ನಿಷ್ಪಾಪಿ ಸಸ್ಯಗಳು : ಸಂಚಿಕೆ - 21
Wednesday, October 25, 2023
Edit
ನಿಷ್ಪಾಪಿ ಸಸ್ಯಗಳು : ಸಂಚಿಕೆ - 21
ಲೇಖಕರು: ವಿಜಯಾ ಬಿ ಶೆಟ್ಟಿ ಸಾಲೆತ್ತೂರು
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಬಾಳೆಪುಣಿ (ಇರಾ), ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
ಪ್ರೀತಿಯ ಮಕ್ಕಳೇ, ಹೇಗಿದ್ದೀರಿ...? ರಜಾ ಅವಧಿಯಲ್ಲಿ ತೋಟ, ಗದ್ದೆ, ನೀರಿನ ಹರಿವಿನ ಸಮೀಪಗಳಲ್ಲಿ ಸುತ್ತಾಡುವಾಗ ಸುಂದರವಾಗಿ ಕತ್ತರಿಸಿದಂತೆ ಸೃಷ್ಠಿಯೇ ವಿನ್ಯಾಸಗೊಳಿಸಿದ ಸಸ್ಯಗಳನ್ನು ಗುರುತಿಸಿದ್ದೀರಾ..?
ಮದುವೆಯಂತಹ ಸಮಾರಂಭ, ಪುಷ್ಪಜೋಡಣೆ, ಅಲಂಕಾರ, ಹೂ ಹಾರಗಳಲ್ಲಿ ಹೂಗಳ ಸೌಂದರ್ಯ ಹೆಚ್ಚುವಂತೆ ಮಾಡಲು ಕೆಲವು ವಿಶಿಷ್ಟವಾದ ಎಲೆಗಳ ಬಳಕೆ ಮಾಡಿರುವುದನ್ನು ಗಮನಿಸಿದ್ದೀರಾ...?
ಹ್ಹಾಂ.. ಹೌದು. ಖಂಡಿತವಾಗಿ ನೋಡಿರುತ್ತೀರಿ. ಆ ಸುಂದರವಾದ ಎಲೆಗಳನ್ನು ಹೊಂದಿರುವ ಸಸ್ಯಗಳನ್ನು ಜರೀಗಿಡಗಳು, ಫೆರ್ನ್, ಗುಚ್ಛ ಸಸ್ಯ ಗಳೆಂದೂ ಕರೆಯುತ್ತಾರೆ. ಸಾಮಾನ್ಯವಾಗಿ ನೆರಳನ್ನು ಪ್ರೀತಿಸುವ ಈ ನಿಷ್ಪಾಪಿ ಸಸ್ಯಗಳು ತೋಟದ ನೆರಳಿನಲ್ಲಿ, ತೇವಭರಿತ ಗೋಡೆಗಳ ಮೇಲೆ, ಬಾವಿಯ ಗೋಡೆ, ಮರಗಳ ತೇವಭರಿತ ಕಾಂಡ ಕೊಂಬೆಗಳ ಮೇಲೆ, ನೀರಿನ ಝರಿಗಳ ಪಕ್ಕದಲ್ಲಿ, ಗುಡ್ಡದ ಕಡಿದಾದ ಇಳಿಜಾರಿನಲ್ಲಿ ಬೆಳೆಯುತ್ತವೆ.
ಜರೀ ಗಿಡವು ನಮ್ಮ ಭೂಗ್ರಹದಲ್ಲಿ ಅತ್ಯಂತ ಹಳೆಯ ಸಸ್ಯಗಳಲ್ಲಿ ಒಂದು. 20 ಸಾವಿರಕ್ಕೂ ಅಧಿಕ ಜಾತಿಗಳಿರುವ ಜರೀ ಗಿಡಗಳಿಗೆ ಬೇರು, ಕಾಂಡ, ಎಲೆಗಳಿರುತ್ತವೆ. ಸಸ್ಯ ಸಾಮ್ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಆಹಾರ ಮತ್ತು ನೀರನ್ನು ಸಾಗಿಸುವ ವಿಶೇಷ ಅಂಗಾಂಶಗಳು ಈ ವರ್ಗದ ಸಸ್ಯಗಳಲ್ಲಿ ಕಂಡುಬರುತ್ತವೆ. ಕ್ಲಬ್ ಮಾಸ್ ಗಳು, ಜರೀಗಿಡಗಳೆಂಬ ಗುಂಪುಗಳನ್ನೊಳಗೊಂಡ ಟೆರಿಡೋಫೈಟ್ಗಳಲ್ಲಿ ಸುಮಾರು 12 ಸಾವಿರ ಪ್ರಭೇದಗಳಿವೆ. ಕೆಲವು ಜರೀಗಿಡಗಳು ಮರದ ಗಾತ್ರಕ್ಕೂ ಬೆಳೆಯುತ್ತವೆ. ಇವುಗಳನ್ನು ನಾವು ಉದ್ಯಾನವನಗಳಲ್ಲಿ ಕಾಣಬಹುದು. ಜರೀಗಿಡಗಳ ಸೋಗೆಗಳಂತಹ ಎಲೆಗಳ ಅಡಿಭಾಗದಲ್ಲಿ ಬೀಜಕ ಕೋಶಗಳ ಗೊಂಚಲುಗಳಿರುತ್ತವೆ. ಇವುಗಳಿಂದ ಉಂಟಾದ ಬೀಜಕಗಳು ಗಾಳಿಯ ಮೂಲಕ ಪ್ರಸಾರವಾಗುತ್ತವೆ. ಒದ್ದೆ ಮಣ್ಣಿನಲ್ಲಿ ಇವು ಬಿದ್ದಾಗ ಯುಗ್ಮ ಜನಕ ಪುಟಾಣಿ ಸಸ್ಯವಾಗಿ ಬೆಳೆಯುತ್ತದೆ. ಸುಮಾರು 150 ಮಿಲಿಯನ್ ವರ್ಷಗಳ ಹಿಂದಿನ ಭೂಮಿಯ ಕಾಲವನ್ನು 'ಜರೀಗಿಡ ಸಂಬಂಧಿ ಯುಗ' ವೆಂದೇ ಕರೆಯುತ್ತಾರೆ.
ಮಕ್ಕಳೇ, ಇಂದು ನಮಗೆ ದೊರೆಯುವ ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು, ಪೆಟ್ರೋಲಿಯಂ ಗಳಿಗೆ ಹಿಂದೊಮ್ಮೆ ಭೂಮಿಯನ್ನು ಆವರಿಸಿದ್ದ ಈ ಜರೀಗಿಡಗಳು ಸೇರಿದಂತೆ ಹಾರ್ಸ್ ಟೈಲ್ ಹಾಗೂ ಕ್ಲಬ್ ಮಾಸ್ ಗಳೇ ಕಾರಣವೆಂದರೆ ಆಶ್ಚರ್ಯವಾಗುವುದಲ್ಲವೇ?
ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಟಿಶರ್ಟ್ ಮೇಲೆ ನೀವು ಈ ಜರೀ ಸಸ್ಯದ ಎಲೆಯ ಚಿತ್ರವನ್ನು ಕಾಣಬಹುದು. ಸಾಧಾರಣ ಸಸ್ಯಗಳ ಗುಂಪಿಗೆ ಸೇರದ ಈ ಜರಿಗಿಡಗಳಿಗೆ ಭೂಹೊದಿಕೆಯ ಸೌಂದರ್ಯ ಹೆಚ್ಚಿಸುವುದೇ ಪ್ರಮುಖ ಕಾರ್ಯ. ಇತರ ಸಸ್ಯಗಳಿಗಿಂತ ಇವು ಭಿನ್ನ. ಕಾಂಡದ ಬದಲಾಗಿ ಗಿಡವು ಬುಡದಿಂದ ಒಡೆದುಕೊಂಡು ಬೆಳೆಯುತ್ತದೆ. ಕೆಲವು ಜಾತಿಯ ಜರಿಸಸ್ಯಗಳ ಎಲೆಗಳ ಅಡಿಭಾಗದಲ್ಲಿ ಸುಣ್ಣದಂತಹ ಬಿಳೀ ಹುಡಿ ಅಂಟಿದಂತಿರುತ್ತದೆ. ಅದನ್ನು ಕೈಗಳ ಮೇಲೆ ಒತ್ತಿದರೆ ಎಲೆಯ ಅಂದವಾದ ಬಿಳೀ ಮುದ್ರೆ ಕಾಣಿಸುತ್ತದೆ. ಕಾಗದದ ನಡುವಲ್ಲಿ ಇಂತಹ ಎಲೆಗಳನ್ನಿರಿಸಿದಾಗಲೂ ಎಲೆಯ ಸುಂದರ ವಿನ್ಯಾಸ ದೊರೆಯುತ್ತದೆ. ಈ ಪುಡಿಯನ್ನು ತೇವಭರಿತ ಮಣ್ಣಿಗೆ ಉದುರಿಸಿ ತೇವ ಆರದಂತೆ ಮುಚ್ಚಿಟ್ಟರೆ ಪುಟಾಣಿ ಜರೀಗಿಡಗಳು ಹುಟ್ಟಿಕೊಳ್ಳುತ್ತವೆ. ಬಹಳ ನಿಧಾನವಾಗಿ ಬೆಳೆಯುವ ಈ ಸಸ್ಯವರ್ಗದ ಕೆಲವು ಜಾತಿಯಲ್ಲಿ ಒಂದು ಜೀವಿತಾವಧಿಯಲ್ಲಿ ಕಾಣಿಸಿಕೊಳ್ಳುವ ಬೆಳವಣಿಗೆ ಎಂದರೆ ಒಂದು ಎಲೆ ಮಾತ್ರ!.
ಮಳೆಗಾಲದ ಅತಿಥಿಯಾಗಿ ಕಂಡುಬರುವ ಈ ಜರಿಸಸ್ಯಗಳಲ್ಲಿ ಕೆಲವು ತರಕಾರಿಯಂತೆ ಬಳಸಲ್ಪಟ್ಟರೆ ಕೆಲವು ವಿಷಕಾರಿಯಾಗಿವೆ ಹಾಗೆಯೇ ಕೆಲವು ಗಾಯವಾದಾಗ, ತಲೆನೋವು, ಕೂದಲುದುರುವಿಕೆ, ತಲೆಹೊಟ್ಟು, ಅಸ್ತಮಾ, ಮಧುಮೇಹ, ಬೊಜ್ಜು, ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಗೆ ಔಷಧಿಯಾಗಿಯೂ ಬಳಸಲ್ಪಡುತ್ತದೆ.
ಮಣ್ಣಿನ ಸವಕಳಿ ತಡೆಯಲು, ನೆಲದಲ್ಲಿ ತಂಪನ್ನುಳಿಸಲು, ಗಾಳಿಯಲ್ಲಿನ ಅಂಗಾರಾಮ್ಲವನ್ನು ಕಡಿಮೆಗೊಳಿಸುವಲ್ಲೂ ಜರೀಗಿಡಗಳ ಪಾತ್ರ ಹಿರಿದಾಗಿದೆ. ಆಂಗ್ಲಭಾಷೆಯಲ್ಲಿ Maidenhair fern, Waking fern ಎಂದು ಕರೆಸಿಕೊಳ್ಳುವ ಈ ಸಸ್ಯವನ್ನು ವಿಜ್ಞಾನಿಗಳು Adiantum ಎಂದು ಗುರುತಿಸಿದ್ದಾರೆ. ಈ ಸಸ್ಯವಿದ್ದಲ್ಲಿ ಪರಿಸರ ಪರಿಶುದ್ಧವಾಗಿದೆ ಎಂದು ಅರ್ಥೈಸಲಾಗುತ್ತದೆ.
34 ವರ್ಷಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಬೋಧಿಸಿದ ಉಡುಪಿಯ ಡಾ.ಕೆ.ಜಿ ಭಟ್ಟರ ಸಂಶೋಧನೆಗಳಲ್ಲಿ 69 ಸಸ್ಯಗಳಿಗೆ ಅವರದೇ ಹೆಸರುಗಳನ್ನು ನೀಡಲಾಗಿದೆ. 7 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ 30 ಜರಿಸಸ್ಯ ಕುಟುಂಬಗಳಿಗೆ ಸೇರಿದ 71 ಜಾತಿಯ 183 ಜರಿ ಪ್ರಭೇದಗಳನ್ನು ಗುರುತಿಸಿದ ಡಾ.ಭಟ್ಟರನ್ನು ನಾವಿಲ್ಲಿ ನೆನಪಿಸಿಕೊಳ್ಳಲೇಬೇಕು.
ಜರೀಸಸ್ಯಗಳಲ್ಲಿ ಕೆಲವು ವಿಸ್ಮಯಕಾರಿ ಸಸ್ಯಗಳೂ ಇವೆ. ಅಡಿಯಾಂಟಮ್ ಎಂಬ ಜರಿಗಿಡವನ್ನು ನಡೆದಾಡುವ ಜರಿಸಸ್ಯವೆನ್ನುತ್ತಾರೆ..! ಇದು ನೆಲದ ಒಂದು ಭಾಗದಲ್ಲಿ ಬೇರು ಬಿಟ್ಟು ನಂತರ ಅದರ ಪ್ರಕಾಂಡವು ಮುಂದೆ ಬೆಳೆಯುತ್ತಾ ಸಾಗಿ ನೆಲವನ್ನು ಸ್ಪರ್ಶಿಸಿದಾಗ ಅಲ್ಲಿ ಬೇರು ಬಿಟ್ಟು ಮುಂದುವರಿಯುತ್ತದೆ. ಸಾಧಾರಣವಾಗಿ ಒಂದೆಲಗ ಹಾಗೂ ಕೆಲವು ಹುಲ್ಲಿನ ಜಾತಿಯೂ ಹೀಗೆ ಬೆಳೆಯುತ್ತದೆ. ಹಿಂದಿನ ಭಾಗ ನಾಶವಾದರೂ ಸಂತಾನ ಮುಂದುವರಿಯಲು ತೊಂದರೆಯಾಗುವುದಿಲ್ಲ. Asplenium rhizophyllum ಎಂಬ ಮತ್ತೊಂದು ಜರೀಗಿಡದ ಎಲೆಗಳು ಉದ್ದವಾಗಿ ಬೆಳೆಯುತ್ತಾ ಬಾಗಿ ನೆಲವನ್ನು ಸ್ಪರ್ಶಿಸಿ ಅಲ್ಲೇ ಬೇರು ಬಿಟ್ಟು ಹೊಸ ಸಸ್ಯವಾಗಿ ಬೆಳೆಯುತ್ತಾ ಸಾಗುತ್ತದೆ. ಅದಕ್ಕಾಗಿಯೇ ಇದನ್ನು ನಡೆದಾಡುವ ಸಸ್ಯವೆಂದೂ ಕರೆಯುತ್ತಾರೆ.
ಸೃಷ್ಠಿಯನ್ನು ತಿದ್ದಲು ಹೋಗಬಾರದು, ಅದು ಬಹಳ ದೊಡ್ಡದು. ಸೃಷ್ಠಿಗೆ ತಕ್ಕಂತೆ ದೃಷ್ಠಿಯನ್ನು ಬದಲಾಯಿಸು ಎಂಬ ಹಿರಿಯರ ಮಾತಿದೆ. ಜಿಟಿಜಿಟಿ ಮಳೆಗೆ ಒಂದಿಷ್ಟು ದಟ್ಟವಾದ ಕಾಡಿನೊಳಗೆ ಹೊಕ್ಕರೆ ಮುಗಿಲು ಮುಟ್ಟುವ ಮರಗಳು, ಅಪ್ಪಿಕೊಂಡು ಹಬ್ಬಿನಿಂತ ಬಳ್ಳಿಗಳು, ಸಾಲಂಕೃತ ರಥದಂತೆ ಕಾಣಿಸುವ ಮಧ್ಯಮಗಾತ್ರದ ವೃಕ್ಷಗಳು, ಕಲ್ಲುಹೂಗಳು, ಕಾಲಿಟ್ಟಲ್ಲಿ ಜಾರುವ ಹಾವಸೆ, ನೆಲ ಕಾಣದಂತೆ ಮೈನೀಡಿ ನಿಂತ ಪೊದರುಗಳಿಗೆ ಸೌಂದರ್ಯದಲ್ಲಿ ಸ್ಪರ್ಧೆ ನೀಡುವ ಜರೀಗಿಡಗಳು ಕಣ್ಮನ ಸೆಳೆದು ಒಂದು ಎಲೆಯನ್ನಾದರೂ ಕಿತ್ತುಕೊಳ್ಳಲು ಖಂಡಿತವಾಗಿಯೂ ಪ್ರೇರೇಪಿಸದೆ ಬಿಡದು.
ಇಂದು ಆರ್ಥಿಕವಾಗಿಯೂ ಲಾಭದಾಯಕವಾದ ಕೃಷಿಯಾಗಿ ಬೆಳೆಯಲ್ಪಡುವ ಜರಿಗಿಡವನ್ನು ಬಹು ಸುಲಭವಾಗಿ ನೆಲದಲ್ಲಿ ಅಥವಾ ಚಟ್ಟಿಯಲ್ಲಿ ಬೆಳೆಸಿಕೊಳ್ಳಬಹುದು. ಮನೆಯೊಳಗೂ ಜಾಗ ನೀಡಿದರೆ ಸಂತಸದಿಂದ ಹಸಿರು ಹೊನ್ನು ಹೊಳೆಯಬಹುದು ಅಲ್ಲವೇ? ನೀವೇನಂತೀರಾ..?
ಮುಂದಿನ ವಾರ ಇನ್ನೊಂದು ನಿಷ್ಪಾಪಿ ಸಸ್ಯದ ಜೊತೆ ಭೇಟಿಯಾಗುತ್ತೇನೆ.... ನಮಸ್ಕಾರ
ಸಹ ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ
ಶಾಲೆ , ಬಾಳೆಪುಣಿ (ಇರಾ)
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
Mob : +91 78925 87191
*******************************************