-->
ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 3

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 3

ಮಕ್ಕಳಿಗಾಗಿ ವಿಜ್ಞಾನ : ಸಂಚಿಕೆ - 3
ಲೇಖಕರು : ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203

              
     ಪ್ರೀತಿಯ ಮಕ್ಕಳೇ.... ನಾನು ಮೊದಲೇ ಹೇಳಿದ್ದೆ ನಾನೊಬ್ಬ ವಿಜ್ಞಾನ ಶಿಕ್ಷಕ ಇನ್ನು ಮುಂದೆ ನಾನು ವಿಜ್ಞಾನದ ಬಗ್ಗೆ ಬರೆಯುತ್ತೇನೆ ಎಂದು. ನಾವು ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಚಿಂತನೆ ಎಂದರೆ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜೀವನದಲ್ಲಿ ಬಳಸಿಕೊಳ್ಳುವುದು ಮಾತ್ರವಲ್ಲ ಪ್ರತಿಯೊಂದು ವಿಷಯವನ್ನು ಏನು? ಏಕೆ? ಹೇಗೆ? ಇತ್ಯಾದಿ ಪ್ರಶ್ನೆಗಳನ್ನು ಕೇಳಿ ಸತ್ಯವೆಂದು ಮನವರಿಕೆಯಾದ ಮೇಲೆ ಒಪ್ಪಿಕೊಳ್ಳುವುದು. ವಿಜ್ಞಾನ ಎಂಬುದು ಸತ್ಯದ ಅನ್ವೇಷಣೆಯೇ ಹೊರತು ಅಂತಿಮವಾದುದಲ್ಲ ಎಂಬುದು ನಮ್ಮ ಗಮನದಲ್ಲಿ ಯಾವಾಗಲೂ ಇರಬೇಕು. ಪ್ರಸಕ್ತ ದಿನದಲ್ಲಿ ಅಂತಿಮವೆನಿಸುವ ಸಂಶೋಧನೆಗೆ ನೊಬೆಲ್ ಪಾರಿತೋಷಕ ನೀಡಲಾಗುತ್ತದೆ. ಪರಮಾಣು ರಚನೆ ಒಂದು ವಿಷಯದ ಮೇಲೆ 5 ನೊಬೆಲ್ ಪಾರಿತೋಷಕಗಳನ್ನು ನೀಡಲಾಗಿದೆ. ಎಂದರೆ ಸತ್ಯ ಎಂದು ಹೇಳಿದ ವಿಷಯ 5 ಬಾರಿ ಬದಲಾಗಿದೆ ಎಂದಾಗಲಿಲ್ಲವೇ...? ಆದ್ದರಿಂದ ವಿಜ್ಞಾನ ನಿತ್ಯ ಅಧ್ಯಯನದ ವಿಷಯ. ವಿಜ್ಞಾನ ಬದಲಾಗಬಹುದು ಆದರೆ ವೈಜ್ಞಾನಿಕ ಚಿಂತನೆಗಳು ಬದಲಾಗುವುದಿಲ್ಲ. ನನ್ನ ಲೇಖನಗಳ ಉದ್ದೇಶ ವೈಜ್ಞಾನಿಕವಾಗಿ ಯೋಚಿಸುವುದನ್ನು ಕಲಿಸುವುದೇ ಹೊರತು ವಿಜ್ಞಾನವನ್ನು ಹೇಳುವುದಲ್ಲ. ಅದಕ್ಕೆ ಪುಸ್ತಕಗಳಿವೆ. 

      ನಾನು ಹೇಳುವ ವಿಷಯಗಳು ನೀವು ಈಗಾಗಲೇ ತಿಳಿದಿರುವುದೇ. ಅಂದರೆ ಇದು ಪುನರಾವರ್ತನೆಯೇ ಎಂದರೆ ಕೆಲವೊಮ್ಮೆ ಹೌದು. ಆದರೆ ಓದುತ್ತಾ ಹೋದ ಹಾಗೆ ನೀವು ಗಮನಿಸದ ವಿಷಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ ಈ ಲೇಖನಗಳು. ಆದ್ದರಿಂದ ಈ ಲೇಖನಗಳ ಓದು ವಿಶಿಷ್ಠವಾಗುತ್ತದೆ. ಅದರೊಂದಿಗೆ ಇಲ್ಲಿ ಬಳಸುವುದು ವಿಜ್ಞಾನದ ಭಾಷೆ. ಸ್ವಲ್ಪ ಭಿನ್ನ ಎಂದುಕೊಂಡರೂ ಇದು ನಿಮಗೆ ವಿಜ್ಞಾನವನ್ನು ಖಂಡಿತವಾಗಿಯೂ ಆಪ್ತವಾಗಿಸುತ್ತದೆ ಎಂದು ನಾನು ಭಾವಿಸುತ್ತೇನೆ.

     ನಾವು ಬದುಕುವ ಪರಿಸರದಲ್ಲಿ ಹಲವಾರು ವಸ್ತುಗಳನ್ನು ಕಾಣುತ್ತೇವೆ. ನಾನು, ನೀವು, ನಿಮ್ಮ ಮುದ್ದಿನ ಬೆಕ್ಕು, ಮನ ಮುದಗೊಳಿಸುವ ಗುಲಾಬಿಯ ಗಿಡ, ಹಣ್ಣು ಕೊಡುವ ಮಾವಿನ ಮರ, ಅಗೋಚರವಾಗಿದ್ದರೂ ಮೊಸರು, ಚಾಕ್ಲೇಟ್ ನೀಡುವ, ಖಾಯಿಲೆ ಹರಡುವ ಬ್ಯಾಕ್ಟೀರಿಯಾಗಳು, ಕಲ್ಲು, ಮಣ್ಣು, ನೀರು, ಉಸಿರಾಡುವ ಗಾಳಿ, ಖನಿಜಗಳು ಹೀಗೆ. ಇವುಗಳ ಗುಣಗಳ ಬಗ್ಗೆ ತಿಳಿಯಬೇಕಾದರೆ ನಾವು ಇವುಗಳನ್ನು ಗುಂಪುಗಳಾಗಿ ಮಾಡಬೇಕು. ನಮ್ಮ ಪುಸ್ತಕಗಳನ್ನು ಕಾದಂಬರಿಗಳು, ಸಣ್ಣ ಕಥೆಗಳು, ನಿಯತಕಾಲಿಕೆಗಳು, ಪಠ್ಯ ಪುಸ್ತಕಗಳು ಹೀಗೆ. ಪಠ್ಯ ಪುಸ್ತಕಗಳಿಗೆ ಬಂದಾಗ ಅವುಗಳನ್ನು ತರಗತಿವಾರು ಹಾಗೂ ವಿಷಯವಾರು ಗುಂಪು ಮಾಡತ್ತೇವೆ. ವಿಜ್ಞಾನ ಪಠ್ಯ ಪುಸ್ತಕಗಳಿಗೆ ಬಂದಾಗ ಭೌತ, ರಸಾಯನ, ಜೀವ ಶಾಸ್ತ್ರ ಹೀಗೆ. ಈ ರೀತಿ ವೈಜ್ಞಾನಿಕವಾಗಿ ಗುಂಪು ಮಾಡುವುದನ್ನು ನಾವು ವರ್ಗೀಕರಣ (classification) ಎನ್ನುತ್ತೇವೆ. ವರ್ಗೀಕರಿಸುವಾಗ ನಾವು ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಒಂದು ಗುಂಪಿಗೆ ಸೇರುವ ವಸ್ತುಗಳು ಒಂದೇ ಗುಣ ಲಕ್ಷಣಗಳನ್ನು ಹೊಂದಿರಬೇಕು. ನಾನು ಆರಂಭದಲ್ಲಿ ಹೇಳಿದ ವಸ್ತುಗಳನ್ನು ವರ್ಗೀಕರಿಸಲು ಹೇಳಿದರೆ ನೀವು ಅವುಗಳನ್ನು ಸಜೀವಿಗಳು ಮತ್ತು ನಿರ್ಜೀವಿಗಳು ಎಂದು ಗುಂಪು ಮಾಡುತ್ತೀರಿ ಎಂದು ನನಗೆ ಗೊತ್ತಿದೆ. ಹಾಗಾದರೆ ಅವುಗಳ ನಡುವೆ ವ್ಯತ್ಯಾಸಗಳನ್ನು ಏನೇನು ಪಟ್ಟಿ ಮಾಡಬಹುದು ನೋಡೋಣ. 

       ಜೀವಿಗಳು ಉಸಿರಾಡುತ್ತವೆ. ಆಹಾರ ಸೇವಿಸುತ್ತವೆ. ಆದರೆ ಸಸ್ಯಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ ಮತ್ತು ಅದೇ ಆಹಾರವನ್ನು ಉಸಿರಾಟ ಮತ್ತು ಬೆಳವಣಿಗೆಗೆ ಬಳಸಿಕೊಳ್ಳುತ್ತವೆ. ಬೆಳವಣಿಗೆ ಹೊಂದುತ್ತವೆ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಿಸುತ್ತವೆ. ನೀವು ಬಸ್ಸನ್ನು ನೋಡಿದ ಕೂಡಲೇ (ರಸ್ತೆಯ ಪಕ್ಕಕ್ಕೆ ಸರಿಯುತ್ತೀರಿ. ಸಿಹಿ ತಿಂಡಿ ನೋಡಿದ ಕೂಡಲೇ ಬಾಯಿಯಲ್ಲಿ ನೀರೂರುತ್ತದೆ‌.) ಜೀವಿಗಳು ಚಲಿಸುತ್ತವೆ. ತೆಂಗಿನ ಮರ ಬಿಸಿಲಿನ ಕಡೆಗೆ ವಾಲುವುದು, ಬೇರು ನೀರಿನ ಮೂಲದ ಕಡೆಗೆ ಬೆಳೆಯುವುದೂ ಚಲನೆಗಳೇ. ಜೀವಿಗಳು ತನ್ನದೇ ರೀತಿಯ ಇನ್ನೊಂದು ಜೀವಿಯನ್ನು ನೀಡುತ್ತವೆ‌. ಇದೇ ವಂಶಾಭಿವೃದ್ಧಿ. ಜೀವಿಗಳ ಮುಂದಿನ ಪೀಳಿಗೆಯಲ್ಲಿ ಕೆಲವೊಮ್ಮೆ ಹಠಾತ್ ಬದಲಾವಣೆಯಾಗುತ್ತವೆ. ಇದನ್ನು ಉತ್ಪರಿವರ್ತನೆ (mutation). ಈ ಎಲ್ಲಾ ಗುಣಗಳು ನಿರ್ಜೀವಿಗಳಿಗೆ ಇಲ್ಲ. ಆದರೆ ನಿರ್ಜೀವಿಗಳನ್ನು ಹರಳಿನ ರೂಪದಲ್ಲಿ ಪಡೆಯಬಹುದು. ಉಪ್ಪು, ಸಕ್ಕರೆ, ಪೊಟಾಷಿಯಂ ಪರಮ್ಯಾಂಗನೇಟ್ ಇತ್ಯಾದಿಗಳನ್ನು ಹರಳಿನ ರೂಪದಲ್ಲಿ ಬಳಸುತ್ತೇವಲ್ಲವೇ? ಇನ್ನು ಮುಂದೆ ನಿಮಗೆ ವರ್ಗೀಕರಣ ಸುಲಭ.

       ನಮ್ಮ ನಡುವೆ ಒಂದು ವಸ್ತುವಿದೆ. ಅದು ಉಸಿರಾಡುವುದಿಲ್ಲ, ಆಹಾರ ಸೇವಿಸುವುದಿಲ್ಲ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ತೋರಿಸುವುದಿಲ್ಲ, ಚಲಿಸುವುದಿಲ್ಲ ಮತ್ತು ಇವುಗಳನ್ನು ಹರಳಿನ ರೂಪದಲ್ಲಿ ಪಡೆಯಬಹುದು. ಅಂದರೆ ಇವುಗಳು ನಿರ್ಜೀವಿಗಳೆಂದಾಯಿತು. ಆದರೆ ಇವು ವಂಶಾಭಿವೃದ್ಧಿ ಹೊಂದುತ್ತವೆ ಮತ್ತು ಉತ್ಪರಿವರ್ತನೆಗೊಳ್ಳುತ್ತವೆ. ಅಂದರೆ ಇವು ಜೀವಿಗಳು. ಜೀವಿಗಳೂ ಅಲ್ಲದ ನಿರ್ಜೀವಿಗಳು ಎಂದೂ ಹೇಳಲಾಗದ ಈ ಕಣಗಳನ್ನು (particles) ವೈರಸ್‌ಗಳು ಎನ್ನುತ್ತೇವೆ. ಚಿಕ್ಕ ಮಕ್ಕಳನ್ನು ಕಾಡುವ ಪೋಲಿಯೋ, ಜಗತ್ತನ್ನೇ ತಲ್ಲಣಗೊಳಿಸಿದ ಕೊರೋನಾ, ಮೂಗು ಹೊಂಡುವ ನೆಗಡಿ ಎಲ್ಲವೂ ಈ ವೈರಸ್‌ಗಳಿಂದಲೇ. 

      ನಿರ್ಜೀವ (abiotic) ಮತ್ತು ಜೀವ (biotic) ಜಗತ್ತುಗಳ ನಡುವಿನ ಅತಿ ಮುಖ್ಯ ಕೊಂಡಿ ಈ ವೈರಸ್‌ಗಳು. ಅಂದರೆ ಜೀವ ವಿಕಾಸದ ವಿದ್ಯಾರ್ಥಿಯೊಬ್ಬನಿಗೆ ಈ ಜೀವ ವಿಕಾಸದ ಹಾದಿಯಲ್ಲಿ ವೈರಸ್‌ಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎನ್ನಿಸಿದರೆ ಆತನ ಯೋಚನೆ ಸರಿಯಾದ ದಿಕ್ಕಿನಲ್ಲಿದೆ ಎಂದು ಅರ್ಥ.
.................................... ದಿವಾಕರ ಶೆಟ್ಟಿ ಎಚ್
ಪ್ರವಾಚಕರು
ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ
ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ
Mob: 9448571203
******************************************** 


Ads on article

Advertise in articles 1

advertising articles 2

Advertise under the article