-->
ಜಗಲಿ ಕಟ್ಟೆ : ಸಂಚಿಕೆ - 17

ಜಗಲಿ ಕಟ್ಟೆ : ಸಂಚಿಕೆ - 17

ಜಗಲಿ ಕಟ್ಟೆ : ಸಂಚಿಕೆ - 17
ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 


ಇದು ನಿಮ್ಮ ಮನೆಯ 
ಮಕ್ಕಳ ಜಗಲಿ
www.makkalajagali.com
    ಮಕ್ಕಳ ಜಗಲಿಯ ನನ್ನ ಎಲ್ಲಾ ಆತ್ಮೀಯ ಓದುಗ ಬಂಧುಗಳಿಗೆ ಪ್ರೀತಿಯ ನಮಸ್ಕಾರಗಳು.... ನಿಮ್ಮ ಜೊತೆ ಮಾತಾಡುವ ನಿಮ್ಮ ಸಲಹೆ, ಹೊಸ ಆಲೋಚನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದಕ್ಕಾಗಿ ಈ ಜಗಲಿ ಕಟ್ಟೆ.... ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ..... ತಾರಾನಾಥ್ ಕೈರಂಗಳ



    ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.... ನಾಗರ ಪಂಚಮಿಯಿಂದ ತೊಡಗಿ ಸಾಲು ಸಾಲು ಹಬ್ಬಗಳು ಈ ನಾಡಿನಲ್ಲಿ ಎಲ್ಲರಿಗೂ ಸಂತಸ ಸಂಭ್ರಮವನ್ನು ನೀಡುತ್ತಿವೆ. ಒತ್ತಡದ ಜೀವನವನ್ನು ಆಹ್ಲಾದಕರವಾಗಿ ಸವಿಯುವ ವೈಜ್ಞಾನಿಕ ಸಂದೇಶ ಈ ಹಬ್ಬಗಳಲ್ಲಿದೆ...!!
    2002 - 2003 ಮಂಗಳೂರಿನ ಪ್ರಖ್ಯಾತ ಮಹಾಲಸಾ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ನಾವು ಕೊನೆಯ ವರ್ಷದ ವಿದ್ಯಾರ್ಥಿಗಳಾಗಿದ್ದಂತಹ ಸಮಯ. ಅಂತಿಮ ಪರೀಕ್ಷೆಯನ್ನು ಎದುರಿಸಿ ವೃತ್ತಿ ಜೀವನಕ್ಕೆ ಕಾಲಿಡುವ ಅನಿವಾರ್ಯತೆ ನಮಗೆಲ್ಲರಿಗೂ ಇತ್ತು. ಮುಂದಿನ ಕನಸು, ಉದ್ಯೋಗ, ಕ್ಷೇತ್ರಗಳ ಆಯ್ಕೆ ಇವೆಲ್ಲ ನಮಗೆ ಸವಾಲಾಗಿತ್ತು...!!
     ಇವೆಲ್ಲ ಒತ್ತಡಗಳ ಮಧ್ಯ ನಮ್ಮತನವನ್ನು ಕಾಪಿಡಲು, ನಮ್ಮಿಂದ ಸಮಾಜಕ್ಕೆ ಏನಾದರೂ ಒಂದು ಕೊಡುಗೆಯಾಗಲು ನಿರ್ಧಾರಕ್ಕೆ ಬಂದೆವು. ನನ್ನ ಸಹಪಾಠಿ ಹಾಗೂ ಆತ್ಮೀಯ ಗೆಳೆಯ ಸುರೇಶ ಕೆ ಪಾಂಡವರ ಕಲ್ಲು , "ಗ್ರಾಮೀಣ ಭಾಗದಿಂದ ಬಂದಿರುವ ನಾವುಗಳು, ಅವಕಾಶ ವಂಚಿತರಾಗಿ ಸವಾಲುಗಳನ್ನೆದುರಿಸಿ ಮಾಹಿತಿಗಳ ಕೊರತೆಯ ಮಧ್ಯೆಯೂ ಕಲಾ ಕ್ಷೇತ್ರಕ್ಕೆ ಕಾಲಿಟ್ಟಿದ್ದೇವೆ. ನಮ್ಮ ಮುಂದಿನ ಹಂತದಲ್ಲಿ ಈ ವ್ಯವಸ್ಥೆಗೆ ನಮ್ಮಿಂದಲೇನಾದರೂ ಕೊಡುಗೆ ಆಗಬೇಕು." ಎಂದು ಬಹಳ ಕಾಳಜಿಯಿಂದ ಹೇಳಿದಾಗ ನನ್ನಲ್ಲೂ ಈ ಬಗ್ಗೆ ಚಿಂತನೆಗಳು ಹುಟ್ಟಿಕೊಂಡಿತು.
        ಯಾವುದೇ ಆರ್ಥಿಕ ಮೂಲದ ಸಹಕಾರ ಇಲ್ಲದಿದ್ದರೂ ಆ ಸಮಯಕ್ಕೆ "ಚಕ್ರಪಾಣಿ ಫೈನಾರ್ಟ್ಸ್ ಅಂಡ್ ಎಜುಕೇಶನಲ್ ಟ್ರಸ್ಟ್ (ರಿ)" ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡಿದೆವು. ವಿದ್ಯಾರ್ಥಿಗಳ ಚಿತ್ರಕಲಾ ಅಭ್ಯುದಯಕ್ಕೆ ಪೂರಕವಾಗಿ ಕೆಲಸ ಮಾಡ ತೊಡಗಿದೆವು. ವಿದ್ಯಾರ್ಥಿಗಳಿಗಾಗಿ ಕಲಾ ಹಬ್ಬಗಳನ್ನೇ ಆಯೋಜನೆ ಗೊಳಿಸಿದೆವು. ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ, ರಾಷ್ಟ್ರಮಟ್ಟದ ಅನೇಕ ಕಲಾ ಪ್ರೇರಣೆ ತುಂಬುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡೆವು. ಅನೇಕ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಸಾಕಷ್ಟು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿರೋದು ನಮ್ಮ ಆ ಸಮಯದ ಹೆಗ್ಗಳಿಕೆಯಾಯಿತು. ಮಕ್ಕಳ ಆನಂದದಲ್ಲಿ ನಾವು ಭಾಗಿಗಳಾಗಿ ಒತ್ತಡಗಳನ್ನೆಲ್ಲ ಕಳೆದು ಸಂಭ್ರಮ ಪಟ್ಟಿದ್ದೇವೆ. 
      ಹಬ್ಬಗಳು ಅದು ಯಾವುದೇ ಧಾರ್ಮಿಕವಾಗಿರಲಿ ಅಥವಾ ಸಾಮಾಜಿಕವಾಗಿರಲಿ ಸಂತಸವನ್ನು ತುಂಬುದಂತೂ ಸತ್ಯ. ಒಟ್ಟು ಶೈಕ್ಷಣಿಕ ವ್ಯವಸ್ಥೆಯೇ ಹಬ್ಬವಾಗಬೇಕು. ಹಬ್ಬದ ಮೂಲಕ ಕಲಿಕೆಯಾಗಬೇಕು. ನಿತ್ಯ ಕಲಿಕೆಯೇ ಹಬ್ಬವಾಗಬೇಕು...! 
       
     
ಕಳೆದ ಸಂಚಿಕೆಯ ಜಗಲಿಕಟ್ಟೆ - 16 ಅಂಕಣದಲ್ಲಿ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು ಮತ್ತು ವಿದ್ಯಾ ಕಾರ್ಕಳ, ಸಹಶಿಕ್ಷಕಿ.. ಇವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದರು. ಈ ವಾರದ ಜಗಲಿ ಕಟ್ಟೆಯ ಓದುಗರ ಮಾತುಕತೆಯನ್ನು ಈಗ ಓದೋಣ....
 
 
      ನಮಸ್ಕಾರಗಳು ಸರ್.... ಹಲವು ವೈವಿಧ್ಯಗಳೊಂದಿಗೆ ಸುಂದರವಾಗಿ ಮೂಡಿ ಬರುವ ಜಗಲಿಯನ್ನು ಓದುವುದೇ ಖುಷಿ. ಅದರಲ್ಲೂ ಕಳೆದ ವಾರದ ಜಗಲಿಯಲ್ಲಿ ಪ್ರಕಟವಾದ ನನಗೆ ಸ್ಪೂರ್ತಿಯಾಗಿರುವ ಶಿಕ್ಷಕರು.... ಅಂಕಣದ ಹಿರಿಯರ, ಕಿರಿಯರ ಬರಹಗಳು ಸೊಗಸಾಗಿತ್ತು. ಬಾಲ್ಯದ ಚಂದದ ದಿನಗಳನ್ನು ನೆನಪಿಸಿತ್ತು. ನಾನೂ ನನ್ನ ಗುರುಗಳಿಗೆ ಅಕ್ಷರ ನಮನ ಸಲ್ಲಿಸಲು ಅವಕಾಶವನ್ನಿತ್ತ ಮಕ್ಕಳ ಜಗಲಿಗೆ ಧನ್ಯವಾದಗಳು. ಹಿರಿಯರ ಬರಹದಲ್ಲಿ ವಿದ್ಯಾ ಗಣೇಶ್ ಚಾಮೆತ್ತಮೂಲೆ ಅವರ ಬರಹದ ಸಾಲುಗಳು..... ನಮ್ಮ ಕನಸು ಕೈಗೂಡದಾಗ ಪರಿತಪಿಸದೆ ಮನಸ್ಸಿಗೆ ಹಿತವೆನಿಸುವ ಪರ್ಯಾಯ ಹಾದಿಯಲ್ಲಿ ನಡೆಯುವುದು.... "ಮನಸ್ಸು ಮಾಡಿದರೆ ಎಲ್ಲವೂ ಸುಗಮ" ಎನ್ನುವ ಸಾಲುಗಳು ನನ್ನಂತಹ ನೊಂದ ಮನಸ್ಸಿಗೆ ಧೈರ್ಯ ಮತ್ತು ಸಾಂತ್ವಾನ ಹೇಳುವಂತಿತ್ತು. ಶಕ್ತಿ ತುಂಬುವಂತಿತ್ತು. ಧನ್ಯವಾದಗಳು ವಿದ್ಯಾ ಮೇಡಂ. ನಿಷ್ಪಾಪಿ ಸಸ್ಯಗಳು ಅಂಕಣದಲ್ಲಿ ಕೊಟ್ಟೆಮುಳ್ಳು ಮತ್ತು ಪುಚ್ಚೆಹಣ್ಣಿನ ಸಸ್ಯಗಳ ಬಗ್ಗೆ ವಿಜಯ ಮೇಡಂ ವಿವರಿಸಿದ ಮಾಹಿತಿ ಉಪಯುಕ್ತವಾಗಿದೆ. ಪುಚ್ಚೆಹಣ್ಣಿನ ಎಲೆಯನ್ನು ಉತ್ಸಾವಾದಿಗಳಿಗೆ ಬಳಸುತ್ತಾರೆ ಎಂದು ತಿಳಿಯಿತು. ಈ ಗಿಡದ ವೈಜ್ಞಾನಿಕ ಹೆಸರು ತಿಳಿಸಿದ್ದರೆ ಸಹಾಯಕವಾಗುತಿತ್ತು ಮೇಡಂ.  
     ಜಿ.ಕೆ. ರೋವ್ಲಿಂಗ್ ಮತ್ತು ದಶರಥ ಮಾಂಜಿ ಎಂಬ ನಿಸ್ವಾರ್ಥ ಸಾಧಕರ ಜೀವನಗಾಥೆಯನ್ನು ಹಿಂದೆ ಕೇಳಿದ್ದರೂ.... ಯಾಕೂಬ್ ಸರ್ 'ಹೃದಯದ ಮಾತು' ಅಂಕಣದಲ್ಲಿ ಮನಮುಟ್ಟುವಂತೆ ವಿವರಿಸಿದ್ದಾರೆ. ಹಕ್ಕಿ ಕತೆ ಕುತೂಹಲಕಾರಿಯಾಗಿತ್ತು. ತುಳಸಿ ಮೇಡಂ ಬರೆದಿರುವ 'ಶಿಕ್ಷಕರ ಸ್ಕೂಲ್ ಡೈರಿ' ಓದುವಾಗ ಶಿಶಿರನ ನೆನಪಾಯಿತು. ಶಿಶಿರ ತನ್ನ ನೋವಿನ ದಿನಗಳಲ್ಲಿ ಸಂತೋಷವಾಗಿರಲು ತುಳಸಿ ಮೇಡಂ ಹಾಗು ತಾರಾನಾಥ ಸರ್ ನೀವು ಅವನಲ್ಲಿ ತುಂಬಿದ ಧೈರ್ಯ, ಅವನಿಗೆ ತೋರಿದ ಪ್ರೀತಿ, ಗೌರವ ನಾನು ಯಾವತ್ತೂ ನೆನಪಿನಲ್ಲಿಟ್ಟುಕೊಳ್ಳುತ್ತೇನೆ. ಮಕ್ಕಳ ಜಗಲಿಯ ಮೂಲಕ ಅನೇಕ ಪ್ರತಿಭೆಗಳಿಗೆ ಪ್ರೀತಿ, ಪ್ರೋತ್ಸಾಹ, ಪ್ರೇರಣೆ ನೀಡುತ್ತಿರುವ ನಿಮಗೆ ನನ್ನ ಅಂತರಾಳದ ನಮನಗಳು.
....................................... ಕವಿತಾ ಶ್ರೀನಿವಾಸ 
W/o ಶ್ರೀನಿವಾಸ ದೈಪಲ 
'ಚೈತನ್ಯ ' ನೆಲ್ಯಡ್ಕ, ಅಂತರ, 
ನರಿಕೊಂಬು ಅಂಚೆ ಮತ್ತು ಗ್ರಾಮ  
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ 
Mob: +91 94806 25773
******************************************



ಎಲ್ಲರಿಗೂ ನಮಸ್ಕಾರ,
     ಬೇರೆಯವರನ್ನು ಪರಿವರ್ತಿಸಲು ಹೋಗುವ ಬದಲು ನಾವೇ ಬದಲಾಗುವುದು ಉತ್ತಮ ಎನ್ನುವ ಸಂದೇಶವನ್ನು ಶಿಕ್ಷಣಾಧಿಕಾರಿ ಜ್ಞಾನೇಶ ಸರ್ ರವರು ತಮ್ಮ ಜೀವನ ಸಂಭ್ರಮ ಸಂಚಿಕೆಯ ಲೇಖನದಲ್ಲಿ ತುಂಬಾ ಸೊಗಸಾಗಿ ನಿರೂಪಿಸಿದ್ದಾರೆ. ಉನ್ನತ ಯಶಸ್ಸನ್ನು ಪಡೆಯಲು ಸತತ ಪ್ರಯತ್ನ ನಡೆಸಿದರೆ ಅದಕ್ಕೆ ಅಡ್ಡಗಾಲು ಹಾಕುವವರು ಅನೇಕರಿರಬಹುದು. ಇದ್ಯಾವುದಕ್ಕೂ ಕಿವಿಗೊಡದೆ ನಮ್ಮಷ್ಟಕ್ಕೆ ನಾವಿದ್ದು ಪ್ರಯತ್ನ ಮುಂದುವರಿಸಿದರೆ ಯಶಸ್ಸು ಸಾಧ್ಯ. ಸಕಾಲಿಕ ಲೇಖನ ರಮೇಶ್ ಎಂ ಬಾಯಾರು ಸರ್ ರವರಿಂದ.
     ಅರವಿಂದ ಕುಡ್ಲ ಅವರ ಹಕ್ಕಿ ಕಥೆಯಲ್ಲಿ ಕಲಾತ್ಮಕವಾದ ಗೂಡನ್ನು ಕಟ್ಟುವ ಪರಿಯೊಂದಿಗೆ ಕಂದುಕಪ್ಪು ಕಮರಿತೋಕೆ ಹಕ್ಕಿಯ ಪರಿಚಯ ತುಂಬಾ ಇಷ್ಟವಾಯಿತು. ವಿಜಯಾ ಮೇಡಂ ರವರ ನಿಷ್ಪಾಪಿ ಸಸ್ಯಗಳ ಈ ಸಲದ ಸಂಚಿಕೆಯಲ್ಲಿ ಅಳಿವಿನಂಚಿನಲ್ಲಿರುವ ಪುಚ್ಚೆ ಹಣ್ಣಿನ ಗಿಡದ ಪರಿಚಯ ಸೊಗಸಾಗಿ ಮೂಡಿ ಬಂದಿದೆ.
     ಸಾಧನೆ ಮಾಡಬೇಕೆಂಬ ಛಲವಿದ್ದಲ್ಲಿ ನಿರಂತರ ಪ್ರಯತ್ನವಿದ್ದಲ್ಲಿ ಯಾವುದೇ ಅಡ್ಡಿ ಆತಂಕಗಳಿದ್ದರೂ ಎದುರಿಸಬಹುದು. ದಶರಥ ಮಾಂಜಿಯವರ ಉದಾಹರಣೆ ಎಲ್ಲರಿಗೂ ಪ್ರೇರಣಾದಾಯಿ. ಸುಂದರ ಲೇಖನ ಯಾಕೂಬ್ ಸರ್ ರವರಿಂದ. ದಾರಿತಪ್ಪುತ್ತಿರುವ ವಿದ್ಯಾರ್ಥಿಯೋರ್ವನನ್ನು ಶಿಕ್ಷೆ ಇಲ್ಲದೇನೆ ಪ್ರೀತಿಯಿಂದ ಯಾವ ರೀತಿ ಪರಿವರ್ತಿಸಬಹುದು ಎಂಬುದನ್ನು ಭಾರತಿ (ತುಳಸಿ ಕೈರಂಗಳ) ಮೇಡಂರವರು ಶಿಕ್ಷಕರ ಡೈರಿಯಲ್ಲಿ ತಮ್ಮ ಅನುಭವವನ್ನು ಬಹಳ ಸೊಗಸಾಗಿ ನಿರೂಪಿಸಿದ್ದಾರೆ. 
       ಈ ವಾರದ ಮಕ್ಕಳ ಎಲ್ಲಾ ಕವನಗಳು ಚೆನ್ನಾಗಿತ್ತು. ಎಲ್ಲಾ ಮಕ್ಕಳಿಗೆ ಅಭಿನಂದನೆಗಳು. ಇನ್ನಷ್ಟು ಮಕ್ಕಳು ಜಗಲಿಯಲ್ಲಿ ತಮ್ಮ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲಿ. ವಾಣಿಯಕ್ಕನವರ ಪುಸ್ತಕ ಪರಿಚಯ ಹಾಗೂ ರಮೇಶ್ ಉಪ್ಪುಂದರವರ ಪದಬಂಧ ಸಂಚಿಕೆಗಳು ಚೆನ್ನಾಗಿ ಮೂಡಿ ಬಂದಿವೆ.
      ಈ ವಾರದ ಜಗಲಿ ತುಂಬಾ ಸೊಗಸಾಗಿ ಮೂಡಿ ಬರಲು ಕಾರಣಕರ್ತರಾದ ಎಲ್ಲಾ ಲೇಖಕರಿಗೆ , ಮಕ್ಕಳಿಗೆ ಹಾಗೂ ತಾರಾನಾಥ ಕೈರಂಗಳರಿಗೆ ಕೃತಜ್ಞತೆಗಳು. ಜಗಲಿಯ ಎಲ್ಲರಿಗೂ ಮತ್ತೊಮ್ಮೆ ನನ್ನ ನಮನಗಳು.
....................................... ಶ್ರೀರಾಮ ಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
ಬಾಯಾರು, ಕಾಸರಗೋಡು ಜಿಲ್ಲೆ
Mob: +91 94819 74949
******************************************


    ಎಲ್ಲರಿಗೂ ನಮಸ್ಕಾರಗಳು.... ನಿತ್ಯ ನಿರಂತರವಾಗಿ ಹೊಸ-ಹೊಸ ಆಲೋಚನೆಗಳನ್ನು ಹೊತ್ತು ತರುತ್ತಿರುವ 'ಮಕ್ಕಳ ಜಗಲಿ' ಗೆ ನನ್ನ ವಂದನೆಗಳು. ಪ್ರತಿಯೊಂದು ವಿಚಾರಗಳಲ್ಲೂ ನಾವು ಪರರ ವರ್ತನೆಯ ಬಗ್ಗೆಯೇ ದೂಷಿಸುತ್ತಾ ಹೋದರೆ ನಮ್ಮೊಳಗಿನ ನೆಮ್ಮದಿಗೆ ನಾವೇ ಮೋಸ ಮಾಡಿದಂತೆ, ಎಂಬ ಸಣ್ಣ-ಸಣ್ಣ ವಿಚಾರಗಳೂ ನಮಗೆ ಕೆಲವೊಮ್ಮೆ ಹೊಳೆಯುವುದೇ ಇಲ್ಲ. ಪರಿವರ್ತನೆ ಎಂಬ ದೊಡ್ಡತನ ನಮ್ಮೆಲ್ಲರಲ್ಲೂ ಒಡಮೂಡಬೇಕೆಂಬ ಆಶಯ ಹೊತ್ತ ಜ್ಞಾನೇಶ್ ಸರ್ ರವರು ಬರೆದ "ಪರಿವರ್ತನೆ" ಎಂಬ ಲೇಖನ, ಸಂಭ್ರಮದ ಜೀವನಕ್ಕೆ ದಾರಿತೋರಿಸುವಂತಿತ್ತು.
    ನಾವು ಜೀವನದಲ್ಲಿ ಏನನ್ನೇ ಆಗಲಿ, ಸಾಧಿಸಬೇಕೆಂಬ ಛಲವಂತರಾಗಿದ್ದರೆ, ಮೊದಲು ಗಾಳಿ ಮಾತುಗಳಿಗೆ ನೊಂದುಕೊಳ್ಳುವುದನ್ನು ಅಥವಾ ಪ್ರತಿಕ್ರಿಯಿಸುವುದನ್ನು ಬಿಡಬೇಕು. ಆಗ ಮಾತ್ರವೇ ನಾವು ನಮ್ಮ ಮನವನ್ನು ನಮ್ಮ ನಿಯಂತ್ರಣದಲ್ಲಿ ಇಟ್ಟುಕೊಂಡು ಮುನ್ನಡೆದು ಗುರಿ ತಲುಪಲು ಸಾಧ್ಯ, ಎಂಬ ಸಂದೇಶವನ್ನು ಸಾರುವ, "ಕಿವುಡರಾದರೆ " ಎಂಬ ರಮೇಶ್ ಸರ್ ರವರ ಲೇಖನವೂ ಸೊಗಸಾಗಿತ್ತು. ವಾರಕ್ಕೊಂದು ಹಕ್ಕಿಗಳ ಮಾಹಿತಿ ನೀಡುತ್ತ-ನೀಡುತ್ತಾ, ತಮ್ಮ ಅಮೂಲ್ಯವಾದ ಒಂದಷ್ಟು ಸಮಯವನ್ನು ಪಕ್ಷಿಗಳ ಅಧ್ಯಯನಕ್ಕಾಗಿ ಮೀಸಲಿರಿಸಿರುವ ಅರವಿಂದ ಸರ್ ರವರ ಪಕ್ಷಿಪ್ರೇಮ ಅಗಾಧವಾದದ್ದು. ಅದೇ ರೀತಿ ನಮ್ಮ ಹಿರಿಯರು ನೂರಾರು ಕಾಲ ಆರೋಗ್ಯವಂತರಾಗಿ ಬಾಳಲು ಕಾರಣವಾಗಿರುವ ಅದೆಷ್ಟೋ ರೀತಿಯ ಸಸ್ಯಲೋಕವನ್ನು ನಮಗಾಗಿ ಪರಿಚಯಿಸುತ್ತಾ, ಅದರ ಪ್ರಯೋಜನವನ್ನು "ನಿಷ್ಪಾಪಿ ಸಸ್ಯಗಳು" ಎಂಬ ಲೇಖನದ ಮುಖೇನ ಬಿತ್ತರಿಸುತ್ತಿರುವ ವಿಜಯಾ ಮೇಡಂ ರವರಿಗೂ ವಂದನೆಗಳು.
     ಮಕ್ಕಳ ಮನಸ್ಸು ಕೋಮಲವಾದದ್ದು. ಪ್ರೀತಿಯಿಂದ ತಿದ್ದಿ ತೀಡಿದರೆ, ಎಂತಹ ಕಲ್ಲು ಮನಸುಗಳೂ ಕರಗಿ ಮೃದುವಾಗಬಲ್ಲದು, ಎಂಬ ನೈಜ ಚಿತ್ರಣದ ಅನುಭವವನ್ನು "ಶಿಕ್ಷಕರ ಡೈರಿ" ಯ ಮೂಲಕ ಸಾದರಪಡಿಸಿರುವ ತುಳಸಿ ಮೇಡಂ ರವರ ಲೇಖನವೂ ಚೆನ್ನಾಗಿತ್ತು. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ, ಎಂಬ ಸಕಾರಾತ್ಮಕ ಜೀವಂತ ಸನ್ನಿವೇಶವನ್ನು ಅಚ್ಚುಕಟ್ಟಾಗಿ "ಅಮರ ಪ್ರೇಮಿಯ ನೆನಪಿನಲ್ಲಿ" ಎಂಬ ಶೀರ್ಷಿಕೆಯಡಿಯಲ್ಲಿ ಪರಿಶುದ್ಧ ಪ್ರೀತಿಯ ಸಾಹಸಗಾಥೆ ಯನ್ನು ಮತ್ತೊಮ್ಮೆ ನೆನಪಿಸಿದ ಯಾಕೂಬ್ ಸರ್ ರವರ ಲೇಖನವೂ ಸೊಗಸಾಗಿತ್ತು. ಹೀಗೆ ವರ್ಣಿಸುತ್ತಾ ಹೋದರೆ... ಜಗಲಿಯ ಅಂಗಳದಲ್ಲಿ ಮಿಂಚುತ್ತಿರುವ ಪ್ರತಿಯೊಂದೂ ಅಂಕಣಗಳೂ ಉತ್ತಮೋತ್ತಮವಾಗಿಯೇ ಮೂಡಿಬರುತ್ತಿದೆ. ಮಕ್ಕಳ ಕವನಗಳು, ಚಿತ್ರಗಳು, ಪುಸ್ತಕ ಪರಿಚಯ, ಮೆದುಳಿಗೆ ಮೇವು ನೀಡುವ ರಮೇಶ್ ಸರ್ ರವರ "ಪದದಂಗಳ", ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನತೆಯನ್ನು ತುಂಬಿಸಿಕೊಂಡು ಬರುತ್ತಿವೆ.
     ರಾಜ್ಯಮಟ್ಟದ ಕಥೆ ಹಾಗೂ ಕವನ ಸ್ಪರ್ಧೆಗಳು ಮತ್ತೆ ಕಲಾರಸಿಕರ ಬೇಟೆಗಾಗಿ ಮುನ್ನುಗ್ಗಿ ಬರುತ್ತಿರುವುದು ಸಂತಸದ ವಿಚಾರವಾಗಿದೆ.
"ಮಕ್ಕಳ ಜಗಲಿ" ತನ್ನ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಿಕೊಂಡು ಹೆಮ್ಮರವಾಗಿ ಬೆಳೆಯಲಿ ಎಂಬ ಆಶಯದೊಂದಿಗೆ.....
.......................................... ವಿದ್ಯಾಗಣೇಶ್ ಚಾಮೆತ್ತಮೂಲೆ ಮನೆ
ಕೊಣಾಲು ಗ್ರಾಮ ಮತ್ತು ಅಂಚೆ
ಕಡಬ ತಾಲೂಕು
ದ.ಕ. 574229
Mob: +91 99453 11853
******************************************


ಓದುಗರ ಮಾತುಕತೆಯಲ್ಲಿ..... ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡ ಮಕ್ಕಳ ಜಗಲಿ ಕುಟುಂಬದ ಶ್ರೀರಾಮ ಮೂರ್ತಿ, ನಿವೃತ್ತ ವಿಜ್ಞಾನ ಶಿಕ್ಷಕರು , ಕವಿತಾ ಶ್ರೀನಿವಾಸ ದೈಪಲ ಮತ್ತು ವಿದ್ಯಾಗಣೇಶ್ ಚಾಮೆತ್ತಮೂಲೆ .... ಇವರಿಗೆ ಧನ್ಯವಾದಗಳು. 
       ಮಕ್ಕಳ ಜಗಲಿಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತಾಗಿ ನಿಮ್ಮ ಅನಿಸಿಕೆಗಳು ಹಾಗೂ ಸಲಹೆಗಳನ್ನು ಸ್ವೀಕರಿಸುತ್ತೇವೆ. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಹಿತೈಷಿಗಳು ನಮಗೆ ಬರೆದು ಕಳುಹಿಸಿ.... ಹೆಸರು ವಿಳಾಸ ಹಾಗೂ ಭಾವಚಿತ್ರದೊಂದಿಗೆ ನಿಮ್ಮ ಅನಿಸಿಕೆಗಳು 100 ಪದಗಳ ಮಿತಿಯಲ್ಲಿರಲಿ.....
   ಮುಂದಿನ ವಾರದ ಜಗಲಿ ಕಟ್ಟೆಯಲ್ಲಿ ಮತ್ತೆ ಸಿಗೋಣ.... ನಮಸ್ಕಾರ
................................. ತಾರಾನಾಥ್ ಕೈರಂಗಳ
ಮಕ್ಕಳ ಜಗಲಿ
ಮಕ್ಕಳ ಡಿಜಿಟಲ್ ಆನ್ಲೈನ್ ಪತ್ರಿಕೆ
ದಕ್ಷಿಣ ಕನ್ನಡ ಜಿಲ್ಲೆ. 
Mob : 9844820979
******************************************





Ads on article

Advertise in articles 1

advertising articles 2

Advertise under the article