ಸ್ಫೂರ್ತಿಯ ಮಾತುಗಳು : ಸಂಚಿಕೆ - 81
Monday, September 18, 2023
Edit
ಸ್ಫೂರ್ತಿಯ ಮಾತುಗಳು : ಸಂಚಿಕೆ - 81
ಲೇಖಕರು : ರಮೇಶ ಎಂ. ಬಾಯಾರು
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
“ಸೋಲು ಗೆಲುವಿನ ಸೋಪಾನ” ಇದು ಹಿರಿಯರ ಅನುಭವಾಮೃತ“. “ಸೋಲೆಂಬುದು ಅಲ್ಪ ವಿರಾಮ ಮಾತ್ರ, ಅದು ಪೂರ್ಣ ವಿರಾಮ ಎಂದಿಗೂ ಅಲ್ಲ.” ಇಂತಹ ಮಾತುಗಳು ಯಶಸ್ವೀ ಜೀವನಕ್ಕೆ ಬಲಾಢ್ಯ ಸಂದೇಶಗಳಾಗಿವೆ. ಗೆಲುವು ಪ್ರಪಂಚಕ್ಕೆ ನಮ್ಮನ್ನು ಪರಿಚಯಿಸಿದರೆ, ಸೋಲು ಪ್ರಪಂಚವನ್ನೇ ನಮಗೆ ಪರಿಚಯಿಸುತ್ತದೆ. ಸೋಲು ಅನುಭವದ ಆಳವಾದ ಪಾಠವನ್ನು ನಮಗೆ ಕಲಿಸುತ್ತದೆ, ಕಣ್ಣ ಮುಂದೆ ಸೋಲು ಇದ್ದರೆ, ಬೆನ್ನ ಹಿಂದೆಯೇ ಗೆಲುವೂ ಇರುತ್ತದೆ. ತಾಳ್ಮೆಯಿಂದ ಕಾಯುವ ವ್ಯವಧಾನಿಗೆ ಗೆಲುವು ನಿಸ್ಸಂದೇಹ.
ಹ್ಯಾರಿ ಪೋಟರ್ ಕುರಿತಾದ ಚಲನಚಿತ್ರ ನಮಗೆ ಬಹಳಷ್ಟು ಪರಿಚಿತ. ಈ ಯಶಸ್ವೀ ಚಲನ ಚಿತ್ರದ ಹಿಂದೆ ಸೋಲಿನ ದುರಂತ ಕಥೆಗಳಿವೆ. ಹ್ಯಾರಿ ಪೋಟರ್ ಕುರಿತಾದ ಕಾದಂಬರಿಗಳ ಲೇಖಕಿ ಜೆ.ಕೆ ರೋಲಿಂಗ್. ಕಡು ಬಡತನದಲ್ಲಿ ಹುಟ್ಟಿದುದರಿಂದ ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ ಅವಳು ಸೋತಳು. ಇದು ಮೊದಲ ಸೋಲು. ಎಳವೆಯಲ್ಲಿ ತಂದೆಯನ್ನಗಲಿ ಎರಡನೆ ಸೋಲನನ್ನನುಭವಿಸಿದಳು. ಶಾಲಾ ಶಿಕ್ಷಕಿಯೋರ್ವರು ಆಕೆಯಲ್ಲಿ ದ್ವಿಭಾಷಾ ಪ್ರೌಢಿಮೆಯನ್ನು ಬೆಳೆಸಿದರು. ಇದರಿಂದ ರೋಲಿಂಗ್ ಭಾಷಾಂತರಗಾರ್ತಿಯಾಗಿ ಕೆಲಸ ಮಾಡಲು ಸಾಧ್ಯವಾಯಿತು. ಆಕೆಗೆ ಸಾಹಿತ್ಯದಲ್ಲಿ ಅಗಾಧ ಒಲವಿತ್ತು. ರೋಲಿಂಗ್ ಅನೇಕ ಕೃತಿಗಳನ್ನು ಬರೆದಳು. ಪ್ರಕಾಶಕರು ಯಾರೂ ಸಿಗಲೇ ಇಲ್ಲ. ಇಲ್ಲೂ ಆಕೆಗೆ ಸೋಲೇ ಇದಿರಾಯಿತು. ಈ ನಡುವೆ ಪೋರ್ಚುಗಲ್ ದೇಶದ ತರುಣನ ಜೊತೆಗೆ ರೋಲಿಂಗ್ ಳ ಪ್ರೇಮ ವಿವಾಹವಾಯಿತು. ಎರಡು ವರ್ಷದಲ್ಲಿ ಪತಿಯ ಕಾರಣದಿಂದ ಆಕೆಯ ವಿವಾಹವೂ ವಿಚ್ಛೇದನವಾಯಿತು. ಹೀಗೆ ಸೋಲಿನ ಸರಣಿಗಳನ್ನು ಕಂಡರೂ ರೋಲಿಂಗ್ ಧೃತಿಗೆಡಲಿಲ್ಲ. ತವರು ಮನೆಯಲ್ಲಿದ್ದುಕೊಂಡು ಹ್ಯಾರಿ ಪೋಟರ್ ಕಾದಂಬರಿ ರಚನೆಯಲ್ಲಿ ತೊಡಗಿದಳು.
1997ರಲ್ಲಿ ಹ್ಯಾರಿ ಪೋಟರ್ ಸರಣಿಯ ಮೊದಲ ಆವೃತ್ತಿ ಸಿದ್ಧವಾಯಿತು. ಪ್ರಕಾಶಕರನ್ನು ಹುಡುಕುತ್ತಾ ಹೋದಳು. ಅಷ್ಟರಲ್ಲಿ ಅವಳ ತಾಯಿಯೂ ಮೃತಳಾದಳು. ಸೋಲುಗಳ ಸರಣಿಗೆ ಮಗದೊಂದು ಸೋಲು ಸೇರ್ಪಡೆಯಾಯಿತು. ಸುಮಾರು ಹನ್ನೆರಡು ಪ್ರಕಾಶನ ಸಂಸ್ಥೆಗಳನ್ನು ಸಂಪರ್ಕಿಸಿದಳು. “ಮಕ್ಕಳಿಗಾಗಿ ಬರೆದ ಕಾದಂಬರಿಯಿಂದ ದುಡ್ಡು ಹುಟ್ಟದು. ಅಂತಹ ಕೃತಿಗಳನ್ನು ಯಾಕೆ ಬರೆಯುವೆ? ನಿನಗೆ ಹುಚ್ಚೇ?” ಎಂದು ಈ ಬ್ರಿಟಿಷ್ ಲೇಖಕಿಯನ್ನು ಎಲ್ಲರೂ ಚುಚ್ಚಿದರೇ ವಿನಹ ಬೆಂಬಲಿಸಲಿಲ್ಲ. “ಸೋಲುಗಳ ಸವಾಲು, ಗೆಲುವಿನ ರುಮಾಲು” ಎಂದು ತಿಳಿದಿದ್ದ ಆಕೆ ‘ಬ್ಲೂಂಸ್ ಬರಿ’ ಎಂಬ ಪ್ರಕಾಶನ ಸಂಸ್ಥೆಗೂ ತನ್ನ ಕಾದಂಬರಿಯ ಪ್ರತಿಯನ್ನು ನೀಡಿದಳು. ಬ್ಲೂಂಸ್ ಬರಿ ಪ್ರಕಾಶಕರು ಕಾದಂಬರಿಯ ಪ್ರತಿಯನ್ನು ಮನೆಗೆ ಒಯ್ದಿಟ್ಟರೇ ಹೊರತು ಬೆಂಬಲಿಸುವ ಮಾತನ್ನೂ ಹೇಳಲಿಲ್ಲ.
ತನ್ನ ಮಗನು ಹ್ಯಾರಿ ಪೋಟರನ್ನು ಬಹಳ ಶ್ರದ್ಧೆಯಿಂದ ಓದಿ ಮುಗಿಸಿರುವುದನ್ನು ಬ್ಲೂಂಸ್ಬರಿ ಪ್ರಕಾಶಕರು ಗಮನಿಸಿ, ಈ ಕೃತಿಯು ಮಕ್ಕಳನ್ನು ಸೆಳೆಯುತ್ತದೆ ಎಂದರಿತರು. ಅವರು ರೋಲಿಂಗ್ ಳನ್ನು ಕರೆಸಿ, 4000 ಡಾಲರ್ ಗೆ ಕೃತಿಯ ಮಾರಾಟದ ಹಕ್ಕು ಪಡೆದರು. 1997ರಿಂದ 2007ರ ನಡುವೆ ಹ್ಯಾರಿ ಪೋಟರ್ ನ ಏಳು ಸರಣಿಗಳನ್ನು ರೋಲಿಂಗ್ ಬರೆದಳು. ಆ ಸರಣಿಗಳೆಲ್ಲವೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಾರಾಟವಾದುವು. ಅಮೇರಿಕಾದ ಸಂಸ್ಥೆಯೊಂದು ಒಂದು ಲಕ್ಷ ಡಾಲರ್ ಗೆ ಆಕೆಯ ಪುಸ್ತಕಗಳ ಮಾರಾಟದ ಹಕ್ಕು ಪಡೆದರೆ, ಫಿಲಂ ತಯಾರಕರಾದ ವಾರನ್ ಬ್ರದರ್ಸ್, ಹ್ಯಾರಿ ಪೋಟರ್ ಕಾದಂಬರಿಯ ಆಧಾರದಲ್ಲಿ ಚಲನ ಚಿತ್ರಗಳನ್ನು ತಯಾರಿಸಲು ಒಂದು ಮಿಲಿಯನ್ ಡಾಲರ್ ನೀಡಿ ಹಕ್ಕು ಪಡೆದರು. ಇಂದು ಆಕೆ ಬಿಲಿಯನ್ ಡಾಲರ್ ಶ್ರೀಮಂತೆ. ಸೋಲುಗಳನ್ನು ಸವಾಲಾಗಿ ಸ್ವೀಕರಿಸದೆ ಬಾಗಿಲ ಚಿಲಕ ಹಾಕಿ ಮನೆಯಲ್ಲಿ ಕುಳಿತು ಕೊಳ್ಳುತ್ತಿದ್ದರೆ ಜೆ.ಕೆ ರೋಲಿಂಗ್ ಈ ಮಟ್ಟಕ್ಕೆ ಬೆಳೆದು ನಿಲ್ಲಲು, ಗೆಲುವನ್ನು ಅನುಭವಿಸಲು ಆಕೆಗೆ ಸಧ್ಯವಾಗುತ್ತಿರಲಿಲ್ಲ. ಇಂದು ಆಕೆಗೆ ಐವತ್ತೇಳು ವರ್ಷ ವಯಸ್ಸು.
ಆದುದರಿಂದ ಸೋಲೆಂಬುದು ಎಂದೂ ಅಂತಿಮವಲ್ಲ. ಸಾಧನೆಗೆ ಹುಮ್ಮಸ್ಸು ತುಂಬುವ ಮೊದಲ ಹೆಜ್ಜೆಯೇ ಸೋಲು. ವಿದ್ಯುತ್ ಬಲ್ಬುಗಳ ಆವಿಷ್ಕಾರಕ ತೋಮಸ್ ಆಲ್ವಾ ಎಡಿಸನ್ ತನ್ನ ಸಾಧನೆಯ ಹಂತದಲ್ಲಿ ಸಾವಿರ ಸೋಲುಗಳನ್ನುಂಡಿದ್ದಾನೆ, ಆದರೂ ಸೋಲನ್ನೊಪ್ಪದೆ ಹಠದಿಂದ ಪ್ರಯತ್ನಿಸಿದುದರ ಫಲ ಗೆಲುವನ್ನು ಒದಗಸಿತು, ಅವನ ಹೆಸರು ವಿಶ್ವದಲ್ಲಿ ಚಿರ ಸ್ಥಾಯಿಯಾಯಿತು. ಸೋಲು ಅನಭವಗಳನ್ನು ವೃದ್ಧಿಸುತ್ತದೆ. ಹೊಸ ಅನ್ವೇಷಣೆಗೆ ಹೊಸತಾದ ದಾರಿಗಳನ್ನು ತೋರಿಸುತ್ತದೆ. ಪ್ರಥಮದಲ್ಲೇ ಗೆಲುವು ಬಂದರೆ ಆ ಗೆಲುವು “ಅಹಂ” ಗೆ ಕಾರಣವಾಗಿ ವ್ಯಕ್ತಿತ್ವ ವಿನಾಶಕ್ಕೂ ಹೇತುವಾಗಬಹುದು.
ಸೋಲುಗಳನ್ನು ಎದುರಿಸಿ ಪಡೆಯುವ ಗೆಲುವು ವ್ಯಕ್ತಿತ್ವವನ್ನು ಉಚ್ಛ್ರಾಯಗೊಳಿಸುತ್ತದೆ. ಸೋಲನ್ನು ಸಹಿಸಲು ಅಸಮರ್ಥರಾದವರಿಗೆ ಗೆಲುವು ಕನಸಿನ ಮಾತು. ಸೋಲನ್ನು ಗೆಲುವಾಗಿ ಪರಿವರ್ತಿಸಲು ನಮ್ಮಲ್ಲಿ ಅನನ್ಯವಾದ ತಾಳ್ಮೆಯಿರಲೇ ಬೇಕು. ಜೊತೆಗೆ ಕಾರ್ಯದ ಮೇಲೆ ಪ್ರೀತಿ, ಆತ್ಮವಿಶ್ವಾಸ ಮತ್ತು ಗೆಲುವಿನಲ್ಲಿ ನಂಬಿಕೆಗಳಿರಬೇಕು. ಸಹಿಷ್ಣುತೆಯ ಉನ್ನತ ಸ್ಥಿತಿಯೇ ತಾಳ್ಮೆ. ತಾಳಿದವರಿಗೆ ಮಾತ್ರವೇ ಬಾಳು. ವಿಪರೀತ ಕಷ್ಟ ನಷ್ಟಗಳು ಬಂದಾಗ ಋಣಾತ್ಮಕವಾಗದೆ, ಧನಾತ್ಮಕವಾಗುವುದೇ ನಿಜವಾದ ಜೀವನ ಪಥ. ಸೋಲಿಸುವುದು ಗೆಲುವಲ್ಲ, ಸೋಲುವುದೇ ಗೆಲುವು. ಸೋಲೇ ಯಶಸ್ಸಿನ ತಾರಕ ಮಂತ್ರ. ನಮಸ್ಕಾರ
(ಚಿತ್ರಗಳು : ಅಂತರ್ಜಾಲ ಕೃಪೆ)
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು
“ಸ್ಕಂದ” ಕುಳ ಗ್ರಾಮ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ ಸಂಖ್ಯೆ : +91 94486 26093
rameshbayar@gmail.com
********************************************