-->
ಜಗಲಿ ಕಟ್ಟೆ : ಸಂಚಿಕೆ - 25

ಜಗಲಿ ಕಟ್ಟೆ : ಸಂಚಿಕೆ - 25

ಜಗಲಿ ಕಟ್ಟೆ : ಸಂಚಿಕೆ - 25
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 



ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ


    ಮಕ್ಕಳ ಜಗಲಿಯ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು....  
      ದೀಪಾವಳಿಯನ್ನು ಆಚರಿಸುತ್ತಿರುವ ಪ್ರತಿಯೊಬ್ಬರ ಮನೆಗಳಲ್ಲೂ ಗೂಡು ದೀಪಗಳನ್ನು ಅಲಂಕರಿಸುವ ಪದ್ಧತಿ ಇದೆ. ಈಗೀಗ ಪ್ಲಾಸ್ಟಿಕ್ ವಸ್ತುಗಳಿಂದ ರಚನೆಯಾಗಿರುವ ಗೂಡುದೀಪಗಳನ್ನು ಅಂಗಡಿಗಳಿಂದ ತಂದು ಮನೆಯಲ್ಲಿ ಅಲಂಕರಿಸುವ ಸಂದರ್ಭಗಳು ಹೆಚ್ಚಾಗಿದೆ. 
    ನಾವೆಲ್ಲ ಸಣ್ಣದಿರುವಾಗ ಹಾಗೂ ಈಗಲೂ ಬಿದಿರಿನ ಕಡ್ಡಿಗಳನ್ನು ಜೋಡಿಸಿ ಅಲಂಕಾರಿಕ ಗೂಡು ದೀಪಗಳನ್ನು ರಚಿಸುತ್ತೇವೆ. ಬಣ್ಣ ಬಣ್ಣದ ಕಾಗದಗಳನ್ನು ಅಂಟಿಸಿ ತುಂಬಾ ಸುಂದರವಾಗಿ ಅಲಂಕಾರಗೊಳಿಸುತ್ತೇವೆ. ಇದೊಂದು ಕರಕುಶಲ ಕಲೆಯಾಗಿದ್ದು ಸುಂದರವಾಗಿ ರಚಿಸಿದ ತೃಪ್ತಿಯು ನಮಗೊದಗಿ ಬರುತ್ತದೆ. ಇಲ್ಲಿ ಬಳಸುವ ಪ್ರತಿಯೊಂದು ವಸ್ತುಗಳು ಪರಿಸರ ಸ್ನೇಹಿ ಆಗಿರುವುದರಿಂದ ಪರಿಸರಕ್ಕೆ ಮಾರಕವಲ್ಲ. ಒಟ್ಟಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ದೀಪಾವಳಿ ಸಂಭ್ರಮವನ್ನು ಆಚರಿಸಬೇಕಿದೆ.
     ಸೂರ್ಯಾಸ್ತವಾದ ಮೇಲೆ ಹಣತೆಗಳನ್ನು ಹಚ್ಚಿ ಮನೆಯನ್ನು ಅಲಂಕಾರಗೊಳಿಸಿ. ಅದೇ ರೀತಿ ಪಟಾಕಿಗಳನ್ನು ಸುಡುವ ಸಂದರ್ಭದಲ್ಲಿಯೂ ಅತ್ಯಂತ ಜಾಗರೂಕರಾಗಬೇಕಾಗುತ್ತದೆ. ಮಕ್ಕಳು ಅನಾವಶ್ಯಕ ಸಾಹಸಗಳನ್ನು ಮಾಡದಿರುವುದೇ ಉತ್ತಮ. ಅಪಾಯಕಾರಿಯಲ್ಲದ ಸುಡುಮದ್ದುಗಳನ್ನು ಬಳಕೆ ಮಾಡುವುದರಿಂದ ತೊಂದರೆಗಳು ಕಡಿಮೆ ಎನ್ನುವುದಕ್ಕಿಂತಲೂ ಆರೋಗ್ಯಕ್ಕೆ ಹಾನಿಕಾರಕ ಎನ್ನುವುದನ್ನು ಗಮನಿಸಬೇಕು. ಯಾವುದೇ ತೊಂದರೆಯಾಗದ ರೀತಿಯಲ್ಲಿ ಜಗಲಿಯ ಪ್ರತಿಯೊಬ್ಬ ಮಕ್ಕಳು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಿ.
        ಮಕ್ಕಳ ದಿನಾಚರಣೆಯ ಸಂಭ್ರಮಕ್ಕೂ ತಯಾರಿಯಲ್ಲಿದ್ದೇವೆ. ನವೆಂಬರ್ 14 ಮಕ್ಕಳ ಜಗಲಿ ಆರಂಭವಾಗಿ ಮೂರು ವರ್ಷವನ್ನು ತುಂಬಲಿದೆ. ಈ ಸಂದರ್ಭದಲ್ಲಿ ಮಕ್ಕಳ ಜಗಲಿಯಿಂದ ಆಯೋಜಿಸಲಾಗಿರುವ ರಾಜ್ಯಮಟ್ಟದ ಕವನ ಮತ್ತು ಕಥಾಸ್ಪರ್ಧೆಯ ಫಲಿತಾಂಶವೂ ಹೊರ ಬರಲಿದೆ. ನೀವೆಲ್ಲರೂ ಕಾತುರರಾಗಿದ್ದೀರಿ ಎಂದು ಭಾವಿಸುತ್ತೇವೆ.
         ಪ್ರತಿಯೊಂದು ವಿಭಾಗದಲ್ಲಿಯೂ ಇಬ್ಬರು ವಿದ್ಯಾರ್ಥಿಗಳಿಗೆ ಕಥಾ ಸಿರಿ ಹಾಗೂ ಕವನ ಸಿರಿ ಪ್ರಶಸ್ತಿಯನ್ನು ನೀಡುತ್ತೇವೆ. ಇಲ್ಲಿ ಪ್ರತಿಯೊಬ್ಬರಿಗೂ ಭಾಗವಹಿಸುವ ಅವಕಾಶವಿದ್ದು ಒಂದು ವಿದ್ಯಾರ್ಥಿಗೆ ಒಂದು ಬಾರಿ ಮಾತ್ರ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈಗಾಗಲೇ ಭಾಗವಹಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಭಾಗವಹಿಸಿರುವ ಪ್ರಮಾಣ ಪತ್ರವನ್ನು ತುಳಸಿ ಕೈರಂಗಳ ಇವರು ಕಳುಹಿಸಿ ಕೊಟ್ಟಿರುತ್ತಾರೆ. ಅದೇ ರೀತಿ ಮಕ್ಕಳ ಜಗಲಿಯ ನನ್ನ ಆತ್ಮೀಯರಾದ ಗೋಪಾಲಕೃಷ್ಣ ನೇರಳಕಟ್ಟೆ, ವಿಜಯ ಶೆಟ್ಟಿ ಸಾಲೆತ್ತೂರು, ತೇಜಸ್ವಿ ಅಂಬೆಕಲ್ಲು, ವಿದ್ಯಾ ಕಾರ್ಕಳ, ಅಕ್ಬರ್ ಅಲಿ, ರಮೇಶ್ ನಾಯ್ಕ ಉಪ್ಪುಂದ, ಶಿವಕುಮಾರ್ ಎಂ ಜಿ ಇವರು ಹಾಗೂ ಮಕ್ಕಳ ಜಗಲಿಯ ಬಳಗದ ಪ್ರತಿಯೊಬ್ಬರು ಮಾಹಿತಿಯನ್ನು ಹಂಚುವಲ್ಲಿ ಸಹಕರಿಸಿರುವಿರಿ... ನಿಮಗೆಲ್ಲ ನಾನು ಆಭಾರಿಯಾಗಿರುತ್ತೇನೆ. ನಮಸ್ಕಾರಗಳು


ಕಳೆದ ಸಂಚಿಕೆಯ ಜಗಲಿಕಟ್ಟೆ - 24 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು.. ಮತ್ತು ಸ್ಮಿತಾ ಹೆಗ್ಡೆ ಸೊರಬ ತಾಲೂಕು, ಶಿವಮೊಗ್ಗ ಜಿಲ್ಲೆ.... ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....

    ನಮಸ್ಕಾರಗಳು ಸರ್ .... ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು. ನಮಗೆ ಪರಿಚಿತವಾದ ಆದರೆ ಅಪರೂಪ ವಾಗುತ್ತಿರುವ ಎಷ್ಟೊಂದು ಗಿಡಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ ವಿಜಯ ಮೇಡಂ, ಕಳೆದ ಸಂಚಿಕೆಯಲ್ಲಿ ಜರಿಗಿಡದ ಬಗ್ಗೆ ನೀಡಿದ ವಿಸ್ತೃತ ಮಾಹಿತಿಯಿಂದ ನಮ್ಮ ಹಿತ್ತಿಲಲ್ಲಿಯೇ ಅನೇಕ ಜರಿಗಿಡಗಳನ್ನು ಗುರುತಿಸಿದ ಸಂಭ್ರಮ ನನ್ನದಾಯಿತು. ಈ ವಾರದ ಸಂಚಿಕೆಯಲ್ಲಿ ತೆಗ್ಗಿ ಇಟ್ಟೇವು ಗಿಡದ ಔಷಧೀಯ ಗುಣಗಳ ಬಗೆಗಿನ ಮಾಹಿತಿ ಆ ಗಿಡವನ್ನು ಸರಿಯಾಗಿ ಇನ್ನೊಮ್ಮೆ ಕುತೂಹಲದಿಂದ ಗಮನಿಸುವಂತೆ ಮಾಡಿದ್ದಂತೂ ನಿಜ. ಅಳಿವಿನಂಚಿನಲ್ಲಿರುವ ಇನ್ನಷ್ಟು ನಿಷ್ಪಾಪಿ ಸಸ್ಯಗಳು ಅವರಿಂದ ಪರಿಚಿತವಾಗಲಿ. ಚಿತ್ರಾಶ್ರೀ ಕೆ. ಎಸ್. ಮೇಡಂ ಅವರ ಪೂರ್ವ ಕರಾವಳಿಯ ಪ್ರವಾಸಕಥನ ಇಷ್ಟವಾಯಿತು. ವಿಶಾಖಪಟ್ಟಣಂನ ಸಮುದ್ರ ತೀರವನ್ನು ಸ್ವಚ್ಛ, ಸುಂದರವಾಗಿರಿಸಿದ ಪ್ರಜ್ಞಾವಂತ ಜನರ ಪ್ರಜ್ಞೆಯ ಬಗ್ಗೆ ಹೆಮ್ಮೆಯೆನಿಸಿತು. ಬಸ್ಸ್ ಆಂಬುಲೆನ್ಸ್ ಚಲಿಸಲು ಪ್ರತ್ಯೇಕ ಪಥವಿರುವ ಬಗ್ಗೆ ತಿಳಿದು ಸಂತೋಷವಾಯಿತು. ಇದು ಇಂದಿನ ಅಗತ್ಯವೂ ಕೂಡ. ಮಕ್ಕಳಿಗಾಗಿ ವಿಜ್ಞಾನ ಹೊಸ ಸಂಚಿಕೆ ಓದುವಾಗ ನಾವು ಬಾಲ್ಯದಲ್ಲಿ ಅಂಗಡಿಯಿಂದ ಸಾಮಾನು ಕಟ್ಟಿಕೊಂಡು ತಂದ ತುಂಡು ಪೇಪರನ್ನು ಮೈಮರೆತು ಓದುತ್ತಿದ್ದದ್ದು ನೆನಪಾಯಿತು. ಅರವಿಂದ ಸರ್ ಲೇಖನ ಸುಂದರವಾದ ಕಡಲಕ್ಕಿಯ ಪರಿಚಯಿಸಿತು. ಎಲ್ಲರಿಗೂ ಧನ್ಯವಾದಗಳು.
......................... ಕವಿತಾ ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************



ಜಗಲಿಯ ಎಲ್ಲರಿಗೂ ನನ್ನ ನಮಸ್ಕಾರಗಳು,
     ವಸ್ತುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು, ನಮ್ಮ ಮನೆಯ ಪರಿಸರವನ್ನು ಸ್ವಚ್ಚವಾಗಿ ಇಡುವುದು, ಹಾಗೇ ಶಾಲಾ ಪರಿಸರ ಹಾಗೂ ಇನ್ನಿತರ ಕಡೆಗಳಲ್ಲಿ ಸ್ವಚ್ಚತೆಯ ಕಡೆಗೆ ಗಮನ ಹರಿಸುವ ಕುರಿತಾದ ಉತ್ತಮ ಲೇಖನ ಶಿಕ್ಷಣಾಧಿಕಾರಿಯವರಾದ ಜ್ಞಾನೇಶ್ ರವರಿಂದ.
     ಸಾಧನೆಗೆ ನಿಪುಣತೆ ಅಗತ್ಯ. ನಿರಂತರ ಪ್ರಯತ್ನ ಸಾಧಿಸಬೇಕೆನ್ನುವ ಛಲವಿದ್ದಲ್ಲಿ ಹಿಂದಿರುಗಿ ನೋಡುವ ಅವಶ್ಯಕತೆ ಬರುವುದಿಲ್ಲ. ರಮೇಶ್ ಸರ್ ರವರಿಂದ 'ನಿಪುಣತೆ' ಕುರಿತಾದ ಸವಿವರವಾದ ಅರ್ಥಗರ್ಭಿತ ಲೇಖನ.
     ಈ ವಾರದಲ್ಲಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಪ್ರವಾಚಕರಾದ ಶ್ರೀ ದಿವಾಕರ್ ಸರ್ ರವರ ಲೇಖನ ಸರಣಿ ಪ್ರಾರಂಭವಾದುದು ಖುಷಿ ತಂದಿದೆ. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡು ಓದಿನ ಹಸಿವನ್ನು ಹೆಚ್ಚಿಸುವತ್ತ ಗಮನ ಕೊಡಬೇಕೆನ್ನುವ ಕಿವಿ ಮಾತು ತುಂಬಾ ಇಷ್ಟವಾಯಿತು.
    ಅರವಿಂದರವರ ಹಕ್ಕಿ ಕಥೆ ಸಂಚಿಕೆಯಲ್ಲಿ ಕಂದು ತಲೆಯ ಕಡಲ ಹಕ್ಕಿಯ ಪರಿಚಯ ಸೊಗಸಾಗಿತ್ತು.
     ಅನೇಕ ಸಲ ಸಸ್ಯಗಳ ಉಪಯೋಗ ಗೊತ್ತಿಲ್ಲದೆಯೋ ಕಳೆಗಿಡಗಳೆಂದು ಸುತ್ತುಮುತ್ತಲಿನ ಗಿಡಗಳನ್ನು ನಾಶಪಡಿಸುತ್ತೇವೆ. ಮತ್ತೆ ಅಂತಹ ಸಸ್ಯಗಳು ಸಿಗುವುದೇ ಅಪರೂಪ. ಈ ಸಲದ ಸಂಚಿಕೆಯಲ್ಲಿ ತೆಗ್ಗಿ ಗಿಡದ ಬಗ್ಗೆ ಉಪಯುಕ್ತ ಮಾಹಿತಿ ವಿಜಯಾ ಮೇಡಂ ರವರಿಂದ.
    ಸಾಧನೆ ಮಾಡುವ ಛಲವಿದ್ದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಶಾಂತಾ ಎನ್ನುವ ಛಲಗಾತಿಯ ಬದುಕಿನ ಮಜಲುಗಳನ್ನು 'ಬದುಕು ಕಟ್ಟಲು ಹೊರಟವಳು' ಲೇಖನದಲ್ಲಿ ಯಾಕೂಬ್ ಸರ್ ರವರು ಬಹಳ ಸುಂದರವಾಗಿ ತಿಳಿಸಿದ್ದಾರೆ.
    ವಾಣಿಯಕ್ಕನವರ ಪುಸ್ತಕ ಪರಿಚಯದಲ್ಲಿ 'ಅಮ್ಮಿಗಾಗಿ ಒಂದು ಸೀರೆ' ಎನ್ನುವ ಒಂದು ಸುಂದರ ಪುಸ್ತಕದ ಪರಿಚಯ ಚೆನ್ನಾಗಿತ್ತು.
    ಆತ್ಮೀಯ ಮಿತ್ರ ಲೋಕೇಶ್ ರವರ ಶಿಕ್ಷಕರ ಡೈರಿಯಲ್ಲಿ ತಮ್ಮ ಅನುಭವವನ್ನು ಎರಡನೇ ಬಾರಿ ಹಂಚಿಕೊಂಡರು. ಈ ಬಾರಿ ನನ್ನ ಮಿತ್ರ, ಸಹೋದ್ಯೋಗಿ, ಹಾಗೂ ಜಗಲಿಯ ರೂವಾರಿ ತಾರಾನಾಥ್ ಕೈರಂಗಳ ರ ಬಗ್ಗೆ ಅನುಭವವನ್ನು ಹಂಚಿಕೊಂಡದ್ದು ತುಂಬಾ ಖುಷಿ ನೀಡಿತು.
     ಚಿತ್ರಾಶ್ರೀ ಯವರ ಪೂರ್ವ ಕರಾವಳಿಯ ಪ್ರವಾಸ ಕಥನ ಲೇಖನ ಸರಣಿಯಲ್ಲಿ ವಿಶಾಖ ಪಟ್ಟಣದ ವಿವಿಧ ಪ್ರೇಕ್ಷಣೀಯ ಸ್ಥಳಗಳ ಪರಿಚಯ ಛಾಯಾಚಿತ್ರಗಳೊಂದಿಗೆ ಮನಸ್ಸಿಗೆ ಮುದ ನೀಡಿತು. ರಮೇಶ್ ಉಪ್ಪುಂದರವರ ಪದದಂಗಳ ಸಂಚಿಕೆ ಸೊಗಸಾಗಿ ಮುಂದುವರಿಯುತ್ತಿದೆ.
     ಈ ವಾರದ ಜಗಲಿ ಉತ್ತಮ ಲೇಖನಗಳೊಂದಿಗೆ ಬಹಳ ಸೊಗಸಾಗಿ ಮೂಡಿ ಬರಲು ಕಾರಣರಾದ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************

    "ಬದುಕು ಕಟ್ಟಲು ಹೊರಟವಳು" ಯಾಕೂಬ್ ಎಸ್ ಕೊಯ್ಯೂರು ರವರ ಲೇಖನದಲ್ಲಿ.. ಒಬ್ಬ ವ್ಯಕ್ತಿಯ ಬದುಕಲ್ಲಿ ಸಾಲು ಸಾಲಾಗಿ ಬರುವ ಕಷ್ಟಗಳು ಅವರನ್ನು ಖಂಡಿತ ಗಟ್ಟಿಯಾಗಿಸುತ್ತದೆ ಎಂಬುದಕ್ಕೆ ಈ ಲೇಖನ ಉದಾಹರಣೆ ಆಗಿದೆ... ನಿಜಕ್ಕೂ ಶಾಂತ ಗಟ್ಟುಗಿತ್ತಿ... ಆಕೆಯ ಮುಂದಿನ ಜೀವನ ಸುಖಮಯವಾಗಲಿ ಎಂದು ಆಶಿಸುತ್ತೇನೆ 
.................... ಬಿಂದುರಾಣಿ ಲಮಾಣಿ, ಹಾವೇರಿ
****************************************


     "ಬದುಕು ಕಟ್ಟಲು ಹೊರಟವಳು" ಯಾಕೂಬ್ ಎಸ್ ಕೊಯ್ಯೂರು ರವರ ಲೇಖನ ಓದಿದೆ ಸರ್.. ಛೇ..! ಅದ್ಭುತ ಅತ್ಯದ್ಭುತ..!! ಕಥಾ ನಾಯಕಿ "ಶಾಂತಾ"ಳ ಬದುಕು ಒಂದೆಡೆ ಅಯ್ಯೋ ಅನ್ನಿಸಿದ್ರೆ..ಇನ್ನೊಂದೆಡೆ, ತಾನು ಮುಖ್ಯ ಶಿಕ್ಷಕ ರವಿಗೆ ಹೇಳಿದ ತನ್ನ ಬದುಕಿನ ಕಥೆಯಿಂದ ತನ್ನ ಮನಸ್ಸು ಹಗುರ ಮಾಡಿಕೊಂಡಿದ್ದಲ್ಲದೇ.. ಶಾಂತಾಳ ಶೈಕ್ಷಣಿಕ ಹೋರಾಟದ ಬದುಕು ಇಂದಿನ ನೊಂದ ಅನೇಕ ಹೆಣ್ಣು ಮಕ್ಕಳಿಗೆ ಪ್ರೇರಣೆ ಯಾಗುವಂತಿದೆ ಸರ್.. ತಾವು ಹೇಳಿದ ಹಾಗೆ, ಈ ಕಥೆ "ನೈಜ" ವಾದಾದ್ದಲ್ಲಿ.. ಆ ಹೆಣ್ಣು ಮಗಳು "ಶಾಂತಾ" ಯಾರಾಗಿರಬಹುದು..? ಅನ್ನೋದಕ್ಕೆ, ಓದುಗರ ಮನಸ್ಸು ತಡಕಾಡುವುದಂತೂ ನೂರಕ್ಕೆ ನೂರರಷ್ಟು ಸತ್ಯ ಸರ್..! ಜೊತೆಗೆ, ಶಾಂತಾಳ ಬದುಕು ಅರಿಯುವ ಕುತೂಹಲ ಇಡೀ ಕಥೆಯನ್ನು ವ್ಯಥೆಯ ರೂಪದಲ್ಲಿ ಓದಿಸಿಕೊಂಡು ಹೋಗಿ.. ಕೊನೆಗೆ, ಶಾಂತಾಳ ಶೈಕ್ಷಣಿಕ ಸಾಧನೆಯ ಹಿಂದಿರುವ ಅವಳ ಹಠ ಎಷ್ಟಿತ್ತು..! ಅನ್ನೋ ಪ್ರಮಾಣ, ಈ ಲೇಖನದ ಓದುಗನೇ ನಿರ್ಧರಿಸಬೇಕು ಅನ್ನೋ ಹಾಗೆ ತುಂಬಾ ಚೆನ್ನಾಗಿ ಬರೆದಿದ್ದೀರಾ ಸರ್.. ಈ ನಡುವೆ, ಶಾಂತಾಳ ಇಷ್ಟವಿಲ್ಲದ ಅಕಾಲಿಕ ಮದುವೆ.. ಯೋಗ್ಯನಲ್ಲದ ಗಂಡ ಹಾಗೂ ಆತನ ಅಕಾಲಿಕ ಸಾವು.. ಸಾಂತ್ವಾನ ಹೇಳುವ ತಾಯಿ ಹಾಗೂ ಅವಳ ಆಕಸ್ಮಿಕ ಸಾವು.. ಓದಿಸಲು ಅಶಕ್ತನಾದ ತಂದೆ.. ಉಪಕಾರ ಸ್ಮರಿಸದ ತಂಗಿ.. ಎರಡು ಮಕ್ಕಳ ಭಾರ.. ಇವುಗಳೆಲ್ಲವನ್ನೂ ಹೊತ್ತು ನಿತ್ಯದ ಬದುಕಿನ ಬವಣೆಯೊಂದಿಗೆ.. ಸ್ವತಃ, ಓದಿ ಎಂ.ಎ. ಬಿ.ಎಡ್ ವರೆಗೂ ಬಂದು ತಲುಪಿದ ಶಾಂತಾಳ ಸಾಧನೆ ನಿಜಕ್ಕೂ "ಅದ್ಭುತ"..!! ಇದರಲ್ಲಿ ಮುಖ್ಯ ಶಿಕ್ಷಕ "ರವಿ" ಪಾತ್ರ ತುಂಬಾ ದೊಡ್ಡದು.. ರವಿ ಇರೋದರಿಂದಲೇ ಈ ಶಾಂತಾಳ "ಕಥೆ-ವ್ಯಥೆ" ತಿಳಿದುಕೊಂಡಂತಾಯ್ತು ಸರ್.. ಇಂತಹ, ಅತ್ಯದ್ಭುತ "ನೈಜ ಕಥಾ" ಬರಹ ನನಗಾಗಿ ಕಳಿಸಿದ್ದಕ್ಕೆ ತಮಗಿದೋ ಅಭಿನಂದನೆಗಳು ಸರ್.. ಇಂತಹ, ಮತ್ತಷ್ಟು "ನೈಜ" ಕಥಾ ಬರಹಗಳು ತಮ್ಮಿಂದ ಮೂಡಿ ಬರಲಿ ಅಂತ ಆಶಿಸ್ತಾ.. ತಮಗಿದೋ ಧನ್ಯವಾದಗಳು ಸರ್...
.................... ಸಲೀಂ ಪಾಷಾ, ಶಿಕ್ಷಕರು
ಬಿಜಾಪುರ
****************************************


     ಕಥೆ ಬಹಳ ಚೆನ್ನಾಗಿದೆ.ಭಾವನಾತ್ಮಕ ಕಥೆ.ಅಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕಿ ಆ ಮಕ್ಕಳು ಮುಂದೆ ಅವಳನ್ನು ಚೆನ್ನಾಗಿ ನೋಡಿಕೊಂಡರೆ ಸಾಕು.
ರವಿ ಸರ್ ನೀವೇ ಇರಬಹುದೇನೋ ಅಂತ ಅನಿಸುತ್ತದೆ.ಕಥೆ ಪೂರ್ಣವಾಗಿಲ್ಲ.ಅಂದರೆ BEd ಪೂರ್ತಿ ಗೊಳಿಸಿದ್ಲಾ?
.................... ಶಾಂತಿ ಸಲ್ದಾನ, ಮುಖ್ಯಶಿಕ್ಷಕಿ 
ಸರಕಾರಿ ಪ್ರೌಢಶಾಲೆ ಅಳದಂಗಡಿ.
****************************************



   "ಬದುಕು ಕಟ್ಟಲು ಹೊರಟವಳು" ಯಾಕೂಬ್ ಎಸ್ ಕೊಯ್ಯೂರು ರವರ ಲೇಖನ ಓದಿದೆ ಸರ್.. ನಿಜವಾಗಲು ಕಥೆ ಓದುವಾಗ ಕಣ್ಣಲ್ಲಿ ನೀರು ಜಿನುಗಿತು.. ಹೆಣ್ಣಿನ ಕಷ್ಟಗಳ ಸರಮಾಲೆ ಕಂಡು ಮನ ಕದಡಿಹೋಯ್ತು.... ಅದನ್ನು ಅಕ್ಷರಗಳ ರೂಪದಲ್ಲಿ ನೀವು ಬಹಳ ಮನಮುಟ್ಟುವಂತೆ ಬರೆದಿದ್ದೀರಿ.. ಈ ಕಥೆಯಲ್ಲಿ ನನಗೆ ಕಂಡು ಬಂದ ಅಥವಾ ಈಗಿನ ವಿದ್ಯಾರ್ಥಿಗಳು ಕಲಿಯಬೇಕಾದ ಅಂಶಗಳು....
1) ಎಷ್ಟೇ ಕಷ್ಟ ಬಂದರೂ ಬಿಡದ ಛಲ ಇದ್ದರೆ ಯಶಸ್ಸು ಸಿಕ್ಕೇ ಸಿಗುತ್ತದೆ.
2) ಒಂದು ಹೆಣ್ಣು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಹಿಸಿ ತನ್ನ ಮನದ ಆಸೆಯನ್ನು ನೆರವೇರಿಸ ಕೊಳ್ಳಬಹುದು.
3) ಎಲ್ಲರೂ ಸ್ವಾರ್ಥಿಗಳಾದಾಗ ನಾವು ಅವರಂತೆ ಆಗದೆ ಇತರರ ನೋವಿಗೆ ಸ್ಪಂದಿಸುವ ಗುಣವನ್ನು ಹೇಗೆ ರೂಢಿಸಿಕೊಳ್ಳಬಹುದು ಎಂಬುದನ್ನು ಇದರಿಂದ ತಿಳಿಯಬಹುದಾಗಿದೆ.
4) ಸಾಧನೆಗೆ ವಯಸ್ಸು ಮುಖ್ಯವಲ್ಲ ಮನದಾಳದ ಮಹದಾಸೆ ಮುಖ್ಯ ಎಂಬುದು ತಿಳಿಯುತ್ತದೆ.
5) ಇಂತಹ ಮನಮುಟ್ಟುವ ಹೃದಯ ವಿದ್ರಾವಕ ಕಥೆಯನ್ನು ತಾವು ಅಕ್ಷರಗಳಲ್ಲಿ ಹಿಡಿದಿಟ್ಟು ಸಮರ್ಥವಾಗಿ ಈ ಕಥೆಯ ಆಶಯವನ್ನು ನಮಗೆ ಮುಟ್ಟಿಸಿದ್ದೀರಿ.. ಇದರಿಂದ ಎಷ್ಟೋ ಜನರಿಗೆ ತಮ್ಮ ಕಷ್ಟಕ್ಕಿಂತ ಇತರರ ಕಷ್ಟಗಳು ಇನ್ನೂ ತಡೆಯಲಸಾಧ್ಯವಾಗಿರುತ್ತದೆ ಎಂಬುದನ್ನು ತಿಳಿಸುತ್ತದೆ ಸರ್.. ಇಂತಹ ಸಂದೇಶವನ್ನು ಕಥೆಯ ಮೂಲಕ ಎಲ್ಲರಿಗೂ ತಿಳಿಸಿ ಕಷ್ಟಗಳನ್ನೆದುರಿಸಲು ಹೊಸ ಚೈತನ್ಯ ಶಕ್ತಿ ನೀಡಿದ್ದೀರಿ ಸರ್ ಧನ್ಯವಾದಗಳು.. 
............................. ಶ್ರೀಮತಿ ವಿಜಯ, ಶಿಕ್ಷಕಿ
****************************************


     "ಬದುಕು ಕಟ್ಟಲು ಹೊರಟವಳು" ಯಾಕೂಬ್ ಎಸ್ ಕೊಯ್ಯೂರು ರವರ ಲೇಖನ ಓದಿದೆ ಸರ್.. ನಾನು ನೋಡಿದ ಬಹುತೇಕ ತಂದೆಯನ್ನು ಕಳೆದುಕೊಂಡ ಸಂಸಾರಗಳಲ್ಲಿ ಸಂಸಾರದ ಹೊಣೆಯನ್ನು ಹೊತ್ತುಕೊಂಡ ಹಿರಿಯಣ್ಣ/ ಹಿರಿಯಕ್ಕ ತಮ್ಮ ಒಡಹುಟ್ಟಿದವರ ಏಳ್ಗೆಗಾಗಿ ಹಗಲಿರುಳೆನ್ನದೆ ತನಗೂ ಒಂದು ಬದುಕು ಇದೆ ಎಣಿಸದೇ ಹೋರಾಡಿದರೂ ಕೊನೆಗೂ ಅವರಿಗೆ ಸಿಗುವುದು ತಾತ್ಸಾರದ ಮಾತುಗಳು, ನಿಂದನೆಗಳು ಹಾಗೂ ನಿರ್ಲಕ್ಷ್ಯತೆ. ಆದ್ದರಿಂದಲೇ ಹಿರಿಯರು ಹೇಳವುದನ್ನು ಕೇಳಿದ್ದೇನೆ. ದೊಡ್ಡ ಮಗ/ ಮಗಳು ಮನೆಯ ಮೆಟ್ಟುಗಲ್ಲು. ಹತ್ತುವವರೇಗೆ ಅದರ ನೆನಪು. ನಂತರ ನಾವು ಹೇಗೆ ಮೇಲೆ ಬಂದೆವೆನ್ನುವುದನ್ನೇ ಮರೆಯುವ ಜಾಯಮಾನ. ಲೇಖನ ಉತ್ತಮವಾಗಿ ಮೂಡಿ ಬಂದಿದೆ. ಅಂತ್ಯ ಹೇಗಾಯಿತೆಂಬ ಕುತೂಹಲ ಬಾಕಿ ಉಳಿದಿದೆ. ಇದು ನನ್ನ ಅನುಭವ. (ಎಲ್ಲಾ ಸಂಸಾರಗಳಲ್ಲಿ ಅಲ್ಲ).
..................................... ಗಣೇಶ ಐತಾಳ್
ನಿವೃತ ಶಿಕ್ಷಣ ಸಮನ್ವಯಾಧಿಕಾರಿಗಳು
****************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡು, ಬರೆಯುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗುತ್ತಿರುವ ಮಕ್ಕಳ ಜಗಲಿ ಕುಟುಂಬದ ನಿವೃತ್ತ ವಿಜ್ಞಾನ ಶಿಕ್ಷಕರಾದ ಶ್ರೀರಾಮ ಮೂರ್ತಿ , ಕವಿತಾ ಶ್ರೀನಿವಾಸ ದೈಪಲ , ಗಣೇಶ ಐತಾಳ್ , ಶ್ರೀಮತಿ ವಿಜಯ ಶಿಕ್ಷಕಿ, ಶಾಂತಿ ಸಲ್ದಾನ ಮುಖ್ಯಶಿಕ್ಷಕಿ , ಸಲೀಂ ಪಾಷಾ, ಶಿಕ್ಷಕರು ಬಿಜಾಪುರ, ಬಿಂದುರಾಣಿ ಲಮಾಣಿ, ಹಾವೇರಿ ,.... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************




Ads on article

Advertise in articles 1

advertising articles 2

Advertise under the article