ಹಕ್ಕಿ ಕಥೆ : ಸಂಚಿಕೆ - 122
Tuesday, October 24, 2023
Edit
ಹಕ್ಕಿ ಕಥೆ : ಸಂಚಿಕೆ - 122
ಲೇಖಕರು : ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
ಮಕ್ಕಳೇ ನಮಸ್ತೇ. ಈ ವಾರದ ಹಕ್ಕಿ ಕಥೆಗೆ ಸ್ವಾಗತ.... ಕಡಲಿನ ಮೇಲೆ ಕಾಣುವ ಹಕ್ಕಿಗಳನ್ನು ನೋಡಲು ಹೋದ ಕಥೆಯನ್ನು ಕಳೆದವಾರ ಹೇಳುತ್ತಿದ್ದೆ. ಕಡಲಿನ ಮೇಲೆ ಕಾಣಲು ಸಿಕ್ಕ ಇನ್ನೊಂದು ರೋಚಕ ಹಕ್ಕಿಯ ಪರಿಚಯವನ್ನು ಇವತ್ತು ಮಾಡಿಕೊಳ್ಳೋಣ.
ಸಮಯ ಸುಮಾರು ಹತ್ತೂವರೆ ಆಗಿರಬಹುದು. ಬೆಳಗ್ಗಿನ ತಿಂಡಿ ತಿಂದು ಅದಾಗಲೇ ಜೀರ್ಣವಾಗುತ್ತಿತ್ತು. ಸೂರ್ಯ ಸುಮಾರು ಮೇಲಕ್ಕೆ ಬಂದಿದ್ದ. ಆಕಾಶ ಶುಭ್ರವಾಗಿತ್ತು. ಬಿಸಿಲಿನ ಝಳ ಜೋರಾಗಿಯೇ ಇದ್ದುದರಿಂದ ನಾವೆಲ್ಲ ತಂಪು ಕನ್ನಡಕ Sunglasses ಹಾಕಿಕೊಳ್ಳಬೇಕಾಗಿತ್ತು ಮತ್ತು ಬಿಸಿಲು ಟೋಪಿ ಧರಿಸಬೇಕಾಗಿತ್ತು. ಸೂರ್ಯನ ಪ್ರಖರವಾದ ಬೆಳಕು ನಾವು ನಿಂತಲ್ಲೇ ನಮ್ಮನ್ನು ಬೆವರುವಂತೆ ಮಾಡುತ್ತಿತ್ತು. ಆದರೆ ತಂಪಾಗಿ ಬೀಸುವ ಕಡಲಿನ ಗಾಳಿ ಆ ಬೆವರನ್ನು ಹಾರಿಸಿಕೊಂಡು ಹೋಗುತ್ತಿತ್ತು. ನಮಗೆ ಬೆವರಿದ ಅನುಭವ ಆಗುತ್ತಲೇ ಇರಲಿಲ್ಲ. ನಮ್ಮ ಮೈ ಒಣಗಿಯೇ ಇರುತ್ತಿತ್ತು. ನಮ್ಮ ದೇಹದಿಂದ ಲವಣಾಂಶ ಬೆವರಿನ ಮೂಲಕ ಹೊರ ಹೋಗುತ್ತಿತ್ತು. ಹಾಗಾಗಿ ಬಾಯಾರಿಕೆ ಆಗುವುದನ್ನು ಕಾಯದೇ ನಾವು ಆಗಾಗ ನೀರು, ಜ್ಯೂಸ್ ಅಥವಾ ORS ನಂತಹ ಪಾನೀಯಗಳನ್ನು ಕುಡಿಯುತ್ತಿರಬೇಕು. ಹೀಗೇ ಜ್ಯೂಸ್ ಹೀರುತ್ತಾ ಕುಳಿತಿದ್ದಾಗ 11 o'clock ಎಂದು ಯಾರೋ ಕೂಗಿದ ಧ್ವನಿ ಕೇಳಿತು. ಇನ್ನೂ ಹನ್ನೊಂದು ಗಂಟೆ ಆಗಿಲ್ಲ ಅದ್ಯಾಕೆ 11 o'clock ಅಂದ್ರು ಅಂತ ಯೋಚಿಸುತ್ತಿರುವಾಗ ಹಲವರ ಕ್ಯಾಮರಾ ಬೋಟಿನ ಎಡಬದಿಗೆ ತಿರುಗಿತು. ನಾವು ಚಲಿಸುವ ಬೋಟಿನ ಸುತ್ತ ಯಾರಿಗಾದರೂ ಯಾವುದೇ ಹಕ್ಕಿಯ ಚಲನವಲನ ಕಂಡರೆ ಉಳಿದವರಿಗೆ ಅದನ್ನು ತಿಳಿಸಲು ನಾವು ಹೀಗೊಂದು ವಿಧಾನ ಅನುಸರಿಸುತ್ತೇವೆ. ಬೋಟ್ ಸಮುದ್ರದಲ್ಲಿ ಚಲಿಸುವಾಗ ಬೋಟಿನ ಸುತ್ತಲೂ ಸಮುದ್ರ ಕಾಣುತ್ತಿರುತ್ತದೆ. ಬೋಟಿನಲ್ಲಿರುವ ನಾವು ಗಡಿಯಾರದ ಕೇಂದ್ರದಲ್ಲಿದ್ದೇವೆ. ಬೋಟಿನ ಮುಂದಿನ ತುದಿ ಗಡಿಯಾರದಲ್ಲಿ 12 ಗಂಟೆ, ಹಿಂದಿನ ತುದಿ 6 ಗಂಟೆ ಎಂದುಕೊಂಡರೆ ಬಲಬದಿಗೆ 2-5 ಗಂಟೆ ಮತ್ತು ಎಡಬದಿಗೆ 7-11 ಗಂಟೆ ಎಂದರ್ಥ. 11 o'clock ಎಂದರೆ ಬೋಟಿನ ತುದಿಯಿಂದ ಎಡಕ್ಕೆ ಎಂದರ್ಥ. ಹಾಗಾಗಿಯೇ ಎಲ್ಲರ ಗಮನ ಆ ಕಡೆಗೆ ತಿರುಗಿತ್ತು.
ಅಲ್ಲೊಂದು ಸುಂದರವಾದ ಹಕ್ಕಿ. ದೇಹಪೂರ್ತಿ ಬಿಳೀ ಬಣ್ಣ, ಸುಂದರವಾದ ಹಳದಿ ಕೊಕ್ಕು, ಕಣ್ಣಿನ ಸುತ್ತಲೂ ಬಣ್ಣದ ಅಲಂಕಾರ, ಜಾಲಪಾದದಂತಹ ಕಾಲುಗಳು ಎದ್ದು ಕಾಣುವ ಕಣ್ಣು. ನಮ್ಮ ಅರಬ್ಬೀ ಸಮುದ್ರದಲ್ಲಿ ಕಂಡ ಈ ಹಕ್ಕಿ ಮೂಲತಃ ಫೆಸಿಫಿಕ್ ಸಮುದ್ರದ ಆಸುಪಾಸಿನ ಕೆರೇಬಿಯನ್, ಆಸ್ಟ್ರೇಲಿಯಾ ಮತ್ತು ಹವಾಯಿ ದ್ವೀಪಗಳ ನಿವಾಸಿಯಂತೆ. ಅಲ್ಲಿ ತನ್ನ ಸಂತಾನಾಭಿವೃದ್ಧಿ ಮಾಡುವ ಈ ಹಕ್ಕಿ ಅಲ್ಲಿ ಚಳಿಗಾಲ ಆರಂಭ ಆದಾಗ ಅಂದರೆ ನಮಗೆ ಬೇಸಗೆ ಕಾಲ ಇರುವಾಗ ನಮ್ಮ ಕರಾವಳಿಗೆ ಬರುತ್ತದೆ. ರಾತ್ರಿ ಬಂಡೆಗಳ ಮೇಲೆ ನಿದ್ರಿಸುವ ಈ ಹಕ್ಕಿ ಹಗಲಿನಲ್ಲಿ ಸಮುದ್ರದ ಮೇಲೆ ಹಾರಾಡುತ್ತಾ ಮೀನು ಮೊದಲಾದ ಸಮುದ್ರ ಜೀವಿಗಳನ್ನು ಹುಡುಕಿ ತಿನ್ನುತ್ತದೆ. ಕೆಲವೊಮ್ಮೆ ನೀರಿನಲ್ಲಿ ಮುಳುಗಿ ಮೀನು ಹಿಡಿದರೆ ಕೆಲವೊಮ್ಮೆ ಆಕಾಶದಿಂದ ಧುಮುಕಿ ಮೀನು ಹಿಡಿಯುತ್ತದೆ. ಸುಂದರವಾದ ಸಮುದ್ರ ಹಕ್ಕಿಯೊಂದನ್ನು ನೋಡಿ ಸಂತಸಪಟ್ಟ ನಾವು ಅದರ ಚಂದದ ಫೋಟೋ ತೆಗೆದುಕೊಂಡೆವು.
ಕನ್ನಡದ ಹೆಸರು: ಕಡಲ ಬಾತು
ಇಂಗ್ಲೀಷ್ ಹೆಸರು: Masked Booby
ವೈಜ್ಞಾನಿಕ ಹೆಸರು: Sula dactylatra
ಚಿತ್ರ : ಅರವಿಂದ್ ಕುಡ್ಲ
ಮುಂದಿನವಾರ ಇನ್ನೊಂದು ಕಡಲಿನ ಹಕ್ಕಿಯನ್ನು ನೋಡಿದ ಕಥೆಯೊಂದಿಗೆ ಮತ್ತೆ ಭೇಟಿಯಾಗೋಣ...
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
+91 98448 98124
********************************************