ಕೆ ಬಿದ್ದಿತು. ಅದನ್ನು ತೆಗೆಯುವು'.ದು ಹೇಗೆ ಎಂದು ಗೊತ್ತಾಗುತ್ತಿಲ್ಲ" ಎಂದು ಹೇಳಿತು.
ಅದಕ್ಕೆ ಜಂಬೂ "ಮೊಲ ಅದಕ್ಕೆ ಯಾಕೆ ಚಿಂತೆ ಮಾಡುತ್ತೀಯಾ? ನಾನು ಅದನ್ನು ತೆಗೆದುಕೊಡುತ್ತೇನೆ" ಎಂದು ಹೇಳಿತು. ಕೊಳಕ್ಕೆ ಇಳಿದ ಆನೆ ತನ್ನ ಸೊಂಡಿಲಿನ ಸಹಾಯದಿಂದ ಚಿಂಟುವಿನ ಚೆಂಡನ್ನು ತೆಗೆದುಕೊಟ್ಟಿತು. ಚಿಂಟುವಿಗೆ ತುಂಬಾ ಖುಷಿಯಾಯಿತು. ಜಂಬೂ ಆನೆಗೆ ಧನ್ಯವಾದ ಹೇಳಿ ಸಂತೋಷದಿಂದ ಚೆಂಡು ಆಟವಾಡುತ್ತಾ ಅಲ್ಲಿಂದ ಹೋಯಿತು.
4ನೇ ತರಗತಿ
ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆ
ನರಿಮೊಗರು
ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
ಈ ಜಗತ್ತಿನಲ್ಲಿ ಅನೇಕ ಸಂಬಂಧಗಳಿವೆ. ಅಣ್ಣ -ತಂಗಿ ಸಂಬಂಧ, ಅಪ್ಪ ಮಗಳ ಸಂಬಂಧ, ಅಮ್ಮ ಮಗನ ಸಂಬಂಧ, ಅಕ್ಕ ತಮ್ಮನ ಸಂಬಂಧ ಹೀಗೆ ಅನೇಕ ಸಂಬಂಧಗಳು ಈ ಜಗತ್ತಿನಲ್ಲಿ ಹಿಂದಿನಿಂದಲೇ ಹುಟ್ಟಿಕೊಂಡಿವೆ. ಆದರೆ ಇತ್ತೀಚಿಗೆ ಆಸ್ತಿಯ ಪಾಲಿನಿಂದ, ಜಗಳದಿಂದ, ಒರಟಾದ ಮಾತಿನಿಂದ ಸಂಬಂಧಗಳು ಕುಸಿದುಹೋಗುತ್ತಿದೆ. ತಂಗಿಗೆ ಜೀವವನ್ನೇ ಕೊಡುವ ಅಣ್ಣಂದಿರು ಈಗ ತಂಗಿಯನ್ನು ಕೀಳಾಗಿ ನೋಡುತ್ತಿದ್ದಾರೆ. ಅಪ್ಪ ಅಮ್ಮನಿಗೋಸ್ಕರ ಪ್ರಾಣ ಬಿಡುವ ಮಕ್ಕಳು ಈಗ ಅಪ್ಪ ಅಮ್ಮನನ್ನು ವ್ರದ್ಧಾಶ್ರಮಕ್ಕೆ ಬಿಟ್ಟುಬರುತ್ತಿದ್ದಾರೆ. ಹೀಗೆ ಸಂಬಂಧಗಳು ದೂರವಾಗುತ್ತಿದೆ. ಸ್ನೇಹಿತರೇ, ಈಗ ನಾನು ಸಂಬಂಧಗಳ ಬಗ್ಗೆ ಒಂದು ಸಣ್ಣ ಕಥೆಯನ್ನು ಹೇಳುತ್ತೇನೆ....
ಒಂದು ಸಣ್ಣ ಹಳ್ಳಿಯ ಒಂದು ಮನೆಯಲ್ಲಿ ಒಬ್ಬಳು ಹೆಂಗಸಿದ್ದಳು. ಅವಳಿಗೆ ಇಬ್ಬರು ಗಂಡುಮಕ್ಕಳು. ಒಬ್ಬನ ಹೆಸರು ವಿಕಾಸ್. ಇನ್ನೊಬ್ಬನ ಹೆಸರು ಮಹೇಶ್. ಅವಳು ಮೊದಲ ಮಗ ಅಂದರೆ ವಿಕಾಸನನ್ನು ಹುಟ್ಟಿದಾಗಲೇ ಅಪ್ಪನ ಜೊತೆ ಕಳಿಸಿಕೊಟ್ಟಳು. ಅನಂತರ ಅವಳು ಮಹೇಶನನ್ನು ಮಾತ್ರ ಸಾಕತೊಡಗಿದಳು. ವಿಕಾಸ ನಿಗೆ ತಾಯಿ ಪ್ರೀತಿ ಸಿಗಲಿಲ್ಲ. ಮಹೇಶ್ ಗೆ ತಂದೆ ಪ್ರೀತಿ ಸಿಗಲಿಲ್ಲ. ವಿಕಾಸ್ ಬೆಳೆದು ದೊಡ್ಡವನಾದಾಗ ಅಪ್ಪ ತೀರಿಕೊಂಡರು. ವಿಕಾಸ್ ಅಮ್ಮನ ಮನೆಗೆ ಹೋಗಲಿಲ್ಲ. ಏಕೆಂದರೆ ಅಮ್ಮನ ಮನೆ ಎಲ್ಲಿ ಅಂತಾನೆ ಅವನಿಗೆ ಗೊತ್ತಿರಲಿಲ್ಲ. ಹೀಗಾಗಿ ಅವನು ಒಳ್ಳೆಯ ಹುಡುಗಿಯನ್ನು ಆರಿಸಿಕೊಂಡು ಮದುವೆ ಆದನು. ಈ ಕಡೆ ಮಹೇಶ್ ಕೂಡ ಮದುವೆ ಆದನು. ಒಂದು ದಿನ ಮಹೇಶ್ ವಿಕಾಸ್ ಇರುವ ಊರಿಗೆ ಕೆಲಸ ಹುಡುಕಲು ಹೊರಟಿದ್ದನು. ಮಹೇಶ್ ಹತ್ತಿದ್ದ ಬಸ್ಸಲ್ಲೆ ವಿಕಾಸ್ ಕುಳಿತ್ತಿದ್ದನು. ಇಬ್ಬರು ಅಕ್ಕ ಪಕ್ಕ ಕುಳಿತ್ತಿದ್ದರು. ಇಬ್ಬರೂ ಮಾತನಾಡುತ್ತಾ ಪ್ರಯಾಣ ಮಾಡಿದರು. ಮಾತಾಡ್ತಾ ಮಾತಾಡ್ತಾ ಇಬ್ಬರೂ ಸ್ನೇಹಿತರಾದರು. ಪಾಪ ಇಬ್ಬರಿಗೂ ತಾವು ಅಣ್ಣ ತಮ್ಮಂದಿರು ಎಂದು ಗೊತ್ತಿರಲಿಲ್ಲ. ಒಂದು ದಿವಸ ವಿಕಾಸ್ ಮಹೇಶನನ್ನು ಕರೆದು ನಮ್ಮ ಮನೆಗೆ ಕರೆದುಕೊಂಡು ಹೋಗುತ್ತೇನೆ. ನಮ್ಮ ಮನೆಯಲ್ಲಿ ಒಂದು ದಿವಸ ಇದ್ದು ಹೋಗು ಎಂದು ಹೇಳುತ್ತಾನೆ. ಮಹೇಶ್ ಎಷ್ಟೇ ಬೇಡ ಬೇಡ ಎಂದರೂ ವಿಕಾಸ್ ಒತ್ತಾಯ ಮಾಡುತಿದ್ದನು. ಇನ್ನೇನು ಮಾಡುವುದು ಎಂದು ಮಹೇಶ್ ವಿಕಾಸನ ಮನೆಗೆ ಹೋದನು. ಮನೆ ಅಂಗಳದಲ್ಲಿ ವಿಕಾಸ್ ತಾಯಿ ಕುಳಿತ್ತಿದ್ದರು. ಮಹೇಶ್ ಮುಖ ನೋಡಿ ಅವನ ನಡಿಗೆ, ಮಾತು ನೋಡಿ ಇವನು ತನ್ನ ಮಗನೆ ಎಂದು ಅವಳಿಗೆ ಗೊತ್ತಾಯಿತು. ಅವಳು ವಿಕಾಸಗೆ ಹೇಳಿದಳು "ವಿಕಾಸ್ ಇವನು ನಿನ್ನ ತಮ್ಮ ಎಂದು ಹಿಂದೆ ನಡೆದುದನ್ನು ಹೇಳಿದಳು. ವಿಕಾಸ್ ಗೆ ಆಶ್ಚರ್ಯವಾಯಿತು. ಹಾಗೆ ಸಂತೋಷವು ಆಯಿತು. ಇಬ್ಬರೂ ಅಪ್ಪಿಕೊಂಡರು. ಇಬ್ಬರಿಗೂ ಖುಷಿಯಾಯಿತು. ಹೀಗೆ ಕೆಲವು ತಿಂಗಳ ನಂತರ ಅವರಿಬ್ಬರ ತಾಯಿ ತೀರಿಕೊಂಡಳು. ಇದನ್ನು ಕೇಳಿದ ವಿಕಾಸ್ ಮತ್ತು ಮಹೇಶನ ಕಣ್ಣಲ್ಲಿ ನೀರು ಸುರಿಯಿತು. ಮನೆಯೆಲ್ಲಾ ಖಾಲಿ ಖಾಲಿಯಾಯಿತು. ಸ್ವಲ್ಪ ದಿವಸ ಆದ ಮೇಲೆ ಇಬ್ಬರೂ ತಮ್ಮ ತಮ್ಮ ಹೆಂಡತಿಯನ್ನು ಕರೆದುಕೊಂಡು ಬಂದು ಖುಷಿಯಿಂದ ಜೀವನ ಸಾಗಿಸಿದರು.
ಕೇಳಿದಿರಲ್ಲ ಸ್ನೇಹಿತರೆ ಕೆಲವೊಮ್ಮೆ ಹೀಗೂ ಸಂಬಂಧಗಳು ಹುಟ್ಟಿನಿಂದಲೇ ದೂರವಾಗಿ ಅನಂತರ ಹತ್ತಿರವಾಗುತ್ತದೆ. ಇನ್ನು ಕೆಲವು ಸಂಬಂಧಗಳು ಹುಟ್ಟಿನಿಂದ ಒಳ್ಳೆ ರೀತಿಯಲ್ಲಿದ್ದು ಅನಂತರ ದೂರವಾಗುತ್ತದೆ. ಏನನ್ನಾದರೂ ದೂರಮಾಡಿ ಆದರೆ ಯಾವತ್ತೂ ಸಂಬಂಧ ಮತ್ತು ಸ್ನೇಹಿತರನ್ನು ಕಳೆದುಕೊಳ್ಳಬೇಡಿ. ಸಂಬಂಧ ಅನ್ನೋದು ಹೂವಿನ ತರ. ಅರಳುವಾಗ ಸುವಾಸನೆಯಿಂದ ಅರಳುತ್ತದೆ ಆದರೆ ಬಾಡುವಾಗ ದುರ್ವಾಸನೆಯಿಂದ ಬಾಡಿ ಹೋಗುತ್ತದೆ.
8ನೇ ತರಗತಿ
ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ
ಬ್ರಹ್ಮಾವರ, ಉಡುಪಿ ಜಿಲ್ಲೆ
*******************************************
ಒಂದು ಊರಲ್ಲಿ ಒಂದು ಆಲದಮರ ಹಲಸಿನ ಹಣ್ಣುಗಳನ್ನು ಬಿಡುತ್ತಿತ್ತು. ಆ ಮರದ ಮಾಲೀಕ ಆ ಹಣ್ಣುಗಳನ್ನು ಅಲ್ಲಿನ ಜನರಿಗೆ ದುಪ್ಪಟ್ಟು ಹಣಕ್ಕೆ ಮಾರಾಟ ಮಾಡುತಿದ್ದ. ನನ್ನ ಈ ಹಲಸಿನ ಹಣ್ಣುಗಳು ಆಲದ ಮರದಲ್ಲಿ ಬಿಡುತಿದ್ದು, ಈ ಹಣ್ಣುಗಳನ್ನು ತಿಂದರೆ ಹಲವು ಕಾಯಿಲೆ ಗಳು ವಾಸಿ ಆಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದ. ಹಾಗೆಯೇ ಜನರು ಸಹ ಹಿಂದೆ ಮುಂದೆ ನೋಡದೆ ದುಪ್ಪಟ್ಟು ಹಣ ನೀಡಿ ಕೊಂಡು ಕೊಳುತ್ತಿದ್ದರು. ಹಲಸಿನ ಹಣ್ಣು ಬಿಡುವ ಆ ಆಲದ ಮರವನ್ನು ಎಲ್ಲರೂ ಕುತೂಹಲದಿಂದ ಹೋಗಿ ನೋಡುತಿದ್ದರು. ಹೀಗಿರುವಾಗ ಒಮ್ಮೆ ಆ ವ್ಯಕ್ತಿ ಎಂದಿನಂತೆ ಹಣ್ಣುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುತಿದ್ದ. ಆ ರಸ್ತೆಯಲ್ಲಿ ಪ್ರಯಾಣ ಮಾಡುತಿದ್ದ ಕೃಷಿ ತಜ್ಞರು ಹಲಸಿನ ಹಣ್ಣು ಗಳನ್ನು ಕಂಡು ಅವರಿಗೂ ತಿನ್ನುವಂತೆ ಆಸೆ ಆಯಿತು. ತಮ್ಮ ಕಾರನ್ನು ನಿಲ್ಲಿಸಿ ಹಣ್ಣು ಮಾರುತಿದ್ದ ವ್ಯಕ್ತಿ ಹತ್ತಿರ ವ್ಯಾಪಾರ ಮಾಡಲು ನಿಂತರು. ಆಗ ಅವನು ತನ್ನ ಹಣ್ಣಿನ ಮಹತ್ವ ಹೇಳಿ ದುಬಾರಿ ಬೆಲೆ ಹೇಳುತ್ತಾನೆ. ಮೊದಲೇ ಕೃಷಿ ತಜ್ಞರು ಆಗಿದ್ದ ಇವರಿಗೆ ಅನುಮಾನ ಕಾಡಲು ಶುರುವಾಯಿತು. ಕೂಡಲೇ ಆ ಮರವನ್ನು ತೋರಿಸಲು ಹೇಳಿದರು. ಆಗ ಆ ವ್ಯಕ್ತಿ ಮರದ ಬಳಿಗೆ ಕರೆದುಕೊಂಡು ಹೋಗಿ ಹಲಸಿನ ಹಣ್ಣು ಬಿಡುತಿದ್ದ ಆ ಆಲದ ಮರವನ್ನು ತೋರಿಸುತ್ತಾನೆ. ಕೃಷಿ ತಜ್ಞರು ಆ ಆಲದ ಮರವೇರಿ ಸೂಕ್ಷ್ಮ ವಾಗಿ ಪರೀಕ್ಷೆ ಮಾಡಿದರು. ಆಗ ಗುಟ್ಟು ರಟ್ಟಾಯಿತು, ಯಾವುದೊ ಹಕ್ಕಿ ಯೊಂದು ಹಲಸಿನ ಹಣ್ಣನ್ನು ತಿಂದು ಬೀಜವನ್ನು ಆಲದ ಮರದ ಪೊಟರೆಯಲ್ಲಿ ಬೀಳಿಸಿದ್ದು ಅದು ಹಲಸಿನ ಮರವಾಗಿ ಹುಟ್ಟಿ ಬೆಳೆದಿತ್ತು. ಆಲದ ಮರದೊಟ್ಟಿಗೆ ಬೆಳೆದು, ಆಲದ ಮರದೊಂದಿಗೆ ಸೇರಿಕೊಂಡಿತ್ತು. ಮರದ ಹತ್ತಿರ ನಿಂತು ನೋಡಿದರೆ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಎಲ್ಲವನ್ನೂ ಅತೀ ಸೂಕ್ಷ್ಮ ವಾಗಿ ಪರಿಶೀಲಿಸಿದ ಕೃಷಿ ತಜ್ಞರು ವಿಷಯ ವನ್ನು ಅಲ್ಲೇ ಇದ್ದ ಸ್ಥಳೀಯರಿಗೆ ವಿವರವಾಗಿ ತಿಳಿಸಿ ಮೋಸ ಹೋಗದಂತೆ ಎಚ್ಚರಿಕೆ ನೀಡಿ ಹೊರಟು ಹೋದರು. ಈ ವಿಷಯ ವ್ಯಾಪಾರಿಗೆ ಗೊತ್ತಿದ್ದರೂ ಯಾರಿಗೂ ಹೇಳದೆ ಮೋಸದಿಂದ ಹಣಗಳಿಸುತಿದ್ದ. ಈ ಕಥೆಯ ಸಾರಾಂಶ ಇಷ್ಟೇ ನಾವು ಕಣ್ಣಾರೆ ಕಂಡರೂ ಪ್ರಮಾಣಿಸಿ ನೋಡಬೇಕು.
8ನೇ ತರಗತಿ
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಬ್ಯಾಕರವಳ್ಳಿ (ಸಕ್ಲೇಶಪುರ), ಹಾಸನ ಜಿಲ್ಲೆ
******************************************
ಒಂದು ಕಾಡಂಚಿನ ಗ್ರಾಮ. ಆ ಗ್ರಾಮದಲ್ಲಿ ಒಬ್ಬ ಬೇಟೆಗಾರನಿದ್ದ. ಆ ಬೇಟೆಗಾರ ಪ್ರಾಣಿಗಳನ್ನು ಬೇಟೆ ಆಡಲು ಒಂದು ನಾಯಿಯನ್ನು ಸಾಕಿದ್ದ. ಬೇಟೆಗಾರ ನಾಯಿಯೊಂದಿಗೆ ಕಾಡಿಗೆ ಹೋಗಿ ಪ್ರಾಣಿಗಳನ್ನು ಬೇಟೆಯಾಡಿ ಸಿಕ್ಕ ಪ್ರಾಣಿಗಳ ಮಾಂಸವನ್ನು ಆಹಾರವಾಗಿ ಬಳಸುತಿದ್ದನು. ಇವನು ಸಾಕಿದ್ದ ನಾಯಿ ಬಹಳ ಮೋಸಗಾರ ನಾಯಿ ಆಗಿತ್ತು. ಅದೇ ಕಾಡಿನಲ್ಲಿ ಒಂದು ನರಿ ವಾಸವಾಗಿತ್ತು. ನರಿ ಮತ್ತು ಬೇಟೆಗಾರನ ಮೋಸಗಾರ ನಾಯಿ ಒಳ್ಳೆಯ ಸ್ನೇಹಿತರಾಗಿದ್ದರು. ಇವರು ಆಗಾಗ ಭೇಟಿ ಮಾಡುತಿದ್ದರು. ಪರಸ್ಪರ ಕಷ್ಟ ಸುಖ ಹಂಚಿಕೊಳ್ಳುತ್ತಿದ್ದರು. ಹೀಗೆ ಜೀವನ ನಡೆಯುತ್ತಿತ್ತು. ಹೀಗಿರುವಾಗ ಇದ್ದಕಿದ್ದಂತೆ ಕಾಡಿನಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆ ಆಗ ತೊಡಗಿತು. ಎಷ್ಟರ ಮಟ್ಟಿಗೆ ಎಂದರೆ ಬೇಟೆಯಾಡಲು ಪ್ರಾಣಿಗಳೇ ಇಲ್ಲವೆಂಬಂತೆ ಆಯಿತು. ಬೇಟೆಗಾರ ಹಾಗೂ ಅವನ ಮೋಸಗಾರ ನಾಯಿಗೆ ಹೊಟ್ಟೆ ತುಂಬಿಸಿಕೊಳ್ಳೋದು ಕಷ್ಟ ಆಗಿ ಹೋಯಿತು. ಬುದ್ದಿವಂತ ನರಿ ಮಾತ್ರ ಹೇಗಾದ್ರು ಮಾಡಿ ಒಂದಾದ್ರು ಕೋಳಿಯನ್ನು ಹಿಡಿದು ತಿಂದು ಹೊಟ್ಟೆ ತುಂಬಿಸಿಕೊಳ್ಳುತಿತ್ತು. ಒಮ್ಮೆ ನಾಯಿ ನರಿಯ ಬಳಿಗೆ ಹೋಗಿ ನೀನು ಬೇಟೆಯಾಡಿದ ಕೋಳಿಯಲ್ಲಿ ನನಗೂ ಪಾಲು ನೀಡುವಂತೆ ಕೇಳಿತು. ಆಗ ನರಿ ಇದಕ್ಕೆ ಒಪ್ಪಲಿಲ್ಲ. "ಈಗ ಕಾಡಿನಲ್ಲಿ ಮೊದಲೇ ಪ್ರಾಣಿಗಳು ಸಿಗುತ್ತಿಲ್ಲ. ಸಿಗೋ ಸಣ್ಣ ಪುಟ್ಟ ಕಾಡು ಕೋಳಿಗಳು ನನಗೆ ಸಾಲುತ್ತಿಲ್ಲ. ನಿನಗೆ ಎಲ್ಲಿಂದ ಕೊಡಲಿ" ಎಂದು ಹೇಳಿತು. ಆಗ ನಾಯಿಗೆ ಬಹಳ ಕೋಪ ಬಂದಿತು. ಮೊದಲೇ ಸರಿಯಾಗಿ ಹೊಟ್ಟೆಗೆ ಆಹಾರ ಬೇರೆ ಇಲ್ಲ, ನಾಯಿಯು ಮನಸಿನಲ್ಲಿ ಅಂದು ಕೊಂಡಿತು.... ಈ ನರಿಗೆ ಬುದ್ಧಿಕಲಿಸಲೇ ಬೇಕು ಎಂದು ಹೊರಟು ಹೋಯಿತು. ಮುಂದಿನ ದಿನ ಬೇಟೆಗೆಂದು ನಾಯಿಯು ಹೋಗುತ್ತಿರುವಾಗ ಅದೇ ದಾರಿಯಲ್ಲಿ ಸ್ನೇಹಿತ ನರಿಯು ಬಲಿಷ್ಠ ಕೋಳಿಯೊಂದನ್ನ ಬೇಟೆಯಾಡಿ ತಿನ್ನಲು ತಯಾರಿ ನಡೆಸುತಿತ್ತು. ಇದನ್ನು ಕಂಡ ನಾಯಿ ಹೇಗಾದರೂ ಮಾಡಿ ಆ ಕೋಳಿಯನ್ನ ನರಿಯಿಂದ ಪಡೆಯಲೇ ಬೇಕೆಂದು ಯೋಚನೆ ಮಾಡಲು ತೊಡಗಿತು. ತಕ್ಷಣವೇ ಒಂದು ಒಂದು ವಿಷಯ ನೆನಪಿಗೆ ಬರುತ್ತದೆ. ತಾನು ಮನೆಯಿಂದ ಹೊರಗಡೆ ಬರುವಾಗ ತನ್ನ ಮಾಲೀಕ ಮನೆಗೆ ಬಣ್ಣ ಹಚ್ಚುತ್ತಿದ್ದುದು... ತಕ್ಷಣವೇ ನಾಯಿಯು ನರಿಯ ಬಳಿಗೆ ಹೋಗಿ ಗೆಳೆಯ ನೀನು ಈ ಕೊಬ್ಬಿದ ಕೋಳಿಯನ್ನ ನನಗೆ ಕೊಟ್ಟರೆ, ನಿನಗೆ ಸುಂದರ ಪಾದರಕ್ಷೆ ನೀಡೋದಾಗಿ ಹೇಳಿತು. ಆಗ ನರಿಗೆ ಪಾದರಕ್ಷೆ ಮೇಲೆ ವ್ಯಾಮೋಹ ಉಂಟಾಯಿತು. ಹಾಗೆಯೇ ಬಣ್ಣ ಬಣ್ಣದ ಪಾದರಕ್ಷೆ ಬಗ್ಗೆ ಆಸೆಯಿಂದ ಆ ಕೋಳಿಯನ್ನ ನಾಯಿಗೆ ಕೊಡಲು ಒಪ್ಪಿಕೊಂಡಿತು. ಆದರೆ ಮೊದಲು ಬಣ್ಣದ ಪಾದರಕ್ಷೆ ನೀಡಲು ಹೇಳಿತು. ಸರಿ ಎಂದು ನಾಯಿಯು ನರಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಯಿತು. ತನ್ನ ಮಾಲೀಕ ರೆಡಿಮಾಡಿ ಇಟ್ಟಿದ್ದ ಬಣ್ಣದೊಳಗೆ ತನ್ನ ನಾಲ್ಕು ಕಾಲುಗಳನ್ನು ಹಾಕಿ ಹೊರತೆಗಿಯಲು ಹೇಳಿತು ನರಿಯು ನಾಯಿ ಹೇಳಿದಂತೆ ಮಾಡಿತು. ನರಿಗೆ ಆಶ್ಚರ್ಯ ತನ್ನ ನಾಲ್ಕು ಕಾಲು ಗಳು ಬಣ್ಣ ಬಣ್ಣ ವಾಗಿ ಹೊಳೆಯುತ್ತಿದ್ದವು. ಕುಶಿಯಿಂದ ಓಡಲು ಪ್ರಾರಂಭಿಸಿತು. ಈ ಕಡೆ ನಾಯಿ ಮತ್ತು ಅದರ ಮಾಲೀಕ ನರಿ ನೀಡಿದ ಕೋಳಿಯನ್ನು ಬೇಯಿಸಿ ಕುಶಿಯಿಂದ ತಿಂದು ಹೊಟ್ಟೆ ತುಂಬಿಸಿಕೊಂಡರು. ಆಕಡೆ ನರಿಯು ಸಂತೋಷದಿಂದ ಓಡುತ್ತಲೇ ಇತ್ತು. ಒಮ್ಮೆಲೇ ಒಂದು ನದಿ ಅಡ್ಡ ಬಂದಿತು. ನರಿಯು ಅದನ್ನು ಈಜಿ ದಡಸೇರಿ ತನ್ನ ಕಾಲುಗಳನ್ನ ನೋಡಿಕೊಂಡರೆ ನೀರಿನಲ್ಲಿ ಬಣ್ಣವೆಲ್ಲ ತೊಳೆದು ಹೋಗಿತ್ತು. ನರಿಗೆ ಆಗ ಅರಿವಾಯಿತು. ಇದು ನಕಲಿ ಪಾದರಕ್ಷೆ ಎಂದು. ಈ ಕಡೆ ಕೋಳಿಯು ಇಲ್ಲ, ಪಾದರಕ್ಷೆನೂ ಇಲ್ಲ. ಜೊತೆಗೆ ಹಸಿವು ಬೇರೆ. ನರಿಗೆ ನಾಯಿ ಮಾಡಿದ ಮೋಸ ಅರಿವಾಗಿತ್ತು. ಬೇಸರದಿಂದ ಮುಂದೆ ಹೋಯಿತು.
8ನೇ ತರಗತಿ
ಮೊರಾರ್ಜಿ ದೇಸಾಯಿ ವಸತಿ ಶಾಲೆ
ಬ್ಯಾಕರವಳ್ಳಿ (ಸಕ್ಲೇಶಪುರ), ಹಾಸನ ಜಿಲ್ಲೆ
******************************************
ಒಂದು ಊರಲ್ಲಿ ಒಬ್ಬ ಭಿಕ್ಷುಕನಿದ್ದನು. ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹಾಗಾಗಿ ಅವನಿಗೆ ಈ ಹಸಿರಾದ ಜಗತ್ತನ್ನು ನೋಡಲು ಅವಕಾಶ ಸಿಗಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಒಂದು ದಿನ ಅವನು ಭಿಕ್ಷೆ ಎತ್ತುತ್ತಿದ್ದ ರಸ್ತೆಯಲ್ಲಿ ಒಬ್ಬ ಯುವಕ ಬರುತ್ತಿದ್ದನು. ಅವನ ಹತ್ತಿರ ಒಬ್ಬ ಮುದುಕ ಬಂದ. ಅವನ ಹತ್ತಿರ ಒಂದು ಭಾರವಾದ ಪೆಟ್ಟಿಗೆ ಇತ್ತು. ಆದರೆ ಅವನಿಗೆ ವಯಸ್ಸಾಗಿರುವುದರಿಂದ ಅವನಿಗೆ ಆ ಪೆಟ್ಟಿಗೆಯನ್ನು ಎತ್ತಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಅವನು ಆ ಯುವಕನ ಹತ್ತಿರ ಬಂದು "ನನಗೆ ಈ ಪೆಟ್ಟಿಗೆಯನ್ನು ಹೊತ್ತುಕೊಂಡು ಬರಲು ಸಹಾಯ ಮಾಡುವೆಯಾ" ಎಂದು ಕೇಳಿದ. ಅದಕ್ಕೆ ಯುವಕ ಒಪ್ಪಿಕೊಂಡನು. ಯುವಕ ಆ ಪೆಟ್ಟಿಗೆಯನ್ನು ಹೊತ್ತುಕೊಂಡು ಮುದುಕನ ಒಟ್ಟಿಗೆ ಅವನ ಮನೆಯವರಗೆ ಬರುತ್ತಾನೆ. ಮನೆಯ ಮುಂಭಾಗದಲ್ಲಿ ಆ ಪೆಟ್ಟಿಗೆಯನ್ನು ಇಳಿಸುತ್ತಾನೆ. ಮುದುಕ ಯುವಕನಿಗೆ ಧನ್ಯವಾದಗಳನ್ನು ಹೇಳುತ್ತಾ, ಅವನಿಗೆ ನಾಲ್ಕು ಬಾದಾಮಿಗಳನ್ನು ಕೊಡುತ್ತಾ ಹೇಳುತ್ತಾನೆ, "ಈ ಬಾದಾಮಿಗಳನ್ನು ನೀನು ಈ ಕ್ಷಣವೇ ನನ್ನ ಕಣ್ಣ ಮುಂದೆ ತಿನ್ನಬೇಕು" ಎಂದು. ಆದರೆ ಯುವಕನಿಗೆ ಆ ಬಾದಾಮಿಗಳನ್ನು ಚೂರು ಮಾಡುವಷ್ಟು ಶಕ್ತಿ ಇರಲಿಲ್ಲ ಅದಕ್ಕಾಗಿ ಅವನು ಅವನ ಹತ್ತಿರದಲ್ಲಿರುವ ಕಲ್ಲುಗಳನ್ನು ಹುಡುಕುತ್ತಿದ್ದ. ಆಗ ಮುದುಕನು ನಾನು ನಿನಗೆ ಚೂರು ಮಾಡಿಕೊಡುತ್ತೇನೆ ಎಂದು ಹೇಳಿ ಅವನ ಕೈಯಲ್ಲಿ ಅದನ್ನು ಚೂರು ಮಾಡಿದ. ಯುವಕನಿಗೆ ಆಶ್ಚರ್ಯವಾಯಿತು..! ಯುವಕ ಆ ಬಾದಾಮಿಗಳನ್ನು ತಿಂದ ಕೂಡಲೇ ಅವನಿಗೆ ಒಂದು ವಿಶೇಷವಾದ ಶಕ್ತಿಯು ದೊರೆಯಿತು. "ನೀನು ಯಾರಿಗೆ ಏನಾದರೂ ಬಯಸಿದರೆ ಅದು ನಿಜವಾಗುವುದು. ನಿನ್ನ ಮಾತಿನಂತೆ ಎಲ್ಲವೂ ನಡೆಯುವುದು. ಯಾರಾದರೂ ಅವರ ಮನಸ್ಸಿನಲ್ಲಿ ಏನಾದರೂ ಮಾತನಾಡಿಕೊಂಡರೆ ಅದು ನಿನಗೆ ಮಾತ್ರ ಕೇಳುವುದು. ಯುವಕನು ಬುದ್ಧಿವಂತನಾಗಿ ಯೋಚನೆ ಮಾಡಿದನು. ಈ ರಸ್ತೆಯಲ್ಲಿ ಒಬ್ಬ ಬಿಕ್ಷುಕನು ಇದ್ದಾನೆ. ಅವನಿಗೆ ಕಣ್ಣುಗಳು ಕಾಣುವುದಿಲ್ಲ ನಾನು ಅವನಿಗೆ ಹೋಗಿ ಸಹಾಯ ಮಾಡಿದರೆ ಹೇಗಿರುತ್ತದೆ. . . . . ಎಂದು ಯೋಚಿಸುತ್ತಾ ಹೋದನು. ಆ ಯುವಕನು ಭಿಕ್ಷುಕನ ಹತ್ತಿರ ಬಂದು ಅವನ ತಲೆಯ ಮೇಲೆ ಕೈ ಇಟ್ಟು "ದೇವರೇ ಇವನಿಗೆ ಕಣ್ಣುಗಳು ಕಾಣುವ ಹಾಗೆ ಮಾಡಿ ಇವನಿಗೆ ಈ ಸುಂದರವಾದ ಪರಿಸರವನ್ನು ನೋಡುವ ವರ ನೀಡು" ಎಂದು ಬೇಡಿಕೊಂಡನು. ಆ ಭಿಕ್ಷುಕ, "ನನಗೆ ಹುಟ್ಟಿನಿಂದ ಈ ಸುಂದರವಾದ, ಪರಿಸರವನ್ನು ನೋಡುವ ಭಾಗ್ಯ ಇರಲಿಲ್ಲ. ಇವತ್ತು ನನಗೆ ನಿನ್ನಿಂದ ಸಿಕ್ಕಿತು. ನಿನ್ನ ಋಣವನ್ನು ಎಂದಿಗೂ ಮರೆಯಲಾರೆ" ಎಂದು ಯುವಕನಿಗೆ ಹೇಳಿದನು. ಯುವಕನು ಅವನ ಮನೆಗೆ ಹೊರಟನು.
ಒಬ್ಬರಿಗೆ ಸಹಾಯ ಮಾಡುವುದರಲ್ಲಿ ಸಿಗುವ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ.
7ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ
ಉಡುಪಿ ಜಿಲ್ಲೆ
******************************************
ಶ್ರೀ ಕೃಷ್ಣನು ದೇವಕಿ ಮತ್ತು ವಸುದೇವನಿಗೆ ಜನಿಸಿದನು. ಆದರೆ ವೃಂದಾವನದಲ್ಲಿ ಯಶೋದೆ ಮತ್ತು ನಂದರಿಂದ ಬೆಳೆದನು. ಕಂಸನಿಂದ ಅವನ ಜೀವಕ್ಕೆ ಅಪಾಯವಿತ್ತು. ನಿರಂಕುಶ ಪ್ರಭು ಕಂಸನಿಗೆ ಆಕಾಶದಲ್ಲಿ ಒಂದು ಧ್ವನಿಯ ಮೂಲಕ ಅವಳ ಮಕ್ಕಳಲ್ಲಿ ಒಬ್ಬರು ಅವನನ್ನು ಕೊಲ್ಲುತ್ತಾರೆ ಎಂದು ಹೇಳಲಾಯಿತು. ಕಂಸನು ದೇವಕಿಯನ್ನು ಕೊಲ್ಲಲು ನಿರ್ಧರಿಸಿದನು. ಆದ್ದರಿಂದ ಅವಳು ಯಾವುದೇ ಮಕ್ಕಳ ಜನನಕ್ಕೆ ಕಾರಣವಾಗುವುದಿಲ್ಲ ಎಂದಾಗ ವಸುದೇವ, ಅವನ ಪತ್ನಿ ದೇವಕಿಯನ್ನು ಕ್ಷಮಿಸುವಂತೆ ಕಂಸನನ್ನು ಬೇಡಿಕೊಂಡನು. ಅವಳ ಮಗುವನ್ನು ಕಂಸನಿಗೆ ಕೊಡುವುದಾಗಿ ಭರವಸೆ ನೀಡಿದನು. ಆದ್ದರಿಂದ ಕಂಸನು ವಸುದೇವನ ಈ ಭರವಸೆಯ ಮೇರೆಗೆ ದೇವಕಿಯನ್ನು ಬಿಡುತ್ತಾನೆ. ಕಂಸ ತನ್ನ ಶತ್ರು ಮಕ್ಕಳು ಯಾರೂ ಬದುಕುಳಿಯದಂತೆ ನೋಡಿಕೊಂಡನು. ಆದ್ದರಿಂದ, ಶ್ರೀಕೃಷ್ಣನನ್ನು ರಕ್ಷಿಸುವ ಸಲುವಾಗಿ, ಅವನ ತಂದೆ ವಸುದೇವನು ಅವನನ್ನು ಬುಟ್ಟಿಯಲ್ಲಿ ಮಲಗಿಸಿ ಯಮುನಾ ನದಿಯ ಉದ್ದಕ್ಕೂ ವೃಂದಾವನಕ್ಕೆ ಸಾಗಿಸಿದನು. ಅಲ್ಲಿ ಕೃಷ್ಣನು ಯಶೋದೆ ಮತ್ತು ನಂದರಿಂದ ದತ್ತು ಪಡೆದು ಬೆಳೆದನು.
7ನೇ ತರಗತಿ
ಕ್ರೈಸ್ಟ್ ಸ್ಕೂಲ್ ಮಣಿಪಾಲ
ಉಡುಪಿ ಜಿಲ್ಲೆ
******************************************